ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್ ನ ವಡ್ತಾಲ್ ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದ 200ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಸಂತರು ನಮ್ಮ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಇಡೀ ಸಮಾಜ ಮತ್ತು ದೇಶವು ಒಂದು ಉದ್ದೇಶವನ್ನು ಪೂರೈಸಲು ಒಗ್ಗೂಡಿದಾಗ, ಅದು ಖಂಡಿತವಾಗಿಯೂ ಸಾಧಿಸಲ್ಪಡುತ್ತದೆ: ಪ್ರಧಾನಮಂತ್ರಿ

ಇಡೀ ದೇಶವು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿದೆ, ಅದುವೇ  ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿ: ಪ್ರಧಾನಮಂತ್ರಿ

ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಇದ್ದ ಹಂಬಲ ಮತ್ತು ಪ್ರಜ್ಞೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ 140 ಕೋಟಿ ದೇಶವಾಸಿಗಳಲ್ಲಿ ಪ್ರತಿ ಕ್ಷಣವೂ ಇರಬೇಕು: ಪ್ರಧಾನಮಂತ್ರಿ

ಅಭಿವೃದ್ಧಿ ಹೊಂದಿದ ಭಾರತವಾಗಲು ಮೊದಲ ಷರತ್ತು ಸ್ಥಳೀಯರ ಪರವಾಗಿ ಧ್ವನಿ ಎತ್ತುವ ಮೂಲಕ "ಆತ್ಮನಿರ್ಭರ" ಆಗುವುದು: ಪ್ರಧಾನಮಂತ್ರಿ

ಭಾರತದ ಯುವಜನರ ಸಾಮರ್ಥ್ಯದಿಂದ ಇಡೀ ಜಗತ್ತು ಆಕರ್ಷಿತವಾಗಿದೆ, ಈ ನುರಿತ- ಕೌಶಲ್ಯ ಮೈಗೂಢಿಸಿಕೊಂಡ ಯುವಜನರು ದೇಶದ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲದೆ ವಿಶ್ವದ ಅಗತ್ಯಗಳನ್ನು ಪೂರೈಸಲು ಸಿದ್ಧರಾಗಲಿದ್ದಾರೆ: ಪ್ರಧಾನಮಂತ್ರಿ

ಯಾವುದೇ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದರಿಂದ ಮತ್ತು ಅದನ್ನು ಸಂರಕ್ಷಿಸುವ ಮೂಲಕ ಮಾತ್ರ ಮುಂದೆ ಸಾಗಲು ಸಾಧ್ಯ, ನಮ್ಮ ಮಂತ್ರವೆಂದರೆ ಅಭಿವೃದ್ಧಿ ಮತ್ತು ಪರಂಪರೆ: ಪ್ರಧಾನಮಂತ್ರಿ

Posted On: 11 NOV 2024 1:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ವಡ್ತಾಲ್ ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದ 200ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀ ಸ್ವಾಮಿನಾರಾಯಣ ಅವರ ಕೃಪೆಯಿಂದ 200 ನೇ ವಾರ್ಷಿಕೋತ್ಸವ ಆಚರಣೆ ನಡೆಯುತ್ತಿದೆ ಎಂದರು. ವಿಶ್ವದಾದ್ಯಂತದ ಎಲ್ಲ ಶಿಷ್ಯರನ್ನು ಸ್ವಾಗತಿಸಿದ ಶ್ರೀ ಮೋದಿ ಅವರು, ಸ್ವಾಮಿನಾರಾಯಣ ಮಂದಿರದ ಸಂಪ್ರದಾಯದಲ್ಲಿ ಸೇವೆಯು ಅಗ್ರಗಣ್ಯವಾಗಿದೆ ಮತ್ತು ಶಿಷ್ಯರು ಇಂದು ಸೇವೆಯಲ್ಲಿ ತೊಡಗಿದ್ದಾರೆ ಎಂದರು. ಇತ್ತೀಚೆಗೆ ಮಾಧ್ಯಮಗಳಲ್ಲಿ ಸಂಭ್ರಮಾಚರಣೆಯನ್ನು ನೋಡಿ ತಮಗೆ ಸಂತೋಷವಾಗಿದೆ ಎಂದೂ  ಪ್ರಧಾನಿ ಹೇಳಿದರು.

