ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಡಿಶಾದ ಭುವನೇಶ್ವರದಲ್ಲಿ 18ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 09 JAN 2025 2:11PM by PIB Bengaluru

ಒಡಿಶಾದ ಗವರ್ನರ್ ಹರಿ ಬಾಬು ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹ ಸದಸ್ಯ ಎಸ್. ಜೈಶಂಕರ್ ಜೀ, ಜುವಾಲ್ ಒರಾಮ್ ಜೀ, ಧರ್ಮೇಂದ್ರ ಪ್ರಧಾನ ಜೀ, ಅಶ್ವಿನಿ ವೈಷ್ಣವ್ ಜೀ, ಶೋಭಾ ಕರಂದ್ಲಾಜೆ ಜೀ, ಕೀರ್ತಿ ವರ್ಧನ್ ಸಿಂಗ್ ಜೀ, ಪಬಿತ್ರ ಮಾರ್ಗರೇಟಾ ಜೀ, ಒಡಿಶಾದ ಉಪ ಮುಖ್ಯಮಂತ್ರಿ ಕನಕ್ ವರ್ಧನ್ ಸಿಂಗ್ ದೇವ್ ಜೀ, ಪ್ರವತಿ ಪರಿದಾ ಜೀ, ಇತರ ಮಂತ್ರಿಗಳು, ಸಂಸದರು ಮತ್ತು ಶಾಸಕರು, ಜಗತ್ತಿನ ಮೂಲೆ ಮೂಲೆಯಿಂದ ಇಲ್ಲಿಗೆ ಬಂದಿರುವ ಭಾರತ ಮಾತೆಯ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ!

ಮಹನೀಯರೇ, ಮಹಿಳೆಯರೇ! ಭಗವಾನ್ ಜಗನ್ನಾಥ ಮತ್ತು ಭಗವಾನ್ ಲಿಂಗರಾಜರ ಈ ಪವಿತ್ರ ಭೂಮಿಯಲ್ಲಿ, ಪ್ರಪಂಚದಾದ್ಯಂತದ ನನ್ನ ಭಾರತೀಯ ವಲಸಿಗ ಕುಟುಂಬವನ್ನು ನಾನು ಸ್ವಾಗತಿಸುತ್ತೇನೆ. ಆರಂಭದಲ್ಲಿ ಹಾಡಿದ ಸ್ವಾಗತ ಗೀತೆ, ಈ ಸ್ವಾಗತ ಗೀತೆಯನ್ನು ಭವಿಷ್ಯದಲ್ಲಿ, ವಿಶ್ವದಾದ್ಯಂತ ಎಲ್ಲೆಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿ ಮತ್ತೆ ಮತ್ತೆ ನುಡಿಸಲಾಗುವುದು ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಿಮಗೆ ಅಭಿನಂದನೆಗಳು. ನಿಮ್ಮ ತಂಡವು ಅನಿವಾಸಿ ಭಾರತೀಯರ ಉತ್ಸಾಹವನ್ನು ಸುಂದರವಾಗಿ ವ್ಯಕ್ತಪಡಿಸಿದೆ, ನಿಮಗೆ ಅಭಿನಂದನೆಗಳು.

ಸ್ನೇಹಿತರೇ,

ಈ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಿಂದ ನಮಗೆ ಈಗಷ್ಟೇ ಮಾಹಿತಿ ಸಿಕ್ಕಿತು. ಟ್ರಿನಿಡಾಡ್ ಮತ್ತು ಟೊಬಾಗೋ ಅಧ್ಯಕ್ಷೆ, ಗೌರವಾನ್ವಿತ ಕ್ರಿಸ್ಟೀನ್ ಕಂಗಲೂ ಅವರ ವೀಡಿಯೊ ಸಂದೇಶವು ನಮ್ಮೆಲ್ಲರ ಮೇಲೆ ಪ್ರಭಾವ ಬೀರಿದೆ. ಅವರು ಕೂಡ ಭಾರತದ ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದರು. ಅವರ ಆತ್ಮೀಯ ಮತ್ತು ಪ್ರೀತಿಯ ಮಾತುಗಳಿಗೆ ನಾನು ಧನ್ಯವಾದ ಹೇಳುತ್ತೇನೆ.

ಸ್ನೇಹಿತರೇ,

ಭಾರತ ಈಗ ಹಬ್ಬಗಳ ಸಡಗರದಲ್ಲಿ ಮಿಂದೇಳುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಲಿದೆ. ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಮಾಘ ಬಿಹು ಹಬ್ಬಗಳು ಕೂಡ ಸಮೀಪಿಸುತ್ತಿವೆ. ಎಲ್ಲೆಡೆ ಉತ್ಸಾಹದ ವಾತಾವರಣ ತುಂಬಿ ತುಳುಕುತ್ತಿದೆ. ಇದೇ ದಿನ, 1915ರಲ್ಲಿ, ಮಹಾತ್ಮ ಗಾಂಧೀಜಿಯವರು ವರ್ಷಗಳ ಕಾಲ ವಿದೇಶದಲ್ಲಿದ್ದು ಭಾರತಕ್ಕೆ ಮರಳಿದ್ದರು ಎಂಬುದು ವಿಶೇಷ. ನೀವೆಲ್ಲ ಈ ಸುಂದರ ಸಮಯದಲ್ಲಿ ಭಾರತಕ್ಕೆ ಬಂದಿರುವುದು ನಮ್ಮ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಬಾರಿಯ ಪ್ರವಾಸಿ ಭಾರತೀಯ ದಿವಸ್ ಮತ್ತೊಂದು ವಿಶೇಷ ಕಾರಣಕ್ಕಾಗಿ ಮಹತ್ವ ಪಡೆದಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಕೆಲವೇ ದಿನಗಳ ನಂತರ ನಾವು ಇಲ್ಲಿ ಒಂದೆಡೆ ಸೇರಿದ್ದೇವೆ. ಈ ಕಾರ್ಯಕ್ರಮ ರೂಪುಗೊಳ್ಳಲು ಅವರ ದೂರದೃಷ್ಟಿಯೇ ಕಾರಣ. ಭಾರತ ಮತ್ತು ಪ್ರವಾಸಿ ಭಾರತೀಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಒಂದು ಸಂಸ್ಥೆಯಾಗಿ ಇದು ಬೆಳೆದು ನಿಂತಿದೆ. ಒಟ್ಟಾಗಿ, ನಾವು ಭಾರತ, ಭಾರತೀಯತೆ, ನಮ್ಮ ಸಂಸ್ಕೃತಿ, ನಮ್ಮ ಪ್ರಗತಿಯನ್ನು ಆಚರಿಸುತ್ತಾ ನಮ್ಮ ಬೇರುಗಳಿಗೆ ಮತ್ತೆ ಮತ್ತೆ  ಜೋಡಿಸಿಕೊಳ್ಳುತ್ತೇವೆ.

