ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 9

ಮನಿಶಾ ಕೊಯಿರಾಲಾ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರು 55ನೇ ಐ ಎಫ್ ಎಫ್ ಐ ನಲ್ಲಿ 'ಬಿಗ್ ಸ್ಕ್ರೀನ್ ನಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳವರೆಗೆ' ವಿಷಯದ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದರು


ನಟರು ಸಾಂಪ್ರದಾಯಿಕ ಮಾದರಿಯನ್ನು ಮುರಿದು ಹೊಸ ಮಾಧ್ಯಮಗಳಲ್ಲಿ ಪ್ರಯೋಗ ಮಾಡಬೇಕು": ಮನೀಷಾ ಕೊಯಿರಾಲಾ

ಉತ್ತಮ ಸರಣಿಗಳಲ್ಲಿ ಪ್ರತ್ಯೇಕ ರೀತಿಯ ಮ್ಯಾಜಿಕ್ ಇದೆ, ಅವುಗಳ ಸ್ವರೂಪದ ಸ್ವಾತಂತ್ರ್ಯ ಅದ್ಭುತ ಫಲಿತಾಂಶ ನೀಡಬಲ್ಲದು: ವಿಕ್ರಮಾದಿತ್ಯ ಮೋಟ್ವಾನೆ

ಕಲಾ ಅಕಾಡೆಮಿಯ ಖಚಾಖಚಿ ತುಂಬಿದ ಸಭಾಂಗಣದಲ್ಲಿ ಸುಪ್ರಸಿದ್ಧ ನಟಿ ಮನೀಷಾ ಕೊಯಿರಾಲಾ ಹಾಗೂ ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಅವರಿಗೆ ಭರ್ಜರಿ ಚಪ್ಪಾಳೆಗಳ ಮೂಲಕ ಅದ್ದೂರಿ ಸ್ವಾಗತ ದೊರೆಯಿತು. 'ಹೀರಾಮಂಡಿ' ಸೀರಿಸ್‌ನಲ್ಲಿ ಜನಪ್ರಿಯ ಪಾತ್ರ ಮಲ್ಲಿಕಾಜಾನ್ ಆಗಿ ಕಾಣಿಸಿಕೊಂಡಿದ್ದ ಮನೀಷಾ ಕೊಯ್ರಾಲಾ ಹಾಗೂ 'ಉಡಾನ್', 'ಲೂಟೇರಾ' ಮತ್ತು 'ಸೇಕ್ರೆಡ್ ಗೇಮ್ಸ್' ಸೇರಿದಂತೆ ಹಲವು ಮನ್ನಣೆ ಪಡೆದ ಕೃತಿಗಳ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಅವರ ಬಹು ನಿರೀಕ್ಷಿತ ಭೇಟಿ ಇಂದು 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಭಾರತದಲ್ಲಿ (IFFI) ನಡೆಯಿತು. ಗೋವಾದಲ್ಲಿ ನಡೆದ ಈ ವಿಶೇಷ ಸಮಾರಂಭದಲ್ಲಿ ಚಲನಚಿತ್ರ ಪ್ರಿಯರು, ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ದೇಶದ ನಾನಾ ಕಡೆಗಳಿಂದ ಆಗಮಿಸಿದ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಇಬ್ಬರು ಸಿನಿಮಾ ರಂಗದ ದಿಗ್ಗಜರು 'ದೊಡ್ಡ ಪರದೆಯಿಂದ ಸ್ಟ್ರೀಮಿಂಗ್ವರೆಗೆ'  (From Big Screen to Streaming) ಎಂಬ ವಿಷಯದ ಕುರಿತು ಆಳವಾದ 'ಸಂವಾದ' ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮುಕ್ತ ಸಂವಾದದಲ್ಲಿ, ಥಿಯೇಟರ್ಗಳಲ್ಲಿ ಬಿಡುಗಡೆಯಾಗುವ ಚಿತ್ರಗಳು ಮತ್ತು ಒಟಿಟಿ ವೇದಿಕೆಗಳ ಸರಣಿ ಅಥವಾ ಚಿತ್ರಗಳು ಎರಡಕ್ಕೂ ನಟರಿಂದ ಒಂದೇ ಮಟ್ಟದ ಶ್ರಮ, ಸಿದ್ಧತೆ, ನಿಷ್ಠೆ ಮತ್ತು ಮನೋಭಾವ ಅಗತ್ಯವಿದೆ ಎಂದು ಮನೀಷಾ ಕೊಯಿರಾಲಾ ಹೇಳಿದರು."ನನ್ನ ಮೂವತ್ತು ವರ್ಷಗಳ ವೃತ್ತಿಜೀವನದಲ್ಲಿ, 'ಹೀರಾಮಂಡಿ' ನಾನು ಕೆಲಸ ಮಾಡಿದ ಅತಿ ದೊಡ್ಡ ಸೆಟ್" ಎಂದು ಅವರು ಬಹಿರಂಗಪಡಿಸಿದರು. ಎರಡೂ ಅನುಭವಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ಅವರು, "ನಾನು ಥಿಯೇಟರ್ಗಳಿಗೆ ಹೋಗುವುದನ್ನು ಇಷ್ಟಪಡುತ್ತೇನೆ, ಆದರೆ ಮನೆಯಲ್ಲಿ ಕುಳಿತು ಒಳ್ಳೆಯ ವಿಷಯವನ್ನು ವೀಕ್ಷಿಸುವುದನ್ನೂ ಆನಂದಿಸುತ್ತೇನೆ" ಎಂದರು.ಅವರ ಪ್ರಕಾರ, ಎರಡಕ್ಕೂ ಅವರದ್ದೇ ಆದ ಮಹತ್ವವಿದೆ, ಮತ್ತು ಒಟಿಟಿಯಲ್ಲಿ ಅತ್ಯುತ್ತಮ ವಿಷಯಗಳ ಭಂಡಾರವೇ ಲಭ್ಯವಿದೆ. "ನಾನು ಒಟಿಟಿ ವಿಷಯಗಳನ್ನು ಸತತವಾಗಿ ವೀಕ್ಷಿಸುತ್ತೇನೆ" ಎಂದು ಅವರು ಈ ವೇದಿಕೆಯ ಆಕರ್ಷಣೆಯನ್ನು ಒಪ್ಪಿಕೊಂಡರು.