ವಡ್ತಾಲ್ ಧಾಮದಲ್ಲಿ ನಡೆದ 200ನೇ ವರ್ಷಾಚರಣೆ ಕೇವಲ ಇತಿಹಾಸವಲ್ಲ ಎಂದು ಹೇಳಿದ ಶ್ರೀ ಮೋದಿ, ವಡ್ತಾಲ್ ಧಾಮದಲ್ಲಿ ಅತ್ಯಂತ ನಂಬಿಕೆಯಿಂದ ಬೆಳೆದ ತಮ್ಮನ್ನೂ ಒಳಗೊಂಡಂತೆ ಅನೇಕ ಶಿಷ್ಯರಿಗೆ ಇದು ಅತ್ಯಂತ ಮಹತ್ವದ ಘಟನೆಯಾಗಿದೆ ಎಂದರು. ಈ ಸಂದರ್ಭವು ಭಾರತೀಯ ಸಂಸ್ಕೃತಿಯ ನಿರಂತರ ಹರಿವಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಶ್ರೀ ಸ್ವಾಮಿನಾರಾಯಣ್ ಅವರು ವಡ್ತಾಲ್ ಧಾಮವನ್ನು ಸ್ಥಾಪಿಸಿದ 200 ವರ್ಷಗಳ ನಂತರವೂ, ಆಧ್ಯಾತ್ಮಿಕ ಪ್ರಜ್ಞೆಯನ್ನು ಜೀವಂತವಾಗಿರಿಸಲಾಗಿದೆ ಮತ್ತು ಶ್ರೀ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಶಕ್ತಿಯನ್ನು ಇಂದಿಗೂ ಅನುಭವಿಸಬಹುದು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಶ್ರೀ ಮೋದಿ ಅವರು ಮಂದಿರದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ಎಲ್ಲ ಸಂತರು ಮತ್ತು ಶಿಷ್ಯರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಭಾರತ ಸರ್ಕಾರವು ಎರಡು ನೂರು ರೂಪಾಯಿಗಳ (200) ಬೆಳ್ಳಿಯ ನಾಣ್ಯ ಮತ್ತು ನೆನಪಿನ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಈ ಚಿಹ್ನೆಗಳು ಮಹಾನ್ ಸಂದರ್ಭದ ನೆನಪುಗಳನ್ನು ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಜೀವಂತವಾಗಿರಿಸುತ್ತವೆ ಎಂದೂ ಅವರು ನುಡಿದರು.  

ಸ್ವಾಮಿನಾರಾಯಣರಿಗೆ  ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಸಂಪ್ರದಾಯದೊಂದಿಗೆ ಬಲವಾದ ವೈಯಕ್ತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧದ ಬಗ್ಗೆ ತಿಳಿದಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ರಾಷ್ಟ್ರದ ಅಭಿವೃದ್ಧಿಗಾಗಿ ಅರ್ಥಪೂರ್ಣ ಚಿಂತನೆಯ ಅವಕಾಶದೊಂದಿಗೆ ಹಿಂದೆ ಮತ್ತು ಈಗ ಸಂತರ ದೈವಿಕ ಸಹವಾಸವನ್ನು ಆನಂದಿಸಿದ್ದೇನೆ ಎಂದು ಅವರು ಹೇಳಿದರು. ಇತರ ಕಾರ್ಯಕ್ರಮಗಳಿಂದಾಗಿ ತಾವು ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಆದಾಗ್ಯೂ, ತಾನು  ವಡ್ತಾಲ್ ಧಾಮದಲ್ಲಿ ಮಾನಸಿಕವಾಗಿ ಹಾಜರಿದ್ದುದಾಗಿ ಪ್ರಧಾನಿ ಹೇಳಿದರು.

ಪೂಜ್ಯ ಸಂತ ಸಂಪ್ರದಾಯವು ಭಾರತದ ವಿಶೇಷತೆಯಾಗಿದೆ ಮತ್ತು ಒಬ್ಬ ಋಷಿ ಅಥವಾ ಸಂತ ಅಥವಾ ಮಹಾತ್ಮರು ಯಾವಾಗಲೂ ಕಷ್ಟದ ಸಮಯದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ನೂರಾರು ವರ್ಷಗಳ ಗುಲಾಮಗಿರಿಯ ನಂತರ ದೇಶವು ದುರ್ಬಲಗೊಂಡ ಮತ್ತು ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಸಮಯದಲ್ಲಿ ಭಗವಾನ್ ಸ್ವಾಮಿನಾರಾಯಣ್ ಕೂಡ ಬಂದರು ಎಂದು ಅವರು ಹೇಳಿದರು. ಭಗವಾನ್ ಸ್ವಾಮಿನಾರಾಯಣ ಮತ್ತು ಕಾಲದ ಎಲ್ಲಾ ಸಂತರು ಹೊಸ ಆಧ್ಯಾತ್ಮಿಕ ಶಕ್ತಿಯನ್ನು ನೀಡಿದ್ದಲ್ಲದೆ, ನಮ್ಮ ಆತ್ಮಗೌರವವನ್ನು ಜಾಗೃತಗೊಳಿಸಿದರು ಮತ್ತು ನಮ್ಮ ಗುರುತನ್ನು ಪುನರುಜ್ಜೀವನಗೊಳಿಸಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ದಿಕ್ಕಿನಲ್ಲಿ ಶಿಕ್ಷಾ ಪತ್ರಿ ಮತ್ತು ವಚನಾಮೃತದ ಕೊಡುಗೆ ದೊಡ್ಡದು ಮತ್ತು ಅವರ ಬೋಧನೆಗಳನ್ನು ಮೈಗೂಡಿಸಿಕೊಂಡು ಮುಂದೆ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಮಾನವೀಯತೆಯ ಸೇವೆಗೆ ಮತ್ತು ಹೊಸ ಯುಗದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುವ ಮೂಲಕ ವಡ್ತಾಲ್ ಧಾಮ್ ದೊಡ್ಡ ಸ್ಫೂರ್ತಿಯಾಗಿದೆ ಎಂದು ಶ್ರೀ ಮೋದಿ ಅವರು ಹರ್ಷ  ವ್ಯಕ್ತಪಡಿಸಿದರು. ಇದೇ ವಡ್ತಾಲ್ ಧಾಮ ಅವಕಾಶ ವಂಚಿತ  ಸಮಾಜದಿಂದ ಬಂದ ಸಾಗರಂ ಜೀ ಅವರಂತಹ ಮಹಾನ್ ಶಿಷ್ಯರನ್ನು ನೀಡಿದೆ ಎಂದು ಅವರು ಹೇಳಿದರು. ಇಂದು ಅನೇಕ ಮಕ್ಕಳಿಗೆ ಆಹಾರ, ವಸತಿ, ಶಿಕ್ಷಣದ ಜೊತೆಗೆ ಸೇವೆಗಳನ್ನು ಒದಗಿಸಲಾಗಿದೆ ಮತ್ತು ದೂರದ ಬುಡಕಟ್ಟು ಪ್ರದೇಶಗಳಲ್ಲಿ ವಡ್ತಾಲ್ ಧಾಮ್ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಬುಡಕಟ್ಟು ಪ್ರದೇಶಗಳಲ್ಲಿ ಮಹಿಳಾ ಶಿಕ್ಷಣದಂತಹ ಪ್ರಮುಖ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಬಡವರ ಸೇವೆ, ಹೊಸ ಪೀಳಿಗೆಯನ್ನು ನಿರ್ಮಿಸುವುದು, ಆಧುನಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಸಂಯೋಜಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವುದು ಮುಂತಾದ ವಡ್ತಾಲ್ ಧಾಮ್ ಇತರ ಸೇವೆಗಳನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ಎಂದಿಗೂ ನಿರಾಶೆಗೊಳಿಸದೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಸ್ವಚ್ಛತೆಯಿಂದ ಪರಿಸರದವರೆಗೆ ಅಭಿಯಾನಗಳನ್ನು ಕೈಗೊಂಡಿದ್ದಕ್ಕಾಗಿ ವಡ್ತಾಲ್ ಧಾಮದ ಸಂತರು ಮತ್ತು ಭಕ್ತರನ್ನು ಶ್ರೀ ಮೋದಿ ಶ್ಲಾಘಿಸಿದರು. ಅವರು ಅದನ್ನು ತಮ್ಮ ಸ್ವಂತ ಜವಾಬ್ದಾರಿಯಾಗಿ ಸ್ವೀಕರಿಸಿದ್ದಾರೆ ಮತ್ತು ಅದನ್ನು ತಮ್ಮ ಪೂರ್ಣ ಹೃದಯ ಮತ್ತು ಆತ್ಮದಿಂದ ಪೂರೈಸುವಲ್ಲಿ ನಿರತರಾಗಿದ್ದಾರೆ ಎಂದು ಅವರು ನುಡಿದರು. ಸ್ವಾಮಿನಾರಾಯಣ ಸಂಪ್ರದಾಯದ ಶಿಷ್ಯರು ಏಕ್ ಪೆಡ್ ಮಾ ಕೆ ನಾಮ್ ಅಭಿಯಾನದ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವುದರತ್ತ  ಶ್ರೀ ಮೋದಿ ಬೆಟ್ಟು ಮಾಡಿದರು.

