ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳು ಇಂದು ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಮ್ಮೇಳನವನ್ನು ಉದ್ಘಾಟಿಸಿದರು

Posted On: 02 AUG 2024 2:00PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 2, 2024) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರ ಸಮ್ಮೇಳನವನ್ನು ಉದ್ಘಾಟಿಸಿದರು. ಕೇಂದ್ರ ಮತ್ತು ರಾಜ್ಯ ಸಂಬಂಧಗಳನ್ನು ರೂಪಿಸುವುದರ ಜೊತೆಗೆ ಸಾಮಾನ್ಯ ಜನರಿಗೆ ಉಪಯುಕ್ತ ಯೋಜನೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿವಿಧ ವಿಷಯಗಳನ್ನು ಸಮ್ಮೇಳನವು ಒಳಗೊಂಡಿದೆ.

ರಾಷ್ಟ್ರಪತಿಯವರು ತಮ್ಮ ಆರಂಭಿಕ ಭಾಷಣದಲ್ಲಿ, ಈ ಸಮ್ಮೇಳನದಲ್ಲಿ ಚರ್ಚಿಸಲಾಗುವ ವಿಷಯಗಳು ರಾಷ್ಟ್ರದ ಗುರಿಗಳನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಹ ಆಯ್ದ ವಿಷಯಗಳಾಗಿವೆ ಎಂದು ಹೇಳಿದರು. ಈ ಸಮ್ಮೇಳನದ ಚರ್ಚೆಗಳು ಭಾಗವಹಿಸುವವ ಎಲ್ಲರಿಗೂ ಒಂದು ಸಮೃದ್ಧ ಅನುಭವವಾಗಲಿದ್ದು, ಅವರ ಕಾರ್ಯನಿರ್ವಹಣೆಗೆ ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಗೃಹ ಸಚಿವರು ಸಹ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ರಾಜ್ಯಪಾಲರ ಪ್ರಮಾಣವಚನವನ್ನು ಉಲ್ಲೇಖಿಸಿ, ಕಳೆದ ದಶಕದಲ್ಲಿ ನಡೆದಿರುವ ಸಾಮಾಜಿಕ ಕಲ್ಯಾಣ ಯೋಜನೆಗಳು ಮತ್ತು ಅದ್ಭುತ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸುವ ತಮ್ಮ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿರ್ವಹಿಸುವಂತೆ ಅವರನ್ನು ಒತ್ತಾಯಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಪರಿಣಾಮಕಾರಿ ಸೇತುವೆಯ ಪಾತ್ರವನ್ನು ವಹಿಸಲು ಮತ್ತು ಹಿಂದುಳಿದವರು ಸಹಕಾರ ಪಡೆಯುವ ರೀತಿಯಲ್ಲಿ ಜನರು ಮತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಸಂವಹನ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು. ರಾಜ್ಯಪಾಲರ ಹುದ್ದೆಯು ಒಂದು ಮಹತ್ವದ ಸಂಸ್ಥೆಯಾಗಿದ್ದು, ಸಂವಿಧಾನದ ಚೌಕಟ್ಟಿನಲ್ಲಿ, ವಿಶೇಷವಾಗಿ ಬುಡಕಟ್ಟು ಪ್ರದೇಶಗಳಿಗೆ ಸಂಬಂಧಿಸಿದಂತೆ, ರಾಜ್ಯದ ಜನರ ಕಲ್ಯಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಅವರು ಹೇಳಿದರು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, ಎರಡು ದಿನಗಳ ಸಮ್ಮೇಳನವು ತೆಗೆದುಕೊಳ್ಳಲಿರುವ ಚರ್ಚೆಗಳ ದಿಕ್ಕನ್ನು ವಿವರಿಸಿ, ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡಲು ರಾಜ್ಯಪಾಲರು ಚೈತನ್ಯಶೀಲ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು.

ರಾಷ್ಟ್ರಪತಿಯವರು ಸಮ್ಮೇಳನವನ್ನು ಉದ್ಘಾಟಿಸುತ್ತಾ, ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳ ಜಾರಿಯೊಂದಿಗೆ ದೇಶದಲ್ಲಿ ನ್ಯಾಯ ವ್ಯವಸ್ಥೆಯ ಹೊಸ ಯುಗ ಆರಂಭವಾಗಿದೆ ಎಂದು ಹೇಳಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯಾಧಿನಿಯಮ ಎಂಬ ಕಾನೂನುಗಳ ಹೆಸರುಗಳಿಂದಲೇ ನಮ್ಮ ಚಿಂತನೆಯಲ್ಲಿನ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿಗಳು, ಪ್ರಜಾಪ್ರಭುತ್ವದ ಸುಗಮ ಕಾರ್ಯನಿರ್ವಹಣೆಗಾಗಿ, ವಿವಿಧ ಕೇಂದ್ರ ಸಂಸ್ಥೆಗಳು ಎಲ್ಲಾ ರಾಜ್ಯಗಳಲ್ಲಿ ಉತ್ತಮ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದು ಅತ್ಯಂತ ಮಹತ್ವದ್ದು ಎಂದು ಹೇಳಿದರು. ಆಯಾ ರಾಜ್ಯಗಳ ಸಂವಿಧಾನಾತ್ಮಕ  ಮುಖ್ಯಸ್ಥರಾಗಿ, ರಾಜ್ಯಪಾಲರು ಈ ಸಮನ್ವಯವನ್ನು ಹೇಗೆ ಉತ್ತೇಜಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕೆಂದು ಅವರು ಸಲಹೆ ನೀಡಿದರು.

ರಾಷ್ಟ್ರಪತಿಗಳು, ಗುಣಮಟ್ಟದ ಉನ್ನತ ಶಿಕ್ಷಣವು ಒಂದು ಅಮೂರ್ತ ಆಸ್ತಿಯಾಗಿದ್ದು, ಅದು ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ಬದಲಾವಣೆಯನ್ನು ಹಾಗೂ ಹೊಸತನ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯು, ಶೈಕ್ಷಣಿಕ ಸಂಸ್ಥೆಗಳ ಮಾನ್ಯತೆ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸುಧಾರಿಸುವುದರ ಮೇಲೆ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿ ತಮ್ಮ ಸಾಮರ್ಥ್ಯದಲ್ಲಿ ಈ ಸುಧಾರಣಾ ಪ್ರಕ್ರಿಯೆಗೆ ಕೊಡುಗೆ ನೀಡುವಂತೆ ಅವರು ರಾಜ್ಯಪಾಲರನ್ನು ಒತ್ತಾಯಿಸಿದರು.

ಭಾರತ ಸರ್ಕಾರವು ಬಡವರು, ಗಡಿ ಪ್ರದೇಶಗಳು, ವಂಚಿತ ವರ್ಗಗಳು ಮತ್ತು ಪ್ರದೇಶಗಳು ಮತ್ತು ಅಭಿವೃದ್ಧಿ ಪ್ರಯಾಣದಲ್ಲಿ ಹಿಂದುಳಿದ ಜನರ ಅಭಿವೃದ್ಧಿಗೆ ಅಗ್ರ ಆದ್ಯತೆ ನೀಡುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ ಬುಡಕಟ್ಟು ಜನಸಂಖ್ಯೆಯ ಒಂದು ದೊಡ್ಡ ಭಾಗವು ಪರಿಶಿಷ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು  ಹೇಳಿದ ಅವರು,  ಈ ಪ್ರದೇಶಗಳ ಜನರ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಮಾರ್ಗಗಳನ್ನು ಸೂಚಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದರು.

ಯುವಕರ ಶಕ್ತಿಯನ್ನು ಸಕಾರಾತ್ಮಕ ಮತ್ತು ರಚನಾತ್ಮಕ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾದಲ್ಲಿ 'ಯುವ ಅಭಿವೃದ್ಧಿ' ಮತ್ತು 'ಯುವ ನೇತೃತ್ವದ ಅಭಿವೃದ್ಧಿ' ಹೆಚ್ಚು ವೇಗವನ್ನು ಪಡೆಯುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. 'ಮೈ ಇಂಡಿಯಾ' ಅಭಿಯಾನವು ಈ ಉದ್ದೇಶಕ್ಕಾಗಿ ಉತ್ತಮ ಚಿಂತನೆಯ ಕಾರ್ಯವಿಧಾನವನ್ನು ಒದಗಿಸುತ್ತದೆ. ಈ ಅಭಿಯಾನದಲ್ಲಿ ತೊಡಗಿರುವ ಜನರನ್ನು ರಾಜ್ಯಪಾಲರು ಪ್ರೋತ್ಸಾಹಿಸಬೇಕು, ಇದರಿಂದ ಹೆಚ್ಚು ಹೆಚ್ಚು ಯುವಕರು ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು .

'ಏಕ್ ಭಾರತ್ ಶ್ರೇಷ್ಠ ಭಾರತ್' ಅಭಿಯಾನವನ್ನು ಉಲ್ಲೇಖಿಸಿ, ಅದು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಪರಸ್ಪರ ಸಂಪರ್ಕ ಹೊಂದಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.  ಏಕತೆಯ ಭಾವನೆಯನ್ನು ಇನ್ನಷ್ಟು ಬಲಪಡಿಸಲು ಕೊಡುಗೆ ನೀಡುವಂತೆ ಅವರು ರಾಜ್ಯಪಾಲರನ್ನು ಒತ್ತಾಯಿಸಿದರು

ರಾಷ್ಟ್ರಪತಿಗಳು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಮುಂತಾದ ಸವಾಲುಗಳನ್ನು ನಿಭಾಯಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ರಾಜ್ಯಪಾಲರುಗಳು 'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಲ್ಲಿ ಒಂದು ವೃಕ್ಷ) ಅಭಿಯಾನವನ್ನು ದೊಡ್ಡ ಚಳವಳಿಯಾಗಿ ಮಾಡುವ ಮೂಲಕ ಇದಕ್ಕೆ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.

ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ರೈತರ ಆದಾಯವನ್ನು ಹೆಚ್ಚಿಸಬಹುದು  ಎಂದು ರಾಷ್ಟ್ರಪತಿಗಳು ಹೇಳಿದರು.  ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸಲು ರಾಜಭವನಗಳು ಮಾದರಿಯಾಗಬಹುದು ಎಂದು ಅವರು ಹೇಳಿದರು.

ಎಲ್ಲಾ ರಾಜ್ಯಪಾಲರು ಜನರ ಸೇವೆ ಮತ್ತು ಕಲ್ಯಾಣಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಾರೆ ಮತ್ತು ಅವರು ಮಾಡಿದ ಪ್ರಮಾಣ ವಚನಕ್ಕೆ ನ್ಯಾಯ ಸಲ್ಲಿಸುತ್ತಾರೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು .

ಸಮ್ಮೇಳನದಲ್ಲಿ ಚೌಕಟ್ಟಿನಲ್ಲಿ ರಾಜ್ಯಪಾಲರ ನೇತೃತ್ವದಲ್ಲಿ ವಿವಿಧ ಅಜೆಂಡಾಗಳ ಕುರಿತು ವಿಸ್ತೃತ ಚರ್ಚೆಗಾಗಿ ಉಪ ಗುಂಪುಗಳನ್ನು ರಚಿಸಲಾಗಿದೆ. ಈ ಉಪ ಗುಂಪುಗಳಲ್ಲಿ ಕೇಂದ್ರ ಸಚಿವರು ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳು  ಪಾಲ್ಗೊಳ್ಳಲಿದ್ದಾರೆ. ಈ ಉಪ ಗುಂಪುಗಳಿಂದ ಸಂಗ್ರಹಿಸಲಾದ ಅಮೂಲ್ಯವಾದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನಾಳೆ ಅಂದರೆ ಆಗಸ್ಟ್ 3, 2024 ರಂದು ನಡೆಯುವ ಸಮಾರೋಪ ಸಭೆಯಲ್ಲಿ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಮತ್ತು ಇತರ ಗಣ್ಯ ಅತಿಥಿಗಳ ಮುಂದೆ ಮಂಡಿಸಲಾಗುವುದು.

 

*****



(Release ID: 2041055) Visitor Counter : 55