ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಜ್ಜಾಗಿದೆ
ನಾಳೆ ಉದ್ಘಾಟನಾ ಸಮಾರಂಭ
ಜನವರಿ 22, ಜನವರಿ 26 ಮತ್ತು ಮಾರ್ಚ್ 8 ರಂದು ವಿಶೇಷ ಕಾರ್ಯಕ್ರಮಗಳೊಂದಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು
10ನೇ ವಾರ್ಷಿಕೋತ್ಸವದ ಆಚರಣೆಗಳು 2025ರ ಜನವರಿ 22 ರಿಂದ ಮಾರ್ಚ್ 8, 2025 ರವರೆಗೆ ನಡೆಯಲಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮುಕ್ತಾಯಗೊಳ್ಳುತ್ತವೆ
ಬಿಬಿಬಿಪಿಯ 10 ವರ್ಷಗಳ ಪ್ರಯಾಣವು ವಿಕಸಿತ ಭಾರತವನ್ನು ನಿರ್ಮಿಸುವ ಭಾರತದ ಸಮರ್ಪಣೆಯನ್ನು ಒತ್ತಿಹೇಳುತ್ತದೆ, ಅಲ್ಲಿ ಮಹಿಳೆಯರು ಕೇವಲ ಫಲಾನುಭವಿಗಳಲ್ಲ ಬದಲು ಪರಿವರ್ತನೆಯ ಸಕ್ರಿಯ ನಾಯಕರು
Posted On:
21 JAN 2025 12:33PM by PIB Bengaluru
ಈ ವರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬೇಟಿ ಬಚಾವೋ ಬೇಟಿ ಪಡಾವೋ (ಬಿಬಿಬಿಪಿ) ಯೋಜನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಜ್ಜಾಗಿದೆ, ಇದು ಭಾರತದಲ್ಲಿ ಹೆಣ್ಣು ಮಗುವನ್ನು ರಕ್ಷಿಸಲು, ಶಿಕ್ಷಣ ನೀಡಲು ಮತ್ತು ಸಬಲೀಕರಣಗೊಳಿಸಲು ಒಂದು ದಶಕದ ನಿರಂತರ ಪ್ರಯತ್ನಗಳನ್ನು ಸೂಚಿಸುತ್ತದೆ. ಈ ಮೈಲಿಗಲ್ಲು ಭಾರತದ ವಿಕಸಿತ ಭಾರತ 2047ರ ದೃಷ್ಟಿಕೋನ ಮತ್ತು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿ ಎಂಬ ಜಾಗತಿಕ ಚಿಂತನೆಗೆ ಹೊಂದಿಕೆಯಾಗುತ್ತದೆ. ಇದು ಭಾರತದ ಜಿ 20 ಅಧ್ಯಕ್ಷತೆಯ ಸಮಯದಲ್ಲಿ ಪ್ರತಿಪಾದಿಸಲ್ಪಟ್ಟ ಆದ್ಯತೆಯಾಗಿದೆ ಮತ್ತು ಈಗ ಬ್ರೆಜಿಲಿನ ಜಿ 20 ಅಧ್ಯಕ್ಷತೆಯಲ್ಲಿಯೂ ಅಂಗೀಕರಿಸಲ್ಪಟ್ಟಿದೆ.
ಉದ್ಘಾಟನಾ ಸಮಾರಂಭವು ನಾಳೆ (ಜನವರಿ 22, 2025) ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿದ್ದು ಕೇಂದ್ರ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವರಾದ ಶ್ರೀ ಜೆ.ಪಿ.ನಡ್ಡಾ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಸಹಾಯಕ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳು, ಪ್ಯಾರಾ ಮಿಲಿಟರಿ ಪಡೆಗಳು ಮತ್ತು ದಿಲ್ಲಿ ಪೊಲೀಸರ ಮಹಿಳಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದಲ್ಲದೆ, ಕೇಂದ್ರ ಸಚಿವಾಲಯಗಳ ಉಪ ಕಾರ್ಯದರ್ಶಿ ಮತ್ತು ಅದಕ್ಕಿಂತ ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯರು (ಮೈ ಭಾರತ್ ಸ್ವಯಂಸೇವಕರು), ಅಂಗನವಾಡಿ ಮೇಲ್ವಿಚಾರಕರು / ಕಾರ್ಮಿಕರು/ಕಾರ್ಯಕರ್ತರು ಮತ್ತು ರಾಜ್ಯ ಹಾಗು ಜಿಲ್ಲೆಯ ಪ್ರತಿನಿಧಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುನಿಸೆಫ್, ಯುಎನ್ ವುಮೆನ್, ಯು ಎನ್ ಡಿ ಪಿ, ಯು ಎನ್ ಎಫ್ ಪಿ ಎ, ವಿಶ್ವ ಬ್ಯಾಂಕ್ ಮತ್ತು ಜರ್ಮನ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಕೋಆಪರೇಶನ್ (ಜಿಐಝಡ್) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
10ನೇ ವಾರ್ಷಿಕೋತ್ಸವದ ಆಚರಣೆಗಳು 2025ರ ಜನವರಿ 22 ರಿಂದ 2025ರ ಮಾರ್ಚ್ 8 ರವರೆಗೆ ನಡೆಯಲಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಮಾರೋಪಗೊಳ್ಳುತ್ತವೆ. ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮತ್ತು ಉತ್ತಮ ಅಭ್ಯಾಸಗಳ ಸಂಗ್ರಹದ ಬಿಡುಗಡೆ ನಡೆಯಲಿದೆ. ಈ ಕಾರ್ಯಕ್ರಮವು ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿ ಪೋರ್ಟಲ್ ಗಳ ಉದ್ಘಾಟನೆಯನ್ನು ಸಹ ಸಾಕ್ಷೀಕರಿಸಲಿದೆ.
ಜನವರಿ 22, ಜನವರಿ 26 ಮತ್ತು ಮಾರ್ಚ್ 8 ರಂದು ವಿಶೇಷ ಕಾರ್ಯಕ್ರಮಗಳೊಂದಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಚಟುವಟಿಕೆಗಳಲ್ಲಿ ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮಗಳು ಮತ್ತು ಸಂಕಲ್ಪ ಅಡಿಯಲ್ಲಿ ಪ್ರಚಾರಾಂದೋಲನಗಳು ಸೇರಿವೆ. ಸಂಕಲ್ಪ ಎಂದರೆ ಮಹಿಳಾ ಸಬಲೀಕರಣದ ಕೇಂದ್ರ, ಶಾಲಾ ಬಾಲಕಿಯರು, ಮಹಿಳಾ ಸಾಧಕರು ಮತ್ತು ಸಮುದಾಯ ಗುಂಪುಗಳು ಸೇರಿದಂತೆ ವಿವಿಧ ಪಾಲುದಾರರನ್ನು/ಭಾಗೀದಾರರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.
ಆಚರಣೆಯ ಉದ್ದಕ್ಕೂ, ಮುದ್ರಣ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ರಾಷ್ಟ್ರವ್ಯಾಪಿ ಅಭಿಯಾನಗಳು ಯೋಜನೆಯ ಸಂದೇಶವನ್ನು ವಿಸ್ತರಿಸುತ್ತವೆ. ಸುಸ್ಥಿರ ಅಭ್ಯಾಸಗಳಿಗೆ ಅನುಗುಣವಾಗಿ, ನೆಡುತೋಪು ಅಭಿಯಾನವನ್ನು ಸಹ ನಡೆಸಲಾಗುವುದು.
ಲಿಂಗ ಅನುಪಾತದಲ್ಲಿ ಅಸಮತೋಲನ ಮತ್ತು ಭಾರತದಲ್ಲಿ ಕುಸಿಯುತ್ತಿರುವ ಮಕ್ಕಳ ಲಿಂಗ ಅನುಪಾತ (ಸಿಎಸ್ಆರ್) ದ ನಿರ್ಣಾಯಕ ಸಮಸ್ಯೆಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015ರ ಜನವರಿ 22 ರಂದು ಹರಿಯಾಣದ ಪಾಣಿಪತ್ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋವನ್ನು ಪ್ರಾರಂಭಿಸಿದರು. ಹೀಗೆ ಜನಿಸಿದ ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನ ನೀತಿ ಉಪಕ್ರಮದಿಂದ ರಾಷ್ಟ್ರೀಯ ಆಂದೋಲನವಾಗಿ ರೂಪಾಂತರಗೊಳ್ಳುತ್ತಿದೆ.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಲಿಂಗ ತಾರತಮ್ಯವನ್ನು ಪರಿಹರಿಸಲು ಮತ್ತು ಹೆಣ್ಣು ಮಗುವನ್ನು ಮೌಲ್ಯೀಕರಿಸುವ ಮತ್ತು ಅವಳ ಹಕ್ಕುಗಳು ಹಾಗು ಅವಕಾಶಗಳನ್ನು ಖಚಿತಪಡಿಸಿಕೊಳ್ಳುವತ್ತ ಸಾಂಸ್ಕೃತಿಕ ಬದಲಾವಣೆಯನ್ನು ಉಂಟು ಮಾಡಲು ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ, ಮಾಧ್ಯಮ ಮತ್ತು ಸಾರ್ವಜನಿಕರನ್ನು ಸಜ್ಜುಗೊಳಿಸಿದೆ. 2014-15ರಲ್ಲಿ 918 ರಷ್ಟಿದ್ದ ರಾಷ್ಟ್ರೀಯ ಲಿಂಗಾನುಪಾತವನ್ನು 2023-24ರಲ್ಲಿ 930ಕ್ಕೆ ಹೆಚ್ಚಿಸಿರುವುದು, ಮಾಧ್ಯಮಿಕ ಮಟ್ಟದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು 2014-15ರಲ್ಲಿ ಶೇ.75.51ರಷ್ಟಿದ್ದುದನ್ನು 2023-24ರಲ್ಲಿ ಶೇ.78ಕ್ಕೆ ಏರಿಕೆಯಾಗಿರುವುದು ಪ್ರಮುಖ ಸಾಧನೆಗಳಾಗಿವೆ.ಸಾಂಸ್ಥಿಕ ಹೆರಿಗೆಗಳ ಪ್ರಮಾಣ 61 % ನಿಂದ 97.3% ಗೆ ಏರಿಕೆಯಾಗಿದೆ. ಗರ್ಭಿಣಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ನೋಂದಣಿಯಲ್ಲಿಯೂ 61% ನಿಂದ 80.5%.ಗೆ ಏರಿಕೆಯಾಗಿದೆ.
