ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ 7 ನೇ ಎನ್‌ ಸಿ ಒ ಆರ್‌ ಡಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ 'ಮಾನಸ್' ಗೆ ಚಾಲನೆ ನೀಡಿದರು


ಮಾನಸ್ ಸಹಾಯವಾಣಿಯು ಟೋಲ್-ಫ್ರೀ ಸಂಖ್ಯೆ 1933, ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್ ಮತ್ತು ಉಮಂಗ್‌ ಅಪ್ಲಿಕೇಶನ್ ಅನ್ನು ಹೊಂದಿರುತ್ತದೆ, ಇದರಿಂದಾಗಿ ದೇಶದ ನಾಗರಿಕರು ವ್ಯಸನದಿಂದ ಮುಕ್ತರಾಗಲು ಮತ್ತು ಪುನರ್ವಸತಿಗೆ ಸಲಹೆ ಪಡೆಯಲು ಮತ್ತು ಮಾದಕವಸ್ತು ಕಳ್ಳಸಾಗಣೆ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ಅನಾಮಧೇಯವಾಗಿ ಎನ್‌ ಸಿ ಬಿ ಯನ್ನು ದಿನದ 24 ಗಂಟೆಯೂ ಸಂಪರ್ಕಿಸಬಹುದು

2047ರ ವೇಳೆಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತವನ್ನು ಮೊದಲ ಸ್ಥಾನದಲ್ಲಿರಿಸುವ ಗುರಿಯನ್ನು ಪ್ರಧಾನಿ ಮೋದಿಯವರು ಹೊಂದಿದ್ದು, ಯುವ ಪೀಳಿಗೆಯನ್ನು ಮಾದಕ ವಸ್ತುಗಳ ಹಾವಳಿಯಿಂದ ದೂರವಿಡುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ

ಮೋದಿ ಸರ್ಕಾರವು ಕಳೆದ 5 ವರ್ಷಗಳಲ್ಲಿ 'ಸರ್ಕಾರದ ಸಂಪೂರ್ಣ ವಿಧಾನ' ಮತ್ತು ರಚನಾತ್ಮಕ, ಸಾಂಸ್ಥಿಕ ಮತ್ತು ಮಾಹಿತಿ ಸುಧಾರಣೆ ಎಂಬ ಮೂರು ಸ್ತಂಭಗಳ ಆಧಾರದ ಮೇಲೆ ಇದರ ವಿರುದ್ಧ ಹೋರಾಡಲು ಪ್ರಯತ್ನಿಸಿದೆ

ಮಾದಕವಸ್ತುಗಳ ಸಂಪೂರ್ಣ ವ್ಯವಹಾರವು ಈಗ ಮಾದಕವಸ್ತು-ಭಯೋತ್ಪಾದನೆಯೊಂದಿಗೆ ಸಂಬಂಧಿಸಿದೆ, ಮಾದಕವಸ್ತುಗಳ ಆದಾಯದಿಂದ ಬರುವ ಹಣವು ದೇಶದ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿದೆ

ಎಲ್ಲಾ ಏಜೆನ್ಸಿಗಳ ಗುರಿಯು ಕೇವಲ ಮಾದಕವಸ್ತು ಬಳಸುವವರನ್ನು ಹಿಡಿಯುವುದಲ್ಲ, ಅದರ ಸಂಪೂರ್ಣ ಜಾಲವನ್ನು ಕಿತ್ತೆಸೆಯುವುದಾಗಿರಬೇಕು

