ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ಎಲ್ಲಾ 55 ಜಿಲ್ಲೆಗಳಲ್ಲಿ 486 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಪ್ರಧಾನ ಮಂತ್ರಿ ಉತ್ಕೃಷ್ಟತಾ ಕಾಲೇಜುʼಗಳನ್ನು ಉದ್ಘಾಟಿಸಿದರು
ಬಲವಾದ ಶೈಕ್ಷಣಿಕ ಅಡಿಪಾಯವಿಲ್ಲದೆ 2047ರ ವೇಳೆಗೆ ʻಅಭಿವೃದ್ಧಿ ಹೊಂದಿದ ಭಾರತʼವನ್ನು ನಿರ್ಮಿಸಲು ಸಾಧ್ಯವಿಲ್ಲ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ 25 ವರ್ಷಗಳ ಎಲ್ಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಲ ದೂರದೃಷ್ಟಿಯೊಂದಿಗೆ ಕೆಲಸ ಮಾಡಿದರು
ಹೊಸ ಶಿಕ್ಷಣ ನೀತಿಯು ಕೇವಲ ಪದವಿಗಳನ್ನು ನೀಡುವ ಬದಲು ಯುವಕರ ʻ360 ಡಿಗ್ರಿʼ(ಸರ್ವಾಂಗೀಣ) ಅಭಿವೃದ್ಧಿಗೆ ಒತ್ತು ನೀಡುತ್ತದೆ
ಹೊಸ ಶಿಕ್ಷಣ ನೀತಿಯಡಿ, ಮಕ್ಕಳಿಗೆ ʻಶೈಕ್ಷಣಿಕ ಪಠ್ಯಕ್ರಮ ಮತ್ತು ʻಜೀವನದ ಪಠ್ಯಕ್ರಮʼ ಕಲಿಸಲಾಗುವುದು
ಹೊಸ ಶಿಕ್ಷಣ ನೀತಿಯ ಮೂಲಕ, ವಿದ್ಯಾರ್ಥಿಗಳಲ್ಲಿ ʻಸಾಂಪ್ರದಾಯಿಕ ಚಿಂತನೆʼ ಬದಲಿಗೆ ʻಚೌಕಟ್ಟು ಮೀರಿʼ ಯೋಚಿಸುವ ಅಭ್ಯಾಸವನ್ನು ಬೆಳೆಸಲು ಒತ್ತು ನೀಡಲಾಗಿದೆ
ಇಂದಿನ ಪೀಳಿಗೆಯು ಇಂಟರ್ನೆಟ್, ʻಕೃತಕ ಬುದ್ಧಿಮತ್ತೆʼ ಮತ್ತು ʻಡೇಟಾ ಅನಾಲಿಟಿಕ್ಸ್ʼ ಪೀಳಿಗೆಯಾಗಿದೆ, ಆದ್ದರಿಂದ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಯೋಗಿಕ ಕಲಿಕೆ, ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿಯಂತಹ ನಿಬಂಧನೆಗಳನ್ನು ಸೇರಿಸಲಾಗಿದೆ
ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಗುರಿಯನ್ನು ಹೊಂದಿರುವುದು ಅವಶ್ಯಕ, ಸಮಯವು ಗುರಿಯಿಲ್ಲದ ಜೀವನವನ್ನು ಶೂನ್ಯ ಮಾಡುತ್ತದೆ. ಯುವಕರು ತಮ್ಮ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಬೇಕು: ಅಮಿತ್ ಶಾ
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಪಠ
Posted On:
14 JUL 2024 8:14PM by PIB Bengaluru
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ಇಂದೋರ್‌ನಿಂದ ರಾಜ್ಯದ ಎಲ್ಲಾ 55 ಜಿಲ್ಲೆಗಳಲ್ಲಿ ʻಪ್ರಧಾನ ಮಂತ್ರಿ ಉತ್ಕೃಷ್ಟತಾ ಕಾಲೇಜುʼಗಳನ್ನು(ಪ್ರಧಾನ ಮಂತ್ರಿ ಕಾಲೇಜ್ ಆಫ್ ಎಕ್ಸಲೆನ್ಸ್) ಉದ್ಘಾಟಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ಕೇಂದ್ರ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮವನ್ನುಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, 2047ರಲ್ಲಿ ನಾವು ನಮ್ಮ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ಭಾರತವು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಅಗ್ರಸ್ಥಾನದಲ್ಲಿರಬೇಕು. ಅಂತಹ ಭಾರತವನ್ನು ನಿರ್ಮಿಸುವ ಗುರಿಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ನಿಗದಿಪಡಿಸಿದ್ದಾರೆ ಎಂದು ಹೇಳಿದರು. ಆದರೆ, ಶಿಕ್ಷಣದ ಅಡಿಪಾಯವನ್ನು ಬಲಪಡಿಸದೆ ಅಂತಹ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಧಾನಿ ಶ್ರೀ ಮೋದಿ ಅವರು ತಮ್ಮ ದೂರದೃಷ್ಟಿಗೆ ಅನುಗುಣವಾಗಿ, 2020ರಲ್ಲಿ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಿದರು. ಮುಂದಿನ 25 ವರ್ಷಗಳ ನಮ್ಮ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೊಸ ಶಿಕ್ಷಣ ನೀತಿಯು ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕವಾಗಿ ಸ್ಪರ್ಧಿಸಲು ಮತ್ತು ಇದೆ ವೇಳೆ ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುವ ವಾತಾವರಣವನ್ನು ಕಲ್ಪಿಸುತ್ತದೆ ಎಂದು ಹೇಳಿದರು.
ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಗೌರವ ಮಧ್ಯಪ್ರದೇಶಕ್ಕೆ ಇದೆ ಎಂದು ಹೇಳಿದರು. ಈ ಹಿಂದೆಯೂ ಸಹ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನದ ಪಠ್ಯಕ್ರಮವನ್ನು ನಮ್ಮ ಮಾತೃಭಾಷೆಗೆ ಭಾಷಾಂತರಿಸಲು ಉಪಕ್ರಮ ಕೈಗೊಂಡ ದೇಶದ ಏಕೈಕ ಮತ್ತೊ ಮೊದಲ ರಾಜ್ಯ ಮಧ್ಯಪ್ರದೇಶ ಎಂದು ಅವರು ಶ್ಲಾಘಿಸಿದರು. ಇದರಿಂದ ಅನೇಕ ಬಡ ಮಕ್ಕಳಿಗೆ ವೈದ್ಯಕೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಅನ್ನು ತಮ್ಮ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣವಾಗಿ ಮುಂದುವರಿಸಲು ಅನುಕೂಲವಾಗಿದೆ ಎಂದು ಹೇಳಿದರು.
