ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ʻಅಂತಾರಾಷ್ಟ್ರೀಯ ಯೋಗ ದಿನ-2024’ ಉದ್ದೇಶಿಸಿಪ್ರಧಾನಮಂತ್ರಿಯವರ ಭಾಷಣ


"ವಿಶ್ವಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ"

"ಯೋಗದ ವಾತಾವರಣ, ಅದರ ಶಕ್ತಿ ಮತ್ತು ಅನುಭವವನ್ನು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಬಹುದಾಗಿದೆ"

"ಇಂದು ಹೊಸ ಯೋಗ ಆರ್ಥಿಕತೆ ಹೊರಹೊಮ್ಮುತ್ತಿರುವುದನ್ನು ಜಗತ್ತು ನೋಡುತ್ತಿದೆ"

"ವಿಶ್ವವು ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಸಾಧನವನ್ನಾಗಿ ನೋಡುತ್ತಿದೆ"

“ಯೋಗವು ಗತದ ಹೊರೆಯಿಂದ ಹೊರಬಂದು, ಪ್ರಸ್ತುತ ಕ್ಷಣದಲ್ಲಿ ಜೀವಿಸಲು ಸಹಾಯ ಮಾಡುತ್ತದೆ”

“ಯೋಗವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ"

"ನಮ್ಮ ಕಲ್ಯಾಣವು ನಮ್ಮ ಸುತ್ತಲಿನ ಪ್ರಪಂಚದ ಕಲ್ಯಾಣದೊಂದಿಗೆ ನಂಟು ಹೊಂದಿದೆ ಎಂಬ ಅರಿವು ಮೂಡಲು ಯೋಗವು ನಮಗೆ ಸಹಾಯ ಮಾಡುತ್ತದೆ"

 "ಯೋಗವು ಕೇವಲ ಶಿಸ್ತು ಮಾತ್ರವಲ್ಲ, ಅದೊಂದು ವಿಜ್ಞಾನವೂ ಹೌದು"

Posted On: 21 JUN 2024 8:39AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಐವೈಡಿ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ನೇತೃತ್ವ ವಹಿಸಿದ್ದರು ಮತ್ತು ಯೋಗ ಅಧಿವೇಶನದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಯೋಗ ದಿನದ ಈ ಸಂದರ್ಭದಲ್ಲಿ ಯೋಗ ಮತ್ತು ಸಾಧನೆಯ ಭೂಮಿಯಾದ ಜಮ್ಮು-ಕಾಶ್ಮೀರದಲ್ಲಿ ಉಪಸ್ಥಿತರಿರುವ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದರು. "ಯೋಗದ ವಾತಾವರಣ, ಶಕ್ತಿ ಮತ್ತು ಅನುಭವವನ್ನು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣಬಹುದಾಗಿದೆ," ಎಂದು ಶ್ರೀ ಮೋದಿ ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನದಂದು ಅವರು ಎಲ್ಲ ನಾಗರಿಕರಿಗೆ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಯೋಗಾಭ್ಯಾಸ ಮಾಡುವವರಿಗೆ ಶುಭ ಕೋರಿದರು.

ಅಂತಾರಾಷ್ಟ್ರೀಯ ಯೋಗ ದಿನದ 10ನೇ ವಾರ್ಷಿಕೋತ್ಸವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಹತ್ತು ವರ್ಷಗಳ ಹಿಂದೆ, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಸ್ತಾಪವನ್ನು ದಾಖಲೆಯ 177 ದೇಶಗಳು ಅನುಮೋದಿಸಿದ್ದನ್ನು ಸ್ಮರಿಸಿದರು. ಆ ಬಳಿಕ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮಾಡಿದ ವಿವಿಧ ದಾಖಲೆಗಳನ್ನು ಅವರು ಉಲ್ಲೇಖಿಸಿದರು. 2015ರಲ್ಲಿ 35,000 ಜನರಿಂದ ʻಕರ್ತವ್ಯ ಪಥʼದಲ್ಲಿ ಯೋಗಾಭ್ಯಾಸ ಮತ್ತು ಕಳೆದ ವರ್ಷ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ ಸೇರಿದಂತೆ ವಿವಿಧ ದಾಖಲೆಗಳ ಬಗ್ಗೆ ಅವರು ಉಲ್ಲೇಖಿಸಿದರು. ಆಯುಷ್ ಸಚಿವಾಲಯ ರಚಿಸಿದ ʻಯೋಗ ಪ್ರಮಾಣೀಕರಣ ಮಂಡಳಿʼಯಿಂದ ಭಾರತದ 100ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು 10 ಪ್ರಮುಖ ವಿದೇಶಿ ಸಂಸ್ಥೆಗಳು ಮಾನ್ಯತೆ ಪಡೆದಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ವಿಶ್ವಾದ್ಯಂತ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ, ಅದರ ಆಕರ್ಷಣೆಯೂ ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಯೋಗದ ಉಪಯುಕ್ತತೆಯನ್ನು ಜನರು ಸಹ ಗುರುತಿಸುತ್ತಿದ್ದಾರೆ ಎಂದರು. ತಮ್ಮ ಜೊತೆ ಸಂವಾದದ ಸಮಯದಲ್ಲಿ ಯೋಗದ ಬಗ್ಗೆ ಚರ್ಚಿಸದ ವಿಶ್ವ ನಾಯಕರೇ ಇಲ್ಲ ಎಂದು ಸ್ಮರಿಸಿದ ಪ್ರಧಾನಿ, "ನನ್ನೊಂದಿಗಿನ ಸಂವಾದದ ಸಮಯದಲ್ಲಿ ಎಲ್ಲಾ ವಿಶ್ವ ನಾಯಕರು ಯೋಗದಲ್ಲಿ ತೀವ್ರ ಆಸಕ್ತಿ ವ್ಯಕ್ತಪಡಿಸುತ್ತಾರೆ," ಎಂದು ಹೇಳಿದರು. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ದೈನಂದಿನ ಜೀವನದ ಒಂದು ಭಾಗವಾಗಿದೆ ಎಂದು ಅವರು ಪ್ರತಿಪಾದಿಸಿದರು. ವಿಶ್ವದಾದ್ಯಂತ ಹೆಚ್ಚುತ್ತಿರುವ ಯೋಗದ ಸ್ವೀಕಾರದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, 2015ರಲ್ಲಿ ತಾವು ತುರ್ಕ್‌ಮೆನಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯೋಗ ಕೇಂದ್ರವನ್ನು ಉದ್ಘಾಟಿಸಿದ್ದನ್ನು ಸ್ಮರಿಸಿದರು ಮತ್ತು ಯೋಗ ಇಂದು ದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ ಎಂದರು. ತುರ್ಕ್‌ಮೆನಿಸ್ತಾನದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯಗಳು ಯೋಗ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಿವೆ. ಸೌದಿ ಅರೇಬಿಯಾ ಇದನ್ನು ತಮ್ಮ ಶಿಕ್ಷಣ ವ್ಯವಸ್ಥೆಯ ಒಂದು ಭಾಗವನ್ನಾಗಿ ಮಾಡಿದೆ ಮತ್ತು ʻಮಂಗೋಲಿಯನ್ ಯೋಗ ಫೌಂಡೇಶನ್ʼ ಅನೇಕ ಯೋಗ ಶಾಲೆಗಳನ್ನು ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಯುರೋಪ್‌ನಲ್ಲಿ ಯೋಗದ ಸ್ವೀಕಾರದ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ಈವರೆಗೆ 1.5 ಕೋಟಿ ಜರ್ಮನ್ ನಾಗರಿಕರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು. 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿಯೊಬ್ಬರು ಒಮ್ಮೆಯೂ ಭಾರತಕ್ಕೆ ಭೇಟಿ ನೀಡದಿದ್ದರೂ, ಯೋಗಕ್ಕೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಭಾರತವು ಈ ವರ್ಷ ʻಪದ್ಮಶ್ರೀʼ ಪ್ರಶಸ್ತಿಯನ್ನು ನೀಡಿದ್ದನ್ನು ಅವರು ನೆನಪಿಸಿಕೊಂಡರು. ಯೋಗ ಇಂದು ಸಂಶೋಧನೆಯ ವಿಷಯವಾಗಿದೆ ಮತ್ತು ಈಗಾಗಲೇ ಅನೇಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ಯೋಗದ ವಿಸ್ತರಣೆಯಿಂದಾಗಿ ಅದರ ಬಗ್ಗೆ ಬದಲಾಗುತ್ತಿರುವ ಕಲ್ಪನೆಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಹೊಸ ಯೋಗ ಆರ್ಥಿಕತೆಯ ಬಗ್ಗೆ ಮಾತನಾಡಿದರು. ಯೋಗ ಪ್ರವಾಸೋದ್ಯಮಕ್ಕೆ ಹೆಚ್ಚುತ್ತಿರುವ ಆಕರ್ಷಣೆ ಹಾಗೂ ಅಧಿಕೃತ ಯೋಗ ಕಲಿಕೆಗಾಗಿ ಭಾರತಕ್ಕೆ ಭೇಟಿ ನೀಡಬೇಕೆಂಬ ಜನರ ಬಯಕೆಯ ಬಗ್ಗೆ ಅವರು ಉಲ್ಲೇಖಿಸಿದರು. ಯೋಗ ರಿಟ್ರೀಟ್‌ಗಳು, ರೆಸಾರ್ಟ್‌ಗಳು, ವಿಮಾನ ನಿಲ್ದಾಣಗಳು ಮತ್ತು ಹೋಟೆಟ್‌ಗಳಲ್ಲಿ ಯೋಗಕ್ಕಾಗಿ ಮೀಸಲಾದ ಸೌಲಭ್ಯಗಳು, ಯೋಗ ಉಡುಪು ಮತ್ತು ಉಪಕರಣಗಳು, ವೈಯಕ್ತಿಕ ಯೋಗ ತರಬೇತುದಾರರು, ಯೋಗ ಮತ್ತು ಮೈಂಡ್ ಫುಲ್‌ನೆಸ್‌ ವೆಸ್‌ನೆಸ್ ಉಪಕ್ರಮಗಳನ್ನು ಕೈಗೊಳ್ಳುವ ಕಂಪನಿಗಳ ಬಗ್ಗೆ ಅವರು ಉಲ್ಲೇಖಿಸಿದರು. ಇವೆಲ್ಲವೂ ಯುವಕರಿಗೆ ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ' ಎಂಬ ವಿಷಯಾಧಾರಿತವಾಗಿ ಆಚರಿಸುತ್ತಿರುವ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಜಗತ್ತು ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಸಾಧನವಾಗಿ ನೋಡುತ್ತಿದೆ. ನಾವು ಗತದ ಹೊರೆಯಿಂದ ಹೊರಬಂದು, ವರ್ತಮಾನದ ಈ ಕ್ಷಣದಲ್ಲಿ ಬದುಕಲು ಯೋಗವು ನಮಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. "ನಮ್ಮ ಕಲ್ಯಾಣವು ನಮ್ಮ ಸುತ್ತಲಿನ ಪ್ರಪಂಚದ ಕಲ್ಯಾಣದೊಂದಿಗೆ ನಂಟು ಹೊಂದಿದೆ ಎಂದು ಅರಿತುಕೊಳ್ಳಲು ಯೋಗ ನಮಗೆ ಸಹಾಯ ಮಾಡುತ್ತದೆ. ನಾವು ಆಂತರಿಕವಾಗಿ ಶಾಂತಿಯುತವಾಗಿದ್ದಾಗ, ನಾವು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು,ʼʼ ಎಂದು ಪ್ರಧಾನಿ ಹೇಳಿದರು.

ಯೋಗದ ವೈಜ್ಞಾನಿಕ ಅಂಶಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮಾಹಿತಿಯ ಹೊರೆಯನ್ನು ನಿಭಾಯಿಸಲು ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಮಹತ್ವವನ್ನು ಎತ್ತಿ ತೋರಿದರು. ಏಕೆಂದರೆ ಎಲ್ಲಾ ಸಾಧನೆಗೂ ಏಕಾಗ್ರತೆಯೇ ದೊಡ್ಡ ಶಕ್ತಿಯಾಗಿದೆ ಎಂದರು. ಅದಕ್ಕಾಗಿಯೇ ಸೇನೆಯಿಂದ ಹಿಡಿದು ಕ್ರೀಡೆಯವರೆಗಿನ ಕ್ಷೇತ್ರಗಳಲ್ಲಿ ಯೋಗವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ವಿವರಿಸಿದರು. ಗಗನಯಾತ್ರಿಗಳಿಗೆ ಯೋಗ ಮತ್ತು ಧ್ಯಾನದಲ್ಲಿ ತರಬೇತಿ ನೀಡಲಾಗುತ್ತಿದೆ. ಕೈದಿಗಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಹರಡಲು ಜೈಲುಗಳಲ್ಲಿ ಸಹ ಯೋಗವನ್ನು ಬಳಸಲಾಗುತ್ತಿದೆ. "ಯೋಗವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ," ಎಂದು ಪ್ರಧಾನಿ ಮೋದಿ ಹೇಳಿದರು.

ಯೋಗದಿಂದ ಪಡೆದ ಸ್ಫೂರ್ತಿಯು ನಮ್ಮ ಪ್ರಯತ್ನಗಳಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಯೋಗದ ಬಗ್ಗೆ ಜಮ್ಮು-ಕಾಶ್ಮೀರದ, ವಿಶೇಷವಾಗಿ ಶ್ರೀನಗರದ ಜನರ ಉತ್ಸಾಹವನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಇದು ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮವನ್ನು ಹೆಚ್ಚಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಮಳೆಯ ಹವಾಮಾನದ ನಡುವೆಯೂ ಮನೆಯಿಂದ ಹೊರಬಂದು ಯೋಗ ದಿನಾಚರಣೆಗೆ ತಮ್ಮ ಬೆಂಬಲವನ್ನು ತೋರಿದ ಜನರ ಉತ್ಸಾಹವನ್ನು ಅವರು ಶ್ಲಾಘಿಸಿದರು. "ಜಮ್ಮು-ಕಾಶ್ಮೀರದಲ್ಲಿ ಯೋಗ ಕಾರ್ಯಕ್ರಮಕ್ಕೆ 50,000 ದಿಂದ 60,000 ಜನರ ಸಹಯೋಗವು ದೊಡ್ಡ ವಿಷಯವಾಗಿದೆ,ʼʼ  ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದ ಜನತೆಯ ಬೆಂಬಲ ಮತ್ತು ಭಾಗವಹಿಸುವಿಕೆಗೆ ಧನ್ಯವಾದ ಅರ್ಪಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು. ಇದೇ ವೇಳೆ, ವಿಶ್ವದಾದ್ಯಂತದ ಎಲ್ಲಾ ಯೋಗ ಉತ್ಸಾಹಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಹಿನ್ನೆಲೆ

2024ರ ಜೂನ್ 21ರಂದು, 10ನೇ ʻಅಂತರರಾಷ್ಟ್ರೀಯ ಯೋಗ ದಿನಾಚರಣೆಯ(ಐಡಿವೈ) ಅಂಗವಾಗಿ ಪ್ರಧಾನಮಂತ್ರಿಯವರು ಶ್ರೀನಗರದ ʻಎಸ್‌ಕೆಐಸಿಸಿʼಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದರು. ಈ ವರ್ಷದ ಕಾರ್ಯಕ್ರಮವು ಯುವ ಮನಸ್ಸುಗಳು ಮತ್ತು ದೇಹದ ಮೇಲೆ ಯೋಗದ ಆಳವಾದ ಪ್ರಭಾವವನ್ನು ಒತ್ತಿಹೇಳುತ್ತದೆ. ಈ ಆಚರಣೆಯು ಯೋಗಾಭ್ಯಾಸದಲ್ಲಿ ಸಾವಿರಾರು ಜನರನ್ನು ಒಂದುಗೂಡಿಸುವ ಗುರಿಯನ್ನು ಹೊಂದಿದೆ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ.

ಪ್ರಧಾನಿಯವರು 2015ರಿಂದ ದೆಹಲಿ, ಚಂಡೀಗಢ, ಡೆಹ್ರಾಡೂನ್, ರಾಂಚಿ, ಲಕ್ನೋ, ಮೈಸೂರು ಮತ್ತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಪ್ರಧಾನ ಸ್ಥಳಗಳಲ್ಲಿ ʻಅಂತರರಾಷ್ಟ್ರೀಯ ಯೋಗ ದಿನʼ(ಐಡಿವೈ) ಆಚರಣೆಯ ನೇತೃತ್ವ ವಹಿಸಿದ್ದಾರೆ.

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ' ಎಂಬ ವಿಷಯಾಧಾರಿತವಾಗಿ ಆಚರಿಸಲಾಗುತ್ತಿದ್ದು, ಇದು ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಉತ್ತೇಜಿಸುವ ಅವಳಿ ಪಾತ್ರವನ್ನು ಎತ್ತಿ ತೋರುತ್ತದೆ. ಈ ಕಾರ್ಯಕ್ರಮವು ತಳಮಟ್ಟದ ಭಾಗವಹಿಸುವಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯೋಗದ ಪ್ರಚಾರವನ್ನು ಉತ್ತೇಜಿಸುತ್ತದೆ.

 

 

 

*****


(Release ID: 2027365) Visitor Counter : 64