ನಟರು ಇನ್ನೂ ಒಟಿಟಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆಯೇ ಎಂದು ಕೇಳಿದಾಗ, ಈ ಬಗ್ಗೆ ಉದ್ಯಮದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಮನೀಷಾ ಪ್ರಾಮಾಣಿಕವಾಗಿ ಉತ್ತರಿಸಿದರು."ಯಾವುದೇ ಹೊಸ ಮತ್ತು ಅಪರಿಚಿತ ವಿಷಯವನ್ನು ಮೊದಲಿಗೆ ಸಂಶಯದಿಂದಲೇ ನೋಡಲಾಗುತ್ತದೆ," ಎಂದು ಅವರು ವಿವರಿಸಿದರು. "ಆದರೆ ಒಳ್ಳೆಯ ಫಲಿತಾಂಶಗಳು ಜನರನ್ನು ಅದನ್ನು ಸ್ವೀಕರಿಸಲು ಪ್ರೋತ್ಸಾಹಿಸುತ್ತವೆ."ಸ್ಟ್ರೀಮಿಂಗ್ ವೇದಿಕೆಗಳ ಯೋಜನೆಗಳ ಬಗ್ಗೆ ಚಲನಚಿತ್ರ ಕ್ಷೇತ್ರದಲ್ಲಿ ಇನ್ನೂ ಕೆಲವು ಆತಂಕಗಳಿವೆ ಎಂದು ಅವರು ಒಪ್ಪಿಕೊಂಡರು ಆದಾಗ್ಯೂ, "ಇದು ಕೆಲವು ತಲೆಮಾರುಗಳಲ್ಲಿ ಮಾಯವಾಗುತ್ತದೆ" ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಶಾಹಿದ್ ಕಪೂರ್, ಆಲಿಯಾ ಭಟ್ ಮತ್ತು ವರುಣ್ ಧವನ್ ಸೇರಿದಂತೆ ಅನೇಕ ನಟರು ಈಗಾಗಲೇ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಮನೀಷಾ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಇಬ್ಬರೂ ಹೇಳಿದರು.  ಇದು ಈ ಮಾಧ್ಯಮದ ಬೆಳೆಯುತ್ತಿರುವ ಸ್ವೀಕಾರವನ್ನು ಸೂಚಿಸುತ್ತದೆ.