ʻಪ್ರಧಾನಮಂತ್ರಿ ಉತ್ಕೃಷ್ಟತಾ ಕಾಲೇಜುʼಗಳ ಆರಂಭವು ಕೇವಲ ಈ ಕಾಲೇಜುಗಳ ಮರುನಾಮಕರಣವಲ್ಲ ಎಂದು ಶ್ರೀ ಅಮಿತ್ ಶಾ ಅಭಿಪ್ರಾಯಪಟ್ಟರು. ʻಪ್ರಧಾನ ಮಂತ್ರಿ ಉತ್ಕೃಷ್ಟತಾ ಕಾಲೇಜುʼ ಎಂದು ಮಾನ್ಯತೆ ಪಡೆಯಲು ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಮೂಲಕ ಅರ್ಹತೆ ಗಳಿಸಬೇಕು. ಈ ಅರ್ಹತೆಯನ್ನು ಗಳಿಸಲು ನಿಗದಿಪಡಿಸಲಾದ ನಿಯತಾಂಕಗಳು ಮತ್ತು ಮಾನದಂಡಗಳಿಗೆ ಸರಿಹೊಂದುವಂತೆ ಈ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು 486 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಕಾಲೇಜುಗಳಲ್ಲಿ ಯಾವುದೇ ವಿಭಾಗೀಕರಣದ ಶಿಕ್ಷಣ ಇರುವುದಿಲ್ಲ ಎಂದು ಅವರು ಹೇಳಿದರು. ಒಬ್ಬ ವಿದ್ಯಾರ್ಥಿಯು ʻಬಿ.ಎʼ ಮಾಡಲು ಬಯಸಿದರೆ ಮತ್ತು ವಿಜ್ಞಾನ ವಿಷಯದಲ್ಲೂ ಆಸಕ್ತಿ ಹೊಂದಿದ್ದರೆ, ಅವನು ಅಥವಾ ಅವಳು ಏಕಕಾಲದಲ್ಲಿ ಆ ವಿಷಯದಲ್ಲೂ ʻಡಿಪ್ಲೊಮಾʼ ಮುಂದುವರಿಸಬಹುದು. ಕಲೆ ಅಥವಾ ಭಾಷೆಯಲ್ಲಿ ಆಸಕ್ತಿ ಹೊಂದಿರುವ ವಾಣಿಜ್ಯ ವಿದ್ಯಾರ್ಥಿಯು ಏಕಕಾಲದಲ್ಲಿ ಈ ವಿಷಯಗಳನ್ನೂ ಅಧ್ಯಯನ ಮಾಡಬಹುದು ಎಂದು ಗೃಹ ಸಚಿವರು ಉದಾಹರಣೆ ನೀಡಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಯೊಬ್ಬರು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದರೆ, ಅವನು / ಅವಳು ತಮ್ಮ ಆಸಕ್ತಿಗೆ ಅನುಗುಣವಾಗಿ ಡಿಪ್ಲೊಮಾ ಕೋರ್ಸ್ ಅನ್ನು ಮುಂದುವರಿಸಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಹೊಸ ಶಿಕ್ಷಣ ನೀತಿಯನ್ನು ಸಾಕಾರಗೊಳಿಸುವ ಮೂಲಕ ಇಂದು ಮಧ್ಯಪ್ರದೇಶವು ಒಂದು ಪ್ರಮುಖ ಅಧ್ಯಾಯವನ್ನು ಬರೆದಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ವಿದ್ಯಾರ್ಥಿಗಳಲ್ಲಿನ ಎಲ್ಲಾ ಸಾಮರ್ಥ್ಯಗಳನ್ನು ಹೊರತರುವುದು, ಅವರಿಗೆ ಬೆಳೆಯಲು ವೇದಿಕೆ ಮತ್ತು ಅವಕಾಶವನ್ನು ನೀಡುವುದು ಶಿಕ್ಷಣದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ವಿಷಯಗಳು ಮತ್ತು ಪಠ್ಯಕ್ರಮವನ್ನು ಕಂಠಪಾಠ ಮಾಡುವ ಮೂಲಕ ಪರೀಕ್ಷೆಯಲ್ಲಿ ಅಂಕಗಳನ್ನು ಪಡೆಯುವುದು ಸುಲಭ. ಆದರೆ ಆಂತರಿಕ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಉತ್ಪಾದಕವಾಗಿ ಅಭಿವೃದ್ಧಿಪಡಿಸುವುದು ತುಂಬಾ ಕಷ್ಟ ಎಂದು ಶ್ರೀ ಶಾ ಅಭಿಪ್ರಾಯಪಟ್ಟರು.
ಇಂದು ಉದ್ಘಾಟಿಸಲಾದ 55 ʻಪ್ರಧಾನ ಮಂತ್ರಿ ಉತ್ಕೃಷ್ಟತಾ ಕಾಲೇಜುಗಳುʼ ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಸಂಸ್ಕೃತಿ, ಕಲೆ ಮುಂತಾದ ಅನೇಕ ವಿಷಯಗಳಲ್ಲಿ ತಮ್ಮ ಆಸಕ್ತಿಗೆ ಅನುಗುಣವಾಗಿ ಅಧ್ಯಯನ ಮಾಡಲು ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ʻಬಿ.ಎಡ್ʼ ಮತ್ತು ʻಬಿ.ಎಸ್ಸಿ ಅಗ್ರಿಕಲ್ಚರ್ʼನಂತಹ ಕೋರ್ಸ್‌ಗಳನ್ನು ಸಹ ಪರಿಚಯಿಸಲಾಗಿದೆ. ʻಬಿಎಸ್ಸಿ ಅಗ್ರಿಕಲ್ಚರ್ʼನಂತಹ ಕೋರ್ಸ್ ಯುವಕರನ್ನು ಕೃಷಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಸ್ವಯಂ ಉದ್ಯೋಗಕ್ಕೆ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಐಐಟಿ ದೆಹಲಿ ಮತ್ತು ಇತರ ಅನೇಕ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಾಕಷ್ಟು ಡಿಪ್ಲೊಮಾ ಕೋರ್ಸ್‌ಗಳು ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಸಂಪರ್ಕಿಸುವ ಕೆಲಸ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ʻಮಧ್ಯಪ್ರದೇಶ ಹಿಂದಿ ಗ್ರಂಥ ಅಕಾಡೆಮಿʼಯ ಪುಸ್ತಕ ಕೇಂದ್ರವನ್ನು ಎಲ್ಲಾ 55 ಕಾಲೇಜುಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಇಂದೋರ್ ಅನ್ನು ಇಲ್ಲಿಯವರೆಗೆ ಹತ್ತಿ ಹಬ್ ಮತ್ತು ಸ್ವಚ್ಚತಾ ಕೇಂದ್ರವೆಂದು ಪರಿಗಣಿಸಲಾಗಿತ್ತು, ಆದರೆ ಈಗ ಇದು ಶಿಕ್ಷಣ ಕೇಂದ್ರವಾಗುವತ್ತ ಸಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಔಷಧ, ಆಟೋಮೊಬೈಲ್, ಜವಳಿ, ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಇಂದೋರ್ ಮುಂಚೂಣಿಯಾಗುವತ್ತ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ ಹೊಸ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅನೇಕ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ; ಅನೇಕ ವಿಶ್ವವಿದ್ಯಾಲಯಗಳನ್ನು ಸಹ ರಚಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಜನರ ಭವಿಷ್ಯವನ್ನು ರೂಪಿಸಲು ಹೊಸ ಶಿಕ್ಷಣ ನೀತಿಯನ್ನು ರೂಪಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಹೊಸ ಶಿಕ್ಷಣ ನೀತಿಯಡಿ, ಮಕ್ಕಳಿಗೆ ʻಶೈಕ್ಷಣಿಕ ಪಠ್ಯಕ್ರಮʼದ ಜೊತೆಗೆ ʻಜೀವನದ ಪಠ್ಯಕ್ರಮʼವನ್ನೂ ಕಲಿಸಲಾಗುವುದು. ಹೊಸ ಶಿಕ್ಷಣ ನೀತಿಯ ಮೂಲಕ, ಪ್ರಮಾಣದ ಬದಲಿಗೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ʻಸಾಂಪ್ರದಾಯಿಕ ಚಿಂತನೆʼ ಬದಲಿಗೆ ʻಚೌಕಟ್ಟನ್ನು ಮೀರಿʼ ಆಲೋಚಿಸುವ ಅಭ್ಯಾಸವನ್ನು ಬೆಳೆಸಲು ಹೊಸ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯು ಯುವಕರಿಗೆ ವೃತ್ತಿಪರ ಮತ್ತು ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ʻಹೊಸ ಶಿಕ್ಷಣ ನೀತಿʼ ಅಡಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು 21ನೇ ಶತಮಾನದ ಜಾಗತಿಕ ಮಾನದಂಡಗಳಿಗೆ ಸಮನಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಹೊಸ ಶಿಕ್ಷಣ ವ್ಯವಸ್ಥೆಯು ಪುಸ್ತಕಗಳನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಹೊಸ ಆಲೋಚನೆಗಳ ಸೃಷ್ಟಿಗೆ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವ ಬದಲು, ʻ360 ಡಿಗ್ರಿʼ ಕೋನದಲ್ಲಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು. ಯುವಕರು ತಮ್ಮ ಜೀವನದಲ್ಲಿ ಗುರಿಗಳನ್ನು ನಿಗದಿಪಡಿಸಿಕೊಳ್ಳುವುದರ ಮಹತ್ವವನ್ನು ಅರಿಯಬೇಕೆಂದು ಸಚಿವರು ಮನವಿ ಮಾಡಿದರು. ಓಡುವ ಸಮಯವು ಗುರಿಯಿಲ್ಲದ ಜೀವನವನ್ನು ಬರಿದು ಮಾಡುತ್ತದೆ, ಮತ್ತು ಗುರಿಯನ್ನು ನಿಗದಿಪಡಿಸಲು ವಿಫಲವಾದರೆ ಸಮಯವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಿದಂತೆ ಎಂದು ಅವರು ವಿವರಿಸಿದರು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಮತ್ತು ನಮ್ಮ ದೇಶದ ಯುವಕರು ತಮಗಾಗಿ ಒಂದು ಗುರಿಯನ್ನು ನಿಗದಿಪಡಿಸಿ ಅದನ್ನು ಸಾಧಿಸಲು ಶ್ರಮಿಸುವ ಸಮಯ ಬಂದಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಠಿಣ ಪರಿಶ್ರಮದಿಂದ ಯಶಸ್ಸಿನ ಅಡಿಪಾಯವನ್ನು ಸಿದ್ಧಪಡಿಸುವವರಿಗೆ ಮಾತ್ರ ಅದೃಷ್ಟವು ಒಲಿಯುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಇಂದಿನಿಂದಲೇ ಶ್ರಮಿಸಬೇಕು ಎಂದು ಶ್ರೀ ಶಾ ಅವರು ಮನವಿ ಮಾಡಿದರು.
ಇಂದಿನ ಪೀಳಿಗೆಯು ಇಂಟರ್ನೆಟ್, ʻಕೃತಕ ಬುದ್ಧಿಮತ್ತೆʼ ಮತ್ತು ʻಡೇಟಾ ಅನಾಲಿಟಿಕ್ಸ್ʼ ಪೀಳಿಗೆಯಾಗಿದೆ ಮತ್ತು ಅದಕ್ಕಾಗಿಯೇ ಹೊಸ ಶಿಕ್ಷಣ ನೀತಿಯು ಪ್ರಾಯೋಗಿಕ ಕಲಿಕೆ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯಂತಹ ನಿಯಮಗಳನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದರು. 2047ರಲ್ಲಿ ಭಾರತವು ಖಂಡಿತವಾಗಿಯೂ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮಗೆ ಸ್ವಾತಂತ್ರ್ಯದ ಶತಮಾನೋತ್ಸವದ ಗುರಿಯನ್ನು ನಿಗದಿಪಡಿಸಿದ್ದಾರೆ ಎಂದು ಸಚಿವರು ಹೇಳಿದರು.
ಈ ಗುರಿಯು ಇಲ್ಲಿ ಉಪಸ್ಥಿತರಿರುವ ಯುವಕ-ಯುವತಿಯರಿಗಾಗಿ, ನಾಳೆಯ ಪ್ರಜೆಗಳಾಗಲಿರುವ ಯುವ ಜನಾಂಗಕ್ಕಾಗಿಯೇ ಎಂದು ಶ್ರೀ ಅಮಿತ್ ಶಾ ವಿದ್ಯಾರ್ಥಿಗಳಿಗೆ ತಿಳಿಸಿದರು. ಇಡೀ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಶ್ರೇಷ್ಠವಾಗುವ ದಿನವನ್ನು ಯುವಕರು ನೋಡಲಿದ್ದಾರೆ. ನಮ್ಮ ಹೊಸ ಶಿಕ್ಷಣ ನೀತಿ ಮತ್ತು ಇಂದಿನ ʻಪ್ರಧಾನ ಮಂತ್ರಿ ಉತ್ಕೃಷ್ಟತಾ ಕಾಲೇಜುʼಗಳು ಆ ಗುರಿಗೆ ಅಡಿಪಾಯ ಹಾಕುತ್ತವೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
*****
(Release ID: 2033202)
Visitor Counter : 79