ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

'ಯುವ ಚಲನಚಿತ್ರ ನಿರ್ಮಾಪಕರು: ಈಗಿನ ಭವಿಷ್ಯ ' ಎಂಬ ಧ್ಯೇಯವಾಕ್ಯದೊಂದಿಗೆ ಗೋವಾದಲ್ಲಿ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಭುತ ಆರಂಭ.


ಐಎಫ್ಎಫ್ಐ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ ಗಣ್ಯರಿಗೆ ಸನ್ಮಾನ

"ಕಳೆದ ಎರಡು ದಶಕಗಳಲ್ಲಿ ಐಎಫ್ಎಫ್ಐ ಮತ್ತು ಗೋವಾ ಪರಸ್ಪರ ಅನ್ವರ್ಥಕವಾಗಿವೆ" ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್

"ಸೃಷ್ಟಿಕರ್ತರ ಆರ್ಥಿಕತೆಯನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ

ಪ್ರಸಾರ ಭಾರತಿಯ 'ವೇವ್ಸ್ ಒಟಿಟಿ' ಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ

"ಐಎಫ್ಎಫ್ಐ ಭಾರತೀಯ ಸಿನೆಮಾವನ್ನು ಉತ್ತೇಜಿಸಲು ಮತ್ತು ಸರಕಾರದ ವತಿಯಿಂದ ಬೆಂಬಲಿಸುವ ನೀತಿ ಚೌಕಟ್ಟನ್ನು ಖಚಿತಪಡಿಸಲು ಶ್ರಮಿಸುತ್ತಿದೆ" ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್ ಮುರುಗನ್

" ಭಾರತೀಯ ಸಿನೆಮಾ ಪ್ರೇಕ್ಷಕರು ಮತ್ತು ಭಾರತೀಯ ಚಲನಚಿತ್ರ ತಯಾರಕರನ್ನು ಐಎಫ್ಎಫ್ಐ ಕೊಂಡಾಡುತ್ತದೆ": ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು

"ಚಲನಚಿತ್ರೋತ್ಸವದ ಉದ್ದೇಶ ಜನರನ್ನು ಹತ್ತಿರ ತರುವುದು ಮತ್ತು ಪರಸ್ಪರರ ಕಥೆಗಳನ್ನು ಹೇಳುವುದು" : ಉತ್ಸವದ ನಿರ್ದೇಶಕ ಶೇಖರ್ ಕಪೂರ್.

"ಇಡೀ ಜಗತ್ತೇ ಕಥೆ ಹೇಳುವ ವೇದಿಕೆ" : ಶ್ರೀ ಶ್ರೀ ರವಿಶಂಕರ್

ಭಾರತೀಯ ಚಿತ್ರರಂಗದ ನಾಲ್ವರು ದಂತಕಥೆಗಳಾದ -ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಮೊಹಮ್ಮದ್ ರಫಿ ಅವರ ವಿಶೇಷ ಅಂಚೆ ಚೀಟಿ ಅನಾವರಣ

ಚಲನಚಿತ್ರ ಕ್ಷೇತ್ರದ ಪ್ರಖ್ಯಾತ ಗಣ್ಯರು ಮತ್ತು ಸಿನೆಮಾ ಉತ್ಸಾಹಿಗಳ ಹಾಜರಾತಿಯಲ್ಲಿ ಗೋವಾದ ಸುಂದರ ಕರಾವಳಿಯಲ್ಲಿ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು (ಐಎಫ್ಎಫ್ಐ) ಇಂದು ಸಂಜೆ ಉದ್ಘಾಟಿಸಲಾಯಿತು. ಭಾರತದ ಸಾಂಸ್ಕೃತಿಕ ಸಂಯೋಜನೆ (ಸಿನರ್ಜಿ) ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ಉತ್ತೇಜಿಸಿದವು ಹಾಗು  ಸೃಜನಶೀಲತೆ ಮತ್ತು ಸಿನಿಮೀಯ ಪ್ರತಿಭೆಯನ್ನು ಸಂಭ್ರಮಿಸುವ  ಒಂಬತ್ತು ದಿನಗಳ ಉತ್ಸವಕ್ಕೆ ಭವ್ಯ ಆರಂಭವನ್ನು ನೀಡಿದವು. ವಿಶ್ವದಾದ್ಯಂತದ ಸಿನಿಪ್ರಿಯರ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿ, ಐಎಫ್ಎಫ್ಐನ 55 ನೇ ಆವೃತ್ತಿಯು ಆಸ್ಟ್ರೇಲಿಯಾದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮೈಕೆಲ್ ಗ್ರೇಸಿ ಅವರ ಚಲನಚಿತ್ರ 'ಬೆಟರ್ ಮ್ಯಾನ್' ಪ್ರದರ್ಶನದೊಂದಿಗೆ ಪ್ರಾರಂಭವಾಯಿತು.

