ಹಣಕಾಸು ಸಚಿವಾಲಯ

ಮುಂದಿನ 10 ವರ್ಷಗಳಲ್ಲಿ ದೇಶದ ಬಾಹ್ಯಾಕಾಶ ಅರ್ಥ ವ್ಯವಸ್ಥೆಯನ್ನು ಐದು ಪಟ್ಟು ವಿಸ್ತರಿಸುವ ಗುರಿಯೊಂದಿಗೆ 1,000 ಕೋಟಿ ರೂಪಾಯಿ ವೆಂಚರ್ ಕ್ಯಾಪಿಟಲ್ ನಿಧಿ ಸ್ಥಾಪಿಸುವುದಾಗಿ ಕೇಂದ್ರ ಬಜೆಟ್ ನಲ್ಲಿ ಘೋಷಣೆ


ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ ಗೆ ಅಬಕಾರಿ ಸುಂಕ ಶೇ 15 ರಷ್ಟು ಕಡಿತ 

ರೆಸಿಸ್ಟರ್ ಗಳ ತಯಾರಿಕೆಗಾಗಿ ಆಮ್ಲಜನಕ ಮತ್ತು ತಾಮ್ರದ ಮೇಲೆ ಅಬಕಾರಿ ಸುಂಕವನ್ನು ತೆಗೆದುಹಾಕಲು ಮತ್ತು ಕನೆಕ್ಟರ್ ಗಳ ತಯಾರಿಕೆಗಾಗಿ ಕೆಲವು ಭಾಗಗಳಿಗೆ ವಿನಾಯಿತಿ ನೀಡಲು ನಿರ್ಧಾರ 

ನಿರ್ದಿಷ್ಟ ದೂರಸಂಪರ್ಕ ಪಿಸಿಬಿಎ ಪರಿಕರದ ಮೇಲೆ ಅಬಕಾರಿ ಸುಂಕವನ್ನು ಶೇ 10 ರಿಂದ 15 ಕ್ಕೆ ಏರಿಕೆ ಮಾಡಲು 2023 – 25 ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪ 

Posted On: 23 JUL 2024 12:53PM by PIB Bengaluru

ದೇಶದ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ಜೊತೆಗೆ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡುವ ಹಲವಾರು ಕ್ರಮಗಳನ್ನು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಂಸತ್ತಿನಲ್ಲಿ 2024- 25 ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಉತ್ಪಾದನೆ ಹೆಚ್ಚಿಸುವ ಜೊತೆಗೆ ಅಸಮಾನತೆ ನಿವಾರಣೆಗೆ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್ ಮೂಲ ಸೌಕರ್ಯದಲ್ಲಿ ಸಾರ್ವಜನಿಕ ಹೂಡಿಕೆ ಮತ್ತು ಖಾಸಗಿ ವಲಯದ ನಾವೀನ್ಯತೆಗಳು ಎಲ್ಲಾ ನಾಗರಿಕರಿಗೆ ವಿಶೇಷವಾಗಿ ಜನ ಸಾಮಾನ್ಯರಿಗೆ ದೊರಕಿಸಿಕೊಡುವ, ಮಾರುಕಟ್ಟೆ ಸಂಪನ್ಮೂಲ, ಶಿಕ್ಷಣ, ಆರೋಗ್ಯ ಮತ್ತು ಸೇವೆಗಳಿಗೆ ಪ್ರವೇಶವನ್ನು ಸುಧಾರಿಸಲು ಇದು ಸಹಾಯ ಮಾಡಿದೆ ಎಂದರು. 

ಡಿಜಿಟಲೀಕರಣದ ಪ್ರಯತ್ನಗಳನ್ನು ಸುಧಾರಿಸಲು ಮತ್ತು ತಂತ್ರಜ್ಞಾನವನ್ನು ಅಡಕಗೊಳಿಸಿಕೊಳ್ಳುವ ಭಾಗವಾಗಿ ಈ ಕೆಳಕಂಡ ಕ್ರಮಗಳನ್ನು ಅವರು ಪ್ರಕಟಿಸಿದ್ದಾರೆ

ದತ್ತಾಂಶ ಮತ್ತು ಅಂಕಿಅಂಶಗಳು 

ಸರ್ಕಾರದ ದತ್ತಾಂಶ ಮತ್ತು ಅಂಕಿಅಂಶ ವಲಯದ ಸುಧಾರಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ನಿರ್ವಹಣೆಗಾಗಿ ವಿಭಿನ್ನ ದತ್ತಾಂಶ ವಲಯವಾದ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ತಂತ್ರಜ್ಞಾನ ಸಾಧನಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದರು. 

ಮೊಬೈಲ್ ದೂರವಾಣಿ ಮತ್ತು ಸಂಬಂಧಿತ ಪರಿಕರಗಳು 

ಕಳೆದ ಆರು ವರ್ಷಗಳ ಅವಧಿಯಲ್ಲಿ ಸಂಚಾರಿ ದೂರವಾಣಿಯ ದೇಶೀಯ ಉತ್ಪಾದನೆ ಮೂರುಪಟ್ಟು ಹೆಚ್ಚಾಗಿದೆ ಮತ್ತು ಬಹುತೇಕ 100 ಪಟ್ಟು ರಫ್ತು ವೃದ್ಧಿಸಿದೆ. ಈ ಮೂಲಕ ಭಾರತೀಯ ಮೊಬೈಲ್ ಕೈಗಾರಿಕೆ ಪ್ರಬುದ್ಧವಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ ಗೆ ಅಬಕಾರಿ ಸುಂಕವನ್ನು ಶೇ 15 ರಷ್ಟು ಕಡಿತಗೊಳಿಸಲು ಬಜೆಟ್ ನಲ್ಲಿ ಪ್ರಸ್ತಾವಿಸಲಾಗಿದೆ. 

ವಿದ್ಯುನ್ಮಾನ ವಲಯ 

ದೇಶೀಯ ವಿದ್ಯುನ್ಮಾನ ಕೈಗಾರಿಕಾ ವಲಯದಲ್ಲಿ ಮೌಲ್ಯ ವರ್ಧನೆ ಹೆಚ್ಚಾಗಿದ್ದು, ಸರ್ಕಾರ ಅಬಕಾರಿ ಸುಂಕವನ್ನು ತೆಗೆದುಹಾಕಲು ಪ್ರಸ್ತಾಪಿಸುತ್ತದೆ. ರೆಸಿಸ್ಟರ್ ಗಳ ತಯಾರಿಕೆಗಾಗಿ ಆಮ್ಲಜನಕ ಮತ್ತು ತಾಮ್ರದ ಮೇಲೆ ಅಬಕಾರಿ ಸುಂಕವನ್ನು ತೆಗೆದುಹಾಕಲು ಮತ್ತು ಕನೆಕ್ಟರ್ ಗಳ ತಯಾರಿಕೆಗಾಗಿ ಕೆಲವು ಭಾಗಗಳಿಗೆ ವಿನಾಯಿತಿ ನೀಡಲು ನಿಬಂಧನೆಗಳಿಗೆ ಒಳಪಟ್ಟು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. 

ದೂರ ಸಂಪರ್ಕ ಪರಿಕರಗಳು 

ದೇಶೀಯ ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವ ಉದ್ದೇಶದಿಂದ ಹಣಕಾಸು ಸಚಿವರು ದೂರಸಂಪರ್ಕ ವಲಯದ ನಿರ್ದಿಷ್ಟ ಪಿಸಿಬಿಎ ಪರಿಕರದ ಮೇಲೆ ಅಬಕಾರಿ ಸುಂಕವನ್ನು ಶೇ 10 ರಿಂದ 15 ಕ್ಕೆ ಏರಿಕೆ ಮಾಡಲು 2023 – 25 ನೇ ಸಾಲಿನ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. 

ಸಾರ್ವಜನಿಕ ಡಿಜಿಟಲ್ ಮೂಲ ಸೌಕರ್ಯ [ಡಿಪಿಐ] ಅಪ್ಲಿಕೇಶನ್ಗಳು 

ಸೇವಾ ವಲಯದಲ್ಲಿ ಉತ್ಪಾದಕತೆಯ ಲಾಭ ದೊರಕಿಸಿಕೊಡುವ, ವ್ಯಾಪಾರ ಅವಕಾಶಗಳು ಮತ್ತು ಖಾಸಗಿ ವಲಯದಿಂದ ನಾವೀನ್ಯತೆಗಾಗಿ ಜನಸಂಖ್ಯಾ ಪ್ರಮಾಣದಲ್ಲಿ ಡಿಪಿಐ ಅಪ್ಲಿಕೇಶನ್ ಗಳ ಅಭಿವೃದ್ಧಿಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. 

ಮುಂದಿನ 10 ವರ್ಷಗಳಲ್ಲಿ ದೇಶದ ಬಾಹ್ಯಾಕಾಶ ಅರ್ಥ ವ್ಯವಸ್ಥೆಯನ್ನು ಐದು ಪಟ್ಟು ವಿಸ್ತರಿಸುವ ಗುರಿಯೊಂದಿಗೆ 1,000 ಕೋಟಿ ರೂಪಾಯಿ ವೆಂಚರ್ ಕ್ಯಾಪಿಟಲ್ ನಿಧಿಯನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. 
 

*****



(Release ID: 2035911) Visitor Counter : 5