ಹಣಕಾಸು ಸಚಿವಾಲಯ
azadi ka amrit mahotsav

ಕೃಷಿ ಕ್ಷೇತ್ರದ ಒಟ್ಟು ಬಂಡವಾಳ ರಚನೆಯು 2022-23ರಲ್ಲಿ ಶೇಕಡಾ 19.04ರ ದರದಲ್ಲಿ ಬೆಳೆದಿದೆ: ಆರ್ಥಿಕ ಸಮೀಕ್ಷೆ


ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ, ವಿಶೇಷವಾಗಿ, ಕೃಷಿ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಅವಶ್ಯಕತೆಯಿದೆ

ಸರ್ಕಾರವು ಕೃಷಿಗೆ ಆದ್ಯತೆ ನೀಡಿದ ಸಲುವಾಗಿ 1950ರಲ್ಲಿ ಶೇಕಡಾ 90ರಷ್ಟಿದ್ದ ಸಾಂಸ್ಥಿಕೇತರ ಸಾಲದ ಪಾಲನ್ನು 2021-22ರಲ್ಲಿ ಶೇಕಡಾ 23.40ಕ್ಕೆ ಇಳಿಸಲು ಸಹಾಯವಾಗಿದೆ

ಜಂಟಿ ಹೊಣೆಗಾರಿಕೆ ಗುಂಪುಗಳು ಗೇಣಿದಾರರಿಗೆ ಸಾಲದ ಅಗತ್ಯ ಮೂಲವಾಗಿ ಹೊರಹೊಮ್ಮಿವೆ

Posted On: 22 JUL 2024 3:01PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-24ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಕೃಷಿ ಕ್ಷೇತ್ರದ ಒಟ್ಟು ಬಂಡವಾಳ ರಚನೆ (ಜಿಸಿಎಫ್) ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಒಟ್ಟು ಬಂಡವಾಳ ರಚನೆಯ ಪಾಲು ಒಟ್ಟು ಮೌಲ್ಯವರ್ಧಿತ (ಜಿವಿಎ) ಶೇಕಡಾವಾರು, ಮುಖ್ಯವಾಗಿ ಸಾರ್ವಜನಿಕ ಹೂಡಿಕೆಯ ಹೆಚ್ಚಳದಿಂದಾಗಿ ಸ್ಥಿರವಾಗಿ ಬೆಳೆಯುತ್ತಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಕೃಷಿ ಕ್ಷೇತ್ರದ ಜಿಸಿಎಫ್ 2022-23ರಲ್ಲಿ ಶೇಕಡಾ 19.04ರ ದರದಲ್ಲಿ ಬೆಳೆದಿದ್ದು ಜಿವಿಎ ಶೇಕಡಾವಾರು ಜಿಸಿಎಫ್ 2021-22ರಲ್ಲಿ ಶೇಕಡಾ 17.7ರಿಂದ 2022-23ರಲ್ಲಿ ಶೇಕಡಾ 19.9ಕ್ಕೆ ಏರಿದೆ, ಇದು ಕೃಷಿಯಲ್ಲಿ ಬಂಡವಾಳ ಹೂಡಿಕೆಯ ಹೆಚ್ಚಳವನ್ನು ಸೂಚಿಸುತ್ತದೆ. 2016-17ರಿಂದ 2022-23ರವರೆಗೆ ಜಿಸಿಎಫ್ ನಲ್ಲಿ ಸರಾಸರಿ ವಾರ್ಷಿಕ ಬೆಳವಣಿಗೆಯು ಶೇಕಡಾ 9.70 ರಷ್ಟಿತ್ತು. ಜಿಸಿಎಫ್ ನಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯ ಹೊರತಾಗಿಯೂ, ಕೃಷಿ ಹೂಡಿಕೆಯನ್ನು, ವಿಶೇಷವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಸಮೀಕ್ಷೆಯು ಹೇಳುತ್ತದೆ. 2016-17 ಹಾಗೂ 2022-23ರ ಮಧ್ಯದ ಅವಧಿಯಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಶೇಕಡಾ 10.4ರಷ್ಟು ಆದಾಯವು ಬೆಳೆಯಬೇಕಾಗಿದೆ ಎಂದು ಡಿಎಫ್ಐ 2016ರ ವರದಿಯು ಸೂಚಿಸಿದೆ.

ಸಾಂಸ್ಥಿಕೇತರ ಸಾಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಸಮಯೋಚಿತ, ವೆಚ್ಚ-ಪರಿಣಾಮಕಾರಿ ಮತ್ತು ಸಾಕಷ್ಟು ಸಾಲವನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಕ್ರಮಗಳು ಸಾಂಸ್ಥಿಕೇತರ ಸಾಲದ ಪಾಲನ್ನು 1950ರಲ್ಲಿ ಶೇಕಡಾ 90 ರಿಂದ 2021-22 ರಲ್ಲಿ ಶೇಕಡಾ 23.40 ಕ್ಕೆ ಇಳಿಸಿವೆ. ಜನವರಿ 31, 2024ರ ವೇಳೆಗೆ, ಕೃಷಿಗೆ ವಿತರಿಸಲಾದ ಒಟ್ಟು ಸಾಲವು 22.84 ಲಕ್ಷ ಕೋಟಿ ರೂ.ಗಳಾಗಿದ್ದು, ಬೆಳೆ ಸಾಲ ಅಥವಾ ಅಲ್ಪಾವಧಿ ಸಾಲವು 13.67 ಲಕ್ಷ ಕೋಟಿ ರೂ.ಗಳಾಗಿದ್ದರೆ, 9.17 ಲಕ್ಷ ಕೋಟಿ ರೂ. ದೀರ್ಘಾವಧಿ ಸಾಲಗಳಾಗಿವೆ.

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ):

ಕಿಸಾನ್ ಕ್ರೆಡಿಟ್ ಕಾರ್ಡ್ ಕೃಷಿ ಸಾಲವನ್ನು ಪಡೆಯಲು ಸುವ್ಯವಸ್ಥಿತಗೊಳಿಸಲಾಗಿದೆ. ಜನವರಿ 31, 2024ರ ವೇಳೆಗೆ, ಬ್ಯಾಂಕುಗಳು 9.4 ಲಕ್ಷ ಕೋಟಿ ರೂ.ಗಳ ಮಿತಿಯೊಂದಿಗೆ 7.5 ಕೋಟಿ ಕೆಸಿಸಿಯನ್ನು ನೀಡಿವೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಮತ್ತೊಂದು ಕ್ರಮವಾಗಿ, 2018-19ರಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನಾ ಚಟುವಟಿಕೆಗಳ ಬಂಡವಾಳದ ಅಗತ್ಯವನ್ನು ಪೂರೈಸಲು ಕೆಸಿಸಿಯನ್ನು ವಿಸ್ತರಿಸಿ, ಮೇಲಾಧಾರ ರಹಿತ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಸಾಲಗಾರರು, ಹಾಲು ಒಕ್ಕೂಟಗಳು ಮತ್ತು ಬ್ಯಾಂಕುಗಳ ನಡುವೆ ತ್ರಿಪಕ್ಷೀಯ ಒಪ್ಪಂದದ ಸಂದರ್ಭದಲ್ಲಿ, ಮೇಲಾಧಾರ ರಹಿತ ಸಾಲವು 3 ಲಕ್ಷ ರೂ.ವರೆಗೂ ಮುಟ್ಟಬಹುದಾಗಿದೆ. ಮಾರ್ಚ್ 31, 2024ರ ಹೊತ್ತಿಗೆ, ಮೀನುಗಾರಿಕೆಗೆ 3.49 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಪಶುಸಂಗೋಪನಾ ಚಟುವಟಿಕೆಗಳಿಗೆ 34.5 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ. ಜಂಟಿ ಹೊಣೆಗಾರಿಕೆ ಗುಂಪುಗಳು ಗೇಣಿದಾರರಿಗೆ ಸಾಲದ ಅತ್ಯಗತ್ಯ ಮೂಲವಾಗಿ ಹೊರಹೊಮ್ಮಿವೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಜಂಟಿ ಹೊಣೆಗಾರಿಕೆ ಗುಂಪುಗಳ ಖಾತೆಗಳು ಕಳೆದ ಐದು ವರ್ಷಗಳಲ್ಲಿ ಶೇಕಡಾ 43.76 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆದಿವೆ. ಇದು ಗೇಣಿದಾರ ರೈತರು ಮತ್ತು ಅಂಚಿನಲ್ಲಿರುವ ವಿಭಾಗಗಳ ಸಾಲದ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಮೂಲವಾಗಿ ಹೊರಹೊಮ್ಮಿದೆ.