ಸ್ನೇಹಿತರೇ, 

ನೀವು ಇಂದು ಒಟ್ಟುಗೂಡಿದ ಒಡಿಶಾ ಭೂಮಿಯು ಭಾರತದ ಶ್ರೀಮಂತ ಪರಂಪರೆಯ ಪ್ರತಿಬಿಂಬವಾಗಿದೆ. ಒಡಿಶಾದಲ್ಲಿ, ಪ್ರತಿ ಹಂತದಲ್ಲೂ, ನಾವು ನಮ್ಮ ಪರಂಪರೆಯನ್ನು ಕಾಣುತ್ತೇವೆ. ಅದು ಉದಯಗಿರಿ-ಖಂಡಗಿರಿಯ ಐತಿಹಾಸಿಕ ಗುಹೆಗಳಾಗಿರಲಿ, ಕೋನಾರ್ಕಿನ ಸೂರ್ಯ ದೇವಾಲಯವಾಗಲಿ, ತಾಮ್ರಲಿಪ್ತಿ, ಮಾಣಿಕಪಟ್ಟಣ ಮತ್ತು ಪಾಲೂರಿನ ಪ್ರಾಚೀನ ಬಂದರುಗಳಾಗಿರಲಿ, ಇವುಗಳನ್ನು ನೋಡಿದಾಗ ಪ್ರತಿಯೊಬ್ಬರೂ ಹೆಮ್ಮೆಪಡುತ್ತಾರೆ. ಶತಮಾನಗಳ ಹಿಂದೆ, ಒಡಿಶಾದ ನಮ್ಮ ವ್ಯಾಪಾರಿಗಳು ಮತ್ತು ಉದ್ಯಮಿಗಳು ಬಾಲಿ, ಸುಮಾತ್ರಾ ಮತ್ತು ಜಾವಾದಂತಹ ಸ್ಥಳಗಳಿಗೆ ದೀರ್ಘ ಸಮುದ್ರಯಾನಗಳನ್ನು ಕೈಗೊಳ್ಳುತ್ತಿದ್ದರು. ಅದರ ನೆನಪಿಗಾಗಿ, ಇಂದಿಗೂ ಒಡಿಶಾದಲ್ಲಿ ಬಾಲಿ ಯಾತ್ರೆಯನ್ನು ಆಚರಿಸಲಾಗುತ್ತದೆ. ಇಲ್ಲಿ ಒಡಿಶಾದಲ್ಲಿ ಧೌಲಿ ಎಂಬ ಸ್ಥಳವಿದೆ, ಇದು ಶಾಂತಿಯ ದೊಡ್ಡ ಸಂಕೇತವಾಗಿದೆ. ಜಗತ್ತು ಕತ್ತಿಯ ಮೂಲಕ ಸಾಮ್ರಾಜ್ಯಗಳನ್ನು ವಿಸ್ತರಿಸುವ ಯುಗದಲ್ಲಿದ್ದಾಗ, ನಮ್ಮ ಚಕ್ರವರ್ತಿ ಅಶೋಕನು ಇಲ್ಲಿ ಶಾಂತಿಯ ಮಾರ್ಗವನ್ನು ಆರಿಸಿಕೊಂಡನು. ಭವಿಷ್ಯವು ಯುದ್ಧದಲ್ಲಿಲ್ಲ, ಬುದ್ಧನಲ್ಲಿ ಅಡಗಿದೆ (ಭವಿಷ್ಯ ಯುದ್ಧ ಮೇ ನಹೀಂ ಹೈ, ಬುದ್ಧ ಮೇ ಹೈ) ಎಂದು ಜಗತ್ತಿಗೆ ಹೇಳಲು ನಮ್ಮ ಪರಂಪರೆಯ ಈ ಶಕ್ತಿಯೇ ಇಂದು ಭಾರತಕ್ಕೆ ಸ್ಫೂರ್ತಿ ನೀಡುತ್ತದೆ. ಆದ್ದರಿಂದ, ಈ ಒಡಿಶಾದ ಭೂಮಿಗೆ ನಿಮ್ಮೆಲ್ಲರನ್ನೂ ಸ್ವಾಗತಿಸುವುದು ನನಗೆ ಬಹಳ ವಿಶೇಷವಾಗಿದೆ.

ಸ್ನೇಹಿತರೇ,

ನಾನು ಯಾವಾಗಲೂ ಭಾರತೀಯ ವಲಸಿಗರನ್ನು ಭಾರತದ ರಾಯಭಾರಿಗಳೆಂದು ಪರಿಗಣಿಸಿದ್ದೇನೆ. ನಾನು ನಿಮ್ಮೊಂದಿಗೆ ಮಾತನಾಡುವಾಗ, ಪ್ರಪಂಚದಾದ್ಯಂತದ ನಿಮ್ಮೆಲ್ಲರನ್ನೂ ಭೇಟಿಯಾದಾಗ ನನಗೆ ಅಪಾರ ಸಂತೋಷವಾಗುತ್ತದೆ. ನಿಮ್ಮಿಂದ ನಾನು ಪಡೆದ ಪ್ರೀತಿ ನಾನು ಎಂದಿಗೂ ಮರೆಯಲಾಗದ ಸಂಗತಿಯಾಗಿದೆ. ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದಗಳು ಯಾವಾಗಲೂ ನನ್ನೊಂದಿಗೆ ಉಳಿಯುತ್ತವೆ.

