ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ ಸೆಮಿಕಾನ್ ಇಂಡಿಯಾ-2024 ಸಮ್ಮೇಳನದಲ್ಲಿ ಭಾರತ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಉನ್ನತ ಸೆಮಿಕಂಡಕ್ಟರ್ ಕಂಪನಿಗಳ ಸಿಇಒಗಳು
ಮೋದಿ ಅವರು ರೂಪಿಸಿದ ಕಾನೂನುಗಳು ತ್ವರಿತ ಮತ್ತು ಅಗಾಧ ಬೆಳವಣಿಗೆಗೆ ಕಾರಣವಾಗಿವೆ: ಶ್ರೀ ಅಜಿತ್ ಮನೋಚಾ, ಸಿಇಒ, ಸೆಮಿ
ಭಾರತದ ಡಿಜಿಟಲ್ ಭವಿಷ್ಯ ಸುರಕ್ಷಿತಗೊಳಿಸಲು ಇದೇ ನಿಜವಾದ ಸಮಯ, ಸಕಾಲ, ಭಾರತಕ್ಕೆ ಅಮೂಲ್ಯ ಸಮಯ: ಡಾ ರಣಧೀರ್ ಠಾಕೂರ್, ಅಧ್ಯಕ್ಷ ಮತ್ತು ಸಿಇಒ, ಟಾಟಾ ಎಲೆಕ್ಟ್ರಾನಿಕ್ಸ್
ದೀರ್ಘಾವಧಿಯಲ್ಲಿ ಕೆಲಸ ಮಾಡಲು ವ್ಯವಹಾರಗಳಿಗೆ ಅಗತ್ಯವಿರುವ ನಾವೀನ್ಯತೆ, ಪ್ರಜಾಪ್ರಭುತ್ವ ಮತ್ತು ನಂಬಿಕೆಯ 3 ಅಂಶಗಳನ್ನು ಪ್ರಧಾನ ಮಂತ್ರಿ ಸಂಯೋಜಿಸಿದ್ದಾರೆ: ಶ್ರೀ ಕರ್ಟ್ ಸೀವರ್ಸ್, ಸಿಇಒ, ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್
ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಮೌಲ್ಯವರ್ಧಿತ ಸುಧಾರಿತ ಸೆಮಿಕಂಡಕ್ಟರ್ ವಿನ್ಯಾಸ ಚಟುವಟಿಕೆಗಳನ್ನು ನಿಭಾಯಿಸಲು ಭಾರತದಲ್ಲಿ ನಮ್ಮ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದೇವೆ: ಶ್ರೀ ಹಿಡೆಟೋಶಿ ಶಿಬಾಟಾ ಸಿಇಒ, ರೆನೆಸಾಸ್
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕಿಂತ ಇನ್ನಾರು ಉತ್ತಮ-ವಿಶ್ವಾಸಾರ್ಹ ಪಾಲುದಾರರಾಗಬಹುದು: ಶ್ರೀ ಲುಕ್ ವ್ಯಾನ್ ಡೆನ್ ಹೋವ್, ಸಿಇಒ, ಐಎಂಇಸಿ
Posted On:
11 SEP 2024 3:40PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿಂದು ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಯೋಜಿಸಿದ್ದ ಸೆಮಿಕಾನ್ ಇಂಡಿಯಾ-2024 ಸಮ್ಮೇಳನ ಉದ್ಘಾಟಿಸಿದರು. ಸೆಮಿಕಾನ್ ಇಂಡಿಯಾ-2024 ಸೆಪ್ಟೆಂಬರ್ 11ರಿಂದ 13ರ ವರೆಗೆ 'ಸೆಮಿಕಂಡಕ್ಟರ್ ಭವಿಷ್ಯವನ್ನು ರೂಪಿಸುವುದು' ಎಂಬ ವಸ್ತು ವಿಷಯದೊಂದಿಗೆ ಆಯೋಜಿಸಲಾಗಿದೆ. 3 ದಿನಗಳ ಈ ಸಮ್ಮೇಳನವು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರದರ್ಶಿಸುತ್ತದೆ, ಇದು ಭಾರತವನ್ನು ಸೆಮಿಕಂಡಕ್ಟರ್ ವಲಯದ ಜಾಗತಿಕ ತಾಣವಾಗಿ ರೂಪಿಸುತ್ತದೆ. ಜಾಗತಿಕ ಸೆಮಿಕಂಡಕ್ಟರ್ ವಲಯದ ಉನ್ನತ ನಾಯಕತ್ವವು ಸಮ್ಮೇಳನದಲ್ಲಿ ಭಾಗವಹಿಸುತ್ತಿದೆ. ಇದು ಜಾಗತಿಕ ನಾಯಕರು, ಕಂಪನಿಗಳು ಮತ್ತು ಸೆಮಿಕಂಡಕ್ಟರ್ ಉದ್ಯಮದ ತಜ್ಞರನ್ನು ಒಟ್ಟುಗೂಡಿಸುತ್ತದೆ. ಸಮ್ಮೇಳನದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 150 ಭಾಷಣಕಾರರು ಭಾಗವಹಿಸುತ್ತಿದ್ದಾರೆ.
ಸೆಮಿ ಕಂಪನಿಯ ಸಿಇಒ ಶ್ರೀ ಅಜಿತ್ ಮನೋಚಾ ಅವರು ಸೆಮಿಕಾನ್ ಇಂಡಿಯಾ-2024ರಲ್ಲಿ ನೀಡಿದ ಸ್ವಾಗತಕ್ಕೆ ಶ್ಲಾಘನೆ ವ್ಯಕ್ತಪಡಿಸಿ, 2 ಪ್ರಮುಖ ಪದಗಳ ಮೇಲೆ ಬೆಳಕು ಚೆಲ್ಲಿದರು. - 'ಅಭೂತಪೂರ್ವ' ಮತ್ತು 'ಅಗಾಧ ಬೆಳವಣಿಗೆ'. ಈ ಕಾರ್ಯಕ್ರಮದಲ್ಲಿ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ ಪೂರೈಕೆ ಸರಪಳಿಯನ್ನು ಪ್ರತಿನಿಧಿಸುವ ವಿಶ್ವಾದ್ಯಂತದ 100ಕ್ಕಿಂತ ಸಿಇಒಗಳು ಗಳು ಮತ್ತು ಸಿಎಕ್ಸ್ಒಗಳು ಸೇರಿರುವುದನ್ನು ಅವರು ಪ್ರಸ್ತಾಪಿಸಿದರು. ದೇಶ, ಪ್ರಪಂಚ, ಉದ್ಯಮ ಮತ್ತು ಮಾನವತೆಯ ಪ್ರಯೋಜನಕ್ಕಾಗಿ ಸೆಮಿಕಂಡಕ್ಟರ್ ಗಮ್ಯತಾಣ ರೂಪಿಸುವ ಪ್ರಯಾಣದಲ್ಲಿ ಭಾರತದ ವಿಶ್ವಾಸಾರ್ಹ ಪಾಲುದಾರನಾಗುವ ಉದ್ಯಮ ಬದ್ಧತೆಯ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಮೋದಿ ಅವರು ರೂಪಿಸಿರುವ ಕಾನೂನು ಭಾರತವು ತ್ವರಿತವಾಗಿ ಮತ್ತು ಅಗಾಧವಾಗಿ ಬೆಳವಣಿಗೆ ಕಾಣಲು ಕಾರಣವಾಗಲಿದೆ ಎಂದು ಉಲ್ಲೇಖಿಸಿದ ಶ್ರೀ ಮನೋಚಾ, ಸೆಮಿಕಂಡಕ್ಟರ್ ಉದ್ಯಮವು ಪ್ರಪಂಚದ ಪ್ರತಿಯೊಂದು ಉದ್ಯಮಕ್ಕೆ, ಹೆಚ್ಚು ಮುಖ್ಯವಾಗಿ ಮಾನವತೆಗೆ ಅಡಿಪಾಯವಾಗಿದೆ. ಭಾರತದ 1.4 ಶತಕೋಟಿ ಜನರು ಮತ್ತು ವಿಶ್ವದ 8 ಶತಕೋಟಿ ಜನರಿಗಾಗಿ ಕೆಲಸ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಟಾಟಾ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಮತ್ತು ಸಿಇಒ ಡಾ. ರಣಧೀರ್ ಠಾಕೂರ್ ಮಾತನಾಡಿ, ಈ ಐತಿಹಾಸಿಕ ಸಮ್ಮೇಳನ ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಸೆಮಿಕಂಡಕ್ಟರ್ ಉದ್ಯಮವನ್ನು ಭಾರತದ ತೀರಕ್ಕೆ ತರುವ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು. ಈ ವರ್ಷದ ಮಾರ್ಚ್ 13ರಂದು ಧೋಲೆರಾದಲ್ಲಿ ಪ್ರಧಾನಿ ಅವರು ಭಾರತದ ಮೊದಲ ವಾಣಿಜ್ಯ ಫ್ಯಾಬ್ ಮತ್ತು ಅಸ್ಸಾಂನ ಜಾಗಿರೋಡ್‌ನಲ್ಲಿ ಮೊದಲ ಸ್ವದೇಶಿ ಒಎಸ್‌ಎಟಿ ಕಾರ್ಖಾನೆಯ ಶಂಕುಸ್ಥಾಪನೆ ನೆರವೇರಿಸಿದ್ದನ್ನು ನೆನಪಿಸಿಕೊಂಡರು. ಈ ಎರಡೂ ಯೋಜನೆಗಳು ದಾಖಲೆ ಸಮಯದಲ್ಲಿ ಸರ್ಕಾರದಿಂದ ಅನುಮೋದನೆ ಪಡೆದಿವೆ. ಪ್ರಧಾನ ಮಂತ್ರಿ ಅವರ ಸಕಾಲಿಕ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸುವ ಸಂದೇಶಕ್ಕೆ ಅನುಗುಣವಾಗಿ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಪ್ರದರ್ಶಿಸಿದ ಅತ್ಯುತ್ತಮ ಮಾತಿನಂತೆ ಕಾರ್ಯ(ಸೇ-ಡು)ದ ಅನುಪಾತ ಮತ್ತು ಸಹಯೋಗಕ್ಕೆ ಅವರು ಮನ್ನಣೆ ನೀಡಿದರು. ಚಿಪ್‌ಮೇಕಿಂಗ್‌ಗೆ ನಿರ್ಣಾಯಕವಾದ 11 ಪರಿಸರ ವ್ಯವಸ್ಥೆಯ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ ಅವರು, ಸೆಮಿಕಾನ್-2024ರಲ್ಲಿ ಸರ್ಕಾರದ ಪ್ರಯತ್ನಗಳು ಈ ಎಲ್ಲಾ ಪರಿಸರ ವ್ಯವಸ್ಥೆಗಳನ್ನು ಒಂದೇ ಸೂರಿನಡಿ ತಂದಿವೆ ಎಂದರು. ಪ್ರಧಾನ ಮಂತ್ರಿ ಅವರ ಜಾಗತಿಕ ಪ್ರಭಾವ ಮತ್ತು ಪ್ರಮುಖ ಪಾಲುದಾರಿಕೆಗಳನ್ನು ಸ್ಥಾಪಿಸುವಂತೆ ಹಾಗೂ ಮತ್ತಷ್ಟು ಬೆಳವಣಿಗೆಗೆ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಕೈಜೋಡಿಸುವಂತೆ ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ ಒತ್ತು ನೀಡಿದರು. ಸೆಮಿಕಂಡಕ್ಟರ್ ಉದ್ಯಮವು ವಿಕಸಿತ ಭಾರತ-2047ರ ದೃಷ್ಟಿಕೋನದ ತಳಹದಿಯಾಗಲಿದೆ, ಇದು ಉದ್ಯೋಗ ಸೃಷ್ಟಿಯ ಮೇಲೆ ಗುಣಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಪ್ರಧಾನಿಗೆ ಭರವಸೆ ನೀಡಿದರು. ಭಾರತದ ಸೆಮಿಕಂಡಕ್ಟರ್ ಕನಸನ್ನು ನನಸಾಗಿಸುವ ಪ್ರಧಾನ ಮಂತ್ರಿ ಅವರ ನಾಯಕತ್ವ ಮತ್ತು ದೂರದೃಷ್ಟಿಗೆ ಮನ್ನಣೆ ನೀಡಿದ ಅವರು, "ಇದೇ ನೈಜ ಕ್ಷಣ, ಸರಿಯಾದ ಕ್ಷಣ" ಎಂದು ಹೇಳಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ ಕಂಪನಿಯ ಸಿಇಒ ಶ್ರೀ ಕರ್ಟ್ ಸೀವರ್ಸ್ ಮಾತನಾಡಿ, ಸೆಮಿಕಾನ್-2024ರ ಭಾಗವಾಗಿರುವುದಕ್ಕೆ ತಮ್ಮ ಉತ್ಸಾಹ ಮತ್ತು ವಿನಮ್ರತೆ ವ್ಯಕ್ತಪಡಿಸಿದರು. ಈ ಸುಸಂದರ್ಭವು ಭಾರತಕ್ಕೆ ಪರಿವರ್ತನೆಯ ಪ್ರಯಾಣ ಸೂಚಿಸುತ್ತಿದೆ. ಯಶಸ್ಸಿಗೆ ಮಹತ್ವಾಕಾಂಕ್ಷೆ, ವಿಶ್ವಾಸ ಮತ್ತು ಸಹಭಾಗಿತ್ವ ಎಂಬ 3 ಗುಣಲಕ್ಷಣಗಳನ್ನು ಎತ್ತಿ ಹಿಡಿದ ಅವರು, ಇಂತಂಹ ಕಾರ್ಯಕ್ರಮವು ಸಹಭಾಗಿತ್ವದ ಆರಂಭ ಸೂಚಿಸುತ್ತದೆ. ಭಾರತದಲ್ಲಿ ಆಗಿರುವ ಪರಿವರ್ತನೆಯ ಬಗ್ಗೆ ಬೆಳಕು ಚೆಲ್ಲಿದ ಅವರು, ಭಾರತದಲ್ಲಿ ಮಾತ್ರ ವಿಶ್ವಕ್ಕಾಗಿ ಮಾತ್ರವಲ್ಲದೆ, ದೇಶಕ್ಕಾಗಿಯೂ ಕೆಲಸ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ಉದ್ಯಮವು ಇತರ ವಲಯಗಳ ಮೇಲೆ ಗುಣಕ ಪರಿಣಾಮ ಬೀರುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವನ್ನು ಅತ್ಯಂತ ಶಕ್ತಿಶಾಲಿ ಆರ್ಥಿಕತೆಯಾಗುವಂತೆ ಮಾಡುತ್ತದೆ ಎಂದರು. ಎನ್‌ಎಕ್ಸ್‌ಪಿಯಿಂದ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೊತ್ತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ(ಆರ್&ಡಿ) ಪ್ರಯತ್ನಗಳನ್ನು ದ್ವಿಗುಣಗೊಳಿಸಲಾಗುವುದು. ದೀರ್ಘಾವಧಿಯಲ್ಲಿ ಕೆಲಸ ಮಾಡಲು ಉದ್ಯಮಗಳಿಗೆ ಅಗತ್ಯವಿರುವ ನಾವೀನ್ಯತೆ, ಪ್ರಜಾಪ್ರಭುತ್ವ ಮತ್ತು ನಂಬಿಕೆಯ 3 ಅಂಶಗಳನ್ನು ಮೈಗೂಡಿಸಿಕೊಂಡಿರುವ ಹೆಗ್ಗಳಿಕೆಗೆ ಪ್ರಧಾನ ಮಂತ್ರಿ ಪಾತ್ರರಾಗುತ್ತಾರೆ ಎಂದು ಶ್ಲಾಘಿಸಿದರು.
