ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದ ಲಖ್ಪತಿ ದೀದಿ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 25 AUG 2024 5:07PM by PIB Bengaluru

ಮಹಾರಾಷ್ಟ್ರದ ನನ್ನ ಸಹೋದರರು ಮತ್ತು ಸಹೋದರಿಯರಿಗೆ!

ಜೈ ಶ್ರೀ ಕೃಷ್ಣ...

ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ, ಮತ್ತು ನಾನು ಇಂದು ನಿಮಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಜೀ, ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ಈ ಭಾಗದ ನನ್ನ ಸಹವರ್ತಿ ಸಚಿವ ಪ್ರತಾಪರಾವ್ ಜಾಧವ್, ಕೇಂದ್ರ ಸರ್ಕಾರದ ಸಚಿವ ಶ್ರೀ ಚಂದ್ರಶೇಖರ್ ಜೀ ಮತ್ತು ನೆಲದ ಮಗಳು ರಕ್ಷಾ ಖಾಡ್ಸೆ ಜೀ,  ಉಪಮುಖ್ಯಮಂತ್ರಿಗಳಾದ ಶ್ರೀ ಅಜಿತ್ ಪವಾರ್ ಜೀ ಮತ್ತು ದೇವೇಂದ್ರ ಫಡ್ನವೀಸ್ ಜೀ, ಮಹಾರಾಷ್ಟ್ರ ಸರ್ಕಾರದ ಸಚಿವರು, ಸಂಸದರು ಮತ್ತು ಶಾಸಕರು ಹಾಗು ನಮ್ಮನ್ನು ಆಶೀರ್ವದಿಸಲು ಇಲ್ಲಿಗೆ ಬಂದಿರುವ ಅಪಾರ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರೇ. ನನ್ನ ಕಣ್ಣುಗಳಿಗೆ ಕಾಣುವ  ಮಟ್ಟಿಗೆ, ತಾಯಂದಿರ ಸಾಗರವು ಇಲ್ಲಿ ಜಮಾಯಿಸಿದಂತೆ ಭಾಸವಾಗುತ್ತದೆ. ಈ ದೃಶ್ಯವೇ ತುಂಬಾ ಆಹ್ಲಾದಕರವಾಗಿದೆ.

ನಾನು ಪ್ರಾರಂಭಿಸುವ ಮೊದಲು, ನೇಪಾಳದಲ್ಲಿ ಸಂಭವಿಸಿದ ಬಸ್ ಅಪಘಾತದ ಬಗ್ಗೆ ನನ್ನ ದುಃಖವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಈ ಅಪಘಾತದಲ್ಲಿ ನಾವು ಮಹಾರಾಷ್ಟ್ರದ, ವಿಶೇಷವಾಗಿ ಜಲಗಾಂವ್ ನ  ನಮ್ಮ ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಪಘಾತ ಸಂಭವಿಸಿದ ಕೂಡಲೇ ಭಾರತ ಸರ್ಕಾರ ನೇಪಾಳ ಸರ್ಕಾರವನ್ನು ಸಂಪರ್ಕಿಸಿದೆ. ನಾವು ನಮ್ಮ ಸಚಿವರಾದ ರಕ್ಷಾ ತಾಯಿ ಖಾಡ್ಸೆ ಅವರನ್ನು ತಕ್ಷಣವೇ  ನೇಪಾಳಕ್ಕೆ ಹೋಗುವಂತೆ ಕೇಳಿಕೊಂಡಿದ್ದೇವೆ. ವಾಯುಪಡೆಯ ವಿಶೇಷ ವಿಮಾನದಲ್ಲಿ ಪ್ರಾಣ ಕಳೆದುಕೊಂಡವರ ಶವಗಳನ್ನು ನಾವು ಮರಳಿ ತಂದಿದ್ದೇವೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಎಲ್ಲಾ ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.

ಸ್ನೇಹಿತರೇ,

ಇಂದು, 'ಲಖ್ಪತಿ ದೀದಿಗಳ' ಈ ಭವ್ಯ ಸಮಾವೇಶ ನಡೆಯುತ್ತಿದೆ. ನನ್ನ 'ಪ್ರೀತಿಯ ಸಹೋದರಿಯರು' ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಂದ ದೇಶಾದ್ಯಂತ ಲಕ್ಷಾಂತರ 'ಸಖಿ ಮಂಡಲ್'ಗಳಿಗೆ (ಮಹಿಳಾ ಸ್ವಸಹಾಯ ಗುಂಪುಗಳು) 6,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ಅಸಂಖ್ಯಾತ ಉಳಿತಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಾರಾಷ್ಟ್ರದ ನಮ್ಮ ಸಹೋದರಿಯರು ಸಹ ಕೋಟಿ ರೂಪಾಯಿಗಳ ಸಹಾಯವನ್ನು ಪಡೆದಿದ್ದಾರೆ. ಈ ಹಣವು ಲಕ್ಷಾಂತರ ಸಹೋದರಿಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ಶುಭ ಹಾರೈಕೆಗಳು ಸಲ್ಲುತ್ತವೆ.

