ಪ್ರಧಾನ ಮಂತ್ರಿಯವರ ಕಛೇರಿ

30.06.2024ರಂದು ‘ಮನ್ ಕಿ ಬಾತ್’ನ 111ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 30 JUN 2024 11:45AM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೆ, ನಮಸ್ಕಾರಫೆಬ್ರವರಿಯಿಂದ ನಾವೆಲ್ಲರೂ ಬಹಳ ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದೇ ಬಿಟ್ಟಿತು. ಇಂದು ಮತ್ತೊಮ್ಮೆ ‘ಮನ್ ಕಿ ಬಾತ್’ ಮೂಲಕ ನನ್ನ ಕುಟುಂಬ ಸದಸ್ಯರಾದ ನಿಮ್ಮೆಲ್ಲರ ನಡುವೆ ಬಂದಿದ್ದೇನೆ. ಬಹಳ ಸುಂದರವಾದ ಮಾತಿದೆ - 'ಇತಿ ವಿದಾ ಪುನರ್ಮಿಳನಾಯ', ಅದರ ಅರ್ಥವೂ ಅಷ್ಟೇ ಸುಂದರವಾಗಿದೆ, ಮತ್ತೊಮ್ಮೆ ಭೇಟಿಯಾಗಲು ನಾನು ನಿಮ್ಮಿಂದ ರಜೆ ತೆಗೆದುಕೊಂಡಿದ್ದೆ. ಇದೇ ಭಾವನೆಯಿಂದ ಫೆಬ್ರವರಿಯಲ್ಲಿ ಚುನಾವಣಾ ಫಲಿತಾಂಶದ ನಂತರ ಮತ್ತೆ ಭೇಟಿಯಾಗುತ್ತೇನೆ ಎಂದು ಹೇಳಿದ್ದೆ. ಇಂದು, 'ಮನ್ ಕಿ ಬಾತ್' ನೊಂದಿಗೆ, ನಾನು ಮತ್ತೆ ನಿಮ್ಮ ನಡುವೆ ಇದ್ದೇನೆ. ನೀವೆಲ್ಲರೂ ಕ್ಷೇಮವಾಗಿದ್ದೀರಿ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದೀರಿ ಎಂದು ನಾನು ಭಾವಿಸುತ್ತೇ. ಈಗ ಮುಂಗಾರು ಮಳೆಯೂ ಬಂದಿದೆ. ಮುಂಗಾರು ಮಳೆ ಬಂದರೆ ಮನಸ್ಸಿಗೂ ಮುದವಾಗುತ್ತದೆ. ಇಂದಿನಿಂದ ಮತ್ತೊಮ್ಮೆ ‘ಮನ್ ಕಿ ಬಾತ್’ ನಲ್ಲಿ ಸಮಾಜದಲ್ಲಿ ಬದಲಾವಣೆ ತರುತ್ತಿರುವ ದೇಶವಾಸಿಗಳ ಬಗ್ಗೆ ಮಾತನಾಡುತ್ತೇವೆ. ದೇಶದಲ್ಲಿ ಅವರ ಪ್ರಯತ್ನದ ಮೂಲಕ. ನಾವು ನಮ್ಮ ಶ್ರೀಮಂತ ಸಂಸ್ಕೃತಿ, ನಮ್ಮ ವೈಭವದ ಇತಿಹಾಸ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವ ನಮ್ಮ ಪ್ರಯತ್ನಗಳ ಬಗ್ಗೆ ಚರ್ಚಿಸುತ್ತೇವೆ.

ಸ್ನೇಹಿತರೆ, ಫೆಬ್ರವರಿಯಿಂದ ಇಲ್ಲಿಯ ತನಕ, ತಿಂಗಳ ಕೊನೆಯ ಭಾನುವಾರ ಬಂದಾಗ, ನಾನು ನಿಮ್ಮೊಂದಿಗೆ ಈ ಸಂಭಾಷಣೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಇಷ್ಟು ತಿಂಗಳುಗಳಲ್ಲಿ ನೀವು ನನಗೆ ಲಕ್ಷಗಟ್ಟಲೆ ಸಂದೇಶಗಳನ್ನು ಕಳುಹಿಸಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.

'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.

ಸ್ನೇಹಿತರೆ, ನಮ್ಮ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ್ದಕ್ಕಾಗಿ ನಾನು ಇಂದು ದೇಶವಾಸಿಗಳಿಗೆ ಧನ್ಯವಾದ ಹೇಳುತ್ತೇನೆ. 2024ರ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣೆಯಾಗಿದೆ.  65 ಕೋಟಿ ಜನರು ಮತ ಚಲಾಯಿಸಿದ ಇಷ್ಟು ಬಹುದೊಡ್ಡ ಚುನಾವಣೆ ಜಗತ್ತಿನ ಯಾವ ದೇಶದಲ್ಲೂ ನಡೆದಿಲ್ಲ. ಇದಕ್ಕಾಗಿ ನಾನು ಚುನಾವಣಾ ಆಯೋಗವನ್ನು ಮತ್ತು ಮತದಾನ ಪ್ರಕ್ರಿಯೆಯಲ್ಲಿ ತೊಡಗಿರುವ ದೇಶದ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ. ನನ್ನ ಪ್ರೀತಿಯ ದೇಶವಾಸಿಗಳೆ, ಇಂದು ಜೂನ್ 30, ಬಹಳ ಮುಖ್ಯವಾದ ದಿನ. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಈ ದಿನವನ್ನು 'ಹೂಲ್ ದಿವಸ್' ಆಗಿ ಆಚರಿಸುತ್ತಾರೆ. ಈ ದಿನವು ವಿದೇಶಿ ದೊರೆಗಳ ದೌರ್ಜನ್ಯವನ್ನು ಬಲವಾಗಿ ವಿರೋಧಿಸಿದ ವೀರ ಸಿಧು-ಕನ್ಹು ಅವರ ಕೆಚ್ಚೆದೆಯ ಧೈರ್ಯಕ್ಕೆ ಸಂಬಂಧಿಸಿದೆ. ವೀರ್ ಸಿಧು-ಕನ್ಹು ಸಹಸ್ರಾರು ಸಂತಾಲ್ ದೇಶಬಾಂಧವರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ತಮ್ಮೆಲ್ಲ ಶಕ್ತಿಯಿಂದ ಹೋರಾಡಿದರು. ಇದು ಯಾವಾಗ ನಡೆಯಿತು ಎಂದು ನಿಮಗೆ ತಿಳಿದಿದೆಯೇ? ಇದು 1855ರಲ್ಲಿ ಜರುಗಿತು, ಅಂದರೆ 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ 2 ವರ್ಷಗಳ ಮೊದಲು ಇದು ಸಂಭವಿಸಿತು. ನಂತರ, ಜಾರ್ಖಂಡ್‌ನ ಸಂತಾಲ್ ಪರಗಣದಲ್ಲಿ, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವಿದೇಶಿ ಆಡಳಿತಗಾರರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿದರು.