ಚಲನಚಿತ್ರ ಜಗತ್ತಿನ ಜನಪ್ರಿಯ ವ್ಯಕ್ತಿಗಳಾದ ಅಭಿಷೇಕ್ ಬ್ಯಾನರ್ಜಿ ಮತ್ತು ಭೂಮಿ ಪೆಡ್ನೇಕರ್ ನಿರೂಪಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಸಿನಿ ಪ್ರಪಂಚದ ಕೆಲವು ಪ್ರತಿಭಾನ್ವಿತ ತಾರೆಯರನ್ನು ಸಿನೆಮಾ ಆರಾಧಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಚಲನಚಿತ್ರ ತಾರೆಯರಾದ ಸುಭಾಷ್ ಘಾಯ್, ಚಿದಾನಂದ ನಾಯಕ್, ಬೊಮನ್ ಇರಾನಿ, ಆರ್.ಕೆ.ಸೆಲ್ವಮಣಿ, ಜೈದೀಪ್ ಅಹ್ಲಾವತ್, ಜಯಂ ರವಿ, ಇಶಾರಿ ಗಣೇಶ್, ಆರ್.ಶರತ್ ಕುಮಾರ್, ಪ್ರಣೀತಾ ಸುಭಾಷ್, ಜಕ್ಕಿ ಭಗ್ನಾನಿ, ರಾಕುಲ್ ಪ್ರೀತ್ ಸಿಂಗ್, ರಣದೀಪ್ ಹೂಡಾ ಮತ್ತು ರಾಜ್ ಕುಮಾರ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ಸಂಪ್ರದಾಯಗಳನ್ನು ಅನುಸರಿಸಿ, ರಾಜ್ಯಸಭಾ ಸಂಸದ ಶ್ರೀ ಸದಾನಂದ ಶೇಟ್ ತನವಾಡೆ, ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಆಧ್ಯಾತ್ಮಿಕ ಗುರು, ಶ್ರೀ ಶ್ರೀ ರವಿಶಂಕರ್ ಉತ್ಸವದ ನಿರ್ದೇಶಕ ಶ್ರೀ ಶೇಖರ್ ಕಪೂರ್, ಸಿಬಿಎಫ್ಸಿ ಅಧ್ಯಕ್ಷ ಶ್ರೀ ಪ್ರಸೂನ್ ಜೋಶಿ ಮತ್ತು ಪ್ರಸಾರ ಭಾರತಿ ಅಧ್ಯಕ್ಷ ಶ್ರೀ ನವನೀತ್ ಕುಮಾರ್ ಸೆಹಗಲ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ತೆಂಗಿನ ಸಸಿಗೆ ನೀರು ಹಾಕುವ ಮೂಲಕ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದರು.

ಸಂದರ್ಭದಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಗೋವಾ ಮತ್ತು ಐಎಫ್ಎಫ್ಐ ಅಕ್ಷರಶಃ ಸಮಾನಾರ್ಥಕವಾಗಿವೆ. "ನೀವು ಐಎಫ್ಎಫ್ಐ ಬಗ್ಗೆ ಯೋಚಿಸಿದಾಗ, ನಿಮಗೆ ಗೋವಾ ನೆನಪಾಗುತ್ತದೆ, ಮತ್ತು ಗೋವಾದ ಬಗ್ಗೆ ಯೋಚಿಸಿದಾಗ, ನಿಮಗೆ ಐಎಫ್ಎಫ್ಐ ನೆನಪಾಗುತ್ತದೆ" ಎಂದರು. ಎಲ್ಲಾ ಗೋವಾವಾಸಿಗಳ  ಪರವಾಗಿ ಉತ್ಸವಕ್ಕೆ ಬಂದ ಪ್ರತಿನಿಧಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ  ಡಾ. ಸಾವಂತ್ ಹೇಳಿದರು.

"ಸೃಷ್ಟಿಕರ್ತರ ಆರ್ಥಿಕತೆಯನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು"

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಡಿಯೋ ಸಂದೇಶದಲ್ಲಿ, ಐಎಫ್ಎಫ್ಐ ಭಾರತೀಯ ಚಲನಚಿತ್ರೋದ್ಯಮದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು. ರೋಮಾಂಚಕ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಷಯ ಸೃಷ್ಟಿಕರ್ತರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವರು ಹೇಳಿದರು. "ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಪಾಕಪದ್ಧತಿಗಳು, ಶ್ರೀಮಂತ ಪರಂಪರೆ ಮತ್ತು ಭಾರತೀಯ ಸಾಹಿತ್ಯ ಮತ್ತು ಭಾಷೆಗಳ ರತ್ನಗಳನ್ನು ಆಸಕ್ತಿದಾಯಕ ಮತ್ತು ಸೃಜನಶೀಲ ರೀತಿಯಲ್ಲಿ ಪ್ರದರ್ಶಿಸುವ ನವೀನ ವಿಷಯಗಳೊಂದಿಗೆ ಜನರು ಬರುತ್ತಿದ್ದಾರೆ" ಎಂದು ಅವರು ಹೇಳಿದರು. ತಂತ್ರಜ್ಞಾನದ ಏಕೀಕರಣ ಮತ್ತು ದೃಢವಾದ ಕ್ಯುರೇಟರ್ಗಳ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ಸೃಷ್ಟಿಕರ್ತರ ಆರ್ಥಿಕತೆಯನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಐಎಫ್ಎಫ್ಐನಿಂದ ಹೊಸ ಪಾಲುದಾರಿಕೆ/ಸಹಭಾಗಿತ್ವ  ಮತ್ತು ಹೊಸ ಆಲೋಚನೆಗಳ ಹೊರಹೊಮ್ಮುವಿಕೆಯ ಬಗ್ಗೆ ಶ್ರೀ ವೈಷ್ಣವ್ ಅವರು ಭರವಸೆ ವ್ಯಕ್ತಪಡಿಸಿದರು. ಕೆಲವು ಯುವ ಸೃಷ್ಟಿಕರ್ತರಿಗೆ  ಮಾರ್ಗದರ್ಶನವನ್ನು ನೀಡುವ ಹೊಸ ಉಪಕ್ರಮಗಳ ಬಗ್ಗೆಯೂ ಅವರು ವಿಶ್ವಾಸ ವ್ಯಕ್ತಪಡಿಸಿದರು. "ಈ ಸಂದರ್ಭದಲ್ಲಿ ಹಂಚಿಕೊಂಡ ವಿಚಾರಗಳು ಮುಂಬರುವ ವರ್ಷಗಳಲ್ಲಿ ಉದ್ಯಮದ ದಿಕ್ಕನ್ನು ರೂಪಿಸಲು ಸಹಾಯ ಮಾಡುತ್ತವೆ" ಎಂದು ಅವರು ಹೇಳಿದರು.

"ಐಎಫ್ಎಫ್ಐ ಭಾರತೀಯ ಸಿನೆಮಾವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಮತ್ತು ಅದಕ್ಕಾಗಿ ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ"

ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್, ಐಎಫ್ಎಫ್ಐ ಭಾರತೀಯ ಸಿನೆಮಾವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ ಮತ್ತು ಅದನ್ನು ಖಚಿತಪಡಿಸಿಕೊಳ್ಳಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತದೆ. ಚಲನಚಿತ್ರ  ಪೈರಸಿಯನ್ನು ನಿಗ್ರಹಿಸುವಲ್ಲಿ ಭಾರತ ಸರ್ಕಾರವು ಚಲನಚಿತ್ರೋದ್ಯಮವನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದಲ್ಲದೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರಾರಂಭಿಸಿದ ಚಲನಚಿತ್ರ ಸೌಲಭ್ಯದ ಏಕಗವಾಕ್ಷಿ ವ್ಯವಸ್ಥೆಯು ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿಗಳನ್ನು ಪಡೆಯುವುದನ್ನು ಸುಲಭಗೊಳಿಸಿದೆ. ಈ ಉಪಕ್ರಮವು ವಿವಿಧ ಸಬ್ಸಿಡಿಗಳೊಂದಿಗೆ ಚಲನಚಿತ್ರ ತಯಾರಕರಿಗೆ ವ್ಯವಹಾರವನ್ನು ಸುಲಭಗೊಳಿಸಿದೆ. ಎಂದೂ ಹೇಳಿದರು. ಐಎಫ್ಎಫ್ಐನಲ್ಲಿ ಆರಂಭಿಸಲಾದ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ಸಿಎಂಒಟಿ) ಉಪಕ್ರಮವನ್ನು ಉಲ್ಲೇಖಿಸಿದ ಡಾ. ಮುರುಗನ್ , ಅಲ್ಲಿ ನೂರು ಯುವ ಸೃಜನಶೀಲ ವ್ಯಕ್ತಿಗಳು ಚಲನಚಿತ್ರ ದಿಗ್ಗಜರಿಂದ ಮಾರ್ಗದರ್ಶನ ಪಡೆಯಲು ಮತ್ತು ಅವರೊಂದಿಗಿನ ಸಂವಹನದಿಂದ ಪ್ರಯೋಜನ ಪಡೆಯಲು ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳಿದರು. ವಿಶ್ವದ ಅತಿದೊಡ್ಡ ಚಲನಚಿತ್ರೋತ್ಸವಗಳಲ್ಲಿ ಒಂದಾದ ಐಎಫ್ಎಫ್ಐ 1000 ಕ್ಕೂ ಹೆಚ್ಚು ಪ್ರವೇಶ ಪತ್ರಗಳನ್ನು ಸ್ವೀಕರಿಸಿದೆ ಎಂದು ಎಂಒಎಸ್ ನುಡಿದರು. ಈ ವರ್ಷದ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಖ್ಯಾತ ಚಲನಚಿತ್ರ ನಿರ್ಮಾಪಕ ಫಿಲಿಪ್ ನೋಯ್ಸ್ ಅವರಿಗೆ ನೀಡಿರುವುಕ್ಕೆ  ಐಎಫ್ಎಫ್ಐಗೆ ಹೆಮ್ಮೆಪಡುತ್ತದೆ ಎಂದು ಡಾ.ಎಲ್.ಮುರುಗನ್ ಹೇಳಿದರು.

"ಚಲನಚಿತ್ರೋತ್ಸವದ ಉದ್ದೇಶವು ಜನರನ್ನು ಹತ್ತಿರ ತರುವುದು ಮತ್ತು ಪರಸ್ಪರರ ಕಥೆಗಳನ್ನು ಹೇಳುವುದು"

"ನಮ್ಮ ಕಥೆಗಳನ್ನು ಪರಸ್ಪರ ಹೇಳೋಣ" ಎಂದು ಚಲನಚಿತ್ರ ನಟ ಮತ್ತು ಉತ್ಸವ ನಿರ್ದೇಶಕ ಶ್ರೀ ಶೇಖರ್ ಕಪೂರ್ ಆಗ್ರಹಿಸಿದರು. "ಧ್ರುವೀಕೃತ ಜಗತ್ತಿನಲ್ಲಿ ರಾಷ್ಟ್ರ ಮತ್ತು ರಾಷ್ಟ್ರಗಳು ಮತ್ತು ಸಮುದಾಯಗಳಲ್ಲಿ, ಪರಸ್ಪರ ಮಾತನಾಡಲು ಏಕೈಕ ಮಾರ್ಗವೆಂದರೆ ನಮ್ಮ ಕಥೆಗಳನ್ನು ಹೇಳುವುದು" ಎಂದು ಅವರು ಹೇಳಿದರು. ಇದು ನಮ್ಮನ್ನು ಪರಸ್ಪರ ಹತ್ತಿರ ತರುತ್ತದೆ ಮತ್ತು ವಿಶ್ವದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸುತ್ತದೆ, ಆದ್ದರಿಂದ ನಾವು ಚಲನಚಿತ್ರೋತ್ಸವಗಳನ್ನು ಆಯೋಜಿಸುವುದನ್ನು ಮುಂದುವರಿಸಬೇಕಾಗಿದೆ ಎಂದು ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಅಭಿಪ್ರಾಯಪಟ್ಟರು. ಭಾರತವು ಅತಿದೊಡ್ಡ ಚಲನಚಿತ್ರ ಉದ್ಯಮವನ್ನು ಹೊಂದಿದೆ ಮತ್ತು ವಿಶ್ವದ ಶ್ರೇಷ್ಠ ವಿಷಯ ತಯಾರಕರು ಮತ್ತು ವಿಷಯ ಗ್ರಾಹಕರು ಇಲ್ಲಿದಾರೆ  ಎಂದು ಅವರು ಹೇಳಿದರು. ಈ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ತಯಾರಕರು ಮಾತ್ರವಲ್ಲದೆ ಪ್ರೇಕ್ಷಕರೂ ಸಂಭ್ರಮಿಸುವಂತಾಗಬೇಕು ಎಂದು ಐಎಫ್ಎಫ್ಐ ಉತ್ಸವದ ನಿರ್ದೇಶಕ ಶ್ರೀ ಶೇಖರ್ ಕಪೂರ್ ಅವರು ನುಡಿದರು.

"ಇಡೀ ಜಗತ್ತು ಕಥೆ ಹೇಳುವ ವೇದಿಕೆಯಾಗಿದೆ"

ಗಣ್ಯರಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಅವರು "ಪ್ರತಿಯೊಂದು ಜೀವನವೂ ಒಂದು ಚಲನಚಿತ್ರವಿದ್ದಂತೆ. ನಾನು ಜನರನ್ನು ಭೇಟಿಯಾಗುತ್ತೇನೆ ಮತ್ತು ಅವರ ಕಥೆಗಳನ್ನು ಕೇಳುತ್ತೇನೆ. ಇಡೀ ಜಗತ್ತು ಕಥೆ ಹೇಳುವ ವೇದಿಕೆಯಾಗಿದೆ. ಭಾರತೀಯ ಪುರಾಣಗಳಲ್ಲಿ, ಡಮರು ನುಡಿಸುತ್ತಿರುವ ಶಿವ, ವೀಣೆ ನುಡಿಸುವ ಸರಸ್ವತಿ ದೇವಿ, ಕೊಳಲು ನುಡಿಸುವ ಶ್ರೀಕೃಷ್ಣ ಮುಂತಾದ ಮನರಂಜನಾ ರೂಪಗಳೊಂದಿಗೆ ದೇವರುಗಳು ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದರು. ಭಾರತೀಯ ಸಂಸ್ಕೃತಿಯು ಮನರಂಜನೆಯೊಂದಿಗೆ ಹೆಣೆದುಕೊಂಡಿದೆ, ಇದು ಸಂತೋಷದ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತದೆ ಎಂದವರು ನುಡಿದರು. ಕೊಲಂಬಿಯಾದ ಅಂತರ್ಯುದ್ಧವನ್ನು ಕೊನೆಗೊಳಿಸುವಲ್ಲಿ ಶ್ರೀ ಶ್ರೀ ರವಿಶಂಕರ್ ಅವರು ವಹಿಸಿದ ಪ್ರಮುಖ ಪಾತ್ರದ ಕುರಿತಾದ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕ ಶ್ರೀ ಮಹಾವೀರ್ ಜೈನ್ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಭಾರತೀಯ ಚಿತ್ರರಂಗದ ನಾಲ್ವರು ದಂತಕಥೆಗಳಾದ -ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಮೊಹಮ್ಮದ್ ರಫಿ ಅವರ ವಿಶೇಷ ಅಂಚೆ ಚೀಟಿ ಅನಾವರಣ    

ವರ್ಷ ಐಎಫ್ಎಫ್ಐ ರಾಜ್ ಕಪೂರ್, ತಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್ಆರ್) ಮತ್ತು ಮೊಹಮ್ಮದ್ ರಫಿ ಅವರ ಅಸಾಧಾರಣ ಪರಂಪರೆಗೆ ಗೌರವ ಸಲ್ಲಿಸಲಿದೆ. ಅವರ ಚಿತ್ರಗಳ ಪ್ರದರ್ಶನ, ಸಂವಾದ ಕಾರ್ಯಕ್ರಮಗಳು, ಸಿನೆಮಾ ಜಗತ್ತಿಗೆ ಈ ದಂತಕಥೆಗಳಂತಹ ವ್ಯಕ್ತಿತ್ವಗಳು  ನೀಡಿದ ಕೊಡುಗೆಯ ಬಗ್ಗೆ ಪ್ರತಿನಿಧಿಗಳಿಗೆ ನಿಕಟ ನೋಟ ಒದಗಿಸುವ ಮೂಲಕ ಸರಣಿ ಗೌರವ ಸಲ್ಲಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತೀಯ ಚಿತ್ರರಂಗದ ನಾಲ್ವರು ದಿಗ್ಗಜರ ಕುರಿತ ವಿಶೇಷ ಅಂಚೆ ಚೀಟಿಯನ್ನು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ವಾರ್ತಾ ಮತ್ತು ಪ್ರಸಾರ ಇಲಾಖೆಯ ವಿಶೇಷ ಕಾರ್ಯದರ್ಶಿ ಶ್ರೀಮತಿ ನೀರಜಾ ಶೇಖರ್ ಅವರು ಅನಾವರಣಗೊಳಿಸಿದರು. ಮಹಾರಾಷ್ಟ್ರ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಶ್ರೀ ಅಮಿತಾಭ್ ಸಿಂಗ್; ಎಂಡಿ, ಎನ್ಎಫ್ಡಿಸಿ, ಶ್ರೀ ಪೃಥ್ವಿ ಕುಮಾರ್; ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು), ಶ್ರೀಮತಿ ವೃಂದಾ ಮನೋಹರ್ ದೇಸಾಯಿ; ಉತ್ಸವದ ನಿರ್ದೇಶಕ ಶ್ರೀ ಶೇಖರ್ ಕಪೂರ್; ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಪುತ್ರ  ಶ್ರೀ ನಾಗಾರ್ಜುನ; ಮತ್ತು ಪ್ರಸಿದ್ಧ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ಅವರ ಸೊಸೆ. ಶ್ರೀಮತಿ ಫಿರ್ದೌಸ್ ರಫಿ,  ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, "ಐಎಫ್ಎಫ್ಐ ವರ್ಷ ಭಾರತೀಯ ಚಿತ್ರರಂಗದ ನಾಲ್ಕು ದಂತಕಥೆಗಳನ್ನು ಸ್ಮರಿಸಿ ಕೊಂಡಾಡುತ್ತಿರುವುದು ಉತ್ತಮ ಭಾವನೆಯ ಕೆಲಸ” ಎಂದರು.

"ಐಎಫ್ಎಫ್ಐ ಭಾರತೀಯ ಸಿನೆಮಾ ಪ್ರೇಕ್ಷಕರು ಮತ್ತು ಭಾರತೀಯ ಚಲನಚಿತ್ರ ತಯಾರಕರನ್ನು ಕೊಂಡಾಡಿ ಸಂಭ್ರಮಿಸುತ್ತದೆ"

ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮತ್ತು ಉತ್ಸವದ ನಿರ್ದೇಶಕ ಶೇಖರ್ ಕಪೂರ್ ಅವರು 55ನೇ ಐಎಫ್ಎಫ್ಐನ ಅಂತಾರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರ ಸದಸ್ಯರಾದ ಅಶುತೋಷ್ ಗೋವಾರಿಕರ್ (ಅಧ್ಯಕ್ಷ), ಆಂಥೋನಿ ಚೆನ್, ಎಲಿಜಬೆತ್ ಕಾರ್ಲ್ಸನ್, ಫ್ರಾನ್ ಬೋರ್ಗಿಯಾ ಮತ್ತು ಜಿಲ್ ಬಿಲ್ಕಾಕ್ ಅವರನ್ನು ಸನ್ಮಾನಿಸಿದರು.

ಹೊಸದಾಗಿ ಪರಿಚಯಿಸಲಾದ 'ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ' ವಿಭಾಗದ ತೀರ್ಪುಗಾರರಲ್ಲಿ ಸಂತೋಷ್ ಶಿವನ್ (ಜ್ಯೂರಿ ಅಧ್ಯಕ್ಷ), ಎಂ.ವಿ.ರಘು, ಸುನೀಲ್ ಪುರಾಣಿಕ್, ಶೇಖರ್ ದಾಸ್ ಮತ್ತು ವಿನೀತ್ ಕನೋಜಿಯಾ ಇದ್ದಾರೆ.

ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ತೀರ್ಪುಗಾರರಲ್ಲಿ ಚಂದ್ರಪ್ರಕಾಶ್ ದ್ವಿವೇದಿ (ಜ್ಯೂರಿ ಅಧ್ಯಕ್ಷ), ಮನೋಜ್ ಜೋಶಿ, ಸುಶ್ಮಿತಾ ಮುಖರ್ಜಿ, ಹಿಮಾಂಶು ಶೇಖರ್ ಖತುವಾ, ಒಯಿನಮ್ ಗೌತಮ್, ಅಶು ತ್ರಿಖಾ, ಎಸ್.ಎಂ.ಪಾಟೀಲ್, ನೀಲಭ್ ಕೌಲ್, ಸುಶಾಂತ್ ಮಿಶ್ರಾ, ಅರುಣ್ ಕುಮಾರ್ ಬೋಸ್, ರತ್ನೋತ್ತಮ ಸೇನ್ ಗುಪ್ತಾ, ಸಮೀರ್ ಹಂಚಾಟೆ ಮತ್ತು ಪ್ರಿಯಾ ಕೃಷ್ಣಸ್ವಾಮಿ ಇದ್ದಾರೆ. ಪನೋರಮಾ ನಾನ್ ಫೀಚರ್ ಫಿಲ್ಮ್ ತೀರ್ಪುಗಾರರಲ್ಲಿ  ಸುಬ್ಬಯ್ಯ ನಲ್ಲಮುತ್ತು (ಜ್ಯೂರಿ ಅಧ್ಯಕ್ಷ), ರಜನಿ ಆಚಾರ್ಯ, ರೋನೆಲ್ ಹೌಬಾಮ್, ಉಷಾ ದೇಶಪಾಂಡೆ, ವಂದನಾ ಕೊಹ್ಲಿ, ಮಿಥುನ್ಚಂದ್ರ ಚೌಧರಿ ಮತ್ತು ಶಾಲಿನಿ ಶಾ ಇದ್ದಾರೆ.