ಸ್ನೇಹಿತರೇ,

ನಿಮ್ಮೆಲ್ಲರಲ್ಲೂ ಮಹಾರಾಷ್ಟ್ರದ ಹೆಮ್ಮೆಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನಾನು ಕಾಣುತ್ತಿದ್ದೇನೆ. ಮಹಾರಾಷ್ಟ್ರದ ಮೌಲ್ಯಗಳು ಭಾರತದಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹರಡಿವೆ. ನಾನು ನಿನ್ನೆಯಷ್ಟೇ ವಿದೇಶ ಪ್ರವಾಸದಿಂದ ಮರಳಿದೆ. ನಾನು ಯುರೋಪಿನ ಪೋಲೆಂಡ್ ಗೆ ಹೋದೆ. ಅಲ್ಲಿಯೂ ನಾನು ಮಹಾರಾಷ್ಟ್ರದ ಪ್ರಭಾವವನ್ನು ನೋಡಿದೆ. ನಾನು ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಸಾಕ್ಷಿಯಾಗಿದ್ದೇನೆ. ಪೋಲೆಂಡ್ ಜನರು ಮಹಾರಾಷ್ಟ್ರದ ಜನರನ್ನು ಬಹಳವಾಗಿ ಗೌರವಿಸುತ್ತಾರೆ. ಇಲ್ಲಿ ಕುಳಿತು ನೀವು ಇದನ್ನು ಊಹಿಸಲು ಸಾಧ್ಯವಿಲ್ಲ. ಅಲ್ಲಿ ರಾಜಧಾನಿಯಲ್ಲಿ ಕೊಲ್ಹಾಪುರ ಸ್ಮಾರಕವಿದೆ. ಕೊಲ್ಹಾಪುರದ ಜನರ ಸೇವೆ ಮತ್ತು ಆತಿಥ್ಯವನ್ನು ಗೌರವಿಸಲು ಪೋಲೆಂಡ್ ಜನರು ಸ್ಮಾರಕವನ್ನು ನಿರ್ಮಿಸಿದರು.

ಕೊಲ್ಹಾಪುರದ ರಾಜಮನೆತನವು ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್ ಸಾವಿರಾರು ತಾಯಂದಿರು ಮತ್ತು ಮಕ್ಕಳಿಗೆ ಆಶ್ರಯ ನೀಡಿತು ಎಂದು ನಿಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು. ಛತ್ರಪತಿ ಶಿವಾಜಿ ಮಹಾರಾಜರ ಮೌಲ್ಯಗಳಿಗೆ ಅನುಗುಣವಾಗಿ, ರಾಜಮನೆತನ ಮತ್ತು ಸಾಮಾನ್ಯ ಜನರು ನಿರಾಶ್ರಿತರಿಗೆ ಸೇವೆ ಸಲ್ಲಿಸಿದರು. ಮಹಾರಾಷ್ಟ್ರದ ಜನರ ಸೇವೆ ಮತ್ತು ಮಾನವೀಯತೆಯ ಮೇಲಿನ ಪ್ರೀತಿಗಾಗಿ ಪ್ರಶಂಸೆಯನ್ನು ಕೇಳಿದಾಗ, ನಾನು  ಹೆಮ್ಮೆಯಿಂದ ಉಬ್ಬಿದೆ. ನಾವು ಮಹಾರಾಷ್ಟ್ರವನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಬೇಕು ಮತ್ತು ಅದರ ಹೆಸರನ್ನು ಜಾಗತಿಕವಾಗಿ ವಿಸ್ತರಿಸಬೇಕು.

ಸ್ನೇಹಿತರೇ,

ಮಹಾರಾಷ್ಟ್ರದ ಮೌಲ್ಯಗಳನ್ನು ಇಲ್ಲಿನ ಧೈರ್ಯಶಾಲಿ ಮತ್ತು ದೃಢನಿಶ್ಚಯವುಳ್ಳ ತಾಯಂದಿರು ರೂಪಿಸಿದ್ದಾರೆ. ಈ ನೆಲದ ಮಾತೃಶಕ್ತಿ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದೆ. ನಮ್ಮ ಜಲಗಾಂವ್  ವಾರ್ಕರಿ ಸಂಪ್ರದಾಯದ ಯಾತ್ರಾ ಸ್ಥಳವಾಗಿದೆ. ಇದು ಮಹಾನ್ ಸಂತ ಮುಕ್ತೈ ಅವರ ಭೂಮಿ. ಅವರ ಧ್ಯಾನ ಮತ್ತು ತಪಸ್ಸು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಬಹಿನಾಬಾಯಿಯ ಕವಿತೆಗಳು ಇಂದಿಗೂ ಸಮಾಜವನ್ನು ಕಟ್ಟುನಿಟ್ಟಾದ ನಿಯಮಗಳನ್ನು ಮೀರಿ ಯೋಚಿಸಲು ಒತ್ತಾಯಿಸುತ್ತವೆ. ಮಹಾರಾಷ್ಟ್ರದ ಯಾವುದೇ ಮೂಲೆಯಾಗಿರಲಿ ಅಥವಾ ಇತಿಹಾಸದ ಯಾವುದೇ ಅವಧಿಯಾಗಿರಲಿ ಮಾತೃ ಶಕ್ತಿಯ ಕೊಡುಗೆಗೆ  ಸಾಟಿಯಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಜೀವನಕ್ಕೆ ದಿಕ್ಕು ದಿಸೆ  ತೋರಿದವರು ಯಾರು? ಇದನ್ನು ಮಾಡಿದವರು ಮಾತಾ ಜಿಜಾವು.

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಕೆಲಸಕ್ಕೆ ಸಮಾಜವು ಪ್ರಾಮುಖ್ಯತೆ ನೀಡದಿದ್ದಾಗ, ಸಾವಿತ್ರಿಬಾಯಿ ಫುಲೆ ಮುಂದೆ ಬಂದರು. ಅಂದರೆ, ಭಾರತದ ಮಾತೃಶಕ್ತಿ ಯಾವಾಗಲೂ ಸಮಾಜ ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಮತ್ತು ಇಂದು, ನಮ್ಮ ದೇಶವು ಅಭಿವೃದ್ಧಿ ಹೊಂದಲು ಶ್ರಮಿಸುತ್ತಿರುವಾಗ, ನಮ್ಮ ಮಾತೃಶಕ್ತಿ ಮತ್ತೊಮ್ಮೆ ಮುಂದೆ ಬರುತ್ತಿದೆ. ಮಹಾರಾಷ್ಟ್ರದ ಎಲ್ಲಾ ಸಹೋದರಿಯರಲ್ಲಿ ರಾಜಮಾತಾ ಜಿಜಾವು ಮತ್ತು ಸಾವಿತ್ರಿಬಾಯಿ ಫುಲೆ ಅವರ ಪ್ರಭಾವವನ್ನು ನಾನು ಕಾಣುತ್ತೇನೆ.

ಸ್ನೇಹಿತರೇ,

ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ನಾನು ನಿಮ್ಮ ಬಳಿಗೆ ಬಂದಾಗ, ನಾವು 3 ಕೋಟಿ ಸಹೋದರಿಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದ್ದೆ. ಅಂದರೆ, ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ ಮತ್ತು ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವ 3 ಕೋಟಿ ಸಹೋದರಿಯರು. ಕಳೆದ 10 ವರ್ಷಗಳಲ್ಲಿ, ಒಂದು ಕೋಟಿ 'ಲಖ್ಪತಿ ದೀದಿ'ಗಳನ್ನು ರೂಪಿಸಲಾಗಿದೆ ಮತ್ತು ಕಳೆದ ಎರಡು ತಿಂಗಳಲ್ಲಿ 11 ಲಕ್ಷ 'ಲಖ್ಪತಿ ದೀದಿಗಳು' ಅವರೊಂದಿಗೆ ಸೇರಿಕೊಂಡಿದ್ದಾರೆ. ಅವರಲ್ಲಿ ಒಂದು ಲಕ್ಷ ಹೊಸ 'ಲಖ್ಪತಿ ದೀದಿಗಳು' ಮಹಾರಾಷ್ಟ್ರದಿಂದ ಮೂಡಿ ಬಂದಿದ್ದಾರೆ. ಈ ಸಾಧನೆಗಾಗಿ ಇಲ್ಲಿನ ಮಹಾಯುತಿ ಸರ್ಕಾರ ಬಹಳ ಶ್ರಮಿಸಿದೆ. ಏಕನಾಥ್ ಜೀ, ದೇವೇಂದ್ರ ಜೀ ಮತ್ತು ಅಜಿತ್ ದಾದಾ ಅವರ ಇಡೀ ತಂಡವು ತಾಯಂದಿರು ಮತ್ತು ಸಹೋದರಿಯರ ಸಬಲೀಕರಣಕ್ಕೆ ಸಮರ್ಪಿತವಾಗಿದೆ. ತಾಯಂದಿರು, ಸಹೋದರಿಯರು, ಯುವಜನರು ಮತ್ತು ರೈತರಿಗಾಗಿ ಮಹಾರಾಷ್ಟ್ರದಲ್ಲಿ ಹಲವಾರು ಯೋಜನೆಗಳು ಮತ್ತು ಹೊಸ ಉಪಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಸ್ನೇಹಿತರೇ,

'ಲಖ್ಪತಿ ದೀದಿ'ಗಳನ್ನು ಮಾಡುವ ಅಭಿಯಾನವು ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆದಾಯವನ್ನು ಹೆಚ್ಚಿಸುವ ಬಗ್ಗೆ ಮಾತ್ರವಲ್ಲ. ಇದು ಇಡೀ ಕುಟುಂಬಗಳನ್ನು ಮತ್ತು ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸುವ ದೊಡ್ಡ ಅಭಿಯಾನವಾಗಿದೆ. ಇದು ಹಳ್ಳಿಗಳ ಸಂಪೂರ್ಣ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ. ಇಲ್ಲಿ ಹಾಜರಿರುವ ಪ್ರತಿಯೊಬ್ಬ ಸಹೋದರಿ ಮತ್ತು ಮಗಳು ಅವಳು ಸಂಪಾದಿಸಲು ಪ್ರಾರಂಭಿಸಿದಾಗ, ಅವಳ ಹಕ್ಕುಗಳು ಹೆಚ್ಚಾಗುತ್ತವೆ ಮತ್ತು ಕುಟುಂಬದಲ್ಲಿ ಅವಳ ಗೌರವ ಬೆಳೆಯುತ್ತದೆ ಎಂದು ಚೆನ್ನಾಗಿ ತಿಳಿದಿದೆ. ಸಹೋದರಿಯ ಆದಾಯವು ಹೆಚ್ಚಾದಾಗ, ಕುಟುಂಬವು ಖರ್ಚು ಮಾಡಲು ಹೆಚ್ಚಿನ ಹಣವನ್ನು ಹೊಂದಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬ ಸಹೋದರಿ ಕೂಡ 'ಲಖ್ಪತಿ ದೀದಿ' ಆದಾಗ, ಅದು ಇಡೀ ಕುಟುಂಬದ ಹಣೆಬರಹವನ್ನು ಬದಲಾಯಿಸುತ್ತದೆ.

ನಾನು ಇಲ್ಲಿಗೆ ಬರುವ ಮೊದಲು ದೇಶದ ವಿವಿಧ ಭಾಗಗಳ ಸಹೋದರಿಯರ ಅನುಭವಗಳನ್ನು ಕೇಳುತ್ತಿದ್ದೆ. ಎಲ್ಲಾ ಲಖ್ಪತಿ ದೀದಿಗಳ ವಿಶ್ವಾಸ ಗಮನಾರ್ಹವಾಗಿತ್ತು. ನಾನು ಅವರನ್ನು ಲಖ್ಪತಿ ದೀದಿಗಳು ಎಂದು ಕರೆಯುತ್ತೇನೆ, ಆದರೆ ಕೆಲವರು ಎರಡು ಲಕ್ಷ ರೂಪಾಯಿಗಳು, ಸುಮಾರು ಮೂರು ಲಕ್ಷ ರೂಪಾಯಿಗಳು ಮತ್ತು ಕೆಲವರು ಎಂಟು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಯಶಸ್ಸನ್ನು ಸಾಧಿಸಿದ್ದಾರೆ.

ಸ್ನೇಹಿತರೇ,

ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿದೆ ಎಂಬುದನ್ನು ನೀವು ಎಲ್ಲೆಡೆ ಕೇಳುತ್ತಿದ್ದೀರಿ. ಈ ಸಾಧನೆಯಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಸಹೋದರಿಯರು ಎಂದರೆ ಪ್ರತಿ ಮನೆ ಮತ್ತು ಪ್ರತಿ ಕುಟುಂಬದಲ್ಲಿ ಸಂತೋಷದ ಖಾತರಿ. ಆದರೆ ಅವರಿಗೆ  ಯಾವುದೇ ಸಹಾಯ ಲಭಿಸುತ್ತದೆ ಎಂದು ಖಾತರಿಪಡಿಸಲು ಯಾರೂ ಇರಲಿಲ್ಲ. ದೇಶಾದ್ಯಂತ ಲಕ್ಷಾಂತರ ಸಹೋದರಿಯರ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಅವರಿಗೆ ಬ್ಯಾಂಕಿನಿಂದ ಸಾಲದ ಅಗತ್ಯವಿದ್ದರೆ, ಅವರು ಅದನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೂ, ಅವರು ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಿಮ್ಮ ಸಹೋದರ, ನಿಮ್ಮ ಮಗ ಒಂದು ನಿರ್ಣಯವನ್ನು ಮಾಡಿದರು. ಏನೇ ಆಗಲಿ, ನನ್ನ ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಕಷ್ಟಗಳನ್ನು ನಿವಾರಿಸಬೇಕು ಎಂದು ನಾನು ನಿರ್ಧರಿಸಿದೆ. ಅದಕ್ಕಾಗಿಯೇ ಮೋದಿ ಸರ್ಕಾರವು ಮಹಿಳೆಯರ ಪರವಾಗಿ ಒಂದರ ನಂತರ ಒಂದರಂತೆ ನಿರ್ಧಾರಗಳನ್ನು ತೆಗೆದುಕೊಂಡಿತು. ಒಂದು ಕಡೆ ಹಿಂದಿನ ಏಳು ದಶಕಗಳ ಸರ್ಕಾರಗಳನ್ನು ಮತ್ತೊಂದೆಡೆ ಮೋದಿ ಸರ್ಕಾರದ ಹತ್ತು ವರ್ಷಗಳ ಆಡಳಿತದೊಂದಿಗೆ ಹೋಲಿಸಿ ಎಂದು ನಾನು ನಿಮಗೆ ಹೇಳುತ್ತೇನೆ. ದೇಶದ ಸಹೋದರಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಮೋದಿ ಸರಕಾರ ಮಾಡಿದಷ್ಟು ಪ್ರಮಾಣದ ಕೆಲಸ ಸ್ವಾತಂತ್ರ್ಯದ ಬಳಿಕದ ಇತರ ಯಾವುದೇ ಸರಕಾರಕ್ಕೆ ಸಾಟಿಯಿಲ್ಲದಷ್ಟು ಪ್ರಮಾಣದಲ್ಲಿದೆ.

ಸ್ನೇಹಿತರೇ,

ಬಡವರಿಗಾಗಿ ಸರ್ಕಾರ ನಿರ್ಮಿಸಿದ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಬೇಕು ಎಂದು ನಿರ್ಧರಿಸಿದ್ದು ನಮ್ಮ ಸರ್ಕಾರ. ಈವರೆಗೆ ನಿರ್ಮಿಸಲಾದ 4 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ. ನಾವು ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸಲಿದ್ದೇವೆ, ಮತ್ತು ಇವುಗಳಲ್ಲಿ ಹೆಚ್ಚಿನವು ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿರುತ್ತವೆ. ನಾವು ಮಾಡಿದ ಎರಡನೇ ಪ್ರಮುಖ ಬದಲಾವಣೆ ಬ್ಯಾಂಕಿಂಗ್ ವ್ಯವಸ್ಥೆಯದ್ದು. ಮೊದಲಿಗೆ, ನಾವು ಜನ್ ಧನ್ ಖಾತೆಗಳನ್ನು ತೆರೆದಿದ್ದೇವೆ, ಮತ್ತು ಖಾತೆಗಳಲ್ಲಿ ಹೆಚ್ಚಿನವು ಸಹೋದರಿಯರ ಹೆಸರಿನಲ್ಲಿ ತೆರೆಯಲ್ಪಟ್ಟವು. ನಂತರ ನಾವು ಮುದ್ರಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಮೇಲಾಧಾರವಿಲ್ಲದೆ ಸಾಲಗಳನ್ನು ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದ್ದೇವೆ. ಮತ್ತು ಮೇಲಾಧಾರದ ಅಗತ್ಯವಿದ್ದರೆ, ಮೋದಿ ಅಲ್ಲಿದ್ದಾರೆ. ಈ ಯೋಜನೆಯ ಸುಮಾರು 70% ಫಲಾನುಭವಿಗಳು ತಾಯಂದಿರು ಮತ್ತು ಸಹೋದರಿಯರು. ದೇಶದ ಕೆಲವು ಜನರು ಮಹಿಳೆಯರಿಗೆ ಸಾಲವನ್ನು ನೀಡಬಾರದು ಏಕೆಂದರೆ ಅವರು ಸುಸ್ತಿದಾರರಾಗುತ್ತಾರೆ ಮತ್ತು ಅದರಲ್ಲಿ ಅಪಾಯವಿದೆ ಎಂದು ಹೇಳಿದ್ದರು. ಆದರೆ ನಾನು ವಿಭಿನ್ನವಾಗಿ ಯೋಚಿಸಿದೆ. ನಿಮ್ಮ ಮೇಲೆ, ನಮ್ಮ ಮಾತೃಶಕ್ತಿಯಲ್ಲಿ, ನಿಮ್ಮ ಪ್ರಾಮಾಣಿಕತೆಯಲ್ಲಿ ಮತ್ತು ನಿಮ್ಮ ಸಾಮರ್ಥ್ಯಗಳ ಮೇಲೆ ನನಗೆ ಸಂಪೂರ್ಣ ನಂಬಿಕೆ ಇತ್ತು. ನಮ್ಮ ತಾಯಂದಿರು ಮತ್ತು ಸಹೋದರಿಯರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಪ್ರಾಮಾಣಿಕತೆಯಿಂದ ಸಾಲವನ್ನು ಮರುಪಾವತಿ ಮಾಡಿದರು.

ಈಗ, ನಾವು ಮುದ್ರಾ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ. ನಾವು ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಮೇಲಾಧಾರವಿಲ್ಲದೆ ಸಾಲವನ್ನು ನೀಡುತ್ತೇವೆ. ಈ ಯೋಜನೆಯು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ನಮ್ಮ ಅನೇಕ ಸಹೋದರಿಯರು ಕರಕುಶಲ ಕಲೆಯಲ್ಲಿ ತೊಡಗಿರುವ ವಿಶ್ವಕರ್ಮ ಸಮುದಾಯದ ಭಾಗವಾಗಿದ್ದಾರೆ ಮತ್ತು ನಮ್ಮ ಸರ್ಕಾರ ಅವರಿಗೆ ಖಾತರಿಗಳನ್ನು ಒದಗಿಸಿದೆ.

ಸ್ನೇಹಿತರೇ,

ನಾನು ಸ್ವಸಹಾಯ ಗುಂಪುಗಳು ಅಥವಾ ಸಖಿ ಮಂಡಲಗಳ ಬಗ್ಗೆ ಮಾತನಾಡುವಾಗ, ಅವುಗಳ ಮಹತ್ವವನ್ನು ನೋಡಬಲ್ಲ ಕೆಲವೇ ಜನರು ಇದ್ದರು. ಆದರೆ ಇಂದು, ಈ ಗುಂಪುಗಳು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಶಕ್ತಿಯಾಗುತ್ತಿವೆ. ಹಳ್ಳಿಗಳು ಮತ್ತು ದೂರದ ಬುಡಕಟ್ಟು ಪ್ರದೇಶಗಳಲ್ಲಿ ಸಖಿ ಮಂಡಲಗಳು ತಂದ ಬದಲಾವಣೆಗಳು ಸ್ಪಷ್ಟವಾಗಿವೆ. ಕಳೆದ ಹತ್ತು ವರ್ಷಗಳಲ್ಲಿ, 10 ಕೋಟಿ ಸಹೋದರಿಯರು ಆಂದೋಲನಕ್ಕೆ ಸೇರಿದ್ದಾರೆ ಮತ್ತು ಸಂಖ್ಯೆ ದೊಡ್ಡದಾಗಿದೆ. ಮತ್ತು ನಾವು ಅವುಗಳನ್ನು ಬ್ಯಾಂಕುಗಳೊಂದಿಗೆ ಜೋಡಿಸಿದ್ದೇವೆ. ನಾವು ಅವರಿಗೆ ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ಸುಲಭಗೊಳಿಸಿದ್ದೇವೆ.

ನಾನು ನಿಮಗೆ ಒಂದು ಅಂಕಿಅಂಶವನ್ನು ನೀಡುತ್ತೇನೆ, ಅದು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು ಮತ್ತು ನಮ್ಮ ದೇಶವು ಮೊದಲು ಹೇಗೆ ಕಾರ್ಯನಿರ್ವಹಿಸಿತು ಎಂಬುದರ ಬಗ್ಗೆ ನಿಮಗೆ ಕೋಪವನ್ನುಂಟು ಮಾಡಲೂಬಹುದು. 2014ರವರೆಗೆ ಸಖಿ ಮಂಡಲಗಳಿಗೆ 25,000 ಕೋಟಿ ರೂ.ಗಿಂತ ಕಡಿಮೆ ಬ್ಯಾಂಕ್ ಸಾಲ ನೀಡಲಾಗಿತ್ತು. ನೆನಪಿಡಿ, ನಾನು ಮಹಿಳಾ ಸ್ವಸಹಾಯ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ- ಕೇವಲ 25,000 ಕೋಟಿ ರೂ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 9 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಅದನ್ನು ಹೋಲಿಸಿ ನೋಡಿ- 25,000 ಕೋಟಿ ಮತ್ತು 9 ಲಕ್ಷ ಕೋಟಿ. ಇದಲ್ಲದೆ, ಸರ್ಕಾರವು ಒದಗಿಸುವ ನೇರ ಹಣಕಾಸಿನ ನೆರವು ಸುಮಾರು 30 ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಹಳ್ಳಿಗಳಲ್ಲಿನ ನಮ್ಮ ಸಹೋದರಿಯರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಮತ್ತು ದೇಶವನ್ನು ಬಲಪಡಿಸುತ್ತಿದ್ದಾರೆ. ನಾನು ಮತ್ತೆ ಹೇಳುತ್ತೇನೆ, ಇದು ಕೇವಲ ಟ್ರೈಲರ್. ನಾವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಪಾತ್ರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ. ಇಂದು, 1.25 ಲಕ್ಷಕ್ಕೂ ಹೆಚ್ಚು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ಗಳು ಅಥವಾ ಬ್ಯಾಂಕ್ ಸಖಿಗಳು ಹಳ್ಳಿಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ಕೆಲವು ಸಹೋದರಿಯರು ತಾವು ಒಂದು ಕೋಟಿ ರೂಪಾಯಿಗಳವರೆಗಿನ ವಹಿವಾಟುಗಳನ್ನು ನಿರ್ವಹಿಸುತ್ತಿದ್ದೇವೆ  ಎಂದು ಹೇಳುತ್ತಿದ್ದರು.

ನಾವು ಈಗ ಮಹಿಳೆಯರಿಗೆ ಡ್ರೋನ್ ಪೈಲಟ್ ಗಳಾಗಲು ತರಬೇತಿ ನೀಡುತ್ತಿದ್ದೇವೆ. ನಾವು ಮಹಿಳಾ ಗುಂಪುಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರೋನ್ಗಳನ್ನು ನೀಡುತ್ತಿದ್ದೇವೆ, ಇದರಿಂದ ಅವರು ಆಧುನಿಕ ಕೃಷಿ ಪದ್ಧತಿಗಳಲ್ಲಿ ರೈತರಿಗೆ ಸಹಾಯ ಮಾಡಬಹುದು. ಜಾನುವಾರು ಮಾಲೀಕರಿಗೆ ಸಹಾಯ ಮಾಡಲು ನಾವು 2 ಲಕ್ಷ ಪಶು ಸಖಿಗಳಿಗೆ (ಪಶುಸಂಗೋಪನೆಯಲ್ಲಿ ತೊಡಗಿರುವ ಮಹಿಳೆಯರು) ತರಬೇತಿ ನೀಡುತ್ತಿದ್ದೇವೆ. ಆಧುನಿಕ ಮತ್ತು ನೈಸರ್ಗಿಕ ಕೃಷಿಯನ್ನು ನಡೆಸಲು ನಾವು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದ್ದೇವೆ. ಇದಕ್ಕಾಗಿ, ನಾವು ಕೃಷಿ ಸಖಿ (ಕೃಷಿ ಸ್ನೇಹಿತ) ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಹಳ್ಳಿಗಳಲ್ಲಿ ಲಕ್ಷಾಂತರ ಕೃಷಿ ಸಖಿಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಈ ಉಪಕ್ರಮಗಳು ಹೆಣ್ಣುಮಕ್ಕಳಿಗೆ ಉದ್ಯೋಗವನ್ನು ಒದಗಿಸುತ್ತವೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಮತ್ತು ಹೆಣ್ಣುಮಕ್ಕಳ ಸಾಮರ್ಥ್ಯದ ಬಗ್ಗೆ ಸಮಾಜದಲ್ಲಿ ಹೊಸ ಮನಸ್ಥಿತಿಯನ್ನು ಬೆಳೆಸುತ್ತವೆ.

ಸ್ನೇಹಿತರೇ,

ದೇಶವು ಕಳೆದ ತಿಂಗಳು ಬಜೆಟ್ ಮಂಡಿಸಿತು. ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಯೋಜನೆಗಳಿಗೆ ಬಜೆಟ್ 3 ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಹೆಚ್ಚಿನ ಹೆಣ್ಣುಮಕ್ಕಳು ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಕಚೇರಿಗಳು ಮತ್ತು ಕಾರ್ಖಾನೆಗಳಿಗೆ ವಿಶೇಷ ಸೌಲಭ್ಯಗಳನ್ನು ಘೋಷಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಅವರ ಮಕ್ಕಳಿಗೆ ಹಾಸ್ಟೆಲ್ ಮತ್ತು ಶಿಶುವಿಹಾರಗಳನ್ನು ಒದಗಿಸಲು ಸರ್ಕಾರ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರವು ಹೆಣ್ಣುಮಕ್ಕಳಿಗೆ ಪ್ರತಿಯೊಂದು ಕ್ಷೇತ್ರವನ್ನು ತೆರೆಯುತ್ತಿದೆ, ಅವರಿಗೆ ಕೆಲವು ಕ್ಷೇತ್ರಗಳಲ್ಲಿ  ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇಂದು, ಎಲ್ಲಾ ಮೂರು ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಮತ್ತು ಮಹಿಳೆಯರನ್ನು ಫೈಟರ್ ಪೈಲಟ್ಗಳಾಗಿ ನಿಯೋಜಿಸಲಾಗುತ್ತಿದೆ. ಹೆಣ್ಣುಮಕ್ಕಳು ಸೈನಿಕ ಶಾಲೆಗಳು ಮತ್ತು ಮಿಲಿಟರಿ ಅಕಾಡೆಮಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ನಮ್ಮ ಪೊಲೀಸ್ ಪಡೆಗಳು ಮತ್ತು ಅರೆಸೈನಿಕ ಘಟಕಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಹಳ್ಳಿಗಳಲ್ಲಿ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳಿಂದ ಹಿಡಿದು ನವೋದ್ಯಮ (ಸ್ಟಾರ್ಟ್ ಅಪ್)  ಕ್ರಾಂತಿಯವರೆಗೆ, ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಇಂದು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ರಾಜಕೀಯದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾವು ನಾರಿ ಶಕ್ತಿ ವಂದನ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ.

ಸ್ನೇಹಿತರೇ,

ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವುದರ ಜೊತೆಗೆ, ಅವರ ಸುರಕ್ಷತೆಯೂ ರಾಷ್ಟ್ರೀಯ ಆದ್ಯತೆಯಾಗಿದೆ. ನಾನು ವಿಷಯವನ್ನು ಕೆಂಪು ಕೋಟೆಯಿಂದ ಪದೇ ಪದೇ ಎತ್ತಿದ್ದೇನೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಯಾವುದೇ ರಾಜ್ಯದಲ್ಲಿದ್ದರೂ  ಅವರ ನೋವು ಮತ್ತು ಕೋಪವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮಹಿಳೆಯರ ವಿರುದ್ಧದ ಅಪರಾಧಗಳು ಕ್ಷಮಿಸಲಾಗದ ಪಾಪಗಳು ಎಂದು ನಾನು ಮತ್ತೊಮ್ಮೆ ಪ್ರತಿ ರಾಜಕೀಯ ಪಕ್ಷ ಮತ್ತು ರಾಜ್ಯ ಸರ್ಕಾರಗಳಿಗೆ ಹೇಳುತ್ತೇನೆ.  ತಪ್ಪಿತಸ್ಥರು, ಅವರು ಯಾರೇ ಆಗಿರಲಿ, ನ್ಯಾಯದಿಂದ ತಪ್ಪಿಸಿಕೊಳ್ಳಬಾರದು. ಅವರಿಗೆ ಯಾವುದೇ ರೂಪದಲ್ಲಿ ಸಹಾಯ ಮಾಡುವವರು ಸಹ ನ್ಯಾಯದಿಂದ ತಪ್ಪಿಸಿಕೊಳ್ಳಬಾರದು. ಅದು ಆಸ್ಪತ್ರೆಯಾಗಿರಲಿ, ಶಾಲೆಯಾಗಿರಲಿ, ಕಚೇರಿಯಾಗಿರಲಿ ಅಥವಾ ಪೊಲೀಸ್ ಠಾಣೆಯಾಗಿರಲಿ- ಪ್ರತಿಯೊಂದು ಹಂತದಲ್ಲೂ ಉತ್ತರದಾಯಿತ್ವ ಇರಬೇಕು. ಮೇಲಿನಿಂದ ಕೆಳಕ್ಕೆ ಸಂದೇಶವು ಪಾಪವು ಕ್ಷಮಿಸಲಾಗದು ಎಂದು ಸ್ಫಟಿಕ ಸ್ಪಷ್ಟವಾಗಿರಬೇಕು. ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಜೀವಗಳನ್ನು ರಕ್ಷಿಸುವುದು ಮತ್ತು ಮಹಿಳೆಯರ ಘನತೆಯನ್ನು ಕಾಪಾಡುವುದು ಸಮಾಜವಾಗಿ ಮತ್ತು ಸರ್ಕಾರವಾಗಿ ನಮಗೆ ಮಹತ್ವದ ಜವಾಬ್ದಾರಿಯಾಗಿದೆ.

