ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ʻಅಮೀನ್ ಪಿಜೆಕೆಪಿ ವಿದ್ಯಾರ್ಥಿ ಭವನʼವನ್ನು ಉದ್ಘಾಟಿಸಿದರು ಜೊತೆಗೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಧುನಿಕ ʻಎಸ್‌ಎಲ್‌ಐಎಂಎಸ್ ʼ(SLiMS) ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು
ಅಹ್ಮದಾಬಾದ್ನ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾರತಿ ನೆರವೇರಿಸಿದ ಶ್ರೀ ಅಮಿತ್ ಶಾ ಅವರು, ಮಹಾಪ್ರಭು ಜಗನ್ನಾಥನ ರಥಯಾತ್ರೆಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು
ಮಹಾಪ್ರಭು ಜಗನ್ನಾಥನ ರಥಯಾತ್ರೆಯು ಭಾರತೀಯ ಸಾಂಸ್ಕೃತಿಕ ಪರಂಪರೆ ಮತ್ತು ಸಮೃದ್ಧಿಯನ್ನು ಸಂರಕ್ಷಿಸುವ ಶುಭ ಸಂದರ್ಭವಾಗಿದ್ದು, ದೇಶದ ಕೋಟ್ಯಂತರ ಭಕ್ತರು ಅತ್ಯಂತ ಭಕ್ತಿಯಿಂದ ಇದರ ಆಚರಣೆಯಲ್ಲಿ ಭಾಗಿಯಾಗುತ್ತಾರೆ: ಶ್ರೀ ಅಮಿತ್ ಶಾ
ಯಾವುದೇ ಸಂಸ್ಥೆಯು ಸ್ಥಾಪನೆಯಾಗಿ 100 ವರ್ಷಗಳನ್ನು ಪೂರ್ಣಗೊಳಿಸಿದರೆ, ಆ ಸಂಸ್ಥೆಗೆ ಇಡೀ ಸಮಾಜದ ಬೆಂಬಲ ದೊರೆತಿದೆ ಎಂದು ಹೇಳಬಹುದು
ಇಂದಿನ ಪೀಳಿಗೆ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡುವ ಅಗತ್ಯವಿಲ್ಲ, ಬದಲಿಗೆ ಅವರು ದೇಶಕ್ಕಾಗಿ ಬದುಕಬೇಕು, ನಮ್ಮ ಜೀವನದುದ್ದಕ್ಕೂ ನಾವು ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹವನ್ನು ಹೊಂದಿರಬೇಕು
ಪಟೇಲ್ ಸಮುದಾಯವರು ಕಠಿಣ ಪರಿಶ್ರಮಿಗಳು. ಶಿಕ್ಷಣ, ವ್ಯಾವಹಾರಿಕ ಚಾತುರ್ಯ, ಧೈರ್ಯ ಮತ್ತು ಸಮಾಜವನ್ನು ಒಂದಾಗಿ ಮುನ್ನಡೆಸುವಂತಹ ಗುಣಗಳನ್ನು ಹೊಂದಿದ್ದಾರೆ. ಇದು ಅವರನ್ನು, ವಿಶೇಷವಾಗಿ ಕಡ್ವಾ ಪಾಟೀದಾರ್ ಸಮುದಾಯವನ್ನು ಬಹಳ ಮುಂದೆ ಕರೆದೊಯ್ದಿದೆ
ಪಟೇಲ್ ಸಮುದಾಯವು ತನ್ನನ್ನು ಮತ್ತು ಇಡೀ ಸಮಾಜವನ್ನು ಅಭಿವೃದ್ಧಿಪಡಿಸುವ ಮೂಲಕ ಗುಜರಾತ್ ಮತ್ತು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ
ತನಗೆ ತಾನು ಒಳ್ಳೆಯದನ್ನು ಮಾಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಆದರೆ, ಇತರರಿಗೂ ಪ್ರಯೋಜನವಾಗುವ ಸ್ವ-ಕಲ್ಯಾಣದ ಮಾರ್ಗವನ್ನು ಯಾರೇ ಆಗಲಿ ಆರಿಸಿಕೊಳ್ಳಬೇಕು
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿಯನ್ನು ಗೊತ್ತುಪಡಿಸಿಕೊಳ್ಳಬೇಕು ಮತ್ತು ಅಡ್ಡದಾರಿಗಳನ್ನು ಹಿಡಿಯದೆ ಆ ಗುರಿಗಳನ್ನು ಸಾಧಿಸಲು ಶ್ರಮಿಸಬೇಕು
Posted On:
07 JUL 2024 4:46PM by PIB Bengaluru
ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ʻಅಮೀನ್ ಪಿಜೆಕೆಪಿ ವಿದ್ಯಾರ್ಥಿ ಭವನʼವನ್ನು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಅಮಿತ್ ಶಾ ಅವರು ಅಹ್ಮದಾಬಾದ್‌ನಲ್ಲಿ ಆಧುನಿಕ ʻಎಸ್‌ಎಲ್‌ಐಎಂಎಸ್ (SLiMS) ಮಲ್ಟಿಸ್ಪೆಷಾಲಿಟಿ ಆಸ್ಪತ್ರೆʼಯನ್ನೂ ಉದ್ಘಾಟಿಸಿದರು.
ಇದಕ್ಕೂ ಮುನ್ನ ಶ್ರೀ ಅಮಿತ್ ಶಾ ಅವರು ಅಹ್ಮದಾಬಾದ್‌ನ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾರತಿ ನೆರವೇರಿಸಿದರು.
ಈ ಬಗ್ಗೆ ʻಎಕ್ಸ್ʼ ವೇದಿಕೆಯಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವರು, ಮಹಾಪ್ರಭು ಜಗನ್ನಾಥನ ರಥಯಾತ್ರೆಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. "ಮಹಾಪ್ರಭು ಜಗನ್ನಾಥನ ರಥಯಾತ್ರೆಯು ಭಾರತೀಯ ಸಾಂಸ್ಕೃತಿಕ ಪರಂಪರೆ ಮತ್ತು ಸಮೃದ್ಧಿಯನ್ನು ಸಂರಕ್ಷಿಸಲು ಹಾಗೂ ಹೊಸ ಪ್ರಗತಿಯನ್ನು ಒದಗಿಸಲು ಅತ್ಯಂತ ಶುಭ ಸಂದರ್ಭವಾಗಿದೆ. ದೇಶದ ಕೋಟ್ಯಂತರ ಭಕ್ತರು ಅತ್ಯಂತ ಭಕ್ತಿಯಿಂದ ಇದನ್ನು ಆಚರಿಸುತ್ತಾರೆ. ಭಾರತೀಯ ಸಂಸ್ಕೃತಿಯು ವೈವಿಧ್ಯಮಯ ಸ್ವರೂಪದ್ದಾಗಿದ್ದು, ಆಚರಣೆಗಳು ಮತ್ತು ಆಧ್ಯಾತ್ಮಿಕತೆಯು ಅದರ ಗುಣಲಕ್ಷಣಗಳಾಗಿವೆ ಎಂಬುದನ್ನು ಈ ಯಾತ್ರೆಯು ಸಂಕೇತಿಸುತ್ತದೆ. ಮಹಾಪ್ರಭುವಿನ ರಥಯಾತ್ರೆಯ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ಎಲ್ಲರ ಕಲ್ಯಾಣ ಮತ್ತು ಪ್ರಗತಿಗಾಗಿ ಮಹಾಪ್ರಭು ಜಗನ್ನಾಥ, ವೀರ ಬಲಭದ್ರ ಮತ್ತು ಮಾತಾ ಸುಭದ್ರಾ ಅವರನ್ನು ಪ್ರಾರ್ಥಿಸುತ್ತೇನೆ," ಎಂದು ಅಮಿತ್ ಶಾ ಅವರು ಹೇಳಿದ್ದಾರೆ.