ಒಟಿಟಿ ವೇದಿಕೆಗಳಲ್ಲಿ ಕೆಲಸ ಮಾಡುವುದು ದೊಡ್ಡ ಪರದೆಯಿಂದ 'ಕೆಳಮಟ್ಟಕ್ಕೆ ಇಳಿದಂತೆ' ಅನಿಸುತ್ತದೆಯೇ ಎಂದು ವಿಕ್ರಮಾದಿತ್ಯ ಮೊತ್ವಾನೆ ಕೇಳಿದಾಗ, ಮನೀಷಾ ಹೀಗೆ ಉತ್ತರಿಸಿದರು, "ನಟರು ಸಾಂಪ್ರದಾಯಿಕ ಚೌಕಟ್ಟನ್ನು ಮುರಿಯಬೇಕು. ನಾನು ಒಂದೇ ಪ್ರಕಾರದ ಪಾತ್ರಗಳಿಗೆ ಸೀಮಿತವಾಗಲು ಇಷ್ಟಪಡಲಿಲ್ಲ. ಒಬ್ಬ ನಟಿಯಾಗಿ, ನೀವು ವಿಭಿನ್ನ ಮುಖಗಳನ್ನು ಅನ್ವೇಷಿಸಬೇಕು" ಎಂದು ಹೇಳಿದರು. ಅವರು ಮುಂದುವರೆದು, "ಸ್ಟ್ರೀಮಿಂಗ್ ಒಂದು ಗೇಮ್ ಚೇಂಜರ್ ಆಗಲಿದೆ. ಇದು ಹೊಸ ಅವಕಾಶಗಳನ್ನು ತೆರೆಯುತ್ತಿದೆ ಮತ್ತು ಹೊಸ ಚಲನಚಿತ್ರ ನಿರ್ದೇಶಕರು, ಬರಹಗಾರರು ಮತ್ತು ನಟರು ಮುನ್ನೆಲೆಗೆ ಬರಲು ಪ್ರೋತ್ಸಾಹಿಸುತ್ತಿದೆ" ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಹಿರಿಯ ನಟಿಯರಿಗೆ ಸಿಗುತ್ತಿದ್ದ ಪಾತ್ರಗಳಿಗೆ ಹೋಲಿಸಿದರೆ ಈಗ ವಯಸ್ಸಾದ ಮಹಿಳೆಯರ ಪಾತ್ರಗಳು ವಿಕಸನಗೊಳ್ಳುತ್ತಿವೆ ಎಂದು ಮನೀಷಾ ಗಮನಿಸಿದರು. "ಪ್ರೇಕ್ಷಕರ ಕೊಡುಗೆಯಿಂದಾಗಿ, ಒಟಿಟಿ ನಿಧಾನವಾಗಿ ಸಾಂಪ್ರದಾಯಿಕ ಚೌಕಟ್ಟನ್ನು ಮುರಿಯುತ್ತಿದೆ," ಎಂದು ಅವರು ಹೇಳಿದರು. "ಸಿನಿಮಾದಲ್ಲೂ ಸಹ, ಹಿರಿಯ ನಟರಿಗೆ ಈಗ ಹೆಚ್ಚು ವೈವಿಧ್ಯಮಯವಾದ ಪಾತ್ರಗಳು ಸಿಗುತ್ತಿವೆ. 90ರ ದಶಕ ಮತ್ತು 2000ರ ದಶಕದಿಂದ ಬಹಳಷ್ಟು ಬದಲಾವಣೆಯಾಗಿದೆ. ಕಲಿಯಲು ಇನ್ನೂ ಎಷ್ಷೋ ಇದೆ," ಎಂದು ಹಿರಿಯ ನಟಿ ಹೇಳಿದರು.

