ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ನ್ಯೂಜಿಲೆಂಡ್ ನಲ್ಲಿ ಭಾರತದ ರಾಷ್ಟ್ರಪತಿ; ನ್ಯೂಜಿಲೆಂಡ್ ನ ಗವರ್ನರ್ ಜನರಲ್, ಪ್ರಧಾನ ಮಂತ್ರಿ ಮತ್ತು ಉಪ ಪ್ರಧಾನ ಮಂತ್ರಿಯವರ ಭೇಟಿ


ನ್ಯೂಜಿಲೆಂಡ್ ಅಂತರ-ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಉದ್ದೇಶಿಸಿ ಭಾಷಣ

Posted On: 08 AUG 2024 7:21PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಫಿಜಿ, ನ್ಯೂಜಿಲೆಂಡ್ ಮತ್ತು ಟಿಮೋರ್-ಲೆಸ್ಟೆಗೆ ಅಧಿಕೃತ ಭೇಟಿಯ ಎರಡನೇ ಹಂತದಲ್ಲಿ ಇಂದು (ಆಗಸ್ಟ್ 8, 2024) ಬೆಳಿಗ್ಗೆ ನ್ಯೂಜಿಲೆಂಡ್ ವೆಲ್ಲಿಂಗ್ಟನ್ ಗೆ ಬಂದಿಳಿದರು.

ನ್ಯೂಜಿಲೆಂಡ್ ಗವರ್ನರ್ ಜನರಲ್ ಡೇಮ್ ಸಿಂಡಿ ಕಿರೊ ಅವರು ರಾಷ್ಟ್ರಪತಿ ಮುರ್ಮು ಅವರನ್ನು ಸರ್ಕಾರಿ ಭವನದಲ್ಲಿ ಸ್ವಾಗತಿಸಿದರು. ಸಾಂಪ್ರದಾಯಿಕ ಮಾವೊರಿ "ಪೊವಿರಿ" ಸಮಾರಂಭದೊಂದಿಗೆ ಅವರನ್ನು ಸ್ವಾಗತಿಸಲಾಯಿತು ಮತ್ತು ರಾಯಲ್ ಗಾರ್ಡ್ ಆಫ್ ಹಾನರ್ (ಗೌರವ ರಕ್ಷೆ) ನೀಡಲಾಯಿತು. ಸಭೆಯಲ್ಲಿ, ಇಬ್ಬರೂ ನಾಯಕರು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆತ್ಮೀಯ ಮತ್ತು ಸ್ನೇಹಪರ ಸಂಬಂಧವನ್ನು ಶ್ಲಾಘಿಸಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಚರ್ಚಿಸಿದರು. ವಿಶೇಷವಾಗಿ ವ್ಯಾಪಾರ ಮತ್ತು ವ್ಯವಹಾರಗಳ ಮೂಲಕ ಪರಸ್ಪರ ಲಾಭದಾಯಕ ಸಹಯೋಗ ಮತ್ತು ಪಾಲುದಾರಿಕೆಗಳನ್ನು ಸ್ಥಾಪಿಸುವ ಮೂಲಕ ಭಾರತ-ನ್ಯೂಜಿಲೆಂಡ್ ಆರ್ಥಿಕ ಸಂಬಂಧದ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಗಳನ್ನು ಮುಂದುವರಿಸುವ ಅಗತ್ಯವನ್ನು ಅವರು ಒಪ್ಪಿಕೊಂಡರು.

ಮುಂದಿನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ಅವರು ನ್ಯೂಜಿಲೆಂಡ್ ಅಂತರರಾಷ್ಟ್ರೀಯ ಶಿಕ್ಷಣ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು, ಅಲ್ಲಿ ಭಾರತವು ವರ್ಷ 'ಗೌರವ ದೇಶ'ವಾಗಿದೆ.

ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಬಹುಶಿಸ್ತೀಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಮೂಲಕ ಭಾರತೀಯ ಶಿಕ್ಷಣ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಜ್ಞಾನದ ಅನ್ವೇಷಣೆಯ ಶ್ರೀಮಂತ ಭಾರತೀಯ ಸಂಪ್ರದಾಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಮಕಾಲೀನ ಪ್ರಗತಿಯ ಬಗ್ಗೆ ವಿವರಿಸಿದರು.

ಸಂಶೋಧನೆ ಮತ್ತು ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಉತ್ಕೃಷ್ಟತೆಯ ಮೇಲೆ ಕೇಂದ್ರೀಕರಿಸುವ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನ್ಯೂಜಿಲೆಂಡ್ ಹೆಸರುವಾಸಿಯಾಗಿದೆ ಎಂದು ಅವರು ಹೇಳಿದರು. ಅನೇಕ ಭಾರತೀಯ ವಿದ್ಯಾರ್ಥಿಗಳು ನ್ಯೂಜಿಲೆಂಡ್ ವಿವಿಧ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದವರು ನುಡಿದರು.

ನಮ್ಮ ಸಂಸ್ಥೆಗಳ ನಡುವೆ, ವಿಶೇಷವಾಗಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ವೃತ್ತಿಪರ ಮತ್ತು ಕೌಶಲ್ಯ ಆಧಾರಿತ ತರಬೇತಿ, ಹವಾಮಾನ ಮತ್ತು ಪರಿಸರ ಅಧ್ಯಯನಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಹೆಚ್ಚಿನ ಶೈಕ್ಷಣಿಕ ವಿನಿಮಯ ಮತ್ತು ಸಹಯೋಗವನ್ನು ಅಧ್ಯಕ್ಷರು ಪ್ರೋತ್ಸಾಹಿಸಿದರು.

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಕೂಡ ರಾಷ್ಟ್ರಪತಿಯವರನ್ನು ಭೇಟಿಯಾದರು. ಇಬ್ಬರೂ ನಾಯಕರು ಸಾಂಸ್ಕೃತಿಕ ಸಂಬಂಧಗಳನ್ನು ಆಳಗೊಳಿಸುವುದರಿಂದ ಹಿಡಿದು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಬದ್ಧತೆಯವರೆಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಇದಕ್ಕೂ ಮುನ್ನ ನ್ಯೂಜಿಲೆಂಡ್ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ವಿನ್ ಸ್ಟನ್ ಪೀಟರ್ಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಒಪ್ಪಿಕೊಂಡರು ಮತ್ತು ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

ವೆಲ್ಲಿಂಗ್ಟನ್ ರೈಲ್ವೆ ನಿಲ್ದಾಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿಗಳು, ವೆಲ್ಲಿಂಗ್ಟನ್ ಪುಕೆಹು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು. ಗವರ್ನರ್ ಜನರಲ್ ಡೇಮ್ ಸಿಂಡಿ ಕಿರೊ ಎರಡೂ ಸಂದರ್ಭಗಳಲ್ಲಿ ರಾಷ್ಟ್ರಪತಿಯವರೊಂದಿಗೆ ಇದ್ದರು.

ವೆಲ್ಲಿಂಗ್ಟನ್ ನಲ್ಲಿ ನಡೆದ ಕೊನೆಯ ಅಧಿಕೃತ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಗೌರವಾರ್ಥ ಗವರ್ನರ್ ಜನರಲ್ ಕಿರೋ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು.

ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತ ಮತ್ತು ನ್ಯೂಜಿಲೆಂಡ್ ಹಲವು ವರ್ಷಗಳಿಂದ ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಲ್ಲಿ ಬೇರೂರಿರುವ ಹಂಚಿಕೆಯ ಮೌಲ್ಯಗಳಿಂದ ಕೂಡಿದ ಆತ್ಮೀಯ ಮತ್ತು ಸ್ನೇಹಪರ ಸಂಬಂಧವನ್ನು ಅಭಿವೃದ್ಧಿಪಡಿಸಿವೆ ಎಂದು ಹೇಳಿದರು. ನಾವಿಬ್ಬರೂ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು/ಅಂತರ್ಗತತೆಯನ್ನು ಗೌರವಿಸುತ್ತೇವೆ, ಇದು ನಮ್ಮ ಸಮಾಜಗಳ ಬಹುಸಂಸ್ಕೃತಿಯ ರಚನೆಯಲ್ಲಿ ಸ್ಪಷ್ಟವಾಗಿದೆ ಎಂದವರು ನುಡಿದರು.

