ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ ಗೋವಾದಲ್ಲಿ ರಾಜ್ ಕಪೂರ್ ಅವರ ಶತಮಾನೋತ್ಸವವನ್ನು ರಣಬೀರ್ ಕಪೂರ್ ಅವರನ್ನು ಒಳಗೊಂಡ ವಿಶೇಷ ಅಧಿವೇಶನದೊಂದಿಗೆ ಆಚರಿಸಲಾಯಿತು
"ರಾಜ್ ಕಪೂರ್ ಅವರ ಚಲನಚಿತ್ರಗಳು ಕೇವಲ ಮನರಂಜನೆಗಾಗಿ ಅಲ್ಲ; ಅವು ಮುಖ್ಯವಾದ ಕಥೆಗಳನ್ನು ಹೇಳುತ್ತವೆ, ಪ್ರೇಕ್ಷಕರ ಹೃದಯದೊಂದಿಗೆ ಮಾತನಾಡುವ ಕಥೆಗಳನ್ನು ಹೇಳುತ್ತವೆ": ರಣಬೀರ್ ಕಪೂರ್
'ಮೇರಾ ನಾಮ್ ಜೋಕರ್' ನಂತಹ ಹಿನ್ನಡೆಗಳ ಹೊರತಾಗಿಯೂ, ನನ್ನ ಅಜ್ಜ ಪ್ರೇಕ್ಷಕರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ದಿಟ್ಟ ಅಪಾಯಗಳನ್ನು ಕೈಗೆತ್ತಿಕೊಂಡು ಎದುರಿಸಿದರು": ರಣಬೀರ್
ಕಲಾವಿದರಾಗಿ, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಮ್ಮ ಕೆಲಸದ ಮೂಲಕ ಜಾಗೃತಿ ಮೂಡಿಸಲು ನಾವು ನಮ್ಮ ವೇದಿಕೆಗಳನ್ನು ಬಳಸಬೇಕು: ರಣಬೀರ್
ರಾಜ್ ಕಪೂರ್ ಒಬ್ಬ ದೂರದೃಷ್ಟಿಯುಳ್ಳವರಾಗಿದ್ದರು; ತಲೆಮಾರುಗಳು ಮತ್ತು ಸಂಸ್ಕೃತಿಗಳಾದ್ಯಂತ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯಕ್ಕೆ ಎಣೆಯಿರಲಿಲ್ಲ: ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ರಾಹುಲ್ ರಾವೈಲ್
ಖ್ಯಾತ ನಟ ಮತ್ತು ನಿರ್ದೇಶಕ ರಾಜ್ ಕಪೂರ್ ಅವರ ಶತಮಾನೋತ್ಸವದ ಅಂಗವಾಗಿ, 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐಎಫ್ಎಫ್ಐ) ರಾಜ್ ಕಪೂರ್ ಅವರ ಮೊಮ್ಮಗ ರಣಬೀರ್ ಕಪೂರ್ ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕ ರಾಹುಲ್ ರಾವೈಲ್ ಭಾಗವಹಿಸಿದ್ದ ವಿಶೇಷ ಅಧಿವೇಶನದಲ್ಲಿ ದಂತಕಥೆಯಂತಹ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿತು. ಈ ಅಧಿವೇಶನವು ಭಾರತೀಯ ಚಿತ್ರರಂಗಕ್ಕೆ ರಾಜ್ ಕಪೂರ್ ಅವರ ಸ್ಮರಣೀಯ ಕೊಡುಗೆ, ಅವರ ಶಾಶ್ವತ ಪ್ರಭಾವ ಮತ್ತು ಅವರ ಕೃತಿಗಳ ನಿರಂತರ ಪರಂಪರೆಯ ಆಕರ್ಷಕ ಅನ್ವೇಷಣೆಯಾಗಿತ್ತು.
