ಪ್ರಧಾನ ಮಂತ್ರಿಯವರ ಕಛೇರಿ

ಮುಂಬೈನಲ್ಲಿ ʻಭಾರತೀಯ ಪತ್ರಿಕಾ ಸಂಘʼದ ಗೋಪುರ (ಐಎನ್‌ಎಸ್‌ ಟವರ್ಸ್‌) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

Posted On: 13 JUL 2024 9:07PM by PIB Bengaluru

ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಅವರೇ, ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಅವರೇ, ಉಪ ಮುಖ್ಯಮಂತ್ರಿಗಳಾದ ಭಾಯಿ ದೇವೇಂದ್ರ ಫಡ್ನವೀಸ್ ಅವರೇ ಮತ್ತು ಅಜಿತ್ ದಾದಾ ಪವಾರ್ ಅವರೇ, ʻಭಾರತೀಯ ಪತ್ರಿಕಾ ಸಂಘʼದ(ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ) ಅಧ್ಯಕ್ಷ ರಾಕೇಶ್ ಶರ್ಮಾ ಅವರೇ, ಎಲ್ಲಾ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ!

ಮೊದಲನೆಯದಾಗಿ, ನಾನು ಭಾರತೀಯ ಪತ್ರಿಕಾ ಸಂಘದ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದು, ನಿಮಗೆ ಮುಂಬೈನಲ್ಲಿ ದೊಡ್ಡ ಮತ್ತು ಅತ್ಯಾಧುನಿಕ ಕಟ್ಟಡವನ್ನು ಒದಗಿಸಲಾಗಿದೆ. ಈ ಹೊಸ ಕಟ್ಟಡವು ನಿಮ್ಮ ಕೆಲಸದ ದಕ್ಷತೆ ಮತ್ತು ಕೆಲಸದ ಸುಗಮತೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಗಳಲ್ಲಿ ʻಭಾರತೀಯ ಪತ್ರಿಕಾ ಸಂಘʼವೂ ಒಂದು. ಹೀಗಾಗಿ, ನೀವು ದೇಶದ ಪ್ರಯಾಣದಲ್ಲಿ ಪ್ರತಿಯೊಂದು ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಿ ಮತ್ತು ಅನುಭವಿಸಿದ್ದೀರಿ ಹಾಗೂ ಅದನ್ನು ಸಾರ್ವಜನಿಕರಿಗೆ ತಿಳಿಸಿದ್ದೀರಿ. ಆದ್ದರಿಂದ, ಒಂದು ಸಂಸ್ಥೆಯಾಗಿ ನಿಮ್ಮ ಕೆಲಸವು ಹೆಚ್ಚು ಪರಿಣಾಮಕಾರಿಯಾದಷ್ಟೂ, ದೇಶಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ.

