ಹಣಕಾಸು ಸಚಿವಾಲಯ

ಎಲ್ಲಾ ವರ್ಗದ ಹೂಡಿಕೆದಾರರಿಗೆ ‘ಏಂಜಲ್ ತೆರಿಗೆ’ ರದ್ದು


ವಿದೇಶಿ ಕಂಪನಿಗಳಿಗೆ ಕಾರ್ಪೋರೇಟ್ ತೆರಿಗೆ ದರ ಶೇ.35ಕ್ಕೆ ಇಳಿಕೆ

ಹಣಕಾಸು ವಲಯದ ದೂರದೃಷ್ಟಿ ಮತ್ತು ಕಾರ್ಯತಂತ್ರದ ದಾಖಲೆ ಸದ್ಯದಲ್ಲೇ ಬಿಡುಗಡೆ

ಟೆಕ್ಸಾನಮಿ ಫಾರ್ ಕ್ಲೈಮೇಟ್ ಫೈನಾನ್ಸ್ ಅಭಿವೃದ್ಧಿ

ವಿದೇಶಿ ನೇರ ಹೂಡಿಕೆ ಮತ್ತು ಸಾಗರೋತ್ತರ ಹೂಡಿಕೆಗಳ ನಿಯಮಗಳು ಮತ್ತು ನಿಬಂಧನೆ ಸರಳೀಕರಣ

ದೇಶೀಯ ಕ್ರೂಸ್‌ಗಳನ್ನು ನಿರ್ವಹಿಸುವ ವಿದೇಶಿ ಶಿಪ್ಪಿಂಗ್ ಕಂಪನಿಗಳಿಗೆ ಸರಳ ತೆರಿಗೆ ಪದ್ಧತಿ

Posted On: 23 JUL 2024 1:11PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ 2024-25 ಅನ್ನು ಮಂಡಿಸುವಾಗ ಎಲ್ಲಾ ವರ್ಗದ ಹೂಡಿಕೆದಾರರಿಗೆ 'ಏಂಜಲ್' ತೆರಿಗೆಯನ್ನು ರದ್ದುಗೊಳಿಸಲು ಪ್ರಸ್ತಾಪಿಸಿದ್ದಾರೆ. ಕ್ರಮವು ಭಾರತೀಯ ನವೋದ್ಯಮ (ಸ್ಟಾರ್ಟ್ ಅಪ್) ಪೂರಕ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಉದ್ಯಮಶೀಲತಾ ಮನೋಭಾವ ಹೆಚ್ಚಳ ಮತ್ತು ನಾವೀನ್ಯತೆಯನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.

ಅಲ್ಲದೆ, ಸಚಿವರು ಭಾರತದ ಅಭಿವೃದ್ಧಿ ಅಗತ್ಯಗಳಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡ 40 ರಿಂದ 35 ಕ್ಕೆ ಇಳಿಕೆ ಮಾಡಲು ಪ್ರಸ್ತಾಪಿಸಿದರು.

ಆರ್ಥಿಕತೆಯ ಹಣಕಾಸು ಅಗತ್ಯಗಳನ್ನು ಪೂರೈಸಲು ಮತ್ತು ಗಾತ್ರ, ಸಾಮರ್ಥ್ಯ ಮತ್ತು ಕೌಶಲ್ಯಗಳ ವಿಷಯದಲ್ಲಿ ವಲಯವನ್ನು ಸಿದ್ಧಪಡಿಸಲು ಹಣಕಾಸು ವಲಯದ ದೂರದೃಷ್ಟಿ ಮತ್ತು ಕಾರ್ಯವಿಧಾನದ ದಾಖಲೆಯನ್ನು ಹೊರತರುವುದಾಗಿ ಶ್ರೀಮತಿ ಸೀತಾರಾಮನ್ ಅವರು ಘೋಷಿಸಿದರು. ಇದು ಮುಂಬರುವ ಐದು ವರ್ಷಗಳ ಕಾರ್ಯಸೂಚಿಯನ್ನು ಹೊಂದಿಸುತ್ತದೆ ಮತ್ತು ಸರ್ಕಾರ, ನಿಯಂತ್ರಕರು, ಹಣಕಾಸು ಸಂಸ್ಥೆಗಳು ಮತ್ತು ಮಾರುಕಟ್ಟೆ ಭಾಗವಹಿಸುವವರ ಕೆಲಸಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು.

ಹವಾಮಾನ ಹಣಕಾಸುಗಾಗಿ ಟ್ಯಾಕ್ಸಾನಮಿಯನ್ನು ಅಭಿವೃದ್ಧಿಪಡಿಸಲು ಸಚಿವರು ಪ್ರಸ್ತಾಪಿಸಿದರು. ಇದು ಹವಾಮಾನ ಹೊಂದಾಣಿಕೆ ಮತ್ತು ತಗ್ಗಿಸುವಿಕೆಗೆ ಬಂಡವಾಳದ ಲಭ್ಯತೆ ಹೆಚ್ಚಳವಾಗುತ್ತದೆಂದು ನಿರೀಕ್ಷಿಸಲಾಗಿದೆ, ಇದು ಭಾರತದ ಹವಾಮಾನ ಬದ್ಧತೆಗಳು ಮತ್ತು ಹಸಿರು ಪರಿವರ್ತನೆಯನ್ನು ಸಾಧಿಸಲು ಸಹಾಯಕವಾಗುತ್ತದೆ.

“ನಮ್ಮ ಸರ್ಕಾರವು ವಿಮಾನಗಳು ಮತ್ತು ಹಡಗುಗಳ ಗುತ್ತಿಗೆಗೆ ಹಣಕಾಸು ಒದಗಿಸಲು ಸಮರ್ಥ ಮತ್ತು ಹೊಂದಿಕೊಳ್ಳುವ ಮಾದರಿಯನ್ನು ಒದಗಿಸಲು ಅಗತ್ಯವಾದ ಶಾಸಕಾಂಗ ಅನುಮೋದನೆ ಪಡೆಯುತ್ತದೆ ಮತ್ತು 'ವೇರಿಯಬಲ್ ಕಂಪನಿ ರಚನೆ' ಮೂಲಕ ಖಾಸಗಿ ಈಕ್ವಿಟಿಯ ಹಣವನ್ನು ಸಂಗ್ರಹಿಸುತ್ತದೆ" ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.

ವಿದೇಶಿ ನೇರ ಹೂಡಿಕೆಗಳನ್ನು ಸುಗಮಗೊಳಿಸಲು, ಆದ್ಯತೆ ನೀಡಲು ಮತ್ತು ವಿದೇಶಿ ಹೂಡಿಕೆಗಳಿಗೆ ಭಾರತೀಯ ರೂಪಾಯಿಯನ್ನು ಕರೆನ್ಸಿಯಾಗಿ ಬಳಸುವ ಅವಕಾಶಗಳನ್ನು ಉತ್ತೇಜಿಸಲು, ವಿದೇಶಿ ನೇರ ಹೂಡಿಕೆ ಮತ್ತು ಸಾಗರೋತ್ತರ ಹೂಡಿಕೆಗಳ ನಿಯಮಗಳು ಮತ್ತು ನಿಬಂಧನೆಗಳನ್ನು ಸರಳೀಕರಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು.

ಹೆಚ್ಚಿನ ಸಂಖ್ಯೆಯ ಕೌಶಲ್ಯಹೊಂದಿದ ಕಾರ್ಮಿಕರನ್ನು ನೇಮಿಸಿಕೊಳ್ಳುವ ವಜ್ರ ಕತ್ತರಿಸುವುದು ಮತ್ತು ಪಾಲಿಶ್ ಮಾಡುವ ಉದ್ಯಮದ ಅಭಿವೃದ್ಧಿಯನ್ನು ಉತ್ತೇಜಿಸಲು, ಕಚ್ಚಾ ವಜ್ರಗಳನ್ನು ಮಾರಾಟ ಮಾಡುವ ವಿದೇಶಿ ಗಣಿಗಾರಿಕೆ ಕಂಪನಿಗಳಿಗೆ ಸುರಕ್ಷಿತ ಬಂದರು ದರಗಳನ್ನು ಒದಗಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ಅಲ್ಲದೆ, ದೇಶದಲ್ಲಿ ದೇಶೀಯ ಕ್ರೂಸ್‌ಗಳನ್ನು ನಿರ್ವಹಿಸುವ ವಿದೇಶಿ ಹಡಗು ಕಂಪನಿಗಳಿಗೆ ಸರಳವಾದ ತೆರಿಗೆ ಪದ್ಧತಿಯನ್ನು ಶ್ರೀಮತಿ ಸೀತಾರಾಮನ್ ಅವರು ಪ್ರಸ್ತಾಪಿಸಿದರು. ಇದು ಕ್ರೂಸ್ ಪ್ರವಾಸೋದ್ಯಮದ ಅಗಾಧ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಕ್ಕೆ ಪೂರಕವಾಗಲಿದೆ ಎಂದರು.

 

*****



 

 



(Release ID: 2035859) Visitor Counter : 3