ಪ್ರಧಾನ ಮಂತ್ರಿಯವರ ಕಛೇರಿ
ಕುವೈತ್ ಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ (ಡಿಸೆಂಬರ್ 21-22, 2024): ಜಂಟಿ ಹೇಳಿಕೆ
Posted On:
22 DEC 2024 7:46PM by PIB Bengaluru
ಕುವೈತ್ ದೇಶದ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21-22 ಡಿಸೆಂಬರ್ 2024 ರಂದು ಕುವೈಟ್ ಗೆ ಅಧಿಕೃತ ಭೇಟಿ ನೀಡಿದರು. ಕುವೈತ್ ಗೆ ಅವರ ಮೊದಲ ಭೇಟಿಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21 ಡಿಸೆಂಬರ್ 2024 ರಂದು ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಗೌರವಾನ್ವಿತ ಅತಿಥಿಯಾಗಿ ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಕುವೈತ್ ದೇಶದ ಅಮೀರ್ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಮತ್ತು ಕುವೈತ್ ದೇಶದ ಯುವರಾಜ ಶೇಖ್ ಸಬಾಹ್ ಅಲ್-ಖಾಲೀದ್ ಅಲ್-ಸಬಾಹ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಸ್ವಾಗತಿಸಿ ಬರಮಾಡಿಕೊಂಡರು. 22 ಡಿಸೆಂಬರ್ 2024 ರಂದು ಬಯಾನ್ ಅರಮನೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. ಕುವೈತ್ ದೇಶದ ಅತ್ಯುನ್ನತ ಪ್ರಶಸ್ತಿ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕಾಗಿ ಕುವೈತ್ ದೇಶದ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಹೃದಯಂತರಾಳದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಜಾಗತಿಕ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಸಾಂಪ್ರದಾಯಿಕ, ನಿಕಟ ಮತ್ತು ಸೌಹಾರ್ದ ದ್ವಿಪಕ್ಷೀಯ ಸಂಬಂಧಗಳು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢವಾಗಿಸುವ ಬಯಕೆಯನ್ನು ಪರಿಗಣಿಸಿ, ಭಾರತ ಮತ್ತು ಕುವೈತ್ ನಡುವಿನ ಸಂಬಂಧಗಳನ್ನು 'ವ್ಯೂಹಾತ್ಮಕ ಕಾರ್ಯತಂತ್ರದ ಪಾಲುದಾರಿಕೆ' ಹಂತಕ್ಕೇರಿಸಲು ಉಭಯ ನಾಯಕರು ಒಪ್ಪಿಕೊಂಡರು. ಇದು ಉಭಯ ದೇಶಗಳ ಸಾಮಾನ್ಯ ಹಿತಾಸಕ್ತಿಗಳಿಗೆ ಮತ್ತು ಉಭಯ ದೇಶದ ಜನರ ಪರಸ್ಪರ ಪ್ರಯೋಜನಕ್ಕೆ ಅನುಗುಣವಾಗಿದೆ ಎಂದು ನಾಯಕರು ಹೇಳಿದರು. ಎರಡೂ ದೇಶಗಳ ನಡುವೆ ಕಾರ್ಯತಂತ್ರದ ಸಹಭಾಗಿತ್ವದ ಸ್ಥಾಪನೆಯು ನಮ್ಮ ದೀರ್ಘಕಾಲದ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ವಿಶಾಲ-ತಲಹದಿ ಮತ್ತು ಗಾಢಗೊಳಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ದೇಶದ ಪ್ರಧಾನ ಮಂತ್ರಿ ಶೇಖ್ ಅಹ್ಮದ್ ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಮುಬಾರಕ್ ಅಲ್-ಸಬಾಹ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಹೊಸದಾಗಿ ಸ್ಥಾಪಿಸಲಾದ ಕಾರ್ಯತಂತ್ರದ ಸಹಭಾಗಿತ್ವದ ಹಿನ್ನಲೆಯಲ್ಲಿ, ರಾಜಕೀಯ, ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಶಕ್ತಿ, ಸಂಸ್ಕೃತಿ, ಶಿಕ್ಷಣ, ತಂತ್ರಜ್ಞಾನ ಮತ್ತು ಜನರು - ಜನರು ನಡುವಿನ ಪರಸ್ಪರ ಸಂಬಂಧಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಮಗ್ರ ಮತ್ತು ರಚನಾತ್ಮಕ ಸಹಕಾರದ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಎರಡೂ ಕಡೆಯ ನಾಯಕರು ಪುನರುಚ್ಚರಿಸಿದರು.