ಪ್ರಸಾರ ಭಾರತಿಯ 'ವೇವ್ಸ್ ಒಟಿಟಿ' ಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ

ಐಎಫ್ಎಫ್ಐ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಪ್ರಸಾರ ಭಾರತಿಯ ಒಟಿಟಿ ಪ್ಲಾಟ್ಫಾರ್ಮ್ 'ವೇವ್ಸ್ ಒಟಿಟಿ' ಅನ್ನು ಪ್ರಾರಂಭಿಸಿದರು. ಈ ಪ್ಲಾಟ್ ಫಾರ್ಮ್ ಕ್ಲಾಸಿಕ್ ವಿಷಯ ಮತ್ತು ಸಮಕಾಲೀನ ಪ್ರೋಗ್ರಾಮಿಂಗ್ ಶ್ರೀಮಂತ ಮಿಶ್ರಣವನ್ನು ನೀಡುತ್ತದೆ. ರಾಮಾಯಣ, ಮಹಾಭಾರತ, ಶಕ್ತಿಮಾನ್ ಮತ್ತು ಹಮ್ ಲೋಗ್ ನಂತಹ ಕಾಲಾತೀತ ಪ್ರದರ್ಶನಗಳನ್ನು ಒಳಗೊಂಡಿರುವ ಗ್ರಂಥಾಲಯದೊಂದಿಗೆ, ಈ ವೇದಿಕೆಯು ಭಾರತದ ಗತಕಾಲದೊಂದಿಗೆ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕಗಳನ್ನು ಹುಡುಕುವ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಯಂಗ್ ಫಿಲ್ಮ್ ಮೇಕರ್ಸ್ ಶೀರ್ಷಿಕೆಗೆ ಅನುಗುಣವಾಗಿ  ಐಎಫ್ಎಫ್ಐ '24; ರೋಲ್ ನಂಬರ್ 52 ಎಂಬ  ಅನ್ನಪೂರ್ಣ ಫಿಲ್ಮ್ ಅಂಡ್ ಮೀಡಿಯಾ ಸ್ಟುಡಿಯೋದಿಂದ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿ ಅವರ ವಿದ್ಯಾರ್ಥಿ ಪದವಿ ಚಿತ್ರ ವೇವ್ಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 55 ನೇ ಆವೃತ್ತಿಯು ತನ್ನ 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ಉಪಕ್ರಮದೊಂದಿಗೆ ಯುವ ಚಲನಚಿತ್ರ ನಿರ್ಮಾಪಕರ ಸಾಮರ್ಥ್ಯವನ್ನು ತನ್ನ ಥೀಮ್ 'ಯಂಗ್ ಫಿಲ್ಮ್ ಮೇಕರ್ಸ್: ದಿ ಫ್ಯೂಚರ್ ಈಸ್ ನೌ' ಮೂಲಕ ಅನುಸರಿಸುತ್ತದೆ

ರಾಜ್ಯಸಭಾ ಸಂಸದ ಸದಾನಂದ ಶೇಟ್ ತನವಾಡೆ, ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು, ಸಿಬಿಎಫ್ಸಿ ಅಧ್ಯಕ್ಷ ಪ್ರಸೂನ್ ಜೋಶಿ, ಪ್ರಸಾರ ಭಾರತಿ ಅಧ್ಯಕ್ಷ ನವನೀತ್ ಕುಮಾರ್ ಸೆಹಗಲ್, ಗೋವಾದ ಸಿಯೋಲಿಮ್ ಕ್ಷೇತ್ರದ ಶಾಸಕ ಮತ್ತು ಇಎಸ್ಜಿ ಉಪಾಧ್ಯಕ್ಷ ಡೆಲಿಲಾ ಲೋಬೊ ಮತ್ತು ಎಂಟರ್ಟೈನ್ಮೆಂಟ್-ಜಿಯೋ ಸ್ಟಾರ್ ಸಿಇಒ ಕೆವಿನ್ ವಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****

 

iffi reel

(Release ID: 2075866) Visitor Counter : 16