ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹರಿಯಾಣದ ಪಾಣಿಪತ್‌ ನಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 09 DEC 2024 5:54PM by PIB Bengaluru

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಹರಿಯ ವಾಸಸ್ಥಾನ ಹರಿಯಾಣ, ಮತ್ತು ಇಲ್ಲಿ ಎಲ್ಲರೂ ಹೃತ್ಪೂರ್ವಕವಾಗಿ 'ರಾಮ್ ರಾಮ್' ಎಂದು ಪರಸ್ಪರ ಶುಭಾಶಯ ಕೋರುತ್ತಾರೆ.

ಹರಿಯಾಣ ರಾಜ್ಯಪಾಲರಾದ ಬಂಡಾರು ದತ್ತಾತ್ರೇಯ ಜೀ, ಈ ರಾಜ್ಯದ ಕ್ರಿಯಾಶೀಲ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಗೌರವಾನ್ವಿತ ಸಹೋದ್ಯೋಗಿ, ನಿರ್ಮಲಾ ಸೀತಾರಾಮನ್ ಜೀ ಮತ್ತು ಈ ಭೂಮಿಯ ಮಗ, ಸಂಸತ್ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ, ಜೊತೆಗೆ ಸರ್ಕಾರದ ನನ್ನ ಸಹೋದ್ಯೋಗಿ ಶ್ರೀ ಮನೋಹರ್ ಲಾಲ್ ಜೀ; ಶ್ರೀ ಕೃಷ್ಣ ಪಾಲ್ ಜೀ, ಹರಿಯಾಣ ಸರ್ಕಾರದ ಸಚಿವೆ ಶ್ರುತಿ ಜೀ, ಆರತಿ ಜೀ, ಸಂಸದರು, ಶಾಸಕರು ಮತ್ತು ದೇಶಾದ್ಯಂತ ವಿವಿಧ LIC ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,

ಇಂದು, ಭಾರತ ಮಹಿಳಾ ಸಬಲೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಈ ದಿನವು ಹಲವಾರು ಇತರ ಕಾರಣಗಳಿಗಾಗಿಯೂ ವಿಶೇಷ ಮಹತ್ವವನ್ನು ಹೊಂದಿದೆ. ಇಂದು 9 ನೇ ತಾರೀಖು - ನಮ್ಮ ಶಾಸ್ತ್ರಗಳಲ್ಲಿ ಅಪಾರ ಶುಭವನ್ನು ಹೊಂದಿರುವ ಸಂಖ್ಯೆ. 9 ನೇ ಸಂಖ್ಯೆಯು ನವದುರ್ಗೆಯ ಒಂಬತ್ತು ಶಕ್ತಿಗಳಿಗೆ ಸಂಬಂಧಿಸಿದೆ ಮತ್ತು ನವರಾತ್ರಿಯ ಸಮಯದಲ್ಲಿ, ನಾವು ಶಕ್ತಿಯ ಆರಾಧನೆಗೆ ಒಂಬತ್ತು ದಿನಗಳನ್ನು ಮೀಸಲಿಡುತ್ತೇವೆ. ಈ ದಿನವನ್ನೂ ಸಹ ಮಹಿಳೆಯರನ್ನು ಗೌರವಿಸಲು ಸಮರ್ಪಿಸಲಾಗಿದೆ.

ಸ್ನೇಹಿತರೇ,

ಇಂದೇ ಡಿಸೆಂಬರ್ 9 ರಂದು, ನಮ್ಮ ಸಂವಿಧಾನ ಸಭೆಯ ಮೊದಲ ಅಧಿವೇಶನ ಜರುಗಿತ್ತು. ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ, ಈ ದಿನವು ಸಮಾನತೆ ಮತ್ತು  ಅಭಿವೃದ್ಧಿಯಂತಹ  ಮೂಲಭೂತ ತತ್ವಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ನೆನಪಿಸುತ್ತಿದೆ.

ಸ್ನೇಹಿತರೇ,

ಜಗತ್ತಿಗೆ ನೀತಿ ಮತ್ತು ಧರ್ಮದ ಜ್ಞಾನವನ್ನು ನೀಡಿದ ಈ ಪುಣ್ಯಭೂಮಿಯಲ್ಲಿ ಇರುವುದು ನಿಜಕ್ಕೂ ಒಂದು ಭಾಗ್ಯ. ಅಂತರಾಷ್ಟ್ರೀಯ ಗೀತಾ ಜಯಂತಿ ಮಹೋತ್ಸವವು ಈಗ ಕುರುಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಗೀತೆಯ ಪವಿತ್ರ ಭೂಮಿಗೆ ನಾನು ನಮಸ್ಕರಿಸುತ್ತೇನೆ ಮತ್ತು ಇಡೀ ಹರಿಯಾಣ ರಾಜ್ಯ ಮತ್ತು ಅದರ ದೇಶಭಕ್ತ ಜನರಿಗೆ "ರಾಮ್ ರಾಮ್" ಎಂದು ಹೃತ್ಪೂರ್ವಕವಾಗಿ ಶುಭಾಶಯ ಕೋರುತ್ತೇನೆ. "ಏಕ್ ಹೈ ತೋ ಸೇಫ್ ಹೈ" (ನಾವೆಲ್ಲರೂ ಒಂದಾಗಿದ್ದರೆ, ನಾವು ಸುರಕ್ಷಿತ) ಎಂಬ ಮಂತ್ರವನ್ನು ಹರಿಯಾಣವು ಅಳವಡಿಸಿಕೊಂಡ ರೀತಿ ಇಡೀ ದೇಶಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ.