ರಣಬೀರ್ ಕಪೂರ್, ತಮ್ಮ ಅಜ್ಜನ ಅಸಾಧಾರಣ ಪ್ರಭಾವವನ್ನು ಪ್ರತಿಬಿಂಬಿಸುತ್ತಾ, ರಾಜ್ ಕಪೂರ್ ಅವರ ಚಲನಚಿತ್ರಗಳು ಕಾಲ ಮತ್ತು ಗಡಿಗಳನ್ನು ಮೀರುತ್ತವೆ ಎಂದು ಒತ್ತಿಹೇಳಿದರು. ಆವಾರಾ, ಮೇರಾ ನಾಮ್ ಜೋಕರ್ ಮತ್ತು ಶ್ರೀ 420 ಯಂತಹ ತಮ್ಮ ಅಜ್ಜನ ಕೃತಿಗಳು ಹೇಗೆ ಸಾರ್ವತ್ರಿಕ ಆಕರ್ಷಣೆಯನ್ನು ಹೊಂದಿದ್ದವು, ರಷ್ಯಾದಿಂದ ಭಾರತದವರೆಗೆ ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಆಳವಾಗಿ ಅನುರಣಿಸಿದವು ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.
ರಾಜ್ ಕಪೂರ್ ಅವರ ಚಿತ್ರಗಳ ಪ್ರಸ್ತುತತೆಯನ್ನು ಎತ್ತಿ ತೋರಿಸಿದ ರಣಬೀರ್, ಆವಾರಾದ ವಿಷಯಗಳು ಜಾತಿವಾದವನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಸಾರಿದರೆ, ಶ್ರೀ 420 ದುರಾಸೆ ಮತ್ತು ಮಹತ್ವಾಕಾಂಕ್ಷೆಯನ್ನು ವಿವೇಚಿಸುತ್ತದೆ ಎಂಬುದರತ್ತ ಬೆಟ್ಟು ಮಾಡಿದರು. ನಂತರದ ಚಲನಚಿತ್ರಗಳಾದ ಪ್ರೇಮ್ ರೋಗ್ ಮತ್ತು ರಾಮ್ ತೇರಿ ಗಂಗಾ ಮೈಲಿ ಮಹಿಳೆಯರ ಸಮಸ್ಯೆಗಳು ಮತ್ತು ಸಾಮಾಜಿಕ ಸವಾಲುಗಳ ಬಗ್ಗೆ ನೈತಿಕ ನಿರೂಪಣೆಗಳಿಗಾಗಿ ಪ್ರಶಂಸಿಸಲ್ಪಟ್ಟವು, ಇದು ರಾಜ್ ಕಪೂರ್ ಅವರು ಚಲನಚಿತ್ರ ನಿರ್ಮಾಪಕರಾಗಿ ತಮ್ಮ ಕಾಲಕ್ಕಿಂತ ಬಹಳ ಮುಂದಿರುವ ಅವರ ಚಿಂತನೆ ಮತ್ತು ದೃಷ್ಟಿಕೋನವನ್ನು ಒತ್ತಿಹೇಳುತ್ತದೆ ಎಂದವರು ನುಡಿದರು.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ (ಎನ್ಎಫ್ಎಐ) ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಸಹಯೋಗದೊಂದಿಗೆ ರಾಜ್ ಕಪೂರ್ ಅವರ ಚಲನಚಿತ್ರಗಳನ್ನು ಪುನಃಸ್ಥಾಪಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ರಣಬೀರ್ ಚರ್ಚಿಸಿದರು. ರಾಜ್ ಕಪೂರ್ ಅವರ ಹತ್ತು ಚಲನಚಿತ್ರಗಳನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ, 2024ರ ಡಿಸೆಂಬರ್ ನಲ್ಲಿ ಭಾರತದಾದ್ಯಂತ ಬಿಡುಗಡೆ ಮಾಡುವ ಯೋಜನೆಗಳಿವೆ ಎಂದು ಅವರು ಬಹಿರಂಗಪಡಿಸಿದರು. ರಾಜ್ ಕಪೂರ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, ಸಿನಿಮೀಯ ಪ್ರತಿಭೆಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು .
ಈ ಅಧಿವೇಶನವು ಚಲನಚಿತ್ರ ನಿರ್ಮಾಣ, ನಟನೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಿನೆಮಾದ ವಿಕಸನದ ಪಾತ್ರದ ಬಗ್ಗೆ ಚರ್ಚೆಗಳನ್ನು ಒಳಗೊಂಡಿತ್ತು. ತಂದೆಯಾಗಿ ಪರಿಸರ ಮತ್ತು ಸಾಮಾಜಿಕ ಬದಲಾವಣೆಯ ಬಗ್ಗೆ ತನ್ನ ಅರಿವು ಹೇಗೆ ಆಳಗೊಂಡಿದೆ ಎಂಬುದನ್ನು ರಣಬೀರ್ ಹಂಚಿಕೊಂಡರು, ಜ್ಞಾನವನ್ನು ಹರಡಲು ಮತ್ತು ಜಾಗತಿಕ ಕಾರಣಗಳಿಗಾಗಿ ವಾದಿಸಲು ಕಲಾವಿದರು ತಮ್ಮ ವೇದಿಕೆಗಳನ್ನು ಬಳಸುವಂತೆ ಆಗ್ರಹಿಸಿದರು. ನಟನೆಯಲ್ಲಿ ವ್ಯಕ್ತಿತ್ವದ ಮಹತ್ವವನ್ನು ಅವರು ಎತ್ತಿ ತೋರಿಸಿದರು, ಮಹತ್ವಾಕಾಂಕ್ಷಿ ನಟರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಕಂಡುಕೊಳ್ಳಲು ಪ್ರೋತ್ಸಾಹಿಸಿದರು ಮತ್ತು ವಿಶ್ವಾದ್ಯಂತದ ಶ್ರೇಷ್ಠ ಕಲಾವಿದರಿಂದ ಸ್ಫೂರ್ತಿ ಪಡೆಯುವಂತೆಯೂ ಸಲಹೆ ಮಾಡಿದರು.
ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವಾಗ ರಣಬೀರ್ ಕಪೂರ್, ಶ್ರದ್ಧಾಂಜಲಿಯನ್ನು ಆಯೋಜಿಸಿದ್ದಕ್ಕಾಗಿ ಐಎಫ್ಎಫ್ಐಗೆ ಕೃತಜ್ಞತೆ ಸಲ್ಲಿಸಿದರು ಮತ್ತು ರಾಜ್ ಕಪೂರ್ ಅವರ ಕಾಲಾತೀತ ಕೃತಿಗಳನ್ನು ಮರುಪರಿಶೀಲಿಸಲು ಮತ್ತು ಪೋಷಿಸಲು ಪ್ರೇಕ್ಷಕರಿಗೆ ಕರೆ ನೀಡಿದರು. ರಾಹುಲ್ ರಾವೈಲ್ ಅವರು ರಣಬೀರ್ ಅವರ ಒಳನೋಟಗಳನ್ನು ಇನ್ನಷ್ಟು ವಿಸ್ತರಿಸಿದರು. ಚಲನಚಿತ್ರೋದ್ಯಮದ ಮೇಲೆ ಮತ್ತು ಸಮಾಜದ ಮೇಲೆ ರಾಜ್ ಕಪೂರ್ ಅವರ ಶಾಶ್ವತ ಪ್ರಭಾವವನ್ನು ವಿವೇಚಿಸಿದರು.
ಗೋಷ್ಠಿಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಭಾಗವಹಿಸಿದ್ದರು. ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್ಎಫ್ಐನ ಉತ್ಸವ ನಿರ್ದೇಶಕ ಶೇಖರ್ ಕಪೂರ್, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಜಂಟಿ ಕಾರ್ಯದರ್ಶಿ ಮತ್ತು ಎನ್ಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಿತುಲ್ ಕುಮಾರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು ವೃಂದಾ ದೇಸಾಯಿ ಪಾಲ್ಗೊಂಡಿದ್ದರು.
*****
(Release ID: 2076836)
Visitor Counter : 6