ಸಂವಾದಕ್ಕೆ ನಿರ್ದೇಶಕರ ದೃಷ್ಟಿಕೋನವನ್ನು ತರುತ್ತಾ, ಎರಡೂ ಮಾಧ್ಯಮಗಳಲ್ಲಿ ಯಶಸ್ವಿ ಯೋಜನೆಗಳನ್ನು ಮಾಡಿರುವ ವಿಕ್ರಮಾದಿತ್ಯ ಮೋಟ್ವಾನೆ, "ಒಳ್ಳೆಯ ಸರಣಿಗಳಲ್ಲಿ ಪ್ರತ್ಯೇಕವಾದ ಮಾಂತ್ರಿಕತೆ ಇದೆ. ಸೃಜನಾತ್ಮಕ ದೃಷ್ಟಿಕೋನದಿಂದ ಅನೇಕ ಸೀಸನ್ಗಳನ್ನು ನಿರ್ವಹಿಸುವುದು ಕಷ್ಟಕರ. ಹರಿವನ್ನು ಕಾಪಾಡಿಕೊಳ್ಳುವುದು ಕಠಿಣ. ಮತ್ತು ನಟ-ತಂಡದ ಚೈತನ್ಯ ಆ ಅವಧಿಯುದ್ದಕ್ಕೂ ಉಳಿಯುವುದು ಮುಖ್ಯ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡೂ ಮಾಧ್ಯಮಗಳಲ್ಲಿನ ತಮ್ಮ ಅನುಭವದ ಬಗ್ಗೆ ಮಾತನಾಡಿದ ನಿರ್ದೇಶಕರು, "ನಾನು ಪ್ರಕಾರಗಳ ಚೌಕಟ್ಟನ್ನು ಮುರಿಯುವುದನ್ನು ಇಷ್ಟಪಡುತ್ತೇನೆ ನನ್ನ ಮೊದಲ ನಾಲ್ಕು ಚಿತ್ರಗಳು ಸಿನಿಮಾಕ್ಕಾಗಿಯೇ ಇದ್ದವು. ಸ್ಟ್ರೀಮಿಂಗ್ ವೇದಿಕೆಗಳು ಭಾಷೆಯ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತವೆ. ಒಟಿಟಿ ವೇದಿಕೆಗಳು ಹೆಚ್ಚಿನ ಸ್ವೇಚ್ಛೆ ನೀಡುತ್ತವೆ. ಥಿಯೇಟರ್ ಬಿಡುಗಡೆಗಳಲ್ಲಿ, ಬಜೆಟ್ ಮತ್ತು ಅವಧಿ ಸೀಮಿತವಾಗಿರುತ್ತದೆ, ಕಥೆಗಳು ಹೆಚ್ಚು ಜನಪ್ರಿಯವಾಗಿರಬೇಕು" ಎಂದರು. ಆದರೆ, ನಿರ್ಮಾಣ ಮತ್ತು ನಿರ್ಮಾಣೋತ್ತರ ಹಂತಗಳು ಬಹುತೇಕ ಒಂದೇ ರೀತಿ ಇರುತ್ತವೆ ಎಂದು ಅವರು ತಿಳಿಸಿದರು. "ಚಿತ್ರೀಕರಣದ ಪ್ರಕ್ರಿಯೆ ವೇಗವಾಗುತ್ತಿದೆ. 'ಜ್ಯುಬಿಲಿ'ಯ 10 ಎಪಿಸೋಡ್ಗಳನ್ನು 90 ದಿನಗಳಲ್ಲಿ ಚಿತ್ರೀಕರಿಸಲಾಯಿತು, 'ಸೇಕ್ರೆಡ್ ಗೇಮ್ಸ್' ಅನ್ನು 80 ದಿನಗಳಲ್ಲಿ ಚಿತ್ರೀಕರಿಸಲಾಯಿತು" ಎಂದು ಅವರು ಸೇರಿಸಿದರು.ಚಿತ್ರೀಕರಣದ ಸಮಯದಲ್ಲಿ ಹೆಚ್ಚು ಸಹಜ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನಿರ್ದೇಶಕರು ಹೇಳಿದರು.

ಒಟಿಟಿ ವೇದಿಕೆಗಾಗಿ ಬರೆಯುವುದರ ಬಗ್ಗೆ ಮಾತನಾಡುತ್ತಾ, ಇದು ಸಂಪೂರ್ಣ ಭಿನ್ನವಾದ ಪ್ರಕ್ರಿಯೆ ಎಂದು ವಿಕ್ರಮಾದಿತ್ಯ ತಿಳಿಸಿದರು. ಬರೆಯುವಾಗ ಎಪಿಸೋಡ್ ಗಳು ಮತ್ತು ಸಮಯದ ಬಗ್ಗೆ ಗಮನವಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ಬಿಗ್‌ ಸ್ಕ್ರೀನ್ ಮತ್ತು ಒಟಿಟಿ ಬಿಡುಗಡೆಗಳ ನಡುವೆ ಸಮತೋಲನ ಇರಬೇಕು ಎಂಬುದಕ್ಕೆ ಮನೀಷಾ ಮತ್ತು ವಿಕ್ರಮ್ ಇಬ್ಬರೂ ಒಪ್ಪಿದರು.