ʻಅಮೀನ್ ಪಿಜೆಕೆಪಿ ವಿದ್ಯಾರ್ಥಿ ಭವನʼವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಶ್ರೀ ಅಮಿತ್ ಶಾ, ಒಂದು ಸಂಸ್ಥೆಯು ಸ್ಥಾಪನೆಯಾಗಿ 100 ವರ್ಷಗಳನ್ನು ಪೂರ್ಣಗೊಳಿಸಿದರೆ, ಆ ಸಂಸ್ಥೆಗೆ ಇಡೀ ಸಮಾಜದ ಬೆಂಬಲವಿದೆ ಎಂದು ಹೇಳಬಹುದು. ಹಾಗಿದ್ದಾಗ ಮಾತ್ರ ಅದು 100 ವರ್ಷಗಳನ್ನು ಪೂರ್ಣಗೊಳಿಸಲು ಸಾಧ್ಯ ಎಂದರು. ಈ ಸಂಸ್ಥೆಯು 92 ವರ್ಷಗಳಿಂದ ಸಾವಿರಾರು ಮಕ್ಕಳ ಜೀವನದಲ್ಲಿ ನಿರಂತರವಾಗಿ ಜ್ಞಾನದ ದೀಪವನ್ನು ಬೆಳಗಿದೆ ಮತ್ತು ಈ ಹಾಸ್ಟೆಲ್ ಗುಜರಾತ್ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದ ಅನೇಕ ವ್ಯಕ್ತಿಗಳನ್ನು ನೀಡಿದೆ ಎಂದು ಅವರು ಹೇಳಿದರು. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ, ನೀವು ಅವುಗಳನ್ನು ನಗು ಮತ್ತು ದೃಢನಿಶ್ಚಯದಿಂದ ಎದುರಿಸಿದರೆ, ಎಲ್ಲಾ ತೊಂದರೆಗಳು ತಾವಾಗಿಯೇ ದೂರವಾಗುತ್ತವೆ ಎಂದು ಅಮಿತ್ ಶಾ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂಸ್ಥೆಯು ಗುಜರಾತ್ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅನೇಕ ಮಹಾನ್ ವ್ಯಕ್ತಿಗಳನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಂದು ನಾವೆಲ್ಲರೂ ಕುಳಿತಿರುವ ಈ ಸ್ಥಳದಲ್ಲಿ, ಸರ್ದಾರ್ ಪಟೇಲ್ ಅವರು ಒಮ್ಮೆ ತಮ್ಮ ದಿನಗಳನ್ನು ಕಳೆದಿದ್ದರು ಮತ್ತು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದರು ಎಂದು ಅವರು ಸ್ಮರಿಸಿದರು. ಪ್ರತಿಯೊಂದು ಸ್ಥಳವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುತ್ತದೆ ಮತ್ತು ಆ ನೆಲದೊಂದಿಗಿನ ಸಂಪರ್ಕವು ಆ ಸಾಂಸ್ಕೃತಿಕ ಮೌಲ್ಯಗಳನ್ನು ನಮ್ಮಲ್ಲೂ ಬೆಳೆಸುತ್ತದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಸರ್ದಾರ್ ಪಟೇಲ್ ಅವರಂತಹ ಮಹಾನ್ ವ್ಯಕ್ತಿ ಸ್ವಾತಂತ್ರ್ಯ ಚಳವಳಿಗೆ ಇಲ್ಲಿಂದ ದೊಡ್ಡ ಕೊಡುಗೆ ನೀಡಿದ್ದಾರೆ ಎಂಬುದನ್ನು ಇಲ್ಲಿಗೆ ಬರುವ ವಿದ್ಯಾರ್ಥಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶ್ರೀ ಶಾ ಹೇಳಿದರು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಅಗತ್ಯವಿಲ್ಲ, ಬದಲಿಗೆ, ಅವರು ದೇಶಕ್ಕಾಗಿ ಬದುಕಬೇಕಾಗಿದೆ ಎಂದು ಅಮಿತ್ ಶಾ ಹೇಳಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನೇ ಮಾಡಿದರೂ ಅದನ್ನು ದೇಶಕ್ಕಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು. ನಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹವನ್ನು ನಾವು ಹೊಂದಿರಬೇಕು ಎಂದು ಅವರು