ಸ್ನೇಹಿತರೇ,

ಮಾಧ್ಯಮಗಳು ಕೇವಲ ದೇಶದ ಪರಿಸ್ಥಿತಿಗಳ ಬಗ್ಗೆ ಮೂಕ ಪ್ರೇಕ್ಷಕರಾಗಬಾರದು. ಮಾಧ್ಯಮದಲ್ಲಿರುವ ನೀವೆಲ್ಲರೂ ಪರಿಸ್ಥಿತಿಗಳನ್ನು ಬದಲಾಯಿಸುವಲ್ಲಿ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೀರಿ. ಇಂದು, ಭಾರತವು ತನ್ನ ಮುಂದಿನ 25 ವರ್ಷಗಳ ಪ್ರಯಾಣದ ಅತ್ಯಂತ ಮುಖ್ಯವಾದ ಘಟ್ಟದಲ್ಲಿದೆ. ಈ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಬೇಕಾದರೆ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಮಾಧ್ಯಮಗಳು ದೇಶದ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತವೆ. ಮಾಧ್ಯಮಗಳು ನಾಗರಿಕರಿಗೆ ಅವರ ಹಕ್ಕುಗಳನ್ನು ನಿರಂತರವಾಗಿ ನೆನಪಿಸುತ್ತವೆ. ಮತ್ತು ಮಾಧ್ಯಮಗಳು ಜನರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳುವಂತೆ ಮಾಡುತ್ತವೆ. ಯಾವುದೇ ದೇಶದ ನಾಗರಿಕರು ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ಪಡೆದಾಗ, ಅವರು ಯಶಸ್ಸಿನ ಹೊಸ ಎತ್ತರವನ್ನು ಸಾಧಿಸಲು ಪ್ರಾರಂಭಿಸುತ್ತಾರೆ ಎಂಬುದನ್ನು ನೀವು ಗಮನಿಸಿರುತ್ತೀರಿ. ಇದು ಇಂದು ಭಾರತದಲ್ಲೂ ಅದು ನಡೆಯುತ್ತಿದೆ. ನಾನು ನಿಮಗೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಡಿಜಿಟಲ್ ವಹಿವಾಟು ಭಾರತದ ಜನರ ಸಾಮರ್ಥ್ಯವನ್ನು ಮೀರಿದ್ದು ಎಂದು ಕೆಲವು ನಾಯಕರು ಬಹಿರಂಗವಾಗಿ ಹೇಳಿದ ಸಮಯವಿತ್ತು. ಆಧುನಿಕ ತಂತ್ರಜ್ಞಾನವು ಈ ದೇಶದಲ್ಲಿ ಕೆಲಸ ಮಾಡುವುದಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ಜಗತ್ತು ಭಾರತದ ಜನರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇಂದು, ಭಾರತವು ಜಾಗತಿಕವಾಗಿ ಡಿಜಿಟಲ್ ವಹಿವಾಟಿನಲ್ಲಿ ಭಾರಿ ದಾಖಲೆಗಳನ್ನು ಮುರಿಯುತ್ತಿದೆ.

ಇಂದು, ಭಾರತದ ʻಯುಪಿಐʼ ಮತ್ತು ಇತರೆ ಆಧುನಿಕ ʻಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯʼಗಳು ಜೀವನವನ್ನು ಸುಗಮವಾಗಿಸಿವೆ ಮತ್ತು ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು ಈಗ ಸುಲಭವಾಗಿದೆ. ಇಂದು, ಪ್ರಪಂಚದಾದ್ಯಂತ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ನಮ್ಮ ದೇಶವಾಸಿಗಳು ಹೆಚ್ಚಿನ ಹಣವನ್ನು ಕಳುಹಿಸುತ್ತಿದ್ದಾರೆ. ಆದರೆ ಈ ಕೆಲಸಕ್ಕಾಗಿ ಅವರಿಗೆ ಆಗುತ್ತಿದ್ದ ವೆಚ್ಚವು ಗಮನಾರ್ಹವಾಗಿ ಕಡಿಮೆಯಾಗಿದೆ, ಇದಕ್ಕೆ ಭಾಗಶಃ ಕಾರಣ ಈ ಡಿಜಿಟಲ್ ಕ್ರಾಂತಿ. ವಿಶ್ವದಾದ್ಯಂತದ ಪ್ರಮುಖ ದೇಶಗಳು ನಮ್ಮ ತಂತ್ರಜ್ಞಾನ ಮತ್ತು ಅನುಷ್ಠಾನ ಮಾದರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ದೊಡ್ಡ ಯಶಸ್ಸಿಗೆ ಕೇವಲ ಸರ್ಕಾರವೇ ಕಾರಣವಲ್ಲ. ಮಾಧ್ಯಮದಲ್ಲಿನ ನೀವೆಲ್ಲರೂ ಈ ಯಶಸ್ಸಿಗೆ ಕೊಡುಗೆ ನೀಡಿದ್ದೀರಿ, ಆದ್ದರಿಂದ, ನೀವೆಲ್ಲರೂ ಸಹ ಅಭಿನಂದನೆಗೆ ಅರ್ಹರು.

ಸ್ನೇಹಿತರೇ,

ಮಾಧ್ಯಮದ ಸ್ವಾಭಾವಿಕ ಪಾತ್ರವೆಂದರೆ ಸಂವಾದವನ್ನು ಹುಟ್ಟಿಹಾಕುವುದು ಮತ್ತು ಗಂಭೀರ ವಿಷಯಗಳ ಬಗ್ಗೆ ಚರ್ಚೆಗಳನ್ನು ಬಲಪಡಿಸುವುದು. ಆದಾಗ್ಯೂ, ಮಾಧ್ಯಮ ಸಂವಾದದ ದಿಕ್ಕು ಹೆಚ್ಚಾಗಿ ಸರ್ಕಾರದ ನೀತಿಗಳನ್ನು ಅವಲಂಬಿಸಿರುತ್ತದೆ. ಸರ್ಕಾರಗಳಲ್ಲಿ ಪ್ರತಿಯೊಂದು ಕ್ರಿಯೆಯನ್ನು ಮತಗಳ ಲೆಕ್ಕಾಚಾರದ ಮೂಲಕ ನೋಡಲಾಗುತ್ತದೆ ಎಂದು ನಿಮಗೆ ತಿಳಿದಿದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ದಶಕಗಳ ಹಿಂದೆ ನಮ್ಮ ದೇಶದಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದು ನಿಮಗೆ ನೆನಪಿರಬಹುದು. ಆದರೆ ಸತ್ಯವೆಂದರೆ ದೇಶದಲ್ಲಿ 40-50 ಕೋಟಿ ಬಡವರು 2014ರವರೆಗೆ ಬ್ಯಾಂಕ್ ಖಾತೆಯನ್ನು ಸಹ ಹೊಂದಿರಲಿಲ್ಲ. ಬ್ಯಾಂಕ್‌ಗಳ ರಾಷ್ಟ್ರೀಕರಣ ನಡೆದಾಗ, ಏನು ಹೇಳಲಾಯಿತು ಮತ್ತು 2014ರಲ್ಲಿ ವಾಸ್ತವವೇನು? ದೇಶದ ಅರ್ಧದಷ್ಟು ಜನರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದರು. ಈ ವಿಷಯವು ನಮ್ಮ ದೇಶದಲ್ಲಿ ಎಂದಾದರೂ ಚರ್ಚೆಯ ವಿಷಯವಾಗಿದೆಯೇ? ಆದರೆ ನಾವು ʻಜನ್ ಧನ್ʼ ಯೋಜನೆಯನ್ನು ಒಂದು ಜನಾಂದೋಲನವಾಗಿ ಅಳವಡಿಸಿಕೊಂಡಿದ್ದೇವೆ. ನಾವು ಸುಮಾರು 50 ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದ್ದೇವೆ. ʻಡಿಜಿಟಲ್ ಇಂಡಿಯಾʼ ಮತ್ತು ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳಲ್ಲಿ ಇದು ನಮ್ಮ ಅತಿದೊಡ್ಡ ಮಾಧ್ಯಮವಾಯಿತು. ಅಂತೆಯೇ, ನಾವು ʻಸ್ವಚ್ಛತಾ ಅಭಿಯಾನʼ, ʻಸ್ಟಾರ್ಟ್ ಅಪ್ ಇಂಡಿಯಾʼ ಮತ್ತು ʻಸ್ಟ್ಯಾಂಡ್ ಅಪ್ ಇಂಡಿಯಾʼದಂತಹ ಅಭಿಯಾನಗಳನ್ನು ನೋಡುವುದಾದರೆ! ಅವು ಸಹ ಎಳ್ಳಷ್ಟೂ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹೊಂದಿಕೆಯಾಗುವುದಿಲ್ಲ. ಆದರೆ ಬದಲಾಗುತ್ತಿರುವ ಭಾರತದಲ್ಲಿ, ದೇಶದ ಮಾಧ್ಯಮಗಳು ಅವುಗಳನ್ನು ರಾಷ್ಟ್ರೀಯ ಚರ್ಚೆಯ ಒಂದು ಭಾಗವನ್ನಾಗಿ ಮಾಡಿವೆ. 2014ಕ್ಕಿಂತ ಮೊದಲು ಹೆಚ್ಚಿನ ಜನರಿಗೆ ತಿಳಿದಿರದ ʻಸ್ಟಾರ್ಟ್ ಅಪ್ʼ ಎಂಬ ಪದವನ್ನು ಮಾಧ್ಯಮ ಚರ್ಚೆಗಳ ಮೂಲಕ ಪ್ರತಿ ಮನೆಗೂ ಪರಿಚಯಿಸಲಾಯಿತು.

ಸ್ನೇಹಿತರೇ,

ನೀವೆಲ್ಲರೂ ಮಾಧ್ಯಮದಲ್ಲಿ ಅನುಭವಿಗಳು, ತುಂಬಾ ಅನುಭವಿಗಳು. ನಿಮ್ಮ ನಿರ್ಧಾರಗಳು ದೇಶದ ಮಾಧ್ಯಮಗಳಿಗೂ ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ, ಈ ಕಾರ್ಯಕ್ರಮದ ಮೂಲಕ ನಾನು ನಿಮಗಾಗಿ ಕೆಲವು ವಿನಂತಿಗಳನ್ನು ಮಾಡುವವನಿದ್ದೇನೆ.

ಸ್ನೇಹಿತರೇ,

ಸರ್ಕಾರವು ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಅದು ಕೇವಲ ಸರ್ಕಾರಿ ಕಾರ್ಯಕ್ರಮ ಎಂದು ಅರ್ಥವಲ್ಲ. ಸರ್ಕಾರವು ಒಂದು ನಿರ್ದಿಷ್ಟ ಆಲೋಚನೆಗೆ ಒತ್ತು ನೀಡಿದರೆ, ಅದು ಕೇವಲ ಸರ್ಕಾರದ ಆಲೋಚನೆ ಎಂದು ಅರ್ಥವಲ್ಲ. ಉದಾಹರಣೆಗೆ, ದೇಶವು ʻಅಮೃತ ಮಹೋತ್ಸವʼವನ್ನು ಆಚರಿಸಿತು ಮತ್ತು 'ಹರ್ ಘರ್ ತಿರಂಗಾ' ಅಭಿಯಾನವನ್ನು ನಡೆಸಿತು. ಸರ್ಕಾರವು ಈ ಅಭಿಯಾನಗಳನ್ನು ಪ್ರಾರಂಭಿಸಿದಾಗ, ಇಡೀ ದೇಶವು ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಸಿತು. ಅಂತೆಯೇ, ಇಂದು ದೇಶವು ಪರಿಸರದ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಇದು ರಾಜಕೀಯವನ್ನು ಮೀರಿದ ವಿಷಯ, ಮಾನವೀಯತೆಯ ಭವಿಷ್ಯಕ್ಕೆ ಸಂಬಂಧಿಸಿದ ವಿಷಯ. ಉದಾಹರಣೆಗೆ, 'ಏಕ್ ಪೇಡ್‌ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವು ಈಗಷ್ಟೇ ಪ್ರಾರಂಭವಾಗಿದೆ. ಭಾರತದ ಈ ಅಭಿಯಾನವು ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ನಾನು ʻಜಿ 7ʼನಲ್ಲಿ ಈ ವಿಷಯವನ್ನು ಪ್ರಸ್ತುತಪಡಿಸಿದಾಗ, ಹೆಚ್ಚಿನ ಕುತೂಹಲ ಮೂಡಿತು. ಏಕೆಂದರೆ ಪ್ರತಿಯೊಬ್ಬರೂ ತಮ್ಮ ತಾಯಿಯೊಂದಿಗೆ ಸಂಬಂಧವನ್ನು ಹೊಂದಿರುತ್ತಾರೆ, ಹಾಗಾಗಿ ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತದೆ ಎಂದು ಅವರು ಭಾವಿಸಿದರು. ಎಲ್ಲರೂ ಇದನ್ನೇ ಹೇಳುತ್ತಿದ್ದರು. ದೇಶದ ಹೆಚ್ಚು ಮಾಧ್ಯಮ ಸಂಸ್ಥೆಗಳು ಈ ಪ್ರಯತ್ನದಲ್ಲಿ ಕೈ ಜೋಡಿಸಿದಷ್ಟೂ ಅದು ಭವಿಷ್ಯದ ಪೀಳಿಗೆಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಅಂತಹ ಪ್ರತಿಯೊಂದು ಪ್ರಯತ್ನವನ್ನು ದೇಶದ ಪ್ರಯತ್ನವೆಂದು ಪರಿಗಣಿಸಿ ಅದನ್ನು ಉತ್ತೇಜಿಸಬೇಕು ಎಂಬುದು ನನ್ನ ವಿನಂತಿ. ಇದು ಕೇವಲ ಸರ್ಕಾರದ ಪ್ರಯತ್ನವಲ್ಲ; ಇದು ದೇಶದ ಪ್ರಯತ್ನ. ಈ ವರ್ಷ, ನಾವು ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ನಾಗರಿಕರಲ್ಲಿ ಸಂವಿಧಾನದ ಬಗ್ಗೆ ಕರ್ತವ್ಯ ಪ್ರಜ್ಞೆ ಮತ್ತು ಜಾಗೃತಿಯನ್ನು ಹೆಚ್ಚಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬಹುದು.

