ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಕಲೆಗೆ ಯಾವುದೇ ಮಿತಿಗಳಿಲ್ಲ, ಗಡಿಗಳಿಲ್ಲ; ನೀವು ಸಂಪರ್ಕ ಹೊಂದಿದ್ದರೆ ಸಾಕು - ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್
ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ 2024ರ ತೀರ್ಪುಗಾರರ ಮಂಡಳಿಯ ಸದಸ್ಯರೊಂದಿಗೆ ಮಾಧ್ಯಮ ಸಂವಾದ
55ನೇ ಐಎಫ್ಎಫ್ಐನಲ್ಲಿ ಅತ್ಯುತ್ತಮ ವೆಬ್ ಸರಣಿ ಒಟಿಟಿ ಪ್ರಶಸ್ತಿ ಸ್ಪರ್ಧಾ ಕಣದಲ್ಲಿ ಹತ್ತು ವೆಬ್ ಸರಣಿಗಳು

ಫೋಟೋ: ಅತ್ಯುತ್ತಮ ವೆಬ್ ಸರಣಿ ಒಟಿಟಿ ಪ್ರಶಸ್ತಿ 2024ರ ತೀರ್ಪುಗಾರರ ಮಂಡಳಿಯ ಸದಸ್ಯರು (ಎಡದಿಂದ ಬಲಕ್ಕೆ) ಶ್ರೀ. ಕೃಷ್ಣ ಹೆಬ್ಬಾಲೆ, ಶ್ರೀ. ಮಧುರ್ ಭಂಡಾರ್ಕರ್ , ಶ್ರೀ. ಹರೀಶ್ ಶಂಕರ್ ಅವರು ಮಾಧ್ಯಮ ಸಂವಾದ ನಡೆಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀಮತಿ ರಿನಿ ಚೌಧರಿ ಅವರು ಚಿತ್ರದಲ್ಲಿದ್ದಾರೆ.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 55ನೇ ಆವೃತ್ತಿಯ ಕೊನೆಯ ಪತ್ರಿಕಾಗೋಷ್ಠಿಯಲ್ಲಿ, ಅತ್ಯುತ್ತಮ ವೆಬ್ ಸರಣಿ ಒಟಿಟಿ ಪ್ರಶಸ್ತಿ 2024ರ ತೀರ್ಪುಗಾರರ ಮಂಡಳಿಯ ಸದಸ್ಯರು ಪಿಐಬಿ ಮೀಡಿಯಾ ಸೆಂಟರಿನ ಪತ್ರಿಕಾಗೋಷ್ಠಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.
ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಶ್ರೀ ಮಧುರ್ ಭಂಡಾರ್ಕರ್ ಅವರು ತಮ್ಮ ಆರಂಭಿಕ ಮಾತುಗಳಲ್ಲಿ, "ಕಲೆಗೆ ಯಾವುದೇ ಮಿತಿಗಳಿಲ್ಲ. ಅದಕ್ಕೆ ಯಾವುದೇ ಗಡಿಗಳಿಲ್ಲ. ಮತ್ತು ನೀವು ಕೇವಲ ಸಂಪರ್ಕ ಹೊಂದಿದ್ದರೆ ಸಾಕು. ಅದು ಯಾವುದೇ ಭಾಷೆಯಲ್ಲಿಯೂ ಇರಬಹುದು ಎಂದರು. ಇಂದು ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಅತ್ಯುತ್ತಮ ಸಂಗತಿ ಇದು ಎಂದು ನಾನು ಭಾವಿಸುತ್ತೇನೆ. ಭಾವನೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ನಿರ್ದಿಷ್ಟ ಭಾಷೆಯ ಜ್ಞಾನದ ಅಗತ್ಯವಿಲ್ಲ ಏಕೆಂದರೆ ಉಪಶೀರ್ಷಿಕೆಗಳೂ ಅಲ್ಲಿರುತ್ತವೆ. ಹೀಗಾಗಿ ಭಾವನೆಗಳು ಚೆನ್ನಾಗಿ ಜೋಡಿಸಲ್ಪಡುತ್ತವೆ." ಎಂದೂ ಅವರು ಹೇಳಿದರು.
ಅಗ್ರ ಹತ್ತು ನಾಮನಿರ್ದೇಶನಗಳ ಪಟ್ಟಿಯಿಂದ ಒಬ್ಬ ವಿಜೇತರನ್ನು ಆಯ್ಕೆ ಮಾಡುವಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಿದ ತೀರ್ಪುಗಾರರ ಮಂಡಳಿ ಸದಸ್ಯ ಶ್ರೀ ಕೃಷ್ಣ ಹೆಬ್ಬಾಲೆ ಅವರು ಅಲ್ಲಿ ಯಾವುದೇ ದೈಹಿಕ ಗಾಯಗಳಿರಲಿಲ್ಲ, ಆದರೆ ಅವರೆಲ್ಲರೂ ತಮ್ಮ ಆಯ್ಕೆಗಾಗಿ ಬಲವಾದ ಹೋರಾಟವನ್ನು ನಡೆಸಿದ್ದಾರೆ ಎಂದು ತಮಾಷೆ ಮಾಡಿದರು. ಪ್ರತಿಯೊಬ್ಬ ತೀರ್ಪುಗಾರರು ತಮ್ಮ ಟಿಪ್ಪಣಿಗಳೊಂದಿಗೆ ಚರ್ಚೆಗಳಿಗೆ ಹೋದರು ಮತ್ತು ಅದಕ್ಕಾಗಿ ಬಹಳ ಶಕ್ತಿ ಮತ್ತು ದೃಢನಿಶ್ಚಯದಿಂದ ವಾದಿಸಿದರು ಎಂದವರು ನುಡಿದರು.