ಸ್ನೇಹಿತರೇ,

ಇಂದು, ನಿಮ್ಮೆಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ ಮತ್ತು ಧನ್ಯವಾದಗಳು ಎಂದು ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಕಾರಣದಿಂದಾಗಿಯೇ ನಾನು ಜಗತ್ತಿನ ಎದುರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಲು ಸಾಧ್ಯವಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ, ವಿಶ್ವದ ಹಲವಾರು ನಾಯಕರನ್ನು ಭೇಟಿಯಾಗಿದ್ದೇನೆ. ಪ್ರತಿಯೊಬ್ಬ ವಿಶ್ವ ನಾಯಕರೂ ಭಾರತೀಯ ವಲಸಿಗರಾದ ನಿಮ್ಮೆಲ್ಲರನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ನೀವು ಅಲ್ಲಿನ ಸಮಾಜಗಳಿಗೆ ಸೇರಿಸಿಕೊಳ್ಳುವ ಸಾಮಾಜಿಕ ಮೌಲ್ಯಗಳು. ನಾವು ಕೇವಲ "ಪ್ರಜಾಪ್ರಭುತ್ವದ ಜನ್ಮಭೂಮಿ" ಮಾತ್ರವಲ್ಲ, ಬದಲಿಗೆ ಪ್ರಜಾಪ್ರಭುತ್ವವು ನಮ್ಮ ಜೀವನದ ಅವಿಭಾಜ್ಯ ಅಂಗ, ನಮ್ಮ ಬದುಕಿನ ಒಂದು ಭಾಗ. ವೈವಿಧ್ಯತೆಯನ್ನು ನಮಗೆ ಬೋಧಿಸಬೇಕಾಗಿಲ್ಲ; ನಮ್ಮ ಬದುಕೇ ವೈವಿಧ್ಯಮಯವಾಗಿದೆ. ಅದಕ್ಕಾಗಿಯೇ ಭಾರತೀಯರು ಎಲ್ಲಿಗೆ ಹೋದರೂ, ಅಲ್ಲಿನ ಸಮಾಜದೊಂದಿಗೆ ಬೆರೆತುಹೋಗುತ್ತಾರೆ. ನಾವು ಎಲ್ಲಿಗೆ ಹೋದರೂ, ಆ ಸ್ಥಳದ ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತೇವೆ. ಆ ದೇಶಕ್ಕೆ, ಆ ಸಮಾಜಕ್ಕೆ ನಾವು ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತೇವೆ. ಅವರ ಅಭಿವೃದ್ಧಿ ಮತ್ತು ಸಮೃದ್ಧಿಗೆ ನಾವು ಕೈಜೋಡಿಸುತ್ತೇವೆ. ಮತ್ತು ಇವೆಲ್ಲದರ ಜೊತೆಜೊತೆಗೆ, ಭಾರತವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ. ಭಾರತದ ಪ್ರತಿಯೊಂದು ಸಂತೋಷದಲ್ಲೂ ನಾವು ಪಾಲ್ಗೊಳ್ಳುತ್ತೇವೆ, ಭಾರತದ ಪ್ರತಿಯೊಂದು ಸಾಧನೆಯನ್ನೂ ನಾವು ಆಚರಿಸುತ್ತೇವೆ.

ಸ್ನೇಹಿತರೇ,

21ನೇ ಶತಮಾನದ ಭಾರತ, ಇಂದು ಅದು ಮುನ್ನಡೆಯುತ್ತಿರುವ ವೇಗ, ಅಭಿವೃದ್ಧಿ ಹೊಂದುತ್ತಿರುವ ರೀತಿ ನಿಜಕ್ಕೂ ಅಭೂತಪೂರ್ವ. ಕೇವಲ ಹತ್ತು ವರ್ಷಗಳಲ್ಲಿ, ಭಾರತ 25 ಕೋಟಿ ಜನರನ್ನು ಬಡತನದ ಕೂಪದಿಂದ ಮೇಲೆತ್ತಿದೆ. ಕೇವಲ ಹತ್ತು ವರ್ಷಗಳಲ್ಲಿ, ವಿಶ್ವದ ಹತ್ತನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ  ಬೆಳೆದು ನಿಂತಿದೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಿನಗಳು ಬಹಳ ದೂರವಿಲ್ಲ. ಇಂದು ಜಗತ್ತಿನ ಕಣ್ಣು ಭಾರತದ ಯಶಸ್ಸಿನ ಮೇಲಿದೆ. ಭಾರತದ ಚಂದ್ರಯಾನ ಶಿವ-ಶಕ್ತಿ ಬಿಂದುವನ್ನು ತಲುಪಿದಾಗ, ನಮ್ಮೆಲ್ಲರ ಎದೆಯೂ ಹೆಮ್ಮೆಯಿಂದ ಉಬ್ಬಿತು. ಡಿಜಿಟಲ್ ಇಂಡಿಯಾದ ಶಕ್ತಿಯನ್ನು ಕಂಡು ಜಗತ್ತು ಅಚ್ಚರಿಗೊಂಡಾಗ, ನಾವೆಲ್ಲರೂ ಹೆಮ್ಮೆ ಪಟ್ಟೆವು. ಇಂದು, ಭಾರತದ ಪ್ರತಿಯೊಂದು ಕ್ಷೇತ್ರವೂ ಉತ್ತುಂಗಕ್ಕೇರಲು ಪ್ರಯತ್ನಿಸುತ್ತಿದೆ. ನವೀಕರಿಸಬಹುದಾದ ಇಂಧನ, ವಾಯುಯಾನ ವ್ಯವಸ್ಥೆ, ವಿದ್ಯುತ್ ಚಾಲಿತ ವಾಹನಗಳು, ವಿಶಾಲ ಮೆಟ್ರೋ ಜಾಲ, ಬುಲೆಟ್ ರೈಲು ಯೋಜನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತದ ಪ್ರಗತಿಯ ವೇಗ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಇಂದು, ಭಾರತ "ಮೇಡ್ ಇನ್ ಇಂಡಿಯಾ" ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳನ್ನು ತಯಾರಿಸುತ್ತಿದೆ. "ಮೇಡ್ ಇನ್ ಇಂಡಿಯಾ" ವಿಮಾನದಲ್ಲಿ ನೀವು ಪ್ರವಾಸಿ ಭಾರತೀಯ ದಿವಸ್‌ ಗಾಗಿ ಭಾರತಕ್ಕೆ ಬರುವ  ದಿನ  ಬಹಳ  ದೂರವಿಲ್ಲ.

