ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದಾವೋಸ್‌ನಲ್ಲಿ ನಡೆಯಲಿರುವ "ವಿಶ್ವ ಆರ್ಥಿಕ ವೇದಿಕೆ- 2025"ರಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಭಾಗವಹಿಸಲಿದ್ದಾರೆ
ದಾವೋಸ್‌ನಲ್ಲಿ ಭಾರತದ ಅಭಿವೃದ್ಧಿ ಮಾದರಿಯನ್ನು ಪ್ರದರ್ಶಿಸಿ ಮಹತ್ವವನ್ನು ಸಾರಲಿರುವ ಶ್ರೀ ಅಶ್ವಿನಿ ವೈಷ್ಣವ್; ಎಲ್ಲರನ್ನೂ ಒಳಗೊಂಡ ಭಾರತದ ಸಮಗ್ರ ಬೆಳವಣಿಗೆ ಮತ್ತು ಡಿಜಿಟಲ್ ರೂಪಾಂತರದ ದೃಷ್ಟಿಕೋನ ಕುರಿತಂತೆಯೇ ಡಬ್ಲ್ಯೂಇಎಫ್- 2025ರಲ್ಲಿ ಪ್ರಖರವಾಗಿ ಪ್ರತಿಪಾದನೆ
Posted On:
19 JAN 2025 7:54AM by PIB Bengaluru
ದಾವೋಸ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) 2025ರಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಲಿದ್ದಾರೆ. ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆ ದೂರದೃಷ್ಟಿಯಡಿ ಎಲ್ಲರನ್ನೂ ಒಳಗೊಂಡ ಸಮಗ್ರ ಬೆಳವಣಿಗೆ ಮತ್ತು ಪರಿವರ್ತನಾತ್ಮಕ ಅಭಿವೃದ್ಧಿಯನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಅವರು ತಮ್ಮ ಭೇಟಿ ವೇಳೆ ಪ್ರಧಾನವಾಗಿ ಪ್ರತಿಪಾದಿಸಲಿದ್ದಾರೆ.
ಸಮಗ್ರ ಬೆಳವಣಿಗೆಗೆ ಭಾರತದ ಮಾದರಿ
ದಾವೋಸ್‌ಗೆ ತೆರಳುವ ಮುನ್ನಾ ಶ್ರೀ ವೈಷ್ಣವ್ ಅವರು ಸಮಾಜದ ಎಲ್ಲಾ ಸ್ತರದವರಿಗೆ ಅದರಲ್ಲೂ ವಿಶೇಷವಾಗಿ ಐತಿಹಾಸಿಕವಾಗಿ ಹಲವು ದಶಕಗಳಿಂದ ಪ್ರಗತಿಯಿಂದ ಹೊರಗುಳಿದವರಿಗೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವಲ್ಲಿನ ಭಾರತದ ಮಹತ್ವದ ಪ್ರಗತಿಯನ್ನು ಒತ್ತಿ ಹೇಳಿದರು. "ಭಾರತದ ಪ್ರಧಾನ ಮಂತ್ರಿಗಳು ಸಮಾಜದ ತಳಹಂತದಲ್ಲಿರುವ ಜನರ ಜೀವನದಲ್ಲೂ ಪರಿವರ್ತನಾತ್ಮಕ ಬದಲಾವಣೆಗಳನ್ನು ತಂದು ಸಮಗ್ರ ಅಭಿವೃದ್ಧಿ ಸಾಧಿಸುವತ್ತ ವಿಶೇಷ ಆದ್ಯತೆ ನೀಡಿದ್ದಾರೆ. ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಆರ್ಥಿಕ ಒಳಗೊಳ್ಳುವಿಕೆಯಿಂದ ಹಿಡಿದು ಶೌಚಾಲಯಗಳ ನಿರ್ಮಾಣ, ಅಡುಗೆ ಅನಿಲ ಸಂಪರ್ಕಗಳು, ನಳದಲ್ಲಿ ನೀರು ಪೂರೈಕೆಯಂತಹ ಅಗತ್ಯ ಸೇವೆಗಳನ್ನು ಒದಗಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದಕ್ಕೆ ಒತ್ತು ನೀಡಿದ್ದಾರೆ. ಇದೇ ವಿಚಾರವನ್ನು ಜಗತ್ತು ಇಂದು ಅರ್ಥೈಸಿಕೊಳ್ಳಲು ಬಯಸುತ್ತದೆ,ʼʼ ಎಂದು ಹೇಳಿದರು.
ಸಮಗ್ರ ಬೆಳವಣಿಗೆ, ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಹೂಡಿಕೆ ಮತ್ತು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದ ಕುರಿತಂತೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಭಾರತದ ಡಿಜಿಟಲ್ ಕ್ರಾಂತಿಯತ್ತ ಎಲ್ಲ ಚಿತ್ತ
ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ- 2025ರಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಪರಿವರ್ತನಾಶೀಲ ಡಿಜಿಟಲ್ ಪ್ರಯಾಣದ ಪ್ರಗತಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ವಿಚಾರವಾಗಿದೆ ಎಂದು ಒತ್ತಿ ಹೇಳಿದರು. "ಭಾರತದ ಆರ್ಥಿಕ ನೀತಿಗಳು, ಡಿಜಿಟಲ್ ಇಂಡಿಯಾ ಕಾರ್ಯಕ್ರಮದಿಂದ ಉಂಟಾದ ಡಿಜಿಟಲ್ ರೂಪಾಂತರ ಮತ್ತು ಸಮಾಜದ ಎಲ್ಲಾ ಸ್ತರಗಳಲ್ಲಿನ ಜನರನ್ನು ಸಬಲರನ್ನಾಗಿಸುವಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವ ವಿಧಾನವನ್ನು ಅರ್ಥಮಾಡಿಕೊಳ್ಳಲು ಜಗತ್ತು ಉತ್ಸುಕವಾಗಿದೆ," ಎಂದು ಕೇಂದ್ರ ಸಚಿವರು ಹೇಳಿದರು.
ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತದ ನಾವೀನ್ಯತೆಯ ಡಿಜಿಟಲ್ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗಿದ್ದು, ಸಮಗ್ರ ಅಭಿವೃದ್ಧಿಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಜಾಗತಿಕ ಮಾನದಂಡವನ್ನು ನಿಗದಿಪಡಿಸಿದೆ. ಇದು ಸಹ ವಿಶ್ವ ಆರ್ಥಿಕ ವೇದಿಕೆಯಲ್ಲಿ ಚರ್ಚೆಯ ಪ್ರಮುಖ ವಿಷಯವಾಗಿರಲಿದೆ.
ನಾನಾ ರಾಷ್ಟ್ರಗಳೊಂದಿಗಿನ ಪಾಲುದಾರಿಕೆಗಳನ್ನು ಖಾತರಿಪಡಿಸಿ ಬಲಪಡಿಸುವುದು, ಹೂಡಿಕೆಯನ್ನು ಆಕರ್ಷಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ತಾಂತ್ರಿಕ ನಾವೀನ್ಯತೆಯಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿ ಹೊರಹೊಮ್ಮಿಸುವ ಗುರಿಯೊಂದಿಗೆ ಡಬ್ಲ್ಯೂಇಎಫ್- 2025ರಲ್ಲಿ ಭಾರತದ ಭಾಗವಹಿಸುತ್ತಿದೆ.
*****
(Release ID: 2094278)
Visitor Counter : 16