ಜವಳಿ ಸಚಿವಾಲಯ
10ನೇ ರಾಷ್ಟ್ರೀಯ ಕೈಮಗ್ಗ ದಿನ ಆಚರಣೆಯನ್ನು ಉದ್ಘಾಟಿಸಿದ ಉಪರಾಷ್ಟ್ರಪತಿ
ಕೈಮಗ್ಗ ಉದ್ಯಮವು ಸುಸ್ಥಿರತೆ ಮತ್ತು ಇಂಧನ ದಕ್ಷತೆಯ ಮೇಲೆ ಗಮನ ಕೇಂದ್ರೀಕರಿಸಿದೆ: ಶ್ರೀ ಗಿರಿರಾಜ್ ಸಿಂಗ್
ಭಾರತದ ಕೈಮಗ್ಗ ಉದ್ಯಮವು ಮಹಿಳಾ ನೇತೃತ್ವದಲ್ಲಿದೆ: ಶ್ರೀ ಸಿಂಗ್
Posted On:
07 AUG 2024 6:09PM by PIB Bengaluru
10 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಇಂದು ಇಲ್ಲಿ ಆಚರಿಸಲಾಯಿತು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಮತ್ತು ಸಹಾಯಕ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಧನಕರ್ ಅವರು ತಮ್ಮ ಭಾಷಣದಲ್ಲಿ ಕೈಮಗ್ಗ ಉತ್ಪನ್ನಗಳು ಪ್ರಧಾನಮಂತ್ರಿಯವರ "ಸ್ಥಳೀಯರಿಗೆ ಧ್ವನಿಯಾಗಿರಿ" (ಬೀ ವೋಕಲ್ ಫಾರ್ ಲೋಕಲ್) ಅಭಿಯಾನದ ಪ್ರಮುಖ ತಿರುಳಿನ ಅಂಶವಾಗಿವೆ ಎಂದು ಒತ್ತಿ ಹೇಳಿದರು. ಕೈಮಗ್ಗವನ್ನು ಉತ್ತೇಜಿಸುವುದು ಈ ಕ್ಷಣದ ಅಗತ್ಯವಾಗಿದೆ, ದೇಶದ ಅಗತ್ಯವೂ ಆಗಿದೆ ಮತ್ತು ಹವಾಮಾನ ಬದಲಾವಣೆಯ ಬೆದರಿಕೆಯಿಂದಾಗಿ ಈ ಭೂಗ್ರಹದ ಅಗತ್ಯವಾಗಿದೆ ಎಂದು ಅವರು ಹೇಳಿದರು. ನಮ್ಮ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಆರ್ಥಿಕ ರಾಷ್ಟ್ರೀಯತೆಯು ಮೂಲ ಅಡಿಪಾಯವಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.
ಶ್ರೀ ಸಿಂಗ್ ಅವರು ತಮ್ಮ ಭಾಷಣದಲ್ಲಿ ಸುಸ್ಥಿರತೆ ಮತ್ತು ಇಂಧನ ದಕ್ಷತೆಯ ಮೇಲೆ ಕೇಂದ್ರೀಕರಿಸಿದ ವಿಶ್ವದ ಅತಿದೊಡ್ಡ ಕೈಮಗ್ಗ ಸಮುದಾಯವನ್ನು ಭಾರತವು ಹೊಂದಿದೆ ಎಂದು ಹೇಳಿದರು. ಜಗತ್ತು ಸುಸ್ಥಿರ ಉತ್ಪನ್ನಗಳ ಬಳಕೆಯತ್ತ ಸಾಗುತ್ತಿದೆ ಮತ್ತು ಕೈಮಗ್ಗ ಉದ್ಯಮವು ಶೂನ್ಯ ಇಂಗಾಲದ ಹೆಜ್ಜೆಗುರುತಿನ ಉತ್ಪನ್ನಗಳನ್ನು ತಯಾರಿಸುತ್ತಿದೆ ಮತ್ತು ಇದರಲ್ಲಿ ಯಾವುದೇ ಇಂಧನ ಶಕ್ತಿಯ ಬಳಕೆಯಾಗುವುದಿಲ್ಲ ಎಂದು ಹೇಳಿದ ಅವರು ಕೈಮಗ್ಗ ಉದ್ಯಮವು ಶೂನ್ಯ ನೀರಿನ ಹೆಜ್ಜೆಗುರುತು (ಬಳಕೆ) ವಲಯವಾಗಿದೆ ಎಂದೂ ನುಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸರ್ಕಾರವು 2015ರ ಆಗಸ್ಟ್ 7 ರಿಂದ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಪ್ರಾರಂಭಿಸಿತು ಎಂಬುದರತ್ತ ಕೇಂದ್ರ ಸಚಿವರು ಬೆಟ್ಟು ಮಾಡಿದರು. ನೇಕಾರರು ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು 1905 ರಲ್ಲಿ ಇದೇ ದಿನ ಪ್ರಾರಂಭಿಸಲಾದ ಸ್ವದೇಶಿ ಚಳವಳಿಯ ನೆನಪಿಗಾಗಿ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಎಂದೂ ಅವರು ಉಲ್ಲೇಖಿಸಿದರು. ತಂತ್ರಜ್ಞಾನ, ಮಾರುಕಟ್ಟೆ, ವಿನ್ಯಾಸ ಮತ್ತು ಫ್ಯಾಷನ್ ಅನ್ನು ಗುಚ್ಛ (ಕ್ಲಸ್ಟರ್) ಅಭಿವೃದ್ಧಿ ಕಾರ್ಯಕ್ರಮದ (ಸಿಡಿಪಿ) ಅಡಿಯಲ್ಲಿ ತರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳನ್ನು ಶ್ರೀ ಸಿಂಗ್ ಪ್ರಮುಖವಾಗಿ ಎತ್ತಿ ತೋರಿಸಿದರು ಮತ್ತು ನೇಕಾರರಿಗೆ ನ್ಯಾಯಯುತ ಸಂಭಾವನೆ ನೀಡುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದೂ ಹೇಳಿದರು. ನೇಕಾರರಿಗೆ ಮತ್ತು ಅವರ ಕುಟುಂಬಕ್ಕೆ ಉತ್ತಮ ಆದಾಯದ ಅವಕಾಶಗಳಿಗಾಗಿ ಜವಳಿ ಮೌಲ್ಯ ಸರಪಳಿಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದವರು ವಿವರಿಸಿದರು.
ಕೈಮಗ್ಗ ಕ್ಷೇತ್ರವು ಮಹಿಳಾ ನಾಯಕತ್ವದಲ್ಲಿರುವುದರಿಂದ ದೇಶದಲ್ಲಿ 70% ಕೈಮಗ್ಗ ನೇಕಾರರು ಮಹಿಳೆಯರಾಗಿದ್ದಾರೆ ಎಂದು ಸಚಿವರು ಹೇಳಿದರು. ಕೇಂದ್ರ ಸಚಿವರು ಸಾಂಪ್ರದಾಯಿಕ ನೇಯ್ಗೆಯ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಿದರಲ್ಲದೆ ನೇಕಾರರು ತಮ್ಮ ಮಕ್ಕಳಿಗೆ ಅದೇ ಸಂಪ್ರದಾಯವನ್ನು ಕಲಿಸಬೇಕೆಂದು ಒತ್ತಾಯಿಸಿದರು. ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯನ್ನು (ಐ ಐ ಎಚ್ ಟಿ) ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಆಗ್ರಹಿಸಿದರು.
ಕೈಮಗ್ಗ ಉತ್ಪನ್ನಗಳನ್ನು ತ್ವರಿತವಾಗಿ ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, ಕೈಮಗ್ಗ ಉತ್ಪನ್ನಗಳನ್ನು ಶೀಘ್ರದಲ್ಲೇ ನಾಗರಿಕರು ವ್ಯಾಪಕವಾಗಿ ಬಳಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ವಿಶ್ವಾದ್ಯಂತ ಕೈಮಗ್ಗ ಮಾರುಕಟ್ಟೆಯನ್ನು ವಿಸ್ತರಿಸಲು ಮತ್ತು ನೇಕಾರರು ಹಾಗು ಅವರ ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಭಾರತಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಶ್ರಮಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
*****
(Release ID: 2043038)
Visitor Counter : 52