ನಾವು ಎಲ್ಲಿಂದಲಾದರೂ ಒಂದೇ ಒಂದು ಗ್ರಾಂ ಮಾದಕವಸ್ತು ಭಾರತಕ್ಕೆ ಬರಲು ಬಿಡುವುದಿಲ್ಲ ಅಥವಾ

Posted On: 18 JUL 2024 8:22PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ (ಎನ್‌ ಸಿ ಒ ಆರ್‌ ಡಿ) ನ 7 ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ, ಗೃಹ ಸಚಿವರು ರಾಷ್ಟ್ರೀಯ ಮಾದಕವಸ್ತುಗಳ ಸಹಾಯವಾಣಿ ‘ಮಾನಸ್’(ಮಾದಕ್ ಪದಾರ್ಥ್ ನಿಷೇಧ್ ಅಸುಚ್ನಾ ಕೇಂದ್ರ) ಕ್ಕೆ ಚಾಲನೆ ನೀಡಿದರು ಮತ್ತು ಶ್ರೀನಗರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ ಸಿ ಬಿ) ವಲಯ ಕಚೇರಿಯನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು. ಶ್ರೀ ಅಮಿತ್ ಶಾ ಅವರು ಎನ್‌ ಸಿ ಬಿ 'ವಾರ್ಷಿಕ ವರದಿ 2023' ಮತ್ತು 'ನಶಾ ಮುಕ್ತ ಭಾರತ' ಕುರಿತು ಸಂಕಲನವನ್ನು ಬಿಡುಗಡೆ ಮಾಡಿದರು.

ಸಭೆಯಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಅತ್ಯಂತ ಗಂಭೀರವಾಗಿ ನಡೆಸಲಾಗುತ್ತಿದ್ದು, ಅದನ್ನು ಅಭಿಯಾನವನ್ನಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಈಗ ನಾವು ಈ ಹೋರಾಟದಲ್ಲಿ ನಿರ್ಣಾಯಕ ಘಟ್ಟದಲ್ಲಿರುವುದರಿಂದ ಈಗ ನಿಜವಾದ ಹೋರಾಟ ಆರಂಭವಾಗಿದೆ ಎಂದು ಅವರು ಹೇಳಿದರು. 35 ವರ್ಷದೊಳಗಿನ ದೇಶದ ಪ್ರತಿಯೊಬ್ಬ ನಾಗರಿಕರು ಇದರ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡದಿದ್ದರೆ ಮತ್ತು 35 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಅವರಿಗೆ ಮಾರ್ಗದರ್ಶನ ನೀಡಲು ಪ್ರತಿಜ್ಞೆ ಮಾಡದಿದ್ದರೆ, ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು. ಸರ್ಕಾರಗಳು ಕೂಡ ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ, ಬದಲಿಗೆ ಈ ಯುದ್ಧವನ್ನು ದೇಶದ 130 ಕೋಟಿ ಜನರ ಬಳಿಗೆ ಕೊಂಡೊಯ್ಯುವ ವಿಧಾನ ಇರಬೇಕು ಎಂದು ಅವರು ಹೇಳಿದರು.

2047ರ ವೇಳೆಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತವನ್ನು ಮೊದಲ ಸ್ಥಾನದಲ್ಲಿರಿಸುವ ಗುರಿಯನ್ನು ಪ್ರಧಾನಿ ಮೋದಿಯವರು ಹೊಂದಿದ್ದು, ಯುವ ಪೀಳಿಗೆಯನ್ನು ಮಾದಕ ವಸ್ತುಗಳ ಹಾವಳಿಯಿಂದ ದೂರವಿಡುವುದರಿಂದ ಮಾತ್ರ ಇದು ಸಾಧ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮಾದಕ ವಸ್ತುಗಳ ವಿರುದ್ಧದ ಈ ಹೋರಾಟ ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ಗಂಭೀರವಾಗಿ ಮತ್ತು ಆದ್ಯತೆಯೊಂದಿಗೆ ಹೋರಾಡಬೇಕಾಗಿದೆ ಎಂದು ಹೇಳಿದರು. ಈ ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡದಿದ್ದರೆ ನಾವು ಗೆಲ್ಲಲು ಸಾಧ್ಯವಿಲ್ಲ ಎಂದರು. ಪ್ರಧಾನಮಂತ್ರಿ ಮೋದಿಯವರ ಮಾದಕ ದ್ರವ್ಯ ಮುಕ್ತ ಭಾರತದ ದೃಷ್ಟಿಕೋನವು ದೊಡ್ಡ ಸವಾಲು ಮತ್ತು ಸಂಕಲ್ಪವಾಗಿದೆ ಎಂದು ಶ್ರೀ ಶಾ ಹೇಳಿದರು. ನಾವು ಈಗ ಜಾಗೃತರಾಗಿದ್ದೇವೆ ಮತ್ತು ಈ ಸಂದಿಗ್ಧ ಘಟ್ಟದಲ್ಲಿ ನಾವು ಧೈರ್ಯದಿಂದ ಹೋರಾಡಿದರೆ ಈ ಹೋರಾಟವನ್ನು ಗೆಲ್ಲಬಹುದು ಎಂದು ಅವರು ಹೇಳಿದರು.

ಕಳೆದ 5 ವರ್ಷಗಳಲ್ಲಿ, ಮೋದಿ ಸರ್ಕಾರವು 'ಸರ್ಕಾರದ ಸಂಪೂರ್ಣ ವಿಧಾನ' ಮತ್ತು ಮೂರು ಸ್ತಂಭಗಳ - ರಚನಾತ್ಮಕ, ಸಾಂಸ್ಥಿಕ ಮತ್ತು ಮಾಹಿತಿ ಸುಧಾರಣೆಗಳು- ಆಧಾರದ ಮೇಲೆ ಈ ಯುದ್ಧದ ವಿರುದ್ಧ ಹೋರಾಡಲು ಪ್ರಯತ್ನಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2004ರಿಂದ 2013ರವರೆಗೆ 5,933 ಕೋಟಿ ರೂ. ಮೌಲ್ಯದ ಒಂದು ಲಕ್ಷದ 52 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, 2014ರಿಂದ 2024ರವರೆಗಿನ ಹತ್ತು ವರ್ಷಗಳಲ್ಲಿ ಈ ಪ್ರಮಾಣ 5,43,000 ಕೆಜಿಗೆ ಏರಿಕೆಯಾಗಿದ್ದು, ಇದರ ಮೌಲ್ಯ 22,000 ಕೋಟಿ ರೂ.ಗೂ ಹೆಚ್ಚು ಎಂದರು. ಮೋದಿ ಸರ್ಕಾರದ ಪ್ರಯತ್ನದಿಂದಾಗಿ ಅನೇಕ ಮಾದಕ ದ್ರವ್ಯ ಜಾಲಗಳನ್ನು ಯಶಸ್ವಿಯಾಗಿ ಕಿತ್ತುಹಾಕಲಾಗಿದೆ ಎಂದು ಶ್ರೀ ಶಾ ಹೇಳಿದರು.

