ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಭಾರತೀಯ ಪೊಲೀಸ್ ಸೇವಾ ಪರೀಕ್ಷಾರ್ಥಿಗಳು ರಾಷ್ಟ್ರಪತಿಯವರನ್ನು ಭೇಟಿ ಮಾಡಿದರು 

Posted On: 30 SEP 2024 2:06PM by PIB Bengaluru

76 ಆರ್ ಆರ್  (2023 ಬ್ಯಾಚ್) ನ ಭಾರತೀಯ ಪೊಲೀಸ್ ಸೇವೆಯ ಪರೀಕ್ಷಾರ್ಥಿಗಳ ತಂಡ ಇಂದು (ಸೆಪ್ಟೆಂಬರ್ 30, 2024) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು.

ಪರೀಕ್ಷಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರಾಷ್ಟ್ರಪತಿಗಳು, ವಿವಿಧ ಅಖಿಲ ಭಾರತ ಸೇವೆಗಳಲ್ಲಿ, ಭಾರತೀಯ ಪೊಲೀಸ್ ಸೇವೆ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ಕೇವಲ ಆಡಳಿತದ ತಳಹದಿಯಲ್ಲ; ಇದು ಆಧುನಿಕ ರಾಜ್ಯದ ಆಧಾರವಾಗಿದೆ. ಸರಳವಾಗಿ ಹೇಳುವುದಾದರೆ, ಅನೇಕ ಸ್ಥಳಗಳಲ್ಲಿ ಮತ್ತು ಅನೇಕ ಸಂದರ್ಭಗಳಲ್ಲಿ, ಅವರು ಸಹ ನಾಗರಿಕರಿಗೆ ರಾಜ್ಯದ ಮುಖವಾಗಿರುತ್ತಾರೆ ಮತ್ತು ಅವರು ರಾಜ್ಯದ ಆಡಳಿತ ಯಂತ್ರದೊಂದಿಗೆ ಅವರ ಮೊದಲ ಸಂಪರ್ಕದ ಕೊಂಡಿ ಆಗಿರುತ್ತಾರೆ ಎಂದು ಹೇಳಬಹುದು ಎಂದು ಹೇಳಿದರು.

ಭವಿಷ್ಯದಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವ ಗುರಿಯನ್ನು ಹೊಂದಿದ್ದು, ಐಪಿಎಸ್ ಅಧಿಕಾರಿಗಳ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಮಾತ್ರ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡದೆ, ನ್ಯಾಯವನ್ನು ಖಾತರಿಪಡಿಸದೆ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸದೆ, ಪ್ರಗತಿಯೆನ್ನುವುದು ಅರ್ಥಹೀನ ಪದವಾಗುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಅವರ ಹೆಚ್ಚುತ್ತಿರುವ ಸಂಖ್ಯೆಯು ಆರಕ್ಷಣೆಯ  ಒಟ್ಟಾರೆ ಸ್ವರೂಪವನ್ನು ಉತ್ತಮವಾಗಿ ಬದಲಾಯಿಸಬಹುದು, ಪೊಲೀಸ್ ಮತ್ತು ಸಮುದಾಯದ ಸಂಬಂಧಗಳನ್ನು ಸುಧಾರಿಸುತ್ತದೆ ಮತ್ತು ರಾಷ್ಟ್ರಕ್ಕೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಪ್ರಗತಿಯಿಂದ ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಹಾಗು ಪತ್ತೆ ಹಚ್ಚುವಿಕೆ ಮತ್ತು ಪೊಲೀಸ್ನ ಇತರ ಅಂಶಗಳು ಪ್ರಯೋಜನ ಪಡೆದಿವೆ. ಆದರೆ, ಕ್ರಿಮಿನಲ್ಗಳು ಮತ್ತು ಭಯೋತ್ಪಾದಕರು ಕೂಡ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ ಎನ್ನುವುದು ಇದರ ಕೆಟ್ಟ ಅಂಶವಾಗಿದೆ . ಪ್ರಪಂಚದಾದ್ಯಂತ ಸೈಬರ್-ಅಪರಾಧಗಳು ಮತ್ತು ಸೈಬರ್ ಯುದ್ಧಗಳು ಹೆಚ್ಚುತ್ತಿರುವಾಗ, ಐಪಿಎಸ್ ಅಧಿಕಾರಿಗಳು  ತಂತ್ರಜ್ಞಾನ ನಿಪುಣರಾಗಿ  ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಐಪಿಎಸ್ ಅಧಿಕಾರಿಗಳ ಹೆಗಲ ಮೇಲಿರುವ ಮಹತ್ತರವಾದ ಜವಾಬ್ದಾರಿಗಳು ಕೆಲವೊಮ್ಮೆ ತುಂಬಾ ಒತ್ತಡವನ್ನು ಉಂಟುಮಾಡಬಹುದು ಎಂದು ರಾಷ್ಟ್ರಪತಿಗಳು ಹೇಳಿದರು. ಆದ್ದರಿಂದ, ಅವರು ತಮ್ಮ ಮಾನಸಿಕ ಯೋಗಕ್ಷೇಮವನ್ನು ಎಂದಿಗೂ ನಿರ್ಲಕ್ಷಿಸಬಾರದು. ಯೋಗ, ಪ್ರಾಣಾಯಾಮ ಮತ್ತು ವಿಶ್ರಾಂತಿ ತಂತ್ರಗಳನ್ನು ಅವರ ದಿನಚರಿಯ ಭಾಗವಾಗಿಸಲು ಅವರು ತಿಳಿಸಿದರು. ‘ಐಪಿಎಸ್’ನಲ್ಲಿ ‘ಎಸ್’ ಎಂದರೆ ಸೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರ ಮತ್ತು ಅದರ ನಾಗರಿಕರಿಗೆ ಸೇವೆ ಸಲ್ಲಿಸುವುದು ಅವರ ಮೂಲಮಂತ್ರವಾಗಿದೆ ಎಂದು  ರಾಷ್ಟ್ರಪತಿಗಳು ಹೇಳಿದರು.

ರಾಷ್ಟ್ರಪತಿಗಳ ಭಾಷಣ ನೋಡಲು ಇಲ್ಲಿ ಕ್ಲಿಕ್ ಮಾಡಿ

 

*****
 



(Release ID: 2060612) Visitor Counter : 4