ಪಂಚಾಯತ್ ರಾಜ್ ಸಚಿವಾಲಯ
ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 11 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ 2024 ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ
ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರು 'ಪ್ರಶಸ್ತಿ ಪುರಸ್ಕೃತ ಪಂಚಾಯಿತಿಗಳ ಕಾಮಗಾರಿಗಳ ಉತ್ತಮ ಅಭ್ಯಾಸಗಳು' ಕುರಿತ ಕಿರುಹೊತ್ತಿಗೆಯನ್ನು ಅನಾವರಣ ಮಾಡಲಿದ್ದಾರೆ'; ವಿಜೇತರಿಗೆ ಪ್ರಶಸ್ತಿ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾವಣೆ
45 ಅನುಕರಣೀಯ ಪಂಚಾಯಿತಿಗಳನ್ನು ಗೌರವಿಸುವುದು; ಇಂಗಾಲದ ತಟಸ್ಥತೆಯನ್ನು ಸಾಧಿಸಲು ವಿಶೇಷ ಪ್ರಶಸ್ತಿಗಳು
Posted On:
09 DEC 2024 5:34PM by PIB Bengaluru
ಪಂಚಾಯತ್ ರಾಜ್ ಸಚಿವಾಲಯವು ಆಯೋಜಿಸಿರುವ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಪ್ರದಾನ ಸಮಾರಂಭ 2024, ಹೊಸದಿಲ್ಲಿಯ ವಿಜ್ಞಾನ ಭವನದ ಪ್ಲೀನರಿ ಹಾಲ್‌ನಲ್ಲಿ 2024 ರ ಡಿಸೆಂಬರ್ 11 ರಂದು ನಡೆಯಲಿದೆ. ಈ ಪ್ರತಿಷ್ಠಿತ ಸಮಾರಂಭದಲ್ಲಿ, ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 45 ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ನೀಡಲಿದ್ದಾರೆ, ಸುಸ್ಥಿರ ಮತ್ತು ಎಲ್ಲರನ್ನು ಒಳಗೊಳ್ಳುವ ಅಂತರ್ಗತ ಅಭಿವೃದ್ಧಿಯ ಶೀರ್ಷಿಕೆಗಳಲ್ಲಿ ಆದರ್ಶಪ್ರಾಯ ಕೊಡುಗೆಗಳನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಮಾನ್ಯ ಕೇಂದ್ರ ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ, ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರ ಸಮ್ಮುಖದಲ್ಲಿ , ಮೀನುಗಾರಿಕೆ, ಪಶುಸಂಗೋಪನೆ, ಮತ್ತು ಹೈನುಗಾರಿಕೆ ಖಾತೆ ಸಹಾಯಕ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಾಘೇಲ್, ಮತ್ತು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣವು ಸಮಾರಂಭದ ಪ್ರಮುಖ ಘಟನೆಯಾಗಿರುತ್ತದೆ. ಇದು ಪ್ರಶಸ್ತಿ ಪುರಸ್ಕೃತರು ಮತ್ತು ಭಾಗವಹಿಸುವವರು ವಿಕೇಂದ್ರೀಕೃತ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ಈ ಸಂದರ್ಭದಲ್ಲಿ ಇತರ ಪ್ರತಿಷ್ಠಿತ ಗಣ್ಯರು, ಭಾರತ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಹಾಗು ದೇಶದಾದ್ಯಂತದ ಪಂಚಾಯತ್ ಪ್ರತಿನಿಧಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಗೌರವಾನ್ವಿತ ಕೇಂದ್ರ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು ಪ್ರಶಸ್ತಿ ವಿಜೇತ ಪಂಚಾಯತ್‌ಗಳ ನವೀನ ಮತ್ತು ಪರಿಣಾಮಕಾರಿ ಅಭ್ಯಾಸಗಳನ್ನು ದಾಖಲಿಸುವ ‘ಪ್ರಶಸ್ತಿ ಪಡೆದ ಪಂಚಾಯತ್‌ಗಳ ಕಾರ್ಯಗಳ ಕುರಿತು ಅತ್ಯುತ್ತಮ ಪದ್ಧತಿಗಳು’ ಎಂಬ ಕಿರುಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ. ಪುಸ್ತಕದ ಮೊದಲ ಪ್ರತಿಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ನೀಡಲಾಗುವುದು. ಗೌರವಾನ್ವಿತ ಕೇಂದ್ರ ಪಂಚಾಯತ್ ರಾಜ್ ಸಚಿವರು ವಿಜೇತ ಪಂಚಾಯತ್‌ಗಳಿಗೆ ಪ್ರಶಸ್ತಿ ಹಣದ ಡಿಜಿಟಲ್ ವರ್ಗಾವಣೆಯನ್ನು ಕಾರ್ಯಗತಗೊಳಿಸುತ್ತಾರೆ. ಪ್ರಶಸ್ತಿ ಪುರಸ್ಕೃತ ಕೆಲವು ಪಂಚಾಯತ್‌ಗಳ ಅತ್ಯುತ್ತಮ ಪ್ರಯತ್ನಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ತರಬೇತಿ ಸಂಸ್ಥೆಗಳ ಪಾತ್ರವನ್ನು ಪ್ರದರ್ಶಿಸುವ ಕಿರುಚಿತ್ರವನ್ನು ಸಹ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ.
ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು 2024, ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ್ ಪುರಸ್ಕಾರ, ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ್ ಪುರಸ್ಕಾರ, ಗ್ರಾಮ ಊರ್ಜಾ ಸ್ವರಾಜ್ ವಿಶೇಷ ಪಂಚಾಯತ್ ಪುರಸ್ಕಾರ, ಕಾರ್ಬನ್ ನ್ಯೂಟ್ರಲ್ ವಿಶೇಷ ಪಂಚಾಯತ್ ಪುರಸ್ಕಾರ, ಮತ್ತು ಪಂಚಾಯತ್ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ್ ಪುರಸ್ಕಾರಗಳಂತಹ ವಿಭಾಗಗಳನ್ನು ಒಳಗೊಂಡಿವೆ. ಬಡತನ ನಿರ್ಮೂಲನೆ, ಆರೋಗ್ಯ, ಮಕ್ಕಳ ಕಲ್ಯಾಣ, ನೀರಿನ ಸಂರಕ್ಷಣೆ, ನೈರ್ಮಲ್ಯ, ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಆಡಳಿತ ಮತ್ತು ಮಹಿಳಾ ಸಬಲೀಕರಣದಲ್ಲಿ ಪಂಚಾಯತ್‌ಗಳನ್ನು ಗುರುತಿಸುವಲ್ಲಿ ಮತ್ತು ಪ್ರೋತ್ಸಾಹಿಸುವಲ್ಲಿ ಈ ಪ್ರಶಸ್ತಿಗಳು ಪ್ರಮುಖವಾಗಿವೆ. ಈ ಪ್ರಶಸ್ತಿಗಳ ಮೂಲಕ ಒದಗಿಸಲಾಗುವ ಮನ್ನಣೆಯು ಇತರ ಪಂಚಾಯತ್‌ಗಳಿಗೆ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಮತ್ತು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ವಿವಿಧ ವಿಷಯಾಧಾರಿತ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿಗಳನ್ನು ಆಯ್ಕೆ ಮಾಡಲು ಸಚಿವಾಲಯವು ವಿವರವಾದ ಪ್ರಕ್ರಿಯೆಗಳನ್ನು ಕೈಗೊಂಡಿತು. ಈ ಪಂಚಾಯತಿಗಳನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಪ್ರೋತ್ಸಾಹಿಸುವುದು ಮತ್ತು ಇತರ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಅತ್ಯುತ್ತಮವಾದುದನ್ನು ಸಾಧಿಸಲು ಪ್ರೇರೇಪಿಸುವುದು, ಅಂತಿಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಗಮ ಜೀವನ ಮತ್ತು ಸುಸ್ಥಿರ, ಅಂತರ್ಗತ ಅಭಿವೃದ್ಧಿಯನ್ನು ಖಾತ್ರಿಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಉಪಕ್ರಮವು ಗ್ರಾಮೀಣ ಭಾರತದಲ್ಲಿ ಸಂಪೂರ್ಣ ಸರ್ಕಾರ ಮತ್ತು ಸಂಪೂರ್ಣ ಸಮಾಜದ ವಿಧಾನವನ್ನು ಅಳವಡಿಸಿಕೊಳ್ಳುವ ರಾಷ್ಟ್ರೀಯ ಉದ್ದೇಶಗಳು ಮತ್ತು ಸಹಯೋಗದ ಪ್ರಯತ್ನಗಳೊಂದಿಗೆ ಆಳವಾಗಿ ಹೊಂದಿಕೆಯಾಗಿದೆ. ವಿಕೇಂದ್ರೀಕೃತ ಅಭಿವೃದ್ಧಿಯ ಸಂದೇಶವನ್ನು ಹರಡಲು ಮತ್ತು ದೇಶಾದ್ಯಂತ ಈ ಅನುಕರಣೀಯ ಪಂಚಾಯಿತಿಗಳ ಸಾಧನೆಗಳನ್ನು ಆಚರಿಸಲು ಪಂಚಾಯತ್ ರಾಜ್ ಸಚಿವಾಲಯವು ಮಾಧ್ಯಮಗಳು ಮತ್ತು ಇತರ ಮಧ್ಯಸ್ಥಗಾರರ ಸಕ್ರಿಯ ಸಹಕಾರವನ್ನು ಹಾರ್ದಿಕವಾಗಿ ಆಹ್ವಾನಿಸುತ್ತದೆ.
ಪ್ರಶಸ್ತಿ ಪಡೆದ ಗ್ರಾಮ ಪಂಚಾಯಿತಿಗಳ ವಿವರಗಳಿಗಾಗಿ: ಇಲ್ಲಿ ಕ್ಲಿಕ್ ಮಾಡಿ
ಪ್ರಶಸ್ತಿಗಳ ವಿಭಾಗದ ವಿವರಗಳಿಗಾಗಿ: ಇಲ್ಲಿ ಕ್ಲಿಕ್ ಮಾಡಿ
*****
(Release ID: 2082412)
Visitor Counter : 24