ಪ್ರಧಾನ ಮಂತ್ರಿಯವರ ಕಛೇರಿ
ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
21 NOV 2024 9:27PM by PIB Bengaluru
ಗಯಾನಾ ಸಂಸತ್ತಿನ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು. ಅಲ್ಲಿನ ಸಂಸತ್ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿಗಳ ಭಾಷಣಕ್ಕಾಗಿ ಮಾನ್ಯ ಸ್ಪೀಕರ್ ಶ್ರೀ ಮಂಜೂರ್ ನಾದಿರ್ ಅವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದರು.
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಗಯಾನಾ ನಡುವಿನ ದೀರ್ಘಕಾಲದ ಐತಿಹಾಸಿಕ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ಆ ದೇಶದ ಅತ್ಯುನ್ನತ ಗೌರವ ನೀಡಿದ್ದಕ್ಕಾಗಿ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತ ಮತ್ತು ಗಯಾನಾ ನಡುವಿನ ಭೌಗೋಳಿಕ ಅಂತರದ ಹೊರತಾಗಿಯೂ, ಹಂಚಿತ ಪರಂಪರೆ ಮತ್ತು ಪ್ರಜಾಪ್ರಭುತ್ವವು ಎರಡೂ ರಾಷ್ಟ್ರಗಳನ್ನು ನಿಕಟವಾಗಿಸಿದೆ ಎಂದು ಅವರು ತಿಳಿಸಿದರು. ಉಭಯ ದೇಶಗಳ ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಮಾನವ-ಕೇಂದ್ರಿತ ವಿಧಾನದ ಸಮಾನತೆಯ ಬಗ್ಗೆ ಒತ್ತಿಹೇಳುತ್ತಾ, ಈ ಮೌಲ್ಯಗಳು ಒಳಗೊಳ್ಳುವಿಕೆಯ ಹಾದಿಯಲ್ಲಿ ಮುನ್ನಡೆಯಲು ಪೂರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಮಂತ್ರವಾದ ‘ಮಾನವೀಯತೆ ಮೊದಲು’ ಎಂಬುದು ಇತ್ತೀಚಿನ ಬ್ರೆಜಿಲ್ನ ಜಿ-20 ಶೃಂಗಸಭೆ ಸೇರಿದಂತೆ ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸಲು ಪ್ರೇರಣೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಭಾರತವು ವಿಶ್ವಬಂಧುವಾಗಿ ಮಾನವೀಯತೆಗೆ ಸೇವೆ ಸಲ್ಲಿಸಲು ಬಯಸುತ್ತದೆ ಎಂದು ಹೇಳಿದ ಅವರು, ದೊಡ್ಡ ರಾಷ್ಟ್ರವಿರಲಿ ಅಥವಾ ಸಣ್ಣ ರಾಷ್ಟ್ರವಿರಲಿ, ಎಲ್ಲಾ ದೇಶಗಳಿಗೂ ಸಮಾನ ಪ್ರಾಮುಖ್ಯತೆ ನೀಡುವ ಈ ಮೂಲ ಚಿಂತನೆಯು ಜಾಗತಿಕ ಸಮುದಾಯದ ಕಡೆಗೆ ತನ್ನ ಮಾರ್ಗವನ್ನು ರೂಪಿಸಿದೆ ಎಂದರು.
ವರ್ಧಿತ ಜಾಗತಿಕ ಪ್ರಗತಿ ಮತ್ತು ಸಮೃದ್ಧಿಗಾಗಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಯುವಜನರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಮರ್ಥವಾಗಿ ಬಳಸಿಕೊಳ್ಳುವಂತಾಗಲು ಶಿಕ್ಷಣ ಮತ್ತು ನಾವಿನ್ಯತೆಯ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ವಿನಿಮಯಕ್ಕೆ ಅವರು ಮನವಿ ಮಾಡಿದರು. ಕೆರಿಬಿಯನ್ ಪ್ರದೇಶಕ್ಕೆ ಭಾರತದ ದೃಢ ಬೆಂಬಲವನ್ನು ವ್ಯಕ್ತಪಡಿಸುತ್ತಾ, 2ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಅಲಿ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಭಾರತ-ಗಯಾನಾ ಐತಿಹಾಸಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಭಾರತದ ಆಳವಾದ ಬದ್ಧತೆಯನ್ನು ಒತ್ತಿಹೇಳುತ್ತಾ, ಭಾರತ ಮತ್ತು ಲ್ಯಾಟಿನ್ ಅಮೆರಿಕ ಖಂಡದ ನಡುವೆ ಗಯಾನಾ ಅವಕಾಶಗಳ ಸೇತುವೆಯಾಗಬಹುದು ಎಂದು ಹೇಳಿದರು. "ನಾವು ಪೂರ್ವಕಾಲದಿಂದ ಕಲಿಯಬೇಕು ಮತ್ತು ನಮ್ಮ ವರ್ತಮಾನವನ್ನು ಸುಧಾರಿಸಬೇಕು ಹಾಗೂ ಭವಿಷ್ಯಕ್ಕಾಗಿ ಬಲವಾದ ಅಡಿಪಾಯವನ್ನು ಸಿದ್ಧಪಡಿಸಬೇಕು" ಎಂಬ ಗಯಾನಾದ ಮಹಾನ್ ಪುತ್ರ ಶ್ರೀ ಛೇಡಿ ಜಗನ್ ಅವರ ಮಾತುಗಳನ್ನು ಉಲ್ಲೇಖಿಸಿ ಪ್ರಧಾನಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಗಯಾನಾದ ಸಂಸದರನ್ನು ಪ್ರಧಾನಿ ಆಹ್ವಾನಿಸಿದರು.
ಪ್ರಧಾನಿಯವರ ಸಂಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದು.
*****
(Release ID: 2075701)
Visitor Counter : 9