ನೀತಿ ಆಯೋಗ
azadi ka amrit mahotsav

ನೀತಿ ಆಯೋಗದಿಂದ ‘ಸಂಪೂರ್ಣತಾ ಅಭಿಯಾನʼಕ್ಕೆ ಚಾಲನೆ


500 ಮಹತ್ವಾಕಾಂಕ್ಷಿ ತಾಲ್ಲೂಕುಗಳು ಮತ್ತು 112 ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ 12 ಪ್ರಮುಖ ಸಾಮಾಜಿಕ ವಲಯದ ಸೂಚಕಗಳಲ್ಲಿ ಸಂಪೂರ್ಣತೆಯನ್ನು ಸಾಧಿಸುವ ಗುರಿಯೊಂದಿಗೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ

ಜುಲೈ 4 ರಿಂದ ಸೆಪ್ಟೆಂಬರ್ 30, 2024 ರವರೆಗಿನ 3 ತಿಂಗಳ ಅಭಿಯಾನವು ಆರೋಗ್ಯ, ಪೋಷಣೆ, ಕೃಷಿ, ಸಾಮಾಜಿಕ ಅಭಿವೃದ್ಧಿ ಮತ್ತು ಶಿಕ್ಷಣದಂತಹ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ

Posted On: 04 JUL 2024 6:07PM by PIB Bengaluru

ನೀತಿ ಆಯೋಗವು ಆರಂಭಿಸಿರುವ 'ಸಂಪೂರ್ಣತಾ ಅಭಿಯಾನ'ವು ದೇಶಾದ್ಯಂತದ ನಾಗರಿಕರಿಂದ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಎಲ್ಲಾ 112 ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು 500 ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಚಾಲನಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. 4ನೇ ಜುಲೈನಿಂದ 30ನೇ ಸೆಪ್ಟೆಂಬರ್ 2024 ರವರೆಗೆ ನಡೆಯುವ ಈ ಮೂರು ತಿಂಗಳ ಅಭಿಯಾನವು ಎಲ್ಲಾ ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ 12 ಪ್ರಮುಖ ಸಾಮಾಜಿಕ ವಲಯದ ಸೂಚಕಗಳ ಶೇಕಡಾ 100 ರಷ್ಟು ಸಂಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಅಭಿಯಾನದ ಮೊದಲ ದಿನ ಜಮ್ಮು ಮತ್ತು ಕಾಶ್ಮೀರದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ಲಕ್ಷಾಂತರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಂಚೂಣಿ ಕಾರ್ಯಕರ್ತರು, ಸಮುದಾಯದ ಮುಖಂಡರು, ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು (ಬ್ಲಾಕ್ ಪ್ರಮುಖರು/ಸರಪಂಚರು) ಉತ್ಸಾಹದಿಂದ ಭಾಗವಹಿಸಿದ್ದರು.

ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ತಾಲ್ಲೂಕುಗಳು ಅಭಿಯಾನದ ಗುರಿಗಳನ್ನು ಈಡೇರಿಸಲು ಮತ್ತು ಗುರುತಿಸಲಾದ ಸೂಚಕಗಳ ಸಂಪೂರ್ಣತೆಯ ಪ್ರಗತಿಯನ್ನು ವೇಗಗೊಳಿಸುವ ಮೂಲಕ, ಅದರ ತತ್ವಗಳನ್ನು ಪುನರುಚ್ಚರಿಸುವ ಮೂಲಕ 'ಸಂಪೂರ್ಣತಾ ಪ್ರತಿಜ್ಞೆ' ಯನ್ನು ಕೈಗೊಂಡು 'ಸಂಪೂರ್ಣತಾ ಅಭಿಯಾನ'ಕ್ಕೆ ತಮ್ಮ ಬದ್ಧತೆಯನ್ನು ತೋರಿದವು. ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ರತ್ಲಾಮ್ ಮತ್ತು ಸಿಂಗ್ರೌಲಿಯಲ್ಲಿರುವ ಅಭಿಯಾನದ ಪ್ರಮುಖ ಸೂಚಕಗಳ ಮೇಲೆ ಒತ್ತು ನೀಡುವ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಂತೆಯೇ, ಉತ್ತರಾಖಂಡದ ಉಧಮ್ ಸಿಂಗ್ ನಗರ ಮತ್ತು ಹರಿಯಾಣದ ನುಹ್ ಜಿಲ್ಲಾ ಕೇಂದ್ರದಲ್ಲಿ ಸ್ಥಳೀಯರ ಭಾಗವಹಿಸುವಿಕೆಯ ನಡುವೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಬಲಕೋಟ ಮಂಡಲದಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದಲ್ಲಿ ಸ್ಥಳೀಯ ಜನರು ಅಪಾರ ಉತ್ಸಾಹದಿಂದ ಭಾಗವಹಿಸಿದರು. ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಬಾನ್ಸ್‌ಗಾಂವ್ ತಾಲ್ಲೂಕು ಮತ್ತು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ನಿರ್ಮಂಡ್ ತಾಲ್ಲೂಕಿನಲ್ಲಿ ನೂರಾರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಪ್ರಾದೇಶಿಕ ಆಹಾರದ ಪೌಷ್ಟಿಕಾಂಶವನ್ನು ಪ್ರದರ್ಶಿಸಿದರು. ‘ಸಂಪೂರ್ಣತಾ ಅಭಿಯಾನ’ವನ್ನು ಆಚರಿಸುವ ಮೀಸಲಾದ ಸೆಲ್ಫಿ ಬೂತ್‌ ಗಳಲ್ಲಿ ಸಂತೋಷದ ಮುಖಗಳು ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಸಂಪೂರ್ಣತಾ ಅಭಿಯಾನದ ಪ್ರಮುಖ ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳ ಬಗ್ಗೆ ಜಾಗೃತಿ ಮೂಡಿಸಲು ಕೆಲವು ಸ್ಥಳಗಳಲ್ಲಿ ಸಂಪೂರ್ಣತಾ ಯಾತ್ರೆಗಳನ್ನು ಆಯೋಜಿಸಲಾಯಿತು. ಆಂಧ್ರಪ್ರದೇಶದ ಪಾರ್ವತಿಪುರಂ ಮಾನ್ಯಂನ ಭಾಮಿನಿ ತಾಲ್ಲೂಕಿನಲ್ಲಿ ಶಾಲಾ ಮಕ್ಕಳು ಮತ್ತು ಎನ್‌ ಸಿ ಸಿ ಕೆಡೆಟ್‌ ಗಳು ಅಂತಹ ಒಂದು ಸಂಪೂರ್ಣತಾ ಯಾತ್ರೆಯಲ್ಲಿ ಒಗ್ಗೂಡಿದರು. ಹರ್ಯಾಣದ ಚಾರ್ಖಿ ದಾದ್ರಿಯ ಬಧ್ರಾದಲ್ಲಿ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು. ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿನಾಟಕ, ಪ್ರದರ್ಶನ ಮಳಿಗೆಗಳು, ಮಣ್ಣಿನ ಆರೋಗ್ಯ ಕಾರ್ಡ್‌ ಗಳ ವಿತರಣೆ ಇತ್ಯಾದಿಗಳು ಸೇರಿದ್ದವು.

ಈಶಾನ್ಯ ರಾಜ್ಯಗಳು ಕೂಡ ಅಭಿಯಾನದಲ್ಲಿ ತುಂಬು ಹೃದಯದಿಂದ ಭಾಗವಹಿಸಿದ್ದವು. ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಚೌನಾ ಮೇನ್ ಅವರು ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯ ಚೌಕಂ ತಾಲ್ಲೂಕಿನಲ್ಲಿ ಸಂಪೂರ್ಣತಾ ಅಭಿಯಾನಕ್ಕೆ ಚಾಲನೆ ನೀಡಿದರು. ನಾಗಾಲ್ಯಾಂಡ್‌ ನ ಕಿಫಿರೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶ್ರೀ ಸಿ ಕಿಪಿಲಿ ಸಂಗಟಂ ಅವರು ಚೆಂಡು ಉರುಳಿಸುವ ಮೂಲಕ ಚಾಲನೆ ನೀಡಿದರು.  ಅದೇ ರೀತಿ, ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಲಮ್ಕಾ ಸೌತ್ ಬ್ಲಾಕ್‌ ನಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕುರಿತು ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.

