ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾಗಿ ಶ್ರೀ ಸುರೇಶ್ ಗೋಪಿ ಅವರು ಅಧಿಕಾರ ಸ್ವೀಕಾರ

Posted On: 11 JUN 2024 5:16PM by PIB Bengaluru

ಕೇರಳದ ತ್ರಿಶೂರ್‌ ಸಂಸದ ಶ್ರೀ ಸುರೇಶ್ ಗೋಪಿ ಅವರು ದೆಹಲಿಯಲ್ಲಿಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ವಿವಿಧ ಕ್ಷೇತ್ರಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಶ್ರೀ ಗೋಪಿ ಅವರು, ತಮ್ಮ ಹಿಂದಿನ ಶ್ರೀ ರಾಮೇಶ್ವರ ತೇಲಿ ಅವರ ನಂತರ ಈ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 

 


ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ನೂತನ ರಾಜ್ಯ ಸಚಿವ ಶ್ರೀ ಗೋಪಿ ಅವರಿಗೆ ಆತ್ಮೀಯ ಸ್ವಾಗತ ಕೋರಿದರು.

1958 ಜೂನ್ 26ರಂದು ಕೇರಳದ ಅಲಪ್ಪುಳದಲ್ಲಿ ಜನಿಸಿದ ಗೋಪಿ ಅವರು, ಮನರಂಜನಾ ಉದ್ಯಮ ಮತ್ತು ಸಾರ್ವಜನಿಕ ಸೇವೆ ಎರಡರಲ್ಲೂ ವಿಶಿಷ್ಟವಾದ ವೃತ್ತಿಜೀವನ ನಡೆಸುತ್ತಿದ್ದಾರೆ. ಅವರು ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನಿಂದ ಪ್ರಾಣಿಶಾಸ್ತ್ರದಲ್ಲಿ ವಿಜ್ಞಾನ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಅವರ ವ್ಯಾಪಕ ವೃತ್ತಿ ಹಿನ್ನೆಲೆಯು 2016ರಿಂದ 2022ರ ವರೆಗೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಲು ನೆರವಾಗಿದೆ. ಪರಿಸರ ಸಮಸ್ಯೆಗಳಿಗೆ ಪರಿಹಾರ ಮತ್ತು ಸಾಮಾಜಿಕ ನ್ಯಾಯ ಒದಗಿಸಿದ ಸೇವಾ ಸಮರ್ಥನೆಗೆ ಅವರು ಹೆಸರುವಾಸಿಯಾಗಿದ್ದರು.

ಗೋಪಿ ಅವರ ರಾಜಕೀಯ ಪ್ರವೇಶವು ಲೋಕೋಪಕಾರ ಮತ್ತು ಸಾಮಾಜಿಕ ಕಾರ್ಯಗಳ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರತಿನಿಧಿಸುವ ಮೂಲಕ ತ್ರಿಶೂರ್‌ನ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾಗಿ ಅವರ ನೇಮಕವು ಈ ನಿರ್ಣಾಯಕ ವಲಯವನ್ನು ಮೇಲ್ವಿಚಾರಣೆ ಮಾಡುವ ಅವರ ಸಾಮರ್ಥ್ಯಗಳ ಬಗ್ಗೆ ಸರ್ಕಾರ ಹೊಂದಿರುವ  ನಂಬಿಕೆಯನ್ನು ಸೂಚಿಸುತ್ತದೆ.

ಸುರೇಶ್ ಗೋಪಿ ಅವರು ತಮ್ಮ ವೈವಿಧ್ಯಮಯ ಅನುಭವಗಳು ಮತ್ತು ಸಾರ್ವಜನಿಕ ಸೇವಾ ಉತ್ಸಾಹವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ತರಲು ಸಿದ್ಧರಾಗಿದ್ದಾರೆ. ಈ ವಲಯದಲ್ಲಿ ನಾವೀನ್ಯತೆ ಮತ್ತು ದಕ್ಷತೆ ಹೆಚ್ಚಿಸುವ ಗುರಿ ಹೊಂದಿದ್ದಾರೆ.

*****



(Release ID: 2024954) Visitor Counter : 20