ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಜಲ ಪ್ರಶಸ್ತಿಗಳ ಪ್ರದಾನ 

Posted On: 22 OCT 2024 1:56PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಐದನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಇಂದು (ಅಕ್ಟೋಬರ್ 22, 2024) ನವದೆಹಲಿಯಲ್ಲಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ನೀರು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ ಮತ್ತು ಮೂಲಭೂತ ಹಕ್ಕು. ಶುದ್ಧ ನೀರು ಸಿಗದೆ ಸ್ವಚ್ಛ ಮತ್ತು ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವಿಲ್ಲ. ನೀರಿನ ಲಭ್ಯತೆಯ ಕೊರತೆ ಮತ್ತು ಕಳಪೆ ನೈರ್ಮಲ್ಯವು ದುರ್ಬಲ ವರ್ಗದ ಜನರ ಆರೋಗ್ಯ, ಆಹಾರ ಭದ್ರತೆ ಮತ್ತು ಜೀವನೋಪಾಯದ ಮೇಲೆ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಎಂದರು. ಭೂಮಿಯ ಮೇಲೆ ಸಿಹಿನೀರಿನ ಸಂಪತ್ತು ಸೀಮಿತವೆಂದು ನಮಗೆಲ್ಲ ಗೊತ್ತಿದ್ದರೂ ಜಲಸಂರಕ್ಷಣೆ ಮತ್ತು ನಿರ್ವಹಣೆಯನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು ರಾಷ್ಟ್ರಪತಿಗಳು ಹೇಳಿದರು. ಮಾನವ ನಿರ್ಮಿತ ಕಾರಣಗಳಿಂದಾಗಿ ಈ ಸಂಪನ್ಮೂಲಗಳು ಕಲುಷಿತಗೊಳ್ಳುತ್ತಿವೆ ಹಾಗು ಖಾಲಿಯಾಗುತ್ತಿವೆ. ಜಲ ಸಂರಕ್ಷಣೆ ಮತ್ತು ನೀರು ಕೊಯ್ಲು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಲ ಸಂರಕ್ಷಣೆ ನಮ್ಮ ಪರಂಪರೆಯ ಭಾಗವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ ಪೂರ್ವಜರು ಹಳ್ಳಿಗಳ ಬಳಿ ಕೆರೆಗಳನ್ನು ಕಟ್ಟುತ್ತಿದ್ದರು. ನೀರಿನ ಕೊರತೆಯ ಸಂದರ್ಭದಲ್ಲಿ ಸಂಗ್ರಹವಾದ ನೀರನ್ನು ಬಳಸಬಹುದೆಂದು ಅವರು ದೇವಾಲಯಗಳಲ್ಲಿ ಅಥವಾ ಹತ್ತಿರ ಜಲಾಶಯಗಳನ್ನು ನಿರ್ಮಿಸುತ್ತಿದ್ದರು. ದುರದೃಷ್ಟವಶಾತ್, ನಾವು ನಮ್ಮ ಪೂರ್ವಜರ ಜ್ಞಾನವನ್ನು ಮರೆಯುತ್ತಿದ್ದೇವೆ. ಕೆಲವರು ಸ್ವಂತ ಲಾಭಕ್ಕಾಗಿ ಜಲಾಶಯಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಬರಗಾಲದ ಸಮಯದಲ್ಲಿ ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಭಾರೀ ಮಳೆಯ ಸಮಯದಲ್ಲಿ ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಜಲಸಂಪನ್ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಎಲ್ಲರ ಸಾಮೂಹಿಕ ಜವಾಬ್ದಾರಿ ಎನ್ನುವುದನ್ನುನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವನ್ನು ರಾಷ್ಟ್ರಪತಿಗಳು ಒತ್ತಿ ಹೇಳಿದರು. ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ, ನಾವು ಜಲ ಸುರಕ್ಷಿತ ಭಾರತವನ್ನು ರಚಿಸಲು ಸಾಧ್ಯವಿಲ್ಲ. ಸಣ್ಣ ಪ್ರಯತ್ನಗಳು ಗಮನಾರ್ಹ ಕೊಡುಗೆಗಳನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು. ಉದಾಹರಣೆಗೆ ನಮ್ಮ ಮನೆಗಳ ನಲ್ಲಿಗಳನ್ನು ಅನಾವಶ್ಯಕವಾಗಿ ತೆರೆದಿಡಬಾರದು, ಓವರ್ ಹೆಡ್ ನೀರಿನ ಟ್ಯಾಂಕಿನಿಂದ ನೀರು ಉಕ್ಕಿ ಹರಿಯಬಾರದು ಎನ್ನುವುದನ್ನು ನೆನಪಿನಲ್ಲಿಡಬೇಕು, ಮನೆಗಳಲ್ಲಿ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಿ ಮತ್ತು ಸಾಂಪ್ರದಾಯಿಕ ಜಲಾಶಯಗಳನ್ನು ಸಾಮೂಹಿಕವಾಗಿ ನವೀಕರಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಜಲ ಪ್ರಶಸ್ತಿಗಳು ಜಲಸಂಪನ್ಮೂಲಗಳ ಸಂಬಂಧಿತ ವಿಧಾನಗಳು ಮತ್ತು ಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ಕಾರ್ಯಕ್ರಮದ ಮೂಲಕ ಪ್ರಶಸ್ತಿ ಪುರಸ್ಕೃತರ "ಉತ್ತಮ ಅಭ್ಯಾಸಗಳು" ಜನಸಾಮಾನ್ಯರಿಗೆ ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಜಲ ಪ್ರಶಸ್ತಿಗಳು ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಉತ್ತಮ ನೀರಿನ ಬಳಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವ ಗುರಿಯನ್ನು ಹೊಂದಿವೆ. ಐದನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಒಂಬತ್ತು ವಿಭಾಗಗಳಲ್ಲಿ ನೀಡಲಾಯಿತು - ಅತ್ಯುತ್ತಮ ರಾಜ್ಯ, ಅತ್ಯುತ್ತಮ ಜಿಲ್ಲೆ, ಅತ್ಯುತ್ತಮ ಗ್ರಾಮ ಪಂಚಾಯತಿ, ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆ, ಅತ್ಯುತ್ತಮ ಶಾಲೆ ಅಥವಾ ಕಾಲೇಜು, ಅತ್ಯುತ್ತಮ ಕೈಗಾರಿಕೆ, ಅತ್ಯುತ್ತಮ ನೀರು ಬಳಕೆದಾರರ ಸಂಘ, ಅತ್ಯುತ್ತಮ ಸಂಸ್ಥೆ (ಶಾಲೆ ಅಥವಾ ಕಾಲೇಜು ಹೊರತುಪಡಿಸಿ), ಮತ್ತು ಅತ್ಯುತ್ತಮ ನಾಗರಿಕ ಸಂಘ.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ :-

 

*****
 


(Release ID: 2067277) Visitor Counter : 51