ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಂಟಿ ಹೇಳಿಕೆ: 7ನೇ ಭಾರತ ಮತ್ತು ಜರ್ಮನಿ ನಡುವಿನ ಅಂತರ್-ಸರ್ಕಾರಿ ಸಮಾಲೋಚನೆಗಳು(ಐಜಿಸಿ)

Posted On: 25 OCT 2024 8:25PM by PIB Bengaluru

ನಾವೀನ್ಯತೆ, ಚಲನಶೀಲತೆ ಮತ್ತು ಸುಸ್ಥಿರತೆಯೊಂದಿಗೆ ಜತೆಗೂಡಿ(ಒಟ್ಟಾಗಿ) ಅಭಿವೃದ್ಧಿ

 

ನವದೆಹಲಿಯಲ್ಲಿ 2024 ಅಕ್ಟೋಬರ್ 25ರಂದು ಆಯೋಜಿತವಾಗಿದ್ದ 7ನೇ ಸುತ್ತಿನ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನಾ(7ನೇ ಐಜಿಸಿ) ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಮಾತುಕತೆ ನಡೆಸಿದರು. ಭಾರತದ ನಿಯೋಗದಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ(ಎಂಒಎಸ್) ಮತ್ತು ಕೌಶಲ್ಯ ಅಭಿವೃದ್ಧಿ(ಎಂಒಎಸ್) ಸಚಿವಾಲಯಗಳು ಭಾಗವಹಿಸಿದ್ದವು. ಜರ್ಮನಿಯ ನಿಯೋಗದಲ್ಲಿ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ, ವಿದೇಶಾಂಗ ವ್ಯವಹಾರಗಳು, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳು ಮತ್ತು ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯಗಳು ಭಾಗವಹಿಸಿದ್ದವು. ಅಲ್ಲದೆ, ಜರ್ಮನಿಯ ಹಣಕಾಸು, ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕರ ರಕ್ಷಣೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಇಲಾಖೆಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

2. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಆಗಿ ಭಾರತಕ್ಕೆ 3ನೇ ಬಾರಿಗೆ ಭೇಟಿ ನೀಡಿರುವ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಭಾರತ ಮತ್ತು ಜರ್ಮನಿ ನಡುವಿನ ಕಾರ್ಯತಂತ್ರ ಸಹಭಾಗಿತ್ವವನ್ನು ಮುನ್ನಡೆಸುವಲ್ಲಿ ಮತ್ತು ಆಳವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸರ್ಕಾರ, ಉದ್ಯಮ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ವಲಯದಾದ್ಯಂತ ದ್ವಿಪಕ್ಷೀಯ ಸಂಬಂಧ ಮತ್ತು ಮಾತುಕತೆಯಲ್ಲಿ ಆಗಿರುವ ಪರಿಷ್ಕೃತ ಬೆಳವಣಿಗೆಯ ಆವೇಗವನ್ನು ಇಬ್ಬರೂ ನಾಯಕರು ಪ್ರಾಮಾಣಿಕವಾಗಿ ಶ್ಲಾಘಿಸಿದರು.

3. ಜರ್ಮನಿ, ಭಾರತ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ನಡುವಿನ ಆರ್ಥಿಕ ಸಂಬಂಧಗಳು ಮತ್ತು ಕಾರ್ಯತಂತ್ರ ಪಾಲುದಾರಿಕೆಗಳನ್ನು ಬಲಪಡಿಸುವಲ್ಲಿ 7ನೇ ಐಜಿಸಿ ಸಭೆಗೆ ಸಮಾನಾಂತರವಾಗಿ ನವದೆಹಲಿಯಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಕಾನ್ಫರೆನ್ಸ್ ಆಫ್ ಜರ್ಮನ್ ಬ್ಯುಸಿನೆಸ್(ಎಪಿಕೆ) ಸಮಾವೇಶದ ಮಹತ್ವಕ್ಕೆ ಇಬ್ಬರೂ ನಾಯಕರು ಒತ್ತು ನೀಡಿದರು. ಒಟ್ಟಾರೆಯಾಗಿ. 2024ರ ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸುವ ನಿರ್ಧಾರವು ಇಂಡೋ-ಪೆಸಿಫಿಕ್ ವಲಯ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ.

4. "ನಾವೀನ್ಯತೆ, ಚಲನಶೀಲತೆ ಮತ್ತು ಸುಸ್ಥಿರತೆಯೊಂದಿಗೆ ಒಟ್ಟಾಗಿ ಅಭಿವೃದ್ಧಿ ಹೊಂದುವುದು ಅಥವಾ ಬೆಳೆಯುವುದು" ಎಂಬ ಧ್ಯೇಯವಾಕ್ಯದ ಅಡಿ, 7ನೇ ಐಜಿಸಿ ಸಮ್ಮೇಳನವು ತಂತ್ರಜ್ಞಾನ ಮತ್ತು ನಾವೀನ್ಯತೆ, ಕಾರ್ಮಿಕರು ಮತ್ತು ಪ್ರತಿಭೆಗಳ ವಲಸೆ ಮತ್ತು ಚಲನಶೀಲತೆ, ಹವಾಮಾನ ಕ್ರಮ, ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಆರ್ಥಿಕ, ರಕ್ಷಣೆ ಮತ್ತು ಕಾರ್ಯತಂತ್ರದ ಮೇಲೆ ನಿರ್ದಿಷ್ಟವಾಗಿ ಒತ್ತು ನೀಡಿದೆ. ಸಹಕಾರ, ವ್ಯಾಪಾರ, ಹೂಡಿಕೆ, ರಕ್ಷಣೆ, ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ, ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ಉದಯೋನ್ಮುಖ ತಂತ್ರಜ್ಞಾನಗಳು, ಅಭಿವೃದ್ಧಿ ಸಹಕಾರ, ಸಂಸ್ಕೃತಿ, ಶಿಕ್ಷಣ, ಸುಸ್ಥಿರ ಚಲನಶೀಲತೆ, ಸುಸ್ಥಿರ ಸಂಪನ್ಮೂಲ ನಿರ್ವಹಣೆ, ಜೀವವೈವಿಧ್ಯ, ಹವಾಮಾನ ಚೇತರಿಕೆ ಮತ್ತು ಜನರ-ಜನರ ನಡುವಿನ ಸಂಬಂಧಗಳನ್ನು ವ್ಯಾಪಿಸಿರುವ ನಮ್ಮ ಬಹುಮುಖಿ ಪಾಲುದಾರಿಕೆಗೆ ಪ್ರಮುಖ ಚಾಲಕರಾಗಿದ್ದೇವೆ ಎಂದು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.

5. ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಇಂಡೋ-ಜರ್ಮನ್ ಸಹಕಾರ ಮಾರ್ಗಸೂಚಿಗಳನ್ನು ಸಾಂಸ್ಥಿಕಗೊಳಿಸಿದ ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ಸಹಕಾರ ಕುರಿತ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ 2024ನೇ ವರ್ಷವು ಉಭಯ ದೇಶಗಳ ನಡುವಿನ ಸಂಬಂಧದ 50ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತಿದೆ. ಈ ಸಂದರ್ಭದಲ್ಲಿ, 7ನೇ ಐಜಿಸಿ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿ ನಡುವಿನ ನಿಕಟ ಸಂಬಂಧ ಪರಿಷ್ಕರಿಸಲು ಮತ್ತು ಸಹಕಾರದ ಪ್ರಮುಖ ಆಧಾರಸ್ತಂಭವಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಗತಿಗೆ ಆದ್ಯತೆ ನೀಡಲು ಅವಕಾಶವನ್ನು ಪ್ರಸ್ತುತಪಡಿಸಿತು.

6. 6ನೇ ಐಜಿಸಿ ಸಭೆ ನಡೆದ ಸಮಯದಲ್ಲಿ, ಎರಡೂ ಸರ್ಕಾರಗಳು ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ(ಜಿಎಸ್ ಡಿಪಿ) ಘೋಷಿಸಿದ್ದವು. ಇದು ಕ್ಷೇತ್ರದಲ್ಲಿ ದ್ವಿಪಕ್ಷೀಯ ಸ್ವರೂಪಗಳು ಮತ್ತು ಜಂಟಿ ಉಪಕ್ರಮಗಳಿಗೆ ಒಂದು ರಕ್ಷಣಾತ್ಮಕ ಪಾಲುದಾರಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ತರುವಾಯ, ಎರಡೂ ಕಡೆಯವರು 2022 ಡಿಸೆಂಬರ್ ನಲ್ಲಿ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ(ಎಂಎಂಪಿಎ)ಕ್ಕೆ ಸಹಿ ಹಾಕಿವೆ. "ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಹಕಾರವನ್ನು ಹೆಚ್ಚಿಸಲು 2023 ಫೆಬ್ರವರಿಯಲ್ಲಿ ಭಾರತ-ಜರ್ಮನಿ ಮುನ್ನೋಟ"  ಪ್ರಾರಂಭಿಸಲಾಗಿದೆ. 6ನೇ ಐಜಿಸಿಯ ಫಲಿತಾಂಶಗಳನ್ನು ನೆನಪಿಸಿಕೊಳ್ಳಲು ಮತ್ತು ವಿವಿಧ ಒಪ್ಪಂದಗಳ ಮೂಲಕ ತೀರ್ಮಾನಿಸಲು ಎರಡೂ ಸರ್ಕಾರಗಳು "ಭಾರತ-ಜರ್ಮನಿ ನಾವೀನ್ಯತೆ ಮತ್ತು ತಂತ್ರಜ್ಞಾನ ಪಾಲುದಾರಿಕೆ ಮಾರ್ಗಸೂಚಿ" ಪ್ರಾರಂಭಿಸಿದವು. ಅಲ್ಲದೆ, "ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಮಾರ್ಗಸೂಚಿ" ಪರಿಚಯಿಸಿದವು, ಹಸಿರು ಹೈಡ್ರೋಜನ್‌ನ ಮಾರುಕಟ್ಟೆ ಉತ್ತೇಜಿಸುವುದು. ಶಾಂತಿ, ಭದ್ರತೆಗಾಗಿ ಒಟ್ಟಾಗಿ ಬೆಳೆಯುವುದು ಮತ್ತು ಸ್ಥಿರತೆ ಕಾಪಾಡುವುದು ಇದರ ಗುರಿಯಾಗಿದೆ.

7. ಉಭಯ ನಾಯಕರು ಭವಿಷ್ಯದ ಒಪ್ಪಂದದ ಅಗತ್ಯವನ್ನು ಗಮನಿಸಿದರು. ವಿಶ್ವಸಂಸ್ಥೆಯ ಸನ್ನದು ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ನಿಯಮಗಳ ಆಧಾರಿತ ಅಂತಾರಾಷ್ಟ್ರೀಯ ಆದೇಶ ಸೇರಿದಂತೆ ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸಲು, ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ಶಾಂತಿ ಮತ್ತು ಸ್ಥಿರತೆ ಬೆಂಬಲಿಸಲು ಮತ್ತು ಸಂರಕ್ಷಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂ ಅಲ್ಲದ ಸದಸ್ಯತ್ವದ ವರ್ಗಗಳ ವಿಸ್ತರಣೆ ಸೇರಿದಂತೆ ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಎರಡೂ ಸರ್ಕಾರಗಳು ಹೊಂದಿರುವ ತಮ್ಮ ಬದ್ಧತೆಯನ್ನು ಪ್ರಸ್ತಾಪಿಸಿದವು. ನಿಶ್ಚಿತ ಕಾಲಮಿತಿಯೊಳಗೆ ಐಜಿಎನ್ ನಲ್ಲಿ ಪಠ್ಯ ಆಧಾರಿತ ಮಾತುಕತೆಗೆ ಇಬ್ಬರು ನಾಯಕರು ಕರೆ ನೀಡಿದರು.

8. ಪ್ರಾದೇಶಿಕ ಮತ್ತು ಜಾಗತಿಕ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸುಧಾರಣೆ ತರುವ ತುರ್ತು ಅಗತ್ಯದ ಬಲವಾದ ಜ್ಞಾಪನೆಯನ್ನು ನೀಡುತ್ತವೆ ಎಂದು ಭಾರತ ಮತ್ತು ಜರ್ಮನಿ ಒಪ್ಪಿಕೊಂಡಿವೆ. "ಗ್ರೂಪ್ ಆಫ್ ಫೋರ್(ಜಿ4)" ಸದಸ್ಯರಾಗಿ, ಭಾರತ ಮತ್ತು ಜರ್ಮನಿಯು ದಕ್ಷ, ಪರಿಣಾಮಕಾರಿ, ಪಾರದರ್ಶಕ ಮತ್ತು 21ನೇ ಶತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವ ಭದ್ರತಾ ಮಂಡಳಿ ರಚಿಸುವ ತಮ್ಮ ಕರೆಯನ್ನು ಪುನರುಚ್ಚರಿಸಿದವು.

9. ಭಯಾನಕ ಮತ್ತು ದುರಂತ ಮಾನವೀಯ ಪರಿಣಾಮಗಳನ್ನು ಒಳಗೊಂಡ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ನಾಯಕರು ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸುವುದು ಸೇರಿದಂತೆ ವಿಶ್ವಸಂಸ್ಥೆಯ ಸನ್ನದು ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿ ಕಾಪಾಡುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಜಾಗತಿಕ ಆಹಾರ ಮತ್ತು ಇಂಧನ ಭದ್ರತೆಗೆ ಸಂಬಂಧಿಸಿದಂತೆ ಉಕ್ರೇನ್‌ನಲ್ಲಿನ ಯುದ್ಧದಿಂದ ಎದುರಾಗುತ್ತಿರುವ ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಮೇಲಾಗುತ್ತಿರುವ ನಕಾರಾತ್ಮಕ ಪರಿಣಾಮಗಳನ್ನು ನಾಯಕರು ಗಮನಿಸಿದರು. ಈ ಯುದ್ಧದ ಸಂದರ್ಭದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯ ಹಂಚಿಕೊಂಡರು. ಅಂತಾರಾಷ್ಟ್ರೀಯ ಕಾನೂನು ಎತ್ತಿಹಿಡಿಯುವ ಪ್ರಾಮುಖ್ಯತೆಗೆ ಅವರು ಒತ್ತು ನೀಡಿದರು. ವಿಶ್ವಸಂಸ್ಥೆಯ ಸನ್ನದಿಗೆ ಅನುಗುಣವಾಗಿ, ಎಲ್ಲಾ ದೇಶಗಳು ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲದ ಬೆದರಿಕೆ ಅಥವಾ ಬಳಕೆಯಿಂದ ದೂರವಿರಬೇಕು ಎಂದು ಪುನರುಚ್ಚರಿಸಿದರು.

10. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ನಾಯಕರು ತಮ್ಮ ಹಂಚಿಕೆಯ ಆಸಕ್ತಿ ವ್ಯಕ್ತಪಡಿಸಿದರು. 2023 ಅಕ್ಟೋಬರ್ 7ರಂದು ಹಮಾಸ್‌ನ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು, ದೊಡ್ಡ ಪ್ರಮಾಣದ ನಾಗರಿಕ ಜೀವಗಳ ನಷ್ಟ ಮತ್ತು ಗಾಜಾದಲ್ಲಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಹಮಾಸ್‌ನಲ್ಲಿ ಬಂಧಿಸಿದ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು ತಕ್ಷಣವೇ ಕದನ ವಿರಾಮ ಘೋಷಿಸಲು ಮತ್ತು ಪ್ರವೇಶದ ತುರ್ತು ಸುಧಾರಣೆ ತರಲು ಮತ್ತು ಗಾಜಾದಾದ್ಯಂತ ಮಾನವೀಯ ಸಹಾಯ ನೀಡಲು ಅವರು ಕರೆ ನೀಡಿದರು. ಈ ಪ್ರದೇಶದಲ್ಲಿ ಸಂಘರ್ಷ ಉಲ್ಬಣಗೊಳ್ಳದಂತೆ ಮತ್ತು ಹರಡದಂತೆ ತಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಾದೇಶಿಕ ಪಾಲುದಾರರು ಜವಾಬ್ದಾರಿಯುತವಾಗಿ ಮತ್ತು ಸಂಯಮದಿಂದ ವರ್ತಿಸಬೇಕು. ನಾಗರಿಕರ ಜೀವಗಳನ್ನು ರಕ್ಷಿಸುವ ತುರ್ತು ಅಗತ್ಯವಿದೆ. ನಾಗರಿಕರಿಗೆ ಸುರಕ್ಷಿತ, ಸಮಯೋಚಿತ ಮತ್ತು ನಿರಂತರ ಮಾನವೀಯ ಪರಿಹಾರವನ್ನು ಸುಗಮಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಅಂತಾರಾಷ್ಟ್ರೀಯ ಕಾನೂನು ಅನುಸರಿಸಬೇಕು. ಲೆಬನಾನ್‌ನಲ್ಲಿ ವೇಗವಾಗಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ನಾಯಕರು ತೀವ್ರ ಕಾಳಜಿ ವ್ಯಕ್ತಪಡಿಸಿದರು. ಯುದ್ಧವನ್ನು ತುರ್ತಾಗಿ ನಿಲ್ಲಿಸಬೇಕು. ಗಾಜಾ ಮತ್ತು ಲೆಬನಾನ್‌ನಲ್ಲಿನ ಸಂಘರ್ಷಕ್ಕೆ ರಾಜತಾಂತ್ರಿಕ ವಿಧಾನಗಳಿಂದ ಮಾತ್ರ ಪರಿಹಾರ ತರಬಹುದು ಎಂದು ಒಪ್ಪಿಕೊಂಡರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1701ರ ನೀಲಿ ರೇಖೆಯ ಉದ್ದಕ್ಕೂ ರಾಜತಾಂತ್ರಿಕ ಪರಿಹಾರ ಮಾರ್ಗವನ್ನು ವಿವರಿಸುತ್ತದೆ. ಎರಡು ದೇಶಗಳ ನಾಯಕರು ಸಂಧಾನ ಪರಿಹಾರ ನಿರ್ವಹಿಸುವ  ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಇದು ಸಾರ್ವಭೌಮ, ಕಾರ್ಯಸಾಧು ಮತ್ತು ಸ್ವತಂತ್ರ ಪ್ಯಾಲೆಸ್ತೀನ್ ದೇಶ ಸ್ಥಾಪನೆಗೆ ಕಾರಣವಾಗಲಿದೆ. ಸುರಕ್ಷಿತ ಮತ್ತು ಪರಸ್ಪರ ಗುರುತಿಸಲ್ಪಟ್ಟ ಗಡಿಗಳಲ್ಲಿ, ಇಸ್ರೇಲ್‌ನೊಂದಿಗೆ ಘನತೆ ಮತ್ತು ಶಾಂತಿಯಿಂದ ಅಕ್ಕಪಕ್ಕದಲ್ಲಿ ವಾಸಿಸಲು ಮತ್ತು ಕಾನೂನುಬದ್ಧ ಭದ್ರತಾ ಕಾಳಜಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದರು.

11. ವಿಶ್ವದ 2 ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಐರೋಪ್ಯ ಒಕ್ಕೂಟ ಬಹು-ಧ್ರುವೀಯ ಜಗತ್ತಿನಲ್ಲಿ ಭದ್ರತೆ, ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಖಾತ್ರಿಪಡಿಸುವ ಸಾಮಾನ್ಯ ಆಸಕ್ತಿ ಹೊಂದಿವೆ. ಭಾರತ-ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಪಾಲುದಾರಿಕೆಯನ್ನು ಗಾಢವಾಗಿಸುವ ಪ್ರಾಮುಖ್ಯತೆಯಿದೆ. ಇದು ಎರಡೂ ಕಡೆಯವರಿಗೆ ಪ್ರಯೋಜನ ನೀಡುವುದಲ್ಲದೆ, ಜಾಗತಿಕವಾಗಿ ದೂರಗಾಮಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಪಾರ, ವಿಶ್ವಾಸಾರ್ಹ ತಂತ್ರಜ್ಞಾನಗಳು ಮತ್ತು ಭದ್ರತೆಯ ನಿರ್ಣಾಯಕ ಕ್ಷೇತ್ರಗಳಲ್ಲಿ ನಿಕಟವಾಗಿ ತೊಡಗಿಸಿಕೊಳ್ಳಲು ನವೀನ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಭಾರತ-ಇಯು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಗೆ ನಾಯಕರು ತಮ್ಮ ಬಲವಾದ ಬೆಂಬಲ ವ್ಯಕ್ತಪಡಿಸಿದರು. ಭಾರತ, ಜರ್ಮನಿ ಮತ್ತು ಇಯು ಸದಸ್ಯರಾಗಿರುವ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಇಯು ಇನಿಶಿಯೇಟಿವ್ ಗ್ಲೋಬಲ್ ಗೇಟ್‌ವೇ ಸೇರಿದಂತೆ ಪ್ರಮುಖ ಸಂಪರ್ಕ ಉಪಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯಲು ದ್ವಿಪಕ್ಷೀಯವಾಗಿ ಮತ್ತು ಇಯು ಮಟ್ಟದಲ್ಲಿ ಪ್ರಯತ್ನಗಳನ್ನು ಸಂಘಟಿಸಲು ಅವರು ಒಪ್ಪಿಕೊಂಡರು.

12. ಸಮಗ್ರ ಮುಕ್ತ ವ್ಯಾಪಾರ ಒಪ್ಪಂದ, ಹೂಡಿಕೆ ಸಂರಕ್ಷಣಾ ಒಪ್ಪಂದ ಮತ್ತು ಯುರೋಪಿಯನ್ ಯೂನಿಯನ್ ಮತ್ತು ಭಾರತದ ನಡುವಿನ ಭೌಗೋಳಿಕ ಸೂಚನೆಗಳ ಮೇಲಿನ ಒಪ್ಪಂದದ ನಿರ್ಣಾಯಕ ಪ್ರಾಮುಖ್ಯತೆ ಹೊಂದಿವೆ. ಈ ನಿಟ್ಟಿನಲ್ಲಿ  ಮಾತುಕತೆಗಳ ಶೀಘ್ರ ಮುಕ್ತಾಯಕ್ಕೆ ಇಬ್ಬರೂ ನಾಯಕರು ಕರೆ ನೀಡಿದರು.

13. ಭಯೋತ್ಪಾದಕ ನೆಲೆಗಳ ಬಳಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಇಬ್ಬರೂ ನಾಯಕರು ನಿಸ್ಸಂದಿಗ್ಧವಾಗಿ ಖಂಡಿಸಿದರು. ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿ ಉಳಿದಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್ಎಸ್ ಸಿ)ಯ 1267 ನಿರ್ಬಂಧಗಳ ಸಮಿತಿಯಿಂದ ನಿಷೇಧಿಸಲ್ಪಟ್ಟ ಗುಂಪುಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಅವರು ಕರೆ ನೀಡಿದರು. ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಭಯೋತ್ಪಾದಕ ಜಾಲಗಳನ್ನು ಅಡ್ಡಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಎರಡೂ ಕಡೆಯವರು ಎಲ್ಲಾ ದೇಶಗಳಿಗೆ ಕರೆ ನೀಡಿದರು.

14. ಮಾನವರಹಿತ ವಿಮಾನ ವ್ಯವಸ್ಥೆಗಳು, ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳ ವರ್ಚುವಲ್ ಆಸ್ತಿಗಳ ಬಳಕೆ ಮತ್ತು ಮೂಲಭೂತೀಕರಣಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ದುರುಪಯೋಗದಂತಹ ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯಿಂದ ಎದುರಾಗುವ ಬೆದರಿಕೆಗಳನ್ನು ಇಬ್ಬರೂ ನಾಯಕರು ಕಳವಳದಿಂದ ಗಮನಿಸಿದರು. ಈ ನಿಟ್ಟಿನಲ್ಲಿ, 2022ರಲ್ಲಿ ಭಾರತದಲ್ಲಿ ಯುಎನ್‌ಸಿಟಿಸಿ ಸಭೆಗಳನ್ನು ನಡೆಸುವಾಗ ಅಳವಡಿಸಿಕೊಂಡ ಭಯೋತ್ಪಾದನೆಯ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಎದುರಿಸುವ ದೆಹಲಿ ಘೋಷಣೆ ಅಳವಡಿಸಿಕೊಳ್ಳುವುದನ್ನು ನಾಯಕರು ಸ್ವಾಗತಿಸಿದರು.

15. ಭಯೋತ್ಪಾದನೆ ಎದುರಿಸಲು ಮತ್ತು ನಿಟ್ಟಿನಲ್ಲಿ ಜಾಗತಿಕ ಸಹಕಾರದ ಮಾರ್ಗಸೂಚಿ ಬಲಪಡಿಸಲು ಹಂಚಿಕೆಯ ಬದ್ಧತೆಯನ್ನು ಗುರುತಿಸಿದ ಇಬ್ಬರೂ ನಾಯಕರು, ಅಕ್ರಮ ಹಣ ವರ್ಗಾವಣೆ ಮತ್ತು ಎಫ್ಎಟಿಎಫ್ ಸೇರಿದಂತೆ ಎಲ್ಲಾ ದೇಶಗಳಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುವ ವಿರುದ್ಧ ಅಂತಾರಾಷ್ಟ್ರೀಯ ಮಾನದಂಡಗಳನ್ನು ಎತ್ತಿಹಿಡಿಯುವ ಮಹತ್ವವಿದೆ. ಭಯೋತ್ಪಾದಕ ಕೃತ್ಯಗಳ ಅಪರಾಧಿಗಳನ್ನು ನ್ಯಾಯದ ಕಟಕಟಿಗೆ ತರಲು ಕರೆ ನೀಡಿದರು. ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಸಮನ್ವಯವನ್ನು ನೈಜ ಸಮಯದಲ್ಲಿ ಹಂಚಿಕೊಳ್ಳುವ ಮಾರ್ಗಗಳನ್ನು ಬಲಪಡಿಸಲು ಭಯೋತ್ಪಾದನೆ ನಿಗ್ರಹದ ಕುರಿತು ಜಂಟಿ ಕಾರ್ಯನಿರತ ಗುಂಪಿನ ನಿಯಮಿತ ಸಮಾಲೋಚನೆಗಳನ್ನು ನಡೆಸಲು ಎರಡೂ ಕಡೆಯವರು ತಮ್ಮ ಬದ್ಧತೆ ಪುನರುಚ್ಚರಿಸಿದರು. ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳ ವಿರುದ್ಧ ನಿರ್ಬಂಧಗಳು ಮತ್ತು ಮೂಲಭೂತವಾದ ಎದುರಿಸುವುದು ಮತ್ತು ಭಯೋತ್ಪಾದಕರ ಇಂಟರ್ನೆಟ್ ಬಳಕೆ ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಲನೆ, ಪದನಾಮಗಳ ಬಗ್ಗೆ ಮಾಹಿತಿಯ ನಿರಂತರ ವಿನಿಮಯಕ್ಕೆ ಬದ್ಧರಾಗಿರಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.

16. ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧ, ಅಪರಾಧಿಗಳನ್ನು ತಡೆಗಟ್ಟಲು, ನಿಗ್ರಹಿಸಲು, ತನಿಖೆ ಮಾಡಲು ಮತ್ತು ವಿಚಾರಣೆಗೆ ಒಳಪಡಿಸಲು ನಿಕಟ ಸಹಭಾಗಿತ್ವ ಖಾತ್ರಿಪಡಿಸುವ ದೃಷ್ಟಿಯಿಂದ, ಭಾರತ ಮತ್ತು ಜರ್ಮನಿ ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್ಎಟಿ)ಕ್ಕೆ ತೀರ್ಮಾನಿಸಿದವು. ಉಭಯ ದೇಶಗಳ ನಡುವಿನ ಭದ್ರತಾ ಸಹಕಾರ ಬಲಪಡಿಸುವಲ್ಲಿ ಭಾರತ-ಜರ್ಮನಿ ಎಂಎಲ್ಎಟಿ ಒಂದು ಪ್ರಮುಖ ಮೈಲಿಗಲ್ಲು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು, ಇದು ಮಾಹಿತಿ ಮತ್ತು ಪುರಾವೆಗಳ ಹಂಚಿಕೆ, ಪರಸ್ಪರ ಸಾಮರ್ಥ್ಯ ವೃದ್ಧಿ ಮತ್ತು ಉಭಯ ದೇಶಗಳ ನಡುವಿನ ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಸಕ್ರಿಯಗೊಳಿಸುತ್ತದೆ.

17. ಭದ್ರತಾ ಸಹಕಾರ ಗಾಢವಾಗಿಸುವಲ್ಲಿ ಹಂಚಿಕೆಯ ಆಸಕ್ತಿಯೊಂದಿಗೆ  ಲುದಾರರಾಗಿ ಎರಡೂ ಕಡೆಯವರು, ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆಯ ಒಪ್ಪಂದಕ್ಕೆ ಸಹಿ ಹಾಕಿದರು. ಆ ಮೂಲಕ ಭಾರತ ಮತ್ತು ಜರ್ಮನ್ ಘಟಕಗಳ ನಡುವಿನ ಸಹಕಾರ ಮತ್ತು ಸಹಯೋಗಕ್ಕಾಗಿ ಕಾನೂನು ಮಾರ್ಗಸೂಚಿ ರೂಪಿಸಿದರು ಮತ್ತು ವರ್ಗೀಕೃತ ಮಾಹಿತಿ ಹೇಗೆ ಇರಬೇಕು,  ಹೇಗೆ ನಿರ್ವಹಿಸಲಾಗುತ್ತದೆ, ಹೇಗೆ ರಕ್ಷಿಸಲಾಗುತ್ತದೆ ಮತ್ತು ಹೇಗೆ ರವಾನಿಸಲಾಗುತ್ತದೆ ಎಂಬುದರ ಕುರಿತು ಇದು ಮಾರ್ಗದರ್ಶನ ಒದಗಿಸುತ್ತದೆ.

18. ವಿಶ್ವಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಿದೇಶಾಂಗ ನೀತಿ ದೃಷ್ಟಿಕೋನಗಳನ್ನು ಉತ್ತಮವಾಗಿ ಮೆಚ್ಚುವ ದೃಷ್ಟಿಯಿಂದ, ಎರಡೂ ಸರ್ಕಾರಗಳು ಆಯಾ ವಿದೇಶಾಂಗ ಸಚಿವಾಲಯಗಳ ನಡುವೆ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ(ಡಬ್ಲ್ಯುಎಎನ್ಎ) ಕುರಿತು ಭಾರತ-ಜರ್ಮನಿ ಸಂವಾದ ಏರ್ಪಡಿಸಲು ನಿರ್ಧರಿಸಿದವು, ಇದು ದೀರ್ಘಾವಧಿಯವರೆಗೆ ಇರುತ್ತದೆ. ಆಫ್ರಿಕಾ ಮತ್ತು ಪೂರ್ವ ಏಷ್ಯಾದ ಮೇಲಿನ ಸಂವಾದ ಕಾರ್ಯವಿಧಾನಗಳು. ನೀತಿ ಯೋಜನೆ, ಸೈಬರ್-ಸುರಕ್ಷತೆ, ಸೈಬರ್ ಸಮಸ್ಯೆಗಳು ಮತ್ತು ವಿಶ್ವಸಂಸ್ಥೆ ಸೇರಿದಂತೆ ಪರಸ್ಪರ ಕಾಳಜಿಯ ಪ್ರಮುಖ ವಿಷಯಾಧಾರಿತ ವಿಷಯಗಳ ಕುರಿತು ನಿಯಮಿತ ಸಮಾಲೋಚನೆಗಳಿಗೆ ಎರಡೂ ಸರ್ಕಾರಗಳು ತೃಪ್ತಿ ವ್ಯಕ್ತಪಡಿಸಿವೆ.

19. ಚಿಂತಕರ ಚಾವಡಿಗಳು ಮತ್ತು ವಿದೇಶಿ ಮತ್ತು ಭದ್ರತಾ ನೀತಿ ತಜ್ಞರು ಸೇರಿದಂತೆ ಪರಸ್ಪರರ ದೃಷ್ಟಿಕೋನಗಳ ಆಳವಾದ ತಿಳುವಳಿಕೆ ಹೊಂದುವ ಅಗತ್ಯವನ್ನು ಎರಡೂ ಸರ್ಕಾರಗಳು ಗುರುತಿಸಿದವು. ಭಾರತೀಯ ಜಾಗತಿಕ ವ್ಯವಹಾರಗಳ ಮಂಡಳಿ  (ಐಸಿಡಬ್ಲ್ಯುಎ), ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ(ಆರ್ ಐಎಸ್) ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಮತ್ತು ಜರ್ಮನ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಅಂಡ್ ಏರಿಯಾ ಸ್ಟಡೀಸ್(ಜಿಐಜಿಎ), ಜರ್ಮನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಅಂಡ್ ಸೆಕ್ಯುರಿಟಿ ಅಫೇರ್ಸ್(ಎಸ್ ಡಬ್ಲ್ಯುಪಿ) ಮತ್ತು ಜರ್ಮನ್ ಫೆಡರಲ್ ವಿದೇಶಾಂಗ ಕಚೇರಿ ನಡುವಿನ ಭಾರತ-ಜರ್ಮನಿ ಟ್ರ್ಯಾಕ್ 1.5 ಸಂವಾದದ ಉಪಯುಕ್ತತೆಗೆ ನಾಯಕರು ಒತ್ತು ನೀಡಿದರು. ಈ ಸಂವಾದ ಸ್ವರೂಪದ ಮುಂದಿನ ಸಭೆಯನ್ನು 2024 ನವೆಂಬರ್ ನಲ್ಲಿ ಭಾರತ ಆಯೋಜಿಸುತ್ತಿದೆ. ಎರಡೂ ಸರ್ಕಾರಗಳು ಪೂರ್ವ ಏಷ್ಯಾದಲ್ಲಿ ಟ್ರ್ಯಾಕ್ 1.5 ಸಂವಾದ ಪ್ರಾರಂಭಿಸುವುದನ್ನು ಶ್ಲಾಘಿಸಿದ. ಈ ವಿನಿಮಯವು ಎರಡೂ ಕಡೆಯವರು ತಮ್ಮ ಪ್ರಭಾವವನ್ನು ಉತ್ತಮವಾಗಿ ಸರಿಹೊಂದಿಸಲು ಮತ್ತು ಸಂಯೋಜಿಸಲು ಸಹಾಯ ಮಾಡುತ್ತದೆ ಎಂದು ಒಪ್ಪಿಕೊಂಡರು. ಈ ವೇಗವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ, ಎರಡೂ ಕಡೆಯವರು ಟ್ರ್ಯಾಕ್ 1.5 ಸಂವಾದ ವ್ಯವಸ್ಥೆಯ  ಮುಂದಿನ ಆವೃತ್ತಿಯನ್ನು ಆದಷ್ಟು ಬೇಗ ಕರೆಯಲು ಒಪ್ಪಿಕೊಂಡರು.

20. ಮುಕ್ತ, ತೆರೆದ, ಎಲ್ಲರನ್ನೂ ಒಳಗೊಂಡ ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ವಲಯ ಉತ್ತೇಜಿಸಲು ಎರಡೂ ರಾಷ್ಟ್ರಗಳು ಬದ್ಧವಾಗಿವೆ.  ಅಂತಾರಾಷ್ಟ್ರೀಯ ಕಾನೂನು, ಸಾರ್ವಭೌಮತ್ವಕ್ಕಾಗಿ ಪರಸ್ಪರ ಗೌರವ, ಮತ್ತು ವಿವಾದಗಳ ಶಾಂತಿಯುತ ಪರಿಹಾರ ಒದಗಿಸಲು ಪರಿಣಾಮಕಾರಿಯಾದ ಪ್ರಾದೇಶಿಕ ಸಂಸ್ಥೆಗಳಿಂದ ಬೆಂಬಲಿತವಾಗಿದೆ. ಆಸಿಯಾನ್ ಏಕತೆ ಮತ್ತು ಸಾರ್ವಭೌಮತೆಗೆ ತಮ್ಮ ಅಚಲ ಬೆಂಬಲ ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದ(ಐಪಿಒಐ) ಸಾಮರ್ಥ್ಯ ನಿರ್ಮಾಣದಲ್ಲಿ ಜರ್ಮನಿಯ ನಾಯಕತ್ವವನ್ನು ಭಾರತ ಸರ್ಕಾರ ಸ್ವಾಗತಿಸಿತು. 2022ರಲ್ಲಿ ಜರ್ಮನಿಯು ಅಂತಾರಾಷ್ಟ್ರೀಯ ಹವಾಮಾನ ಉಪಕ್ರಮದ ಅಡಿ, ಸ್ಪರ್ಧಾತ್ಮಕ ಕರೆಗಳ ಮೂಲಕ 20 ದಶಲಕ್ಷ ಯುರೋ ಹೂಡಿಕೆ ಮಾಡಿದ್ದು, ಇದು ಅದರ ಬದ್ಧತೆಯನ್ನು ಬಲಪಡಿಸುತ್ತದೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಹವಾಮಾನ ಸಂಬಂಧಿತ ನಷ್ಟ ಮತ್ತು ಹಾನಿಯನ್ನು ತಡೆಯಲು ಹೂಡಿಕೆ ನೆರವಿಗೆ ಬರಲಿದೆ.

21. ಜಿ-20 ಶೃಂಗಸಭೆಯ ಮೂಲಕ ಅಭಿವೃದ್ಧಿ ಕಾರ್ಯಸೂಚಿಯನ್ನು ಕೇಂದ್ರ ಸ್ಥಾನಕ್ಕೆ ತಂದು, ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಜರ್ಮನಿಯು ಭಾರತವನ್ನು ಅಭಿನಂದಿಸಿತು. ಜರ್ಮನಿಯ ಜಿ-20 ಅಧ್ಯಕ್ಷತೆ ಅವಧಿಯಲ್ಲಿ ಕಾಂಪಾಕ್ಟ್ ವಿತ್ ಆಫ್ರಿಕಾ(ಸಿಡಬ್ಲ್ಯುಎ) ಕುರಿತು ವೇದಿಕೆ ಪ್ರಾರಂಭಿಸುವುದರಿಂದ ಹಿಡಿದು ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ-20ರ ಕಾಯಂ ಸದಸ್ಯರನ್ನಾಗಿ ಮಾಡುವ ಮೂಲಕ ಜಾಗತಿಕ ದಕ್ಷಿಣಕ್ಕೆ ಪ್ರಾಧಾನ್ಯತೆ ನೀಡಿರುವುದನ್ನು ಖಚಿತಪಡಿಸುವ ತನಕ ಜಿ-20ರ ಧ್ವನಿ ಬಹುದೂರ ಸಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಬ್ರೆಜಿಲಿಯನ್ ಜಿ-20 ಅಧ್ಯಕ್ಷತೆಯಲ್ಲಿ, ವಿಶೇಷವಾಗಿ ಜಾಗತಿಕ ಆಡಳಿತ ಸುಧಾರಣೆಗಳು, ರಕ್ಷಣಾ ಮತ್ತು ಕಾರ್ಯತಂತ್ರ ಸಹಕಾರ ಬಲಪಡಿಸಲು ನಿಗದಿಪಡಿಸಿರುವ ಆದ್ಯತೆಗಳಿಗೆ ಭಾರತ ಮತ್ತು ಜರ್ಮನಿ ತಮ್ಮ ಬೆಂಬಲ ವ್ಯಕ್ತಪಡಿಸಿದವು.

22. ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಹೆಚ್ಚಿಸುವ ಹಂಚಿಕೆಯ ಗುರಿ ಗುರುತಿಸಿ, ಸಾಮಾನ್ಯ ಅಧಿಕಾರ,ಸಾಮಾನ್ಯ ಪರವಾನಗಿ(ಎಜಿಜಿ) ಆಡಳಿತದಂತಹ ಅನುಕೂಲಕರ ನಿಯಂತ್ರಕ ನಿರ್ಧಾರಗಳು ಒಳಗೊಂಡಂತೆ ವೇಗವಾಗಿ ರಫ್ತು ಅನುಮೋದನೆಗಳನ್ನು ಸುಲಭಗೊಳಿಸುವ ಜರ್ಮನ್ ಸರ್ಕಾರದ ಪ್ರಯತ್ನಗಳನ್ನು ಭಾರತ ಸರ್ಕಾರ ಸ್ವಾಗತಿಸಿತು. ಭಾರತಕ್ಕೆ ಕಾರ್ಯತಂತ್ರ ರಫ್ತುಗಳನ್ನು ಬೆಂಬಲಿಸಲು ಎರಡೂ ಕಡೆಯವರು ಬದ್ಧರಾಗಿದ್ದು, ಆಯಾ ರಕ್ಷಣಾ ಉದ್ಯಮಗಳ ನಡುವೆ ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ಜಂಟಿ ಸಂಶೋಧನೆ ಪ್ರೋತ್ಸಾಹಿಸಲು ಒಪ್ಪಿಗೆ ಸೂಚಿಸಿದರು. ಭಾರತ ಮತ್ತು ಜರ್ಮನಿ ನಡುವಿನ ರಕ್ಷಣಾ ಕೈಗಾರಿಕಾ ಪಾಲುದಾರಿಕೆ ಬಲಪಡಿಸಲು ಅಕ್ಟೋಬರ್ 24ರಂದು ನವದೆಹಲಿಯಲ್ಲಿ ನಡೆದ ರಕ್ಷಣಾ ದುಂಡುಮೇಜಿನ ಸಭೆಯನ್ನು ಎರಡೂ ಸರ್ಕಾರಗಳು ಶ್ಲಾಘಿಸಿದವು.

23. ಸಶಸ್ತ್ರ ಪಡೆಗಳ ನಡುವೆ ಹೆಚ್ಚುತ್ತಿರುವ ಸಂವಾದಗಳು ಮತ್ತು ನಿಯಮಿತ ಭೇಟಿಗಳ ಜತೆಗೆ, ಎರಡೂ ಕಡೆಯವರು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಉನ್ನತ ರಕ್ಷಣಾ ಸಮಿತಿ(ಎಚ್ ಡಿಸಿ) ಸಭೆಯನ್ನು ಭಾರತ ಮತ್ತು ಜರ್ಮನಿ ನಡುವಿನ ಕಾರ್ಯತಂತ್ರ ಪಾಲುದಾರಿಕೆಯಡಿ, ರಕ್ಷಣಾ ಸಹಕಾರ ಅಭಿವೃದ್ಧಿಪಡಿಸುವ ಪ್ರಮುಖ ಆಧಾರಸ್ತಂಭವಾಗಿ ಎದುರು ನೋಡುತ್ತಿದ್ದಾರೆ. ಭಾರತ ಮತ್ತು ಜರ್ಮನಿಯು ಯುಎನ್ ಪೀಸ್ ಕೀಪಿಂಗ್ ಸೆಂಟರ್(ಸಿಯುಎನ್ ಪಿಕೆ), ನವದೆಹಲಿ ಮತ್ತು ಜರ್ಮನಿಯಲ್ಲಿರುವ ಬುಂಡೆಸ್‌ವೆಹ್ರ್ ಯುನೈಟೆಡ್ ನೇಷನ್ಸ್ ಟ್ರೈನಿಂಗ್ ಸೆಂಟರ್(ಜಿಎಎಫ್ ಯುಎನ್ ಟಿಸಿ) ನಡುವಿನ ಶಾಂತಿಪಾಲನಾ ಸಂಬಂಧಿತ ತರಬೇತಿ ಸಹಕಾರ ಅಂತಿಮಗೊಳಿಸಲು ಒಪ್ಪಿಕೊಂಡಿವೆ ಮತ್ತು 2025 ರಲ್ಲಿ ಬರ್ಲಿನ್ ನಲ್ಲಿ ನಡೆಯಲಿರುವ ಶಾಂತಿಪಾಲನಾ ಸಚಿವರ ಸಭೆ ಎದುರು ನೋಡುತ್ತಿದೆ.

24. ಸಮೃದ್ಧಿ, ಭದ್ರತೆ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಗೆ ಎರಡೂ ಕಡೆಯವರು ಪ್ರಾಮುಖ್ಯತೆ ನೀಡಿದರು. ಇಂಡೋ-ಪೆಸಿಫಿಕ್‌ ಅಭಿವೃದ್ಧಿಯ ಫೆಡರಲ್ ಸರ್ಕಾರದ ನೀತಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜರ್ಮನಿಯು ಪ್ರದೇಶದೊಂದಿಗೆತೊಡಗಿಸಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಇಂಡೋ-ಪೆಸಿಫಿಕ್ ಸೇರಿದಂತೆ ಎಲ್ಲಾ ಸಾಗರ ಭಾಗಗಳಲ್ಲಿ 1982ರ ಸಾಗರ ಕಾನೂನುಗಳು(ಯುಎನ್ ಸಿಎಲ್ಒಎಸ್) 1982ರ ವಿಶ್ವಸಂಸ್ಥೆಯ ಒಡಂಬಡಿಕೆಯಲ್ಲಿ ಪ್ರತಿಬಿಂಬಿಸಿದಂತೆ, ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಂಚಾರ ಸ್ವಾತಂತ್ರ್ಯ ಮತ್ತು ಅಡೆತಡೆಯಿಲ್ಲದ ಸಾಗರ ಮಾರ್ಗಗಳ ಪ್ರಾಮುಖ್ಯತೆಗೆ ಎರಡೂ ಕಡೆಯವರು ಒತ್ತು ನೀಡಿದರು. ಈ ಸಂದರ್ಭದಲ್ಲಿ, ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಪರಸ್ಪರ ಸರಕು ಸಾಗಣೆ ಬೆಂಬಲ ಒದಗಿಸುವ ಆಧಾರ ಸ್ಥಾಪಿಸಲು ಭಾರತ ಮತ್ತು ಜರ್ಮನಿಯ ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಸರಕು ಸಾಗಣೆ ಬೆಂಬಲ ಮತ್ತು ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದ ಅಂತಿಮಗೊಳಿಸುವ ಜಂಟಿ ಉದ್ದೇಶವನ್ನು ಎರಡೂ ಸರ್ಕಾರಗಳು ಘೋಷಿಸಿದವು. ಇಂಡೋ-ಪೆಸಿಫಿಕ್‌ನಲ್ಲಿ ಸಹಕಾರ ಗಾಢವಾಗಿಸುವ ದೃಷ್ಟಿಯಿಂದ, ಐಒಆರ್ ನಲ್ಲಿನ ಸಾಗರ ಸಂಚಾರ ಮೇಲ್ವಿಚಾರಣೆ ಮಾಡಲು ಜರ್ಮನಿಯು, ಗುರುಗ್ರಾಮ್‌ನಲ್ಲಿರುವ ಮಾಹಿತಿ ಫ್ಯೂಷನ್ ಸೆಂಟರ್ - ಹಿಂದೂ ಮಹಾಸಾಗರ ಪ್ರದೇಶ(ಐಎಫ್ ಸಿ-ಐಒಆರ್) ಇಲ್ಲಿಗೆ ಸಂಪರ್ಕ ಅಧಿಕಾರಿಯನ್ನು ಕಾಯಂ ಆಗಿ ನಿಯೋಜಿಸುತ್ತದೆ. ಇದರಿಂದ ಪ್ರದೇಶದಲ್ಲಿ ಇನ್ನಷ್ಟು ನಿಕಟ ಸಹಕಾರ ಹೆಚ್ಚಿಸುತ್ತದೆ.

25. ಭದ್ರತೆ ಮತ್ತು ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಜರ್ಮನಿಯ ಹೆಚ್ಚುತ್ತಿರುವ ತೊಡಗಿಸಿಕೊಳ್ಳುವಿಕೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. 2024 ಆಗಸ್ಟ್ ನಲ್ಲಿ ನಡೆದ ತರಂಗ್ ಶಕ್ತಿ ಕಸರತ್ತು ಅಥವಾ ಸಮರಭ್ಯಾಸ ಸಮಯದಲ್ಲಿ ಭಾರತ ಮತ್ತು ಜರ್ಮನ್ ವಾಯುಪಡೆಗಳು ತೋರಿದ ಯಶಸ್ವಿ ಸಹಕಾರವನ್ನು ಶ್ಲಾಘಿಸಿದರು. ಅದಲ್ಲದೆ, ಗೋವಾ ಬಂದರು ಸಮರಭ್ಯಾಸದ ಜತೆಗೆ, ಜರ್ಮನ್ ನೇವಲ್ ಫ್ರಿಗೇಟ್ "ಬಾಡೆನ್-ವುರ್ಟೆಂಬರ್ಗ್"ನ ಯುದ್ಧ ಬೆಂಬಲ ಹಡಗು "ಫ್ರಾಂಕ್‌ಫರ್ಟ್ ಆಮ್ ಮೇನ್" ಜತೆಗೆ ಭಾರತೀಯ ನೌಕಾಪಡೆಯ ಜಂಟಿ ನೌಕಾ ವ್ಯಾಯಾಮ, ಅದಲ್ಲದೆ, 2024 ಜುಲೈ ನಲ್ಲಿ ಹ್ಯಾಂಬರ್ಗ್‌ನಲ್ಲಿ ಭಾರತೀಯ ನೌಕಾ ಹಡಗು ಐಎನ್ಎಸ್ ತಬರ್ ನಡೆಸಿದ ಬಂದರು ಸಮರಭ್ಯಾಸವನ್ನು ಜರ್ಮನಿ ಸ್ವಾಗತಿಸಿತು.

26. ಐರೋಪ್ಯ ಒಕ್ಕೂಟದ ಕಾರ್ಯವಿಧಾನಗಳ ಅಡಿ ಮತ್ತು ಇತರೆ ಪಾಲುದಾರರೊಂದಿಗೆ ದ್ವಿಪಕ್ಷೀಯವಾಗಿ ಸಂಶೋಧನೆ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಭದ್ರತೆ ಮತ್ತು ರಕ್ಷಣಾ ವಿಷಯಗಳ ಮೇಲೆ ದ್ವಿಪಕ್ಷೀಯ ವಿನಿಮಯ ತೀವ್ರಗೊಳಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ. ಈ ನಿಟ್ಟಿನಲ್ಲಿ, ತಂತ್ರಜ್ಞಾನ ಸಹಭಾಗಿತ್ವ, ಉತ್ಪಾದನೆ, ಸಹ-ಉತ್ಪಾದನೆ ಮತ್ತು ರಕ್ಷಣಾ ವೇದಿಕೆಗಳು ಮತ್ತು ಸಲಕರಣೆಗಳ ಸಹ-ಅಭಿವೃದ್ಧಿಯ ಮೇಲೆ ನಿರ್ದಿಷ್ಟ ಗಮನ ಹೊಂದಿರುವ ರಕ್ಷಣಾ ವಲಯದಲ್ಲಿ ಹೆಚ್ಚಿನ ಉದ್ಯಮ ಮಟ್ಟದ ಸಹಕಾರ ಬೆಂಬಲಿಸಲು ಒಪ್ಪಿದ್ದಾರೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ವಿಜ್ಞಾನ ಮತ್ತು ನಾವೀನ್ಯತೆಗಾಗಿ ಪಾಲುದಾರಿಕೆ ಹೊಂದಲು ಒಸಿಸಿಎಆರ್ ಯುರೋಡ್ರೋನ್ ಪ್ರೋಗ್ರಾಂ(ಜಂಟಿ ಆರ್ಮಮೆಂಟ್ ಕೋ-ಆಪರೇಷನ್)ನಲ್ಲಿ ವೀಕ್ಷಕ ಸ್ಥಾನಮಾನಕ್ಕಾಗಿ ಭಾರತ ಸಲ್ಲಿಸಿರುವ ಅರ್ಜಿಯನ್ನು ಜರ್ಮನಿ ಸ್ವಾಗತಿಸಿದೆ.

27. ಉಭಯ ದೇಶಗಳ ನಡುವಿನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 50 ವರ್ಷಗಳ ಯಶಸ್ವಿ ಸಹಭಾಗಿತ್ವದ ಬಗ್ಗೆ ಇಬ್ಬರೂ ನಾಯಕರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. 'ಭಾರತ-ಜರ್ಮನಿ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಪಾಲುದಾರಿಕೆ ಮಾರ್ಗಸೂಚಿ' ಪ್ರಾರಂಭಿಸುವ ಮೂಲಕ ಅದನ್ನು ಮತ್ತಷ್ಟು ವಿಸ್ತರಿಸಲು ತಮ್ಮ ಬೆಂಬಲ ಪುನರುಚ್ಚರಿಸಿದರು. ನವೀಕರಿಸಬಹುದಾದ ಇಂಧನ, ಸ್ಟಾರ್ಟಪ್‌ಗಳು, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ತಂತ್ರಜ್ಞಾನಗಳು, ಹವಾಮಾನ ಅಪಾಯ ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆ, ಹವಾಮಾನ ಬದಲಾವಣೆ ಅಳವಡಿಕೆ ಮತ್ತು ಅಗ್ರೋಎಕಾಲಜಿ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಉಭಯ ದೇಶಗಳ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಬೆಂಬಲ ನೀಡಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು. ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಭವಿಷ್ಯದ ಸಮೃದ್ಧಿ, ಅಭಿವೃದ್ಧಿ ಮತ್ತು ಸಂಭವನೀಯ ಸಹಕಾರಕ್ಕಾಗಿ ಪ್ರಮುಖ ಮತ್ತು ಭರವಸೆಯ ಪ್ರದೇಶವೆಂದು ಗುರುತಿಸಿದ್ದಾರೆ.

28. ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವಿನಿಮಯ ಮತ್ತು ಜರ್ಮನಿಯಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಉದ್ಯಮ-ಶೈಕ್ಷಣಿಕ ರಂಗದ ಕಾರ್ಯತಂತ್ರ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಗಳನ್ನು ಉತ್ತೇಜಿಸುವಲ್ಲಿ ಇಂಡೋ-ಜರ್ಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ(ಐಜಿಎಸ್ ಟಿಸಿ)ದ ಪ್ರಮುಖ ಪಾತ್ರವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. ಉಭಯ ನಾಯಕರು ಐಜಿಎಸ್ ಟಿಸಿಯ ಇತ್ತೀಚಿನ ಉಪಕ್ರಮಗಳನ್ನು ಸ್ವಾಗತಿಸಿದರು. ಐಜಿಎಸ್ ಟಿಸಿಯ ಪ್ರಾಮುಖ್ಯತೆ ಅರ್ಥ ಮಾಡಿಕೊಂಡು, ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷೇತ್ರದಲ್ಲಿ 2+2 ಯೋಜನೆಗಳನ್ನು ಬೆಂಬಲಿಸುವ ಜಂಟಿ ಘೋಷಣೆಗೆ ಸಹಿ ಹಾಕಿದರು. ಇಬ್ಬರೂ ನಾಯಕರು ಹಂಚಿತ ಮೌಲ್ಯ ಮತ್ತು ನಾವೀನ್ಯತೆ ನೇತೃತ್ವದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನೆಯಿಂದ ನಡೆಸಲ್ಪಡುವ ಹೊಸ ಪಾಲುದಾರಿಕೆಗಳನ್ನು ವಿಸ್ತರಿಸಲು ಮತ್ತು ರೂಪಿಸಲು ತಮ್ಮ ಇಚ್ಛೆ ವ್ಯಕ್ತಪಡಿಸಿದರು.

29. 2 ದೇಶಗಳ ನಡುವೆ ಮೊದಲ ಮೂಲ ಸಂಶೋಧನಾ ಒಕ್ಕೂಟ ಮಾದರಿ ಪ್ರಾರಂಭಿಸಲು ಉಭಯ ನಾಯಕರು ಒಪ್ಪಿಕೊಂಡರು. ಅವುಗಳೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್‌ಟಿ) ಮತ್ತು ಜರ್ಮನ್ ರಿಸರ್ಚ್ ಫೌಂಡೇಶನ್(ಡಿಎಫ್‌ಜಿ) ಜಂಟಿಯಾಗಿ ಇಂಟರ್ ನ್ಯಾಷನಲ್ ರಿಸರ್ಚ್ ಟ್ರೈನಿಂಗ್ ಗ್ರೂಪ್(ಐಆರ್‌ಟಿಜಿ) ಆರಂಭಿಸಲಿವೆ. ತಿರುವನಂತಪುರಂನ ಐಐಎಸ್ಇಆರ್ ಸಂಸ್ಥೆ ಮತ್ತು ವೂರ್ಜ್‌ಬರ್ಗ್ ವಿಶ್ವವಿದ್ಯಾಲಯದ ಮೊದಲ ಗುಂಪಿನ ಸಂಶೋಧಕರು ಫೋಟೊಲುಮಿನೆಸೆನ್ಸ್‌ನ ಸುಪ್ರಮೋಲಿಕ್ಯುಲರ್ ಮ್ಯಾಟ್ರಿಸಸ್‌ನಲ್ಲಿ ಸಂಶೋಧನೆ ನಡೆಸಲಿದ್ದಾರೆ. ವಿಜ್ಞಾನ ಮತ್ತು ನಾವೀನ್ಯತೆ ವಲಯವನ್ನು ಆಧಾರವಾಗಿಟ್ಟುಕೊಂಡು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ವೈಜ್ಞಾನಿಕ ನಾವೀನ್ಯತೆ ಮತ್ತು ಪೋಷಣಾ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸಲು, ಸಾಮೂಹಿಕ ಪರಿಣತಿ ಮತ್ತು ಸಾಮರ್ಥ್ಯವನ್ನು ಹತೋಟಿಗೆ ತರಲು ಇಂಡೋ-ಜರ್ಮನ್ ಇನ್ನೋವೇಶನ್ ಮತ್ತು ಇನ್‌ಕ್ಯುಬೇಶನ್ ಎಕ್ಸ್‌ಚೇಂಜ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಅವರು ತಮ್ಮ ಇಚ್ಛೆ ವ್ಯಕ್ತಪಡಿಸಿದರು.

30. ಜರ್ಮನಿಯ ಫೆಸಿಲಿಟಿ ಫಾರ್ ಆ್ಯಂಟಿ-ಪ್ರೋಟಾನ್ ಮತ್ತು ಅಯಾನ್ ರಿಸರ್ಚ್(ಎಫ್ಎಐಆರ್) ಮತ್ತು ಡ್ಯೂಷೆ ಎಲೆಕ್ಟ್ರೋನೆನ್ ಸಿಂಕ್ರೊಟ್ರಾನ್(ಡಿಇಎಸ್ ವೈ)ನಲ್ಲಿನ ಮೆಗಾ-ಸೈನ್ಸ್ ಸೌಲಭ್ಯಗಳಲ್ಲಿ ಭಾರತದ ಭಾಗವಹಿಸುವಿಕೆಯಿಂದ ಉದಾಹರಿಸಲ್ಪಟ್ಟಿರುವ ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆ ಬಗ್ಗೆ ಇಬ್ಬರೂ ನಾಯಕರು ತಮ್ಮ ಮೆಚ್ಚುಗೆ ಮತ್ತು ತೃಪ್ತಿ ವ್ಯಕ್ತಪಡಿಸಿದರು. ಎಫ್ಎಐಆರ್ ಸೌಲಭ್ಯವನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಅವರು ಹಣಕಾಸು ಸೇರಿದಂತೆ ತಮ್ಮೆಲ್ಲಾ ಬದ್ಧತೆಯನ್ನು ವಿಸ್ತರಿಸಿದರು. ಸಿಂಕ್ರೋಟ್ರಾನ್ ವಿಕಿರಣ ಸೌಲಭ್ಯ ಪೆಟ್ರಾ-III ಮತ್ತು ಡಿಇಎಸ್ ವೈನಲ್ಲಿ ಉಚಿತ-ಎಲೆಕ್ಟ್ರಾನ್ ಲೇಸರ್ ಸೌಲಭ್ಯ – ಫ್ಲ್ಯಾಶ್ ಸಹಕಾರ ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.

31. ಒಟ್ಟಿಗೆ 2 ಪದವಿ ಮತ್ತು ಜಂಟಿ ಪದವಿಗಳನ್ನು ಸುಗಮಗೊಳಿಸುವ ಹಾಗೂ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಕಾರಿ ಸಂಶೋಧನೆ ಮತ್ತು ಶೈಕ್ಷಣಿಕ ಮತ್ತು ಸಾಂಸ್ಥಿಕ ವಿನಿಮಯ ಹೆಚ್ಚಿಸುವ ಉನ್ನತ ಶಿಕ್ಷಣದಲ್ಲಿ ಸ್ಥಿರವಾಗಿ ಹೆಚ್ಚುತ್ತಿರುವ ಪಾಲುದಾರಿಕೆಯನ್ನು ಎರಡೂ ಸರ್ಕಾರಗಳು ಸ್ವಾಗತಿಸಿದವು. ನಿರ್ದಿಷ್ಟವಾಗಿ ಹೇಳುವುದಾದರೆ, ಟಿಯು ಡ್ರೆಸ್ಡೆನ್, ಆರ್ ಡಬ್ಲ್ಯುಟಿಎಚ್-ಆಚೆನ್ ಮತ್ತು ಐಐಟಿ-ಮದ್ರಾಸ್(ಐಐಟಿಎಂ)ನ ಜಂಟಿ ಉಪಕ್ರಮವಾದ "ವಾಟರ್ ಸೆಕ್ಯುರಿಟಿ & ಗ್ಲೋಬಲ್ ಚೇಂಜ್"ನಲ್ಲಿ ಮೊದಲ ಇಂಡೋ-ಜರ್ಮನ್ ಜಂಟಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೆ ಎರಡೂ ಕಡೆಯವರು ತಮ್ಮ ಮೆಚ್ಚುಗೆ ಮತ್ತು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಡಿಎಎಡಿ ಜೊತೆಗೆ ಟಿಯು ಡ್ರೆಸ್ಡೆನ್ ಮತ್ತು ಐಐಟಿ-ಎಂನ ಹೊಸ ಉಪಕ್ರಮವು ಬೋಧನೆ, ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ದ್ವಿಪಕ್ಷೀಯ ಸಹಕಾರ ಗಾಢಗೊಳಿಸಲು "ಟ್ರಾನ್ಸ್ ಕ್ಯಾಂಪಸ್" ಸ್ಥಾಪಿಸುವ ಒಪ್ಪಂದವನ್ನು ಅಂತಿಮಗೊಳಿಸುತ್ತದೆ. ಐಐಟಿ ಖಾರಗ್‌ಪುರ ಮತ್ತು ಡಿಎಎಡಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಎರಡೂ ಸರ್ಕಾರಗಳು ಸ್ವಾಗತಿಸಿದವು, ಇದು ಇಂಡೋ-ಜರ್ಮನ್ ವಿಶ್ವವಿದ್ಯಾಲಯದ ಸಹಕಾರ ಯೋಜನೆಗಳಿಗೆ ಜಂಟಿ ಧನಸಹಾಯವನ್ನು ಶಕ್ತಗೊಳಿಸುತ್ತದೆ. ಭಾರತೀಯ ಮತ್ತು ಜರ್ಮನ್ ವಿಶ್ವವಿದ್ಯಾಲಯಗಳ ನಡುವಿನ ಸಹಕಾರ ಎತ್ತಿ ತೋರಿಸುವ ಸ್ಪಾರ್ಕ್ (ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗದ ಉತ್ತೇಜನ ಯೋಜನೆ) ಅಡಿ, "ಜರ್ಮನ್ ಇಂಡಿಯನ್ ಅಕಾಡೆಮಿಕ್ ನೆಟ್‌ವರ್ಕ್ ಫಾರ್ ಟುಮಾರೊ"(ಜಿಐಎಎನ್ ಟಿ)ನ ಮೀಸಲಾದ ಕರೆಗೆ ಎರಡೂ ಕಡೆಯವರು ತಮ್ಮ ಬಲವಾದ ಬೆಂಬಲ ವ್ಯಕ್ತಪಡಿಸಿದರು.

32. ಭಾರತ ಮತ್ತು ಜರ್ಮನಿ ನಡುವಿನ ಡಿಜಿಟಲ್ ಮತ್ತು ತಂತ್ರಜ್ಞಾನ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ, ಎರಡೂ ಸರ್ಕಾರಗಳು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ(ಡಿಪಿಐ) ಅನುಭವ ಮತ್ತು ಪರಿಣತಿ ಹಂಚಿಕೊಳ್ಳಲು ಒಪ್ಪಿಕೊಂಡಿವೆ, ಉದಾಹರಣೆಗೆ ಎರಡೂ ದೇಶಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಪರಿವರ್ತನೆ ಹೆಚ್ಚಿಸಲು ಜರ್ಮನಿಯು ಡಿಪಿಐನಲ್ಲಿ ಭಾರತದ ಪರಿಣತಿಯನ್ನು ಮತ್ತು ಭಾರತೀಯ ಐಟಿ ಉದ್ಯಮದ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಅನ್ವೇಷಿಸಲು. ಇಂಟರ್ನೆಟ್ ಆಡಳಿತ, ತಂತ್ರಜ್ಞಾನ ನಿಯಮಗಳು, ಆರ್ಥಿಕತೆಯ ಡಿಜಿಟಲ್ ಪಿರವರ್ತನೆ ಮತ್ತು ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳಂತಹ ಡಿಜಿಟಲ್ ವಿಷಯಗಳ ವಿನಿಮಯಕ್ಕೆ ಪ್ರಮುಖ ವೇದಿಕೆಯಾಗಿ, ಇಂಡೋ-ಜರ್ಮನ್ ಡಿಜಿಟಲ್ ಡೈಲಾಗ್(ಐಜಿಡಿಡಿ) ರೂಪಿಸಿದ 2023-24ರ ಕೆಲಸದ ಯೋಜನೆಯನ್ನು ಅಂತಿಮಗೊಳಿಸುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.

33. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಡಳಿತಕ್ಕೆ ನಾವೀನ್ಯತೆ-ಸ್ನೇಹಿ, ಸಮತೋಲಿತ, ಎಲ್ಲರನ್ನೂ ಒಳಗೊಂಡ, ಮಾನವ-ಕೇಂದ್ರಿತ ಮತ್ತು ಅಪಾಯ-ಆಧಾರಿತ ಕಾರ್ಯವಿಧಾನದ ಅಗತ್ಯವನ್ನು ಗುರುತಿಸಿ, ಸುಸ್ಥಿರ ಅಭಿವೃದ್ಧಿ ಗುರಿಯನ್ನು ಮುನ್ನಡೆಸಲು ಎಐ ತಂತ್ರಜ್ಞಾನ ನಿಯಂತ್ರಿಸಲು ಎರಡೂ ಕಡೆಯವರು ಪ್ರಯತ್ನಿಸಲಿದ್ದಾರೆ. ಇಮೇಜ್ ಡಿಟೆಕ್ಷನ್ ಮತ್ತು ಎಐನಂತಹ ಡಿಜಿಟಲ್ ಪರಿಹಾರಗಳು ರೈತರಿಗೆ ಸಹಾಯ ಮಾಡುವ ಮೂಲಕ ಕೃಷಿಯಲ್ಲಿ ಕ್ರಾಂತಿ ಉಂಟುಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೃಷಿ ಉತ್ಪಾದಕತೆ, ಹವಾಮಾನ ಚೇತರಿಕೆ, ಇಂಗಾಲ ಹೊರಸೂಸುವಿಕೆ ಕಡಿಮೆಮಾಡಿ, ಸುಸ್ಥಿರತೆಯನ್ನು ಹೆಚ್ಚಿಸುತ್ತವೆ. ಎರಡೂ ದೇಶಗಳು ಡಿಜಿಟಲ್ ಕೃಷಿಯ ಬೆಳವಣಿಗೆಗೆ ಅನುಕೂಲವಾಗುವಂತೆ, ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಕೃಷಿಯನ್ನು ಆಧುನೀಕರಿಸಲು ನಡೆಯುತ್ತಿರುವ ಸಹಕಾರ, ನಾವೀನ್ಯತೆ ಮತ್ತು ವಿನಿಮಯವನ್ನು ಉತ್ತೇಜಿಸಲು ಡಿಜಿಟಲ್ ಕೃಷಿ, ಎಐ ಮತ್ತು ಐಒಟಿ ತಂತ್ರಜ್ಞಾನದಲ್ಲಿ ತಮ್ಮ ಸಹಕಾರ ಹೆಚ್ಚಿಸಲು ಒಪ್ಪಿಕೊಂಡಿವೆ.

34. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯತಂತ್ರ ಸಹಭಾಗಿತ್ವ ಹೊಂದುವ ಪ್ರಾಮುಖ್ಯತೆಗೆ ಎರಡೂ ಸರ್ಕಾರಗಳು ಒತ್ತು ನೀಡಿದವು. ನಾವೀನ್ಯತೆ ಮತ್ತು ತಂತ್ರಜ್ಞಾನ ಪಾಲುದಾರಿಕೆ ಮಾರ್ಗಸೂಚಿಯಲ್ಲಿ ಸೂಚಿಸಿದಂತೆ ದ್ವಿಪಕ್ಷೀಯ ಸಹಕಾರದ ಆದ್ಯತೆಗಳನ್ನು ಪುನರುಚ್ಚರಿಸುತ್ತಾ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಭಾಗಿತ್ವದ ಮೇಲೆ ಗಮನ ಕೇಂದ್ರೀಕರಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ. ಪರಸ್ಪರ ನಂಬಿಕೆ ಮತ್ತು ಗೌರವದ ಮೇಲೆ ನಿರ್ಮಿಸಲಾದ ಮತ್ತು ಹಂಚಿಕೆಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ಸುರಕ್ಷಿತ ತಂತ್ರಜ್ಞಾನದ ವಾಸ್ತುಶಿಲ್ಪವನ್ನು ಖಾತ್ರಿಪಡಿಸುವ ಹಂಚಿಕೆಯ ಬದ್ಧತೆ ಮತ್ತು ತತ್ವಗಳನ್ನು ಗುರುತಿಸಿ, ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಭಯ ದೇಶಗಳ ಉದ್ಯಮ ಮತ್ತು ಶೈಕ್ಷಣಿಕ ರಂಗದ ನಡುವೆ ನಿಕಟ ಸಂಪರ್ಕ ರೂಪಿಸಲು ಆದ್ಯತೆ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಗುರುತಿಸಲಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಫಲಿತಾಂಶ ಆಧಾರಿತ ಮತ್ತು ಪರಸ್ಪರ ಲಾಭದಾಯಕ ತಂತ್ರಜ್ಞಾನ ಸಹಭಾಗಿತ್ವವನ್ನು ಸಾಧಿಸುತ್ತವೆ.

35. ವಿಪತ್ತು ತಗ್ಗಿಸುವಿಕೆ, ಸುನಾಮಿ ಎಚ್ಚರಿಕೆಗಳು, ಕರಾವಳಿ ಅಪಾಯಗಳು, ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು, ವಿಪತ್ತು ಅಪಾಯ ಕಡಿತ ಮತ್ತು ಸಮುದ್ರಶಾಸ್ತ್ರ, ಧ್ರುವ ವಿಜ್ಞಾನ, ಜೀವಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರ, ಜಿಯೋಫಿಸಿಕ್ಸ್ ಮತ್ತು ಭೂವಿಜ್ಞಾನ ಸಂಶೋಧನೆಯ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸಲು ಎರಡೂ ಸರ್ಕಾರಗಳು ಜ್ಞಾಪಕ ಪತ್ರಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಿವೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ(ಐಎನ್ ಸಿಒಐಎಸ್) ಮತ್ತು ಹೆಲ್ಮೋಝ್-ಝೆಂಟ್ರಮ್ ಪಾಟ್ಸ್ ಡಮ್ – ಡ್ಯೂಶಸ್ ಜಿಯೊಫೋಶಂಗ್ಸ್ ಝೆಂಟ್ರಮ್, ಪೋಲಾರ್ ಮತ್ತು ಸಾಗರ ಸಂಶೋಧನೆಯ ರಾಷ್ಟ್ರೀಯ ಕೇಂದ್ರ(ಎನ್ ಸಿಪಿಒಆರ್) ಮತ್ತು ಅಲ್ ಫ್ರೆಡ್ ವೆಗೆನರ್-ಇನ್ ಸ್ಟಿಟ್ಯೂಟ್,  ಹೆಲ್ಮೋಝ್-ಝೆಂಟ್ರಮ್ ಫರ್ ಪೋಲಾರ್-ಶುಂಗ್(ಅರ್ವರ್-ಶುಂಗ್) ನಡುವೆ ಒಡಂಬಡಿಕೆ ಏರ್ಪಟ್ಟಿದೆ.

36. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌(ಟಿಐಎಫ್ಆರ್)ನ ಎರಡು ಕೇಂದ್ರಗಳಾದ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ(ಎನ್ ಸಿಬಿಎಸ್) ಮತ್ತು ಅಂತಾರಾಷ್ಟ್ರೀಯ ಥಿಯಾರಿಟಿಕಲ್ ವಿಜ್ಞಾನಗಳ ಕೇಂದ್ರ(ಐಸಿಟಿಎಸ್) ನಡುವಿನ ಜೈವಿಕ, ಭೌತಿಕ ಮತ್ತು ಗಣಿತ ವಿಜ್ಞಾನಗಳಲ್ಲಿ ಏರ್ಪಟ್ಟ ದ್ವಿಪಕ್ಷೀಯ ಒಪ್ಪಂದವನ್ನು ಎರಡೂ ಸರ್ಕಾರಗಳು ಸ್ವಾಗತಿಸಿದವು. ಭಾರತದ ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ(ಡಿಎಇ) ಮತ್ತು ಜರ್ಮನಿಯ ಮ್ಯಾಕ್ಸ್-ಪ್ಲಾಂಕ್-ಗೆಸೆಲ್‌ಶಾಫ್ಟ್(ಎಂಪಿಜಿ) ನಡುವಿನ ಒಪ್ಪಂದವು ಐಸಿಟಿಎಸ್ ಮತ್ತು ಎನ್ ಸಿಬಿಎಸ್ ನೊಂದಿಗೆ ವಿವಿಧ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಗಳ ನಡುವೆ ವಿದ್ಯಾರ್ಥಿಗಳು ಮತ್ತು ಸಂಶೋಧನಾ ಸಿಬ್ಬಂದಿ ಸೇರಿದಂತೆ ವಿಜ್ಞಾನಿಗಳ ವಿನಿಮಯವನ್ನು ಸುಲಭಗೊಳಿಸುತ್ತದೆ.

37. ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಪಾಲುದಾರಿಕೆಗಾಗಿ ಒಸಿಯಾನ್ ಸ್ಯಾಟ್–3 ಮತ್ತು ರಿಸ್ಯಾಟ್–1ಎ ಉಪಗ್ರಹಗಳಿಂದ ದತ್ತಾಂಶ ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಜರ್ಮನಿಯ ನ್ಯೂಸ್ಟ್ರೆಲಿಟ್ಜ್‌ನಲ್ಲಿರುವ ಇಂಟರ್ ನ್ಯಾಷನಲ್ ಗ್ರೌಂಡ್ ಸ್ಟೇಷನ್ ಅನ್ನು ನವೀಕರಿಸಲು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಜಿಎಎಫ್ ಎಜಿ ನಡುವಿನ ಸಹಭಾಗಿತ್ವಕ್ಕೆ ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

38. ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯನ್ನು ಸಾಧಿಸಲು ಹಸಿರು, ಸುಸ್ಥಿರ, ಹವಾಮಾನ ಹೊಂದಾಣಿಕೆಯ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಅಗತ್ಯವನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಎರಡೂ ಸರ್ಕಾರಗಳು ಹವಾಮಾನ ಕ್ರಿಯೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ, ತ್ರಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಗಣನೀಯವಾಗಿ ಹೆಚ್ಚಿಸುವ ಗುರಿ ಹೊಂದಿವೆ. ಇಂಡೋ-ಜರ್ಮನ್ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ(ಜಿಎಸ್ ಡಿಪಿ) ಅಡಿ, ಇದುವರೆಗೆ ಸಾಧಿಸಿದ ಪ್ರಗತಿಯನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಹಂಚಿಕೆಯ ಬದ್ಧತೆಗಳಿಂದ ಮಾರ್ಗದರ್ಶಿಸಲ್ಪಟ್ಟ ಪಾಲುದಾರಿಕೆಯು ಪ್ಯಾರಿಸ್ ಒಪ್ಪಂದ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ವಿವರಿಸಿರುವ ಗುರಿಗಳ ಅನುಷ್ಠಾನ ವೇಗಗೊಳಿಸಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ, ಮುಂಬರುವ ಯುಎನ್ಎಫ್ ಸಿಸಿ ಸಿಒಪಿ29ರ  ಮಹತ್ವಾಕಾಂಕ್ಷೆಯ ಫಲಿತಾಂಶಕ್ಕಾಗಿ ವಿಶೇಷವಾಗಿ ಹೊಸ ಸಾಮೂಹಿಕ ಪರಿಮಾಣಾತ್ಮಕ ಗುರಿ(ಎನ್ ಸಿಕ್ಯುಜಿ)ಸಾಧಿಸಲು ಜಂಟಿಯಾಗಿ ಕೆಲಸ ಮಾಡುವ ಅಗತ್ಯವನ್ನು ಎರಡೂ ಕಡೆಯವರು ಒತ್ತಿಹೇಳಿದರು.

39. ಜಿಎಸ್ ಡಿಪಿ ಉದ್ದೇಶಗಳ ಕುರಿತು ಸಚಿವರ ಸಭೆಯ ಪ್ರಗತಿಯನ್ನು ಶ್ಲಾಘಿಸಿದರು. ಜಿಎಸ್ ಡಿಪಿಯ ಅನುಷ್ಠಾನಕ್ಕೆ ಕೊಡುಗೆ ನೀಡಲು, ಅಸ್ತಿತ್ವದಲ್ಲಿರುವ ಕಾರ್ಯನಿರತ ಗುಂಪುಗಳು ಮತ್ತು ಇತರ ದ್ವಿಪಕ್ಷೀಯ ಸ್ವರೂಪಗಳು ಮತ್ತು ಉಪಕ್ರಮಗಳಲ್ಲಿ ನಿಯಮಿತ ಸಂಭಾಷಣೆಗೆ ಎರಡೂ ಕಡೆಯವರು ಬದ್ಧರಾಗಿದ್ದಾರೆ. ಪ್ಯಾರಿಸ್ ಒಪ್ಪಂದದ ಗುರಿಗಳು ಮತ್ತು ಎಸ್‌ಡಿಜಿಗಳನ್ನು ಸಾಧಿಸಲು ಜಿಎಸ್‌ಡಿಪಿ ಉದ್ದೇಶಗಳ ಪ್ರಗತಿಯನ್ನು ಅಳೆಯಲು, ಮುಂದಿನ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನೆಗಳ ಮಾರ್ಗಸೂಚಿಯೊಳಗೆ ಸಚಿವಾಲಯದ ಕಾರ್ಯವಿಧಾನದ ಮುಂದಿನ ಸಭೆಯು ಮುಂಬರುವ ದಿನಗಳಲ್ಲಿ ನಡೆಯಲಿದ್ದು, ಹವಾಮಾನ ಬದಲಾವಣೆಯನ್ನು ಎದುರಿಸಲು ನಿಕಟವಾಗಿ ಸಹಕರಿಸುವ ತಮ್ಮ ಉದ್ದೇಶವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಆದ್ದರಿಂದ ಮುಂದಿನ ದಿನಗಳಲ್ಲಿ ಇಂಡೋ-ಜರ್ಮನ್ ಹವಾಮಾನ ಕಾರ್ಯಕಾರಿ ಗುಂಪಿನ ಸಭೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.

40. ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ(ಜಿಎಸ್ ಡಿಪಿ)ಯ ರಕ್ಷಣೆ ಅಡಿ ಎರಡೂ ಕಡೆಗೆ ಪರಸ್ಪರ ಪ್ರಯೋಜನಗಳು:

ಎ. ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗಾಗಿ ಭಾರತ ಹೊಂದಿರುವ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲು ಮಾರ್ಗಸೂಚಿಯು ಸಹಾಯ ಮಾಡುತ್ತದೆ. ಅಲ್ಲದೆ, ಎರಡೂ ದೇಶಗಳಲ್ಲಿ ಸುಸ್ಥಿರ ಇಂಧನ ಮೂಲವಾಗಿ ಹಸಿರು ಹೈಡ್ರೋಜನ್ ಅನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ನಾಯಕರು ಒಪ್ಪಿಕೊಂಡರು.

ಬಿ. ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ(ಜಿಎಸ್ ಡಿಪಿ)ಯ ಡ್ಯಾಶ್‌ಬೋರ್ಡ್ ಅನಾವರಣಗೊಳಿಸಲಾಗಿದೆ. ಇದು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಆನ್‌ಲೈನ್ ಸಾಧನವಾಗಿದೆ. ಇದು ಜಿಎಸ್ ಡಿಪಿ ಅಡಿ, ಜರ್ಮನಿ ಮತ್ತು ಭಾರತದ ನಡುವಿನ ಹೆಚ್ಚಿದ ಸಹಕಾರವನ್ನು ತೋರಿಸುತ್ತದೆ. ಇದು ಪ್ರಮುಖ ಆವಿಷ್ಕಾರಗಳ ಅವಲೋಕನ ನೀಡುತ್ತದೆ. ಭಾರತ-ಜರ್ಮನಿ ಸಹಕಾರದಿಂದ ಆವರಿಸಿರುವ ವಿಶಾಲ ವ್ಯಾಪ್ತಿಯ ಅನುಭವ ನೀಡುತ್ತದೆ. ಇದು ಜಿಎಸ್ ಡಿಪಿ ಉದ್ದೇಶಗಳನ್ನು ಸಾಧಿಸುವತ್ತ ಜಂಟಿ ಪ್ರಗತಿಯ ಮಾಹಿತಿಯನ್ನು ಸುಗಮಗೊಳಿಸುತ್ತದೆ. ಅಲ್ಲದೆ, ಜಾಗತಿಕ ಸವಾಲುಗಳಿಗೆ ನವೀನ ಪರಿಹಾರಗಳ ಕುರಿತು ಸಂಬಂಧಿತ ಪಾಲುದಾರರಿಗೆ ಪ್ರಮುಖ ಮಾಹಿತಿ ಒದಗಿಸುತ್ತದೆ.

ಸಿ. ಎಲ್ಲರಿಗೂ ಭಾರತದಲ್ಲಿ ಸುಸ್ಥಿರ ನಗರ ಚಲನಶೀಲತೆ ಉತ್ತೇಜಿಸುವ ಹಂಚಿಕೆಯ ದೃಷ್ಟಿಗೆ ಅನುಗುಣವಾಗಿ ಪಾಲುದಾರಿಕೆ ನವೀಕರಿಸುವ ಮತ್ತು ಮತ್ತಷ್ಟು ಉನ್ನತೀಕರಿಸುವ ಉದ್ದೇಶದ ಜಂಟಿ ಘೋಷಣೆಗೆ ಸಹಿ ಹಾಕಲಾಗಿದೆ. 2019ರಲ್ಲಿ ಸ್ಥಾಪನೆಯಾದಾಗಿನಿಂದ ನಗರ ಚಲನಶೀಲತೆ ಪಾಲುದಾರಿಕೆ, ಎಲ್ಲರನ್ನೂ ಒಳಗೊಂಡ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹಸಿರು ಮತ್ತು ಸುಸ್ಥಿರ ನಗರೀಕರಣದ ಪ್ರಾಮುಖ್ಯತೆ ಮತ್ತು ಬಲವಾದ ಹಸಿರು ಫಲಿತಾಂಶಗಳನ್ನು ಗುರುತಿಸುತ್ತದೆ.

ಡಿ. ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ)ದ ಭವಿಷ್ಯಕ್ಕಾಗಿ ಭಾರತ ಮಾಡಿರುವ ಸಾಧನೆಗಳು ಮತ್ತು ದೂರದೃಷ್ಟಿಯನ್ನು ಪ್ರಶಂಸಿಸಲಾಯಿತು, ಐಎಸ್ಎ ಒಳಗೆ ನಮ್ಮ ಸಹಕಾರ ಹೆಚ್ಚಿಸಲು ನಾಯಕರು ಒಪ್ಪಿಕೊಂಡರು.

ಇ. ರಿಯೊ ಒಡಂಬಡಿಕೆಗಳು ಮತ್ತು ಎಸ್‌ಡಿಜಿಗಳ ಅನುಷ್ಠಾನಕ್ಕೆ ಬೆಂಬಲವಾಗಿ ಅರಣ್ಯ ಭೂದೃಶ್ಯಗಳನ್ನು ಮರುಸ್ಥಾಪಿಸುವ ಮೂಲಕ ಅರಣ್ಯನಾಶ ಮತ್ತು ಅವನತಿ ನಿಲ್ಲಿಸುವ ಮತ್ತು ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವ ಪ್ರದೇಶದಲ್ಲಿನ ಸಹಕಾರವನ್ನು ಶ್ಲಾಘಿಸಿದರು.

41. ಇಂಡೋ-ಜರ್ಮನ್ ಎನರ್ಜಿ ಫೋರಮ್(ಐಜಿಇಎಫ್), ತನ್ನ ವಿವಿಧ ಚಟುವಟಿಕೆಗಳ ಮೂಲಕ ಜರ್ಮನಿ ಮತ್ತು ಭಾರತದ ನಡುವಿನ ಸಾಮಾನ್ಯ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ಜಾಗತಿಕ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನಾಯಕರು ಒಪ್ಪಿಕೊಂಡರು.

42. ನವೀಕರಿಸಬಹುದಾದ ಇಂಧನ ವಲಯದಲ್ಲಿ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವಲ್ಲಿ ಪಾಲುದಾರ ರಾಷ್ಟ್ರವಾಗಿ ಜರ್ಮನಿಯೊಂದಿಗೆ ಗಾಂಧಿನಗರದಲ್ಲಿ 2024 ಸೆಪ್ಟೆಂಬರ್  ನಲ್ಲಿ ನಡೆದ 4ನೇ ಜಾಗತಿಕ ರೀ-ಇನ್ವೆಸ್ಟ್ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋದ ಪಾತ್ರವನ್ನು ಶ್ಲಾಘಿಸಿದರು. ನವೀಕರಿಸಬಹುದಾದ ಇಂಧನ ಹೂಡಿಕೆಗಳನ್ನು ತ್ವರಿತವಾಗಿ ಟ್ರ್ಯಾಕ್ ಮಾಡಲು, ವ್ಯಾಪಾರ ಸಹಭಾಗಿತ್ವಗಳನ್ನು ಉತ್ತೇಜಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ವಿಸ್ತರಿಸಲು ಪ್ರಮುಖ ಉಪಕ್ರಮವಾಗಿ ರಿ-ಇನ್ವೆಸ್ಟ್ ಸಭೆಯ ಸಮಯದಲ್ಲಿ ಪ್ರಾರಂಭಿಸಲಾದ 'ಇಂಡಿಯಾ-ಜರ್ಮನಿ ಪ್ಲಾಟ್‌ಫಾರ್ಮ್ ಫಾರ್ ರಿನ್ಯೂವಬಲ್ ಎನರ್ಜಿ ವರ್ಲ್ಡ್‌ವೈಡ್' ಅನ್ನು ಎರಡೂ ಸರ್ಕಾರಗಳು ನೆನಪಿಸಿಕೊಂಡವು. ಹಸಿರು ಹಣಕಾಸು, ತಂತ್ರಜ್ಞಾನ ಮತ್ತು ವ್ಯಾಪಾರ ಅವಕಾಶಗಳ ವಿನಿಮಯದ ಮೂಲಕ ಭಾರತದಲ್ಲಿ ಮತ್ತು ವಿಶ್ವಾದ್ಯಂತ ನವೀಕರಿಸಬಹುದಾದ ಇಂಧನ ವಿಸ್ತರಣೆಯನ್ನು ವೇದಿಕೆಯು ವೇಗಗೊಳಿಸಲಿದೆ.

43. ಜೈವಿಕ ವೈವಿಧ್ಯತೆಯ ಮೇಲಿನ ಜಂಟಿ ಕಾರ್ಯನಿರತ ಗುಂಪಿನ ಮೂಲಕ ಸಹಕಾರ ಬಲಪಡಿಸಲು ತಮ್ಮ ಇಚ್ಛೆ ವ್ಯಕ್ತಪಡಿಸಿದವು. ಜಾಗತಿಕ ಜೀವವೈವಿಧ್ಯ ಮಾರ್ಗಸೂಚಿ ಗುರಿಗಳನ್ನು ಕಾರ್ಯಗತಗೊಳಿಸುವ ಜಾಗತಿಕ ಪ್ರಯತ್ನದಲ್ಲಿ ಸಿಬಿಡಿ ಸಿಒಪಿ 16 ನಿರ್ಣಾಯಕ ಕ್ಷಣವಾಗಿದೆ ಎಂದು ಒಪ್ಪಿಕೊಂಡರು.

44. ಉಭಯ ದೇಶಗಳ ನಡುವಿನ ಅನುಭವಗಳು ಮತ್ತು ತಂತ್ರಜ್ಞಾನಗಳ ವಿನಿಮಯವನ್ನು ತೀವ್ರಗೊಳಿಸುವ ಮೂಲಕ ಅವಕಾಶಗಳನ್ನು ಸೃಷ್ಟಿಸಿದ ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಆರ್ಥಿಕತೆಯ ಮೇಲಿನ ಜಂಟಿ ಕಾರ್ಯನಿರತ ಗುಂಪಿನ ಚರ್ಚೆಗಳು ಮತ್ತು ಫಲಿತಾಂಶಗಳನ್ನು ನೆನಪಿಸಿಕೊಂಡ ನಾಯಕರು, ಉದಾಹರಣೆಗೆ ಭವಿಷ್ಯದ ಕೆಲಸವನ್ನು ಸೌರ ತ್ಯಾಜ್ಯ ಮರುಬಳಕೆಯ ಮೇಲೆ ಗಮನ ಕೇಂದ್ರೀಕರಿಸುವುದು ಸೇರಿದಂತೆ ವಲಯಗಳಲ್ಲಿ ಆಳವಾದ ಸಹಕಾರ ಹೊಂದುವ ಸಾಧ್ಯತೆಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಸಾಗರ ಪರಿಸರಕ್ಕೆ ತ್ಯಾಜ್ಯ ವಿಶೇಷವಾಗಿ ಪ್ಲಾಸ್ಟಿಕ್‌ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಮಹತ್ವಾಕಾಂಕ್ಷೆಯ ಉದ್ದೇಶಗಳು ಮತ್ತು ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಇಂಡೋ-ಜರ್ಮನ್ ಪರಿಸರ ಸಹಕಾರವನ್ನು ಅವರು ಶ್ಲಾಘಿಸಿದರು. ಪ್ಲಾಸ್ಟಿಕ್ ಮಾಲಿನ್ಯದ ಕುರಿತು ಜಾಗತಿಕ ಕಾನೂನುಬದ್ಧ ಒಪ್ಪಂದವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಿಕಟವಾಗಿ ಸಹಕರಿಸಲು ಭಾರತ ಮತ್ತು ಜರ್ಮನಿ ಒಪ್ಪಿಕೊಂಡಿವೆ.

45. ತ್ರಿಪಕ್ಷೀಯ ಅಭಿವೃದ್ಧಿ ಸಹಕಾರ(ಟಿಡಿಸಿ) ಅಡಿ, ಆಗಿರುವ ಪ್ರಗತಿಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು, ಇದು ಆಫ್ರಿಕಾದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಹವಾಮಾನ ಗುರಿಗಳ ಸಾಧನೆ ಬೆಂಬಲಿಸಲು ತಮ್ಮ ಆದ್ಯತೆಗಳ ಪ್ರಕಾರ ಏಷ್ಯಾ ಮತ್ತು ಅದರಾಚೆಯ ಮೂರನೇ ದೇಶಗಳಲ್ಲಿ ಸಮರ್ಥನೀಯ, ಕಾರ್ಯಸಾಧುವಾದ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಯೋಜನೆಗಳನ್ನು ನೀಡಲು ಪರಸ್ಪರ ಸಾಮರ್ಥ್ಯ ಮತ್ತು ಅನುಭವಗಳನ್ನು ಸಂಗ್ರಹಿಸುತ್ತದೆ. ಕ್ಯಾಮರೂನ್, ಘಾನಾ ಮತ್ತು ಮಲಾವಿಯಲ್ಲಿನ ಪ್ರಾಯೋಗಿಕ ಯೋಜನೆಗಳ ಉತ್ತೇಜಕ ಫಲಿತಾಂಶಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು, ಬೆನಿನ್ ಮತ್ತು ಪೆರುವಿನೊಂದಿಗೆ ನಡೆಯುತ್ತಿರುವ ಉಪಕ್ರಮಗಳಲ್ಲಿ ಮಾಡಿದ ಪ್ರಗತಿಯನ್ನು ಸ್ವಾಗತಿಸಿದರು. ಮೇಲೆ ತಿಳಿಸಲಾದ ಉಪಕ್ರಮಗಳ ಯಶಸ್ವಿ ಅನುಷ್ಠಾನದ ದೃಷ್ಟಿಯಿಂದ, ಕ್ಯಾಮರೂನ್(ಕೃಷಿ), ಮಲಾವಿ (ಮಹಿಳಾ ಉದ್ಯಮಶೀಲತೆ) ಮತ್ತು ಘಾನಾ(ತೋಟಗಾರಿಕೆ) ಜೊತೆಗೆ 2024 ಮತ್ತು ನಂತರ ಪ್ರಾಯೋಗಿಕ ಯೋಜನೆಗಳ ಉನ್ನತೀಕರಣ ಪ್ರಾರಂಭಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ. ಇದಲ್ಲದೆ, 3 ಸಿರಿಧಾನ್ಯ ಸಂಬಂಧಿತ ಪ್ರಾಯೋಗಿಕ ಯೋಜನೆಗಳ ಪ್ರಾರಂಭವನ್ನು ಎರಡೂ ಕಡೆಯವರು ಸ್ವಾಗತಿಸಿದರು: ಒಂದು ಮಡಗಾಸ್ಕರ್ ಮತ್ತು ಎರಡು ಇಥಿಯೋಪಿಯಾ. ಹೆಚ್ಚುವರಿಯಾಗಿ, ಎರಡೂ ಕಡೆಯವರು ಪಾಲುದಾರರನ್ನು ತಲುಪಲು ಸಾಂಸ್ಥಿಕ ಕಾರ್ಯವಿಧಾನ ಪ್ರಾರಂಭಿಸಿದ್ದಾರೆ, ಅವರ ಜಂಟಿ ಉಪಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಆಯ್ಕೆ ಮಾಡಿ, ಕಾರ್ಯಗತಗೊಳಿಸುತ್ತಾರೆ. ಈ ನಿಟ್ಟಿನಲ್ಲಿ ಎರಡೂ ಸರ್ಕಾರಗಳು ಜಂಟಿ ಸ್ಥಾಯಿ ಸಮಿತಿ ಮತ್ತು ಜಂಟಿ ಅನುಷ್ಠಾನ ಗುಂಪು ಸ್ಥಾಪಿಸಿವೆ.