ಕೃಷಿ ಮೂಲಸೌಕರ್ಯ:

ಏಪ್ರಿಲ್ 30, 2024ರ ವೇಳೆಗೆ, ಶೇಖರಣಾ ಮೂಲಸೌಕರ್ಯಕ್ಕಾಗಿ 48,357 ಯೋಜನೆಗಳನ್ನು ಮಂಜೂರು ಮಾಡಲಾಗಿ, 4570 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಬಿಡುಗಡೆ ಮಾಡಲಾಗಿದ್ದು, ಇನ್ನೂ 20,878 ಇತರ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು 2084 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸುತ್ತದೆ. ಫಾರ್ಮ್ ಗೇಟ್ ಮೂಲಸೌಕರ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಮತ್ತು ಖಾಸಗಿ ವಲಯವನ್ನು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು, ಕೃಷಿ ಮೂಲಸೌಕರ್ಯ ನಿಧಿಯನ್ನು 2020-21ರ ಹಣಕಾಸು ವರ್ಷದಿಂದ 2025-26ರ ಹಣಕಾಸು ವರ್ಷದ ನಡುವೆ ವಿತರಿಸಲು 1 ಲಕ್ಷ ಕೋಟಿ ರೂ.ಗಳ ಹಣಕಾಸು ಸೌಲಭ್ಯದೊಂದಿಗೆ ಪ್ರಾರಂಭಿಸಲಾಯಿತು.

ಕೃಷಿ ಮೂಲಸೌಕರ್ಯ ನಿಧಿಯು ಸುಗ್ಗಿಯ ನಂತರದ ನಿರ್ವಹಣೆ ಮತ್ತು ಸಮುದಾಯ ಕೃಷಿ ಯೋಜನೆಗಳಿಗೆ ಮಧ್ಯಮಾವಧಿಯ ಸಾಲ ಹಣಕಾಸು ಒದಗಿಸುವುದಲ್ಲದೆ, ಬಡ್ಡಿ ಸಹಾಯಧನ ಮತ್ತು ಸಾಲ ಖಾತರಿ ಬೆಂಬಲವನ್ನು ನೀಡುತ್ತದೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ. ಜುಲೈ 5, 2024ರ ವೇಳೆಗೆ, ಕೃಷಿ ಮೂಲಸೌಕರ್ಯ ನಿಧಿಯು 73194 ಕೋಟಿ ರೂ.ಗಳ ಹೂಡಿಕೆಯನ್ನು ಸಂಗ್ರಹಿಸಿ, 17196 ಗ್ರಾಹಕೀಯಗೊಳಿಸಲಾದ ಬಾಡಿಗೆ ಕೇಂದ್ರಗಳು, 14868 ಪ್ರಾಥಮಿಕ ಸಂಸ್ಕರಣಾ ಘಟಕಗಳು, 13165 ಗೋದಾಮುಗಳು, 2942 ವಿಂಗಡಣೆ ಮತ್ತು ಗ್ರೇಡಿಂಗ್ ಘಟಕಗಳು, 1792 ಕೋಲ್ಡ್ ಸ್ಟೋರೇಜ್ ಯೋಜನೆಗಳು ಮತ್ತು 18981 ಇತರ ಯೋಜನೆಗಳನ್ನು ಬೆಂಬಲಿಸಿದೆ. ಇದಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯು ಬೇಗನೆ ಹಾಳಾಗುವ ಉತ್ಪನ್ನಗಳ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಆಹಾರ ಶೇಖರಣಾ ಅವಧಿಯನ್ನು ವಿಸ್ತರಿಸಲು ಕೃಷಿಯಿಂದ ಚಿಲ್ಲರೆ ವ್ಯಾಪಾರಕ್ಕೆ ಪರಿಣಾಮಕಾರಿ ಪೂರೈಕೆ ಸರಪಳಿ ನಿರ್ವಹಣೆಯನ್ನು ನಿರ್ಮಿಸಲು ಅನುದಾನದ ಮೂಲಕ ಸಾಲ-ಸಂಬಂಧಿತ ಹಣಕಾಸು ಸಹಾಯವನ್ನು ಪರಿಚಯಿಸಿತು. ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಡಿ, ಮಾರ್ಚ್ 2024ರ ಅಂತ್ಯದವರೆಗೆ 1044 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮಾರ್ಚ್ 2024ರ ಅಂತ್ಯದವರೆಗೆ 32.78 ಸಾವಿರ ಕೋಟಿ ರೂ.ಗಳ ಯೋಜನಾ ವೆಚ್ಚ ಮತ್ತು 9.3 ಸಾವಿರ ಕೋಟಿ ರೂ.ಗಳ ಅನುಮೋದಿತ ಸಬ್ಸಿಡಿ ಹೊಂದಿರುವ ಒಟ್ಟು 1685 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

 

*****
 


(Release ID: 2036740) Visitor Counter : 57