ಸ್ನೇಹಿತರೇ,

ಭಾರತದ ಈ ಸಾಧನೆಗಳು, ಇಂದು ಭಾರತದಲ್ಲಿ ಹೊರಹೊಮ್ಮುತ್ತಿರುವ ಸಾಧ್ಯತೆಗಳು, ಭಾರತದ ಬೆಳೆಯುತ್ತಿರುವ ಜಾಗತಿಕ ಪಾತ್ರಕ್ಕೆ ಕಾರಣವಾಗುತ್ತಿವೆ. ಇಂದು, ವಿಶ್ವವು ಭಾರತದ ಮಾತುಗಳಿಗೆ ಕಿವಿಗೊಡುತ್ತಿದೆ. ಇಂದಿನ ಭಾರತ ತನ್ನ ಅಭಿಪ್ರಾಯಗಳನ್ನು ಧೃಡವಾಗಿ ಮಂಡಿಸುವುದಲ್ಲದೆ, ಗ್ಲೋಬಲ್‌ ಸೌತ್‌ ನ ದನಿಯನ್ನೂ ಬಲವಾಗಿ ಎತ್ತುತ್ತಿದೆ. ಆಫ್ರಿಕನ್ ಒಕ್ಕೂಟವನ್ನು ಜಿ-೨೦ ರ ಶಾಶ್ವತ ಸದಸ್ಯರನ್ನಾಗಿ ಮಾಡಬೇಕೆಂಬ ಭಾರತದ ಪ್ರಸ್ತಾವನೆಗೆ ಎಲ್ಲಾ ಸದಸ್ಯ ರಾಷ್ಟ್ರಗಳೂ  ಒಮ್ಮತದಿಂದ  ಬೆಂಬಲ ಸೂಚಿಸಿವೆ. "ಮಾನವೀಯತೆ ಮೊದಲು" ಎಂಬ  ಮಂತ್ರದೊಂದಿಗೆ, ಭಾರತ ತನ್ನ ಜಾಗತಿಕ ಪಾತ್ರವನ್ನು ವಿಸ್ತರಿಸುತ್ತಿದೆ.

ಸ್ನೇಹಿತರೇ, 

ಭಾರತದ ಪ್ರತಿಭೆಯನ್ನು ಇಂದು ವಿಶ್ವದಾದ್ಯಂತ ಶ್ಲಾಘಿಸಲಾಗುತ್ತಿದೆ. ನಮ್ಮ ವೃತ್ತಿಪರರು ವಿಶ್ವದ ಪ್ರಮುಖ ಕಂಪನಿಗಳ ಮೂಲಕ ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ. ನಾಳೆ, ನಮ್ಮ ಅನೇಕ ಸಹೋದ್ಯೋಗಿಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರು ಪ್ರವಾಸಿ ಭಾರತೀಯ ಸಮ್ಮಾನ್ ನೀಡಿ ಗೌರವಿಸಲಿದ್ದಾರೆ. ಈ ಗೌರವವನ್ನು ಸ್ವೀಕರಿಸಲಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ನಿಮಗೆ ಗೊತ್ತಾ, ಮುಂದಿನ ಹಲವು ದಶಕಗಳವರೆಗೆ, ಭಾರತವು ವಿಶ್ವದ ಅತ್ಯಂತ ಕಿರಿಯ ಮತ್ತು ಅತ್ಯಂತ ನುರಿತ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಉಳಿಯುತ್ತದೆ. ಕೌಶಲ್ಯಗಳ ಜಾಗತಿಕ ಬೇಡಿಕೆಯ ಗಮನಾರ್ಹ ಭಾಗವನ್ನು ಪೂರೈಸುವುದು ಭಾರತವೇ ಆಗಿದೆ. ವಿಶ್ವದ ಹಲವು ರಾಷ್ಟ್ರಗಳು ಈಗ ಭಾರತದ ಕೌಶಲ್ಯವುಳ್ಳ ಯುವಜನತೆಯನ್ನು  ಬಹು  ಹರ್ಷದಿಂದ ಸ್ವಾಗತಿಸುತ್ತಿವೆ ಎಂಬುದನ್ನು ನೀವು ಗಮನಿಸಿರಬಹುದು. ಈ ನಿಟ್ಟಿನಲ್ಲಿ, ಯಾವುದೇ ಭಾರತೀಯ ವಿದೇಶಕ್ಕೆ ಹೋದಾಗ, ಅವರು ಅತ್ಯುತ್ತಮ ಕೌಶಲ್ಯಗಳೊಂದಿಗೆ ಹೋಗುವಂತೆ ನೋಡಿಕೊಳ್ಳಲು ಭಾರತ ಸರ್ಕಾರ  ತನ್ನೆಲ್ಲಾ  ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿಯೇ ನಮ್ಮ ಯುವಜನತೆಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ತರಬೇತಿ ನೀಡುವುದರ ಮೇಲೆ ನಾವು ನಿರಂತರವಾಗಿ ಗಮನಹರಿಸುತ್ತಿದ್ದೇವೆ. ನಿಮ್ಮ ಅನುಕೂಲತೆ ಮತ್ತು ಸೌಲಭ್ಯಗಳಿಗೆ ನಾವು ಪ್ರಾಮುಖ್ಯತೆ ನೀಡುತ್ತೇವೆ. ನಿಮ್ಮ ಸುರಕ್ಷತೆ ಮತ್ತು ಕಲ್ಯಾಣ ನಮಗೆ ಅತ್ಯಂತ ಮುಖ್ಯ. ನೀವು ಎಲ್ಲೇ ಇದ್ದರೂ, ವಿಪತ್ತಿನ ಸಂದರ್ಭಗಳಲ್ಲಿ ನಮ್ಮ ವಲಸಿಗರಿಗೆ ಸಹಾಯ ಹಸ್ತ ಚಾಚುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತೇವೆ. ಇದು ಇಂದಿನ ಭಾರತದ ವಿದೇಶಾಂಗ ನೀತಿಯ ಪ್ರಮುಖ ಮಾರ್ಗದರ್ಶಿ ತತ್ವಗಳಲ್ಲಿ ಒಂದಾಗಿದೆ. ಕಳೆದ ದಶಕದಲ್ಲಿ, ಪ್ರಪಂಚದಾದ್ಯಂತದ ನಮ್ಮ ರಾಯಭಾರ ಕಚೇರಿಗಳು ಮತ್ತು ಕಾರ್ಯಾಲಯಗಳು  ಸೂಕ್ಷ್ಮ ಮತ್ತು  ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

