ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತವನ್ನು ಹಸಿರು ಜಲಜನಕದ ಜಾಗತಿಕ ಕೇಂದ್ರವನ್ನಾಗಿ ಮಾಡುವ ದೂರದೃಷ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು: ಸುಸ್ಥಿರ ಇಂಧನದ ಉತ್ಪಾದನೆ, ಬಳಕೆ ಮತ್ತು ರಫ್ತಿನಲ್ಲಿ ನಾಯಕತ್ವಕ್ಕೆ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಮುಂದಿಟ್ಟರು
ದೃಢವಾದ ನೀತಿಗಳು, ಅತ್ಯಾಧುನಿಕ ಸಂಶೋಧನೆ ಮತ್ತು ವ್ಯೂಹಾತ್ಮಕ ಅಂತಾರಾಷ್ಟ್ರೀಯ ಸಹಯೋಗಗಳ ಮೂಲಕ ಹಸಿರು ಜಲಜಲಕವನ್ನು ಉದ್ಯಮವನ್ನು ಸರ್ಕಾರ ಮುನ್ನಡೆಸಲಿದೆ
8 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭಾರತದ ಹಸಿರು ಜಲಜನಕ ದೃಷ್ಟಿಕೋನವನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಎತ್ತಿ ತೋರಿದರು
ಹಸಿರು ಜಲಜನಕಕ್ಕಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಚಿವರಾದ ಹರ್ದೀಪ್ ಪುರಿ ಅನಾವರಣಗೊಳಿಸಿದರು: 2030ರ ವೇಳೆಗೆ 100 ಶತಕೋಟಿ ಡಾಲರ್ ಹೂಡಿಕೆ ಮತ್ತು 5 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆ
Posted On:
11 SEP 2024 2:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ʻಹಸಿರು ಜಲಜನಕ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನʼದ(ಐಸಿಜಿಎಚ್-2024) ಎರಡನೇ ಆವೃತ್ತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ವೇಳೆ ಪ್ರಧಾನಿಯವರು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ವಿಶ್ವದ ಇಂಧನ ಕ್ಷೇತ್ರಕ್ಕೆ ಹೊಸ ಭರವಸೆಯಾಗಿ ಹಸಿರು ಹೈಡ್ರೋಜನ್ ಹೊರಹೊಮ್ಮಲಿದೆ ಎಂದು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಸ್ವಚ್ಛ, ಹಸಿರು ಭೂಗ್ರಹವನ್ನು ನಿರ್ಮಿಸಲು ಭಾರತ ಸಂಪೂರ್ಣ ಬದ್ಧವಾಗಿದೆ. ಹಸಿರು ಇಂಧನ ಕುರಿತ ನಮ್ಮ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರೈಸಿದ ಜಿ-20 ರಾಷ್ಟ್ರಗಳಲ್ಲಿ ನಾವು ಮೊದಲಿಗರಾಗಿದ್ದೇವೆ. ನಾವು ಅಸ್ತಿತ್ವದಲ್ಲಿರುವ ಪರಿಹಾರ ಕ್ರಮಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ. ಜೊತೆಗೆ, ನಾವು ಹೊಸ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಿದ್ದೇವೆ. ಈ ನಿಟ್ಟಿನಲ್ಲಿ ಹಸಿರು ಜಲಜನಕವು ಅಂತಹ ಪ್ರಮುಖ ಹೆಜ್ಜೆಯಾಗಿದೆ. ಸಂಸ್ಕರಣಾಗಾರಗಳು, ರಸಗೊಬ್ಬರಗಳು, ಉಕ್ಕು ಮತ್ತು ಭಾರೀ ಸಾರಿಗೆಯಂತಹ ಕಷ್ಟಕರವಾದ ಕ್ಷೇತ್ರಗಳನ್ನು ವಿದ್ಯುದ್ದೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ,ʼʼ ಎಂದು ಒತ್ತಿ ಹೇಳಿದರು.
"ಹಸಿರು ಜಲಜನಕದ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. 2023ರಲ್ಲಿ ಪ್ರಾರಂಭಿಸಲಾದ ʻರಾಷ್ಟ್ರೀಯ ಹಸಿರು ಜಲಜನಕ ಯೋಜನೆʼಯು ಈ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಇದು ನಾವೀನ್ಯತೆಯನ್ನು ಹೆಚ್ಚಿಸುತ್ತದೆ, ಮೂಲಸೌಕರ್ಯವನ್ನು ನಿರ್ಮಿಸುತ್ತದೆ, ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಹಸಿರು ಜಲಜನಕ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ,ʼʼ ಎಂದು ಹೇಳಿದರು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಕಳೆದ ದಶಕದಲ್ಲಿ ಭಾರತದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು ಸುಮಾರು 300% ಹೆಚ್ಚಾಗಿದೆ ಮತ್ತು ನಮ್ಮ ಸೌರ ಶಕ್ತಿ ಸಾಮರ್ಥ್ಯವು ಇದೇ ಅವಧಿಯಲ್ಲಿ 3000% ಬೆಳವಣಿಗೆಯನ್ನು ಕಂಡಿದೆ" ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಪ್ರಹ್ಲಾದ್ ವೆಂಕಟೇಶ್ ಜೋಶಿ ಅವರು, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಹಾಗೂ ಹಸಿರು ಜಲಜನಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಉಪಕ್ರಮಗಳ ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹಸಿರು ಜಲಜನಕದಲ್ಲಿ ಜಾಗತಿಕ ನಾಯಕನಾಗುವತ್ತ ಸಾಗುತ್ತಿದೆ ಎಂದು ಅವರು ಹೇಳಿದರು.
ʻರಾಷ್ಟ್ರೀಯ ಹಸಿರು ಜಲಜನಕ ಯೋಜನೆʼಯನ್ನು ಅನ್ನು ಉಲ್ಲೇಖಿಸಿದ ಸಚಿವರು, ಇಂಧನ ಸ್ವಾವಲಂಬನೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಖಚಿತಪಡಿಸಿಕೊಳ್ಳುವ ಹಾಗೂ ಈ ಉದಯೋನ್ಮುಖ ವಲಯದಲ್ಲಿ ಭಾರತವನ್ನು ಪ್ರಮುಖ ಪಾತ್ರಧಾರಿಯನ್ನಾಗಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. "ಈ ಯೋಜನೆಯು 8 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವ ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ನೈಸರ್ಗಿಕ ಅನಿಲ ಮತ್ತು ಅಮೋನಿಯಾ ಆಮದು ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ಇದು 1 ಲಕ್ಷ ಕೋಟಿ ರೂ.ಗಳ ಉಳಿತಾಯಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಮುಂದುವರಿಯಲಿರುವ ನಮ್ಮ ಪ್ರಯತ್ನಗಳ ಫಲವಾಗಿ 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು 5 ದಶಲಕ್ಷ ಮೆಟ್ರಿಕ್ ಟನ್‌ನಷ್ಟು ಕಡಿಮೆ ಮಾಡಲು ನೆರವಾಗಲಿದೆ. ಈ ಪ್ರಯತ್ನಗಳು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಹೆಗ್ಗುರುತಾಗಿ ಇರಿಸುತ್ತವೆ, " ಎಂದು ಅವರು ಹೇಳಿದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರು ಮಾತನಾಡಿ, ಭಾರತದ ರಾಷ್ಟ್ರೀಯ ಹಸಿರು ಜಲಜನಕ ಯೋಜನೆ ನಿಗದಿಪಡಿಸಿದ ಮಹತ್ವಾಕಾಂಕ್ಷೆಯ ಗುರಿಗಳನ್ನು ಒತ್ತಿ ಹೇಳಿದರು. "2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಭಾರತದ ಬದ್ಧತೆಯು, ಹಸಿರು ಜಲಜನಕದ ಮೇಲೆ ಹೆಚ್ಚು ಗಮನ ಹರಿಸುವುದು ಸೇರಿದಂತೆ ಬಹುಮುಖಿ ಕಾರ್ಯ ವಿಧಾನವನ್ನು ಒಳಗೊಂಡಿದೆ. 2030ರ ವೇಳೆಗೆ 5 ದಶಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದಿಸುವ ನಮ್ಮ ಗುರಿಯು ನಮ್ಮ ಆರ್ಥಿಕತೆಯನ್ನು ಇಂಗಾಲಮುಕ್ತ ಮಾಡುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಇದಕ್ಕೆ 100 ಶತಕೋಟಿ ಡಾಲರ್ ಹೂಡಿಕೆ ಮತ್ತು 125 ಗಿಗಾವ್ಯಾಟ್ ಹೊಸ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅಭಿವೃದ್ಧಿಯ ಅಗತ್ಯವಿದೆ,ʼʼ ಎಂದು ಹೇಳಿದರು.
ಈ ಯೋಜನೆಯು ವಾರ್ಷಿಕವಾಗಿ 15 ದಶಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಲ್ಲದೆ, ಆಮದಿನಲ್ಲಿ ಗಣನೀಯ ಉಳಿತಾಯವನ್ನು ಮಾಡಲಿದೆ. ಈ ವಲಯದಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ನಾವು ಪೈಲಟ್ ಯೋಜನೆಗಳು, ಹೈಡ್ರೋಜನ್ ಹಬ್‌ಗಳು ಮತ್ತು ಆರ್ & ಡಿ ಉಪಕ್ರಮಗಳನ್ನು ಜಾರಿಗೆ ತರುತ್ತಿದ್ದೇವೆ. ಸದೃಢ ಹಣಕಾಸು ಮತ್ತು ಸಮಗ್ರ ಪ್ರೋತ್ಸಾಹಕ ನೀತಿಯ ಬೆಂಬಲವನ್ನು ಇದು ಒಳಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಉದ್ಯಮ ಪಾಲುದಾರರ ಸಹಯೋಗದ ಪ್ರಯತ್ನಗಳ ಮೇಲೆ ಈ ಯೋಜನೆಯ ಯಶಸ್ಸು ಅವಲಂಬಿತವಾಗಿದೆ ಎಂದು ಸಚಿವರು ತಿಳಿಸಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಭೂಪಿಂದರ್ ಎಸ್. ಭಲ್ಲಾ ಅವರು ಮಾತನಾಡಿ, ಭಾರತದ ನವೀಕರಿಸಬಹುದಾದ ಇಂಧನ ಸಾಧನೆಗಳು ಮತ್ತು ಭವಿಷ್ಯದ ಗುರಿಗಳನ್ನು ಒತ್ತಿ ಹೇಳಿದರು. ಶೂನ್ಯ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯೊಂದಿಗೆ ಶುದ್ಧ ಇಂಧನ ಮೂಲವಾಗಿ ಹಸಿರು ಜಲಜನಕದ ಪಾತ್ರ ಮತ್ತು ಅನೇಕ ಕ್ಷೇತ್ರಗಳಲ್ಲಿ ಅದರ ವೈವಿಧ್ಯಮಯ ಅನ್ವಯಿಕೆಗಳನ್ನು ಅವರು ಎತ್ತಿ ತೋರಿದರು. ಶ್ರೀ ಭಲ್ಲಾ ಅವರು ಪ್ರಧಾನಮಂತ್ರಿಯವರ ʻಪಂಚಾಮೃತʼ ಯೋಜನೆಗೆ ಅನುಗುಣವಾಗಿ ಭಾರತದ ಮಹತ್ವಾಕಾಂಕ್ಷೆಯ ಹಸಿರು ಜಲಜನಕ ಉದ್ದೇಶಗಳನ್ನು ಒತ್ತಿ ಹೇಳಿದರು. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ತಲುಪುವ ಗುರಿಗಳನ್ನು ಇದು ಒಳಗೊಂಡಿದೆ.
ಶ್ರೀ ಭೂಪಿಂದರ್ ಎಸ್. ಭಲ್ಲಾ ಅವರು ಮಾತು ಮುಂದುವರಿಸಿ, “ಸಾರಿಗೆ ಮತ್ತು ಹಡಗು ಕ್ಷೇತ್ರಗಳಲ್ಲಿ ಪ್ರಾಯೋಗಿಕ ಯೋಜನೆಗಳು, ಹಸಿರು ಜಲಜನಕ ಹಬ್‌ಗಳ ಸೃಷ್ಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಹಾಗೂ ಸಂಗ್ರಹಣೆ ಮತ್ತು ಸಾರಿಗೆಯಂತಹ ವಿಭಾಗಗಳಿಗೆ ನಿಗದಿಪಡಿಸಿದ ಅನುದಾನದ ಬಗ್ಗೆ ಚರ್ಚಿಸಿದರು. ಭಾರತದಲ್ಲಿ ಜಲಜನಕದ ಬೇಡಿಕೆಯು ಗಮನಾರ್ಹವಾಗಿ ಬೆಳೆಯುವ ನಿರೀಕ್ಷೆಯಿದ್ದು, 2050ರ ವೇಳೆಗೆ ವರ್ಷಕ್ಕೆ 29 ದಶಲಕ್ಷ ಮೆಟ್ರಿಕ್ ಟನ್ ತಲುಪುವ ಸಾಧ್ಯತೆಯಿದೆ. ʻಸೈಟ್ʼ(ಹಸಿರು ಜಲಜನಕ ಪರಿವರ್ತನೆಗಾಗಿ ಕಾರ್ಯತಂತ್ರದ ಮಧ್ಯಸ್ಥಿಕೆಗಳು) ಕಾರ್ಯಕ್ರಮ, ನಿಯಂತ್ರಣ ನೀತಿಗಳು, ಸಂಹಿತೆಗಳು ಮತ್ತು ಮಾನದಂಡಗಳ ಬಗ್ಗೆಯೂ ಅವರು ಮಾತನಾಡಿದರು, 152 ಮಾನದಂಡಗಳನ್ನು ಶಿಫಾರಸು ಮಾಡಲಾಗಿದೆ, ಈ ಪೈಕಿ ಈಗಾಗಲೇ 81 ಪ್ರಕಟಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕೆ.ಸೂದ್ ಅವರು ಮಾತನಾಡಿ, “ಹಸಿರು ಜಲಜನಕ ತಂತ್ರಜ್ಞಾನವನ್ನು ಮುನ್ನಡೆಸುವಲ್ಲಿ ವೈಜ್ಞಾನಿಕ ಸಂಶೋಧನೆಯ ಪಾತ್ರದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು. "ಹಸಿರು ಜಲಜನಕವನ್ನು ಕೈಗೆಟುಕುವಂತೆ ಹಾಗೂ ಅಗಾಧ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಲು ನವೀನ ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಗಳು ನಿರ್ಣಾಯಕವಾಗಿವೆ. ಸವಾಲುಗಳನ್ನು ನಿವಾರಿಸಲು ಮತ್ತು ಹಸಿರು ಜಲಜನಕದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವುದನ್ನು ಮುಂದುವರಿಸಬೇಕು" ಎಂದು ಅವರು ಒತ್ತಿ ಹೇಳಿದರು.