ಒಂದು ಸರಣಿಗೆ ನಿರ್ದೇಶನ ಮಾಡುವುದು ಸ್ವಲ್ಪ ಕಷ್ಟಕರ ಎಂಬ ಅಂಶವನ್ನು ವಿಕ್ರಮ್ ಮುಕ್ತವಾಗಿ ಒಪ್ಪಿಕೊಂಡರು. "ಶೋ ರನ್ನರ್ ಗಳಿಗೆ ಇದು ಕಷ್ಟಕರ. ಅನೇಕ ಅಂತಾರಾಷ್ಟ್ರೀಯ ಸರಣಿಗಳು ವಿಭಿನ್ನ ಸೀಸನ್ ಗಳಿಗೆ ಬೇರೆ ಬೇರೆ ಶೋ ರನ್ನರ್ಗಳನ್ನು ಹೊಂದಿವೆ. ಭಾರತದಲ್ಲಿ ಒಟಿಟಿ ತುಂಬಾ ಹೊಸದು. ನಾವು ಇದನ್ನು ಬೆಳೆಸಬೇಕು. ಹಂತ ಹಂತವಾಗಿ ಇದು ಆಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

ವಿಕ್ರಮಾದಿತ್ಯ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಸುಧಾರಿಸಬೇಕಾಗಿದೆ ಅಭಿಪ್ರಾಯ ವ್ಯಕ್ತಪಡಿಸಿದರು. ಅನಗತ್ಯ ಮಧ್ಯಂತರಗಳು ಮತ್ತು ದೀರ್ಘ ಜಾಹೀರಾತುಗಳು ಪ್ರೇಕ್ಷಕರಿಗೆ ಹೆಚ್ಚಾಗಿ ಇಷ್ಟವಾಗುವುದಿಲ್ಲ ಎಂದು ಅವರು ಹೇಳಿದರು. "ಆದರೆ, ಬಿಗ್‌ ಸ್ಕ್ರೀನ್ ಮೇಲಿನ ಸಿನಿಮಾ ಯಾವಾಗಲೂ ತನ್ನದೇ ಆದ ಮ್ಯಾಜಿಕ್ ಹೊಂದಿರುತ್ತದೆ," ಎಂದು ಅವರು ಹೇಳಿದರು. ಮತ್ತೊಂದೆಡೆ, ಒಟಿಟಿ ವೇದಿಕೆಗಳು ಗುಣಮಟ್ಟದ ಕೌಟುಂಬಿಕ ಮನರಂಜನೆ ಮತ್ತು ಖಾಸಗಿ ವೀಕ್ಷಣೆಯ ಸ್ವಾತಂತ್ರ್ಯವನ್ನು ನೀಡುತ್ತವೆ ಎಂದು ಅವರು ಹೇಳಿದರು. "ಎರಡೂ ಫಾರ್ಮ್ಯಾಟ್ ಗಳ ಪರಿಪೂರ್ಣ ಮಿಶ್ರಣವು ಚಲನಚಿತ್ರ ವಿಶ್ವದಲ್ಲಿ ಒಂದು ಅದ್ಭುತವನ್ನು ಸೃಷ್ಟಿಸುತ್ತದೆ," ಎಂದು ವಿಕ್ರಮಾದಿತ್ಯ ಮೋಟ್ವಾನೆ ಹೇಳಿದರು.

ಬಿಗ್‌ ಸ್ಕ್ರೀನ್ vs ಒಟಿಟಿ ಚರ್ಚೆಯಲ್ಲಿ, ಇಬ್ಬರು ಪ್ರತಿಷ್ಠಿತ ಉದ್ಯಮ ತಜ್ಞರು - 'ಎಲ್ಲೆಗಳನ್ನು ಮೀರಿದಾಗ, ಹಲವಾರು ಹೊಸ ಅದ್ಭುತ ವಿಷಯಗಳು ಸಂಭವಿಸುತ್ತವೆ' ಎಂಬುದನ್ನು ಒಪ್ಪಿಕೊಂಡರು.

 

*****

iffi reel

(Release ID: 2076860) Visitor Counter : 10