ಎರಡೂ ಕಡೆಯವರು ಹಂಚಿಕೊಂಡ ಇತಿಹಾಸ ಮತ್ತು ಸಾಂಸ್ಕೃತಿಕ ಸಂಬಂಧಗಳಲ್ಲಿ ಬೇರೂರಿರುವ ಶತಮಾನಗಳ-ಹಳೆಯ ಐತಿಹಾಸಿಕ ಸಂಬಂಧಗಳನ್ನು ನೆನಪಿಸಿಕೊಂಡರು. ಬಹುಮುಖಿ ದ್ವಿಪಕ್ಷೀಯ ಸಹಕಾರದಲ್ಲಿ ತೀವ್ರತೆ ಮತ್ತು ವೇಗಗತಿಯನ್ನು ರೂಪಿಸಲು ಮತ್ತು ಉಳಿಸಿ, ಬೆಳೆಸಿಕೊಳ್ಳಲು ಸಹಾಯ ಮಾಡಿದ ವಿವಿಧ ಹಂತಗಳಲ್ಲಿನ ನಿಯಮಿತ ಸಂವಹನಗಳನ್ನು ಉಭಯ ನಾಯಕರು ಗಮನಿಸಿ ತೃಪ್ತಿ ವ್ಯಕ್ತಪಡಿಸಿದರು. ಸಚಿವಾಲಯ ಮಟ್ಟದಲ್ಲಿ ಮತ್ತು ಹಿರಿಯ ಅಧಿಕಾರಿಗಳ - ಅಧಿಕೃತ ಮಟ್ಟದಲ್ಲಿ ನಿಯಮಿತ ದ್ವಿಪಕ್ಷೀಯ ವಿನಿಮಯದ ಮೂಲಕ ಉನ್ನತ ಮಟ್ಟದ ವಿನಿಮಯ ಪ್ರಕ್ರಿಯೆ ನಡೆಸಲು ಹಾಗೂ ಇತ್ತೀಚಿನ ಶೀಘ್ರತೆ ಹಾಗೂ ವೇಗಗತಿಯನ್ನು ಉಳಿಸಿಕೊಳ್ಳಲು ಎರಡೂ ಕಡೆಯವರು ಒತ್ತು ನೀಡಿದರು.
ಭಾರತ ಮತ್ತು ಕುವೈತ್ ನಡುವೆ ಸಹಕಾರದ ಜಂಟಿ ಆಯೋಗ (ಜೆ.ಸಿ.ಸಿ.) ಅನ್ನು ಇತ್ತೀಚೆಗೆ ಸ್ಥಾಪಿಸಿರುವುದನ್ನು ಉಭಯ ಕಡೆಯವರು ಸ್ವಾಗತಿಸಿದರು. ಸಹಕಾರದ ಜಂಟಿ ಆಯೋಗ (ಜೆ.ಸಿ.ಸಿ.) ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯ ಪರಿಧಿಯನ್ನು ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಾಂಸ್ಥಿಕ ಕಾರ್ಯವಿಧಾನವಾಗಿದೆ ಮತ್ತು ಎರಡೂ ದೇಶಗಳ ವಿದೇಶಾಂಗ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತದೆ. ಈಗ ಪ್ರಸ್ತುತ ಅಸ್ತಿತ್ವದಲ್ಲಿರುವ ಆರೋಗ್ಯ, ಮಾನವಶಕ್ತಿ ಮತ್ತು ಹೈಡ್ರೋಕಾರ್ಬನ್ ಮುಂತಾದವುಗಳ ಕ್ಷೇತ್ರದ ಜಿ.ಡಬ್ಲ್ಯೂ.ಜಿ. ಗಳಿಗೆ ಪೂರಕವಾಗಿ ಜೊತೆಯಲ್ಲಿ ಇತರ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ, ಹೂಡಿಕೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ, ಕೃಷಿ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು, ಹೊಸ ಜಂಟಿ ಕಾರ್ಯ ಗುಂಪುಗಳನ್ನು (ಜಿ.ಡಬ್ಲ್ಯೂ.ಜಿ.) ಸ್ಥಾಪಿಸಲಾಗಿದೆ. ಎರಡೂ ಕಡೆಯವರು ಜೆ.ಸಿ.ಸಿ. ಮತ್ತು ಜಿ.ಡಬ್ಲ್ಯೂ.ಜಿ. ಗಳ ಸಭೆಗಳನ್ನು ಆದಷ್ಟು ಸನಿಹದಲ್ಲಿ ಲಭ್ಯ ಆರಂಭಿಕ ದಿನಾಂಕದಲ್ಲಿ ಕರೆಯಲು ಒತ್ತು ನೀಡಿದರು.
ಎರಡೂ ದೇಶಗಳ ನಡುವೆ ವ್ಯಾಪಾರವು ನಿರಂತರ ಕೊಂಡಿಯಾಗಿದೆ ಎಂದು ಎರಡೂ ಕಡೆಯವರು ಗಮನಿಸಿದರು ಮತ್ತು ದ್ವಿಪಕ್ಷೀಯ ವ್ಯಾಪಾರದಲ್ಲಿ ಮತ್ತಷ್ಟು ಬೆಳವಣಿಗೆ ಮತ್ತು ವೈವಿಧ್ಯತೆಯ ಸಾಮರ್ಥ್ಯವನ್ನು ಹಾಗೂ ವ್ಯಾಪಾರ ನಿಯೋಗಗಳ ವಿನಿಮಯವನ್ನು ಉತ್ತೇಜಿಸುವ ಮತ್ತು ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸುವ ಅಗತ್ಯವನ್ನು ಉಭಯ ದೇಶದ ನಾಯಕರು ಒತ್ತಿ ಹೇಳಿದರು.
ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಉದಯೋನ್ಮುಖ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಎರಡೂ ಕಡೆಯವರು ಗುರುತಿಸಿದರು, ಮತ್ತು ಕುವೈತ್ ನ ಗಮನಾರ್ಹ ಹೂಡಿಕೆ ಸಾಮರ್ಥ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು ಹಾಗೂ ಭಾರತದಲ್ಲಿ ಹೂಡಿಕೆಗೆ ವಿವಿಧ ಮಾರ್ಗಗಳನ್ನು ಎರಡೂ ಕಡೆಯವರು ಚರ್ಚಿಸಿದರು. ವಿದೇಶಿ ನೇರ ಹೂಡಿಕೆಗಳು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಗಳಿಗೆ ಅನುಕೂಲಕರ ವಾತಾವರಣವನ್ನು ಮಾಡುವಲ್ಲಿ ಭಾರತ ತೆಗೆದುಕೊಂಡ ಕ್ರಮಗಳನ್ನು ಕುವೈತ್ ಸ್ವಾಗತಿಸಿತು ಮತ್ತು ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ ರಕ್ಷಣೆ, ಆಹಾರ-ಭದ್ರತೆ, ಲಾಜಿಸ್ಟಿಕ್ಸ್ ಮತ್ತು ಇತರವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಕುವೈತ್ ಆಸಕ್ತಿಯನ್ನು ವ್ಯಕ್ತಪಡಿಸಿತು. ಭಾರತೀಯ ಸಂಸ್ಥೆಗಳು, ಕಂಪನಿಗಳು ಮತ್ತು ನಿಧಿಗಳೊಂದಿಗೆ ಕುವೈತ್ನಲ್ಲಿ ಹೂಡಿಕೆ ಪ್ರಾಧಿಕಾರಗಳ ನಡುವೆ ನಿಕಟ ಮತ್ತು ಹೆಚ್ಚಿನ ನಿಶ್ಚಿತಾರ್ಥದ ಅಗತ್ಯವನ್ನು ಅವರು ಗುರುತಿಸಿದರು. ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮತ್ತು ಭಾಗವಹಿಸಲು ಎರಡೂ ದೇಶಗಳ ಕಂಪನಿಗಳನ್ನು ಅವರು ಪರಸ್ಪರ ಪ್ರೋತ್ಸಾಹಿಸಿದರು. ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ತ್ವರಿತವಾಗಿ ಪರಿಶೀಲಿಸಿ ವಿಲೇವಾರಿ ಮಾಡಲು ಮತ್ತು ಪೂರ್ಣಗೊಳಿಸಲು ಅವರು ಎರಡೂ ದೇಶಗಳ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಂಧನ ಕ್ಷೇತ್ರದಲ್ಲಿ ತಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಎರಡೂ ಕಡೆಯವರು ಚರ್ಚಿಸಿದರು. ದ್ವಿಪಕ್ಷೀಯ ಇಂಧನ ವ್ಯಾಪಾರದಲ್ಲಿ ತೃಪ್ತಿಯನ್ನು ವ್ಯಕ್ತಪಡಿಸುವಾಗ, ಅದನ್ನು ಮತ್ತಷ್ಟು ಹೆಚ್ಚಿಸಲು ಸಂಭಾವ್ಯತೆ ಅಸ್ತಿತ್ವದಲ್ಲಿದೆ ಎಂದು ಎರಡೂ ದೇಶಗಳ ನಾಯಕರು ಒಪ್ಪಿಕೊಂಡರು.