ನಾವು ಭವಿಷ್ಯದತ್ತ ನೋಡುತ್ತಿರುವಾಗ, ನಮ್ಮ ಬಾಂಧವ್ಯವನ್ನು ಆಳಗೊಳಿಸಲು ಮತ್ತು ನ್ಯೂಜಿಲೆಂಡ್ ನೊಂದಿಗೆ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಅಪಾರ ಅವಕಾಶ ಸಾಮರ್ಥ್ಯವಿದೆ ಎಂದು ರಾಷ್ಟ್ರಪತಿ  ಹೇಳಿದರು. ಕೃತಕ ಬುದ್ಧಿಮತ್ತೆ, ಹಸಿರು ತಂತ್ರಜ್ಞಾನಗಳು, ಕೃಷಿ ತಂತ್ರಜ್ಞಾನ, ವಾಣಿಜ್ಯ ಬಾಹ್ಯಾಕಾಶ ಅನ್ವೇಷಣೆ ಕ್ಷೇತ್ರಗಳು ಸಹಯೋಗಕ್ಕೆ ಅತ್ಯಾಕರ್ಷಕ ಅವಕಾಶಗಳನ್ನು ನೀಡುತ್ತವೆ ಎಂದರು.

ಜಾಗತಿಕ ರಂಗದಲ್ಲಿ, ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಶಾಂತಿ ಹಾಗು ಭದ್ರತೆಯಂತಹ ಒತ್ತಡದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ನ್ಯೂಜಿಲೆಂಡ್ ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು.

ಅಧಿಕೃತ ಭೇಟಿಯ ಸಂದರ್ಭದಲ್ಲಿ ಇಬ್ಬರೂ ನಾಯಕರ ನಡುವಿನ ಅಸಾಧಾರಣ ಆತ್ಮೀಯ ಮತ್ತು ಸೌಹಾರ್ದಯುತ ಸಂವಾದಗಳು ಅವರ ನಡುವೆ ವಿಶೇಷ ಸಂಪರ್ಕ ಮತ್ತು ಬಾಂಧವ್ಯವನ್ನು ರೂಪಿಸಿದವು. ಗವರ್ನರ್ ಜನರಲ್ ಡೇಮ್ ಸಿಂಡಿ ಕಿರೊ ಹುದ್ದೆಯನ್ನು ಅಲಂಕರಿಸಿದ ಮಾವೊರಿ ಮೂಲದ ಮೊದಲ ಮಹಿಳೆಯಾಗಿದ್ದು, ರಾಷ್ಟ್ರಪತಿ ಮುರ್ಮು ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. ಇಬ್ಬರೂ ನಾಯಕರು ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಆಸಕ್ತಿ ಮತ್ತು ಅನುಭವವನ್ನು ಹಂಚಿಕೊಂಡಿದ್ದಾರೆ.

ವಿಲ್ಲಿಂಗ್ಟನ್ ನಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ರಾಷ್ಟ್ರಪತಿ ಅವರು  ಆಕ್ಲೆಂಡ್ ಗೆ ತೆರಳಿದರು, ಅಲ್ಲಿ ಅವರು ನಾಳೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣ ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ:

https://static.pib.gov.in/WriteReadData/specificdocs/documents/2024/aug/doc202488370001.pdf

https://static.pib.gov.in/WriteReadData/specificdocs/documents/2024/aug/doc202488370101.pdf

 

*****


(Release ID: 2043460) Visitor Counter : 37