ಮಾದಕ ವಸ್ತುಗಳ ಬಹುದೊಡ್ಡ ಅಪಾಯವೆಂದರೆ ಅದು ನಮ್ಮ ಭವಿಷ್ಯದ ಪೀಳಿಗೆಯನ್ನು ನಾಶಪಡಿಸುತ್ತದೆ ಮತ್ತು ವ್ಯಸನಿಗಳು ತಮ್ಮ ಇಡೀ ಕುಟುಂಬವನ್ನು ತೀವ್ರ ಹತಾಶೆ ಮತ್ತು ಕೀಳರಿಮೆಯಿಂದ ಬಳಲುವಂತೆ ಮಾಡುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಸಂಪೂರ್ಣ ದಂಧೆಯು ಮಾದಕವಸ್ತು ಭಯೋತ್ಪಾದನೆಯೊಂದಿಗೆ ನಂಟು ಹೊಂದುತ್ತಿದೆ ಮತ್ತು ಡ್ರಗ್ಸ್‌ನಿಂದ ಬರುವ ಹಣವು ದೇಶದ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯ ಹೊಸ ಅಪಾಯವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು. ಮಾದಕವಸ್ತು ವ್ಯಾಪಾರದಿಂದಾಗಿ, ನಮ್ಮ ಆರ್ಥಿಕತೆಯನ್ನು ದುರ್ಬಲಗೊಳಿಸುವ ಇತರ ಆರ್ಥಿಕ ವಹಿವಾಟುಗಳು ಸಹ ಬಲಗೊಂಡಿವೆ ಎಂದು ಶ್ರೀ ಶಾ ಹೇಳಿದರು. ಇಂತಹ ಹಲವು ಸಂಘಟನೆಗಳು ರೂಪುಗೊಂಡಿದ್ದು, ಮಾದಕ ವಸ್ತುಗಳ ವ್ಯಾಪಾರ ಮಾತ್ರವಲ್ಲದೆ ಅಕ್ರಮ ಹವಾಲಾ ದಂಧೆ ಮತ್ತು ತೆರಿಗೆ ವಂಚನೆಯಲ್ಲಿ ತೊಡಗಿವೆ. ಮಾದಕವಸ್ತು ಕಳ್ಳಸಾಗಣೆ ಈಗ ಬಹು ಹಂತದ ಅಪರಾಧವಾಗಿ ಮಾರ್ಪಟ್ಟಿದ್ದು, ಅದನ್ನು ನಾವು ದೃಢವಾಗಿ ಮತ್ತು ಕಟ್ಟುನಿಟ್ಟಾಗಿ ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಏಜೆನ್ಸಿಗಳು, ವಿಶೇಷವಾಗಿ ರಾಜ್ಯ ಪೊಲೀಸರು, ಮಾದಕ ದ್ರವ್ಯ ಸೇವಿಸುವವರನ್ನು ಹಿಡಿಯುವುದು ಮಾತ್ರವಲ್ಲದೆ ಅದರ ದಂಧೆಯಲ್ಲಿ ತೊಡಗಿರುವವರನ್ನು ಹಿಡಿದು ಇಡೀ ಜಾಲವನ್ನು ಕಿತ್ತೆಸೆಯುವ ಗುರಿಯನ್ನು ಹೊಂದಿರಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಕ್ಕಾಗಿ ‘ಮೇಲಿನಿಂದ ಕೆಳಕ್ಕೆ’ಹಾಗೂ ‘ಕೆಳದಿಂದ ಮೇಲಕ್ಕೆ’ತನಿಖೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು. ದೇಶದ ಗಡಿಯಲ್ಲಿ ಮಾದಕವಸ್ತು ದಾಸ್ತಾನು ಸಿಕ್ಕಿಬಿದ್ದರೆ ಆ ಬಗ್ಗೆ ತನಿಖೆ ನಡೆಸಿ ಅದರ ಹಿಂದಿರುವ ಸಂಪೂರ್ಣ ಜಾಲವನ್ನು ಕಿತ್ತೆಸೆಯುವ ಅಗತ್ಯವಿದೆ ಎಂದರು. ‘ಮೇಲಿನಿಂದ ಕೆಳಕ್ಕೆ’ಹಾಗೂ ‘ಕೆಳದಿಂದ ಮೇಲಕ್ಕೆ ವಿಧಾನದೊಂದಿಗೆ ಗುಜರಾತ್ ಹಲವು ದೊಡ್ಡ ಡ್ರಗ್ ಪ್ರಕರಣಗಳನ್ನು ತನಿಖೆ ಮಾಡುವಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಗೃಹ ಸಚಿವರು ಹೇಳಿದರು. ಇದೀಗ ಭಾರತದಲ್ಲೂ ಸಿಂಥೆಟಿಕ್ ಡ್ರಗ್ಸ್ ಸಮಸ್ಯೆ ಮುನ್ನೆಲೆಗೆ ಬರುತ್ತಿದ್ದು, ಇತ್ತೀಚೆಗೆ ಹಲವು ಅಕ್ರಮ ಪ್ರಯೋಗಾಲಯಗಳು ಸಿಕ್ಕಿ ಬಿದ್ದಿವೆ ಎಂದರು. ಎಲ್ಲಾ ರಾಜ್ಯಗಳ ತನಿಖಾ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಎನ್‌ ಸಿ ಬಿ ಯಿಂದ ಈ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಂಡು ಆಯಾ ರಾಜ್ಯಗಳಲ್ಲಿ ಇಂತಹ ಚಟುವಟಿಕೆಗಳನ್ನು ನಿಲ್ಲಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಒಂದೇ ಒಂದು ಗ್ರಾಂ ಮಾದಕವಸ್ತು ಅನ್ನು ಎಲ್ಲಿಂದಲಾದರೂ ಭಾರತಕ್ಕೆ ಪ್ರವೇಶಿಸಲು ನಾವು ಅನುಮತಿಸುವುದಿಲ್ಲ ಅಥವಾ ಭಾರತದ ಗಡಿಗಳನ್ನು ಯಾವುದೇ ರೀತಿಯಲ್ಲಿ ಮಾದಕವಸ್ತು ವ್ಯಾಪಾರಕ್ಕೆ ಬಳಸಿಕೊಳ್ಳಲು ನಾವು ಬಿಡುವುದಿಲ್ಲ ಎಂಬುದು ನಮ್ಮ ಗುರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಮಾದಕವಸ್ತು ಎಲ್ಲಿಂದ ಬಂದರೂ, ಎಲ್ಲಿಗೆ ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಇಡೀ ವಿಶ್ವವೇ ಒಗ್ಗಟ್ಟಿನಿಂದ ಹೋರಾಡದ ಹೊರತು ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ತಾವು 2014 ರಿಂದ ಎನ್‌ ಸಿ ಒ ಆರ್‌ ಡಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ ಮತ್ತು ಇದು ಉತ್ತೇಜಕ ಫಲಿತಾಂಶಗಳನ್ನು ಒದಗಿಸಲು ಸಹಾಯ ಮಾಡಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಜಿಲ್ಲಾ ಮಟ್ಟದ ಎನ್‌ ಸಿ ಒ ಆರ್‌ ಡಿ ಕೆಲಸ ಮಾಡದ ಹೊರತು ಈ ಹೋರಾಟಗಳು ಯಶಸ್ವಿಯಾಗಿ ನಡೆಯುವುದಿಲ್ಲ ಎಂದರು. ಜಿಲ್ಲಾ ಮಟ್ಟದ ಎನ್‌ ಸಿ ಒ ಆರ್‌ ಡಿ ಗಳು ಕೇವಲ ಚರ್ಚಾ ವೇದಿಕೆಯಾಗದೆ ನಿರ್ಧಾರ ಮತ್ತು ಪರಿಶೀಲನೆಗೆ ವೇದಿಕೆಯಾಗಬೇಕು ಎಂದು ಅವರು ಒತ್ತಿ ಹೇಳಿದರು. ಜಿಲ್ಲೆ ತನ್ನದೇ ಆದ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು. ಎನ್‌ ಸಿ ಒ ಆರ್‌ ಡಿ ಸಭೆಗಳು ಫಲಿತಾಂಶ ಆಧಾರಿತವಾಗಿರಬೇಕು ಎಂದು ಅವರು ಹೇಳಿದರು. ನಿಗದಿತ ಗುರಿಯನ್ನು ನಿಗದಿಪಡಿಸುವುದು, ಅದನ್ನು ಪರಿಶೀಲಿಸುವುದು ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯತಂತ್ರ ರೂಪಿಸುವುದು ಅದರ ಪ್ರಮುಖ ಭಾಗವಾಗಿರಬೇಕು ಎಂದು ಶ್ರೀ ಶಾ ಹೇಳಿದರು. ಪಿ ಐ ಟಿ ಎನ್‌ ಡಿ ಪಿ ಎಸ್‌ ನ ಬಳಕೆಯನ್ನು ಹೆಚ್ಚಿಸಲು ಅವರು ಎಲ್ಲಾ ಏಜೆನ್ಸಿಗಳಳಿಗೆ ಕರೆ ನೀಡಿದರು. ನಮ್ಮ ಏಜೆನ್ಸಿಗಳ ಧ್ಯೇಯವಾಕ್ಯವು ಈ ಹಿಂದೆ ‘ತಿಳಿದುಕೊಳ್ಳಬೇಕು’ಎಂದು ಇತ್ತು, ಆದರೆ ಈಗ ನಾವು ‘ಹಂಚಿಕೊಳ್ಳುವುದು ಕರ್ತವ್ಯ’ದತ್ತ ಸಾಗಬೇಕು ಮತ್ತು ಈ ಪ್ರಮುಖ ಬದಲಾವಣೆಯನ್ನು ಎಲ್ಲಾ ಏಜೆನ್ಸಿಗಳು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವರು ಹೇಳಿದರು, ಮಾದಕವಸ್ತು ಪೂರೈಕೆಯ ಬಗ್ಗೆ ನಿರ್ದಯವಾದ ವಿಧಾನ, ಬೇಡಿಕೆ ಕಡಿತದ ಕಡೆಗೆ ಕಾರ್ಯತಂತ್ರದ ವಿಧಾನ ಮತ್ತು ಹಾನಿ ಕಡಿತದ ಕಡೆಗೆ ಮಾನವೀಯ ವಿಧಾನ ಇರಬೇಕು ಎಂದು ಶ್ರೀ ಶಾ ಹೇಳಿದರು. ಈ ಮೂರೂ ಬೇರೆ ಬೇರೆ, ಆದರೆ ಹೀಗೆ ಮಾಡದ ಹೊರತು ಸಫಲವಾಗುವುದಿಲ್ಲ ಎಂದು ಅವರು ಹೇಳಿದರು.

