ರಾಷ್ಟ್ರಪತಿಗಳ ಕಾರ್ಯಾಲಯ

ಫರಿದಾಬಾದ್ ನ ಜೆ ಸಿ ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನಗಳ  ವಿಶ್ವವಿದ್ಯಾಲಯದ 5 ನೇ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿಗಳು ಭಾಗಿ

Posted On: 21 AUG 2024 2:35PM by PIB Bengaluru

ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ. ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 21,2024) ಹರಿಯಾಣಾದ ಫರಿದಾಬಾದ್ ನಲ್ಲಿರುವ ಜೆ ಸಿ ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಶ್ವವಿದ್ಯಾಲಯದ 5 ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಸಮಾರಂಭದಲ್ಲಿ ಮಾತನಾಡಿದ ಅವರು,  ಇಂದು ಇಡೀ ವಿಶ್ವವೇ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿದೆ‌. ಭಾರತ ಕೂಡ ಈ ಕ್ರಾಂತಿಯ ಸವಾಲುಗಳನ್ನು ಎದುರಿಸಿ ಅವಕಾಶಗಳ ಲಾಭ ಪಡೆಯಲು ಸಿದ್ಧವಿದೆ. ಈ ರಾಷ್ಟ್ರೀಯ ಗುರಿ ಸಾಧಿಸಲು ಜೆ ಸಿ ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ದಂತಹ ಸಂಸ್ಥೆಗಳ‌ ಪಾತ್ರ ಅತ್ಯಂತ ಮುಖ್ಯವಾಗಿರಲಿದೆ ಎಂದರು.

ಈ ವಿಶ್ವವಿದ್ಯಾಲಯವು ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕೈಗಾರಿಕಾ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿರುವುದು ಸಂತಸದ‌‌ ಸಂಗತಿಯಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಲು ಅನೇಕ ಬಹು ರಾಷ್ಟ್ರೀಯ ಕಂಪೆನಿಗಳು ಈ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ತೆರೆದಿವೆ ಎಂದು ಉಲ್ಲೇಖಿಸಿದ ಅವರು, ಈ ಎಲ್ಲಾ ಪರಿಶ್ರಮಗಳು ಸಕಾರಾತ್ಮಕ ಫಲಿತಾಂಶ ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಇಂದು ಪ್ರಗತಿಗೆ ವಿಪುಲ ಅವಕಾಶಗಳು ತೆರೆದುಕೊಂಡಿದೆ. ಉದಾಹರಣೆಗೆ, ದೂರದ ಸ್ಥಳಗಳಲ್ಲಿ ಅಂತರ್ಜಾಲ ಲಭ್ಯತೆಯಿಂದಾಗಿ ಅನೇಕ ಆನ್ ಲೈನ್ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಆದಾಗ್ಯೂ, ತಂತ್ರಜ್ಞಾನವನ್ನು ಸುಸ್ಥಿರ ಅಭಿವೃದ್ಧಿಗೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಸೂಕ್ತವಾಗಿ ಬಳಸಬೇಕು ಎಂಬುದನ್ನು ನಾವು ನೆನಪಿಡಬೇಕು. ಅದರ ಅಸಮರ್ಪಕ ಬಳಕೆಯು ತೊಂದರೆಯನ್ನುಂಟು ಮಾಡಬಹುದಾಗಿದೆ. 

ಯುವ ಸಮೂಹವನ್ನು ಕೌಶಲ್ಯಯುತರು ಮತ್ತು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ಜೆ ಸಿ ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸಿದೆ ಎಂದು ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹರ್ಷದಾಯಕ ಎಂದು ಹೇಳಿದರು. ಹಳೆಯ ವಿದ್ಯಾರ್ಥಿಗಳ ಅಲ್ಯುಮಿನಿ ಸಂಘದ ಕೊಡುಗೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಲಹೆ ನೀಡಿದರು. 

ಈ ವಿಶ್ವವಿದ್ಯಾಲಯಕ್ಕೆ ಮರಗಳು ಮತ್ತು ಸಸ್ಯಗಳಿಗೂ ಭಾವನೆ ಇದೆ ಎಂದು ವೈಜ್ಞಾನಿಕವಾಗಿ ಮೊದಲು ಸಾಬೀತುಪಡಿಸಿದ  ಮಹಾನ್ ವಿಜ್ಞಾನಿ ಮತ್ತು ಆಧುನಿಕ ವಿಜ್ಞಾನದ ಪ್ರವರ್ತಕರಾದ ಜಗದೀಶ್ ಚಂದ್ರ ಬೋಸ್ ಅವರ ಹೆಸರಿಡಲಾಗಿದೆ. ಅವರ ಕ್ರಾಂತಿಕಾರಕ ಆವಿಷ್ಕಾರಗಳು ನಾವು ಸಸ್ಯಶಾಸ್ತ್ರೀಯ ಪ್ರಪಂಚವನ್ನು ನೋಡುವ ಪರಿಯನ್ನು ಬದಲಿಸಿವೆ. ಅವರ ಜೀವನ ಮತ್ತು ಕಾರ್ಯಗಳಿಂದ ಪ್ರೇರಣೆ ಪಡೆದು ತಂತ್ರಜ್ಞಾನದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಭಾರತದ ಶ್ರೀಮಂತ ಪರಂಪರೆಯು ಯಾವಾಗಲೂ ನಾವು ಹೆಮ್ಮೆ ಪಡುವಂತೆ ಮಾಡಲಿದೆ. ಯುವಕರೂ ಕೂಡ ಈ ಶ್ರೀಮಂತ ಪರಂಪರೆಯ ಭಾಗವಾಗಿದ್ದು ಅದನ್ನು ಯುವಸಮೂಹ ಪ್ರತಿನಿಧಿಸಬೇಕಿದೆ ಎಂದು ಅವರು ಹೇಳಿದರು‌. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೌಶಲಗಳ ಬಗ್ಗೆ ನಂಬಿಕೆ ಇರಿಸಿ ಗುರಿ ಸಾಧನೆಗೆ ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕಿವಿಮಾತು ಹೇಳಿದರು.

ರಾಷ್ಟ್ರಪತಿ ಅವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

https://static.pib.gov.in/WriteReadData/specificdocs/documents/2024/aug/doc2024821378601.pdf

 

*****



(Release ID: 2047416) Visitor Counter : 16