ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಾವೋ ಪಿಡಿಆರ್ ನಲ್ಲಿ ನಡೆದ 21ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆ

Posted On: 10 OCT 2024 5:43PM by PIB Bengaluru

21ನೇ ಆಸಿಯಾನ್-ಭಾರತ ಶೃಂಗಸಭೆ 2024ರ ಅಕ್ಟೋಬರ್ 10 ರಂದು ಲಾವೋ ಪಿಡಿಆರ್ ನ  ವಿಯೆಂಟಿಯಾನ್ ನಲ್ಲಿ ನಡೆಯಿತು. ಭಾರತದ ಆಕ್ಟ್ ಈಸ್ಟ್ ಪಾಲಿಸಿ (ಪೂರ್ವದಲ್ಲಿ ಕಾರ್ಯಾಚರಿಸು ನೀತಿ)ಯ ಒಂದು ದಶಕವನ್ನು ಗುರುತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಲು ಮತ್ತು ಸಹಕಾರದ ಭವಿಷ್ಯದ ದಿಕ್ಕನ್ನು ರೂಪಿಸಲು ಆಸಿಯಾನ್ ನಾಯಕರೊಂದಿಗೆ ಸೇರಿಕೊಂಡರು. ಇದು ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ 11ನೇ ಭಾಗವಹಿಸುವಿಕೆಯಾಗಿದೆ.

2. ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಆಸಿಯಾನ್ ಏಕತೆ, ಆಸಿಯಾನ್ ಕೇಂದ್ರೀಕರಣ ಮತ್ತು ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು. 21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಕರೆದ ಅವರು, ಏಷ್ಯಾದ ಭವಿಷ್ಯಕ್ಕೆ ಮಾರ್ಗದರ್ಶನ ನೀಡಲು ಭಾರತ-ಆಸಿಯಾನ್ ಸಂಬಂಧಗಳು ನಿರ್ಣಾಯಕವಾಗಿವೆ ಎಂಬುದನ್ನು ಗಮನಿಸಿದರು. ಭಾರತದ ಆಕ್ಟ್ ಈಸ್ಟ್ ನೀತಿಯ ಜೀವಂತಿಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ ಹತ್ತು ವರ್ಷಗಳಲ್ಲಿ ಭಾರತ-ಆಸಿಯಾನ್ ವ್ಯಾಪಾರವು ದ್ವಿಗುಣಗೊಂಡು 130 ಶತಕೋಟಿ ಡಾಲರ್ ಗೆ ತಲುಪಿದೆ ಎಂದರು. ಆಸಿಯಾನ್ ಇಂದು ಭಾರತದ ಅತಿದೊಡ್ಡ ವ್ಯಾಪಾರ ಮತ್ತು ಹೂಡಿಕೆ ಪಾಲುದಾರರಲ್ಲಿ ಒಂದಾಗಿದೆ; ಏಳು ಆಸಿಯಾನ್ ರಾಷ್ಟ್ರಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಸ್ಥಾಪಿಸಲಾಗಿದೆ; ಈ ವಲಯದಲ್ಲಿ ಫಿನ್-ಟೆಕ್ ಸಹಯೋಗದೊಂದಿಗೆ ಮಾಡಿದ ಭರವಸೆಯ ಆರಂಭ; ಮತ್ತು ಐದು ಆಸಿಯಾನ್ ರಾಷ್ಟ್ರಗಳಲ್ಲಿ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಮರು ಸ್ಥಾಪನೆಯಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯತ್ತಲೂ ಅವರು ಬೆಟ್ಟು ಮಾಡಿದರು. ಆಸಿಯಾನ್-ಭಾರತ ಸಮುದಾಯದ ಪ್ರಯೋಜನಕ್ಕಾಗಿ ಹೆಚ್ಚಿನ ಆರ್ಥಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಆಸಿಯಾನ್-ಭಾರತ ಎಫ್ ಟಿಎ (ಎಐಟಿಐಜಿಎ) ಪರಾಮರ್ಶೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಆಸಿಯಾನ್ ಯುವಜನರಿಗೆ ನೀಡಲಾಗುವ ವಿದ್ಯಾರ್ಥಿವೇತನಗಳ ಮೂಲಕ ಭಾರತ-ಆಸಿಯಾನ್ ಜ್ಞಾನ ಪಾಲುದಾರಿಕೆಯ ಪ್ರಗತಿಯ ಬಗ್ಗೆಯೂ ಪ್ರಧಾನ ಮಂತ್ರಿ ಅವರು  ಮಾತನಾಡಿದರು.

3. "ಸಂಪರ್ಕ ಮತ್ತು ಸ್ಥಿತಿಸ್ಥಾಪಕತ್ವವನ್ನು/ಪುನಶ್ಚೇತನವನ್ನು ಹೆಚ್ಚಿಸುವುದು" ಎಂಬ ಅಧ್ಯಕ್ಷರ ಶೀರ್ಷಿಕೆಯ ವಿಷಯಕ್ಕೆ ಅನುಗುಣವಾಗಿ, ಪ್ರಧಾನಮಂತ್ರಿಯವರು 10 ಅಂಶಗಳ ಯೋಜನೆಯನ್ನು ಘೋಷಿಸಿದರು, ಅವುಗಳೆಂದರೆ:

i) 2025ನೇ ವರ್ಷವನ್ನು ಆಸಿಯಾನ್-ಭಾರತ ಪ್ರವಾಸೋದ್ಯಮ ವರ್ಷವನ್ನಾಗಿ ಆಚರಿಸುವುದು, ಇದಕ್ಕಾಗಿ ಭಾರತವು ಜಂಟಿ ಚಟುವಟಿಕೆಗಳಿಗಾಗಿ 5 ಮಿಲಿಯನ್ ಅಮೆರಿಕನ್ ಡಾಲರ್ ಲಭ್ಯವಾಗಿಸಲಿದೆ.

ii) ಯುವ ಶೃಂಗಸಭೆ, ಸ್ಟಾರ್ಟ್ ಅಪ್ ಉತ್ಸವ, ಹ್ಯಾಕಥಾನ್, ಸಂಗೀತ ಉತ್ಸವ, ಆಸಿಯಾನ್-ಭಾರತ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ಗಳ ಜಾಲ ಮತ್ತು ದಿಲ್ಲಿ ಸಂವಾದ ಸೇರಿದಂತೆ ಹಲವಾರು ಜನ ಕೇಂದ್ರಿತ ಚಟುವಟಿಕೆಗಳ ಮೂಲಕ ಆಕ್ಟ್ ಈಸ್ಟ್ ನೀತಿಯ ಒಂದು ದಶಕವನ್ನು ಆಚರಿಸುವುದು;

iii) ಆಸಿಯಾನ್-ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ನಿಧಿಯಡಿ ಆಸಿಯಾನ್-ಭಾರತ ಮಹಿಳಾ ವಿಜ್ಞಾನಿಗಳ ಸಮಾವೇಶವನ್ನು ಆಯೋಜಿಸುವುದು;

iv) ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ಮತ್ತು ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಸಿಯಾನ್ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನಗಳನ್ನು ಒದಗಿಸುವುದು;

v) 2025ರ ವೇಳೆಗೆ ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದದ ಪರಾಮರ್ಶೆ;

vi)  ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದು, ಇದಕ್ಕಾಗಿ ಭಾರತವು 5 ಮಿಲಿಯನ್ ಅಮೆರಿಕನ್ ಡಾಲರ್ ಒದಗಿಸುತ್ತದೆ;

vii)  ಆರೋಗ್ಯ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ನಿಟ್ಟಿನಲ್ಲಿ ಹೊಸ ಆರೋಗ್ಯ ಸಚಿವರ ಟ್ರ್ಯಾಕನ್ನು ಪ್ರಾರಂಭಿಸುವುದು;

viii) ಡಿಜಿಟಲ್ ಮತ್ತು ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಆಸಿಯಾನ್-ಭಾರತ ಸೈಬರ್ ನೀತಿ ಸಂವಾದದ ನಿಯಮಿತ ಕಾರ್ಯವಿಧಾನವನ್ನು ಪ್ರಾರಂಭಿಸುವುದು;

ix) ಹಸಿರು ಹೈಡ್ರೋಜನ್ ಕುರಿತ ಕಾರ್ಯಾಗಾರ; ಮತ್ತು

x) ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ನಿಟ್ಟಿನಲ್ಲಿ 'ತಾಯಿಗಾಗಿ ಗಿಡವನ್ನು ನೆಡಿ' ಅಭಿಯಾನಕ್ಕೆ ಸೇರಲು ಆಸಿಯಾನ್ ನಾಯಕರಿಗೆ  ಆಹ್ವಾನ.

4. ಸಭೆಯಲ್ಲಿ, ಆಸಿಯಾನ್-ಭಾರತ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎರಡೂ ಕಡೆಯವರಿಗೆ ಮಾರ್ಗದರ್ಶನ ನೀಡುವ ಹೊಸ ಆಸಿಯಾನ್-ಭಾರತ ಕ್ರಿಯಾ ಯೋಜನೆಯನ್ನು (2026-2030) ರೂಪಿಸಲು ನಾಯಕರು ಒಪ್ಪಿಕೊಂಡರು ಮತ್ತು ಎರಡು ಜಂಟಿ ಹೇಳಿಕೆಗಳನ್ನು ಅಂಗೀಕರಿಸಿದರು:

i) ಭಾರತದ ಆಕ್ಟ್ ಈಸ್ಟ್ ಪಾಲಿಸಿ (ಎಇಪಿ) ಬೆಂಬಲದೊಂದಿಗೆ ಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನ (ಎಒಐಪಿ) ಹಿನ್ನೆಲೆಯಲ್ಲಿ ಈ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಜಂಟಿ ಹೇಳಿಕೆ – ಆಸಿಯಾನ್ ಮತ್ತು ಭಾರತದ ನಡುವಿನ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಭಾರತದ ಆಕ್ಟ್ ಈಸ್ಟ್ ನೀತಿಯ ಕೊಡುಗೆಯನ್ನು ನಾಯಕರು ಗುರುತಿಸಿದರು. ಜಂಟಿ ಹೇಳಿಕೆಯ ಪೂರ್ಣ ಪಠ್ಯವನ್ನು ಇಲ್ಲಿ ಪಡೆಯಬಹುದು. (here.)

ii) ಡಿಜಿಟಲ್ ರೂಪಾಂತರವನ್ನು/ಪರಿವರ್ತನೆಯನ್ನು  ಮುನ್ನಡೆಸುವ ಆಸಿಯಾನ್-ಭಾರತ ಜಂಟಿ ಹೇಳಿಕೆಯಲ್ಲಿ ಡಿಜಿಟಲ್ ರೂಪಾಂತರ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ನಾಯಕರು ಶ್ಲಾಘಿಸಿದರು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತದೊಂದಿಗಿನ ಪಾಲುದಾರಿಕೆಯನ್ನು ಸ್ವಾಗತಿಸಿದರು. ಜಂಟಿ ಹೇಳಿಕೆಯ ಪೂರ್ಣ ಪಠ್ಯಕ್ಕೆ ಇಲ್ಲಿ ಪ್ರವೇಶಿಸಬಹುದು. (here)

5. 21ನೇ ಆಸಿಯಾನ್-ಭಾರತ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮತ್ತು ಅವರ ಆತ್ಮೀಯತೆ ಹಾಗು ಆತಿಥ್ಯಕ್ಕಾಗಿ ಲಾವೋಸ್ ಪ್ರಧಾನಮಂತ್ರಿಯವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಕಳೆದ ಮೂರು ವರ್ಷಗಳಲ್ಲಿ ಸಂಯೋಜಕ ದೇಶವಾಗಿ ರಚನಾತ್ಮಕ ಪಾತ್ರ ವಹಿಸಿದ್ದಕ್ಕಾಗಿ ಸಿಂಗಾಪುರಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಭಾರತಕ್ಕೆ ಹೊಸ ಸಂಯೋಜಕ ದೇಶವಾಗಿ ಫಿಲಿಪ್ಪೀನ್ಸ್ ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿಯೂ ಹೇಳಿದರು.

 

*****



(Release ID: 2064250) Visitor Counter : 14