ಸ್ನೇಹಿತರೇ,

ಹರಿಯಾಣದೊಂದಿಗಿನ ನನ್ನ ಬಾಂಧವ್ಯ ಮತ್ತು ಈ ನೆಲದ ಮೇಲಿನ ನನ್ನ ಪ್ರೀತಿಯು ರಹಸ್ಯವಾಗಿಲ್ಲ. ನಿಮ್ಮ ಅಪಾರ ಬೆಂಬಲ ಮತ್ತು ಆಶೀರ್ವಾದದಿಂದ ಬಿಜೆಪಿ ಸತತ ಮೂರನೇ ಅವಧಿಗೆ ಇಲ್ಲಿ ಸರ್ಕಾರ ರಚಿಸಿದೆ. ಇದಕ್ಕಾಗಿ ಹರ್ಯಾಣದ ಪ್ರತಿ ಕುಟುಂಬಕ್ಕೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಸೈನಿ ಜೀ ನೇತೃತ್ವದ ಹೊಸ ಸರ್ಕಾರವು ಅಧಿಕಾರಕ್ಕೆ ಬಂದು ಕೆಲವೇ ವಾರಗಳು ಕಳೆದಿವೆ, ಆದರೂ ಇದು ರಾಷ್ಟ್ರದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಸರ್ಕಾರ ರಚನೆಯಾದ ತಕ್ಷಣ ಸಾವಿರಾರು ಯುವಕರು ಯಾವುದೇ ವೆಚ್ಚವನ್ನು ಮಾಡದೆ ಅಥವಾ ಯಾವುದೇ ಶಿಫಾರಸುಗಳ ಅಗತ್ಯವಿಲ್ಲದೆ ಹೇಗೆ ಖಾಯಂ ಉದ್ಯೋಗಗಳನ್ನು ಪಡೆದರು ಎಂಬುದನ್ನು ಇಡೀ ದೇಶವು ನೋಡಿದೆ. ಇಲ್ಲಿನ ಡಬಲ್ ಇಂಜಿನ್ ಸರ್ಕಾರ ಈಗ ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಚುನಾವಣೆಯ ಸಮಯದಲ್ಲಿ, ಹರಿಯಾಣದ ಮಹಿಳೆಯರು "ಮ್ಹಾರಾ ಹರಿಯಾಣ, ತಡೆರಹಿತ ಹರಿಯಾಣ" ಎಂಬ ಘೋಷಣೆಯನ್ನು ಕೂಗಿದರು.  ನಾವು ಈ ಘೋಷಣೆಯನ್ನು ನಮ್ಮ ಸಂಕಲ್ಪವಾಗಿ ಅಳವಡಿಸಿಕೊಂಡಿದ್ದೇವೆ. ಈ ಬದ್ಧತೆಯೊಂದಿಗೆ ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸಲು ನಾನು ಇಂದು ಇಲ್ಲಿದ್ದೇನೆ. ಸುತ್ತಲೂ ನೋಡಿದಾಗ, ನಾನು ತಾಯಂದಿರು ಮತ್ತು ಸಹೋದರಿಯರ ಅಗಾಧ ಉಪಸ್ಥಿತಿಯನ್ನು ನೋಡುತ್ತೇನೆ, ಇದು ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ.

ಸ್ನೇಹಿತರೇ,

ದೇಶದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು  ಇಲ್ಲಿ "ಬಿಮಾ ಸಖಿ" ಯೋಜನೆಯನ್ನು ಪ್ರಾರಂಭಿಸಲಾಗಿದೆ. "ಬಿಮಾ ಸಖಿ" ಯೋಜನೆ ಅಡಿಯಲ್ಲಿ ಇಂದು ಇಲ್ಲಿ ಹೆಣ್ಣುಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ದೇಶಾದ್ಯಂತ ಇರುವ ಎಲ್ಲಾ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದೆ, ಪಾಣಿಪತ್‌ ನಿಂದ 'ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನವನ್ನು ಪ್ರಾರಂಭಿಸುವ ಗೌರವ ನನಗೆ ಸಿಕ್ಕಿತ್ತು. ಇದರ ಸಕಾರಾತ್ಮಕ ಪರಿಣಾಮ ಹರಿಯಾಣದಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಕಂಡುಬಂದಿದೆ. ಕಳೆದ ದಶಕದಲ್ಲಿ ಹರಿಯಾಣದಲ್ಲಿ ಮಾತ್ರ ಸಾವಿರಾರು ಹೆಣ್ಣುಮಕ್ಕಳ ಜೀವ ಉಳಿಸಲಾಗಿದೆ. ಈಗ, 10 ವರ್ಷಗಳ ನಂತರ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗಾಗಿ "ಬಿಮಾ ಸಖಿ" ಯೋಜನೆಯನ್ನು ಇದೇ ಪಾಣಿಪತ್ ನೆಲದಿಂದ ಉದ್ಘಾಟಿಸಲಾಗಿದೆ. ಹಲವು ವಿಧಗಳಲ್ಲಿ, ಪಾಣಿಪತ್ ಮಹಿಳಾ ಸಬಲೀಕರಣದ ಸಂಕೇತವಾಗಿದೆ.

ಸ್ನೇಹಿತರೇ,

2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ಭಾರತ ಈಗ ಮುನ್ನಡೆಯುತ್ತಿದೆ. 1947 ರಿಂದ, ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಂದು ಪ್ರದೇಶದ ಸಾಮೂಹಿಕ ಶಕ್ತಿಯು ಭಾರತವನ್ನು ಇಂದಿನ ಉತ್ತುಂಗಕ್ಕೆ ತಂದಿದೆ. ಆದಾಗ್ಯೂ, 2047 ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು, ನಾವು ಹಲವು ಹೊಸ ಶಕ್ತಿಯ ಮೂಲಗಳನ್ನು ಬಳಸಿಕೊಳ್ಳಬೇಕು. ಅಂತಹ ಒಂದು ಮೂಲವೆಂದರೆ ಈಶಾನ್ಯ ಭಾರತ ಸೇರಿದಂತೆ ಪೂರ್ವ ಭಾರತ. ಮತ್ತೊಂದು ಪ್ರಮುಖ ಶಕ್ತಿಯ ಮೂಲವೆಂದರೆ ನಮ್ಮ ದೇಶದ ನಾರಿ ಶಕ್ತಿ - ಮಹಿಳಾ ಶಕ್ತಿ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ನಮಗೆ ನಮ್ಮ ಅಸಂಖ್ಯಾತ ತಾಯಂದಿರು ಮತ್ತು ಸಹೋದರಿಯರ ಹೆಚ್ಚುವರಿ ಶಕ್ತಿಯ ಅಗತ್ಯವಿದೆ, ಅವರ ಕೊಡುಗೆಗಳು ನಮ್ಮ  ಅತ್ಯುತ್ತಮ ಸ್ಫೂರ್ತಿಯ ಮೂಲವಾಗಲಿವೆ. ಇಂದು, ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು, ಬಿಮಾ ಸಖಿ, ಬ್ಯಾಂಕ್ ಸಖಿ ಮತ್ತು ಕೃಷಿ ಸಖಿಗಳು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಸ್ತಂಭಗಳಾಗಿ ಹೊರಹೊಮ್ಮುತ್ತಿವೆ.

