ಪ್ರಧಾನ ಮಂತ್ರಿಯವರ ಕಛೇರಿ

ಬಂಗಾಳ ಕೊಲ್ಲಿಯ ಉತ್ತರ ದಿಕ್ಕಿನಲ್ಲಿ "ರೆಮಲ್" ಚಂಡಮಾರುತದ ಸನ್ನದ್ಧತೆ;  ಪ್ರಧಾನಿ ಪರಿಶೀಲನೆ : ಈ ಪ್ರಬಲ ಚಂಡಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ


ಭಾರತ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಮತ್ತು ಅದನ್ನು ಮುಂದುವರಿಸಲಿದೆ: ಪ್ರಧಾನಿ ಹೇಳಿಕೆ

ಬಂಗಾಳ ಕೊಲ್ಲಿಯ ದಕ್ಷಿಣ ಭಾಗ ಮತ್ತು ಅಂಡಮಾನ್ ದ್ವೀಪಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ; ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಪ್ರಸ್ತುತ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಿಯೋಜನೆಗೊಂಡಿರುವ ಎನ್‌ಡಿಆರ್‌ಎಫ್ ತಂಡದೊಂದಿಗೆ, ಹೆಚ್ಚಿನ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲು ಮತ್ತು 1 ಗಂಟೆಯೊಳಗೆ ತೆರಳಲು ಸಿದ್ಧವಾಗುವಂತೆ ಪ್ರಧಾನಿ ಸೂಚನೆ

ನಿಯಮಿತ ಪರಿಷ್ಕರಣೆಯೊಂದಿಗೆ ಬಾಂಗ್ಲಾದೇಶಕ್ಕೂ ಮಾಹಿತಿ ಬೆಂಬಲ ವಿಸ್ತರಿಸಲಾಗಿದೆ

Posted On: 26 MAY 2024 9:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಇಂದು ಮುಂಜಾನೆ 7 ಗಂಟೆಗೆ ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ಕಾಣಿಸಿಕೊಳ್ಳುವ "ರೆಮಲ್" ಚಂಡಮಾರುತದ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪ್ರಬಲ ರೆಮಲ್ ಚಂಡಮಾರುತ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿಯ ಸಾಗರ್ ದ್ವೀಪಗಳು ಮತ್ತು ಖೆಪುಪಾರಾ ನಡುವೆ ಹಾಗೂ ಬಾಂಗ್ಲಾದೇಶದ ಮೊಂಗ್ಲಾ ನೈಋತ್ಯಕ್ಕೆ ಸಮೀಪ ಇಂದು ಮಧ್ಯರಾತ್ರಿಯ ಹೊತ್ತಿಗೆ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸಲಾಗಿದೆ ಎಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ಪ್ರಧಾನಿಗೆ ವಿವರ ನೀಡಿತು. ಬಂಗಾಳ ಕೊಲ್ಲಿಯ ದಕ್ಷಿಣ ಭಾಗ ಮತ್ತು ಅಂಡಮಾನ್ ಸಮುದ್ರಕ್ಕೆ ಇಳಿಯದಂತೆ ಎಲ್ಲಾ ಮೀನುಗಾರರಿಗೆ ಸೂಚಿಸಲಾಗಿದೆ. ಸುಮಾರು 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ನಿಯಮಿತ ಪರಿಷ್ಕರಣೆಯೊಂದಿಗೆ ಬಾಂಗ್ಲಾದೇಶಕ್ಕೆ ಮಾಹಿತಿ ಬೆಂಬಲ ನೀಡುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಮತ್ತು ಅದನ್ನು ಮುಂದುವರಿಸಲಿದೆ ಎಂದರು. ಗೃಹ ವ್ಯವಹಾರಗಳ ಸಚಿವಾಲಯವು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಬೇಕು ಮತ್ತು ಚಂಡಮಾರುತದಿಂದ ಉಂಟಾಗುವ ಭೂಕುಸಿತದ ನಂತರ ಎದುರಾಗುವ ಸಮಸ್ಯೆಗಳಿಗೆ ಅಗತ್ಯ ನೆರವು ನೀಡಲು ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ನಿಯೋಜಿಸಲಾಗಿರುವ 12 ಎನ್‌ಡಿಆರ್‌ಎಫ್ ತಂಡಗಳು ಮತ್ತು ಒಡಿಶಾದ 1 ತಂಡ ಹೊರತುಪಡಿಸಿ, 1 ತಾಸಿನೊಳಗೆ ಸಾಗಬಲ್ಲ ಹೆಚ್ಚಿನ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಪ್ರಧಾನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾವುದೇ ತುರ್ತು ಪರಿಸ್ಥಿತಿಗಾಗಿ ಭಾರತೀಯ ಕರಾವಳಿ ಕಾವಲು ಪಡೆ(ಕೋಸ್ಟ್ ಗಾರ್ಡ್) ತನ್ನ ರಕ್ಷಣಾ ಮತ್ತು ಪರಿಹಾರ ಸಾಮಗ್ರಿ ಅಥವಾ ಸ್ವತ್ತುಗಳನ್ನು ನಿಯೋಜಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದರು, ರೈಲ್ವೆ ಮತ್ತು ಹೆದ್ದಾರಿಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಎನ್‌ಡಿಆರ್‌ಎಫ್ ಮಹಾನಿರ್ದೇಶಕರು, ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಮತ್ತು ಎನ್‌ಡಿಎಂಎ ಸದಸ್ಯ ಕಾರ್ಯದರ್ಶಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

*****



(Release ID: 2021776) Visitor Counter : 28