ಇಂದು ಮಾನಸ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ ಮತ್ತು ಅದರೊಂದಿಗೆ ರಾಜ್ಯಗಳು ಮತ್ತು ಜಿಲ್ಲೆಗಳ ಪ್ರತಿಯೊಂದು ಘಟಕವನ್ನು ತಲುಪುವ ಅನೇಕ ಉಪಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಜ್ಯಗಳು ತಮ್ಮ ಬಜೆಟ್‌ ನ ಒಂದು ಭಾಗವನ್ನು ನಾರ್ಕೋಟಿಕ್ಸ್ ಫೋರೆನ್ಸಿಕ್ಸ್‌ ಗೆ ಖರ್ಚು ಮಾಡಬೇಕು ಎಂದು ಅವರು ಹೇಳಿದರು. ಶೀಘ್ರದಲ್ಲೇ, ಸರ್ಕಾರವು ಮಾದಕ ದ್ರವ್ಯಗಳ ಪ್ರಾಥಮಿಕ ಪರೀಕ್ಷೆಗಾಗಿ ಕಿಟ್‌ ಗಳನ್ನು ಅಗ್ಗದ ದರದಲ್ಲಿ ಒದಗಿಸಲಿದೆ, ಇದರಿಂದ ಪ್ರಕರಣಗಳ ದಾಖಲು ಹೆಚ್ಚು ಸುಲಭವಾಗುತ್ತದೆ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನಶೆ ಮುಕ್ತ ಭಾರತ ಅಭಿಯಾನವನ್ನು ಉತ್ತಮವಾಗಿ ನಡೆಸುತ್ತಿದೆ ಮತ್ತು ಎಲ್ಲಾ ಧಾರ್ಮಿಕ, ಯುವಜನರು ಮತ್ತು ರೋಟರಿ ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕೆಂದು ಶ್ರೀ ಶಾ ಹೇಳಿದರು. ಮಾದಕವಸ್ತು ವಿರುದ್ಧದ ಈ ಹೋರಾಟದಲ್ಲಿ ನಾವು ಬಹಳ ದೂರ ಸಾಗಬೇಕಾಗಿದೆ ಮತ್ತು ಈಗ ನಾವು ಅದರ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಬೇಕಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವೇಗವನ್ನು ಹೆಚ್ಚಿಸಲು ಮತ್ತು ಸಮಗ್ರತೆಯನ್ನು ಹೆಚ್ಚಿಸಲು ನಾವು ಯಾವುದೇ ಅವಕಾಶವನ್ನು ಬಿಡಬಾರದು, ನಾವು ಅನೇಕ ಸಹೋದ್ಯೋಗಿಗಳನ್ನು ಜೊತೆಗೆ ಕರೆದೊಯ್ಯಬೇಕು ಎಂದು ಅವರು ಹೇಳಿದರು,

