ಪ್ರಧಾನ ಮಂತ್ರಿಯವರ ಕಛೇರಿ
ಸಿಂಗಾಪುರದ ಪ್ರಧಾನ ಮಂತ್ರಿ ಭೇಟಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ
Posted On:
05 SEP 2024 9:42AM by PIB Bengaluru
ಗೌರವಾನ್ವಿತರೆ,
ನಿಮ್ಮ ಆತ್ಮೀಯ ಸ್ವಾಗತವನ್ನು ನಾನು ಗಾಢವಾಗಿ ಪ್ರಶಂಸಿಸುತ್ತೇನೆ.
ನೀವು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ನಮ್ಮ ಮೊದಲ ಭೇಟಿಯಾಗಿದೆ. ಇದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. 4-ಜಿ ನಾಯಕತ್ವದಲ್ಲಿ ಸಿಂಗಾಪುರ ಇನ್ನಷ್ಟು ವೇಗವಾಗಿ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ.
ಗೌರವಾನ್ವಿತ ಪ್ರಧಾನ ಮಂತ್ರಿಗಳೆ,
ಸಿಂಗಾಪುರ ನಮಗೆ ಕೇವಲ ಪಾಲುದಾರ ರಾಷ್ಟ್ರವಲ್ಲ, ಇದು ಪ್ರತಿ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ಭಾರತದೊಳಗೆ ಬಹು 'ಸಿಂಗಾಪುರ' ರೂಪಿಸುವ ಗುರಿ ಹೊಂದಿದ್ದೇವೆ. ಈ ಗುರಿಯತ್ತ ನಾವು ಸಾಗುತ್ತಿರುವುದು ನನಗೆ ಸಂತಸ ತಂದಿದೆ. ನಾವು ಸ್ಥಾಪಿಸಿರುವ ಸಚಿವರ ದುಂಡುಮೇಜಿನ ಸಭೆಯು ಪರಿವರ್ತನೀಯ ಕಾರ್ಯವಿಧಾನವಾಗಿದೆ.
ಕೌಶಲ್ಯ, ಡಿಜಿಟಲೀಕರಣ, ಚಲನಶೀಲತೆ, ಸುಧಾರಿತ ಉತ್ಪಾದನೆ, ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ, ಆರೋಗ್ಯ ರಕ್ಷಣೆ, ಸುಸ್ಥಿರತೆ ಮತ್ತು ಸೈಬರ್ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಉಪಕ್ರಮಗಳನ್ನು ಗುರುತಿಸಲಾಗಿದೆ.
ಗೌರವಾನ್ವಿತರೆ,
ಸಿಂಗಾಪುರ ನಮ್ಮ ಪೂರ್ವ ದಿಕ್ಕಿನತ್ತ ಕ್ರಮ(ಆಕ್ಟ್ ಈಸ್ಟ್ ನೀತಿ)ದ ಪ್ರಮುಖ ಚಾಲನಾಶಕ್ತಿಯಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಮ್ಮ ಹಂಚಿಕೆಯ ನಂಬಿಕೆ ನಮ್ಮನ್ನು ಪರಸ್ಪರ ಸಂಪರ್ಕಿಸುತ್ತಿದೆ. ನನ್ನ 3ನೇ ಅವಧಿಯ ಆಡಳಿತ ಆರಂಭದಲ್ಲಿ ಸಿಂಗಾಪುರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.
ನಮ್ಮ ಕಾರ್ಯತಂತ್ರದ ಪಾಲುದಾರಿಕೆ 1 ದಶಕ ಪೂರ್ಣಗೊಳಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ವ್ಯಾಪಾರ ವ್ಯವಹಾರ 2 ಪಟ್ಟು ಹೆಚ್ಚಾಗಿದೆ. ಪರಸ್ಪರ ಹೂಡಿಕೆಯು ಸುಮಾರು 3 ಪಟ್ಟು ಹೆಚ್ಚಿ 150 ಬಿಲಿಯನ್ ಡಾಲರ್ ದಾಟಿದೆ. ನಾವು ಯುಪಿಐ ಅಪ್ಲಿಕೇಷನ್ ಅನ್ನು ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ ಸೌಲಭ್ಯ ಪ್ರಾರಂಭಿಸಿದ ಮೊದಲ ದೇಶ ಸಿಂಗಾಪುರವಾಗಿದೆ.
ಕಳೆದ 10 ವರ್ಷಗಳಲ್ಲಿ ಸಿಂಗಾಪುರದ 17 ಉಪಗ್ರಹಗಳನ್ನು ಭಾರತದ ನೆಲದಿಂದ ಉಡಾವಣೆ ಮಾಡಲಾಗಿದೆ. ನಮ್ಮ ಸಹಕಾರವು ಕೌಶಲ್ಯದಿಂದ ರಕ್ಷಣಾ ಕ್ಷೇತ್ರದವರೆಗೆ ವೇಗ ಪಡೆದುಕೊಂಡಿದೆ. ಸಿಂಗಾಪುರ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ನಡುವಿನ ಒಪ್ಪಂದವು ವೈಮಾನಿಕ ಸಂಪರ್ಕವನ್ನು ಬಲಪಡಿಸಿದೆ.