ಸ್ನೇಹಿತರೇ,

ಮಹಿಳೆಯರನ್ನು ಸಬಲೀಕರಣಗೊಳಿಸಲು, ಅವರಿಗೆ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಅವರ ಹಾದಿಯಲ್ಲಿರುವ ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕುವುದು ಬಹಳ ಮುಖ್ಯ. ಮಹಿಳೆಯರಿಗೆ ಮುನ್ನಡೆಯಲು ಅವಕಾಶ ನೀಡಿದಾಗ, ಅವರು ಪ್ರತಿಯಾಗಿ,  ದೇಶಕ್ಕೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತಾರೆ. ವರ್ಷಗಳ ಕಾಲ, ನಮ್ಮ ದೇಶದಲ್ಲಿ ಅನೇಕ ವೃತ್ತಿಗಳಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ನಿಷೇಧಿಸಲಾಗಿತ್ತು. ನಮ್ಮ ಬಿಜೆಪಿ ಸರ್ಕಾರ ನಮ್ಮ ಹೆಣ್ಣುಮಕ್ಕಳಿಗೆ ಅಡ್ಡಿಯಾಗುವ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕಲು ಸಂಕಲ್ಪ ಮಾಡಿದೆ. ಇಂದು, ಮಹಿಳೆಯರನ್ನು ಸೇನೆಯ ಮುಂಚೂಣಿಯಲ್ಲಿ ನಿಯೋಜಿಸಲಾಗುತ್ತಿದೆ ಎಂದು ನೀವು ನೋಡಬಹುದು. ನಮ್ಮ ಹೆಣ್ಣುಮಕ್ಕಳು ಗಣನೀಯ ಸಂಖ್ಯೆಯಲ್ಲಿ ಫೈಟರ್ ಪೈಲಟ್‌ ಗಳಾಗುತ್ತಿದ್ದಾರೆ. ಅನೇಕ ಮಹಿಳೆಯರು ಈಗ ಪೊಲೀಸ್ ಪಡೆಗೆ ಸೇರುತ್ತಿದ್ದಾರೆ. ಇದಲ್ಲದೆ, ನಮ್ಮ ಹೆಣ್ಣುಮಕ್ಕಳು ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ದೇಶಾದ್ಯಂತ, ಮಹಿಳೆಯರು ಮುನ್ನಡೆಸುತ್ತಿರುವ 1,200 ಉತ್ಪಾದಕ ಸಂಘಗಳು ಅಥವಾ ರೈತರು ಮತ್ತು ಜಾನುವಾರು ಸಾಕಣೆದಾರರ ಸಹಕಾರಿ ಸಂಘಗಳಿವೆ. ಕ್ರೀಡೆಯಾಗಿರಲಿ ಅಥವಾ ಶಿಕ್ಷಣವಾಗಿರಲಿ, ನಮ್ಮ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ  ಶ್ರೇಷ್ಠತೆಯನ್ನು ಸಾಧಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಹೆರಿಗೆ ರಜೆಯನ್ನು 26 ವಾರಗಳಿಗೆ ವಿಸ್ತರಿಸಿರುವುದರಿಂದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ಸ್ನೇಹಿತರೇ,

ಒಬ್ಬ ಕ್ರೀಡಾಪಟು ಪದಕವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿರುವಾಗ ಅಥವಾ ಮೌಂಟ್ ಎವರೆಸ್ಟ್ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಾ ವಿಜೃಂಭಿಸುತ್ತಿರುವಾಗ, ಅವರ ಆ ಯಶಸ್ಸಿನ ಹಿಂದಿರುವ ವರ್ಷಗಟ್ಟಲಿನ  ತಪಸ್ಸು ಮತ್ತು  ಅವಿರತ ಶ್ರಮ ನಮಗೆ ಕಾಣುವುದಿಲ್ಲ. ಇಂದು ಇಲ್ಲಿ  ಪ್ರಾರಂಭಿಸಲಾಗಿರುವ  "ಬಿಮಾ ಸಖಿ" ಯೋಜನೆಯ  ಬುನಾದಿಯೂ ಸಹ  ಇಂತಹುದೇ  ದೀರ್ಘಕಾಲದ ಪರಿಶ್ರಮ ಮತ್ತು  ನಿರಂತರ  ಪ್ರಯತ್ನದ ಫಲ. ಸ್ವಾತಂತ್ರ್ಯ  ಸಿಕ್ಕು 60-65 ವರ್ಷಗಳು ಕಳೆದರೂ,  ಭಾರತದಲ್ಲಿ  ಹೆಚ್ಚಿನ  ಮಹಿಳೆಯರಿಗೆ  ಸ್ವಂತ ಬ್ಯಾಂಕ್ ಖಾತೆಗಳೇ ಇರಲಿಲ್ಲ.  ಅಂದರೆ,  ಮಹಿಳೆಯರು  ಔಪಚಾರಿಕ  ಬ್ಯಾಂಕಿಂಗ್ ವ್ಯವಸ್ಥೆಯಿಂದ  ಹೊರಗುಳಿದಿದ್ದರು  ಎಂದೇ ಅರ್ಥ. ಈ ಕೊರತೆಯನ್ನು  ನೀಗಿಸಲು,  ನಮ್ಮ  ಸರ್ಕಾರ  ತಾಯಂದಿರು  ಮತ್ತು  ಸಹೋದರಿಯರಿಗಾಗಿ  ಜನ್ ಧನ್ ಖಾತೆಗಳನ್ನು  ತೆರೆಯುವ ಕಾರ್ಯಕ್ಕೆ ಆದ್ಯತೆ  ನೀಡಿತು.  ಇಂದು, 30 ಕೋಟಿಗೂ  ಹೆಚ್ಚು  ಮಹಿಳೆಯರು  ಮತ್ತು  ಹೆಣ್ಣುಮಕ್ಕಳು  ಜನ್ ಧನ್  ಖಾತೆಗಳನ್ನು  ಹೊಂದಿದ್ದಾರೆ  ಎಂದು ಹೇಳಲು  ನನಗೆ  ಹೆಮ್ಮೆಯಾಗುತ್ತಿದೆ. ಈ  ಜನ್ ಧನ್  ಖಾತೆಗಳಿಲ್ಲದಿದ್ದರೆ  ಪರಿಸ್ಥಿತಿ  ಹೇಗಿರುತ್ತಿತ್ತು  ಎಂದು  ಒಮ್ಮೆ  ಯೋಚಿಸಿ. ಅವುಗಳಿಲ್ಲದಿದ್ದರೆ,  ಅನಿಲ  ಸಬ್ಸಿಡಿ  ನಿಮ್ಮ  ಖಾತೆಗಳಿಗೆ  ನೇರವಾಗಿ  ಬರುತ್ತಿರಲಿಲ್ಲ.  ಕೋವಿಡ್-19  ಸಾಂಕ್ರಾಮಿಕದ  ಸಮಯದಲ್ಲಿ,  ನಿಮಗೆ ಆರ್ಥಿಕ  ಸಹಾಯ  ನೀಡಲು  ಸಾಧ್ಯವಾಗುತ್ತಿರಲಿಲ್ಲ.  "ಕಿಸಾನ್  ಕಲ್ಯಾಣ  ನಿಧಿ"ಯ  ಹಣ  ಮಹಿಳೆಯರ  ಖಾತೆಗಳನ್ನು  ತಲುಪುತ್ತಿರಲಿಲ್ಲ, "ಸುಕನ್ಯಾ  ಸಮೃದ್ಧಿ  ಯೋಜನೆ"ಯಡಿಯಲ್ಲಿ  ಸಿಗುವ  ಹೆಚ್ಚಿನ  ಬಡ್ಡಿಯ  ಲಾಭವೂ  ಹೆಣ್ಣುಮಕ್ಕಳಿಗೆ  ಸಿಗುತ್ತಿರಲಿಲ್ಲ.  ಮನೆ  ಕಟ್ಟಲು  ಹಣ ಮಹಿಳೆಯರ  ಖಾತೆಗಳಿಗೆ  ನೇರವಾಗಿ  ವರ್ಗಾವಣೆಯಾಗುತ್ತಿರಲಿಲ್ಲ.  ಇದಲ್ಲದೆ,  ಸಣ್ಣ  ವ್ಯಾಪಾರ  ಶುರು  ಮಾಡುವ  ಸಹೋದರಿಯರಿಗೆ ಬ್ಯಾಂಕ್‌ಗಳ  ಸೇವೆ  ಸಿಗುತ್ತಿರಲಿಲ್ಲ,  ಮತ್ತು  "ಮುದ್ರಾ  ಯೋಜನೆ"ಯಡಿಯಲ್ಲಿ  ಕೋಟ್ಯಂತರ  ಮಹಿಳೆಯರು  ಭದ್ರತಾ  ರಹಿತ  ಸಾಲಗಳನ್ನು ಪಡೆಯುವುದು  ಬಹುತೇಕ  ಅಸಾಧ್ಯವಾಗಿರುತ್ತಿತ್ತು.  ಮಹಿಳೆಯರು  ಈಗ  ಸ್ವಂತ  ಬ್ಯಾಂಕ್  ಖಾತೆಗಳನ್ನು  ಹೊಂದಿರುವುದರಿಂದ,  ಅವರು ಮುದ್ರಾ  ಸಾಲಗಳನ್ನು  ಪಡೆದು,  ಮೊದಲ  ಬಾರಿಗೆ,  ತಮ್ಮ  ಇಚ್ಛೆಯ  ವ್ಯವಹಾರ  ಮತ್ತು  ಉದ್ಯಮಗಳನ್ನು  ಪ್ರಾರಂಭಿಸಲು ಸಾಧ್ಯವಾಗುತ್ತಿದೆ.

ಸ್ನೇಹಿತರೇ,

ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವಲ್ಲಿ ನಮ್ಮ ಸಹೋದರಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಒಂದು ಕಾಲದಲ್ಲಿ ಬ್ಯಾಂಕ್ ಖಾತೆಗಳಿಲ್ಲದ  ಮಹಿಳೆಯರು ಈಗ ಬ್ಯಾಂಕ್ ಸಖಿಯರಾಗಿ ಇತರರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುತ್ತಿರುವುದು ಗಮನಾರ್ಹ. ಈ ತಾಯಂದಿರು ಮತ್ತು ಸಹೋದರಿಯರು ಜನರಿಗೆ ಹಣವನ್ನು ಉಳಿಸುವುದು ಹೇಗೆ, ಸಾಲಗಳನ್ನು ಪಡೆಯುವುದು ಹೇಗೆ ಮತ್ತು ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂದು ಕಲಿಸುತ್ತಿದ್ದಾರೆ. ಇಂದು, ಲಕ್ಷಾಂತರ ಬ್ಯಾಂಕ್ ಸಖಿಯರು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಸ್ನೇಹಿತರೇ,

ಒಂದು ಕಾಲದಲ್ಲಿ ಮಹಿಳೆಯರನ್ನು ಬ್ಯಾಂಕಿಂಗ್‌ ನಿಂದ ಹೊರಗಿಟ್ಟಂತೆ, ಅವರು ವಿಮಾ ಪರಿಸರ ವ್ಯವಸ್ಥೆಯ ಭಾಗವೂ ಆಗಿರಲಿಲ್ಲ. ಇಂದು, ಲಕ್ಷಾಂತರ ಮಹಿಳೆಯರನ್ನು ವಿಮಾ ಏಜೆಂಟ್‌ ಗಳನ್ನಾಗಿ ಅಥವಾ ಬಿಮಾ ಸಖಿಯರನ್ನಾಗಿ ಮಾಡಲು ಒಂದು ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮವು ಒಂದು ಕಾಲದಲ್ಲಿ ವಿಮಾ ಸೇವೆಗಳಿಂದ ವಂಚಿತರಾಗಿದ್ದ ಮಹಿಳೆಯರಿಗೆ ಇತರರನ್ನು ಈ ಸೇವೆಗಳಿಗೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಡುತ್ತದೆ. ಹಾಗೆ ಮಾಡುವುದರಲ್ಲಿ, ಅವರು ವಿಮಾ ವಲಯದ ವಿಸ್ತರಣೆಗೂ ನಾಯಕತ್ವ ವಹಿಸುತ್ತಾರೆ. ಬೀಮಾ ಸಖಿ ಯೋಜನೆಯಡಿಯಲ್ಲಿ, ನಾವು 2 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. 10ನೇ ತರಗತಿಯಲ್ಲಿ ಉತ್ತೀರ್ಣರಾದ  ಸಹೋದರಿಯರು ಮತ್ತು ಹೆಣ್ಣುಮಕ್ಕಳು ವಿಶೇಷ ತರಬೇತಿ, ಮೂರು ವರ್ಷಗಳ ಆರ್ಥಿಕ ನೆರವು ಮತ್ತು ಭತ್ಯೆಗಳನ್ನು ಪಡೆಯುತ್ತಾರೆ. ಉದ್ಯಮದ ಮಾಹಿತಿಯ ಪ್ರಕಾರ, LIC ಏಜೆಂಟ್ ತಿಂಗಳಿಗೆ ಸರಾಸರಿ 15,000 ರೂ. ಆದಾಯವನ್ನು ಗಳಿಸುತ್ತಾರೆ. ಇದರರ್ಥ ನಮ್ಮ ಬೀಮಾ ಸಖಿಯರು ವಾರ್ಷಿಕವಾಗಿ 1.75 ಲಕ್ಷ ರೂ.ಗಳಿಗಿಂತ ಹೆಚ್ಚು ಗಳಿಸಬಹುದು. ಈ ಆದಾಯವು ಅವರ ಕುಟುಂಬಗಳಿಗೆ ಅಗತ್ಯವಿರುವ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.

ಸ್ನೇಹಿತರೇ,

ಬೀಮಾ ಸಖಿಯರು ಕೈಗೊಳ್ಳುತ್ತಿರುವ ಕೆಲಸದ ಮಹತ್ವವು ಅವರ ಮಾಸಿಕ ಗಳಿಕೆಗಿಂತ  ಹೆಚ್ಚಿನದಾಗಿದೆ. 'ಎಲ್ಲರಿಗೂ ವಿಮೆ' ಎಂಬ ನಮ್ಮ ರಾಷ್ಟ್ರದ ಗುರಿಯನ್ನು ಸಾಧಿಸುವಲ್ಲಿ ಅವರ ಪಾತ್ರವು  ಅತ್ಯಂತ  ಮುಖ್ಯವಾಗಿದೆ. ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಮತ್ತು ಬಡತನವನ್ನು  ಮೂಲದಿಂದಲೇ  ನಿರ್ಮೂಲನೆ ಮಾಡುವಲ್ಲಿ ಈ  ಧ್ಯೇಯವು  ಬಹಳ  ಮುಖ್ಯ.  ಬೀಮಾ ಸಖಿಯಾಗಿ ನೀವು ಇಂದು ವಹಿಸುತ್ತಿರುವ ಪಾತ್ರವು ಎಲ್ಲರಿಗೂ ವಿಮೆ ಎಂಬ ಧ್ಯೇಯವನ್ನು ಬಲಪಡಿಸುತ್ತದೆ.

ಸ್ನೇಹಿತರೇ,

ವಿಮೆಯು ವ್ಯಕ್ತಿಗಳಿಗೆ ಹೇಗೆ ಸಬಲೀಕರಣ ನೀಡುತ್ತದೆ ಮತ್ತು ಜೀವನವನ್ನು ಪರಿವರ್ತಿಸುತ್ತದೆ ಎಂಬುದರ ಸ್ಪಷ್ಟ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಸರ್ಕಾರವು 'ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ' ಮತ್ತು 'ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ'ಯನ್ನು ಪ್ರಾರಂಭಿಸಿದೆ, ಇದು  ತುಂಬಾ ಕೈಗೆಟುಕುವ  ಪ್ರೀಮಿಯಂಗಳಲ್ಲಿ ತಲಾ 2 ಲಕ್ಷ ರೂ.ಗಳವರೆಗೆ ವಿಮಾ  ಕವರೇಜ್ ಅನ್ನು ಒದಗಿಸುತ್ತದೆ. ವಿಮೆ  ಹೊಂದುವುದನ್ನು  ಊಹಿಸಿಕೊಳ್ಳದ  ದೇಶದ 20 ಕೋಟಿಗೂ ಹೆಚ್ಚು ಜನರು ಈಗ ಈ ಯೋಜನೆಗಳ ಅಡಿಯಲ್ಲಿ ವಿಮೆ ಹೊಂದಿದ್ದಾರೆ. ಇಲ್ಲಿಯವರೆಗೆ,  ಸುಮಾರು 20,000 ಕೋಟಿ ರೂ.ಗಳ  ಕ್ಲೈಮ್  ಪಾವತಿಗಳನ್ನು  ಒದಗಿಸಲಾಗಿದೆ.  ಒಮ್ಮೆ  ಊಹಿಸಿ  - ಯಾರಾದರೂ  ಅಪಘಾತಕ್ಕೀಡಾದರೆ  ಅಥವಾ  ಪ್ರೀತಿಪಾತ್ರರನ್ನು  ಕಳೆದುಕೊಂಡರೆ,  ಅಂತಹ  ಕಷ್ಟದ  ಸಮಯದಲ್ಲಿ  ಆ 2 ಲಕ್ಷ  ರೂ. ಎಷ್ಟು  ಮುಖ್ಯವಾಗಿರುತ್ತದೆ  ಎಂದು.  ಇದರರ್ಥ  ಬಿಮಾ  ಸಖಿಯರು  ಕೇವಲ  ವಿಮೆಯನ್ನು  ನೀಡುತ್ತಿಲ್ಲ;  ಅವರು  ಅಸಂಖ್ಯಾತ ಕುಟುಂಬಗಳಿಗೆ  ಮುಖ್ಯವಾದ  ಸಾಮಾಜಿಕ  ಭದ್ರತಾ  ಜಾಲವನ್ನು  ಒದಗಿಸುತ್ತಿದ್ದಾರೆ  ಮತ್ತು  ತುಂಬಾ  ಪುಣ್ಯದ  ಕೆಲಸವನ್ನು ಮಾಡುತ್ತಿದ್ದಾರೆ.

ಸ್ನೇಹಿತರೇ,

ಭಾರತದ ಗ್ರಾಮೀಣ ಮಹಿಳೆಯರಿಗಾಗಿ ಕಳೆದ 10 ವರ್ಷಗಳಲ್ಲಿ ಜಾರಿಗೆ ತಂದಿರುವ ಕ್ರಾಂತಿಕಾರಿ ನೀತಿಗಳು ಮತ್ತು ನಿರ್ಧಾರಗಳು ಗುರುತಿಸುವಿಕೆ ಮತ್ತು ಅಧ್ಯಯನಕ್ಕೆ ಅರ್ಹವಾಗಿವೆ. ಬಿಮಾ ಸಖಿ, ಬ್ಯಾಂಕ್ ಸಖಿ, ಕೃಷಿ ಸಖಿ, ಪಶು ಸಖಿ, ಡ್ರೋನ್ ದೀದಿ ಮತ್ತು ಲಕ್ಷಾಧಿಪತಿ ದೀದಿ  ಎಂಬ  ಹೆಸರುಗಳು ಸರಳ ಮತ್ತು ಸಾಮಾನ್ಯವೆಂದು ತೋರುತ್ತದೆಯಾದರೂ, ಈ ಮಹಿಳೆಯರು ಭಾರತದ ಭವಿಷ್ಯವನ್ನು ಪುನರ್ರೂಪಿಸುತ್ತಿದ್ದಾರೆ.  ವಿಶೇಷವಾಗಿ  ಸ್ವ-ಸಹಾಯ ಗುಂಪು (SHG) ಚಳುವಳಿಯು  ಇತಿಹಾಸದಲ್ಲಿ  ಕೊಂಡಾಡಲ್ಪಡುವ  ಮಹಿಳಾ ಸಬಲೀಕರಣದ  ಒಂದು  ಗಮನಾರ್ಹ  ಕಥೆ.  ಗ್ರಾಮೀಣ  ಆರ್ಥಿಕತೆಯಲ್ಲಿ  ಕ್ರಾಂತಿಯನ್ನುಂಟುಮಾಡುವ  ಶಕ್ತಿಶಾಲಿ  ಸಾಧನಗಳಾಗಿ  ನಾವು ಸ್ವ-ಸಹಾಯ  ಗುಂಪುಗಳನ್ನು  ಪರಿವರ್ತಿಸಿದ್ದೇವೆ.  ಇಂದು,  ದೇಶಾದ್ಯಂತ  10  ಕೋಟಿ  ಮಹಿಳೆಯರು  ಸ್ವ-ಸಹಾಯ  ಗುಂಪುಗಳೊಂದಿಗೆ ಸಂಬಂಧ  ಹೊಂದಿದ್ದು,  ತಮ್ಮ  ಪ್ರಯತ್ನದ  ಮೂಲಕ  ಜೀವನೋಪಾಯವನ್ನು  ಗಳಿಸುತ್ತಿದ್ದಾರೆ.  ಕಳೆದ  ದಶಕದಲ್ಲಿ,  ಸರ್ಕಾರವು  ಸ್ವ-ಸಹಾಯ  ಗುಂಪುಗಳಿಗೆ  8  ಲಕ್ಷ  ಕೋಟಿ  ರೂ.ಗಳಿಗಿಂತ  ಹೆಚ್ಚು  ಆರ್ಥಿಕ  ಸಹಾಯವನ್ನು  ಒದಗಿಸಿದೆ,  ಇದು  ಅವರ  ಕೊಡುಗೆಗಳನ್ನು ಗಣನೀಯವಾಗಿ  ಹೆಚ್ಚಿಸಿದೆ.

ಸ್ನೇಹಿತರೇ,

ದೇಶಾದ್ಯಂತ ಸ್ವ-ಸಹಾಯ ಗುಂಪುಗಳೊಂದಿಗೆ  ಜೊತೆಗೂಡಿರುವ  ಎಲ್ಲಾ  ಮಹಿಳೆಯರೇ,  ನಿಮ್ಮ  ಪಾತ್ರ  ಎಷ್ಟು  ವಿಶೇಷ  ಮತ್ತು  ನಿಮ್ಮ ಕೊಡುಗೆ  ಎಷ್ಟು  ಮಹತ್ತರವಾದುದು  ಎಂದು  ನಾನು  ವಿಶೇಷವಾಗಿ  ಒತ್ತಿ  ಹೇಳಬಯಸುತ್ತೇನೆ.  ಭಾರತ  ವಿಶ್ವದ  ಮೂರನೇ  ಅತಿದೊಡ್ಡ ಆರ್ಥಿಕ  ಶಕ್ತಿಯಾಗಲು  ನೀವು  ಪ್ರೇರಕ  ಶಕ್ತಿಯಾಗಿದ್ದೀರಿ.  ಸಮಾಜದ  ಎಲ್ಲಾ  ಸ್ತರಗಳ,  ಪ್ರತಿ  ವರ್ಗದ  ಮತ್ತು  ಪ್ರತಿ  ಕುಟುಂಬದ ಮಹಿಳೆಯರು  ಈ  ಚಳುವಳಿಯಲ್ಲಿ  ಭಾಗವಹಿಸಿ,  ಎಲ್ಲರನ್ನೂ  ಒಳಗೊಳ್ಳುವಂತೆ  ಮಾಡಿದ್ದಾರೆ.  ಸ್ವ-ಸಹಾಯ  ಗುಂಪುಗಳ  ಈ  ಚಳುವಳಿ ಗ್ರಾಮೀಣ  ಆರ್ಥಿಕತೆಯನ್ನು  ಮೇಲೆತ್ತುವುದಲ್ಲದೆ,  ಸಾಮಾಜಿಕ  ಸಾಮರಸ್ಯ  ಮತ್ತು  ಸಮಾನತೆಯನ್ನು  ಹೆಚ್ಚಿಸುತ್ತಿದೆ.  ನಮ್ಮಲ್ಲಿ  ಒಂದು ಮಾತಿದೆ  -  "ಒಬ್ಬ  ಹೆಣ್ಣು  ಮಗಳು  ಶಿಕ್ಷಣ  ಪಡೆದರೆ,  ಎರಡು  ಕುಟುಂಬಗಳು  ಉದ್ಧಾರವಾಗುತ್ತವೆ"  ಎಂದು.  ಅದೇ  ರೀತಿ,  ಸ್ವ-ಸಹಾಯ ಗುಂಪುಗಳು  ಒಬ್ಬ  ಮಹಿಳೆಯ  ಆದಾಯವನ್ನು  ವೃದ್ಧಿಸುವುದಲ್ಲದೆ,  ಅವಳ  ಇಡೀ  ಕುಟುಂಬ  ಮತ್ತು  ಗ್ರಾಮದ  ಆತ್ಮವಿಶ್ವಾಸವನ್ನೂ ಬಲಪಡಿಸುತ್ತವೆ.  ನಿಮ್ಮ  ಕೆಲಸ  ಅನನ್ಯ  ಮತ್ತು  ಅಮೂಲ್ಯ.

ಸ್ನೇಹಿತರೇ,

ಕೆಂಪು ಕೋಟೆಯಲ್ಲಿ 3 ಕೋಟಿ ಲಕ್ಷಾಧಿಪತಿ ದೀದಿಯರನ್ನು ಸೃಷ್ಟಿಸುವ ಗುರಿಯನ್ನು ನಾನು  ಘೋಷಿಸಿದ್ದೆ.  ಈಗಾಗಲೇ,  ದೇಶಾದ್ಯಂತ  1 ಕೋಟಿ 15 ಲಕ್ಷಕ್ಕೂ ಹೆಚ್ಚು  ಲಕ್ಷಾಧಿಪತಿ  ದೀದಿಯರು  ಹೊರಹೊಮ್ಮಿದ್ದಾರೆ.  ಪ್ರತಿಯೊಬ್ಬರೂ  ವಾರ್ಷಿಕವಾಗಿ  1 ಲಕ್ಷ  ರೂ.ಗಳಿಗಿಂತ ಹೆಚ್ಚು  ಗಳಿಸುತ್ತಿದ್ದಾರೆ.  ಲಕ್ಷಾಧಿಪತಿ  ದೀದಿ  ಉಪಕ್ರಮಕ್ಕೆ  ಸರ್ಕಾರದ  "ನಮೋ  ಡ್ರೋನ್  ದೀದಿ"  ಯೋಜನೆಯು  ಇನ್ನಷ್ಟು  ಬಲ ತುಂಬಿದೆ.  ಇದು  ಹರಿಯಾಣದಲ್ಲಿ  ಅಪಾರ  ಪ್ರಶಂಸೆ  ಗಳಿಸುತ್ತಿದೆ.  ಹರಿಯಾಣ  ಚುನಾವಣೆಯ  ಸಂದರ್ಭದಲ್ಲಿ,  ನಾನು  ಕೆಲವು ಸಹೋದರಿಯರ  ಸಂದರ್ಶನಗಳನ್ನು  ಕಂಡೆ.  ಒಬ್ಬ  ಸಹೋದರಿ  ತಾನು  ಹೇಗೆ  ಡ್ರೋನ್  ಪೈಲಟ್  ಆಗಿ  ತರಬೇತಿ  ಪಡೆದೆ,  ತನ್ನ  ಗುಂಪು ಡ್ರೋನ್  ಖರೀದಿಸಿದ್ದು  ಹೇಗೆ,  ಮತ್ತು  ಕಳೆದ  ಖಾರಿಫ್  ಸೀಸನ್‌ ನಲ್ಲಿ  ಬೆಳೆಗಳ  ಮೇಲೆ  ಔಷಧಿ  ಸಿಂಪಡಿಸಲು  ಹೇಗೆ  ಕೆಲಸ  ಪಡೆದಳು ಎಂದು  ವಿವರಿಸಿದರು.  ಡ್ರೋನ್  ಬಳಸಿ  ಅವರು  ಸುಮಾರು  800  ಎಕರೆ  ಜಮೀನಿನಲ್ಲಿ  ಕೀಟನಾಶಕಗಳನ್ನು  ಸಿಂಪಡಿಸಿದರು.  ಅವರು ಎಷ್ಟು  ಸಂಪಾದಿಸಿದರು  ಗೊತ್ತೇ?  ಒಂದೇ  ಋತುವಿನಲ್ಲಿ  3  ಲಕ್ಷ  ರೂಪಾಯಿ!  ಈ  ಉಪಕ್ರಮ  ಕೃಷಿಯನ್ನು  ಬದಲಾಯಿಸುತ್ತಿರುವುದಲ್ಲದೆ, ಮಹಿಳೆಯರ  ಜೀವನದಲ್ಲಿಯೂ  ಆಮೂಲಾಗ್ರ  ಬದಲಾವಣೆ  ತರುತ್ತಿದೆ,  ಅವರು  ಆರ್ಥಿಕವಾಗಿ  ಸ್ವಾವಲಂಬಿಗಳಾಗಿ  ಜೀವನ  ನಡೆಸಲು ಮತ್ತು  ಸಮೃದ್ಧಿ  ಹೊಂದಲು  ಸಹಾಯ  ಮಾಡುತ್ತಿದೆ.