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದು ಉದ್ದೇಶವನ್ನು ಹೊಂದಿದ್ದಾನೆ, ಅದು ಆತನ ಜೀವನವನ್ನು ಸಹ ನಿರ್ಧರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಉದ್ದೇಶವು ನಮ್ಮ ಮನಸ್ಸು, ಕ್ರಿಯೆ ಮತ್ತು ಮಾತುಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಜೀವನದ ಉದ್ದೇಶವನ್ನು ಕಂಡುಕೊಂಡಾಗ, ಇಡೀ ಜೀವನವು ಬದಲಾಗುತ್ತದೆ ಎಂದು ಅವರು ಹೇಳಿದರು. ಸಂತರು ಮತ್ತು ಋಷಿಮುನಿಗಳು ಪ್ರತಿ ಯುಗದಲ್ಲೂ ತಮ್ಮ ಜೀವನದ ಉದ್ದೇಶದ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ ಎಂದರು. ನಮ್ಮ ಸಮಾಜಕ್ಕೆ ಸಂತರು ಮತ್ತು ಸಾಧುಗಳು ನೀಡಿದ ಅಪಾರ ಕೊಡುಗೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಒಂದು ಉದ್ದೇಶವನ್ನು ಪೂರೈಸಲು ಇಡೀ ಸಮಾಜ ಮತ್ತು ದೇಶವು ಒಗ್ಗೂಡಿದಾಗ, ಅದು ಖಂಡಿತವಾಗಿಯೂ ಸಾಧಿಸಲ್ಪಡುತ್ತದೆ ಎಂದು ಹೇಳಿದರು. ಇದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಅವರು ಹೇಳಿದರು. ಧಾರ್ಮಿಕ ಸಂಸ್ಥೆಗಳು ಇಂದು ಯುವಜನರಿಗೆ ದೊಡ್ಡ ಉದ್ದೇಶವನ್ನು ನೀಡಿವೆ ಮತ್ತು ಇಡೀ ದೇಶವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ  ನಿರ್ದಿಷ್ಟ ಗುರಿಯೊಂದಿಗೆ ಮುಂದುವರಿಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಪವಿತ್ರ ಉದ್ದೇಶವನ್ನು ಜನರ ಬಳಿಗೆ ಕೊಂಡೊಯ್ಯುವಂತೆ ವಡ್ತಾಲ್ ಸಂತರು ಮತ್ತು ಸಾಧುಗಳು ಮತ್ತು ಇಡೀ ಸ್ವಾಮಿನಾರಾಯಣ ಕುಟುಂಬವನ್ನು ಶ್ರೀ ಮೋದಿ ಒತ್ತಾಯಿಸಿದರು. ಸ್ವಾತಂತ್ರ್ಯ ಚಳವಳಿಯನ್ನು  ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ಬಯಕೆ, ಸ್ವಾತಂತ್ರ್ಯದ ಕಿಡಿ ಒಂದು ಶತಮಾನದಿಂದ ಸಮಾಜದ ವಿವಿಧ ಮೂಲೆಗಳಿಂದ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತಲೇ ಇತ್ತು ಮತ್ತು ಜನರು ತಮ್ಮ ಸ್ವಾತಂತ್ರ್ಯದ ಉದ್ದೇಶಗಳನ್ನು, ತಮ್ಮ ಕನಸುಗಳನ್ನು, ತಮ್ಮ ಸಂಕಲ್ಪಗಳನ್ನು ತ್ಯಜಿಸಿದ ಒಂದೇ ಒಂದು ದಿನ ಅಥವಾ ಒಂದು ಕ್ಷಣವೂ ಇರಲಿಲ್ಲ ಎಂದರು. ಸ್ವಾತಂತ್ರ್ಯ ಚಳವಳಿಯಲ್ಲಿ ಕಂಡುಬರುವ ಅದೇ ರೀತಿಯ ಬಯಕೆಯು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿ ಕ್ಷಣವೂ 140 ಕೋಟಿ ದೇಶವಾಸಿಗಳಲ್ಲಿರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಗುರಿಯನ್ನು ಸಾಧಿಸಲು ಮತ್ತು ಪ್ರತಿ ಕ್ಷಣವೂ ಅದರೊಂದಿಗೆ ತಮ್ಮನ್ನು ಜೋಡಿಸಿಕೊಂಡಿರಲು  ಜನರನ್ನು ಪ್ರೇರೇಪಿಸುವಂತೆ ಅವರು ಎಲ್ಲಾ ಸಂತರು ಮತ್ತು ಶಿಷ್ಯರನ್ನು ಒತ್ತಾಯಿಸಿದರು. ಪ್ರತಿಯೊಬ್ಬರೂ ತಮ್ಮ ಸ್ಥಾನವನ್ನು ಲೆಕ್ಕಿಸದೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಕೊಡುಗೆ ನೀಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೊದಲ ಷರತ್ತು ಅದನ್ನು ಸ್ವಾವಲಂಬಿ ಭಾರತವನ್ನಾಗಿ ಮಾಡುವುದು ಮತ್ತು ಇದನ್ನು ಸಾಧಿಸಲು ಹೊರಗಿನವರ ಅಗತ್ಯವಿಲ್ಲ ಆದರೆ ಭಾರತದ 140 ಕೋಟಿ ನಾಗರಿಕರು ಬೇಕು  ಎಂದು ಅವರು ಹೇಳಿದರು. ವೋಕಲ್ ಫಾರ್ ಲೋಕಲ್ ಅನ್ನು ಉತ್ತೇಜಿಸುವ ಮೂಲಕ ಕೊಡುಗೆ ನೀಡುವಂತೆ ಶ್ರೀ ಮೋದಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದ ಶಿಷ್ಯರನ್ನು ಒತ್ತಾಯಿಸಿದರು. ಅಭಿವೃದ್ಧಿ ಹೊಂದಿದ ಭಾರತಕ್ಕೆ ದೇಶದ ಏಕತೆ ಮತ್ತು ಸಮಗ್ರತೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ನಾಶಮಾಡಲು ಪಿತೂರಿ ನಡೆಸುತ್ತಿವೆ ಎಂದು ಹೇಳಿದರು. ಇಂತಹ ಪ್ರಯತ್ನಗಳನ್ನು ಒಗ್ಗಟ್ಟಿನಿಂದ ಸೋಲಿಸುವ ಪ್ರಯತ್ನದ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯವಾಗಿದೆ ಎಂದು ಅವರು ಹೇಳಿದರು.