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ವಲಯ ಕಚೇರಿಯು ಭಾರತದ ವಾಯುವ್ಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯನ್ನು ತಡೆಯುವತ್ತ ಗಮನಹರಿಸುತ್ತದೆ. ಎನ್‌ ಸಿ ಬಿ ಈಗ 30 ವಲಯ ಕಚೇರಿಗಳು ಮತ್ತು 7 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಎನ್‌ ಸಿ ಬಿ ಯ ವಾರ್ಷಿಕ ವರದಿ-2023 ಮಾದಕವಸ್ತು ಸಾಗಣೆ ಮತ್ತು ಮಾದಕವಸ್ತು ದುರುಪಯೋಗದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಎನ್‌ ಸಿ ಬಿ/ಎಲ್ಲಾ ಇತರ ಏಜೆನ್ಸಿಗಳ ಪ್ರಯತ್ನಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಏಜೆನ್ಸಿಗಳು ಮಾಡಿದ ಜಪ್ತಿ ಡೇಟಾವನ್ನು ಒಳಗೊಂಡಿದೆ, ಮಾದಕವಸ್ತು ಕಳ್ಳಸಾಗಣೆಯ ಇತ್ತೀಚಿನ ಪ್ರವೃತ್ತಿಗಳು, ಮಾದಕವಸ್ತು ನಿಗ್ರಹ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ (PITNDPS) ನಲ್ಲಿ ಕಾನೂನುಬಾಹಿರ ಸಾಗಣೆಯನ್ನು ತಡೆಗಟ್ಟುವ ಕ್ರಮ (PITNDPS), ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕ್ರಮ ಸೇರಿದಂತೆ ಹಣಕಾಸು ತನಿಖೆ ) ಇತ್ಯಾದಿ. ಮಾನಸ್ ಸಹಾಯವಾಣಿಯು (ಮಾದಕ್ ಪದಾರ್ಥ್ ನಿಶೇಧ್ ಅಸುಚ್ನಾ ಕೇಂದ್ರ) ಟೋಲ್-ಫ್ರೀ ಸಂಖ್ಯೆ 1933, ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್ ಮತ್ತು ಉಮಂಗ್ ಅಪ್ಲಿಕೇಶನ್ ಅನ್ನು ಹೊಂದಿರುತ್ತದೆ, ಇದರಿಂದ ನಾಗರಿಕರು ಮಾದಕ ವ್ಯಸನ, ಚಟ ಮತ್ತು ಪುನರ್ವಸತಿ ಮುಂತಾದ ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾದಕದ್ರವ್ಯದ ಮಾರಾಟ/ ಕಳ್ಳಸಾಗಣೆ ಅಥವಾ ಸಮಾಲೋಚನೆಯ ಮಾಹಿತಿಯನ್ನು ಹಂಚಿಕೊಳ್ಳಲು ಅನಾಮಧೇಯವಾಗಿ ಎನ್‌ ಸಿ ಬಿ ಯೊಂದಿಗೆ ದಿನದ 24 ಗಂಟೆಯೂ ಸಂಪರ್ಕ ಸಾಧಿಸಬಹುದು.