ತೀರ್ಪುಗಾರರಲ್ಲಿ ಕಿರಿಯರಾದ ಶ್ರೀ ಹರೀಶ್ ಶಂಕರ್ ಅವರು "ನಾನು ಕಾಲೇಜಿನಲ್ಲಿದ್ದಾಗ ಮಧುರ್ ಭಂಡಾರ್ಕರ್ ಅವರ ಚಲನಚಿತ್ರಗಳಿಗೆ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದವರಲ್ಲಿ ಒಬ್ಬ. ಈಗ ತೀರ್ಪುಗಾರರಲ್ಲಿ ಒಬ್ಬನಾಗಿ ಅವರೊಂದಿಗೆ ಸ್ಥಾನವನ್ನು ಹಂಚಿಕೊಳ್ಳಲು ನನಗೆ ಗೌರವವಿದೆ ಮತ್ತು ವಿನಮ್ರತೆಯೂ ಇದೆ ಎಂದರು. ಕೇವಲ ಒಬ್ಬ ವಿಜೇತರನ್ನು ಆಯ್ಕೆ ಮಾಡುವಲ್ಲಿ ತಾವು ಎದುರಿಸಿದ ಕಠಿಣ ಸವಾಲುಗಳ ಬಗ್ಗೆ ವಿವರಿಸಿದ ಅವರು, ಇದು ವಾಸ್ತವವಾಗಿ ವಾದಗಳಲ್ಲ, ಆದರೆ ಚರ್ಚೆಗಳ ಮೂಲಕ ಒಮ್ಮತವನ್ನು ತಲುಪುವ ಪ್ರಯತ್ನವಾಗಿದೆ ಎಂದು ಹೇಳಿದರು.
ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ 2024ರ ತೀರ್ಪುಗಾರರ ಮಂಡಳಿಯು ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ:
1. ಶ್ರೀ. ಮಧುರ್ ಭಂಡಾರ್ಕರ್ (ಅಧ್ಯಕ್ಷರು), ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರು
2. ಶ್ರೀ. ಕೃಷ್ಣ ಹೆಬ್ಬಾಲೆ, ನಟ
3. ಶ್ರೀಮತಿ ರೂಪಾಲಿ ಗಂಗೂಲಿ, ನಟಿ
4. ಶ್ರೀ. ಹರೀಶ್ ಶಂಕರ್, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರು
ಮನರಂಜನಾ ಉದ್ಯಮದಲ್ಲಿನ ಗಮನಾರ್ಹ ಬದಲಾವಣೆಗಳನ್ನು ಗುರುತಿಸಿ, ವಿಶೇಷವಾಗಿ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ಗಳ ಹೆಚ್ಚಳದಿಂದಾಗಿ, ಐಎಫ್ಎಫ್ಐ (2023 ರ) 54 ನೇ ಆವೃತ್ತಿಯಲ್ಲಿ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಯನ್ನು ಪರಿಚಯಿಸಲಾಯಿತು. ಈ ಪ್ರಶಸ್ತಿಯು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬೆಳೆಯುತ್ತಿರುವ ವಿಷಯ ಸಾಮಗ್ರಿ (ಕಂಟೆಂಟ್) ಮತ್ತು ಅದರ ಸೃಷ್ಟಿಕರ್ತರನ್ನು ಗುರುತಿಸುವ, ಪ್ರೋತ್ಸಾಹಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ. ಈ ವರ್ಷ ಹತ್ತು ನಮೂದುಗಳು ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ. ಇಂದು ಸಂಜೆ ಐಎಫ್ಎಫ್ಐನ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಘೋಷಿಸುವ ನಿರೀಕ್ಷೆಯಿದೆ.
ಸಂವಾದವನ್ನು ಇಲ್ಲಿ ವೀಕ್ಷಿಸಿ:
ಅಧಿಕೃತ ಆಯ್ಕೆ ಬಗ್ಗೆ ತಿಳಿಯಲು- ಅತ್ಯುತ್ತಮ ವೆಬ್ ಸರಣಿ - 2024: https://iffigoa.org/best-web-series/2024/best-web-series
ತೀರ್ಪುಗಾರರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು: https://iffigoa.org/web-series-jury
ವೆಬ್ ಸರಣಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು: https://iffigoa.org/web-series/about-web-series
ಅತ್ಯುತ್ತಮ ವೆಬ್ ಸರಣಿ ಪೂರ್ವ ವೀಕ್ಷಣಾ (ಪ್ರಿವ್ಯು) ಸಮಿತಿ 2024 ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು: https://iffigoa.org/Best-web-series-previw-committee-2024
*****
(Release ID: 2078838)
Visitor Counter : 55