3 ತಿಂಗಳ ಅವಧಿಯ 'ಸಂಪೂರ್ಣತಾ ಅಭಿಯಾನ'ದ ಭಾಗವಾಗಿ, ಚುನಾಯಿತ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಎಲ್ಲಾ ಮಹತ್ವಾಕಾಂಕ್ಷಿ ತಾಲ್ಲೂಕುಗಳು ಮತ್ತು ಜಿಲ್ಲೆಗಳಾದ್ಯಂತ ಶೇಕಡಾ 100ರಷ್ಟು ಸಂಪೂರ್ಣತೆಗಾಗಿ ಗುರುತಿಸಲಾದ 12 ಥೀಮ್‌ ಗಳನ್ನು ಕುರಿತ ಗ್ರಾಮ ಸಭೆಗಳು, ಬೀದಿನಾಟಕ, ಪೌಷ್ಟಿಕ ಆಹಾರ ಮೇಳ, ಆರೋಗ್ಯ ಶಿಬಿರಗಳು, ಐಸಿಡಿಎಸ್ ಶಿಬಿರಗಳು, ಜಾಗೃತಿ ಮೆರವಣಿಗೆಗಳು, ಪ್ರದರ್ಶನಗಳು, ಪೋಸ್ಟರ್ ತಯಾರಿಕೆ ಮತ್ತು ಕವನ ಸ್ಪರ್ಧೆಗಳಳನ್ನು ಆಯೋಜಿಸುತ್ತಾರೆ.

ನೀತಿ ಆಯೋಗದ ಅಧಿಕಾರಿಗಳು ಮತ್ತು ಯುವ ವೃತ್ತಿಪರರು ಅಭಿಯಾನವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಮತ್ತು ಕಾರ್ಯಗತಗೊಳಿಸಲು ಸ್ಥಳೀಯ ಆಡಳಿತಕ್ಕೆ  ಮಾರ್ಗದರ್ಶನ ಮಾಡಲು ಮತ್ತು ಬೆಂಬಲಿಸಲು 300 ಜಿಲ್ಲೆಗಳಲ್ಲಿ ವೈಯಕ್ತಿಕವಾಗಿ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಸಹಯೋಗವು ಅಭಿಯಾನದ ಉದ್ದೇಶಗಳನ್ನು ಸಾಧಿಸುವ ಪ್ರಯತ್ನಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಸ್ಪರ್ಧಾತ್ಮಕ ಮತ್ತು ಸಹಕಾರಿ ಫೆಡರಲಿಸಂನ ಮನೋಭಾವವನ್ನು ಬಲಪಡಿಸುತ್ತದೆ.

'ಸಂಪೂರ್ಣತಾ ಅಭಿಯಾನ'ದ ಕೇಂದ್ರೀಕೃತ ಪ್ರದೇಶಗಳು:

ಮಹತ್ವಾಕಾಂಕ್ಷಿ ತಾಲ್ಲೂಗಳ KPIಗಳು:

1.         ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ಆರೈಕೆ (ANC) ಗಾಗಿ ನೋಂದಾಯಿಸಲಾದ ಗರ್ಭಿಣಿ ಮಹಿಳೆಯರ ಶೇಕಡಾವಾರು ಸಂಖ್ಯೆ

2.         ತಾಲ್ಲೂಕಿನಲ್ಲಿ ಉದ್ದೇಶಿತ ಜನಸಂಖ್ಯೆಯಲ್ಲಿ ಮಧುಮೇಹವನ್ನು ಪರೀಕ್ಷಿಸಿದ ವ್ಯಕ್ತಿಗಳ ಶೇಕಡಾವಾರು ಸಂಖ್ಯೆ

3.         ತಾಲ್ಲೂಕಿನಲ್ಲಿ ಉದ್ದೇಶಿತ ಜನಸಂಖ್ಯೆಯಲ್ಲಿ ಅಧಿಕ ರಕ್ತದೊತ್ತಡಕ್ಕಾಗಿ ಪರೀಕ್ಷಿಸಲ್ಪಟ್ಟ ವ್ಯಕ್ತಿಗಳ ಶೇಕಡಾವಾರು ಸಂಖ್ಯೆ

4.         ಐಸಿಡಿಎಸ್ ಕಾರ್ಯಕ್ರಮದಡಿಯಲ್ಲಿ ಪೂರಕ ಪೋಷಣೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವ ಗರ್ಭಿಣಿಯರಲ್ಲಿ ಶೇಕಡಾವಾರು ಸಂಖ್ಯೆ

5.         ಮಣ್ಣಿನ ಮಾದರಿ ಸಂಗ್ರಹಣೆ ಗುರಿಯಲ್ಲಿ ಮಣ್ಣಿನ ಆರೋಗ್ಯ ಕಾರ್ಡ್‌ಗಳ ಶೇಕಡಾವಾರು ಸಂಖ್ಯೆ

6.         ತಾಲ್ಲೂಕಿನಲ್ಲಿರುವ ಒಟ್ಟು ಸ್ವಸಹಾಯ ಗುಂಪುಗಳಲ್ಲಿ ಆವರ್ತ ನಿಧಿಯನ್ನು ಪಡೆದ ಸ್ವಸಹಾಯ ಗುಂಪುಗಳ ಶೇಕಡಾವಾರು ಸಂಖ್ಯೆ

ಮಹತ್ವಾಕಾಂಕ್ಷಿ ಜಿಲ್ಲೆಗಳ KPI ಗಳು:

1.         ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ಆರೈಕೆ (ANC) ಗಾಗಿ ನೋಂದಾಯಿಸಲಾದ ಗರ್ಭಿಣಿ ಮಹಿಳೆಯರ ಶೇಕಡಾವಾರು ಸಂಖ್ಯೆ

2.         ಐಸಿಡಿಎಸ್ ಕಾರ್ಯಕ್ರಮದಡಿಯಲ್ಲಿ ಪೂರಕ ಪೋಷಣೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವ ಗರ್ಭಿಣಿಯರ ಶೇಕಡಾವಾರು ಸಂಖ್ಯೆ

3.         ಸಂಪೂರ್ಣವಾಗಿ ಲಸಿಕೆ ಪಡೆದ ಮಕ್ಕಳ ಶೇಕಡಾವಾರು (9-11 ತಿಂಗಳುಗಳು) ಸಂಖ್ಯೆ (BCG+DPT3+OPV3+ದಡಾರ 1)

                        4.         ವಿತರಿಸಲಾದ ಮಣ್ಣಿನ ಆರೋಗ್ಯ ಕಾರ್ಡ್‌ಗಳ ಸಂಖ್ಯೆ

                        5.         ಮಾಧ್ಯಮಿಕ ಹಂತದಲ್ಲಿ ವಿದ್ಯುಚ್ಛಕ್ತಿ ಹೊಂದಿರುವ ಶಾಲೆಗಳ ಶೇಕಡಾವಾರು ಸಂಖ್ಯೆ

6.         ಶೈಕ್ಷಣಿಕ ಅವಧಿ ಪ್ರಾರಂಭವಾದ 1 ತಿಂಗಳೊಳಗೆ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಒದಗಿಸುವ ಶಾಲೆಗಳ ಶೇಕಡಾವಾರು ಸಂಖ್ಯೆ

 

*****


(Release ID: 2031022) Visitor Counter : 66