ಕಠಿಣ ತಪಸ್ಸಿನ ಮೂಲಕ ದೊಡ್ಡ ಗುರಿಗಳನ್ನು ಹೇಗೆ ಸಾಧಿಸಲಾಗುತ್ತದೆ, ರಾಷ್ಟ್ರವನ್ನು ನಿರ್ಮಿಸಲು ಯುವ ಮನಸ್ಸು ಹೇಗೆ ನಿರ್ಣಾಯಕ ದಿಕ್ಕನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಯುವಜನರು ರಾಷ್ಟ್ರವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಭಗವಾನ್ ಶ್ರೀ ಸ್ವಾಮಿನಾರಾಯಣ್ ಅವರ ಬೋಧನೆಗಳು ಸಾರುತ್ತವೆ ಎಂದು  ಶ್ರೀ ಮೋದಿ ಒತ್ತಿ ಹೇಳಿದರು. ಇದಕ್ಕಾಗಿ ಸಮರ್ಥ, ಮತ್ತು ವಿದ್ಯಾವಂತ ಯುವಜನರನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಸಶಕ್ತ ಮತ್ತು ನುರಿತ ಯುವಜನರು ಅಭಿವೃದ್ಧಿ ಹೊಂದಿದ ಭಾರತಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತದ ಯುವಜನರಿಗೆ ಜಾಗತಿಕ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದೂ  ಅವರು ನುಡಿದರು. ವಿಶ್ವದಲ್ಲಿ ಭಾರತದ ನುರಿತ ಮಾನವಶಕ್ತಿಯ ಬೇಡಿಕೆ ದೊಡ್ಡದಾಗಿದೆ ಮತ್ತು ಇಡೀ ಜಗತ್ತು ಭಾರತದ ಬಲವಾದ ಯುವ ಶಕ್ತಿಯಿಂದ ಆಕರ್ಷಿತವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಯುವಜನರು ದೇಶದ ಅಗತ್ಯಗಳನ್ನು ಪೂರೈಸಲು ಮಾತ್ರವಲ್ಲದೆ ವಿಶ್ವದ ಅಗತ್ಯಗಳನ್ನು ಪೂರೈಸಲು ಸಿದ್ಧರಿರುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ವ್ಯಸನಮುಕ್ತಿ ಕುರಿತು ಸ್ವಾಮಿನಾರಾಯಣ ಪಂಥದ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಯುವಜನರನ್ನು ವ್ಯಸನದಿಂದ ದೂರವಿರಿಸಲು ಮತ್ತು ಅವರನ್ನು ಮಾದಕ ದ್ರವ್ಯ ವ್ಯಸನಮುಕ್ತರನ್ನಾಗಿ ಮಾಡಲು ಕೊಡುಗೆ ನೀಡುವಂತೆ ಸಂತರು ಮತ್ತು ಶಿಷ್ಯರನ್ನು ಒತ್ತಾಯಿಸಿದರು. ಮಾದಕ ವ್ಯಸನದಿಂದ ಯುವಜನರನ್ನು ಉಳಿಸುವ ಅಭಿಯಾನಗಳು ಮತ್ತು ಪ್ರಯತ್ನಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸದಾ ಅಗತ್ಯವಾಗಿವೆ ಮತ್ತು ಅವುಗಳನ್ನು ನಿರಂತರವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಯಾವುದೇ ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುವಾಗ ಮತ್ತು ಅದನ್ನು ಸಂರಕ್ಷಿಸಿದಾಗ ಮಾತ್ರ ಪ್ರಗತಿ ಸಾಧಿಸಬಹುದು ಎಂದು ಹೇಳಿದ ಶ್ರೀ ಮೋದಿ, "ಭಾರತದ ಮಂತ್ರವೆಂದರೆ ಅಭಿವೃದ್ಧಿ ಮತ್ತು ಅದರ ಪರಂಪರೆ" ಎಂದು ಹೇಳಿದರು. ಅಯೋಧ್ಯೆಯ ಉದಾಹರಣೆಯನ್ನು ಉಲ್ಲೇಖಿಸಿ, ಸಾವಿರಾರು ವರ್ಷಗಳಷ್ಟು ಹಳೆಯದಾದ ಹಾಳು ಮಾಡಲಾಗಿದೆ ಎಂದು ಒಂದೊಮ್ಮೆ ನಂಬಲಾದ ಭಾರತದ ಪಾರಂಪರಿಕ ಕೇಂದ್ರಗಳ ವೈಭವವನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದೂ ಅವರು ಹರ್ಷದಿಂದ ನುಡಿದರು. ಕಾಶಿ, ಕೇದಾರನಾಥ, ಪಾವಗಡ, ಮೊಧೇರಾದ ಸೂರ್ಯ ದೇವಾಲಯ, ಸೋಮನಾಥದ ಪರಿವರ್ತನೆಯ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಹೊಸ ಪ್ರಜ್ಞೆ ಮತ್ತು ಹೊಸ ಕ್ರಾಂತಿ ಎಲ್ಲೆಡೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು. ನೂರಾರು ವರ್ಷಗಳಷ್ಟು ಹಳೆಯದಾದ ದೇವರು ಮತ್ತು ದೇವತೆಗಳ ಕದ್ದ ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಲಾಗುತ್ತಿದೆ ಎಂಬುದರತ್ತಲೂ  ಶ್ರೀ ಮೋದಿ ಬೆಟ್ಟು ಮಾಡಿದರು. ಲೋಥಾಲ್ ಪುನರಾಭಿವೃದ್ಧಿ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಾಂಸ್ಕೃತಿಕ ಪ್ರಜ್ಞೆಯ ಅಭಿಯಾನವು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಈ ನೆಲವನ್ನು, ಈ ದೇಶವನ್ನು ಪ್ರೀತಿಸುವ, ಅದರ ಸಂಪ್ರದಾಯಗಳನ್ನು ಪ್ರೀತಿಸುವ, ಅದರ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ, ನಮ್ಮ ಪರಂಪರೆಯನ್ನು ಹೊಗಳುವ ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ ಎಂದರು. ವಡ್ತಾಲ್ ಧಾಮದಲ್ಲಿರುವ ಭಗವಾನ್ ಸ್ವಾಮಿನಾರಾಯಣರ ಕಲಾಕೃತಿಗಳ ವಸ್ತುಸಂಗ್ರಹಾಲಯವಾದ ಅಕ್ಷರ ಭುವನ್ ಕೂಡ ಅಭಿಯಾನದ ಭಾಗವಾಗಿರುವುದಕ್ಕೆ ಶ್ರೀ ಮೋದಿ ಅವರು ಸಂತಸ ವ್ಯಕ್ತಪಡಿಸಿದರು. ಸಭಿಕರನ್ನು ಅಭಿನಂದಿಸಿದ ಶ್ರೀ ಮೋದಿ ಅವರು, ಅಕ್ಷರ ಭುವನ್ ಭಾರತದ ಅಮರ ಆಧ್ಯಾತ್ಮಿಕ ಪರಂಪರೆಯ ಭವ್ಯ ದೇವಾಲಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಸಾಮಾನ್ಯ ಉದ್ದೇಶವನ್ನು ಪೂರೈಸಲು 140 ಕೋಟಿ ಭಾರತೀಯರು ಒಗ್ಗೂಡಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ಉದ್ದೇಶವನ್ನು