ಸಲಹೆ ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ಈ ವಿದ್ಯಾರ್ಥಿ ಭವನದಲ್ಲಿ ಸುಮಾರು 1000 ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉನ್ನತ ಶಿಕ್ಷಣದ ಸೌಲಭ್ಯವಿಲ್ಲದ ಪ್ರದೇಶಗಳ ವಿದ್ಯಾರ್ಥಿಗಳು ಸಹ ಇಲ್ಲಿಗೆ ಬಂದು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ, ಇದು ಅವರ ಜೀವನವನ್ನು ಪ್ರಬುದ್ಧಗೊಳಿಸುತ್ತದೆ ಎಂದು ಅವರು ಹೇಳಿದರು. ಗುಜರಾತ್ ಅಭಿವೃದ್ಧಿಗೆ ಕಡ್ವಾ ಪಟೇಲ್ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದರು. ನಾವು ಗುಜರಾತ್ ಮತ್ತು ಪಟೇಲ್ ಸಮುದಾಯದ ಅಭಿವೃದ್ಧಿಯ ನಕ್ಷೆಯನ್ನು ನೋಡುವುದಾದರೆ, ಎರಡೂ ಸಮಾನಾಂತರವಾಗಿ ಮುಂದುವರಿಯುತ್ತಿವೆ ಎಂದು ಶ್ರೀ ಶಾ ಹೇಳಿದರು. ಪಟೇಲ್ ಸಮುದಾಯದ ಅಭಿವೃದ್ಧಿಯ ಜೊತೆಗೆ ಗುಜರಾತ್ ಕೂಡ ಅಭಿವೃದ್ಧಿಯಾಗಿದೆ ಎಂದರು. ಪಟೇಲ್ ಸಮುದಾಯವು ಕಠಿಣ ಪರಿಶ್ರಮಿ ಸಮುದಾಯವಾಗಿದೆ. ಶಿಕ್ಷಣ, ವ್ಯಾವಹಾರಿಕ ಚಾತುರ್ಯ, ಧೈರ್ಯ ಮತ್ತು ಸಮಾಜವನ್ನು ಒಗ್ಗೂಡಿಸುವ ಮೂಲಕ ಮುಂದುವರಿಯುವಂತಹ ಗುಣಗಳನ್ನು ಈ ಸಮುದಾಯವು ಹೊಂದಿದೆ. ಇದು ಇಡೀ ಪಟೇಲ್ ಸಮುದಾಯವನ್ನು, ಅದರಲ್ಲೂ ವಿಶೇಷವಾಗಿ ಕಡ್ವಾ ಪಾಟೀದಾರ್ ಸಮುದಾಯವನ್ನು ಬಹಳ ಮುಂದೆ ಕೊಂಡೊಯ್ದಿದೆ ಎಂದು ಅವರು ಹೇಳಿದರು. ಈ ಸಮುದಾಯವು ಗುಜರಾತ್ ಮತ್ತು ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ತನ್ನನ್ನು ಮತ್ತು ಸಮಾಜವನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.
ಇಲ್ಲಿಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳದಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಪಡೆಯುತ್ತಾರೆ, ಇದು ಅವರ ಅದೃಷ್ಟ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ತನ್ನ ಸ್ವಂತ ಕಲ್ಯಾಣದ ಬಗ್ಗೆ ಯೋಚಿಸುವುದು ಮತ್ತು ತನ್ನ ಸಂತೋಷವನ್ನು ಹುಡುಕಿಕೊಂಡು ಹೋಗುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಆದರೆ ಯಾವುದೆ ವ್ಯಕ್ತಿಯು ಇತರರಿಗೂ ಪ್ರಯೋಜನಕಾರಿಯಾಗುವಂತಹ ಸ್ವ-ಕಲ್ಯಾಣ ಮಾರ್ಗವನ್ನು ಆರಿಸಿಕೊಂಡರೆ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿಯನ್ನು ಗೊತ್ತುಪಡಿಸಿಕೊಳ್ಳಬೇಕು ಮತ್ತು ಅದನ್ನು ಸಾಧಿಸಲು ಪ್ರಯತ್ನಗಳನ್ನು ಮಾಡುವುದು ಬಹಳ ಮುಖ್ಯ. ಜೀವನದಲ್ಲಿ ಪ್ರತಿಯೊಬ್ಬರೂ ಶ್ರಮಪಡಬೇಕು, ಯಾರೊಬ್ಬರೂ ಎಂದಿಗೂ ಅಡ್ಡ ಹಾದಿ ತುಳಿಯಬಾರದು ಎಂದು ಶ್ರೀ ಅಮಿತ್ ಶಾ ಅವರು ಸಲಹೆ ನೀಡಿದರು.
*****
(Release ID: 2031457)
Visitor Counter : 51