ಹಸಿರು ಜಲಜನಕ ವಲಯದಲ್ಲಿ ಭಾರತದ ಪ್ರಗತಿ ಮತ್ತು ಭವಿಷ್ಯದ ಆಕಾಂಕ್ಷೆಗಳನ್ನು ವಿವರಿಸುವ "ಹಸಿರು ಜಲಜನಕ ಆರ್ಥಿಕತೆಯತ್ತ ಭಾರತದ ಪ್ರಯಾಣ" ಎಂಬ ಶೀರ್ಷಿಕೆಯ ವೀಡಿಯೊ ಪ್ರಸ್ತುತಿಯನ್ನು ಸಹ ಅಧಿವೇಶನವು ಒಳಗೊಂಡಿತ್ತು.
ʻಸಿಎಸ್ಐಆರ್ʼ ಮಹಾನಿರ್ದೇಶಕರು ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ (ಡಿಎಸ್ಐಆರ್) ಕಾರ್ಯದರ್ಶಿಗಳಾದ ಡಾ. ಎನ್. ಕಲೈಸೆಲ್ವಿ ಅವರ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಅಧಿವೇಶನವು ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಡಾ. ಕಲೈಸೆಲ್ವಿ ಅವರು, ಹಸಿರು ಜಲಜನಕ ಕ್ಷೇತ್ರದಲ್ಲಿ ನಾಯಕತ್ವ ವಹಿಸಲಿರುವ ಭಾರತದ ಹಾದಿಯನ್ನು ಎತ್ತಿ ತೋರಿದರು. "ಹಸಿರು ಜಲಜನಕ ಕ್ಷೇತ್ರದ ಪರಿವರ್ತಕ ಯುಗದಲ್ಲಿ ಭಾರತವು ಮುಂಚೂಣಿ ಸ್ಥಾನದಲ್ಲಿದೆ. ಹೇರಳವಾದ ನವೀಕರಿಸಬಹುದಾದ ಸಂಪನ್ಮೂಲಗಳು ಮತ್ತು ʻರಾಷ್ಟ್ರೀಯ ಹಸಿರು ಜಲಜನಕ ಯೋಜನೆʼಯಂತಹ ಮಹತ್ವಾಕಾಂಕ್ಷೆಯ ಉಪಕ್ರಮಗಳೊಂದಿಗೆ, ನಮ್ಮ ದೇಶವು ಜಾಗತಿಕವಾಗಿ ಮುನ್ನಡೆಸಲು ಉತ್ತಮ ಸ್ಥಾನದಲ್ಲಿದೆ," ಎಂದು ಅವರು ಹೇಳಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ; ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ; ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಸಹಯೋಗದೊಂದಿಗೆ ʻಹಸಿರು ಜಲಜನಕ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನʼದ(ಐಸಿಜಿಎಚ್-2024) 2ನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಭಾರತದ ಸೌರಶಕ್ತಿ ಪ್ರಾಧಿಕಾರ (ಎಸ್ಇಸಿಐ) ಮತ್ತು ʻಇವೈʼ ಕ್ರಮವಾಗಿ ಈ ಕಾರ್ಯಕ್ರಮದ ಅನುಷ್ಠಾನ ಮತ್ತು ಜ್ಞಾನ ಪಾಲುದಾರರಾಗಿದ್ದಾರೆ. ʻಎಫ್ಐಸಿಸಿಐʼ ಈ ಕಾರ್ಯಕ್ರಮದ ಉದ್ಯಮದ ಪಾಲುದಾರ.
*****
(Release ID: 2053753)
Visitor Counter : 86