ಅಕ್ರಮ ಕೃಷಿಯು ನಿಭಾಯಿಸಬೇಕಾದ ಒಂದು ದೊಡ್ಡ ಅಪಾಯವಾಗಿದೆ ಮತ್ತು ಎನ್‌ ಸಿ ಬಿ ಯು BISAG-N ಜೊತೆಗೆ ಅಕ್ರಮ ಸಾಗುವಳಿಯನ್ನು ತಡೆಗಟ್ಟಲು ಮತ್ತು ನಿಖರವಾದ ಜಿಐಎಸ್‌ ಮಾಹಿತಿಯನ್ನು ಒದಗಿಸಲು ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ “MAPDRUGS” ಅನ್ನು ಅಭಿವೃದ್ಧಿಪಡಿಸಿದೆ, ಇದರಿಂದಾಗಿ ಅಂತಹ ಅಕ್ರಮ ಕೃಷಿಯನ್ನು ಸಂಬಂಧಪಟ್ಟ ಏಜೆನ್ಸಿಗಳು ನಾಶಪಡಿಸಬಹುದು.

ನಶೆ ಮುಕ್ತ ಭಾರತಕ್ಕಾಗಿ ಕೆಲಸ ಮಾಡುವ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರ ಮತ್ತು ಎಲ್ಲಾ ಏಜೆನ್ಸಿಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರು ಮತ್ತು ಎನ್‌ ಸಿ ಬಿ ಯ ಮಹಾನಿರ್ದೇಶಕರು ಸೇರಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು,  ಡಿಜಿ ಎಸ್‌ ಪಿ ಮತ್ತು ಮಾದಕ ವಸ್ತು ವಿರೋಧಿ ಕಾರ್ಯಪಡೆಯ ಮುಖ್ಯಸ್ಥರು ಸಭೆಯಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ್ದರು. ಎನ್‌ ಸಿ ಬಿ, ಡಿ ಆರ್‌ ಐ, ಇಡಿ, ಬಿ ಎಸ್‌ ಎಫ್, ಎಸ್‌ ಎಸ್‌ ಬಿ, ಸಿ ಆರ್‌ ಪಿ ಎಫ್, ಸಿ ಐ ಎಸ್‌ ಎಫ್, ಆರ್‌ ಪಿ ಎಫ್, ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಕಾವಲುಪಡೆ ಇತ್ಯಾದಿಗಳ ಹಿರಿಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

*****


(Release ID: 2034185) Visitor Counter : 75