ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಾನ್ಸ್ ಚಲನಚಿತ್ರೋತ್ಸವದ ಕೇಂದ್ರ ಬಿಂದುವಾದ ಭಾರತ್ ಪರ್ವ್ ಆಚರಣೆ
ಭಾರತೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಸಿನಿಮಾಗಳನ್ನು ಜಗತ್ತಿಗೆ ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು
55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
ಜಾಗತಿಕ ಸಿನಿಮಾಗಳನ್ನು ಸಂಭ್ರಮಿಸುವ ವೇದಿಕೆಯಾಗಿರುವ 77ನೇ ಕಾನ್ಸ್ ಚಲನಚಿತ್ರೋತ್ಸವ ಎರಡು ದಿನಗಳ ಹಿಂದೆ ಅದ್ದೂರಿಯಾಗಿ ಆರಂಭವಾಯಿತು. ಹತ್ತು ದಿನಗಳ ಕಾಲ ನಡೆಯುವ ಈ ಚಲನಚಿತ್ರೋತ್ಸವ 'ಕಂಟೆಂಟ್ ಹಾಗೂ ಗ್ಲಾಮರ್' ಗಳ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ.
ಈ ಚಲನಚಿತ್ರೋತ್ಸವದಲ್ಲಿ ಭಾರತವು ದೇಶದ ಶ್ರೀಮಂತ ಸಂಸ್ಕೃತಿ, ಪಾಕಪದ್ಧತಿ, ಕರಕುಶಲತೆ ಮತ್ತು ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರ ಪಡಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಭರತ್ ಪರ್ವ್ ಎಂಬ ಕಾರ್ಯಕ್ರಮವನ್ನು ಫ್ರೆಂಚ್ ರಿವೇರಿಯಾದಲ್ಲಿ ಆಯೋಜಿಸಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಈ ಕಾರ್ಯಕ್ರ್ರಮವನ್ನು ಉದ್ಘಾಟಿಸಿದರು.
ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ FICCI ಸಹಯೋಗದೊಂದಿಗೆ NFDC ಆಯೋಜಿಸಿದ ಈ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಕಂಡಿತು. ಕಾನ್ಸ್ ಪ್ರತಿನಿಧಿಗಳು ಭಾರತೀಯರು ಪ್ರದರ್ಶಿಸಿದ ಕಾರ್ಯಕ್ರಮಗಳನ್ನು ಮತ್ತು ಭಾರತದ ವಿವಿಧ ಪಾಕಗಳನ್ನು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಾಜು ಅವರು ಗೋವಾದಲ್ಲಿ ನಡೆಯಲಿರುವ 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಈ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಲಾಗಿರುವ ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್‌ಟೈನ್‌ಮೆಂಟ್ ಶೃಂಗಸಭೆ (WAVES) ಉದ್ಘಾಟನಾ ಆವೃತ್ತಿಯ ಸೇವ್ ಡೇಟ್ ಪೋಸ್ಟರ್ ಗಳನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕರಾದ ಅಶೋಕ್ ಅಮೃತರಾಜ್, ರಿಚಿ ಮೆಹ್ತಾ, ಗಾಯಕ ಶಾನ್, ನಟ ರಾಜಪಾಲ್ ಯಾದವ್, ಹಿರಿಯ ನಟ ಬಾಬಿ ಬೇಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭಾರತ್ ಪರ್ವ್ ಕಾರ್ಯಕ್ರಮಕ್ಕಾಗಿಯೇ ಭಾರತದ ವಿಶೇಷ ಖಾದ್ಯ ಮತ್ತು ಆಹಾರ ಸಿದ್ಧಪಡಿಸಲು ಹೆಸರಾಂತ ಬಾಣಸಿಗ ವರುಣ್ ಟೋಟ್ಲಾನಿ ಅವರನ್ನು ಕರೆಸಲಾಗಿತ್ತು.
ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಗಾಯಕಿ ಸುನಂದಾ ಶರ್ಮಾ ಅವರು ಉದಯೋನ್ಮುಖ ಗಾಯಕರಾದ ಪ್ರಗತಿ, ಅರ್ಜುನ್ ಮತ್ತು ಶಾನ್ ಅವರ ಮಗ ಮಾಹಿ ಅವರೊಂದಿಗೆ ಪಂಜಾಬಿ ಹಾಡುಗಳನ್ನು ಹಾಡಿ ಕಾನ್ಸ್ ಪ್ರತಿನಿಧಿಗಳನ್ನು ರಂಜಿಸಿದರು. 'ಮಾ ತುಜೆ ಸಲಾಮ್' ಹಾಡಿನ ಮೂಲಕ ಕಾರ್ಯಕ್ರಮವು ಅಂತ್ಯಗೊಂಡಿತು.
ಹೆಚ್ಚಿನ ಸಂಖ್ಯೆಯಲ್ಲಿ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯು ಭಾರತ್ ಪರ್ವ್ ಕಾರ್ಯಕ್ರಮದ ಆಕರ್ಷಣೆ ಮತ್ತು ಮಹತ್ವವನ್ನು ಹೆಚ್ಚಿಸಿತು. ತಮ್ಮ ಆಕರ್ಷಕ ಅಭಿನಯಕ್ಕೆ ಹೆಸರುವಾಸಿಯಾಗಿರುವ ನಟಿ ಶೋಭಿತಾ ಧೂಳಿಪಾಲ, ಅಸ್ಸಾಮಿ ನಟಿ ಅಮಿ ಬರೌವಾ, ಚಿತ್ರ ವಿಮರ್ಶಕಿ ಅನುಪಮಾ ಚೋಪ್ರಾ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರಲ್ಲಿ ಪ್ರಮುಖರು. ಅವರ ಭಾಗವಹಿಸುವಿಕೆ ಭಾರತೀಯ ಚಿತ್ರರಂಗದ ಶ್ರೀಮಂತ ಪರಂಪರೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನೆಮಾಗಳ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ.
ಜಾಗತಿಕ ವೇದಿಕೆಯಲ್ಲಿ ಭಾರತದ ಚಲನಚಿತ್ರ, ಸಂಸ್ಕೃತಿ ಮತ್ತು ಕಲಾತ್ಮಕತೆಗಳ ಸಂಭ್ರಮದ ಆಚರಣೆಗೆ ಸಾಕ್ಷಿಯಾದ ಕಾರ್ಯಕ್ರಮ ಇದಾಗಿತ್ತು.
*****
(Release ID: 2020928)
Visitor Counter : 63
Read this release in:
English
,
Urdu
,
Marathi
,
Hindi
,
Hindi_MP
,
Bengali
,
Punjabi
,
Gujarati
,
Odia
,
Odia
,
Tamil
,
Telugu
,
Malayalam