ಸ್ನೇಹಿತರೇ,

ಮತ್ತೊಂದು ವಿಷಯವೆಂದರೆ, ಅದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ್ದು. ಪ್ರವಾಸೋದ್ಯಮವು ಕೇವಲ ಸರ್ಕಾರದ ನೀತಿಗಳಿಂದ ಮಾತ್ರ ಬೆಳೆಯುವುದಿಲ್ಲ. ನಾವು ಒಟ್ಟಾಗಿ ಸೇರಿ ಬ್ರಾಂಡ್ ನಿರ್ಮಿಸಲು ಮತ್ತು ದೇಶದ ಬಗ್ಗೆ ಪ್ರಚಾರ ಮಾಡಲು ಪ್ರಯತ್ನಗಳನ್ನು ನಡೆಸಿದಾಗ, ದೇಶದ ಗೌರವದ ಜೊತೆಗೆ ಪ್ರವಾಸೋದ್ಯಮವೂ ವೃದ್ಧಿಸುತ್ತದೆ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೀವು ನಿಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳಬಹುದು. ಉದಾಹರಣೆಗೆ, ಮಹಾರಾಷ್ಟ್ರದ ಎಲ್ಲಾ ಪತ್ರಿಕೆಗಳು ಸೆಪ್ಟೆಂಬರ್‌ನಲ್ಲಿ ಬಂಗಾಳದ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರ್ಧರಿಸಿದರೆ, ಮಹಾರಾಷ್ಟ್ರದ ಜನರು ಬಂಗಾಳವನ್ನು ಎಲ್ಲೆಡೆ ಹೈಲೈಟ್ ಮಾಡುವುದನ್ನು ನೋಡಿದಾಗ, ಅವರು ಬಂಗಾಳಕ್ಕೆ ಭೇಟಿ ನೀಡಲು ಯೋಜಿಸಬಹುದು, ಆ ಮೂಲಕ ಬಂಗಾಳದ ಪ್ರವಾಸೋದ್ಯಮವನ್ನು ಹೆಚ್ಚಿಸಬಹುದು. ಮೂರು ತಿಂಗಳ ನಂತರ, ನೀವು ತಮಿಳುನಾಡಿನ ಮೇಲೆ ಸಾಮೂಹಿಕವಾಗಿ ಗಮನ ಹರಿಸಲು ನಿರ್ಧರಿಸುತ್ತೀರಿ ಎಂದು ಭಾವಿಸೋಣ. ಪ್ರವಾಸ ಹೋಗಲು ಯೋಜಿಸುತ್ತಿರುವ ಮಹಾರಾಷ್ಟ್ರದ ಜನರು ತಮಿಳುನಾಡನ್ನು ಆಯ್ಕೆ ಮಾಡುವುದನ್ನು ನೀವು ನೋಡುತ್ತೀರಿ. ಇದು ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಒಂದು ಮಾರ್ಗವಾಗಬಹುದು, ಮತ್ತು ನೀವು ಇದನ್ನು ಮಾಡಿದಾಗ, ಮಹಾರಾಷ್ಟ್ರಕ್ಕಾಗಿ ಇದೇ ರೀತಿಯ ಅಭಿಯಾನಗಳು ಆ ರಾಜ್ಯಗಳಲ್ಲಿ ಪ್ರಾರಂಭವಾಗಬಹುದು, ಇದು ಮಹಾರಾಷ್ಟ್ರಕ್ಕೂ ಪ್ರಯೋಜನವನ್ನು ನೀಡುತ್ತದೆ. ಇದು ರಾಜ್ಯಗಳ ನಡುವೆ ಪರಸ್ಪರ ಆಕರ್ಷಣೆ ಮತ್ತು ಕುತೂಹಲವನ್ನು ಹೆಚ್ಚಿಸುತ್ತದೆ, ಮತ್ತು ಅಂತಿಮವಾಗಿ, ನೀವು ಈ ಪ್ರಯತ್ನವನ್ನು ಪ್ರಾರಂಭಿಸುವ ರಾಜ್ಯವು ಹೆಚ್ಚುವರಿ ಪ್ರಯತ್ನವಿಲ್ಲದೆ ಪ್ರಯೋಜನಗಳನ್ನು ಪಡೆಯುತ್ತದೆ.

ನಿಮ್ಮ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ನಾವು ಜಾಗತಿಕವಾಗಿ ಯೋಚಿಸಬೇಕಾಗಿದೆ. ಮಾಧ್ಯಮಗಳಿಗೆ ಸಂಬಂಧಿಸಿದಂತೆ, ನಮ್ಮದು 140 ಕೋಟಿ ಜನರ ದೇಶ. ಇಷ್ಟು ದೊಡ್ಡ ದೇಶ, ಅಗಾಧ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಹೊಂದಿದೆ, ಮತ್ತು ಬಹಳ ಕಡಿಮೆ ಸಮಯದಲ್ಲಿ, ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಭಾರತದ ಯಶಸ್ಸನ್ನು ವಿಶ್ವದ ಮೂಲೆ ಮೂಲೆಗಳಿಗೆ ಹರಡುವ ಜವಾಬ್ದಾರಿಯನ್ನು ನೀವು ಪರಿಣಾಮಕಾರಿಯಾಗಿ ವಹಿಸಿಕೊಳ್ಳಬಹುದು. ವಿದೇಶದಲ್ಲಿ ನಮ್ಮ ದೇಶದ ಕುರಿತಾದ ಚಿತ್ರಣವು ಅದರ ಆರ್ಥಿಕತೆ ಮತ್ತು ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆ. ಇಂದು, ಜಾಗತಿಕವಾಗಿ ಭಾರತದ ಖ್ಯಾತಿ ಸುಧಾರಿಸಿರುವುದರಿಂದ ಭಾರತೀಯ ಮೂಲದ ಜನರ ಸ್ಥಾನಮಾನ, ವಿಶ್ವಾಸಾರ್ಹತೆ ಮತ್ತು ಗೌರವವು ವಿದೇಶದಲ್ಲಿ ಹೆಚ್ಚಾಗಿರುವುದನ್ನು ನೀವು ನೋಡುತ್ತೀರಿ. ಭಾರತವು ಜಾಗತಿಕ ಪ್ರಗತಿಗೆ ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಈ ದೃಷ್ಟಿಕೋನದಿಂದ ನಮ್ಮ ಮಾಧ್ಯಮಗಳು ಹೆಚ್ಚು ಕೆಲಸ ಮಾಡಿದರೆ, ದೇಶಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ. ಆದ್ದರಿಂದ, ನಿಮ್ಮ ಪ್ರಕಟಣೆಗಳು ಸಾಧ್ಯವಾದಷ್ಟು ವಿಶ್ವಸಂಸ್ಥೆಯ ಭಾಷೆಗಳಿಗೂ ವಿಸ್ತರಿಸುವುದನ್ನು ನೋಡಲು ನಾನು ಬಯಸುತ್ತೇನೆ. ನಿಮ್ಮ ಮೈಕ್ರೋಸೈಟ್‌ಗಳು,  ಸಾಮಾಜಿಕ ಮಾಧ್ಯಮ ಖಾತೆಗಳು ಆ  ಭಾಷೆಗಳಲ್ಲಿಯೂ ಇರುವಂತೆ ಮಾಡಬಹುದು. ಮತ್ತು ಇಂದು, ʻಕೃತಕ ಬುದ್ಧಿʼಮತ್ತೆಯಿಂದಾಗಿ ಈ ಕೆಲಸವು ನಿಮಗೆ ಹೆಚ್ಚು ಸುಲಭವಾಗಿದೆ.

ಸ್ನೇಹಿತರೇ,

ನಾನು ನಿಮಗೆ ಅನೇಕ ಸಲಹೆಗಳನ್ನು ನೀಡಿದ್ದೇನೆ. ನಿಮ್ಮ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸ್ಥಳವು ತುಂಬಾ ಸೀಮಿತವಾಗಿದೆ ಎಂದು ನನಗೆ ತಿಳಿದಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಪ್ರತಿ ಪತ್ರಿಕೆ ಮತ್ತು ಪ್ರಕಟಣೆಯು ಡಿಜಿಟಲ್ ಆವೃತ್ತಿಗಳನ್ನು ಹೊಂದಿದೆ, ಅಲ್ಲಿ ಯಾವುದೇ ಸ್ಥಳ ಮಿತಿಗಳು ಅಥವಾ ವಿತರಣಾ ಸಮಸ್ಯೆಗಳು ಇರುವುದಿಲ್ಲ. ನೀವು ಈ ಸಲಹೆಗಳನ್ನು ಪರಿಗಣಿಸುತ್ತೀರಿ, ಹೊಸ ಪ್ರಯೋಗಗಳನ್ನು ನಡೆಸುತ್ತೀರಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ. ವಿಶ್ವಸಂಸ್ಥೆಯ ಭಾಷೆಗಳಲ್ಲಿ ಪ್ರಕಟವಾಗುವ ಎರಡು ಪುಟಗಳ ಸಣ್ಣ ಆವೃತ್ತಿಯನ್ನು ಸಹ ರಾಯಭಾರ ಕಚೇರಿಗಳು ಸೇರಿದಂತೆ ವಿಶ್ವದ ದೊಡ್ಡ ವಿಭಾಗವು ನೋಡುತ್ತದೆ ಮತ್ತು ಓದುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ನಿಮ್ಮ ಡಿಜಿಟಲ್ ಆವೃತ್ತಿಗಳು ಭಾರತದ ಸಂದೇಶವನ್ನು ತಿಳಿಸುವ ಉತ್ತಮ ಮೂಲವಾಗಬಹುದು. ನಿಮ್ಮ ಕೆಲಸವು ಬಲವಾದಷ್ಟೂ ದೇಶವು ಹೆಚ್ಚು ಪ್ರಗತಿ ಹೊಂದುತ್ತದೆ. ಈ ನಂಬಿಕೆಯೊಂದಿಗೆ, ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ! ನಿಮ್ಮೆಲ್ಲರನ್ನೂ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ನಿಮಗೆ ನನ್ನ ಶುಭ ಹಾರೈಕೆಗಳು! ಧನ್ಯವಾದಗಳು!

 

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ  ಹಿಂದಿಯಲ್ಲಿತ್ತು.

 

*****



(Release ID: 2034001) Visitor Counter : 9