ಖರೀದಿದಾರ-ಮಾರಾಟಗಾರರ ಸಂಬಂಧದಿಂದ ಸಹಕಾರವನ್ನು ಯೋಜನೆಗಳ ಅನುಷ್ಠಾನ ಪೂರ್ವ ಮತ್ತು ಅನುಷ್ಠಾನ ಹಂತದಲ್ಲಿ ಹಾಗೂ ಅನುಷ್ಠಾನ ನಂತರದ ಹಂತದಲ್ಲಿ (ಅಪ್ ಸ್ಟ್ರೀಮ್ ಮತ್ತು ಡೌನ್ ಸ್ಟ್ರೀಮ್) ವಲಯಗಳಲ್ಲಿ ಹೆಚ್ಚಿನ ಸಹಯೋಗದೊಂದಿಗೆ ಸಮಗ್ರ ಪಾಲುದಾರಿಕೆಗೆ ಪರಿವರ್ತಿಸುವ ಮಾರ್ಗಗಳನ್ನು ಎರಡೂ ದೇಶಗಳ ನಾಯಕರು ಚರ್ಚಿಸಿದರು. ತೈಲ ಮತ್ತು ಅನಿಲದ ಪರಿಶೋಧನೆ ಮತ್ತು ಉತ್ಪಾದನೆ, ಸಂಸ್ಕರಣೆ, ಎಂಜಿನಿಯರಿಂಗ್ ಸೇವೆಗಳು, ಪೆಟ್ರೋಕೆಮಿಕಲ್ ಕೈಗಾರಿಕೆಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ದೇಶಗಳ ಕಂಪನಿಗಳನ್ನು ಬೆಂಬಲಿಸಲು ಎರಡೂ ಕಡೆಯವರು ಉತ್ಸುಕತೆಯನ್ನು ವ್ಯಕ್ತಪಡಿಸಿದರು. ಭಾರತದ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಪ್ರೋಗ್ರಾಂನಲ್ಲಿ ಕುವೈತ್ ಭಾಗವಹಿಸುವ ಬಗ್ಗೆ ಚರ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಭಾರತ ಮತ್ತು ಕುವೈತ್ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಅಂಶವೆಂದರೆ ರಕ್ಷಣೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಜಂಟಿ ಮಿಲಿಟರಿ ವ್ಯಾಯಾಮ, ರಕ್ಷಣಾ ಸಿಬ್ಬಂದಿ ತರಬೇತಿ, ಕರಾವಳಿ ರಕ್ಷಣೆ, ಕಡಲ ಸುರಕ್ಷತೆ, ಉಪಕರಣಗಳು, ಜಂಟಿ ಅಭಿವೃದ್ಧಿ ಮತ್ತು ರಕ್ಷಣಾ ಉತ್ಪಾದನೆ ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅಗತ್ಯವಾದ ಚೌಕಟ್ಟನ್ನು ಒದಗಿಸುವ ರಕ್ಷಣಾ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಉಭಯ ಕಡೆಯ ನಾಯಕರು ಸ್ವಾಗತಿಸಿದರು..
ದೇಶದ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎರಡೂ ಕಡೆಯವರು ನಿಸ್ಸಂದಿಗ್ಧವಾಗಿ ಖಂಡಿಸಿದರು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಜಾಲಗಳು ಮತ್ತು ಅಪರಾಧಗಳ ಸುರಕ್ಷಿತ ಸ್ವರ್ಗಗಳನ್ನು ನಿಗ್ರಹಿಸಲು, ತಡೆಯಲು, ಅಡ್ಡಿಪಡಿಸಲು ಮತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಕಿತ್ತುಹಾಕಲು ಉಭಯ ದೇಶದ ನಾಯಕರು ಕರೆ ನೀಡಿದರು. ಭದ್ರತಾ ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎರಡೂ ಕಡೆಯವರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ, ಮಾಹಿತಿ ಮತ್ತು ಗುಪ್ತಚರ ಹಂಚಿಕೆ, ಅನುಭವಗಳ ಅಭಿವೃದ್ಧಿ ಮತ್ತು ವಿನಿಮಯ, ಉತ್ತಮ ಅಭ್ಯಾಸಗಳು ಮತ್ತು ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ ಮತ್ತು ಕಾನೂನು ಜಾರಿಯಲ್ಲಿ ಸಹಕಾರವನ್ನು ಬಲಪಡಿಸಲು ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡರು. ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳ ಧನ ಸಹಾಯ, ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಇತರ ದೇಶೀಯ ಅಪರಾಧಗಳು. ಭಯೋತ್ಪಾದನೆ, ಆಮೂಲಾಗ್ರೀಕರಣ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವುದಕ್ಕಾಗಿ ಸೈಬರ್ ಸ್ಪೇಸ್ ನ ಬಳಕೆಯನ್ನು ತಡೆಗಟ್ಟುವುದು ಸೇರಿದಂತೆ ಸೈಬರ್ ಸುರಕ್ಷತೆಯಲ್ಲಿ ಸಹಕಾರವನ್ನು ಉತ್ತೇಜಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಉಭಯ ಕಡೆಯವರು ಚರ್ಚಿಸಿದರು. ನವೆಂಬರ್ 4 - 5, 2024 ರಂದು ಕುವೈತ್ ದೇಶವು ಆಯೋಜಿಸಿದ್ದ "ದುಶಾನ್ಬೆ ಪ್ರಕ್ರಿಯೆಯ ಕುವೈತ್ ಹಂತ : ಭಯೋತ್ಪಾದನೆಯನ್ನು ಎದುರಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸುವುದು ಮತ್ತು ಗಡಿ ಭದ್ರತೆಗಾಗಿ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕಾರ್ಯವಿಧಾನಗಳನ್ನು ನಿರ್ಮಿಸುವುದು" ಎಂಬ ನಾಲ್ಕನೇ ಉನ್ನತ ಮಟ್ಟದ ಸಮ್ಮೇಳನದ ಫಲಿತಾಂಶಗಳನ್ನು ಭಾರತವು ಈಗಾಗಲೇ ಶ್ಲಾಘಿಸಿದೆ.
ಎರಡೂ ಕಡೆಯವರು ಆರೋಗ್ಯ ಸಹಕಾರವನ್ನು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಸ್ತಂಭಗಳಲ್ಲಿ ಒಂದೆಂದು ಒಪ್ಪಿಕೊಂಡರು ಮತ್ತು ಈ ಪ್ರಮುಖ ವಲಯದಲ್ಲಿ ಸಹಯೋಗವನ್ನು ಇನ್ನಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಎರಡೂ ಕಡೆಯವರು ಶ್ಲಾಘಿಸಿದರು. ಕುವೈತ್ ನಲ್ಲಿ ಭಾರತೀಯ ಔಷಧ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆಯ ಕುರಿತು ಚರ್ಚಿಸಿದರು. ಔಷಧ ನಿಯಂತ್ರಣ ಪ್ರಾಧಿಕಾರಗಳ ನಡುವಿನ ತಿಳುವಳಿಕೆ ಒಪ್ಪಂದ (ಎಂ.ಒ.ಯು.) ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಉಭಯ ದೇಶದ ನಾಯಕಕರು ವ್ಯಕ್ತಪಡಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳು, ಸೆಮಿಕಂಡಕ್ಟರ್ ಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ಕ್ಷೇತ್ರದಲ್ಲಿ ಆಳವಾದ ಸಹಯೋಗವನ್ನು ಮುಂದುವರಿಸಲು ಉಭಯ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು. ಅವರು ಬಿ2ಬಿ ಸಹಕಾರವನ್ನು ಅನ್ವೇಷಿಸಲು, ಇ-ಆಡಳಿತವನ್ನು ಹೆಚ್ಚಿಸಲು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ವಲಯದಲ್ಲಿನ ನೀತಿಗಳು ಮತ್ತು ನಿಯಂತ್ರಣದಲ್ಲಿ ಎರಡೂ ದೇಶಗಳ ಕೈಗಾರಿಕೆಗಳು / ಕಂಪನಿಗಳಿಗೆ ಅನುಕೂಲವಾಗುವಂತೆ ಉತ್ತಮ ಅಭ್ಯಾಸ- ಪದ್ದತಿ –ಕ್ರಮಸೂತ್ರ -ವ್ಯವಸ್ಥೆಗಳನ್ನು ಹಂಚಿಕೊಳ್ಳುವ ಮಾರ್ಗಗಳನ್ನು ಚರ್ಚಿಸಿದರು.
ಕುವೈತ್ ಭಾಗವು ತನ್ನ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತದೊಂದಿಗೆ ಸಹಕಾರಕ್ಕೆ ಆಸಕ್ತಿಯನ್ನು ವ್ಯಕ್ತಪಡಿಸಿತು. ಭಾರತದಲ್ಲಿನ ಫುಡ್ ಪಾರ್ಕ್ ಗಳಲ್ಲಿ ಕುವೈತ್ ಕಂಪನಿಗಳ ಹೂಡಿಕೆ ಸೇರಿದಂತೆ ಸಹಯೋಗಕ್ಕಾಗಿ ವಿವಿಧ ಮಾರ್ಗಗಳ ಕುರಿತು ಎರಡೂ ಕಡೆಯವರು ಚರ್ಚಿಸಿದರು.
ಕಡಿಮೆ ಇಂಗಾಲದ ಬೆಳವಣಿಗೆಯ ಪಥಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ನಿಯೋಜಿಸುವಲ್ಲಿ ಮತ್ತು ಸುಸ್ಥಿರ ಇಂಧನ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಸಹಯೋಗದ ಕಡೆಗೆ ಮಹತ್ವದ ಹೆಜ್ಜೆಯನ್ನು ಗುರುತಿಸುವ ಕುವೈತ್ ನ ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐ.ಎಸ್..ಎ) ಸದಸ್ಯನಾಗುವ ನಿರ್ಧಾರವನ್ನು ಭಾರತದ ಕಡೆಯವರು ಸ್ವಾಗತಿಸಿದರು. ಐ.ಎಸ್.ಎ ಒಳಗೆ ಜಗತ್ತಿನಾದ್ಯಂತ ಸೌರಶಕ್ತಿಯ ನಿಯೋಜನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಕಟವಾಗಿ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು.
ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ಇತ್ತೀಚಿನ ಸಭೆಗಳನ್ನು ಎರಡೂ ಕಡೆಯವರು ಗಮನಿಸಿದರು. ದ್ವಿಪಕ್ಷೀಯ ವಿಮಾನ ಆಸನ ಸಾಮರ್ಥ್ಯಗಳ ಹೆಚ್ಚಳ ಮತ್ತು ಸಂಬಂಧಿತ ವಿಷಯಗಳ ಕುರಿತು ಉಭಯ ಕಡೆಯವರು ಚರ್ಚಿಸಿದರು. ಆರಂಭಿಕ ದಿನಾಂಕದಲ್ಲಿ ಪರಸ್ಪರ ಸ್ವೀಕಾರಾರ್ಹ ಪರಿಹಾರ ಹಂತವನ್ನು ತಲುಪಲು ಚರ್ಚೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಕಲೆ, ಸಂಗೀತ ಮತ್ತು ಸಾಹಿತ್ಯ ಉತ್ಸವಗಳಲ್ಲಿ ಹೆಚ್ಚಿನ ಸಾಂಸ್ಕೃತಿಕ ವಿನಿಮಯಕ್ಕೆ ಅನುಕೂಲವಾಗುವಂತಹ 2025-2029ರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ (ಸಿಇಪಿ) ನವೀಕರಣವನ್ನು ಶ್ಲಾಘಿಸಿದ ಉಭಯ ಕಡೆಯ ನಾಯಕರು ಜನರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
2025-2028ರ ಕ್ರೀಡಾ ಕ್ಷೇತ್ರದಲ್ಲಿ ಸಹಕಾರದ ಕಾರ್ಯಕಾರಿ ಕಾರ್ಯಕ್ರಮಕ್ಕೆ ಸಹಿ ಹಾಕಿರುವ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಪರಸ್ಪರ ವಿನಿಮಯ ಮತ್ತು ಕ್ರೀಡಾಪಟುಗಳ ಭೇಟಿ, ಕಾರ್ಯಾಗಾರಗಳು, ಸೆಮಿನಾರ್ ಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸುವುದು, ಎರಡೂ ರಾಷ್ಟ್ರಗಳ ನಡುವೆ ಕ್ರೀಡಾ ಪ್ರಕಟಣೆಗಳ ವಿನಿಮಯ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುತ್ತದೆ ಎಂದು ಎರಡೂ ಕಡೆಯವರು ಗಮನಿಸಿದರು.
ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಂಪರ್ಕಗಳು ಮತ್ತು ವಿನಿಮಯವನ್ನು ಬಲಪಡಿಸುವುದು ಸೇರಿದಂತೆ ಶಿಕ್ಷಣವು ಸಹಕಾರದ ಪ್ರಮುಖ ಕ್ಷೇತ್ರವಾಗಿದೆ ಎಂದು ಎರಡೂ ಕಡೆಯವರು ಹೇಳಿದರು. ಶೈಕ್ಷಣಿಕ ಮೂಲಸೌಕರ್ಯವನ್ನು ಆಧುನೀಕರಿಸಲು ಆನ್ ಲೈನ್ ಕಲಿಕಾ ವೇದಿಕೆಗಳು ಮತ್ತು ಡಿಜಿಟಲ್ ಲೈಬ್ರರಿಗಳಿಗೆ ಅವಕಾಶಗಳನ್ನು ಅನ್ವೇಷಿಸಲು, ಶೈಕ್ಷಣಿಕ ತಂತ್ರಜ್ಞಾನದಲ್ಲಿ ಸಹಕರಿಸಲು ಎರಡೂ ಕಡೆಯವರು ಆಸಕ್ತಿಯನ್ನು ವ್ಯಕ್ತಪಡಿಸಿದರು.
ವಿದೇಶಿ ಸೇವೆಯ (ಎಸ್. ಎಸ್. ಐ. ಎಫ್. ಎಸ್.) ಅಡಿಯಲ್ಲಿನ ಚಟುವಟಿಕೆಗಳ ಭಾಗವಾಗಿ, ಕುವೈತ್ ನ ರಾಜತಾಂತ್ರಿಕರು ಮತ್ತು ಅಧಿಕಾರಿಗಳಿಗೆ ವಿಶೇಷ ಕೋರ್ಸ್ ಅನ್ನು ನವದೆಹಲಿಯ ವಿದೇಶಿ ಸೇವೆಯಲ್ಲಿ (ಎಸ್. ಎಸ್. ಐ. ಎಫ್. ಎಸ್.) ಆಯೋಜಿಸುವ ಪ್ರಸ್ತಾಪವನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಶತಮಾನಗಳ ಹಳೆಯ ಜನರ-ಜನರ ನಡುವಿನ ಪರಸ್ಪರ ಸಂಬಂಧಗಳು ಐತಿಹಾಸಿಕ ಭಾರತ-ಕುವೈತ್ ಸಂಬಂಧದ ಮೂಲಭೂತ ಸ್ತಂಭವನ್ನು ಪ್ರತಿನಿಧಿಸುತ್ತವೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಕುವೈತ್ನಲ್ಲಿರುವ ಭಾರತೀಯ ಸಮುದಾಯವು ತಮ್ಮ ಆತಿಥೇಯ ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ನೀಡಿದ ಪಾತ್ರ ಮತ್ತು ಕೊಡುಗೆಗಾಗಿ ಕುವೈತ್ ನಾಯಕರು ತಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಹಾಗೂ ಕುವೈತ್ ನಲ್ಲಿರುವ ಭಾರತೀಯ ನಾಗರಿಕರು ತಮ್ಮ ಶಾಂತಿಯುತ ಮತ್ತು ಕಠಿಣ ಪರಿಶ್ರಮದ ಸ್ವಭಾವಕ್ಕಾಗಿ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುವೈತ್ ನಲ್ಲಿರುವ ಈ ದೊಡ್ಡ ಮತ್ತು ವೈವಿದ್ಯಮಯ ಭಾರತೀಯ ಸಮುದಾಯದ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸಿದ ಕುವೈತ್ ನ ನಾಯಕತ್ವಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೆಚ್ಚುಗೆಯನ್ನು ತಿಳಿಸಿದರು.
ಮಾನವಶಕ್ತಿ, ಚಲನಶೀಲತೆ ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ದೀರ್ಘಾವಧಿಯ ಮತ್ತು ಐತಿಹಾಸಿಕ ಸಹಕಾರದ ಆಳ ಮತ್ತು ಪ್ರಾಮುಖ್ಯತೆಯ ಮೇಲೆ ಉಭಯ ಪಕ್ಷಗಳು ಒತ್ತು ನೀಡಿವೆ. ವಲಸಿಗರು, ಕಾರ್ಮಿಕ ಚಲನಶೀಲತೆ ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕಾನ್ಸುಲರ್ ಸಂವಾದ ಮತ್ತು ಕಾರ್ಮಿಕ ಮತ್ತು ಮಾನವಶಕ್ತಿ ಸಂವಾದದ ನಿಯಮಿತ ಸಭೆಗಳನ್ನು ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿರುವ ಎರಡೂ ದೇಶದ ನಡುವಿನ ಪರಸ್ಪರ ಅತ್ಯುತ್ತಮ ಸಮನ್ವಯವನ್ನು ಎರಡೂ ದೇಶದ ಕಡೆಯವರು ಶ್ಲಾಘಿಸಿದರು. 2023ರಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್..ಸಿ..ಒ) ಭಾರತದ ಅಧ್ಯಕ್ಷೀಯತೆಯ ಸಂದರ್ಭದಲ್ಲಿ ಎಸ್..ಸಿ..ಒ. ನಲ್ಲಿ ಕುವೈತ್ ನ 'ಸಂಭಾಷಣಾ ಪಾಲುದಾರ' ಮೂಲಕ ಪ್ರವೇಶವನ್ನು ಭಾರತದ ಕಡೆಯವರು ಸ್ವಾಗತಿಸಿದರು. ಏಷ್ಯನ್ ಸಹಕಾರ ಸಂವಾದದಲ್ಲಿ (ಎಸಿಡಿ) ಕುವೈತ್ನ ಸಕ್ರಿಯ ಪಾತ್ರವನ್ನು ಭಾರತದ ಕಡೆಯವರು ಶ್ಲಾಘಿಸಿದರು. ಎಸಿಡಿ ಅನ್ನು ಪ್ರಾದೇಶಿಕ ಸಂಸ್ಥೆಯಾಗಿ ಪರಿವರ್ತಿಸುವ ಸಾಧ್ಯತೆಯನ್ನು ಅನ್ವೇಷಿಸಲು ಅಗತ್ಯವಾದ ಪ್ರಯತ್ನಗಳನ್ನು ಮಾಡುವ ಪ್ರಾಮುಖ್ಯತೆಯನ್ನು ಕುವೈತ್ ಕಡೆಯವರು ಈ ಸಂದರ್ಭದಲ್ಲಿ ವಿವರಿಸಿದರು.
ಈ ವರ್ಷ ಜಿಸಿಸಿಯ ಅಧ್ಯಕ್ಷರಾಗಿ ಕುವೈತ್ ದೇಶದ ಅಧಿಕಾರ ಸ್ವೀಕಾರಕ್ಕಾಗಿ ಅಮೀರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು ಮತ್ತು ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬೆಳೆಯುತ್ತಿರುವ ಭಾರತ-ಜಿಸಿಸಿ ಸಹಕಾರವು ಮತ್ತಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು. 9 ಸೆಪ್ಟೆಂಬರ್ 2024 ರಂದು ರಿಯಾದ್ ನಲ್ಲಿ ನಡೆದ ವಿದೇಶಾಂಗ ಮಂತ್ರಿಗಳ ಮಟ್ಟದಲ್ಲಿ ಕಾರ್ಯತಂತ್ರದ ಮಾತುಕತೆಗಾಗಿ ಭಾರತ-ಜಿಸಿಸಿ ಜಂಟಿ ಸಚಿವರ ಸಭೆಯ ಫಲಿತಾಂಶಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. ಪ್ರಸ್ತುತ ಜಿಸಿಸಿ ಅಧ್ಯಕ್ಷರಾಗಿರುವ ಕುವೈತ್ ತಂಡವು ಭಾರತ-ಜಿಸಿಸಿಯನ್ನು ಆರೋಗ್ಯ, ವ್ಯಾಪಾರ, ಭದ್ರತೆ, ಕೃಷಿ ಮತ್ತು ಆಹಾರ ಭದ್ರತೆ, ಸಾರಿಗೆ ಸೇರಿದಂತೆ ಕ್ಷೇತ್ರಗಳಲ್ಲಿ ಇತ್ತೀಚೆಗೆ ಅಳವಡಿಸಿಕೊಂಡ ಜಂಟಿ ಕ್ರಿಯಾ ಯೋಜನೆಯಡಿ ಸಹಕಾರ ಶಕ್ತಿ, ಸಂಸ್ಕೃತಿ, ಇತರವುಗಳಲ್ಲಿ ಇನ್ನೂ ಆಳಗೊಳಿಸಲು ಹಾಗೂ ದೃಢಗೊಳಿಸಲು ಸಂಪೂರ್ಣ ಬೆಂಬಲದ ಭರವಸೆ ನೀಡಲಾಗಿದೆ ಎಂದು ಹೇಳಿದರು. ಭಾರತ-ಜಿಸಿಸಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಕ್ರಿಯೆಯು ಶೀಘ್ರ ಗತಿಯಲ್ಲಿ ಸಾಗಿ ಕೊನೆಯ ಹಂತಕ್ಕೆ ತಲುಪಿರುವುದರ ಮಹತ್ವವನ್ನು ಎರಡೂ ಕಡೆಯವರು ಸಂತಸ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಯ ಸುಧಾರಣೆಯ ನೀತಿಗಳ ಸಂದರ್ಭದಲ್ಲಿ, ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ, ಪ್ರಮುಖ ಅಂಶವಾಗಿ ಸಮಕಾಲೀನ ವಾಸ್ತವಗಳ ವಿಶ್ವಸಂಸ್ಥೆ ಪ್ರತಿಬಿಂಬವನ್ನು ಕೇಂದ್ರೀಕರಿಸಿದ ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಇಬ್ಬರೂ ನಾಯಕರು ಒತ್ತಿಹೇಳಿದರು. ಸದಸ್ಯತ್ವದ ಎರಡೂ ವಿಭಾಗಗಳಲ್ಲಿ ವಿಸ್ತರಣೆಯ ಮೂಲಕ ಭದ್ರತಾ ಮಂಡಳಿಯನ್ನು ಒಳಗೊಂಡಂತೆ ಅದನ್ನು ಹೆಚ್ಚು ಪ್ರಾತಿನಿಧಿಕ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಮಾಡಲು ವಿಶ್ವಸಂಸ್ಥೆಯ ಸುಧಾರಣೆ ನೀತಿಗಳ ಅಗತ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು,
ಭೇಟಿಯ ಸಮಯದಲ್ಲಿ ಈ ಕೆಳಗಿನ ದಾಖಲೆಗಳಿಗೆ ಸಹಿ/ವಿನಿಮಯ ಮಾಡಲಾಯಿತು. ಇದು ಬಹುಮುಖಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಮತ್ತು ಸಹಕಾರದ ಹೊಸ ಕ್ಷೇತ್ರಗಳಿಗೆ ಮುಕ್ತ ಮಾರ್ಗಗಳು:● ರಕ್ಷಣಾ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಮತ್ತು ಕುವೈತ್ ನಡುವಿನ ತಿಳುವಳಿಕಾ ಒಪ್ಪಂದ.
● 2025-2029 ವರ್ಷಗಳ ಅವಧಗಾಗಿ ಭಾರತ ಮತ್ತು ಕುವೈತ್ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.
● 2025-2028ರ ಕ್ರೀಡಾ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಮತ್ತು ಕುವೈತ್ ನಡುವಿನ ಕಾರ್ಯಕಾರಿ ಕಾರ್ಯಕ್ರಮವು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಮತ್ತು ಕುವೈತ್ ದೇಶದ ಯುವ ಮತ್ತು ಕ್ರೀಡಾ ಸಾರ್ವಜನಿಕ ಪ್ರಾಧಿಕಾರ - ಇವುಗಳ ನಡುವೆ ನಡೆಯಲಿದೆ.
● ಕುವೈತ್ ದೇಶಕ್ಕೆ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐ. ಎಸ್. ಎ) ನ ಸದಸ್ಯತ್ವ.
ಭಾರತಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ದೇಶದ ದೊರೆ (ಅಮೀರ್) ಅವರಿಗೆ ಮತ್ತು ಅವರ ನಿಯೋಗಕ್ಕೆ ಧನ್ಯವಾದ ಸಲ್ಲಿಸಿದರು. ಈ ಭೇಟಿಯು ಭಾರತ ಮತ್ತು ಕುವೈತ್ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ಬಲವಾದ ಬಂಧಗಳನ್ನು, ಸಂಬಂಧಗಳನ್ನು ಪುನಶ್ಚೇತನಗೊಳಿಸಿತು. ಈ ನವೀಕೃತ ಸಹಭಾಗಿತ್ವವು ಎರಡೂ ದೇಶಗಳ ಜನರಿಗೆ ಪ್ರಯೋಜನಕಾರಿಯಾಗಿ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ಉಭಯ ನಾಯಕರು ಆಶಾವಾದವನ್ನು ವ್ಯಕ್ತಪಡಿಸಿದರು.
ಕುವೈತ್ ದೇಶದ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರನ್ನು, ಕುವೈತ್ ದೇಶದ ಯುವರಾಜ ಘನತೆವೆತ್ತ ಶೇಖ್ ಸಬಾಹ್ ಅಲ್-ಖಾಲೀದ್ ಅಲ್-ಸಬಾಹ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರನ್ನು ಮತ್ತು ಕುವೈತ್ ದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಅಹ್ಮದ್ ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಮುಬಾರಕ್ ಅಲ್-ಸಬಾಹ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನಿಸಿದರು.
*****
(Release ID: 2087182)
Visitor Counter : 10