ಇಂದು ನಾವು ಒಟ್ಟಾಗಿ ನಮ್ಮ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸುತ್ತಿದ್ದೇವೆ ಎಂಬುದು ನನಗೆ ಸಂತೋಷ ತಂದಿದೆ. ಗೌರವಾನ್ವಿತರೆ, ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ 3.5 ಲಕ್ಷ ಜನರು ನಮ್ಮ ಬಾಂಧವ್ಯದ ಭದ್ರ ಬುನಾದಿಯಾಗಿದ್ದಾರೆ. ಸುಭಾಷ್ ಚಂದ್ರ ಬೋಸ್, ಆಜಾದ್ ಹಿಂದ್ ಫೌಜ್ ಮತ್ತು ಲಿಟಲ್ ಇಂಡಿಯಾವು ಸಿಂಗಾಪುರದಲ್ಲಿ ಪಡೆದ ಸ್ಥಾನ ಮತ್ತು ಗೌರವಕ್ಕಾಗಿ ನಾವು ಇಡೀ ಸಿಂಗಾಪುರಕ್ಕೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ.
2025ರಲ್ಲಿ ನಮ್ಮೆರಡು ರಾಷ್ಟ್ರಗಳ ನಡುವಿನ ಸಂಬಂಧವು 60ನೇ ವಾರ್ಷಿಕೋತ್ಸವ ಆಚರಿಸಲಿದೆ. ಈ ಸಂದರ್ಭವನ್ನು ವೈಭವದಿಂದ ಗುರುತಿಸಲು, ಎರಡೂ ದೇಶಗಳು ಕ್ರಿಯಾಯೋಜನೆ ರೂಪಿಸಲು ಸಹಕರಿಸಬೇಕಿದೆ.
ಭಾರತದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವು ಸಿಂಗಾಪುರದಲ್ಲಿ ಶೀಘ್ರದಲ್ಲೇ ಉದ್ಘಾಟನೆ ಆಗಲಿದೆ ಎಂಬುದನ್ನು ನಿಮಗೆ ತಿಳಿಸಲು ನಾನು ಸಂತೋಷಪಡುತ್ತೇನೆ. ಮಹಾನ್ ಸಂತ ತಿರುವಳ್ಳುವರ್ ಅತ್ಯಂತ ಪ್ರಾಚೀನ ಭಾಷೆಯಾದ ತಮಿಳಿನಲ್ಲಿ ಜಗತ್ತಿಗೆ ಮಾರ್ಗದರ್ಶಿ ಚಿಂತನೆಗಳನ್ನು ಒದಗಿಸಿದರು. ಅವರ ಕೃತಿ, ತಿರುಕ್ಕುರಲ್ ಅನ್ನು ಸುಮಾರು 2,000 ವರ್ಷಗಳ ಹಿಂದೆ ರಚಿಸಲಾಗಿದ್ದರೂ, ಅದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ.
ಅವರು ಹೀಗೆ ಹೇಳಿದ್ದಾರೆ...
ನಾಯನೊಡು ನನ್ರಿ ಪುರಿಂದ್ ಪಯನುದೈಯರ್ ಪನ್ಬು ಪರತಟ್ಟುಂ ಉಲಗು.
ಇದರರ್ಥ: "ನ್ಯಾಯ ಮತ್ತು ಇತರರಿಗೆ ಸೇವೆ ಮಾಡುವ ಸಂಕಲ್ಪಕ್ಕೆ ಹೆಸರುವಾಸಿ ಆದವರನ್ನು ಇಡೀ ಜಗತ್ತು ಮೆಚ್ಚುತ್ತದೆ."
ಸಿಂಗಾಪುರದಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರು ಸಹ ಈ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದಾರೆ, ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಕೊಡುಗೆ ನೀಡುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ.
ಗೌರವಾನ್ವಿತರೆ,
ನಾನು ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದಲ್ಲಿ ಭಾರತದ ಇಂಡೋ-ಪೆಸಿಫಿಕ್ ನಡುವಿನ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದೆ. ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸಲು ನಾವು ಸಿಂಗಾಪುರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮತ್ತೊಮ್ಮೆ, ನನಗೆ ನೀಡಿದ ಗೌರವ ಮತ್ತು ಆತ್ಮೀಯ ಆತಿಥ್ಯಕ್ಕೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2052490)
Visitor Counter : 54
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam