ಪ್ರಧಾನ ಮಂತ್ರಿಯವರ ಕಛೇರಿ

ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಅನುವಾದ

Posted On: 14 JUN 2024 10:12PM by PIB Bengaluru

ಪ್ರಧಾನಮಂತ್ರಿ ಮೆಲೋನಿ

ಘನತೆವೆತ್ತ ಪೂಜ್ಯಪಾದರು

ಮಹಾಪ್ರಭು

ಘನತೆವೆತ್ತ

ಗೌರವಾನ್ವಿತರೇ,

ನಮಸ್ಕಾರ

ಮೊದಲನೆಯದಾಗಿ, ಈ ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಪ್ರಧಾನಿ ಮೆಲೋನಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಾನು ಚಾನ್ಸಲರ್ ಒಲಾಫ್ ಶೋಲ್ಜ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಜಿ -7 ಶೃಂಗಸಭೆಯ ಈ ಘಟನೆ ವಿಶೇಷ ಮತ್ತು ಐತಿಹಾಸಿಕವಾಗಿದೆ. ಈ ಗುಂಪಿನ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜಿ -7 ಯ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಸ್ನೇಹಿತರೇ,

ಕಳೆದ ವಾರ ನಿಮ್ಮಲ್ಲಿ ಅನೇಕರು ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳಲ್ಲಿ ನಿರತರಾಗಿದ್ದಿರಿ. ಕೆಲವು ಸ್ನೇಹಿತರು ಮುಂಬರುವ ಸಮಯದಲ್ಲಿ ಚುನಾವಣೆಯ ಉತ್ಸಾಹವನ್ನು ಅನುಭವಿಸುತ್ತಾರೆ. ಭಾರತದಲ್ಲೂ, ಕೆಲವು ತಿಂಗಳ ಹಿಂದೆ, ಅದು ಚುನಾವಣೆಯ ಸಮಯವಾಗಿತ್ತು. ಭಾರತದಲ್ಲಿ ಚುನಾವಣೆಗಳ ವಿಶಿಷ್ಟತೆ ಮತ್ತು ಪ್ರಮಾಣವನ್ನು ಕೆಲವು ಅಂಕಿಅಂಶಗಳಿಂದ ಅರ್ಥಮಾಡಿಕೊಳ್ಳಬಹುದು: 2600 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 1 ದಶಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳು, 5 ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ (ವಿದ್ಯುನ್ಮಾನ) ಮತದಾನ ಯಂತ್ರಗಳು, 15 ದಶಲಕ್ಷ ಮತದಾನ ಸಿಬ್ಬಂದಿ ಮತ್ತು ಸುಮಾರು 970 ದಶಲಕ್ಷ ಮತದಾರರು, ಅದರಲ್ಲಿ 640 ದಶಲಕ್ಷ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ತಂತ್ರಜ್ಞಾನದ ಸರ್ವವ್ಯಾಪಿ ಬಳಕೆಯಿಂದ ಇಡೀ ಚುನಾವಣಾ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕಗೊಳಿಸಲಾಗಿದೆ. ಮತ್ತು ಇಷ್ಟು ದೊಡ್ಡ ಚುನಾವಣೆಯ ಫಲಿತಾಂಶಗಳನ್ನು ಕೆಲವೇ ಗಂಟೆಗಳಲ್ಲಿ ಘೋಷಿಸಲಾಯಿತು! ಇದು ವಿಶ್ವದ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಮತ್ತು ಮಾನವೀಯತೆಯ ಇತಿಹಾಸದಲ್ಲಿ ಅತಿದೊಡ್ಡ ಹಬ್ಬವಾಗಿದೆ. ಇದು ಪ್ರಜಾಪ್ರಭುತ್ವದ ತಾಯಿಯಾಗಿ ನಮ್ಮ ಪ್ರಾಚೀನ ಮೌಲ್ಯಗಳಿಗೆ ಜೀವಂತ ಉದಾಹರಣೆಯಾಗಿದೆ. ಮತ್ತು ಭಾರತದ ಜನರು ಸತತ ಮೂರನೇ ಬಾರಿಗೆ ಅವರ ಸೇವೆ ಮಾಡುವ ಅವಕಾಶವನ್ನು ನನಗೆ ನೀಡಿರುವುದು ನನ್ನ ಅದೃಷ್ಟ. ಕಳೆದ ಆರು ದಶಕಗಳಲ್ಲಿ ಭಾರತದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ. ಈ ಐತಿಹಾಸಿಕ ವಿಜಯದ ರೂಪದಲ್ಲಿ ಭಾರತದ ಜನರು ನೀಡಿದ ಆಶೀರ್ವಾದವು ಪ್ರಜಾಪ್ರಭುತ್ವದ ಗೆಲುವು. ಇದು ಇಡೀ ಪ್ರಜಾಪ್ರಭುತ್ವ ಜಗತ್ತಿನ ಗೆಲುವು. ಮತ್ತು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಿಮ್ಮೆಲ್ಲರ ಸ್ನೇಹಿತರೊಂದಿಗೆ ಉಪಸ್ಥಿತರಿರಲು ನನಗೆ ತುಂಬಾ ಸಂತೋಷವಾಗಿದೆ.

ಗೌರವಾನ್ವಿತರೇ,

ಇಪ್ಪತ್ತೊಂದನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ. ತಂತ್ರಜ್ಞಾನದ ಪ್ರಭಾವದಿಂದ ವಂಚಿತವಾದ ಮಾನವ ಜೀವನದ ಯಾವುದೇ ಅಂಶವಿಲ್ಲ. ಒಂದೆಡೆ ತಂತ್ರಜ್ಞಾನವು ಮನುಷ್ಯನನ್ನು ಚಂದ್ರನಿಗೆ ಕರೆದೊಯ್ಯುವ ಧೈರ್ಯವನ್ನು ನೀಡಿದರೆ, ಮತ್ತೊಂದೆಡೆ ಇದು ಸೈಬರ್ ಭದ್ರತೆಯಂತಹ ಸವಾಲುಗಳನ್ನು ಸಹ ಸೃಷ್ಟಿಸುತ್ತದೆ. ತಂತ್ರಜ್ಞಾನದ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ನಾವು ಒಟ್ಟಾಗಿ ಖಚಿತಪಡಿಸಿಕೊಳ್ಳಬೇಕು, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು, ಸಾಮಾಜಿಕ ಅಸಮಾನತೆಗಳನ್ನು ತೆಗೆದುಹಾಕಲು ಸಹಾಯ ಮಾಡಬೇಕು ಮತ್ತು ಮಾನವ ಶಕ್ತಿಗಳನ್ನು ಸೀಮಿತಗೊಳಿಸುವ ಬದಲು ವಿಸ್ತರಿಸಬೇಕು. ಇದು ನಮ್ಮ ಬಯಕೆ ಮಾತ್ರವಲ್ಲ, ನಮ್ಮ ಜವಾಬ್ದಾರಿಯೂ ಆಗಿರಬೇಕು. ನಾವು ತಂತ್ರಜ್ಞಾನದಲ್ಲಿನ ಏಕಸ್ವಾಮ್ಯವನ್ನು ಸಾಮೂಹಿಕ ಬಳಕೆಗೆ ಪರಿವರ್ತಿಸಬೇಕಾಗಿದೆ. ನಾವು ತಂತ್ರಜ್ಞಾನವನ್ನು ಸೃಜನಶೀಲವಾಗಿಸಬೇಕು, ವಿನಾಶಕಾರಿಯಾಗಬಾರದು. ಆಗ ಮಾತ್ರ ನಾವು ಅಂತರ್ಗತ ಸಮಾಜದ ಅಡಿಪಾಯ ಹಾಕಲು ಸಾಧ್ಯವಾಗುತ್ತದೆ. ಭಾರತವು ತನ್ನ ಮಾನವ ಕೇಂದ್ರಿತ ವಿಧಾನದ ಮೂಲಕ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದೆ. ಕೃತಕ ಬುದ್ಧಿಮತ್ತೆಯ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಿದ ಮೊದಲ ಕೆಲವು ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಕಾರ್ಯತಂತ್ರದ ಆಧಾರದ ಮೇಲೆ, ಈ ವರ್ಷ ನಾವು ಎ.ಐ. ಮಿಷನ್ ಅನ್ನು ಪ್ರಾರಂಭಿಸಿದ್ದೇವೆ. ಇದು "ಎಲ್ಲರಿಗೂ ಎ.ಐ" ಎಂಬ ಮಂತ್ರದಿಂದ ಬಂದಿದೆ. ಎಐಗಾಗಿ ಜಾಗತಿಕ ಪಾಲುದಾರಿಕೆಯ ಸ್ಥಾಪಕ ಸದಸ್ಯ ಮತ್ತು ಪ್ರಮುಖ ಅಧ್ಯಕ್ಷರಾಗಿ, ನಾವು ಎಲ್ಲಾ ದೇಶಗಳ ನಡುವೆ ಸಹಕಾರವನ್ನು ಉತ್ತೇಜಿಸುತ್ತಿದ್ದೇವೆ. ಕಳೆದ ವರ್ಷ ಭಾರತ ಆಯೋಜಿಸಿದ್ದ ಜಿ-20 ಶೃಂಗಸಭೆಯಲ್ಲಿ ನಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಆಡಳಿತದ ಮಹತ್ವವನ್ನು ಒತ್ತಿ ಹೇಳಿದ್ದೇವೆ. ಮುಂಬರುವ ದಿನಗಳಲ್ಲಿ, ಎಐ ಅನ್ನು ಪಾರದರ್ಶಕ, ನ್ಯಾಯಯುತ, ಸುರಕ್ಷಿತ, ಪ್ರವೇಶಿಸಬಹುದಾದ ಮತ್ತು ಜವಾಬ್ದಾರಿಯುತವಾಗಿಸಲು ನಾವು ಎಲ್ಲಾ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

ಗೌರವಾನ್ವಿತರೇ,

ಇಂಧನ ಕ್ಷೇತ್ರದಲ್ಲಿ ಭಾರತದ ವಿಧಾನವು ನಾಲ್ಕು ತತ್ವಗಳನ್ನು ಆಧರಿಸಿದೆ - ಲಭ್ಯತೆ, ಪ್ರವೇಶ, ಕೈಗೆಟುಕುವಿಕೆ ಮತ್ತು ಸ್ವೀಕಾರಾರ್ಹತೆ. ಸಿಒಪಿ ಅಡಿಯಲ್ಲಿ ಮಾಡಿದ ಎಲ್ಲಾ ಬದ್ಧತೆಗಳನ್ನು ಸಮಯಕ್ಕೆ ಮುಂಚಿತವಾಗಿ ಪೂರೈಸಿದ ಮೊದಲ ದೇಶ ಭಾರತ. ಮತ್ತು 2070ರ ವೇಳೆಗೆ ನಿವ್ವಳ ಶೂನ್ಯದ ಗುರಿಯನ್ನು ಸಾಧಿಸುವ ನಮ್ಮ ಬದ್ಧತೆಯನ್ನು ಪೂರೈಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ಒಟ್ಟಾಗಿ ಮುಂಬರುವ ಸಮಯವನ್ನು ಹಸಿರು ಯುಗವನ್ನಾಗಿ ಮಾಡಲು ಪ್ರಯತ್ನಿಸಬೇಕು. ಇದಕ್ಕಾಗಿ ಭಾರತವು ಮಿಷನ್ ಲೈಫ್ ಅಂದರೆ ಪರಿಸರಕ್ಕಾಗಿ ಜೀವನಶೈಲಿಯನ್ನು ಪ್ರಾರಂಭಿಸಿದೆ. ಈ ಅಭಿಯಾನವನ್ನು ಮುಂದಕ್ಕೆ ತೆಗೆದುಕೊಂಡು, ಪರಿಸರ ದಿನವಾದ ಜೂನ್ 5 ರಂದು, ನಾನು "ಏಕ್ ಪೆಡ್ ಮಾ ಕೆ ನಾಮ್" ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದೇನೆ. ಪ್ರತಿಯೊಬ್ಬರೂ ತಮ್ಮ ತಾಯಿಯನ್ನು ಪ್ರೀತಿಸುತ್ತಾರೆ. ಈ ಭಾವನೆಯೊಂದಿಗೆ, ಮರ ನೆಡುವಿಕೆಯನ್ನು ವೈಯಕ್ತಿಕ ಸ್ಪರ್ಶ ಮತ್ತು ಜಾಗತಿಕ ಜವಾಬ್ದಾರಿಯೊಂದಿಗೆ ಸಾಮೂಹಿಕ ಆಂದೋಲನವನ್ನಾಗಿ ಮಾಡಲು ನಾವು ಬಯಸುತ್ತೇವೆ. ನೀವೆಲ್ಲರೂ ಇದರಲ್ಲಿ ಸೇರಬೇಕೆಂದು ನಾನು ಒತ್ತಾಯಿಸುತ್ತೇನೆ. ನನ್ನ ತಂಡವು ಅದರ ವಿವರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತದೆ.

ಗೌರವಾನ್ವಿತರೇ,

2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ. ದೇಶದ ಅಭಿವೃದ್ಧಿಯ ಪಯಣದಲ್ಲಿ ಸಮಾಜದ ಯಾವುದೇ ವರ್ಗವನ್ನು ಹಿಂದೆ ಬಿಡಬಾರದು ಎಂಬುದು ನಮ್ಮ ಬದ್ಧತೆಯಾಗಿದೆ. ಅಂತಾರಾಷ್ಟ್ರೀಯ ಸಹಕಾರದ ಸಂದರ್ಭದಲ್ಲಿಯೂ ಇದು ಮುಖ್ಯವಾಗಿದೆ. ಜಾಗತಿಕ ದಕ್ಷಿಣದ ದೇಶಗಳು ಜಾಗತಿಕ ಅನಿಶ್ಚಿತತೆ ಮತ್ತು ಉದ್ವಿಗ್ನತೆಯ ಭಾರವನ್ನು ಹೊರುತ್ತಿವೆ. ಜಾಗತಿಕ ದಕ್ಷಿಣದ ದೇಶಗಳ ಆದ್ಯತೆಗಳು ಮತ್ತು ಕಾಳಜಿಗಳನ್ನು ವಿಶ್ವ ವೇದಿಕೆಯಲ್ಲಿ ಇಡುವುದು ತನ್ನ ಜವಾಬ್ದಾರಿ ಎಂದು ಭಾರತ ಪರಿಗಣಿಸಿದೆ. ಈ ಪ್ರಯತ್ನಗಳಲ್ಲಿ ನಾವು ಆಫ್ರಿಕಾಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಭಾರತದ ಅಧ್ಯಕ್ಷತೆಯಲ್ಲಿ ಜಿ -20 ಆಫ್ರಿಕನ್ ಒಕ್ಕೂಟವನ್ನು ಖಾಯಂ ಸದಸ್ಯನನ್ನಾಗಿ ಮಾಡಿದೆ ಎಂದು ನಾವು ಹೆಮ್ಮೆಪಡುತ್ತೇವೆ. ಭಾರತವು ಎಲ್ಲಾ ಆಫ್ರಿಕನ್ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಸ್ಥಿರತೆ ಮತ್ತು ಭದ್ರತೆಗೆ ಕೊಡುಗೆ ನೀಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ.

ಗೌರವಾನ್ವಿತರೇ,

ಇಂದಿನ ಸಭೆ ಎಲ್ಲಾ ದೇಶಗಳ ಆದ್ಯತೆಗಳ ನಡುವಿನ ಆಳವಾದ ಒಮ್ಮತವನ್ನು ಪ್ರತಿಬಿಂಬಿಸುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ನಾವು ಜಿ -7 ನೊಂದಿಗೆ ಮಾತುಕತೆ ಮತ್ತು ಸಹಕಾರವನ್ನು ಮುಂದುವರಿಸುತ್ತೇವೆ.

ತುಂಬ ಧನ್ಯವಾದಗಳು.

ಹಕ್ಕುನಿರಾಕರಣೆ - ಇದು ಪ್ರಧಾನ ಮಂತ್ರಿ ಅವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

*****



(Release ID: 2025543) Visitor Counter : 25