ರೆನೆಸಾಸ್‌ನ ಸಿಇಒ ಶ್ರೀ ಹಿಡೆತೋಶಿ ಶಿಬಾಟಾ ಮಾತನಾಡಿ, ಸೆಮಿಕಾನ್ ಇಂಡಿಯಾ-2024ರಲ್ಲಿ ಇಂತಹ ಯಶಸ್ವಿ ಮತ್ತು ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ ಪ್ರಧಾನ ಮಂತ್ರಿ ಅವರನ್ನು ಅಭಿನಂದಿಸಿದರು. ಗುಜರಾತಿನ ಹೆಸರಾಂತ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಲು ಮತ್ತು ಗುಜರಾತ್‌ನಲ್ಲಿ ಭಾರತದ ಮೊದಲ ಅಸೆಂಬ್ಲಿ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲು ಇದು ಒಂದು ಸುಯೋಗವಾಗಿದೆ. ಪೈಲಟ್‌ಲೈನ್‌ನ ನಿರ್ಮಾಣವು ಈಗಾಗಲೇ ನಡೆಯುತ್ತಿದೆ. ಬೆಂಗಳೂರು, ಹೈದರಾಬಾದ್ ಮತ್ತು ನೋಯ್ಡಾದಲ್ಲಿ ಉದ್ಯಮ ಚಟುವಟಿಕೆಗಳನ್ನು ವಿಸ್ತರಿಸುವ ಮತ್ತು ಕಾರ್ಯಾಚರಣೆಯ ಉಪಸ್ಥಿತಿಯ ಬಗ್ಗೆ ಮಾತನಾಡಿದರು. ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಮೌಲ್ಯವರ್ಧಿತ ಸುಧಾರಿತ ಸೆಮಿಕಂಡಕ್ಟರ್ ವಿನ್ಯಾಸ ಚಟುವಟಿಕೆಗಳನ್ನು ರೂಪಿಸಲು ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ನೌಕರಪಡೆಯನ್ನು ದ್ವಿಗುಣಗೊಳಿಸುವುದಾಗಿ ಅವರು ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿ ಅವರ ಗುರಿ ಸಾಕಾರಗೊಳಿಸಲು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಭಾರತಕ್ಕೆ ತರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು.
ಐಎಂಇಸಿ ಸಿಇಒ ಶ್ರೀ ಲುಕ್ ವ್ಯಾನ್ ಡೆನ್ ಹೋವ್ ಮಾತನಾಡಿ, ಸೆಮಿಕಾನ್-2024 ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರನ್ನು ಅಭಿನಂದಿಸಿದರು. ಅವರ ದೂರದೃಷ್ಟಿ ಮತ್ತು ನಾಯಕತ್ವವು ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚಿಸಲು ಭಾರತಕ್ಕೆ ಸ್ಪಷ್ಟ ದಾರಿ ತೋರುತ್ತದೆ. ದೀರ್ಘಾವಧಿಯ ಆರ್ & ಡಿ ಕಾರ್ಯತಂತ್ರ ಸ್ಥಾಪಿಸಲು ಮತ್ತು ಹೂಡಿಕೆ ಮಾಡಲು ಪ್ರಧಾನ ಮಂತ್ರಿ ಹೊಂದಿರುವ ಬದ್ಧತೆಯನ್ನು ಉಲ್ಲೇಖಿಸಿದ ಶ್ರೀ ಹೋವ್, ಉದ್ಯಮಕ್ಕೆ ಇದು ಅತ್ಯಂತ ಮುಖ್ಯವಾಗಿದೆ. ಪ್ರಧಾನ ಮಂತ್ರಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಬೆಂಬಲಿಸಲು ಐಎಂಇಸಿ, ಬಲವಾದ ಕಾರ್ಯತಂತ್ರ ಪಾಲುದಾರಿಕೆ ರೂಪಿಸಲು ಸಿದ್ಧವಾಗಿದೆ. ವಿಶ್ವಾಸಾರ್ಹ ಪೂರೈಕೆ ಸರಪಳಿಯ ಅಗತ್ಯಕ್ಕೆ ಒತ್ತು ನೀಡಿದ ಅವರು, "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕಿಂತ ಉತ್ತಮ-ವಿಶ್ವಾಸಾರ್ಹ ಪಾಲುದಾರರು ಇನ್ನಾರು ಇಲ್ಲ" ಎಂದರು.
*****
(Release ID: 2054180)
Visitor Counter : 88
Read this release in:
Tamil
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam