ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಗಳಿಂದ ಕುವೈತ್‌ನ ಅಮೀರ್ ಅವರ ಭೇಟಿ
Posted On:
22 DEC 2024 5:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕುವೈತ್‌ನ ಅಮೀರ್ ಆಗಿರುವ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಬೇರ್ ಅಲ್-ಸಬಾಹ್ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. ಬಯಾನ್ ಅರಮನೆಗೆ ಆಗಮಿಸಿದಾಗ, ಪ್ರಧಾನಿ ಮೋದಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು ಮತ್ತು ಕುವೈತ್ ಪ್ರಧಾನಿ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು.
ಎರಡೂ ದೇಶಗಳ ನಡುವಿನ ಬಲವಾದ ಐತಿಹಾಸಿಕ ಮತ್ತು ಸೌಹಾರ್ದ ಸಂಬಂಧಗಳನ್ನು ಉಭಯ ನಾಯಕರು ನೆನಪು ಮಾಡಿಕೊಂಡರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಗಾಢಗೊಳಿಸಲು ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು. ದ್ವಿಪಕ್ಷೀಯ ಸಂಬಂಧವನ್ನು 'ಕಾರ್ಯತಂತ್ರದ ಪಾಲುದಾರಿಕೆ' ಹಂತಕ್ಕೆ ಏರಿಸಲು ಅವರು ಈ ಸಂದರ್ಭದಲ್ಲಿ ಸಮ್ಮತಿಸಿದರು.
ಕುವೈತ್‌ನಲ್ಲಿರುವ ಹತ್ತು ಲಕ್ಷಕ್ಕೂ ಹೆಚ್ಚು ಸಶಕ್ತ ಭಾರತೀಯ ಸಮುದಾಯದ ಯೋಗಕ್ಷೇಮವನ್ನು ಖಾತರಿಪಡಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಅಮೀರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕುವೈತ್‌ನ ಅಭಿವೃದ್ಧಿಯಲ್ಲಿ ಬೃಹತ್ ಮತ್ತು ರೋಮಾಂಚಕ ಭಾರತೀಯ ಸಮುದಾಯದ ಕೊಡುಗೆಗೆ ಅಮೀರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕುವೈತ್ ತನ್ನ 2035ರ ಮುನ್ನೋಟ ಸಾಕಾರಕ್ಕೆ ಕೈಗೊಂಡಿರುವ ಹೊಸ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ಈ ತಿಂಗಳ ಆರಂಭದಲ್ಲಿ ಜಿಸಿಸಿ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಮೀರ್ ಅವರನ್ನು ಅಭಿನಂದಿಸಿದರು. ಅರೇಬಿಯನ್ ಗಲ್ಫ್ ಕಪ್‌ನ ಉದ್ಘಾಟನಾ ಸಮಾರಂಭದಲ್ಲಿ 'ಗೌರವ ಅತಿಥಿಯಾಗಿ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು. ಅಮೀರ್ ಅವರು ಪ್ರಧಾನಮಂತ್ರಿಯವರ ಭಾವಾಭಿವ್ಯಕ್ತಿಯನ್ನು ಪುನರುಚ್ಚರಿಸಿದರು ಹಾಗೂ ಕುವೈತ್ ಮತ್ತು ಗಲ್ಫ್ ಪ್ರದೇಶದಲ್ಲಿ ಭಾರತದ ಮೌಲ್ಯಯುತ ಪಾಲುದಾರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕುವೈತ್ ವಿಷನ್ 2035ರ ಸಾಕಾರಕ್ಕೆ ಭಾರತದ ಹೆಚ್ಚಿನ ಪಾತ್ರ ಮತ್ತು ಕೊಡುಗೆಯನ್ನು ಎದುರು ನೋಡುತ್ತಿರುವುದಾಗಿ ಅಮೀರ್ ಹೇಳಿದರು.
ಭಾರತಕ್ಕೆ ಭೇಟಿ ನೀಡುವಂತೆ ಅಮೀರ್ ಅವರನ್ನು ಪ್ರಧಾನಮಂತ್ರಿ ಆಹ್ವಾನಿಸಿದ್ದಾರೆ.
*****
(Release ID: 2087079)
Visitor Counter : 9