ಸ್ನೇಹಿತರೇ,

ಹಿಂದೆ, ಹಲವು ದೇಶಗಳಲ್ಲಿ, ಜನರು ಕಾನ್ಸುಲರ್ ಸೌಲಭ್ಯಗಳನ್ನು ಪಡೆಯಲು ಬಹಳ ದೂರ ಪ್ರಯಾಣಿಸಬೇಕಾಗಿತ್ತು. ಸಹಾಯಕ್ಕಾಗಿ ಅವರು ದಿನಗಟ್ಟಲೆ ಕಾಯಬೇಕಾಗಿತ್ತು. ಈಗ, ಈ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಾತ್ರ, 14 ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ ಗಳನ್ನು ತೆರೆಯಲಾಗಿದೆ. ಓಸಿಐ ಕಾರ್ಡ್‌ ಗಳ ವ್ಯಾಪ್ತಿಯನ್ನು ಸಹ ವಿಸ್ತರಿಸಲಾಗುತ್ತಿದೆ. ಇದನ್ನು ಮಾರಿಷಸ್‌ ನ 7 ನೇ ತಲೆಮಾರಿನ ಮತ್ತು ಸುರಿನಾಮ್, ಮಾರ್ಟಿನಿಕ್ ಮತ್ತು ಗ್ವಾಡೆಲೋಪ್‌ ನ 6 ನೇ ತಲೆಮಾರಿನ ಪಿಐಒಗಳಿಗೆ ವಿಸ್ತರಿಸಲಾಗಿದೆ.

ಸ್ನೇಹಿತರೇ,

ಪ್ರಪಂಚದಾದ್ಯಂತ ಹರಡಿರುವ ಭಾರತೀಯ ವಲಸಿಗರ ಇತಿಹಾಸ, ವಿವಿಧ ದೇಶಗಳಿಗೆ ಅವರ ಪ್ರಯಾಣ ಮತ್ತು ಆ ಭೂಮಿಯಲ್ಲಿ ಭಾರತದ ಧ್ವಜವನ್ನು ಹಾರಿಸಿದ ಅವರ ಕಥೆಗಳು ಭಾರತದ ಪರಂಪರೆಯ ಪ್ರಮುಖ ಭಾಗವಾಗಿದೆ. ನಿಮ್ಮಲ್ಲಿ ಅಂತಹ ಹಲವು ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕ ಕಥೆಗಳಿವೆ, ಅವುಗಳನ್ನು ಹಂಚಿಕೊಳ್ಳಬೇಕು, ಪ್ರದರ್ಶಿಸಬೇಕು ಮತ್ತು ಸಂರಕ್ಷಿಸಬೇಕು. ಇವು ನಮ್ಮೆಲ್ಲರ ಸಾಮಾನ್ಯ ಪರಂಪರೆ, ನಮ್ಮೆಲ್ಲರ ಸಾಮಾನ್ಯ ಪರಂಪರೆ. ಕೆಲವು ದಿನಗಳ ಹಿಂದೆ, ನನ್ನ "ಮನ್ ಕಿ ಬಾತ್" ಭಾಷಣದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ಉಪಕ್ರಮದ ಬಗ್ಗೆ ನಾನು ವಿವರವಾಗಿ ಮಾತನಾಡಿದ್ದೆ. ಹಲವು ಶತಮಾನಗಳ ಹಿಂದೆ, ಗುಜರಾತ್‌ ನ ಅನೇಕ ಕುಟುಂಬಗಳು ಓಮನ್‌ ನಲ್ಲಿ ನೆಲೆಸಿದವು. ಅವರ 250 ವರ್ಷಗಳ ಪ್ರಯಾಣ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು  ವಸ್ತು ಪ್ರದರ್ಶನವನ್ನೂ ಸಹ ಆಯೋಜಿಸಲಾಗಿದ್ದು, ಈ ಸಮುದಾಯಕ್ಕೆ ಸಂಬಂಧಿಸಿದ ಡಿಜಿಟಲೀಕರಣಗೊಂಡ ಸಾವಿರಾರು ದಾಲೆಗಳನ್ನು ಪ್ರದರ್ಶಿಸಲಾಗಿದೆ. ಹೆಚ್ಚುವರಿಯಾಗಿ, ಸಮುದಾಯದ ಹಿರಿಯ ಸದಸ್ಯರೊಂದಿಗೆ 'ಮೌಖಿಕ ಇತಿಹಾಸ ಯೋಜನೆ'ಯನ್ನು ಕೈಗೊಳ್ಳಲಾಯಿತು, ಅವರಲ್ಲಿ ಹಲವರು ಈಗ  ವೃದ್ಧರಾಗಿದ್ದಾರೆ, ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಕುಟುಂಬಗಳಲ್ಲಿ ಹಲವರು ಇಂದು ನಮ್ಮೊಂದಿಗೆ ಇಲ್ಲಿ ಇರುವುದಕ್ಕೆ ನನಗೆ ಸಂತೋಷವಾಗಿದೆ.

ಸ್ನೇಹಿತರೇ,

ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರ ಬಗ್ಗೆಯೂ ಇಂತಹ ಪ್ರಯತ್ನಗಳನ್ನು ಮಾಡಬೇಕು. ಉದಾಹರಣೆಗೆ, ನಮ್ಮ "ಗಿರ್ಮಿಟಿಯಾ" ಸಹೋದರ ಸಹೋದರಿಯರಿದ್ದಾರೆ. ನಮ್ಮ ಗಿರ್ಮಿಟಿಯಾ ಸಮುದಾಯದ ಸಮಗ್ರ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ಸಂಗ್ರಹವನ್ನು ಏಕೆ ರಚಿಸಬಾರದು? ಅವರು ಭಾರತದ ಯಾವ ಹಳ್ಳಿಗಳು ಮತ್ತು ನಗರಗಳಿಂದ ಬಂದರು, ಎಲ್ಲಿಗೆ ಹೋಗಿ ನೆಲೆಸಿದರು ಎಂಬುದನ್ನು ನಾವು ಖಚಿತವಾಗಿ ತಿಳಿದುಕೊಳ್ಳಬೇಕು ಮತ್ತು ಆ ಸ್ಥಳಗಳನ್ನು ಗುರುತಿಸಬೇಕು. ಅವರು ಯಾವ ರೀತಿಯ ಜೀವನ ನಡೆಸಿದರು, ಸವಾಲುಗಳನ್ನು ಹೇಗೆ ಅವಕಾಶಗಳನ್ನಾಗಿ ಬದಲಾಯಿಸಿಕೊಂಡರು - ಇದನ್ನು ಚಲನಚಿತ್ರಗಳು ಅಥವಾ ಸಾಕ್ಷ್ಯಚಿತ್ರಗಳ ಮೂಲಕ ಚಿತ್ರಿಸಬಹುದು.  ಗಿರ್ಮಿಟಿಯಾ  ಪರಂಪರೆಯ  ಬಗ್ಗೆ  ಸಂಶೋಧನೆ  ಮತ್ತು  ಅಧ್ಯಯನ  ನಡೆಸಬಹುದು. ವಿಶ್ವವಿದ್ಯಾಲಯಗಳಲ್ಲಿ ಇದಕ್ಕಾಗಿ ವಿಶೇಷ ವಿಭಾಗಗಳನ್ನು ಸ್ಥಾಪಿಸಬಹುದು ಮತ್ತು ನಿಯಮಿತವಾಗಿ ವಿಶ್ವ ಗಿರ್ಮಿಟಿಯಾ ಸಮ್ಮೇಳನವನ್ನು ಆಯೋಜಿಸಬಹುದು. ಇದರ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಈ ಯೋಜನೆಯನ್ನು ಮುಂದುವರಿಸಲು ನನ್ನ ತಂಡಕ್ಕೆ ನಿರ್ದೇಶನ ನೀಡುತ್ತೇನೆ.