ಬ್ರಿಟಿಷರು ನಮ್ಮ ಸಂತಾಲ್ ಸಹೋದರ ಸಹೋದರಿಯರ ಮೇಲೆ ಅನೇಕ ದೌರ್ಜನ್ಯಗಳನ್ನು ನಡೆಸಿದರು, ಅವರ ಮೇಲೆ ಅನೇಕ ರೀತಿಯ ನಿರ್ಬಂಧಗಳನ್ನು ವಿಧಿಸಿದರು. ವೀರ್ ಸಿಧು ಮತ್ತು ಕನ್ಹು ಈ ಹೋರಾಟದಲ್ಲಿ ಅದ್ಭುತ ಶೌರ್ಯ ಪ್ರದರ್ಶಿಸಿ ಹುತಾತ್ಮರಾದರು. ಜಾರ್ಖಂಡ್ ನೆಲದ ಈ ಅಮರ ಪುತ್ರರ ಅತ್ಯುನ್ನತ ತ್ಯಾಗ ಇಂದಿಗೂ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ. ಸಂತಾಲಿ ಭಾಷೆಯಲ್ಲಿ ಅವರಿಗೆ ಸಮರ್ಪಿತವಾದ ಹಾಡಿನ ಆಯ್ದ ಭಾಗವನ್ನು ನಾವು ಕೇಳೋಣ –

#ಧ್ವನಿ ಸುರುಳಿ(ಆಡಿಯೋ ಕ್ಲಿಪ್)#

ನನ್ನ ಆತ್ಮೀಯ ಸ್ನೇಹಿತರೆ, ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದ ಸಂಬಂಧ ಯಾವುದು ಎಂದು ನಾನು ನಿಮ್ಮನ್ನು ಕೇಳಿದರೆ, ನೀವು ಖಂಡಿತವಾಗಿಯೂ ಹೇಳುವಿರಿ - “ಮಾತೆ”, ತಾಯಿ. ನಮ್ಮೆಲ್ಲರ ಜೀವನದಲ್ಲಿ ತಾಯಿಯು ಅತ್ಯುನ್ನತ ಸ್ಥಾನ ಹೊಂದಿದ್ದಾಳೆ. ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಿದ ನಂತರವೂ ತಾಯಿ ತನ್ನ ಮಗುವನ್ನು ಪೋಷಿಸುತ್ತಾಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನ ಮೇಲೆ ಮಿತಿಯಿಲ್ಲದ ಪ್ರೀತಿಯನ್ನು ತೋರಿಸುತ್ತಾಳೆ. ಜನ್ಮ ನೀಡಿದ ತಾಯಿಯ ಈ ಪ್ರೀತಿ ನಮ್ಮೆಲ್ಲರ ಋಣದಂತೆ ಯಾರಿಂದಲೂ ತೀರಿಸಲಾಗದು. ನಾನು ಯೋಚಿಸುತ್ತಿದ್ದೆ... ನಾವು ನಮ್ಮ ತಾಯಿಗೆ ಏನನ್ನೂ ಕೊಡಲು ಸಾಧ್ಯವಿಲ್ಲ, ಆದರೆ, ನಾವು ಬೇರೆ ಏನಾದರೂ ಮಾಡಬಹುದೇ? ಈ ಚಿಂತನೆಯ ಮೂಲಕ ಈ ವರ್ಷ ವಿಶ್ವ ಪರಿಸರ ದಿನದಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಹೆಸರು - 'ಏಕ್ ಪೆಡ್ ಮಾ ಕೆ ನಾಮ್'. ಅಮ್ಮನ ಹೆಸರಲ್ಲಿ ಗಿಡವನ್ನೂ ನೆಟ್ಟಿದ್ದೇನೆ. ನಾನು ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡಿದ್ದೇನೆ, ವಿಶ್ವದ ಎಲ್ಲಾ ದೇಶಗಳ ಜನರು ತಮ್ಮ ತಾಯಿಯೊಂದಿಗೆ ಅಥವಾ ಅವರ ಹೆಸರಿನಲ್ಲಿ ಸಸಿ ನೆಡಬೇಕು.

ತಾಯಿಯ ನೆನಪಿಗಾಗಿ ಅಥವಾ ಅವಳ ಗೌರವಾರ್ಥವಾಗಿ ಸಸಿಗಳನ್ನು ನೆಡುವ ಅಭಿಯಾನವು ವೇಗವಾಗಿ ಸಾಗುತ್ತಿರುವುದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ತಾಯಂದಿರೊಂದಿಗೆ ಅಥವಾ ಅವರ ಫೋಟೊಗಳೊಂದಿಗೆ ಸಸಿಗಳನ್ನು ನೆಡುವ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಒಬ್ಬರ ತಾಯಿಗಾಗಿ ಸಸಿಗಳನ್ನು ನೆಡುತ್ತಾರೆ - ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಕೆಲಸ ಮಾಡುವ ಮಹಿಳೆಯಾಗಿರಲಿ ಅಥವಾ ಗೃಹಿಣಿಯಾಗಿರಲಿ. ಈ ಅಭಿಯಾನವು ತಾಯಂದಿರ ಬಗ್ಗೆ ನೈಜ ಪ್ರೀತಿ ವ್ಯಕ್ತಪಡಿಸಲು ನಮಗೆ ಎಲ್ಲರಿಗೂ ಸಮಾನ ಅವಕಾಶ ಒದಗಿಸಿದೆ. ಅವರು ತಮ್ಮ ಚಿತ್ರಗಳನ್ನು #Plant4Mother ಮತ್ತು #Ek_Ped_Maa_Ke_Naamನಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೆ ಸ್ಫೂರ್ತಿ ನೀಡುತ್ತಿದ್ದಾರೆ.

