ಪ್ರಧಾನ ಮಂತ್ರಿಯವರ ಕಛೇರಿ
ಮಾಲ್ಡೀವ್ಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅವತರಣಿಕೆ (ಅಕ್ಟೋಬರ್ 7, 2024)
Posted On:
07 OCT 2024 2:25PM by PIB Bengaluru
ಗೌರವಾನ್ವಿತ ಅಧ್ಯಕ್ಷ ಮುಯಿಝು,
ಎರಡೂ ರಾಷ್ಟ್ರಗಳ ಪ್ರತಿನಿಧಿಗಳೇ,
ಮಾಧ್ಯಮದ ನಮ್ಮ ಸ್ನೇಹಿತರೇ,.
ಎಲ್ಲರಿಗೂ ನಮಸ್ಕಾರ!
ಮೊದಲನೆಯದಾಗಿ, ನಾನು ಅಧ್ಯಕ್ಷ ಮುಯಿಝು ಮತ್ತು ಅವರ ನಿಯೋಗಕ್ಕೆ ಆತ್ಮೀಯ ಸ್ವಾಗತವನ್ನು ನೀಡಲು ಬಯಸುತ್ತೇನೆ
ಭಾರತ ಮತ್ತು ಮಾಲ್ಡೀವ್ಸ್ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿವೆ.
ಮತ್ತು ಭಾರತವು ಮಾಲ್ಡೀವ್ಸ್ ನ ನಿಕಟ ನೆರೆಯ ಮತ್ತು ಸ್ಥಿರ/ಅಚಲ ಸ್ನೇಹಿತ.
ನಮ್ಮ 'ನೆರೆಹೊರೆಯವರು ಮೊದಲು' ನೀತಿ ಮತ್ತು 'ಸಾಗರ್' ದೃಷ್ಟಿಕೋನ ಎರಡರಲ್ಲೂ ಮಾಲ್ಡೀವ್ಸ್ ಮಹತ್ವದ ಸ್ಥಾನವನ್ನು ಹೊಂದಿದೆ.
ಮಾಲ್ಡೀವ್ಸ್ ಗೆ ಮೊದಲ ಪ್ರತಿಕ್ರಿಯೆದಾರನಾಗಿ ಭಾರತ ನಿರಂತರವಾಗಿ ಕಾರ್ಯನಿರ್ವಹಿಸಿದೆ.
ಮಾಲ್ಡೀವ್ಸ್ ಜನರಿಗೆ ಅಗತ್ಯ ವಸ್ತುಗಳು, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಕುಡಿಯುವ ನೀರನ್ನು ಒದಗಿಸುವುದು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಲಸಿಕೆಗಳನ್ನು ತಲುಪಿಸುವುದು, ಇತ್ಯಾದಿಗಳ ಮೂಲಕ ಭಾರತವು ನೆರೆಯ ರಾಷ್ಟ್ರವಾಗಿ ತನ್ನ ಜವಾಬ್ದಾರಿಗಳನ್ನು ನಿರಂತರವಾಗಿ ನಿರ್ವಹಿಸಿದೆ.
ಮತ್ತು ಇಂದು, ನಮ್ಮ ಪರಸ್ಪರ ಸಹಕಾರಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ಒದಗಿಸಲು, ನಾವು "ಸಮಗ್ರ ಆರ್ಥಿಕ ಮತ್ತು ಕಡಲ ಭದ್ರತಾ ಪಾಲುದಾರಿಕೆ" ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದೇವೆ.
ಸ್ನೇಹಿತರೇ,
ಅಭಿವೃದ್ಧಿ ಪಾಲುದಾರಿಕೆಯು ನಮ್ಮ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. ಮತ್ತು ಈ ಸಂದರ್ಭದಲ್ಲಿ ಮಾಲ್ಡೀವ್ಸ್ ಜನರ ಆದ್ಯತೆಗಳಿಗೆ ನಾವು ಸದಾ ಮೊದಲ ಆದ್ಯತೆ ನೀಡುತ್ತೇವೆ.