46. ​​ಲಿಂಗ ಸಮಾನತೆ ಮೂಲಭೂತವಾದ ಪ್ರಾಮುಖ್ಯತೆ ಹೊಂದಿದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣದಲ್ಲಿ ಹೂಡಿಕೆ ಮಾಡುವುದರಿಂದ 2030ರ ಕಾರ್ಯಸೂಚಿ ಅನುಷ್ಠಾನಗೊಳಿಸುವಲ್ಲಿ ಹಲವು ಪಟ್ಟಿನ ಪರಿಣಾಮ ಬೀರುತ್ತದೆ ಎಂದು ನಾಯಕರು ಪುನರುಚ್ಚರಿಸಿದರು. ಮಹಿಳಾ ನೇತೃತ್ವದ ಅಭಿವೃದ್ಧಿ ಉತ್ತೇಜಿಸಲು ಮತ್ತು ನಿಟ್ಟಿನಲ್ಲಿ ಜರ್ಮನಿಯ ಸ್ತ್ರೀವಾದಿ ವಿದೇಶಾಂಗ ಮತ್ತು ಅಭಿವೃದ್ಧಿ ನೀತಿಗಳನ್ನು ಗಮನಿಸಿ, ಜಾಗತಿಕ ಸವಾಲುಗಳನ್ನು ಎದುರಿಸಲು ನೀತಿ ನಿರೂಪಕರಾಗಿ ಮಹಿಳೆಯರ ಪೂರ್ಣ, ಸಮಾನ, ಪರಿಣಾಮಕಾರಿ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಹೆಚ್ಚಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಹಸಿರು ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರ ಉತ್ತೇಜಿಸುವಲ್ಲಿ ಇಂಡೋ-ಜರ್ಮನ್ ಸಹಕಾರ ಬಲಪಡಿಸುವ ಬಯಕೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

47. ಹೆಚ್ಚುವರಿಯಾಗಿ, ಜಿಎಸ್ ಡಿಪಿ ಮಾರ್ಗಸೂಚಿ ಅಡಿ, ಹಣಕಾಸು ಮತ್ತು ತಾಂತ್ರಿಕ ಸಹಕಾರಕ್ಕಾಗಿ ಅಸ್ತಿತ್ವದಲ್ಲಿರುವ ಉಪಕ್ರಮಗಳು ಮತ್ತು ಹೊಸ ಬದ್ಧತೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಧಿಸಿದ ಮೈಲಿಗಲ್ಲುಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು:

ಎ. 2024 ಸೆಪ್ಟೆಂಬರ್ ನಲ್ಲಿ ಏರ್ಪಟ್ಟ ಭಾರತ-ಜರ್ಮನಿ ಸರ್ಕಾರದ ನಡುವಿನ ಅಭಿವೃದ್ಧಿ ಸಹಕಾರ ಕುರಿತಾದ ಮಾತುಕತೆ ಸಮಯದಲ್ಲಿ ಒಪ್ಪಿಕೊಂಡಂತೆ, 1 ಶತಕೋಟಿ ಯೂರೊಗಿಂತ ಹೆಚ್ಚಿನ ಜಿಎಸ್ ಡಿಪಿಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿನ ಹೊಸ ಬದ್ಧತೆಗಳು, 2022ರಲ್ಲಿ ಜಿಎಸ್ ಡಿಪಿ ಪ್ರಾರಂಭವಾದಾಗಿನಿಂದ ಸುಮಾರು 3.2 ಶತಕೋಟಿ ಯೂರೊ ಮೌಲ್ಯದ ಸಂಚಿತ ಬದ್ಧತೆಗಳನ್ನು ಸೇರಿಸುತ್ತವೆ.

ಬಿ. ಇಂಡೋ-ಜರ್ಮನ್ ನವೀಕರಿಸಬಹುದಾದ ಇಂಧನ ಸಹಭಾಗಿತ್ವದ ಅಡಿ, ಸಹಕಾರವು ನವೀನ ಸೌರಶಕ್ತಿ, ಹಸಿರು ಜಲಜನಕ, ಇತರೆ ನವೀಕರಿಸಬಹುದಾದ ಇಂಧನಗಳು, ಗ್ರಿಡ್ ಏಕೀಕರಣ, ಸಂಗ್ರಹಣೆ ಮತ್ತು ಇಂಧನ ಪರಿವರ್ತನೆ ಸುಲಭಗೊಳಿಸಲು ಮತ್ತು ವಿಶ್ವಾಸಾರ್ಹತೆಯ ಅಗತ್ಯ ಪರಿಹರಿಸಲು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗಳ ಮೇಲೆ ಗಮನ ಕೇಂದ್ರೀಕರಿಸಿದೆ.

ಸಿ. "ಕೃಷಿ ವಿಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ" ಸಹಕಾರವು ಆದಾಯ, ಆಹಾರ ಭದ್ರತೆ, ಹವಾಮಾನ ಚೇತರಿಕೆ, ಮಣ್ಣಿನ ಆರೋಗ್ಯ, ಜೀವವೈವಿಧ್ಯ, ಅರಣ್ಯ ಪರಿಸರ ವ್ಯವಸ್ಥೆಗಳು ಮತ್ತು ನೀರಿನ ಭದ್ರತೆಯನ್ನು ಉತ್ತೇಜಿಸುವ ಮೂಲಕ ದುರ್ಬಲ ಗ್ರಾಮೀಣ ಜನಸಂಖ್ಯೆ ಮತ್ತು ಸಣ್ಣ ಪ್ರಮಾಣದ ರೈತರಿಗೆ ಪ್ರಯೋಜನ  ನೀಡುತ್ತದೆ.

ಡಿ. ಸುಸ್ಥಿರ ನಗರಾಭಿವೃದ್ಧಿಯಲ್ಲಿ ತಮ್ಮ ಯಶಸ್ವಿ ಸಹಭಾಗಿತ್ವ ಮುಂದುವರಿಸುವ ಉದ್ದೇಶವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವದ ಮೂಲಕ ಸಾಮರ್ಥ್ಯ ನಿರ್ಮಾಣ

48. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ವಿಷಯದಲ್ಲಿ ಸ್ಥಿರವಾದ ಉನ್ನತ ಕಾರ್ಯಕ್ಷಮತೆ ಕಂಡುಬಂದಿರುವುದನ್ನು ಉಭಯ ನಾಯಕರು ಶ್ಲಾಘಿಸಿದರು. ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ಜರ್ಮನಿಯಲ್ಲಿ ಪಾಲುದಾರರನ್ನು ಪ್ರೋತ್ಸಾಹಿಸಿದರು. ಭಾರತ ಮತ್ತು ಜರ್ಮನಿ ನಡುವಿನ ಬಲವಾದ ದ್ವಿಮುಖ ಹೂಡಿಕೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಅಂತಹ ಹೂಡಿಕೆಗಳ ಸಕಾರಾತ್ಮಕ ಪರಿಣಾಮಗಳನ್ನು ನಾಯಕರು ಗಮನಿಸಿದರು. ಈ ಸಂದರ್ಭದಲ್ಲಿ, ಜರ್ಮನಿಯ ಉನ್ನತ ಮಟ್ಟದ ವ್ಯಾಪಾರ ಕಾರ್ಯ ನಿರ್ವಾಹಕರ ಭಾಗವಹಿಸುವಿಕೆಯೊಂದಿಗೆ ಜರ್ಮನ್ ವ್ಯವಹಾರದ ದ್ವೈ-ವಾರ್ಷಿಕ ಪ್ರಮುಖ ವೇದಿಕೆಯಾದ ಎಪಿಕೆ 2024, ಜರ್ಮನ್ ವ್ಯವಹಾರಗಳಿಗೆ ಭಾರತದಲ್ಲಿ ಲಭ್ಯವಿರುವ ಅಪಾರ ಅವಕಾಶಗಳನ್ನು ಪ್ರದರ್ಶಿಸಲು ಇರುವನಿರ್ಣಾಯಕ ವೇದಿಕೆಯಾಗಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

49. ಭಾರತದಲ್ಲಿ ಜರ್ಮನ್ ವ್ಯವಹಾರಗಳು ಮತ್ತು ಜರ್ಮನಿಯಲ್ಲಿ ಭಾರತೀಯ ವ್ಯವಹಾರಗಳ ದೀರ್ಘಕಾಲದ ಉಪಸ್ಥಿತಿಗೆ ಒತ್ತು ನೀಡಿದರು. ಎರಡು ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಗಾಢವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಭಾರತ ಮತ್ತು ಜರ್ಮನಿಯ ವ್ಯಾಪಾರ ಮತ್ತು ಉದ್ಯಮದ ಪ್ರಮುಖರನ್ನು ತೊಡಗಿಸಿಕೊಳ್ಳಲು ಉನ್ನತ ಮಟ್ಟದ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಭಾರತ-ಜರ್ಮನಿ ಸಿಇಒ ಫೋರಂ ಸಭೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ವ್ಯಾಪಾರ ಮತ್ತು ಹೂಡಿಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಇಂಡೋ-ಜರ್ಮನ್ ಫಾಸ್ಟ್ ಟ್ರ್ಯಾಕ್ ಮೆಕ್ಯಾನಿಸಂನ ಸಾಧನೆಗಳನ್ನು ಪ್ರಸ್ತಾಪಿಸಿ, ಅದರ ಕಾರ್ಯಾಚರಣೆ ಮುಂದುವರಿಸಲು ಒಪ್ಪಿಗೆ ಸೂಚಿಸಿದರು.

50. ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು(ಎಂಎಸ್ಎಂಇಗಳು) ಮಿಟ್ಟೆಲ್‌ಸ್ಟ್ಯಾಂಡ್‌ನ ಪ್ರಾಮುಖ್ಯತೆ ಗುರುತಿಸಿ, ದ್ವಿಪಕ್ಷೀಯ ಹೂಡಿಕೆಯ ಬೆಳವಣಿಗೆ ಮತ್ತು ಜರ್ಮನಿಯನ್ನು ಬೆಂಬಲಿಸುವ 'ಮೇಕ್ ಇನ್ ಇಂಡಿಯಾ ಮಿಟ್ಟೆಲ್‌ಸ್ಟ್ಯಾಂಡ್' ಕಾರ್ಯಕ್ರಮದ ಯಶಸ್ಸನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಇದು ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ವ್ಯಾಪಾರ ಮಾಡಲು ಬಯಸುವ ಮಿಟ್ಟೆಲ್‌ಸ್ಟ್ಯಾಂಡ್ ಉದ್ಯಮಗಳನ್ನು ಬೆಂಬಲಿಸುತ್ತದೆ. ಇದೇ ರೀತಿಯಲ್ಲಿ, ಎರಡೂ ಸರ್ಕಾರಗಳು ನಾವೀನ್ಯತೆ ಉತ್ತೇಜಿಸುವಲ್ಲಿ ಸ್ಟಾರ್ಟಪ್‌ಗಳು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿವೆ. ಭಾರತೀಯ ಮಾರುಕಟ್ಟೆ ಸಮಸ್ಯೆ ಪರಿಹರಿಸಲು ಸ್ಟಾರ್ಟಪ್‌ಗಳನ್ನು ಯಶಸ್ವಿಯಾಗಿ ಸುಗಮಗೊಳಿಸಿದ್ದಕ್ಕಾಗಿ ಜರ್ಮನ್ ಆಕ್ಸಲರೇಟರ್(ಜಿಎ) ಅನ್ನು ಶ್ಲಾಘಿಸಿದರು. ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುವ ಯೋಜನೆಗಳನ್ನು ಸಹ ಅವರು ಸ್ವಾಗತಿಸಿದರು. ಜರ್ಮನಿಯಲ್ಲಿ ಮಾರುಕಟ್ಟೆ ಪ್ರವೇಶ ಪಡೆಯುವಲ್ಲಿ ಭಾರತೀಯ ಸ್ಟಾರ್ಟಪ್‌ಗಳಿಗೆ ಸಹಾಯ ಮಾಡಲು ಅನುಗುಣವಾದ ಕಾರ್ಯಕ್ರಮವು ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಎರಡೂ ಕಡೆಯವರು ಗಮನಿಸಿದರು.

ಕಾರ್ಮಿಕ ಮಾರುಕಟ್ಟೆಗಳು, ಚಲನಶೀಲತೆ ಮತ್ತು ಜನರಿಂದ ಜನರ ಸಂಬಂಧಗಳನ್ನು ಬಲಪಡಿಸುವುದು

51. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಪಾಲುದಾರರ ನಡುವಿನ ಸಹಭಾಗಿತ್ವ ಒಳಗೊಂಡ ನುರಿತ ವಲಸೆಯ ಮೇಲಿನ ದ್ವಿಪಕ್ಷೀಯ ಸಹಕಾರವು ಬಹುರಂಗಗಳಲ್ಲಿ ವಿಸ್ತರಿಸುವುದರಿಂದ, ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದ(ಎಂಎಂಪಿಎ)ದ ನಿಬಂಧನೆಗಳ ಸಂಪೂರ್ಣ ಅನುಷ್ಠಾನಕ್ಕೆ ಎರಡೂ ಕಡೆಯವರು ಬದ್ಧರಾಗಿದ್ದಾರೆ. ಎಂಎಂಪಿಎಯಲ್ಲಿ ವಿವರಿಸಿರುವ ಬದ್ಧತೆಗಳಿಗೆ ಅನುಗುಣವಾಗಿ ಎರಡೂ ಕಡೆಯವರು ನ್ಯಾಯಯುತ ಮತ್ತು ಕಾನೂನುಬದ್ಧ ಕಾರ್ಮಿಕ ವಲಸೆಯನ್ನು ಉತ್ತೇಜಿಸಲು ಸಮರ್ಪಿತರಾಗಿದ್ದಾರೆ. ನ್ಯಾಯಯುತ ನೇಮಕಾತಿ ಅಭ್ಯಾಸಗಳು, ಪಾರದರ್ಶಕ ವೀಸಾ ಪ್ರಕ್ರಿಯೆಗಳು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆ ಸೇರಿದಂತೆ ವಲಸೆ ಕಾರ್ಮಿಕರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವುದನ್ನು ಖಾತ್ರಿಪಡಿಸುವ ಅಂತಾರಾಷ್ಟ್ರೀಯ ಮಾನದಂಡಗಳಿಂದ ವಿಧಾನವನ್ನು ಮಾರ್ಗದರ್ಶನ ಮಾಡಲಾಗುತ್ತದೆ. ಈ ತತ್ವಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಶೋಷಣೆಯಿಂದ ರಕ್ಷಿಸುವ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಅನುಸರಣೆ ಖಚಿತಪಡಿಸಿಕೊಳ್ಳುವಾಗ ಎಲ್ಲರಿಗೂ  ಪ್ರಯೋಜನವಾಗುವ ರೀತಿಯಲ್ಲಿ ಕೌಶಲ್ಯಪೂರ್ಣ ಕಾರ್ಮಿಕರ ಚಲನವಲನವನ್ನು ಸುಗಮಗೊಳಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ.

52. ಎಂಎಂಪಿಎಯನ್ನು ನಿರ್ಮಿಸಿ, ಆಯಾ ಸಚಿವಾಲಯಗಳ ನಡುವೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ವಿನಿಮಯ ಹೆಚ್ಚಿಸಲು ಉದ್ಯೋಗ ಮತ್ತು ಕಾರ್ಮಿಕ ಕ್ಷೇತ್ರದಲ್ಲಿ ಎರಡು ಕಡೆಯವರು ಉದ್ಯೋಗ ವಿವರ ಸೂಚ್ಯಂಕ(ಜೆಡಿಐ) ಸ್ಥಾಪನೆಗೆ ತೀರ್ಮಾನಿಸಿದರು. 2023ರಲ್ಲಿ ಭಾರತವು ಜಿ-20 ಶೃಂಗಸಭೆಯ  ಅಧ್ಯಕ್ಷತೆ ವಹಿಸಿದ್ದಾಗ ಕೈಗೊಂಡ ಜಿ-20 ಬದ್ಧತೆಯ ಅಂತಾರಾಷ್ಟ್ರೀಯ ಉಲ್ಲೇಖ ವರ್ಗೀಕರಣದ ಕುರಿತ ಕಾರ್ಯಸಾಧ್ಯತೆಯ ಅಧ್ಯಯನವನ್ನು ಬೆಂಬಲಿಸುವುದಾಗಿ ಜರ್ಮನ್ ಮಾಹಿತಿ ನೀಡಿದೆ. ಇಬ್ಬರೂ ನಾಯಕರು ಔದ್ಯೋಗಿಕ ರೋಗಗಳು, ಕಾರ್ಮಿಕರ ಪುನರ್ವಸತಿ ಮತ್ತು ವೃತ್ತಿಪರ ಕ್ಷೇತ್ರ, ಉದ್ಯೋಗಿಗಳ ರಾಜ್ಯ ವಿಮಾ ನಿಗಮ(ಇಎಸ್ಐಸಿ), ಉದ್ಯೋಗ ನಿರ್ದೇಶನಾಲಯ(ಡಿಜಿಇ) ಮತ್ತು ಜರ್ಮನ್ ಸಾಮಾಜಿಕ ಅಪಘಾತ ವಿಮೆ(ಡಿಜಿಯುವಿ)  ನಡುವೆ ವಿಕಲಾಂಗ ಕಾರ್ಮಿಕರ ತರಬೇತಿ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಎದುರು ನೋಡುತ್ತಿದ್ದಾರೆ.

53. ಜರ್ಮನಿಯಲ್ಲಿರುವ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚಿನ ನೀಲಿ ಕಾರ್ಡ್ ಹೊಂದಿರುವವರಲ್ಲಿ ಭಾರತೀಯ ವೃತ್ತಿಪರರು ಇದ್ದಾರೆ, ಅಲ್ಲದೆ ಭಾರತೀಯ ವಿದ್ಯಾರ್ಥಿಗಳು ಈಗ ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದೊಡ್ಡ ಸಮೂಹವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಇಬ್ಬರೂ ನಾಯಕರು ಗಮನಿಸಿದರು. ಇದಕ್ಕೆ ಸಂಬಂಧಿಸಿದಂತೆ, ಜರ್ಮನಿಯ ಕೌಶಲ್ಯ ಮತ್ತು ಪ್ರತಿಭೆಗಳ ಅಗತ್ಯತೆಗಳು ಮತ್ತು ಭಾರತದ ಯುವ, ವಿದ್ಯಾವಂತ ಮತ್ತು ನುರಿತ ವ್ಯಕ್ತಿಗಳ ಸಮೂಹದ ನಡುವೆ ಇರುವ ಪೂರಕತೆಯುನ್ನು ಜರ್ಮನ್ ಕಾರ್ಮಿಕ ಮಾರುಕಟ್ಟೆಗೆ ಆಸ್ತಿಯಾಗಬಹುದು ಎಂದು ಅವರು ಗುರುತಿಸಿದರು. ಫೆಡರಲ್ ಎಂಪ್ಲಾಯ್‌ಮೆಂಟ್ ಏಜೆನ್ಸಿಯು ಭಾರತದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ(ಎನ್ಎಸ್ ಡಿಸಿ) ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಇದೇ ರೀತಿಯ ಸರ್ಕಾರಿ ಏಜೆನ್ಸಿಗಳೊಂದಿಗೆ ಅಸ್ತಿತ್ವದಲ್ಲಿರುವ ವಿನಿಮಯವನ್ನು ಗಾಢಗೊಳಿಸುತ್ತದೆ. ಭಾರತದ ಕೌಶಲ್ಯಯುತ ಅಥವಾ ನುರಿತ ವಲಸೆ ವೃತ್ತಿಪರರನ್ನು ಉತ್ತೇಜಿಸಲು ಜರ್ಮನ್ ಸರ್ಕಾರ ಮಾಡಿರುವ ಹೊಸ ರಾಷ್ಟ್ರೀಯ ಕಾರ್ಯತಂತ್ರ ಪ್ರಾರಂಭವನ್ನು ಎರಡೂ ಕಡೆಯವರು ಸ್ವಾಗತಿಸಿದರು.

54. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕುರಿತಾದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇದು ಹಸಿರು ಕೌಶಲ್ಯವುಳ್ಳ ಕ್ಷೇತ್ರಗಳಲ್ಲಿ ಭಾರತದ ನುರಿತ ಉದ್ಯೋಗಿಗಳ ಸಮೂಹವನ್ನು ರೂಪಿಸುವ ಮತ್ತು ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸುವತ್ತ ಭಾರತ ಮತ್ತು ಜರ್ಮನಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಾರ್ಮಿಕರ ಅಂತಾರಾಷ್ಟ್ರೀಯ ಚಲನಶೀಲತೆ ಸುಗಮಗೊಳಿಸುವ ಅಂಶಗಳನ್ನು ಸೇರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

55. ಮಾಧ್ಯಮಿಕ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಕೇಂದ್ರಗಳು ಸೇರಿದಂತೆ ಭಾರತದಲ್ಲಿ ಜರ್ಮನ್ ಭಾಷೆಯ ಬೋಧನೆ ವಿಸ್ತರಿಸುವ ಗುರಿಗೆ ಎರಡೂ ಕಡೆಯವರು ಬದ್ಧರಾಗಿದ್ದಾರೆ. ಭಾಷಾ ಶಿಕ್ಷಕರ ತರಬೇತಿ ಸೇರಿದಂತೆ ಭಾರತ ಮತ್ತು ಜರ್ಮನಿಯಲ್ಲಿ ಪರಸ್ಪರರ ಭಾಷೆಗಳ ಬೋಧನೆಯನ್ನು ಮತ್ತಷ್ಟು ಉತ್ತೇಜಿಸಲು ಅವರು ಭಾರತೀಯ ಮತ್ತು ಜರ್ಮನ್ ರಾಜ್ಯಗಳು, ಸಂಸ್ಕೃತಿ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಒಪ್ಪಿಗೆ ಸೂಚಿಸಿದರು. ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪ್ರಮಾಣಪತ್ರಕ್ಕೆ ಕಾರಣವಾಗುವ ಜರ್ಮನ್ ಶಿಕ್ಷಕರ ಔಪಚಾರಿಕ ತರಬೇತಿ ಮತ್ತು ಹೆಚ್ಚಿನ ಶಿಕ್ಷಣಕ್ಕಾಗಿ ಒಂದು ಸ್ವರೂಪವನ್ನು ಅಭಿವೃದ್ಧಿಪಡಿಸಲು ಡಿಎಎಡಿ ಮತ್ತು ಗೋಥೆ ಇನ್ ಸ್ಟಿಟ್ಯೂಟ್ ಜಂಟಿ ಪ್ರಯತ್ನಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು.

56. ಆರ್ಥಿಕ ಬೆಳವಣಿಗೆಗೆ ಹೆಚ್ಚು ನುರಿತ ವೃತ್ತಿಪರರ ಕೊಡುಗೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. "ಜರ್ಮನಿಯೊಂದಿಗೆ ವ್ಯಾಪಾರ ಪಾಲುದಾರಿಕೆ" ಕಾರ್ಯಕ್ರಮದ ಅಡಿ, ಸಾಧಿಸಿದ ಫಲಿತಾಂಶಗಳನ್ನು ತೃಪ್ತಿಯಿಂದ ಗಮನಿಸಿದರು.  ಭಾರತದ ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಕಿರಿಯ ಕಾರ್ಯನಿರ್ವಾಹಕರ ಸುಧಾರಿತ ತರಬೇತಿ ಕುರಿತ ಉದ್ಯೋಗ ಮಾಹಿತಿ ಸೂಚ್ಯಂಕವನ್ನು ಪರಿಷ್ಕರಿಸಿದರು.

57. ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ(ಎಂಎಂಪಿಎ)ದೊಂದಿಗೆ ಅನಿಯಮಿತ ವಲಸೆ ಬಿಕ್ಕಟ್ಟು ಪರಿಹರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ಉದ್ದೇಶಕ್ಕಾಗಿ, ಎಂಎಂಪಿಎ ಜಾರಿಗೆ ಬಂದ ನಂತರ ರಿಟರ್ನ್ ಕ್ಷೇತ್ರದ ಸಹಕಾರ  ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸಾಧಿಸಿದ ಪ್ರಗತಿಯನ್ನು ಅವರು ಸ್ವಾಗತಿಸಿದರು. ಸೂಕ್ತ ಕಾರ್ಯವಿಧಾನ ವ್ಯವಸ್ಥೆಗಳ ಮೂಲಕ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಸುವ್ಯವಸ್ಥಿತಗೊಳಿಸುವ ಪ್ರಾಮುಖ್ಯತೆಗೆ ಒತ್ತು ನೀಡಿದರು.

58. ಉಭಯ ದೇಶಗಳ ರಾಷ್ಟ್ರೀಯರ ನಡುವೆ ಬೆಳೆಯುತ್ತಿರುವ ಸಂಬಂಧಗಳನ್ನು ಸ್ವಾಗತಿಸಿದರು. ಈ ಬೆಳೆಯುತ್ತಿರುವ ಸಂಬಂಧಗಳಿಂದ ಉಂಟಾಗುವ ವ್ಯಾಪಕ ಶ್ರೇಣಿಯ ರಾಯಭಾರಿ ಕಚೇರಿ ಮಟ್ಟದ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಸಂವಾದ ನಡೆಸುವ ಅಗತ್ಯವನ್ನು ಅವರು ಒಪ್ಪಿಕೊಂಡರು. ವಿವಿಧ ದೂತಾವಾಸ, ವೀಸಾ ಮತ್ತು ಆಯಾ ಪ್ರಾಂತ್ಯಗಳಲ್ಲಿ ವಾಸಿಸುವ ಇತರೆ ಭಾಗದ ಪ್ರಜೆಗಳ ಮೇಲೆ ಪರಿಣಾಮ ಬೀರುವ ಇತರ ವಿಷಯಗಳ ಕುರಿತು ದ್ವಿಪಕ್ಷೀಯ ಸಂವಾದಕ್ಕೆ ಸೂಕ್ತವಾದ ಸ್ವರೂಪವನ್ನು ಶೀಘ್ರವಾಗಿ ಸ್ಥಾಪಿಸಲು ಅವರು ಒಪ್ಪಿಕೊಂಡರು.

59. ತಮ್ಮ ಯುವಕರ ಪಾತ್ರವನ್ನು ಸಾಂಸ್ಕೃತಿಕ ರಾಯಭಾರಿಗಳಾಗಿ ಮತ್ತು ನಾವೀನ್ಯತೆ ಮತ್ತು 2 ದೇಶಗಳ ನಡುವಿನ ಜನರ ಸಂಪರ್ಕಗಳ ಉತ್ತೇಜನಕ್ಕೆ ವೇಗವರ್ಧಕಗಳಾಗಿ ರೂಪಿಸಲು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಇಬ್ಬರೂ ನಾಯಕರು ಯುವ ಸಹಕಾರದ ಮಹತ್ವವನ್ನು ಒತ್ತು ನೀಡಿದರು. ಎರಡೂ ಕಡೆಯ ನಡುವೆ ಯುವ ವಿನಿಮಯ ಮತ್ತು ನಿಯೋಗಗಳಿಗೆ ವೇದಿಕೆ ಸ್ಥಾಪಿಸುವ ಪ್ರಸ್ತಾಪ ಮಾಡಿದ್ದಲ್ಲದೆ, ಪರಸ್ಪರ ಆಧಾರದ ಮೇಲೆ ವಿದ್ಯಾರ್ಥಿಗಳ ವಿನಿಮಯ ಸುಗಮಗೊಳಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.

60. ಸಂಸ್ಕೃತಿ ಕ್ಷೇತ್ರದಲ್ಲಿ ಸಂತೃಪ್ತಿಯಿಂದ ಮಾಡಲಾಗುತ್ತಿರುವ ಗಣನೀಯ ಕೆಲಸಗಳನ್ನು ಎರಡೂ ಕಡೆಯವರು ಗಮನಿಸಿದರು. ಭಾರತ ಮತ್ತು ಜರ್ಮನ್ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳಾದ ಪ್ರಶ್ಯನ್ ಹೆರಿಟೇಜ್ ಫೌಂಡೇಶನ್ ಮತ್ತು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಡುವೆ ಮ್ಯೂಸಿಯಂ ಸಹಕಾರ ಕುರಿತಾದ ತಿಳಿವಳಿಕೆ ಒಪ್ಪಂದದ ವ್ಯಾಪ್ತಿ ವಿಸ್ತರಿಸುವ ಪ್ರಯತ್ನಗಳನ್ನು ಸ್ವಾಗತಿಸಿದರು.

61. ಜಿ-20 ನವದೆಹಲಿ ನಾಯಕರ ಘೋಷಣೆಗೆ (2023) ಅನುಗುಣವಾಗಿ, ಸಾಂಸ್ಕೃತಿಕ ವಸ್ತುಗಳ ಮರುಸ್ಥಾಪನೆ ಮತ್ತು ರಕ್ಷಣೆ, ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ, ನಿಕಟವಾಗಿ ಸಹಕರಿಸುವ ಉದ್ದೇಶಕ್ಕೆ ಇಬ್ಬರೂ ನಾಯಕರು ಒತ್ತು ನೀಡಿದರು. ಕಳ್ಳಸಾಗಣೆಯಾದ ವಸ್ತುಗಳನ್ನು ಸಂಬಂಧಿಸಿದ ದೇಶಕ್ಕೆ ಮತ್ತು ಮೂಲ ಸಮುದಾಯಕ್ಕೆ ವಾಪಸ ನೀಡಲು ಮತ್ತು ಮರುಸ್ಥಾಪಿಸುವ ಪ್ರಯತ್ನದಲ್ಲಿ ನಿರಂತರ ಸಂವಾದ ಮತ್ತು ಕ್ರಮಕ್ಕೆ ನಾಯಕರು ಕರೆ ನೀಡಿದರು.

62. ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಶೈಕ್ಷಣಿಕ ಪೀಠಗಳ ಸ್ಥಾಪನೆಯಂತಹ ಉಪಕ್ರಮಗಳ ಮೂಲಕ ಆಗುತ್ತಿರುವ ಗಣನೀಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯವನ್ನು ಎರಡೂ ಸರ್ಕಾರಗಳು ಶ್ಲಾಘಿಸಿದವು.

63. 7ನೇ ಐಜಿಸಿಯಲ್ಲಿ ನಡೆದ ಚರ್ಚೆಗಳಿಗೆ ಇಬ್ಬರೂ ನಾಯಕರು ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದರು.  ಇಂಡೋ-ಜರ್ಮನ್ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಮತ್ತು ಆಳಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಧಾನಿ ಮೋದಿ ಅವರ ಆತ್ಮೀಯ ಆತಿಥ್ಯಕ್ಕಾಗಿ ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಧನ್ಯವಾದ ಅರ್ಪಿಸಿದರು. ಮುಂದಿನ ಐಜಿಸಿ ಸಭೆಯ ಆತಿಥ್ಯ ವಹಿಸಲು ಜರ್ಮನಿ ಎದುರು ನೋಡುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

 

*****

 




(Release ID: 2068553) Visitor Counter : 21