ಸ್ನೇಹಿತರೇ,

ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಲು ನಮ್ಮ ಸರ್ಕಾರ ನಿರಂತರವಾಗಿ ಕಾನೂನುಗಳನ್ನು ಬಲಪಡಿಸುತ್ತಿದೆ. ಇಂದು ಇಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಉಪಸ್ಥಿತರಿರುವುದರಿಂದ, ನಾನು ಇದನ್ನು ನಿಮಗೆ ವಿಶೇಷವಾಗಿ ತಿಳಿಸಲು ಬಯಸುತ್ತೇನೆ. ಈ ಹಿಂದೆ, ಎಫ್ಐಆರ್ ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಾಗುತ್ತಿರಲಿಲ್ಲ, ವಿಚಾರಣೆಗಳು ವಿಳಂಬವಾಗುತ್ತಿವೆ ಮತ್ತು ಪ್ರಕರಣಗಳನ್ನು ದೀರ್ಘಕಾಲದವರೆಗೆ ಎಳೆಯಲಾಗಿದೆ ಎಂಬ ದೂರುಗಳು ಇದ್ದವು. ಭಾರತೀಯ ನ್ಯಾಯ ಸಂಹಿತಾದಲ್ಲಿ (ಬಿಎನ್ಎಸ್) ಇಂತಹ ಅನೇಕ ಅಡೆತಡೆಗಳನ್ನು ನಾವು ಪರಿಹರಿಸಿದ್ದೇವೆ. ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಪೂರ್ಣ ಅಧ್ಯಾಯವನ್ನು ಮೀಸಲಿಡಲಾಗಿದೆ. ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗದಿದ್ದರೆ, ಅವಳು ಮನೆಯಿಂದ ಇ-ಎಫ್ಐಆರ್ ಸಲ್ಲಿಸಬಹುದು. ಇ-ಎಫ್ಐಆರ್ ನಿಂದ  ಪೊಲೀಸ್ ಠಾಣೆ ಮಟ್ಟದಲ್ಲಿ ಯಾವುದೇ ವಿಳಂಬ ಅಥವಾ ತಿರುಚುವಿಕೆ ಇರುವುದಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ಇದು ತ್ವರಿತ ತನಿಖೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಹೊಸ ಕಾನೂನುಗಳಲ್ಲಿ ಅಪ್ರಾಪ್ತರ ವಿರುದ್ಧದ ಲೈಂಗಿಕ ಅಪರಾಧಗಳಿಗೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಮದುವೆಯ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ವಂಚಿಸಿದ ಅನೇಕ ಪ್ರಕರಣಗಳು ನಡೆದಿವೆ. ಈ ಹಿಂದೆ ಬಗ್ಗೆ ಸ್ಪಷ್ಟ ಕಾನೂನು ಇರಲಿಲ್ಲ. ಈಗ, ಮದುವೆಯ ಹೆಸರಿನಲ್ಲಿ ಸುಳ್ಳು ಭರವಸೆಗಳು ಮತ್ತು ಮೋಸವನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯಲ್ಲಿ ರಾಜ್ಯ ಸರ್ಕಾರಗಳೊಂದಿಗೆ ನಿಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಭಾರತೀಯ ಸಮಾಜದಿಂದ ಪಾಪದ ಮನಸ್ಥಿತಿಯನ್ನು ತೊಡೆದುಹಾಕುವವರೆಗೂ ನಾವು ವಿಶ್ರಾಂತಿ ಪಡೆಯಬಾರದು.

ಆದ್ದರಿಂದ, ಸ್ನೇಹಿತರೇ,

ಇಂದು, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ಮುಂದುವರಿಯುತ್ತಿದೆ ಮತ್ತು ಮಹಾರಾಷ್ಟ್ರವು ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಹಾರಾಷ್ಟ್ರವು 'ವಿಕ್ಷಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ನ ಹೊಳೆಯುವ ನಕ್ಷತ್ರವಾಗಿದೆ. ಮಹಾರಾಷ್ಟ್ರವು ವಿಶ್ವಾದ್ಯಂತ ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಮಹಾರಾಷ್ಟ್ರದ ಭವಿಷ್ಯವು ಹೆಚ್ಚು ಹೆಚ್ಚು ಹೂಡಿಕೆ ಮತ್ತು ಹೊಸ ಉದ್ಯೋಗಾವಕಾಶಗಳಲ್ಲಿದೆ.

ಮತ್ತು ಮಹಾಯುತಿ ಸರ್ಕಾರವು ಹೂಡಿಕೆ ಮತ್ತು ಉದ್ಯೋಗಗಳನ್ನು ಖಾತರಿಪಡಿಸುತ್ತದೆ. ಮಹಾರಾಷ್ಟ್ರಕ್ಕೆ ಮುಂದಿನ ಹಲವು ವರ್ಷಗಳವರೆಗೆ ಸ್ಥಿರವಾದ ಮಹಾಯುತಿ ಸರ್ಕಾರದ ಅಗತ್ಯವಿದೆ. ಮಹಾರಾಷ್ಟ್ರಕ್ಕೆ ಇಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಸರ್ಕಾರ ಬೇಕು. ಯುವಜನರ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದ ಮೇಲೆ ಕೇಂದ್ರೀಕರಿಸುವ ಸರ್ಕಾರ ಮಹಾರಾಷ್ಟ್ರಕ್ಕೆ ಬೇಕು. ಮಹಾರಾಷ್ಟ್ರದ ಸ್ಥಿರತೆ ಮತ್ತು ಸಮೃದ್ಧಿಗಾಗಿ ಇಲ್ಲಿನ ತಾಯಂದಿರು ಮತ್ತು ಸಹೋದರಿಯರು ಮುಂದೆ ಬಂದು ನನ್ನನ್ನು ಬೆಂಬಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ.

ಸಹೋದರಿಯರೇ, ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ. ಮತ್ತೊಮ್ಮೆ, ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಕಾರ್ಯಗಳಿಗೆ ಭಾರತ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡುವಾಗ, ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ನನ್ನೊಂದಿಗೆ ಹೇಳಿ--

ಭಾರತ್ ಮಾತಾ ಕಿ - ಜೈ

ಎರಡೂ ಕೈಗಳನ್ನು ಎತ್ತಿ, ನಿಮ್ಮ ಮುಷ್ಟಿಗಳನ್ನು ಬಿಗಿಹಿಡಿದು, ನಿಮ್ಮ ಎಲ್ಲಾ ಶಕ್ತಿಯಿಂದ ಘೋಷಣೆ ಹಾಕಿ -

ಭಾರತ್ ಮಾತಾ ಕಿ - ಜೈ

ಭಾರತ್ ಮಾತಾ ಕಿ - ಜೈ

ಭಾರತ್ ಮಾತಾ ಕಿ - ಜೈ

ಭಾರತ್ ಮಾತಾ ಕಿ - ಜೈ

ಭಾರತ್ ಮಾತಾ ಕಿ - ಜೈ

ತುಂಬ ಧನ್ಯವಾದಗಳು.

 

ಘೋಷಣೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****



(Release ID: 2050040) Visitor Counter : 7