ಈ ವರ್ಷ ಮಾಲ್ಡೀವ್ಸ್ ಗೆ ಎಸ್.ಬಿ.ಐ.ಯು 100 ಮಿಲಿಯನ್ ಡಾಲರ್ ಖಜಾನೆ ಬಿಲ್ ಗಳನ್ನು ಹೊರತಂದಿದೆ. ಇಂದು, ಮಾಲ್ಡೀವ್ಸ್ ಅಗತ್ಯಕ್ಕೆ ಅನುಗುಣವಾಗಿ, 400 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು 3000 ಕೋಟಿ ರೂಪಾಯಿ (30 ಬಿಲಿಯನ್ ರೂ.) ಕರೆನ್ಸಿ ವಿನಿಮಯ ಒಪ್ಪಂದವನ್ನು ಸಹ ಅಂತಿಮಗೊಳಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಗೆ ಸಮಗ್ರ ಸಹಕಾರದ ಬಗ್ಗೆ ನಾವು ಚರ್ಚಿಸಿದ್ದೇವೆ, ಇಂದು ನಾವು ಹನಿಮಧೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು ಉದ್ಘಾಟಿಸಿದ್ದೇವೆ. ಈಗ, 'ಗ್ರೇಟರ್ ಮಾಲೆ' ಸಂಪರ್ಕ ಯೋಜನೆಯನ್ನು ಸಹ ತ್ವರಿತಗೊಳಿಸಲಾಗುವುದು. ತಿಲಾಫುಶಿಯಲ್ಲಿ ಹೊಸ ವಾಣಿಜ್ಯ ಬಂದರಿನ ಅಭಿವೃದ್ಧಿಗೆ ಬೆಂಬಲ ನೀಡಲಾಗುವುದು.
ಇಂದು, ಭಾರತದ ನೆರವಿನೊಂದಿಗೆ ನಿರ್ಮಿಸಲಾದ 700 ಕ್ಕೂ ಹೆಚ್ಚು ಸಾಮಾಜಿಕ ವಸತಿ ಘಟಕಗಳನ್ನು ಹಸ್ತಾಂತರಿಸಲಾಗಿದೆ. ಮಾಲ್ಡೀವ್ಸ್ ನ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳು ಪೂರ್ಣಗೊಂಡಿವೆ ಮತ್ತು ಇತರ ಆರು ದ್ವೀಪಗಳಲ್ಲಿ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಈ ಯೋಜನೆಗಳು ಮೂವತ್ತು ಸಾವಿರ ಜನರಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಸುತ್ತವೆ.
"ಹಾ ಧಾಲು" ನಲ್ಲಿ ಕೃಷಿ ಆರ್ಥಿಕ ವಲಯ ಮತ್ತು "ಹಾ ಅಲಿಫು" ನಲ್ಲಿ ಮೀನು ಸಂಸ್ಕರಣಾ ಸೌಲಭ್ಯವನ್ನು ಸ್ಥಾಪಿಸಲು ನೆರವು ನೀಡಲಾಗುವುದು.
ನಾವು ಸಾಗರಶಾಸ್ತ್ರ ಮತ್ತು ನೀಲಿ ಆರ್ಥಿಕತೆ ಕ್ಷೇತ್ರಗಳಲ್ಲಿಯೂ ಒಟ್ಟಾಗಿ ಕೆಲಸ ಮಾಡುತ್ತೇವೆ.
ಸ್ನೇಹಿತರೇ,
ನಮ್ಮ ಆರ್ಥಿಕ ಸಂಬಂಧಗಳನ್ನು ಬಲಪಡಿಸುವುದಕ್ಕಾಗಿ, ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ನಾವು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ವ್ಯವಹಾರ ಇತ್ಯರ್ಥದ ಬಗ್ಗೆಯೂ ಕೆಲಸ ಮಾಡುತ್ತೇವೆ.
ನಾವು ಡಿಜಿಟಲ್ ಸಂಪರ್ಕದ ಬಗ್ಗೆಯೂ ಗಮನ ಹರಿಸಿದ್ದೇವೆ. ಇಂದು ಮಾಲ್ಡೀವ್ಸ್ ನಲ್ಲಿ ರುಪೇ ಕಾರ್ಡ್ ಅನ್ನು ಬಿಡುಗಡೆ ಮಾಡಲಾಯಿತು. ಭವಿಷ್ಯದಲ್ಲಿ, ನಾವು ಯುಪಿಐ ಮೂಲಕ ಭಾರತ ಮತ್ತು ಮಾಲ್ಡೀವ್ಸ್ ನ್ನು ಜೋಡಿಸಲು ಕೆಲಸ ಮಾಡುತ್ತೇವೆ.
ಅಡ್ಡುವಿನಲ್ಲಿ ಹೊಸ ಭಾರತೀಯ ದೂತಾವಾಸ ಮತ್ತು ಬೆಂಗಳೂರಿನಲ್ಲಿ ಹೊಸ ಮಾಲ್ಡೀವ್ಸ್ ದೂತಾವಾಸವನ್ನು ತೆರೆಯುವ ಬಗ್ಗೆ ನಾವು ಚರ್ಚಿಸಿದ್ದೇವೆ.
ಈ ಎಲ್ಲಾ ಉಪಕ್ರಮಗಳು ನಮ್ಮ ಜನರ ನಡುವಿನ ಸಂಬಂಧವನ್ನು ಬಲಪಡಿಸುತ್ತವೆ.
ಸ್ನೇಹಿತರೇ,
ನಾವು ರಕ್ಷಣಾ ಮತ್ತು ಭದ್ರತಾ ಸಹಕಾರದ ವಿವಿಧ ಅಂಶಗಳ ಬಗ್ಗೆ ಸಮಗ್ರ ಚರ್ಚೆಗಳಲ್ಲಿ ತೊಡಗಿದ್ದೇವೆ.
ಏಕತಾ ಬಂದರು ಯೋಜನೆ ವೇಗವಾಗಿ ಪ್ರಗತಿಯಲ್ಲಿದೆ.
ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಳ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯಲ್ಲಿ ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ. ಒಟ್ಟಾಗಿ, ನಾವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆ ಮತ್ತು ಸಮೃದ್ಧಿಗಾಗಿ ಶ್ರಮಿಸುತ್ತೇವೆ. ನಾವು ಜಲವಿಜ್ಞಾನ ಮತ್ತು ವಿಪತ್ತು ಪ್ರತಿಕ್ರಿಯೆಯಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸುತ್ತೇವೆ.
ಕೊಲಂಬೊ ಭದ್ರತಾ ಸಮಾವೇಶದ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಮಾಲ್ಡೀವ್ಸ್ ಸೇರ್ಪಡೆಗೊಳ್ಳುವುದನ್ನು ನಾವು ಸ್ವಾಗತಿಸುತ್ತೇವೆ.
ಹವಾಮಾನ ಬದಲಾವಣೆ ಎರಡೂ ದೇಶಗಳಿಗೆ ದೊಡ್ಡ ಸವಾಲನ್ನು ಒಡ್ಡಿದೆ. ಈ ನಿಟ್ಟಿನಲ್ಲಿ, ಸೌರಶಕ್ತಿ ಮತ್ತು ಇಂಧನ ದಕ್ಷತೆಯಲ್ಲಿ ತನ್ನ ಪರಿಣತಿಯನ್ನು ಮಾಲ್ಡೀವ್ಸ್ ನೊಂದಿಗೆ ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ.
ಗೌರವಾನ್ವಿತರೇ,
ಮತ್ತೊಮ್ಮೆ, ನಾನು ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಸ್ವಾಗತಿಸುತ್ತೇನೆ.
ನಿಮ್ಮ ಭೇಟಿ ನಮ್ಮ ಸಂಬಂಧಕ್ಕೆ ಹೊಸ ಅಧ್ಯಾಯವನ್ನು ಸೇರಿಸುತ್ತಿದೆ.
ಮಾಲ್ಡೀವ್ಸ್ ಜನರ ಪ್ರಗತಿ ಮತ್ತು ಸಮೃದ್ಧಿಗೆ ನಾವು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತೇವೆ.
ತುಂಬ ಧನ್ಯವಾದಗಳು.
ಘೋಷಣೆ - ಇದು ಪ್ರಧಾನ ಮಂತ್ರಿಯವರ ಹೇಳಿಕೆಗಳ ಸರಿಸುಮಾರಾದ ಭಾಷಾಂತರ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(Release ID: 2063122)
Visitor Counter : 35
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam