ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಹೊಸ ದಾಖಲೆಯನ್ನು ಮಾಡಿದೆ


ಖಾದಿ ಮತ್ತು ಗ್ರಾಮೋದ್ಯೋಗ ವಹಿವಾಟು ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂ. ದಾಟಿದೆ

ಕೆವಿಐಸಿ 2023-24 ನೇ ಹಣಕಾಸು ವರ್ಷಕ್ಕೆ ತಾತ್ಕಾಲಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ

ಕಳೆದ 10 ವರ್ಷಗಳಲ್ಲಿ ಉತ್ಪಾದನೆಯಲ್ಲಿ ಶೇ.315 ರಷ್ಟು ಹೆಚ್ಚಳ ಮತ್ತು ಮಾರಾಟದಲ್ಲಿ ಶೇ.400 ರಷ್ಟು ಏರಿಕೆ

10 ವರ್ಷಗಳಲ್ಲಿ ಹೊಸ ಉದ್ಯೋಗ ಸೃಷ್ಟಿಯಲ್ಲಿ ಐತಿಹಾಸಿಕ ಶೇ.81 ಹೆಚ್ಚಳ

10 ವರ್ಷಗಳಲ್ಲಿ ನವದೆಹಲಿಯ ಖಾದಿ ಗ್ರಾಮೋದ್ಯೋಗ ಭವನದಲ್ಲಿನ ವ್ಯಾಪಾರದಲ್ಲಿ ದಾಖಲೆಯ ಶೇ.87.23 ರಷ್ಟು ಹೆಚ್ಚಳ

Posted On: 09 JUL 2024 6:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ), 2023-24 ನೇ ಆರ್ಥಿಕ ವರ್ಷದಲ್ಲಿ ಉತ್ಪಾದನೆ, ಮಾರಾಟ ಮತ್ತು ಹೊಸ ಉದ್ಯೋಗ ಸೃಷ್ಟಿಯಲ್ಲಿ ಹೊಸ ದಾಖಲೆಯನ್ನು ಮಾಡಿದೆ. 


ಮಂಗಳವಾರ, ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಅವರು 2023-24 ನೇ ಆರ್ಥಿಕ ವರ್ಷದ ತಾತ್ಕಾಲಿಕ ಅಂಕಿಅಂಶಗಳನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. 2013-14 ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಹಿಂದಿನ ಎಲ್ಲಾ ಅಂಕಿಅಂಶಗಳನ್ನು ಮೀರಿಸಿ ಮಾರಾಟದಲ್ಲಿ 399.69 ಶೇಕಡಾ (ಅಂದಾಜು ಶೇ.400), ಉತ್ಪಾದನೆಯಲ್ಲಿ 314.79 ಶೇಕಡಾ (ಅಂದಾಜು ಶೇ.315) ಮತ್ತು ಹೊಸ ಉದ್ಯೋಗ ಸೃಷ್ಟಿಯಲ್ಲಿ 80.96 ಶೇಕಡಾ (ಅಂದಾಜು ಶೇ.81) ಹೆಚ್ಚಳವಾಗಿದೆ. 2022-23 ನೇ ಆರ್ಥಿಕ ವರ್ಷಕ್ಕೆ  ಹೋಲಿಸಿದರೆ ಮಾರಾಟದಲ್ಲಿ ಶೇ.332.14, ಉತ್ಪಾದನೆಯಲ್ಲಿ ಶೇ.267.52 ಮತ್ತು ಹೊಸ ಉದ್ಯೋಗ ಸೃಷ್ಟಿಯಲ್ಲಿ ಶೇ.69.75 ಹೆಚ್ಚಳವಾಗಿದೆ.


ಕೆವಿಐಸಿಯ ಈ ಗಮನಾರ್ಹ ಸಾಧನೆಯು 2047 ರ ವೇಳೆಗೆ 'ಅಭಿವೃದ್ಧಿ ಹೊಂದಿದ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ಶ್ರೀ ಮನೋಜ್ ಕುಮಾರ್ ಹೇಳಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 2023-24ನೇ ಆರ್ಥಿಕ ವರ್ಷದಲ್ಲಿ ಕೆವಿಐಸಿ ಉತ್ಪನ್ನಗಳ ಮಾರಾಟವು 1.55 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಅವರು ಹೇಳಿದರು. 2022-23ನೇ ಹಣಕಾಸು ವರ್ಷದಲ್ಲಿ ಇದು 1.34 ಲಕ್ಷ ಕೋಟಿ ರೂ.ಆಗಿತ್ತು. 'ಮೋದಿ ಸರ್ಕಾರದ ಕಳೆದ ಹತ್ತು ಹಣಕಾಸು ವರ್ಷಗಳಲ್ಲಿ, 2013-14ನೇ ಹಣಕಾಸು ವರ್ಷದಲ್ಲಿ 31154.20 ಕೋಟಿ ರೂ.ಗಳಷ್ಟಿದ್ದ ಗ್ರಾಮೀಣ ಪ್ರದೇಶದಲ್ಲಿನ ಕುಶಲಕರ್ಮಿಗಳು ತಯಾರಿಸಿದ ಸ್ಥಳೀಯ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು 2023-24ನೇ ಹಣಕಾಸು ವರ್ಷದಲ್ಲಿ 155673.12 ಕೋಟಿ ರೂ. ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. 2023-24 ನೇ ಆರ್ಥಿಕ ವರ್ಷದಲ್ಲಿ, ಕೆವಿಐಸಿಯ ಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ 10.17 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ, ಗ್ರಾಮೀಣ ಭಾರತದ ಆರ್ಥಿಕತೆಯನ್ನು ಬಲಪಡಿಸಿವೆ ಎಂದು ಅವರು ಹೇಳಿದರು.

ಈ ಐತಿಹಾಸಿಕ ಸಾಧನೆಗೆ ಗೌರವಾನ್ವಿತ ಬಾಪು ಅವರ ಪ್ರೇರಣೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭರವಸೆ ಮತ್ತು ದೇಶದ ದೂರದ ಹಳ್ಳಿಗಳಲ್ಲಿ ಕೆಲಸ ಮಾಡುವ ಕೋಟ್ಯಂತರ ಕುಶಲಕರ್ಮಿಗಳ ಅವಿರತ ಶ್ರಮ ಕಾರಣ ಎಂದು ಕೆವಿಐಸಿ ಅಧ್ಯಕ್ಷರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖಾದಿಗೆ ಬೆಂಬಲ ನೀಡುತ್ತಿರುವುದರಿಂದ ಖಾದಿ ಉತ್ಪನ್ನಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿದೆ ಎಂದು ಅವರು ಹೇಳಿದರು. ಯುವಜನರ ಪಾಲಿಗೆ ಖಾದಿ ಫ್ಯಾಷನ್ ನ 'ಹೊಸ ಸ್ಟೇಟಸ್ ಸಿಂಬಲ್' ಆಗಿ ಮಾರ್ಪಟ್ಟಿದೆ. ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಬೇಡಿಕೆಯು ಮಾರುಕಟ್ಟೆಯಲ್ಲಿ ವೇಗವಾಗಿ ಹೆಚ್ಚುತ್ತಿದೆ, ಇದು ಉತ್ಪಾದನೆ, ಮಾರಾಟ ಮತ್ತು ಉದ್ಯೋಗದ ಅಂಕಿಅಂಶಗಳಲ್ಲಿ ಪ್ರತಿಫಲಿಸುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಪ್ರಮುಖ ಬದಲಾವಣೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಸ್ವದೇಶಿ ಉತ್ಪನ್ನಗಳಲ್ಲಿ ದೇಶದ ಜನರ ವಿಶ್ವಾಸ ಹೆಚ್ಚಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ ಎಂದು ಅವರು ಹೇಳಿದರು.

2013-14ನೇ ಹಣಕಾಸು ವರ್ಷದಲ್ಲಿ 26,109.08 ಕೋಟಿ ರೂ.ಗಳಷ್ಟಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಉತ್ಪಾದನೆಯು 2023-24ನೇ ಹಣಕಾಸು ವರ್ಷದಲ್ಲಿ 108,297.68 ಕೋಟಿ ರೂ.ಗೆ ತಲುಪಿದ್ದು, ಶೇ.314.79 ರಷ್ಟು ಹೆಚ್ಚಳವಾಗಿದೆ. 202-23ನೇ ಹಣಕಾಸು ವರ್ಷದಲ್ಲಿ ಉತ್ಪಾದನೆಯು 23 95956.67 ಕೋಟಿ ಆಗಿತ್ತು. ನಿರಂತರವಾಗಿ ಹೆಚ್ಚುತ್ತಿರುವ ಉತ್ಪಾದನೆಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಗ್ರಾಮೀಣ ಪ್ರದೇಶಗಳಲ್ಲಿ ಐತಿಹಾಸಿಕ ಕೆಲಸ ಮಾಡಿದೆ ಎಂಬುದಕ್ಕೆ ಪ್ರಬಲ ಪುರಾವೆಯಾಗಿದೆ. 

ಕಳೆದ 10 ಆರ್ಥಿಕ ವರ್ಷಗಳಲ್ಲಿ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಪ್ರತಿ ವರ್ಷ ಹೊಸ ಮಾರಾಟ ದಾಖಲೆಗಳನ್ನು ಸ್ಥಾಪಿಸಿವೆ. 2013-14ನೇ ಹಣಕಾಸು ವರ್ಷದಲ್ಲಿ ಮಾರಾಟವು 31,154.20 ಕೋಟಿ ರೂ.ಗಳಾಗಿದ್ದರೆ, 2023-24ನೇ ಆರ್ಥಿಕ ವರ್ಷದಲ್ಲಿ 1,55,673.12 ಕೋಟಿ ರೂ.ಗೆ ತಲುಪಿದೆ, ಇದು 399.69 ಶೇಕಡಾ ಹೆಚ್ಚಳದೊಂದಿಗೆ ಇದುವರೆಗಿನ ಅತ್ಯಧಿಕ ಮಾರಾಟವಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಖಾದಿ ಬಟ್ಟೆಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. 2013-14ನೇ ಹಣಕಾಸು ವರ್ಷದಲ್ಲಿ ಖಾದಿ ಬಟ್ಟೆಗಳ ಉತ್ಪಾದನೆ 811.08 ಕೋಟಿ ರೂ. ಆಗಿದ್ದರೆ, 2023-24ನೇ ಹಣಕಾಸು ವರ್ಷದಲ್ಲಿ ಶೇ.295.28ರಷ್ಟು ಜಿಗಿತದೊಂದಿಗೆ 3,206 ಕೋಟಿ ರೂ.ಗೆ ತಲುಪಿದ್ದು, ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಖಾದಿ ಬಟ್ಟೆಗಳ ಉತ್ಪಾದನೆ 2915.83 ಕೋಟಿ ರೂ. ಆಗಿತ್ತು.

ಕಳೆದ ಹತ್ತು ಹಣಕಾಸು ವರ್ಷಗಳಲ್ಲಿ ಖಾದಿ ಬಟ್ಟೆಗಳ ಬೇಡಿಕೆಯೂ ವೇಗವಾಗಿ ಹೆಚ್ಚಿದೆ. 2013-14ನೇ ಹಣಕಾಸು ವರ್ಷದಲ್ಲಿ ಇದರ ಮಾರಾಟವು ಕೇವಲ 1,081.04 ಕೋಟಿ ರೂ.ಗಳಾಗಿದ್ದರೆ, 2023-24ನೇ ಆರ್ಥಿಕ ವರ್ಷದಲ್ಲಿ ಶೇ.500.90ರಷ್ಟು ಹೆಚ್ಚಳದೊಂದಿಗೆ 6,496 ಕೋಟಿ ರೂ.ಗೆ ತಲುಪಿದೆ. 2022-23ನೇ ಹಣಕಾಸು ವರ್ಷದಲ್ಲಿ 5,942.93 ಕೋಟಿ ಮೌಲ್ಯದ ಖಾದಿ ಬಟ್ಟೆಗಳನ್ನು ಮಾರಾಟ ಮಾಡಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದೊಡ್ಡ ವೇದಿಕೆಗಳಿಂದ ಮಾಡಿದ ಖಾದಿಯ ಪ್ರಚಾರವು ಖಾದಿ ಬಟ್ಟೆಗಳ ಮಾರಾಟದ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಕಳೆದ ವರ್ಷ ದೇಶದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪ್ರಧಾನಿಯವರು ಖಾದಿಯನ್ನು ಉತ್ತೇಜಿಸಿದ ರೀತಿ ವಿಶ್ವ ಸಮುದಾಯವನ್ನು ಖಾದಿಯತ್ತ ಆಕರ್ಷಿಸಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಗರಿಷ್ಠ ಉದ್ಯೋಗಾವಕಾಶಗಳನ್ನು ಒದಗಿಸುವುದು. ಕೆವಿಐಸಿ ಕಳೆದ ಹತ್ತು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ದಾಖಲೆಯನ್ನೂ ನಿರ್ಮಿಸಿದೆ. 2013-14ನೇ ಹಣಕಾಸು ವರ್ಷದಲ್ಲಿ ಸಂಚಿತ ಉದ್ಯೋಗಾವಕಾಶ 1.30 ಕೋಟಿಯಾಗಿದ್ದರೆ, 2023-24ರಲ್ಲಿ ಶೇ.43.65ರಷ್ಟು ಹೆಚ್ಚಳದೊಂದಿಗೆ 1.87 ಕೋಟಿಗೆ ತಲುಪಿದೆ. ಅದೇ ರೀತಿ 2013-14ನೇ ಹಣಕಾಸು ವರ್ಷದಲ್ಲಿ 5.62 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದರೆ, 2023-24ನೇ ಹಣಕಾಸು ವರ್ಷದಲ್ಲಿ ಹೊಸ ಉದ್ಯೋಗಗಳು 10.17 ಲಕ್ಷಕ್ಕೆ ತಲುಪಿದ್ದು, ಶೇ.80.96ರಷ್ಟು ಹೆಚ್ಚಳವಾಗಿದೆ. 4.98 ಲಕ್ಷ ಗ್ರಾಮೀಣ ಖಾದಿ ಕುಶಲಕರ್ಮಿಗಳು (ಸ್ಪಿನ್ನರ್ ಗಳು ಮತ್ತು ನೇಕಾರರು) ಮತ್ತು ಕಾರ್ಮಿಕರು ಖಾದಿ ಬಟ್ಟೆಗಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ನವದೆಹಲಿಯ ಖಾದಿ ಮತ್ತು ಗ್ರಾಮೋದ್ಯೋಗ ಭವನದ ವ್ಯವಹಾರವೂ ಕಳೆದ ಹತ್ತು ವರ್ಷಗಳಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ. 2013-14ನೇ ಹಣಕಾಸು ವರ್ಷದಲ್ಲಿ ಇಲ್ಲಿನ ವ್ಯವಹಾರ 51.13 ಕೋಟಿ ರೂ.ಗಳಾಗಿದ್ದರೆ, 2023-24ನೇ ಹಣಕಾಸು ವರ್ಷದಲ್ಲಿ ಶೇ.87.23ರಷ್ಟು ಏರಿಕೆಯಾಗಿ 95.74 ಕೋಟಿ ರೂ. ತಲುಪಿದೆ. 2022-23ರ ಹಣಕಾಸು ವರ್ಷದಲ್ಲಿ ಖಾದಿ ಗ್ರಾಮೋದ್ಯೋಗ ಭವನ ನವದೆಹಲಿಯ ವ್ಯವಹಾರ 83.13 ಕೋಟಿ ರೂ. ಆಗಿತ್ತು.

 

*****


(Release ID: 2031910) Visitor Counter : 110