ಸ್ನೇಹಿತರೆ, ಈ ಅಭಿಯಾನವು ನಮಗೆ ಇನ್ನೊಂದು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಭೂಮಿಯೂ ನಮಗೆ ತಾಯಿ ಇದ್ದಂತೆ. ಭೂಮಿ ತಾಯಿ ನಮ್ಮೆಲ್ಲರ ಜೀವನಕ್ಕೆ ಆಧಾರ. ಹಾಗಾಗಿ ಭೂಮಿ ತಾಯಿಯ ಬಗ್ಗೆಯೂ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ತಾಯಿಯ ಹೆಸರಿನಲ್ಲಿ ಸಸಿಗಳನ್ನು ನೆಡುವ ಅಭಿಯಾನವು ನಮ್ಮ ತಾಯಿಯನ್ನು ಗೌರವಿಸುವುದಲ್ಲದೆ, ಭೂಮಿ ತಾಯಿಯನ್ನು ರಕ್ಷಿಸುತ್ತದೆ. ಕಳೆದ ದಶಕದಲ್ಲಿ, ಸಾಮೂಹಿಕ ಪ್ರಯತ್ನಗಳ ಮೂಲಕ, ಭಾರತದಲ್ಲಿ ಅಭೂತಪೂರ್ವವಾಗಿ ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ. ಅಮೃತ ಮಹೋತ್ಸವ ಸಮಯದಲ್ಲಿ, ದೇಶಾದ್ಯಂತ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಈಗ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೆ, ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ತನ್ನ ವರ್ಣಗಳನ್ನು ವೇಗವಾಗಿ ಹರಡುತ್ತಿದೆ. ಅಲ್ಲದೆ, ಈ ಮಳೆಗಾಲದಲ್ಲಿ ಪ್ರತಿ ಮನೆಯಲ್ಲೂ ‘ಛತ್ರಿ’ಗಾಗಿ ಹುಡುಕಾಟ ಶುರುವಾಗಿದೆ. ಇಂದು 'ಮನ್ ಕಿ ಬಾತ್' ನಲ್ಲಿ ನಾನು ನಿಮಗೆ ಒಂದು ವಿಶೇಷ ರೀತಿಯ ಛತ್ರಿಯ ಬಗ್ಗೆ ಹೇಳಲು ಬಯಸುತ್ತೇನೆ. ಈ ಕೊಡೆಗಳನ್ನು ನಮ್ಮ ಕೇರಳದಲ್ಲಿ ತಯಾರಿಸಲಾಗುತ್ತದೆ.

ಒಂದು ರೀತಿಯಲ್ಲಿ ಕೇರಳದ ಸಂಸ್ಕೃತಿಯಲ್ಲಿ ಕೊಡೆಗಳಿಗೆ ವಿಶೇಷವಾದ ಮಹತ್ವವಿದೆ. ಛತ್ರಿಗಳು ಅಲ್ಲಿನ ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಮುಖ ಭಾಗವಾಗಿವೆ. ಆದರೆ ನಾನು ಹೇಳುತ್ತಿರುವ ಛತ್ರಿ 'ಕರ್ತುಂಬಿ ಅಂಬ್ರೆಲಾ' ಮತ್ತು ಇದನ್ನು ಕೇರಳದ ಅಟ್ಟಪ್ಪಾಡಿಯಲ್ಲಿ ತಯಾರಿಸುಲಾಗುತ್ತದೆ. ಈ ವರ್ಣರಂಜಿತ ಛತ್ರಿಗಳು ಅದ್ಭುತವಾಗಿವೆ. ವಿಶೇಷವೆಂದರೆ, ಈ ಕೊಡೆಗಳನ್ನು ನಮ್ಮ ಕೇರಳದ ಬುಡಕಟ್ಟು ಸಹೋದರಿಯರು ತಯಾರಿಸುತ್ತಾರೆ. ಇಂದು ದೇಶಾದ್ಯಂತ ಈ ಛತ್ರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳನ್ನು ಆನ್‌ಲೈನ್‌ನಲ್ಲೂ ಮಾರಾಟ ಮಾಡಲಾಗುತ್ತಿದೆ. ಈ ಛತ್ರಿಗಳನ್ನು 'ವಟ್ಟಲಕ್ಕಿ ಸಹಕಾರಿ ಫಾರ್ಮಿಂಗ್ ಸೊಸೈಟಿ' ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಈ ಸಮಾಜವನ್ನು ನಮ್ಮ ಮಹಿಳಾ ಶಕ್ತಿಯೇ ಮುನ್ನಡೆಸುತ್ತಿದೆ. ಮಹಿಳೆಯರ ನೇತೃತ್ವದಲ್ಲಿ ಅಟ್ಟಪ್ಪಾಡಿಯ ಬುಡಕಟ್ಟು ಸಮುದಾಯವು ಉದ್ಯಮಶೀಲತೆಯ ಅದ್ಭುತ ಉದಾಹರಣೆ ಪ್ರದರ್ಶಿಸಿದೆ. ಈ ಸೊಸೈಟಿಯು ಬಿದಿರು-ಕರಕುಶಲ ಘಟಕವನ್ನೂ ಸ್ಥಾಪಿಸಿದೆ. ಈ ಜನರು ಈಗ ಚಿಲ್ಲರೆ ಮಾರಾಟ ಮಳಿಗೆ ಮತ್ತು ಸಾಂಪ್ರದಾಯಿಕ ಕೆಫೆ ತೆರೆಯಲು ತಯಾರಿ ನಡೆಸುತ್ತಿದ್ದಾರೆ. ತಮ್ಮ ಛತ್ರಿ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುವುದು ಮಾತ್ರ ಅವರ ಉದ್ದೇಶವಲ್ಲ, ಜತೆಗೆ ಅವರು ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇಂದು ಕಾರ್ತುಂಬಿ ಛತ್ರಿಗಳು ಕೇರಳದ ಒಂದು ಸಣ್ಣ ಹಳ್ಳಿಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಪ್ರಯಾಣ ಪೂರ್ಣಗೊಳಿಸಿವೆ. ಸ್ಥಳೀಯರಿಗೆ ಧ್ವನಿಯಾಗುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?

ನನ್ನ ಪ್ರೀತಿಯ ದೇಶವಾಸಿಗಳೆ, ಮುಂದಿನ ತಿಂಗಳು ಈ ಹೊತ್ತಿಗೆ ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಈ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸಲು ನೀವೆಲ್ಲರೂ ಕಾಯುತ್ತಿರುವಿರಿ ಎಂದು ನನಗೆ ಖಾತ್ರಿಯಿದೆ. ಭಾರತ ತಂಡಕ್ಕೆ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಶುಭ ಹಾರೈಸುತ್ತೇನೆ. ಟೋಕಿಯೊ ಒಲಿಂಪಿಕ್ಸ್‌ನ ನೆನಪುಗಳು ನಮ್ಮ ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿ ಉಳಿದಿದೆ.

ಟೋಕಿಯೊದಲ್ಲಿ ನಮ್ಮ ಆಟಗಾರರ ಪ್ರದರ್ಶನವು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್‌ನ ನಂತರ, ನಮ್ಮ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನ ತಯಾರಿಯಲ್ಲಿ ಪೂರ್ಣ ಹೃದಯದಿಂದ ತೊಡಗಿಸಿಕೊಂಡಿದ್ದಾರೆ. ನಾವು ಎಲ್ಲಾ ಆಟಗಾರರನ್ನು ಒಟ್ಟಿಗೆ ತೆಗೆದುಕೊಂಡರೆ, ಅವರೆಲ್ಲರೂ ಸುಮಾರು 900 ಮಂದಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ಬಹಳ ದೊಡ್ಡ ಸಂಖ್ಯೆ.

ಸ್ನೇಹಿತರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀವು ಮೊದಲ ಬಾರಿಗೆ ಕೆಲವು ವಿಷಯಗಳಿಗೆ ಸಾಕ್ಷಿಯಾಗುತ್ತೀರಿ. ಶೂಟಿಂಗ್ ನಲ್ಲಿ ನಮ್ಮ ಆಟಗಾರರ ಪ್ರತಿಭೆ ಬೆಳಕಿಗೆ ಬರುತ್ತಿದೆ. ಟೇಬಲ್ ಟೆನಿಸ್‌ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಅರ್ಹತೆ ಪಡೆದಿವೆ. ನಮ್ಮ ಶೂಟರ್ ಹೆಣ್ಣುಮಕ್ಕಳೂ ಭಾರತೀಯ ಶಾಟ್‌ಗನ್ ತಂಡದ ಭಾಗವಾಗಿದ್ದಾರೆ. ಈ ಬಾರಿ, ನಮ್ಮ ತಂಡದ ಸದಸ್ಯರು ಆ ವಿಭಾಗಗಳಲ್ಲಿ ಕುಸ್ತಿ ಮತ್ತು ಕುದುರೆ ಸವಾರಿಯಲ್ಲಿ ಸ್ಪರ್ಧಿಸಲಿದ್ದಾರೆ, ಅವರು ಹಿಂದೆಂದೂ ಭಾಗವಹಿಸಿರಲಿಲ್ಲ. ಇದರಿಂದ, ಈ ಬಾರಿ ನಾವು ಕ್ರೀಡೆಯಲ್ಲಿ ವಿಭಿನ್ನ ಮಟ್ಟದ ಉತ್ಸಾಹ ನೋಡುತ್ತೇವೆ. ನಿಮಗೆ ನೆನಪಿರಬಹುದು... ಕೆಲವು ತಿಂಗಳ ಹಿಂದೆ, ನಾವು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ನಮ್ಮ ಆಟಗಾರರು ಚೆಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಅದ್ಭುತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈಗ ನಮ್ಮ ಆಟಗಾರರು ಒಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಲಿ ಎಂದು ಇಡೀ ದೇಶವೇ ಹಾರೈಸುತ್ತಿದೆ. ಈ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ದೇಶವಾಸಿಗಳ ಹೃದಯವನ್ನೂ ಗೆಲ್ಲಬೇಕು. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಭೇಟಿಯಾಗುವ ಅವಕಾಶವೂ ಸಿಗಲಿದೆ. ನಿಮ್ಮ ಪರವಾಗಿ ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ. ಹೌದು, ಈ ಬಾರಿ ನಮ್ಮ ಹ್ಯಾಶ್‌ಟ್ಯಾಗ್ #Cheer4Bharat.

ಈ ಹ್ಯಾಶ್‌ಟ್ಯಾಗ್ ಮೂಲಕ ನಾವು ನಮ್ಮ ಆಟಗಾರರನ್ನು ಹುರಿದುಂಬಿಸಬೇಕು. ಅವರನ್ನು ಪ್ರೋತ್ಸಾಹಿಸುತ್ತಲೇ ಇರುತ್ತೇವೆ. ಆದ್ದರಿಂದ ಆವೇಗವನ್ನು ಮುಂದುವರಿಸಿ. ನಿಮ್ಮ ಈ ಆವೇಗವು ಭಾರತದ ಮಾಂತ್ರಿಕತೆಯನ್ನು ಜಗತ್ತಿಗೆ ತೋರಿಸಲು ಸಹಾಯ ಮಾಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ, ನಾನು ನಿಮ್ಮೆಲ್ಲರಿಗೂ ಒಂದು ಸಣ್ಣ ಆಡಿಯೋ ಕ್ಲಿಪ್ ಪ್ಲೇ ಮಾಡುತ್ತಿದ್ದೇನೆ.

#ಆಡಿಯೋ ಕ್ಲಿಪ್#

ಈ ರೇಡಿಯೊ ಕಾರ್ಯಕ್ರಮವನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು ಅಲ್ಲವೇ? ಹಾಗಾದರೆ ಬನ್ನಿ, ಅದರ ಹಿಂದಿನ ಕಥೆಯನ್ನು ನಾನು ನಿಮಗೆ ಹೇಳುತ್ತೇನೆ. ವಾಸ್ತವವಾಗಿ, ಇದು ಕುವೈತ್ ರೇಡಿಯೊ ಪ್ರಸಾರದ ಕ್ಲಿಪ್ ಆಗಿದೆ. ಈಗ ನಾವು ಕುವೈತ್ ಬಗ್ಗೆ ಮಾತನಾಡುತ್ತಿರುವುದರಿಂದ ಹಿಂದಿ ಹೇಗೆ ಬಂತು ಎಂದು ನಿಮಗೆ ಅನಿಸಬಹುದು. ವಾಸ್ತವವಾಗಿ, ಕುವೈತ್ ಸರ್ಕಾರವು ತನ್ನ ರಾಷ್ಟ್ರೀಯ ರೇಡಿಯೊದಲ್ಲಿ ವಿಶೇಷ ಕಾರ್ಯಕ್ರಮ ಪ್ರಾರಂಭಿಸಿದೆ, ಅದೂ ಹಿಂದಿಯಲ್ಲಿ. ಕುವೈತ್ ರೇಡಿಯೊದಲ್ಲಿ ಪ್ರತಿ ಭಾನುವಾರ ಅರ್ಧ ಗಂಟೆ ಪ್ರಸಾರವಾಗುತ್ತದೆ. ಇದು ಭಾರತೀಯ ಸಂಸ್ಕೃತಿಯ ಅಸಂಖ್ಯಾತ ಛಾಯೆಗಳನ್ನು ಒಳಗೊಂಡಿದೆ. ನಮ್ಮ ಚಲನಚಿತ್ರಗಳು ಮತ್ತು ಕಲಾ ಜಗತ್ತಿಗೆ ಸಂಬಂಧಿಸಿದ ಚರ್ಚೆಗಳು ಅಲ್ಲಿನ ಭಾರತೀಯ ಸಮುದಾಯದಲ್ಲಿ ಬಹಳ ಜನಪ್ರಿಯವಾಗಿವೆ. ಕುವೈತ್‌ನ ಸ್ಥಳೀಯ ಜನರು ಸಹ ಅದರಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಈ ಅದ್ಭುತ ಉಪಕ್ರಮ ಜಾರಿಗೆ ತಂದಿರುವ ಕುವೈತ್ ಸರ್ಕಾರಕ್ಕೆ ಮತ್ತು ಅಲ್ಲಿನ ಜನರಿಗೆ ನನ್ನ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೆ, ಇಂದು ವಿಶ್ವಾದ್ಯಂತ ನಮ್ಮ ಸಂಸ್ಕೃತಿಯು ವೈಭವ ಗಳಿಸುತ್ತಿರುವ ರೀತಿ ನೋಡಿದ, ಯಾವ ಭಾರತೀಯ ಸಂತೋಷಪಡುವುದಿಲ್ಲ ಹೇಳಿ! ಉದಾಹರಣೆಗೆ, ತುರ್ಕಮೆನಿಸ್ತಾನ್‌ನಲ್ಲಿ ಅಲ್ಲಿನ ರಾಷ್ಟ್ರೀಯ ಕವಿಯ 300ನೇ ಜನ್ಮ ವಾರ್ಷಿಕೋತ್ಸವವನ್ನು ಈ ವರ್ಷ ಮೇ ತಿಂಗಳಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತುರ್ಕಮೆನಿಸ್ತಾನದ ಅಧ್ಯಕ್ಷರು ವಿಶ್ವದ 24 ಪ್ರಸಿದ್ಧ ಕವಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದರು. ಈ ಪ್ರತಿಮೆಗಳಲ್ಲಿ ಒಂದು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರದ್ದು.

ಇದು ಗುರುದೇವನಿಗೆ ಸಿಕ್ಕ ಗೌರವವಾಗಿದೆ. ಭಾರತಕ್ಕೆ ಸಿಕ್ಕ ಅತಿದೊಡ್ಡ ಗೌರವ. ಅಂತೆಯೇ, ಜೂನ್ ತಿಂಗಳಲ್ಲಿ, 2 ಕೆರಿಬಿಯನ್ ದೇಶಗಳಾದ ಸುರಿನಾಮ್ ಮತ್ತು ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್ ತಮ್ಮ ಭಾರತೀಯ ಪರಂಪರೆಯನ್ನು ಪೂರ್ಣ ಉತ್ಸಾಹದಿಂದ ಆಚರಿಸಿದರು. ಸುರಿನಾಮ್‌ನಲ್ಲಿರುವ ಭಾರತೀಯ ಸಮುದಾಯವು ಪ್ರತಿ ವರ್ಷ ಜೂನ್ 5 ಅನ್ನು ಭಾರತೀಯ ಆಗಮನ ದಿನ ಮತ್ತು ಪ್ರವಾಸಿ ದಿನ ಎಂದು ಆಚರಿಸುತ್ತಾರೆ. ಇಲ್ಲಿ ಹಿಂದಿ ಜತೆಗೆ ಭೋಜ್‌ಪುರಿಯನ್ನೂ ವ್ಯಾಪಕವಾಗಿ ಮಾತನಾಡುತ್ತಾರೆ. ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್‌ನಲ್ಲಿ ವಾಸಿಸುವ ಭಾರತೀಯ ಮೂಲದ ನಮ್ಮ ಸಹೋದರ ಸಹೋದರಿಯರ ಸಂಖ್ಯೆಯೂ ಸುಮಾರು 6 ಸಾವಿರ ಇದೆ. ಇವರೆಲ್ಲರಿಗೂ ತಮ್ಮ ಶ್ರೀಮಂತ ಪರಂಪರೆಯ ಬಗ್ಗೆ ಅಪಾರ ಅಭಿಮಾನವಿದೆ. ಅವರು ಜೂನ್ 1ರಂದು ಭಾರತೀಯ ಪರಂಪರೆಯ ದಿನವನ್ನು ಸಂಭ್ರಮದಿಂದ ಆಚರಿಸಿದ ರೀತಿಯೇ ಈ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ. ಅಂತಹ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಹರಡುವಿಕೆಯನ್ನು ವಿಶ್ವಾದ್ಯಂತ ನೋಡಿದಾಗ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ.