ಹಲವು ವರ್ಷಗಳಿಂದ, ಬಿಬಿಬಿಪಿಯು ಮಹಿಳಾ ಸಬಲೀಕರಣವನ್ನು ಪ್ರದರ್ಶಿಸುವ ಯಶಸ್ವಿನಿ ಬೈಕ್ ಯಾತ್ರೆಯಂತಹ ಪರಿಣಾಮಕಾರಿ ಉಪಕ್ರಮಗಳನ್ನು ಕೈಗೊಂಡಿದೆ; ಕನ್ಯಾ ಶಿಕ್ಷಾ ಪ್ರವೇಶ್ ಉತ್ಸವ್, ಇದು ಶಾಲೆಯಿಂದ ಹೊರಗುಳಿದ 100,000 ಕ್ಕೂ ಹೆಚ್ಚು ಹುಡುಗಿಯರನ್ನು ಮರು ದಾಖಲಾತಿ ಮಾಡಿತು; ಮತ್ತು ಡೋರಿ ಟಿವಿ ಶೋನ ಸಹಯೋಗ, ಹೆಣ್ಣು ಮಗುವನ್ನು ತ್ಯಜಿಸುವ ಬಗ್ಗೆ ಜಾಗೃತಿ ಹೆಚ್ಚಿಸುವ ಕೆಲಸವನ್ನು ಮಾಡಿತು. ಇತರ ಗಮನಾರ್ಹ ಘಟನೆಗಳಲ್ಲಿ ಕೌಶಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನ: ಬೇಟಿಯಾನ್ ಬನೆ ಕುಶಾಲ್, ಕಾರ್ಯಪಡೆಯ ಭಾಗವಹಿಸುವಿಕೆಗೆ ಒತ್ತು ನೀಡುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪಾಲುದಾರ ಸಚಿವಾಲಯಗಳ ಸಹಯೋಗದೊಂದಿಗೆ, ಲಿಂಗ ಸಮಾನತೆಯ ಆಂದೋಲನವನ್ನು ಮುನ್ನಡೆಸಲು ಮತ್ತು ಹೆಣ್ಣು ಮಗುವನ್ನು ಸಬಲೀಕರಣಗೊಳಿಸಲು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಬಿಬಿಬಿಪಿಯ ಈ 10 ವರ್ಷಗಳ ಪ್ರಯಾಣವು ವಿಕಸಿತ ಭಾರತವನ್ನು ನಿರ್ಮಿಸುವ ಭಾರತದ ಸಮರ್ಪಣೆಯನ್ನು ಒತ್ತಿಹೇಳುತ್ತದೆ, ಅಲ್ಲಿ ಮಹಿಳೆಯರು ಕೇವಲ ಫಲಾನುಭವಿಗಳಲ್ಲ ಬದಲು ಪರಿವರ್ತನೆಯ ಸಕ್ರಿಯ ನಾಯಕರು, ಅವರು ಎಲ್ಲಾ ಹೆಣ್ಣು ಮಕ್ಕಳ ಉಜ್ವಲ, ಅಂತರ್ಗತ ಭವಿಷ್ಯವನ್ನು ರೂಪಿಸುತ್ತಾರೆ, ಬಿಬಿಬಿಪಿ ಯೋಜನೆ ದೇಶಾದ್ಯಂತ ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವುದನ್ನು ಖಚಿತಪಡಿಸುತ್ತದೆ.
(Release ID: 2095008)
Visitor Counter : 43