ರಾಷ್ಟ್ರಪತಿಗಳ ಕಾರ್ಯಾಲಯ

ಭುವನೇಶ್ವರದಲ್ಲಿ ʻರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆʼಯ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರಪತಿಗಳು


ನಿಮ್ಮ ಜ್ಞಾನವನ್ನು ಸಾಮಾಜಿಕ ಉದ್ಯಮವೆಂದು ಪರಿಗಣಿಸಿ ಮತ್ತು ಅದನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಬಳಸಿ: ʻಎನ್‌ಐಎಸ್‌ಇಆರ್‌ʼ ವಿದ್ಯಾರ್ಥಿಗಳನ್ನು ಕುರಿತು ರಾಷ್ಟ್ರಪತಿ ಮುರ್ಮು

Posted On: 09 JUL 2024 1:56PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 9, 2024) ಒಡಿಶಾದ ಭುವನೇಶ್ವರದಲ್ಲಿ ನಡೆದ ʻರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆʼಯ (ಎನ್ಐಎಸ್ಇಆರ್) 13ನೇ ಘಟಿಕೋತ್ಸವದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ʻಎನ್ಐಎಸ್ಇಆರ್ʼ ಕೆಲವೇ ವರ್ಷಗಳ ಹಿಂದೆ ತನ್ನ ಪ್ರಯಾಣ ಆರಂಭಿಸಿದರೂ ಅಲ್ಪಾವಧಿಯಲ್ಲಿ ಅದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಗಳಿಸಿದೆ ಎಂದು ಹೇಳಿದರು. ಈ ಸಂಸ್ಥೆಯು ವಿಜ್ಞಾನದ ವೈಚಾರಿಕತೆ ಮತ್ತು ಸಂಪ್ರದಾಯದ ಮೌಲ್ಯಗಳು ಎರಡನ್ನೂ ಸಮನ್ವಯಗೊಳಿಸುತ್ತಾ ಮುನ್ನಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಮನುಕುಲದ ಸುಧಾರಣೆ ಮತ್ತು ಉದ್ಧಾರಕ್ಕಾಗಿ ಬಳಸಿದಾಗ ಮಾತ್ರ ಶಿಕ್ಷಣ ಹಾಗೂ ಜ್ಞಾನವು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ವಿದ್ಯಾರ್ಥಿಗಳು ಎಲ್ಲಿ ಕೆಲಸ ಮಾಡುತ್ತಿದ್ದರೂ, ಅವರು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಮಟ್ಟದ ಉತ್ಕೃಷ್ಟತೆಯನ್ನು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿಗಳು ವ್ಯಕ್ತಪಡಿಸಿದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜೊತೆಗೆ, ತಮ್ಮ ಸಾಮಾಜಿಕ ಕರ್ತವ್ಯಗಳನ್ನು ಅವರು ಸಂಪೂರ್ಣ ಹೊಣೆಗಾರಿಕೆಯೊಂದಿಗೆ ನಿರ್ವಹಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಮಹಾತ್ಮ ಗಾಂಧಿ ಅವರು ಏಳು ಸಾಮಾಜಿಕ ಪಾಪಗಳನ್ನು ವ್ಯಾಖ್ಯಾನಿಸಿದ್ದಾರೆ, ಅವುಗಳಲ್ಲಿ ಒಂದು ನಿರ್ದಯ ವಿಜ್ಞಾನ ಎಂದು ರಾಷ್ಟ್ರಪತಿಗಳು ಉಲ್ಲೇಖಿಸಿದರು. ಅಂದರೆ, ಮನುಕುಲದ ಬಗ್ಗೆ ಸಂವೇದನೆ ಇಲ್ಲದೆ ವಿಜ್ಞಾನವನ್ನು ಉತ್ತೇಜಿಸುವುದೆಂದರೆ, ಅದು ಪಾಪಕೃತ್ಯಕ್ಕೆ ಸಮಾನ. ಗಾಂಧೀಜಿಯವರ ಈ ಸಂದೇಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಸದಾ ತಮ್ಮೊಳಗೆ ನಮ್ರತೆ ಮತ್ತು ಪ್ರಶ್ನಿಸುವ ಮನೋಭಾವವನ್ನು ಉಳಿಸಿಕೊಳ್ಳಬೇಕು ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಾಮಾಜಿಕ ಉದ್ಯಮವೆಂದು ಪರಿಗಣಿಸಿ ಅದನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಬಳಸುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಜ್ಞಾನವು ವರದಾನವಾಗುವುದರ ಜೊತೆಗೆ ಅದು ಶಾಪವಾಗುವ ಅಪಾಯವೂ ಸದಾ ಇರುತ್ತದೆ ಎಂದು ರಾಷ್ಟ್ರಪತಿಗಳು ಕಳವಳ ವ್ಯಕ್ತಪಡಿಸಿದರು. ಇಂದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ತ್ವರಿತ ಬದಲಾವಣೆಗಳು ನಡೆಯುತ್ತಿವೆ. ಹೊಸ ತಾಂತ್ರಿಕ ಬೆಳವಣಿಗೆಗಳು ಮಾನವ ಸಮಾಜದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿವೆ. ಆದರೆ, ಇದೇವೇಳೆ, ಅವು ಮನುಕುಲಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಉದಾಹರಣೆಗೆ, ವಂಶವಾಹಿ ಪರಿಷ್ಕರಣೆಯನ್ನು ʻCRISPR-Cas9ʼ ತಂತ್ರಜ್ಞಾನವು ಬಹಳ ಸುಲಭಗೊಳಿಸಿದೆ. ಈ ತಂತ್ರಜ್ಞಾನವು ಗುಣಪಡಿಸಲಾಗದ ಅನೇಕ ರೋಗಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಆದಾಗ್ಯೂ, ಈ ತಂತ್ರಜ್ಞಾನದ ಬಳಕೆಯಿಂದಾಗಿ ನೈತಿಕ ಮತ್ತು ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸಹ ಉದ್ಭವಿಸುತ್ತಿವೆ. ಅದೇ ರೀತಿಯಲ್ಲಿ ʻಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ʼ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ, ʻಡೀಪ್‌ಫೇಕ್‌ʼ ಮತ್ತು ಅನೇಕ ನಿಯಂತ್ರಣ ನೀತಿ ಕುರಿತಾದ ಸವಾಲುಗಳು ಮುನ್ನೆಲೆಗೆ ಬರುತ್ತಿವೆ ಎಂದು ಹೇಳಿದರು.

ಮೂಲ ವಿಜ್ಞಾನ ಕ್ಷೇತ್ರದಲ್ಲಿನ ಪ್ರಯೋಗಗಳು ಮತ್ತು ಸಂಶೋಧನೆಗಳು ಫಲಿತಾಂಶಗಳನ್ನು ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂದು ರಾಷ್ಟ್ರಪತಿ ಹೇಳಿದರು. ಎಷ್ಟೋ ಬಾರಿ ಅನೇಕ ವರ್ಷಗಳಿಂದ ಸತತ ನಿರಾಶೆಯ ಬಳಿಕ ಫಲಿತಾಂಶವನ್ನು ಸಾಧಿಸಲಾಗಿದೆ. ವಿದ್ಯಾರ್ಥಿಗಳೂ ಸಹ ಅಂತಹ ಹಂತವನ್ನು ಎದುರಿಸಬಹುದು ಮತ್ತು ಅದು ಅವರ ತಾಳ್ಮೆಯನ್ನು ಪರೀಕ್ಷಿಸುವ ಸಮಯವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ಎಂದಿಗೂ ನಿರುತ್ಸಾಹಗೊಳ್ಳಬಾರದು. ಮೂಲಭೂತ ಸಂಶೋಧನೆಯಲ್ಲಿನ ಬೆಳವಣಿಗೆಗಳು ಇತರ ಕ್ಷೇತ್ರಗಳಲ್ಲಿಯೂ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಿರುವುದುನ್ನು ಸದಾ ನೆನಪಿನಲ್ಲಿಡಬೇಕು ರಾಷ್ಟ್ರಪತಿಗಳು ಸಲಹೆ ನೀಡಿದರು.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ಇಲ್ಲಿ ಕ್ಲಿಕಿಸಿ

https://static.pib.gov.in/WriteReadData/specificdocs/documents/2024/jul/doc202479347901.pdf

 

*****



(Release ID: 2031950) Visitor Counter : 18