ಸ್ನೇಹಿತರೇ,

ಇಂದಿನ ಭಾರತ "ಅಭಿವೃದ್ಧಿ ಜೊತೆಗೆ ಪರಂಪರೆ" ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿದೆ. ಜಿ-20 ಶೃಂಗಸಭೆಯ ಸಂದರ್ಭದಲ್ಲಿ, ಭಾರತದ ವೈವಿಧ್ಯತೆಯನ್ನು ವಿಶ್ವಕ್ಕೆ ನೇರವಾಗಿ ಪರಿಚಯಿಸಲು ನಾವು ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಕಾಶಿ-ತಮಿಳು ಸಂಗಮಂ, ಕಾಶಿ-ತೆಲುಗು ಸಂಗಮಂ, ಸೌರಾಷ್ಟ್ರ-ತಮಿಳು ಸಂಗಮಂ ಮುಂತಾದ ಕಾರ್ಯಕ್ರಮಗಳನ್ನು ನಾವು ಗರ್ವದಿಂದ ನಡೆಸುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ, ನಾವು ಸಂತ ತಿರುವಳ್ಳುವರ್ ದಿನವನ್ನು ಆಚರಿಸಲಿದ್ದೇವೆ. ಸಂತ ತಿರುವಳ್ಳುವರರ ಬೋಧನೆಗಳನ್ನು ಜಗತ್ತಿಗೆ ಪಸರಿಸಲು ತಿರುವಳ್ಳುವರ್ ಸಂಸ್ಕೃತಿ ಕೇಂದ್ರಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಸಿಂಗಾಪುರದಲ್ಲಿ ಮೊದಲ ಕೇಂದ್ರದ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ.  ಅಮೆರಿಕದ  ಹೂಸ್ಟನ್  ವಿಶ್ವವಿದ್ಯಾಲಯದಲ್ಲಿ  ತಿರುವಳ್ಳುವರ್ ಅಧ್ಯಯನ ಪೀಠವನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ತಮಿಳು ಭಾಷೆ, ತಮಿಳು ಪರಂಪರೆ ಮತ್ತು ಭಾರತದ ಪರಂಪರೆಯನ್ನು ವಿಶ್ವದ ಮೂಲೆ ಮೂಲೆಗೂ ಸಾರುತ್ತಿವೆ.

ಸ್ನೇಹಿತರೇ,

ಭಾರತದಲ್ಲಿರುವ ನಮ್ಮ ಪಾರಂಪರಿಕ ಸ್ಥಳಗಳನ್ನು ಪರಸ್ಪರ ಸಂಪರ್ಕಿಸಲು ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಉದಾಹರಣೆಗೆ, ಭಗವಾನ್ ಶ್ರೀರಾಮ ಮತ್ತು ಸೀತಾ ಮಾತೆಯವರ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು  "ರಾಮಾಯಣ ಎಕ್ಸ್‌ಪ್ರೆಸ್" ಎಂಬ ವಿಶೇಷ ರೈಲು ಸೇವೆ ಇದೆ. ಅದೇ ರೀತಿ, "ಭಾರತ್ ಗೌರವ್" ರೈಲುಗಳು ದೇಶದಾದ್ಯಂತ ಇರುವ ಪ್ರಮುಖ ಪಾರಂಪರಿಕ ತಾಣಗಳನ್ನು ಒಂದಕ್ಕೊಂದು ಜೋಡಿಸುತ್ತವೆ. ನಮ್ಮ ಅರೆ-ಹೈಸ್ಪೀಡ್ "ವಂದೇ ಭಾರತ್" ರೈಲುಗಳು ದೇಶದ ಮುಖ್ಯ ಪಾರಂಪರಿಕ ಕೇಂದ್ರಗಳನ್ನು ಸಂಪರ್ಕಿಸುತ್ತಿವೆ. ಕೆಲ ದಿನಗಳ ಹಿಂದೆ, "ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್" ಎಂಬ ವಿಶೇಷ ರೈಲನ್ನು ಉದ್ಘಾಟಿಸುವ ಸುಯೋಗ ನನಗೆ ಲಭಿಸಿತು. ಈ  ರೈಲಿನಲ್ಲಿ ಸುಮಾರು 150 ಜನರು ಪ್ರಯಾಣಿಸಿ, ಹದಿನೇಳು ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಒಡಿಶಾ ರಾಜ್ಯದಲ್ಲೂ ನೀವು ಖಂಡಿತವಾಗಿಯೂ ನೋಡಲೇಬೇಕಾದ ಹಲವಾರು ಸ್ಥಳಗಳಿವೆ. ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಶೀಘ್ರದಲ್ಲೇ ಆರಂಭವಾಗಲಿದೆ. ಜೀವನದಲ್ಲಿ  ಅಪರೂಪಕ್ಕೆ  ಒಮ್ಮೆ  ಸಿಗುವ  ಈ ಅವಕಾಶವನ್ನು  ನೀವು  ಕಳೆದುಕೊಳ್ಳಬಾರದು. ಅಲ್ಲಿಗೂ  ಒಮ್ಮೆ  ಭೇಟಿ  ನೀಡಿ.