ಸ್ನೇಹಿತರೆ, ಈ ತಿಂಗಳು ಇಡೀ ವಿಶ್ವವು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿತು. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಕಾಶ್ಮೀರದಲ್ಲಿ ಯುವಕರ ಜತೆಗೆ ಸಹೋದರಿಯರು, ಪುತ್ರಿಯರು ಸಹ ಯೋಗ ದಿನದಂದು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯೋಗ ದಿನಾಚರಣೆ ನಡೆಯುತ್ತಿದ್ದಂತೆ ಹೊಸ ದಾಖಲೆಗಳೂ ಸೃಷ್ಟಿಯಾಗುತ್ತಿವೆ. ಯೋಗ ದಿನವು ವಿಶ್ವಾದ್ಯಂತ ಹಲವಾರು ಮಹತ್ತರವಾದ ಸಾಧನೆಗಳನ್ನು ಮಾಡಿದೆ. ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ, ಅಲ್ ಹನೂಫ್ ಸಾದ್ ಜಿ ಎಂಬ ಮಹಿಳೆ ಸಾಮಾನ್ಯ ಯೋಗ ಸಂಪ್ರದಾಯವನ್ನು ಮುನ್ನಡೆಸಿದರು. ಸೌದಿ ಮಹಿಳೆಯೊಬ್ಬರು ಮುಖ್ಯ ಯೋಗಾಸನಕ್ಕೆ ಸೂಚನೆ ನೀಡಿರುವುದು ಇದೇ ಮೊದಲು. ಈಜಿಪ್ಟ್ ನಲ್ಲಿ ಈ ಬಾರಿ ಯೋಗ ದಿನದಂದು ಫೋಟೊ ಸ್ಪರ್ಧೆ ಏರ್ಪಡಿಸಲಾಗಿತ್ತು. ನೈಲ್ ನದಿಯ ತಟದಲ್ಲಿ, ಕೆಂಪು ಸಮುದ್ರದ ಕಡಲತೀರಗಳಲ್ಲಿ ಮತ್ತು ಪಿರಮಿಡ್‌ಗಳ ಮುಂದೆ ಲಕ್ಷಾಂತರ ಜನರು ಯೋಗ ಮಾಡುವ ಚಿತ್ರಗಳು ಬಹಳ ಜನಪ್ರಿಯವಾದವು. ಅಮೃತಶಿಲೆಯ ಬುದ್ಧನ ಪ್ರತಿಮೆಗೆ ಹೆಸರುವಾಸಿಯಾದ ಮ್ಯಾನ್ಮಾರ್‌ನ ಮಾರವಿಜಯ ಪಗೋಡಾ ಕಾಂಪ್ಲೆಕ್ಸ್ ಜಗತ್ಪ್ರಸಿದ್ಧವಾಗಿದೆ. ಇಲ್ಲಿಯೂ ಜೂನ್ 21ರಂದು ವೈಭವದ ಯೋಗಾಭ್ಯಾಸ ಆಯೋಜಿಸಲಾಗಿತ್ತು. ಬಹ್ರೇನ್‌ನಲ್ಲಿ ದಿವ್ಯಾಂಗ ಮಕ್ಕಳಿಗಾಗಿ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಶ್ರೀಲಂಕಾದ ಯುನೆಸ್ಕೊ ಪಾರಂಪರಿಕ ತಾಣಕ್ಕೆ ಹೆಸರುವಾಸಿಯಾದ ಗಾಲೆ ಕೋಟೆಯಲ್ಲಿ ಸ್ಮರಣೀಯ ಯೋಗ ಕಲಾಪ ನಡೆಯಿತು. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಅಬ್ಸರ್ವೇಶನ್ ಡೆಕ್‌ನಲ್ಲಿಯೂ ಜನರು ಯೋಗ ಮಾಡಿದರು. ಅಲ್ಲಿ ಮೊಟ್ಟಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾರ್ಷಲ್ ಐಲ್ಯಾಂಡ್ಸ್ ಅಧ್ಯಕ್ಷರೂ ಭಾಗವಹಿಸಿದ್ದರು. ಭೂತಾನ್‌ನ ಥಿಂಪುವಿನಲ್ಲೂ ಯೋಗ ದಿನಾಚರಣೆಯ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು, ಇದರಲ್ಲಿ ನನ್ನ ಸ್ನೇಹಿತ ಪ್ರಧಾನಿ ತೊಬ್ಗೆ ಭಾಗವಹಿಸಿದ್ದರು. ಅಂದರೆ, ವಿಶ್ವದ ಮೂಲೆ ಮೂಲೆಯಲ್ಲಿ ಯೋಗ ಮಾಡುವ ಜನರ ವಿಹಂಗಮ ನೋಟಗಳನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಯೋಗ ದಿನದಂದು ಭಾಗವಹಿಸಿದ ಎಲ್ಲ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ತದನಂತರ ನನ್ನ ಈ ಬಹುಕಾಲದ ಕೋರಿಕೆ ಇದೆ. ನಾವು ಯೋಗವನ್ನು ಕೇವಲ ಒಂದು ದಿನದ ಅಭ್ಯಾಸವನ್ನಾಗಿ ಮಾಡಬೇಕಾಗಿಲ್ಲ. ನೀವು ನಿಯಮಿತವಾಗಿ ಯೋಗ ಮಾಡಬೇಕು. ಇದನ್ನು ಮಾಡುವುದರಿಂದ ನೀವು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವಿರಿ.

ಸ್ನೇಹಿತರೆ, ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ ಭಾರತದ ಹಲವಾರು ಉತ್ಪನ್ನಗಳಿವೆ. ಭಾರತದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಟ್ಟಕ್ಕೆ ಹೋಗುವುದನ್ನು ನೋಡಿದಾಗ, ಹೆಮ್ಮೆ ಪಡುವುದು ಸಹಜ. ಅಂತಹ ಒಂದು ಉತ್ಪನ್ನವೆಂದರೆ ಅರಕು ಕಾಫಿ. ಆಂಧ್ರ ಪ್ರದೇಶದ ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯಲ್ಲಿ ಅರಕು ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದು ಶ್ರೀಮಂತ ಸುವಾಸನೆ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸುಮಾರು 1.5 ಲಕ್ಷ ಬುಡಕಟ್ಟು ಕುಟುಂಬಗಳು ಅರಕು ಕಾಫಿ ಕೃಷಿಯೊಂದಿಗೆ ಸಂಬಂಧ ಹೊಂದಿವೆ. ಅರಕು ಕಾಫಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಗಿರಿಜನ ಸಹಕಾರಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದು ಇಲ್ಲಿನ ರೈತ ಬಂಧುಗಳನ್ನು ಒಗ್ಗೂಡಿಸಿ ಅರಕು ಕಾಫಿ ಬೆಳೆಯಲು ಪ್ರೇರೇಪಿಸಿತು.

