ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇರಾನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 22 OCT 2024 10:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಇಂದು ಕಜಾನ್ ನಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಧ್ಯಕ್ಷರಾದ ಘನತೆವೆತ್ತ ಡಾ. ಮಸೂದ್ ಪೆಜೆಷ್ಕಿಯಾನ್ ಅವರನ್ನು ಭೇಟಿ ಮಾಡಿದರು.

ಇರಾನ್ ಇಸ್ಲಾಮಿಕ್ ಗಣರಾಜ್ಯದ 9ನೇ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೌರವಾನ್ವಿತ ಡಾ. ಮಸೂದ್ ಪೆಜೆಷ್ಕಿಯಾನ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಬ್ರಿಕ್ಸ್ ಕುಟುಂಬಕ್ಕೆ ಇರಾನ್ ಅನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿ, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಚಬಹಾರ್ ಬಂದರಿನ ದೀರ್ಘಕಾಲೀನ ಒಪ್ಪಂದಕ್ಕೆ ಸಹಿ ಹಾಕಿರುವುದು ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಹೇಳಿದ ಉಭಯ ನಾಯಕರು, ಅಫ್ಘಾನಿಸ್ತಾನದ ಪುನರ್ನಿರ್ಮಾಣ ಮತ್ತು ಪುನರಾಭಿವೃದ್ಧಿ ಮತ್ತು ಮಧ್ಯ ಏಷ್ಯಾದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕಗಳನ್ನು ಹೆಚ್ಚಿಸಲು ಅದರ ಮಹತ್ವವನ್ನು ಪುನರುಚ್ಚರಿಸಿದರು.

ಪಶ್ಚಿಮ ಏಷ್ಯಾದ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸಂಘರ್ಷ ಉಲ್ಬಣವಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ತೀವ್ರ ಕಳವಳ ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಕರೆಯನ್ನು ಪುನರುಚ್ಚರಿಸಿದರು. ನಾಗರಿಕರ ರಕ್ಷಣೆ ಮತ್ತು ಸಂಘರ್ಷವನ್ನು ಪರಿಹರಿಸುವಲ್ಲಿ ರಾಜತಾಂತ್ರಿಕತೆಯ ಪಾತ್ರವನ್ನು ಪ್ರಧಾನಿಯವರು ಒತ್ತಿ ಹೇಳಿದರು.

ಬ್ರಿಕ್ಸ್ ಮತ್ತು ಶಾಂಘೈ ಸಹಕಾರ ಸಂಸ್ಥೆ ಸೇರಿದಂತೆ ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ತಮ್ಮ ಸಹಕಾರವನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು. ಪ್ರಧಾನಮಂತ್ರಿಯವರು ಅಧ್ಯಕ್ಷ ಪೆಜೆಷ್ಕಿಯಾನ್ ಅವರನ್ನು ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಅಧ್ಯಕ್ಷ ಪೆಜೆಶ್ಕಿಯನ್ ಅವರು ಪ್ರಧಾನಮಂತ್ರಿಯವರ ಈ ಆಹ್ವಾನವನ್ನು ಸ್ವೀಕರಿಸಿದರು.

 

*****


(Release ID: 2067932) Visitor Counter : 50