ಸ್ನೇಹಿತರೇ,

1947ರಲ್ಲಿ ಭಾರತ  ಸ್ವಾತಂತ್ರ್ಯ ಗಳಿಸಿದಾಗ, ಅದರಲ್ಲಿ ನಮ್ಮ ವಲಸಿಗರ ಪಾತ್ರ ಬಹಳ ಮಹತ್ವದ್ದಾಗಿತ್ತು. ವಿದೇಶದಲ್ಲಿ ವಾಸಿಸುತ್ತಿದ್ದರೂ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಈಗ ನಮ್ಮ ಗುರಿ 2047. ನಾವು ಭಾರತವನ್ನು ಒಂದು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಬೇಕು. ಭಾರತದ ಈ ಬೆಳವಣಿಗೆಯ ಪಯಣದಲ್ಲಿ ನೀವು ಇಂದಿಗೂ ಅಮೂಲ್ಯವಾದ ಕೊಡುಗೆ ನೀಡುತ್ತಿದ್ದೀರಿ. ನಿಮ್ಮೆಲ್ಲರ ಕಠಿಣ ಪರಿಶ್ರಮದ ಫಲವಾಗಿ, ಭಾರತ ಇಂದು ವಿದೇಶಗಳಿಂದ ಹಣ ಕಳುಹಿಸುವ (remittances) ವಿಷಯದಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಈಗ ನಾವು ಇದನ್ನು ಮೀರಿ ಆಲೋಚಿಸಬೇಕು. ನೀವು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ಇತರ ದೇಶಗಳಲ್ಲಿಯೂ ಹೂಡಿಕೆ ಮಾಡುತ್ತೀರಿ. ನಿಮ್ಮ ಹಣಕಾಸು ಸೇವೆಗಳು ಮತ್ತು ಹೂಡಿಕೆ ಅಗತ್ಯಗಳನ್ನು ಪೂರೈಸಲು ನಮ್ಮ "ಗಿಫ್ಟ್ ಸಿಟಿ" (GIFT City) ಪರಿಸರ ವ್ಯವಸ್ಥೆ ಸಹಕಾರಿಯಾಗಲಿದೆ. ನೀವೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಮತ್ತು ಭಾರತದ ಅಭಿವೃದ್ಧಿಯ ಪಯಣವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ನೀವು ಮಾಡುವ ಪ್ರತಿಯೊಂದು ಪ್ರಯತ್ನವೂ ಭಾರತವನ್ನು ಬಲಿಷ್ಠಗೊಳಿಸುತ್ತದೆ  ಮತ್ತು  ಅದರ  ಬೆಳವಣಿಗೆಗೆ  ಸಹಾಯಕವಾಗುತ್ತದೆ.

ಅಂತಹ ಒಂದು ವಲಯವೆಂದರೆ ಪಾರಂಪರಿಕ ಪ್ರವಾಸೋದ್ಯಮ. ಪ್ರಸ್ತುತ, ಭಾರತವು ಮುಖ್ಯವಾಗಿ ತನ್ನ ದೊಡ್ಡ ಮೆಟ್ರೋ ನಗರಗಳ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಆದರೆ ಭಾರತವು ಈ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಭಾರತದ ಹೆಚ್ಚಿನ ಭಾಗವು ಶ್ರೇಣಿ-2, ಶ್ರೇಣಿ-3 ನಗರಗಳು ಮತ್ತು ಹಳ್ಳಿಗಳಲ್ಲಿದೆ, ಅಲ್ಲಿ ನೀವು ಭಾರತದ ಪರಂಪರೆಯನ್ನು ನೋಡಬಹುದು. ಈ ಪರಂಪರೆಯೊಂದಿಗೆ ನಾವು ಜಗತ್ತನ್ನು ಜೋಡಿಸಬೇಕಾಗಿದೆ. ನಿಮ್ಮ ಮಕ್ಕಳನ್ನು ಭಾರತದ ಈ ಸಣ್ಣ ನಗರಗಳು ಮತ್ತು ಹಳ್ಳಿಗಳಿಗೆ ಕರೆದೊಯ್ಯುವಂತೆ ನಾನು ನಿಮ್ಮನ್ನು ಕೋರುತ್ತೇನೆ. ನಂತರ, ನೀವು ಹಿಂದಿರುಗಿದ ನಂತರ ನಿಮ್ಮ ಅನುಭವಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮುಂದಿನ ಬಾರಿ ನೀವು ಭಾರತಕ್ಕೆ ಬಂದಾಗ, ಭಾರತೀಯೇತರ ಮೂಲದ ಕನಿಷ್ಠ ಐದು ಸ್ನೇಹಿತರನ್ನು ನಿಮ್ಮೊಂದಿಗೆ ಕರೆತನ್ನಿ. ನೀವು ವಾಸಿಸುವ ನಿಮ್ಮ ಸ್ನೇಹಿತರನ್ನು ಭಾರತಕ್ಕೆ ಭೇಟಿ ನೀಡಲು, ಭಾರತವನ್ನು ಅನುಭವಿಸಲು ಪ್ರೇರೇಪಿಸಿ.

ಸ್ನೇಹಿತರೇ,

ವಿಶೇಷವಾಗಿ ವಲಸಿಗರಲ್ಲಿರುವ ಎಲ್ಲಾ ಯುವ ಮಿತ್ರರಿಗೆ ನನ್ನದೊಂದು ಮನವಿ. ಭಾರತದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕ್ವಿಜ್‌ನಲ್ಲಿ ಭಾಗವಹಿಸಿ. ಇದು ಭಾರತವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. 'ಸ್ಟಡಿ ಇನ್ ಇಂಡಿಯಾ' ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವುದನ್ನೂ ಖಚಿತಪಡಿಸಿಕೊಳ್ಳಬೇಕು. ಐಸಿಸಿಆರ್ (ICCR) ವಿದ್ಯಾರ್ಥಿವೇತನ ಯೋಜನೆಯು  ವಲಸಿಗ  ಯುವಕರು  ಸದುಪಯೋಗಪಡಿಸಿಕೊಳ್ಳಬೇಕಾದ  ಮತ್ತೊಂದು  ಉತ್ತಮ  ಅವಕಾಶ.

ಸ್ನೇಹಿತರೇ, 

ನೀವು ವಾಸಿಸುವ ದೇಶಗಳಲ್ಲಿ, ಭಾರತದ ನಿಜವಾದ ಇತಿಹಾಸವನ್ನು ಹರಡುವಲ್ಲಿ ನೀವು ಮುಂದಾಳತ್ವ ವಹಿಸಬೇಕು. ಅನೇಕ ದೇಶಗಳಲ್ಲಿನ ಪ್ರಸ್ತುತ ಪೀಳಿಗೆಗೆ ನಮ್ಮ ಸಮೃದ್ಧಿ, ದೀರ್ಘಾವಧಿಯ ಗುಲಾಮಗಿರಿ ಮತ್ತು ನಮ್ಮ ಹೋರಾಟಗಳ ಬಗ್ಗೆ ತಿಳಿದಿಲ್ಲ. ಭಾರತದ ನೈಜ ಇತಿಹಾಸವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ನೀವು ಸಹಾಯ ಮಾಡಬಹುದು.