ಇದರಿಂದ ಈ ರೈತರ ಆದಾಯವೂ ಸಾಕಷ್ಟು ಹೆಚ್ಚಿದೆ. ಕೊಂಡ ದೊರ ಬುಡಕಟ್ಟು ಸಮುದಾಯಕ್ಕೂ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಆದಾಯದ ಜತೆಗೆ ಗೌರವದ ಬದುಕನ್ನೂ ಪಡೆಯುತ್ತಿದ್ದಾರೆ. ಒಮ್ಮೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ವಿಶಾಖಪಟ್ಟಣದಲ್ಲಿ ಈ ಕಾಫಿ ಸವಿಯುವ ಅವಕಾಶ ಸಿಕ್ಕಿದ್ದು ನನಗೆ ನೆನಪಿದೆ. ಇದು ನಿಜಕ್ಕೂ ರುಚಿಯಾಗಿದೆ! ಈ ಕಾಫಿ ಅದ್ಭುತವಾಗಿದೆ! ಅರಕು ಕಾಫಿಗೆ ಅನೇಕ ಜಾಗತಿಕ ಪ್ರಶಸ್ತಿಗಳು ಬಂದಿವೆ. ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲೂ ಕಾಫಿ ಜನಪ್ರಿಯತೆ ಪಡೆಯಿತು. ನಿಮಗೆ ಅವಕಾಶ ಸಿಕ್ಕಾಗ ಅರಕು ಕಾಫಿಯನ್ನು ಸವಿಯಲೇಬೇಕು.

ಸ್ನೇಹಿತರೆ, ಜಮ್ಮು-ಕಾಶ್ಮೀರದ ಜನರು ಸಹ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ತಿಂಗಳು ಜಮ್ಮ-ಕಾಶ್ಮೀರ ಸಾಧಿಸಿರುವುದು ದೇಶಾದ್ಯಂತ ಜನರಿಗೆ ಉದಾಹರಣೆಯಾಗಿದೆ. ಇಲ್ಲಿನ ಪುಲ್ವಾಮಾದಿಂದ ಲಂಡನ್‌ಗೆ ಹಿಮದ ಬಟಾಣಿಗಳ ಚೊಚ್ಚಲ ರವಾನೆಯಾಗಿದೆ. ಕೆಲವರಿಗೆ ಐಡಿಯಾ ಬಂತು, ಕಾಶ್ಮೀರದಲ್ಲಿ ಬೆಳೆಯುವ ವಿದೇಶಿ ತರಕಾರಿಗಳನ್ನು ವಿಶ್ವ ಭೂಪಟಕ್ಕೆ ಏಕೆ ತರಬಾರದು ಅಂತಾ! ಹಾಗಾಗಿ, ಚಾಕುರಾ ಗ್ರಾಮದ ಅಬ್ದುಲ್ ರಶೀದ್ ಮಿರ್ ಇದಕ್ಕೆ ಮೊದಲು ಮುಂದಾದರು. ಹಳ್ಳಿಯ ಇತರ ರೈತರ ಜಮೀನನ್ನು ಒಗ್ಗೂಡಿಸಿ ಹಿಮ ಅವರೆಕಾಳು ಬೆಳೆಯಲು ಪ್ರಾರಂಭಿಸಿದರು. ಸ್ವಲ್ಪ ಸಮಯದೊಳಗೆ, ಹಿಮ ಅವರೆಕಾಳು ಕಾಶ್ಮೀರದಿಂದ ಲಂಡನ್ ತಲುಪಲು ಪ್ರಾರಂಭಿಸಿತು. ಈ ಯಶಸ್ಸು ಜಮ್ಮು-ಕಾಶ್ಮೀರದ ಜನರ ಏಳಿಗೆಗೆ ಹೊಸ ಬಾಗಿಲು ತೆರೆದಿದೆ. ನಮ್ಮ ದೇಶದಲ್ಲಿ ಇಂತಹ ವಿಶಿಷ್ಟ ಉತ್ಪನ್ನಗಳಿಗೆ ಕೊರತೆಯಿಲ್ಲ. ನೀವು ಅಂತಹ ಉತ್ಪನ್ನಗಳನ್ನು #myproductsmypride ನಲ್ಲಿ ಹಂಚಿಕೊಳ್ಳಬೇಕು. ಮುಂಬರುವ 'ಮನ್ ಕಿ ಬಾತ್' ನಲ್ಲೂ ಈ ವಿಷಯ ಪ್ರಸ್ತಾಪಿಸುತ್ತೇನೆ.

ಮಾಮ್ ಪ್ರಿಯಾ: ದೇಶವಾಸಿನ್:

ಅದ್ಯಾ ಅಹಮ್ ಕಿಂಚಿತ್ ಚರ್ಚಾ ಸಂಸ್ಕೃತ ಭಾಷಾಯಾಮ್ ಆರಭೇ ।

'ಮನ್ ಕಿ ಬಾತ್'ನಲ್ಲಿ ನಾನು ಇದ್ದಕ್ಕಿದ್ದಂತೆ ಸಂಸ್ಕೃತದಲ್ಲಿ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಯೋಚಿಸುತ್ತಿರಬಹುದು? ಇದಕ್ಕೆ ಕಾರಣ ಇಂದಿನ ಸಂಸ್ಕೃತಕ್ಕೆ ಸಂಬಂಧಿಸಿದ ವಿಶೇಷ ಸಂದರ್ಭ! ಇಂದು ಜೂನ್ 30ರಂದು ಆಕಾಶವಾಣಿಯ ಸಂಸ್ಕೃತ ವಾರ್ತಾ ಪ್ರಸಾರವು 50 ವರ್ಷಗಳನ್ನು ಪೂರೈಸುತ್ತಿದೆ. 50 ವರ್ಷಗಳಿಂದ, ಈ ವಾರ್ತಾ ಪ್ರಸಾರವು ಅನೇಕ ಜನರನ್ನು ಸಂಸ್ಕೃತ ಭಾಷೆಗೆ ಸಂಪರ್ಕಿಸಿದೆ. ಆದ್ದರಿಂದ ನಾನು ಆಲ್ ಇಂಡಿಯಾ ರೇಡಿಯೊ ಕುಟುಂಬವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ, ಪ್ರಾಚೀನ ಭಾರತೀಯ ಜ್ಞಾನ ಮತ್ತು ವಿಜ್ಞಾನದ ಪ್ರಗತಿಯಲ್ಲಿ ಸಂಸ್ಕೃತವು ಬಹುದೊಡ್ಡ ಪಾತ್ರ ವಹಿಸಿದೆ. ನಾವು ಸಂಸ್ಕೃತವನ್ನು ಗೌರವಿಸಬೇಕು ಮತ್ತು ಅದನ್ನು ನಮ್ಮ ದೈನಂದಿನ ಜೀವನದೊಂದಿಗೆ ಸಂಪರ್ಕಿಸಬೇಕು ಎಂಬುದು ಇಂದಿನ ಕಾಲದ ಬೇಡಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇಂತಹ ಪ್ರಯತ್ನವನ್ನು ಅನೇಕರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಾನವನವಿದೆ - ಕಬ್ಬನ್ ಪಾರ್ಕ್! ಈ ಪಾರ್ಕ್ ನಲ್ಲಿ ಅಲ್ಲಿನ ಜನರು ಹೊಸ ಸತ್ಸಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇಲ್ಲಿ ವಾರಕ್ಕೊಮ್ಮೆ, ಪ್ರತಿ ಭಾನುವಾರ ಮಕ್ಕಳು, ಯುವಕರು ಮತ್ತು ಹಿರಿಯರು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಅಷ್ಟೇ ಅಲ್ಲ, ಸಂಸ್ಕೃತದಲ್ಲಿ ಅನೇಕ ಚರ್ಚಾ ಕಲಾಪಗಳನ್ನು ಆಯೋಜಿಸುತ್ತಿದ್ದಾರೆ. ಈ ಉಪಕ್ರಮದ ಹೆಸರು ಸಂಸ್ಕೃತ ವಾರಾಂತ್ಯ! ಇದನ್ನು ಸಮಷ್ಟಿ ಗುಬ್ಬಿ ಜಿಯವರು ವೆಬ್‌ಸೈಟ್ ಮೂಲಕ ಪ್ರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಾರಂಭವಾದ ಈ ಉಪಕ್ರಮವು ಬೆಂಗಳೂರಿನ ಜನರಲ್ಲಿ ಬಹಳ ಜನಪ್ರಿಯವಾಗಿದೆ.

ನಾವೆಲ್ಲರೂ ಇಂತಹ ಪ್ರಯತ್ನಗಳಿಗೆ ಕೈಜೋಡಿಸಿದರೆ, ಪ್ರಪಂಚದ ಇಂತಹ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಿಂದ ನಾವು ಬಹಳಷ್ಟು ಕಲಿಯುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೆ, ಮನ್ ಕಿ ಬಾತ್‌ನ ಈ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಿದ್ದಕ್ಕೆ ಸಂತೋಷವಾಯಿತು. ಈಗ ಈ ಸರಣಿ ಮತ್ತೆ ಮೊದಲಿನಂತೆಯೇ ಮುಂದುವರಿಯಲಿದೆ. ಇನ್ನು ಒಂದು ವಾರದ ನಂತರ ಪವಿತ್ರ ರಥಯಾತ್ರೆ ಆರಂಭವಾಗಲಿದೆ. ಮಹಾಪ್ರಭು ಜಗನ್ನಾಥರ ಆಶೀರ್ವಾದ ಸದಾ ದೇಶವಾಸಿಗಳ ಮೇಲಿರಲಿ ಎಂಬುದು ನನ್ನ ಹಾರೈಕೆ. ಅಮರನಾಥ ಯಾತ್ರೆಯೂ ಆರಂಭವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪಂಢರಪುರ ವಾರಿ ಕೂಡ ಆರಂಭವಾಗಲಿದೆ. ಈ ಯಾತ್ರೆಗಳಲ್ಲಿ ಭಾಗವಹಿಸುವ ಎಲ್ಲಾ ಭಕ್ತಾದಿಗಳಿಗೆ ಶುಭ ಹಾರೈಸುತ್ತೇನೆ. ಇನ್ನು ಮುಂದೆ ಕಚ್ಚಿ ಹೊಸ ವರ್ಷದ ಹಬ್ಬ - ಆಷಾಧಿ ಬೀಜ... ಈ ಎಲ್ಲಾ ಹಬ್ಬಗಳಿಗೂ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ಸಕಾರಾತ್ಮಕತೆಗೆ ಸಂಬಂಧಿಸಿದ ಸಾರ್ವಜನಿಕ ಸಹಭಾಗಿತ್ವದ ಇಂತಹ ಪ್ರಯತ್ನಗಳನ್ನು ನೀವು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತೀರಿ ಎಂಬ ಸದೃಢ ನಂಬಿಕೆ ನನಗಿದೆ. ಮುಂದಿನ ತಿಂಗಳು ನಿಮ್ಮೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ನಾನು ಕಾಯುತ್ತಿದ್ದೇನೆ. ಅಲ್ಲಿಯವರೆಗೆ ದಯವಿಟ್ಟು ನಿಮ್ಮ ಮತ್ತು ನಿಮ್ಮ ಕುಟುಂಬದವರ ಬಗ್ಗೆಯೂ ಕಾಳಜಿ ವಹಿಸಿ.

ತುಂಬು ಧನ್ಯವಾದಗಳು. ನಮಸ್ಕಾರ.

*****



(Release ID: 2029812) Visitor Counter : 6