ಸ್ನೇಹಿತರೇ,

ಇಂದು, ದೇಶಾದ್ಯಂತ ಆಧುನಿಕ ಕೃಷಿ ಪದ್ಧತಿಗಳು, ನೈಸರ್ಗಿಕ ಕೃಷಿ ಮತ್ತು ಸುಸ್ಥಿರ ಕೃಷಿ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಸಾವಿರಾರು ಕೃಷಿ ಸಖಿಯರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿಯವರೆಗೆ, ಸುಮಾರು 70,000 ಕೃಷಿ ಸಖಿಯರು ತಮ್ಮ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಈ ಕೃಷಿ ಸಖಿಯರು ವಾರ್ಷಿಕವಾಗಿ 60,000 ರೂ.ಗಳಿಗಿಂತ ಹೆಚ್ಚು ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದೇ ರೀತಿ, 1.25 ಲಕ್ಷಕ್ಕೂ ಹೆಚ್ಚು ಪಶು ಸಖಿಯರು ಪಶುಪಾಲನೆಯ ಕುರಿತು ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕೃಷಿ ಸಖಿಯರು ಮತ್ತು ಪಶು ಸಖಿಯರ ಪಾತ್ರಗಳು ಉದ್ಯೋಗಕ್ಕಿಂತ  ಹೆಚ್ಚು ವಿಸ್ತಾರವಾಗಿವೆ; ಅವರು ಮಾನವೀಯತೆಗೆ ಅಮೂಲ್ಯವಾದ ಸೇವೆಯನ್ನು ಒದಗಿಸುತ್ತಿದ್ದಾರೆ. ನರ್ಸ್‌ಗಳು ಜೀವಗಳನ್ನು ಉಳಿಸುವ ಮತ್ತು ಆರೈಕೆ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವಂತೆ, ಕೃಷಿ ಸಖಿಯರು ಭವಿಷ್ಯದ ಪೀಳಿಗೆಗೆ ಭೂ ತಾಯಿಯನ್ನು ರಕ್ಷಿಸುತ್ತಿದ್ದಾರೆ. ಸಾವಯವ ಕೃಷಿಯನ್ನು ಉತ್ತೇಜಿಸುವ ಮೂಲಕ, ಅವರು ಮಣ್ಣು, ನಮ್ಮ ರೈತರು ಮತ್ತು ಭೂಮಿಗೇ ಸೇವೆ ಸಲ್ಲಿಸುತ್ತಿದ್ದಾರೆ. ಅಂತೆಯೇ, ಪಶು ಸಖಿಯರು ಪ್ರಾಣಿಗಳನ್ನು  ಆರೈಕೆ ಮಾಡುವ ಮೂಲಕ  ಗಮನಾರ್ಹವಾಗಿ  ಕೊಡುಗೆ  ನೀಡುತ್ತಿದ್ದಾರೆ,  ಇದರಿಂದಾಗಿ  ಮಾನವೀಯತೆಗೆ  ಸಮಾನವಾದ  ಉದಾತ್ತ  ಸೇವೆಯನ್ನು  ನಿರ್ವಹಿಸುತ್ತಿದ್ದಾರೆ.

ಸ್ನೇಹಿತರೇ,

ರಾಜಕೀಯ ಮತ್ತು ವೋಟ್‌ ಬ್ಯಾಂಕ್‌ ಗಳ ಕಣ್ಣಿನ ಮೂಲಕ ಎಲ್ಲವನ್ನೂ ನೋಡುವವರು ಇದ್ದಾರೆ, ಮತ್ತು ಅವರು ಈ ದಿನಗಳಲ್ಲಿ ಗೊಂದಲಕ್ಕೊಳಗಾಗಿದ್ದಾರೆ ಮತ್ತು ತೊಂದರೆಗೀಡಾಗಿದ್ದಾರೆ. ಪ್ರತಿ ಚುನಾವಣೆಯ ನಂತರವೂ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಶೀರ್ವಾದವು ಮೋದಿಯವರ ಪರವಾಗಿ ಏಕೆ ಹೆಚ್ಚುತ್ತಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಎಂದು ಪರಿಗಣಿಸಿದವರು ಮತ್ತು ಚುನಾವಣಾ ಋತುಗಳಲ್ಲಿ ಸಾಂಕೇತಿಕ ಘೋಷಣೆಗಳಲ್ಲಿ ತೊಡಗಿಸಿಕೊಂಡವರು ಈ ಆಳವಾದ ಮತ್ತು ನಿಜವಾದ ಬಂಧವನ್ನು ಗ್ರಹಿಸಲು ಸಾಧ್ಯವಿಲ್ಲ.

ತಾಯಂದಿರು ಮತ್ತು ಸಹೋದರಿಯರಿಂದ ನಾನು ಪಡೆಯುವ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ಅರ್ಥಮಾಡಿಕೊಳ್ಳಲು, ಕಳೆದ 10 ವರ್ಷಗಳನ್ನು ಹಿಂತಿರುಗಿ ನೋಡಬೇಕು. ಒಂದು ದಶಕದ ಹಿಂದೆ, ಕೋಟ್ಯಂತರ ಮಹಿಳೆಯರಿಗೆ ಮೂಲಭೂತ ನೈರ್ಮಲ್ಯದ ಸೌಲಭ್ಯವಿರಲಿಲ್ಲ. ಇಂದು ದೇಶಾದ್ಯಂತ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹತ್ತು ವರ್ಷಗಳ ಹಿಂದೆ, ಕೋಟ್ಯಂತರ ಮಹಿಳೆಯರಿಗೆ ಅನಿಲ ಸಂಪರ್ಕವಿರಲಿಲ್ಲ. ಉಜ್ವಲ ಯೋಜನೆಯ ಮೂಲಕ, ಉಚಿತ ಸಂಪರ್ಕಗಳನ್ನು ಒದಗಿಸಲಾಯಿತು ಮತ್ತು ಸಿಲಿಂಡರ್ ಬೆಲೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲಾಯಿತು. ಅನೇಕ ಮನೆಗಳಲ್ಲಿ ನೀರಿನ ಕೊಳಾಯಿಗಳಿಲ್ಲ; ನಾವು ಪ್ರತಿ ಮನೆಗೆ ಕೊಳಾಯಿ ನೀರನ್ನು ಒದಗಿಸಲು ಪ್ರಾರಂಭಿಸಿದ್ದೇವೆ. ಹಿಂದೆ, ಮಹಿಳೆಯರು ವಿರಳವಾಗಿ ಆಸ್ತಿಯನ್ನು ಹೊಂದಿದ್ದರು. ಈಗ, ಕೋಟ್ಯಂತರ ಮಹಿಳೆಯರು ಪಕ್ಕಾ ಮನೆಗಳ ಹೆಮ್ಮೆಯ ಮಾಲೀಕರಾಗಿದ್ದಾರೆ. ದಶಕಗಳಿಂದ, ಮಹಿಳೆಯರು ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮೀಸಲಾತಿಯನ್ನು ಕೋರಿದ್ದಾರೆ. ನಿಮ್ಮ ಆಶೀರ್ವಾದದಿಂದ, ಈ ದೀರ್ಘಕಾಲದ ಬೇಡಿಕೆಯನ್ನು ಪೂರೈಸುವ ಭಾಗ್ಯ ನಮಗೆ ಸಿಕ್ಕಿತು. ಶುದ್ಧ ಉದ್ದೇಶಗಳೊಂದಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದಾಗ, ಅವರು ತಾಯಂದಿರು ಮತ್ತು ಸಹೋದರಿಯರ ಹೃತ್ಪೂರ್ವಕ ಆಶೀರ್ವಾದವನ್ನು ಗಳಿಸುತ್ತಾರೆ.