ಸುಲಭವಾಗಿ ಸಾಧಿಸಬಹುದು ಎಂದು ಶ್ರೀ ಮೋದಿ ಹೇಳಿದರು. ಈ ಪ್ರಯಾಣವನ್ನು ಪೂರ್ಣಗೊಳಿಸುವಲ್ಲಿ ನಮ್ಮ ಸಂತರ ಮಾರ್ಗದರ್ಶನ ಬಹಳ ಮುಖ್ಯ ಎಂದು ಅವರು ನುಡಿದರು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮತ್ತು ಭಾರತದ ಪರಂಪರೆಯ ದಾರಿದೀಪವಾಗಿರುವ ಪೂರ್ಣಕುಂಭದ ಬಗ್ಗೆ ಜಗತ್ತಿಗೆ ಮಾಹಿತಿ ಪಸರಿಸುವಂತೆ ವಿಶ್ವದಾದ್ಯಂತದಿಂದ ಬಂದಿರುವ ಎಲ್ಲ ಸಂತರಿಗೆ ಪ್ರಧಾನಿ ಮನವಿ ಮಾಡಿದರು. ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಪೂರ್ಣಕುಂಭ ಮೇಳದ ಬಗ್ಗೆ ವಿಶ್ವದಾದ್ಯಂತದ ಜನರಿಗೆ ಶಿಕ್ಷಣ ನೀಡುವಂತೆ ಮತ್ತು ವಿದೇಶಿಯರಿಗೆ ವಿವರಿಸುವಂತೆ ಅವರು ಸಂತರನ್ನು ವಿನಂತಿಸಿದರು. ಮುಂಬರುವ ಕುಂಭಮೇಳಕ್ಕೆ ಅತ್ಯಂತ ಪೂಜ್ಯಭಾವದಿಂದ ಭೇಟಿ ನೀಡಲು ವಿದೇಶದಲ್ಲಿರುವ ತಮ್ಮ ಪ್ರತಿಯೊಂದು ಶಾಖೆಯಿಂದ ಕನಿಷ್ಠ 100 ವಿದೇಶಿಯರನ್ನು ಕರೆತರಲು ಪ್ರಯತ್ನಿಸುವಂತೆ ಅವರು ಆಗ್ರಹಿಸಿದರು. ಇದು ಇಡೀ ಜಗತ್ತಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿದ್ದು, ಇದನ್ನು ಸಂತರು ಸುಲಭವಾಗಿ ಮಾಡಬಹುದು ಎಂದೂ ಅವರು ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸಿದ ಶ್ರೀ ಮೋದಿ ಅವರು, ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು ಮತ್ತು ಸ್ವಾಮಿನಾರಾಯಣ ಮಂದಿರದ ಎಲ್ಲಾ ಸಂತರು ಮತ್ತು ಶಿಷ್ಯರಿಗೆ ದ್ವಿಶತಮಾನೋತ್ಸವ ಆಚರಣೆಯ ಶುಭಾಶಯಗಳನ್ನು ಕೋರಿದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ನವೆಂಬರ್ 11ರಂದು ಗುಜರಾತ್ ವಡ್ತಾಲ್ ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದ 200ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ವಡ್ತಾಲ್ ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರವು ಅನೇಕ ದಶಕಗಳಿಂದ ಜನರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ಪ್ರಭಾವ ಬೀರುತ್ತಿದೆ.

 

 

*****


(Release ID: 2072644) Visitor Counter : 7