ಸ್ನೇಹಿತರೇ,

ಇಂದು ಭಾರತ "ವಿಶ್ವ ಬಂಧು" ಎಂದು ಪ್ರಸಿದ್ಧವಾಗಿದೆ. ಈ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು, ನೀವು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು. ಉದಾಹರಣೆಗೆ, ನೀವು ವಾಸಿಸುವ ದೇಶದಲ್ಲಿ, ನೀವು ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸಬಹುದು. ಈ ಪ್ರಶಸ್ತಿಗಳು ನೀವು ವಾಸಿಸುವ ದೇಶದ ಸ್ಥಳೀಯ ನಿವಾಸಿಗಳಿಗೆ ಇರಬಹುದು. ಸಾಹಿತ್ಯ, ಕಲೆ ಮತ್ತು ಕರಕುಶಲ, ಚಲನಚಿತ್ರ, ರಂಗಭೂಮಿ ಅಥವಾ ಇತರ ಯಾವುದೇ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಗಳನ್ನು ನೀವು ಗೌರವಿಸಬಹುದು. ಈ ಸಾಧಕರನ್ನು ಆಹ್ವಾನಿಸಿ ಮತ್ತು ಭಾರತದ ವಲಸಿಗರ ಪರವಾಗಿ ಅವರಿಗೆ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಿ. ಆ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ನಿಮಗೆ ಸಹಾಯ ಮಾಡಲು ಸಂತೋಷಪಡುತ್ತದೆ. ಇದು ಆ ದೇಶದ ಜನರೊಂದಿಗೆ ನಿಮ್ಮ ವೈಯಕ್ತಿಕ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಅವರೊಂದಿಗೆ ನಿಮ್ಮ ಭಾವನಾತ್ಮಕ ಬಂಧವನ್ನು ಗಾಢವಾಗಿಸುತ್ತದೆ.

ಸ್ನೇಹಿತರೇ,

ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನೀವು ಪ್ರಮುಖ ಪಾತ್ರ  ವಹಿಸುತ್ತೀರಿ. "ಮೇಡ್ ಇನ್ ಇಂಡಿಯಾ" ಆಹಾರ ಪದಾರ್ಥಗಳು, ಬಟ್ಟೆಗಳು ಅಥವಾ ಇತರ ಯಾವುದೇ ಉತ್ಪನ್ನಗಳನ್ನು ಖರೀದಿಸುವುದನ್ನು ರೂಢಿಸಿಕೊಳ್ಳಿ. ನಿಮ್ಮ ದೇಶದಲ್ಲಿ ಕೆಲವು ವಸ್ತುಗಳು ಲಭ್ಯವಿಲ್ಲದಿದ್ದರೆ, ಆನ್‌ಲೈನ್ ಮೂಲಕ ಆರ್ಡರ್ ಮಾಡಿ. ನಿಮ್ಮ ಅಡುಗೆಮನೆಯಲ್ಲಿ, ಮನೆಯಲ್ಲಿ ಮತ್ತು ಉಡುಗೊರೆಗಳ ರೂಪದಲ್ಲಿ "ಮೇಡ್ ಇನ್ ಇಂಡಿಯಾ" ಉತ್ಪನ್ನಗಳನ್ನು ಬಳಸಿ. ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವಲ್ಲಿ ಇದು ನಿಮ್ಮೆಲ್ಲರಿಂದ ಒಂದು  ಮಹತ್ತರವಾದ  ಕೊಡುಗೆಯಾಗಲಿದೆ.

ಸ್ನೇಹಿತರೇ,

ತಾಯಿ ಮತ್ತು ಭೂಮಿತಾಯಿಗೆ ಸಂಬಂಧಿಸಿದಂತೆ ನನ್ನದೊಂದು ಮನವಿ ಇದೆ. ಕೆಲವು ದಿನಗಳ ಹಿಂದೆ, ನಾನು ಗಯಾನಾಗೆ ಭೇಟಿ ನೀಡಿದ್ದೆ, ಅಲ್ಲಿ ನಾನು ಅಧ್ಯಕ್ಷರೊಂದಿಗೆ ನಮ್ಮ ತಾಯಿಯ ಹೆಸರಿನಲ್ಲಿ ಮರವನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಭಾರತದಲ್ಲಿ ಲಕ್ಷಾಂತರ ಜನರು ಈಗಾಗಲೇ ಇದನ್ನು ಮಾಡುತ್ತಿದ್ದಾರೆ. ನೀವು ಎಲ್ಲೇ ಇದ್ದರೂ, ನಿಮ್ಮ ತಾಯಿಯ ಹೆಸರಿನಲ್ಲಿ ಒಂದು ಮರ ಅಥವಾ ಸಸಿಯನ್ನು ನೆಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ನೀವು ಭಾರತದಿಂದ ಹಿಂದಿರುಗಿದಾಗ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಂಕಲ್ಪ ನಿಮ್ಮೊಂದಿಗೆ ಇರುತ್ತದೆ ಎಂದು ನಾನು ನಂಬುತ್ತೇನೆ. ಒಟ್ಟಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ.

2025 ನಿಮಗೆಲ್ಲರಿಗೂ ಆರೋಗ್ಯ ಮತ್ತು ಐಶ್ವರ್ಯದಲ್ಲಿ ಸಮೃದ್ಧಿಯನ್ನು ತರಲಿ. ಮುಂಬರುವ ವರ್ಷ ನಿಮಗೆಲ್ಲರಿಗೂ ಸಮೃದ್ಧಿ ಮತ್ತು ಸಂತೃಪ್ತಿಯಿಂದ ಕೂಡಿರಲಿ ಎಂದು ನಾನು ಹಾರೈಸುತ್ತೇನೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರನ್ನೂ ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇನೆ.

ಶುಭಾಶಯಗಳು  ಮತ್ತು ಧನ್ಯವಾದಗಳು.

ಸೂಚನೆ: ಇದು ಪ್ರಧಾನಮಂತ್ರಿಗಳ ಭಾಷಣದ ಅಂದಾಜು ಕನ್ನಡ ಭಾವಾನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(Release ID: 2091715) Visitor Counter : 7