ಸ್ನೇಹಿತರೇ,

ನಮ್ಮ ಡಬಲ್ ಎಂಜಿನ್ ಸರ್ಕಾರ ರೈತರ ಕಲ್ಯಾಣಕ್ಕಾಗಿ  ಸಂಪೂರ್ಣ  ಪ್ರಾಮಾಣಿಕತೆಯಿಂದ  ಕೆಲಸ  ಮಾಡುತ್ತಿದೆ.  ಮೊದಲ  ಎರಡು ಅವಧಿಗಳಲ್ಲಿ,  ಹರಿಯಾಣದ  ರೈತರು  ಕನಿಷ್ಠ  ಬೆಂಬಲ  ಬೆಲೆ  (MSP)  ಆಗಿ  1.25  ಲಕ್ಷ  ಕೋಟಿ  ರೂ.ಗಳಿಗಿಂತ  ಹೆಚ್ಚು  ಪಡೆದಿದ್ದಾರೆ. ಈ ಮೂರನೇ  ಅವಧಿಯಲ್ಲಿ,  ಭತ್ತ,  ರಾಗಿ  ಮತ್ತು  ಹೆಸರು  ಬೆಳೆಗಾರರಿಗೆ  MSP  ಆಗಿ  14,000  ಕೋಟಿ  ರೂ.ಗಳನ್ನು  ಈಗಾಗಲೇ ನೀಡಲಾಗಿದೆ. ಇದಲ್ಲದೆ,  ಬರಗಾಲದಿಂದ ಬಳಲುತ್ತಿರುವ ರೈತರಿಗೆ  ಸಹಾಯ  ಮಾಡಲು  800  ಕೋಟಿ  ರೂ.ಗಳಿಗಿಂತ  ಹೆಚ್ಚು  ಹಣವನ್ನು ನಿಗದಿಪಡಿಸಲಾಗಿದೆ.  ಹಸಿರು  ಕ್ರಾಂತಿಯ  ನಾಯಕರಾಗಿ  ಹರಿಯಾಣವನ್ನು  ಸ್ಥಾಪಿಸುವಲ್ಲಿ  ಚೌಧರಿ  ಚರಣ್  ಸಿಂಗ್  ವಿಶ್ವವಿದ್ಯಾಲಯ ವಹಿಸಿದ  ಪ್ರಮುಖ  ಪಾತ್ರವನ್ನು  ನಾವೆಲ್ಲರೂ  ಗುರುತಿಸುತ್ತೇವೆ.  ಈಗ,  21  ನೇ  ಶತಮಾನದಲ್ಲಿ,  ಮಹಾರಾಣಾ  ಪ್ರತಾಪ್  ತೋಟಗಾರಿಕೆ ವಿಶ್ವವಿದ್ಯಾಲಯ  ಹಣ್ಣು  ಮತ್ತು  ತರಕಾರಿ  ಉತ್ಪಾದನೆಯಲ್ಲಿ  ಹರಿಯಾಣವನ್ನು  ನಾಯಕರನ್ನಾಗಿ  ಮಾಡುವಲ್ಲಿ  ಪ್ರಮುಖ  ಪಾತ್ರ ವಹಿಸಲಿದೆ.  ಇಂದು,  ಮಹಾರಾಣಾ  ಪ್ರತಾಪ್  ತೋಟಗಾರಿಕೆ  ವಿಶ್ವವಿದ್ಯಾಲಯದ  ಹೊಸ  ಕ್ಯಾಂಪಸ್‌ಗೆ  ಶಂಕುಸ್ಥಾಪನೆ  ನೆರವೇರಿಸಲಾಗಿದೆ, ಇದು  ಈ  ಕ್ಷೇತ್ರದಲ್ಲಿ  ಅಧ್ಯಯನ  ಮಾಡುತ್ತಿರುವ  ಯುವಕರಿಗೆ  ಆಧುನಿಕ  ಸೌಲಭ್ಯಗಳನ್ನು  ಒದಗಿಸುತ್ತದೆ.

ಸ್ನೇಹಿತರೇ,

ಇಂದು, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ, ವಿಶೇಷವಾಗಿ ಹರಿಯಾಣದ ಸಹೋದರಿಯರಿಗೆ, ರಾಜ್ಯವು  ಶೀಘ್ರ  ಅಭಿವೃದ್ಧಿಯನ್ನು  ಕಾಣಲಿದೆ ಎಂದು  ಭರವಸೆ  ನೀಡುತ್ತೇನೆ.  ಡಬಲ್  ಎಂಜಿನ್  ಸರ್ಕಾರ,  ತನ್ನ  ಮೂರನೇ  ಅವಧಿಯಲ್ಲಿ,  ಮೂರು  ಪಟ್ಟು  ವೇಗದಲ್ಲಿ  ಕೆಲಸ ಮಾಡಲಿದೆ.  ಈ  ಪ್ರಗತಿಯಲ್ಲಿ  ಮಹಿಳಾ  ಸಬಲೀಕರಣದ  ಪಾತ್ರ  ವಿಸ್ತರಿಸುತ್ತಲೇ  ಮತ್ತು  ಬೆಳೆಯುತ್ತಲೇ  ಇರುತ್ತದೆ.  ನಿಮ್ಮ  ಪ್ರೀತಿ  ಮತ್ತು ಆಶೀರ್ವಾದ  ಯಾವಾಗಲೂ  ನಮ್ಮೊಂದಿಗೆ  ಇರಲಿ.  ಈ  ಭರವಸೆಯೊಂದಿಗೆ,  ನಾನು  ಮತ್ತೊಮ್ಮೆ  ಎಲ್ಲರಿಗೂ  ಹೃತ್ಪೂರ್ವಕ ಅಭಿನಂದನೆಗಳು  ಮತ್ತು  ಶುಭಾಶಯಗಳನ್ನು  ಕೋರುತ್ತೇನೆ.

ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಧನ್ಯವಾದಗಳು!

 

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****


(Release ID: 2082702) Visitor Counter : 44