ಪ್ರಧಾನ ಮಂತ್ರಿಯವರ ಕಛೇರಿ

ಭೂತಾನ್‌ಗೆ ಭಾರತದ ಪ್ರಧಾನಮಂತ್ರಿಯವರ ಅಧಿಕೃತ ಭೇಟಿಯ ಕುರಿತು ಜಂಟಿ ಹೇಳಿಕೆ


ಭಾರತ ಮತ್ತು ಭೂತಾನ್: ಪ್ರಗತಿ ಮತ್ತು ಅಭಿವೃದ್ಧಿಗಾಗಿ ಒಟ್ಟಾಗಿವೆ

Posted On: 22 MAR 2024 7:18PM by PIB Bengaluru

ಭಾರತ ಮತ್ತು ಭೂತಾನ್ ಶತಮಾನಗಳಿಂದಲೂ ಪರಸ್ಪರ ನಂಬಿಕೆ, ಸದ್ಭಾವನೆ ಮತ್ತು ಅರಿವಿನ ಅಡಿಪಾಯದಲ್ಲಿ ನೆಲೆಗೊಂಡ ಸ್ನೇಹ ಹಾಗೂ ಸಹಕಾರದ ನಿಕಟ ಬಾಂಧವ್ಯವನ್ನು ಅನುಭವಿಸುತ್ತಾ ಬಂದಿವೆ. ನಮ್ಮ ಸಾಂಸ್ಕೃತಿಕ ನಂಟುಗಳು ಹಾಗೂ ಸಾಮಾನ್ಯ ಭೌಗೋಳಿಕತೆ ನಮ್ಮನ್ನು ಪರಸ್ಪರ ಸಂಪರ್ಕಿಸುತ್ತವೆ.

ಬಲವಾದ ಆರ್ಥಿಕ ಮತ್ತು ಹಣಕಾಸು ಸಂಬಂಧಗಳು ನಮ್ಮನ್ನು ಹಿಡಿದಿಟ್ಟಿವೆ. ಭಾರತ ಮತ್ತು ಭೂತಾನ್ ಜನರ ನಡುವಿನ ನಿಕಟ ಸ್ನೇಹವು, ಉಭಯ ದೇಶಗಳ ಬಾಂಧವ್ಯದ ಹೃದಯ ಭಾಗದಲ್ಲಿದೆ. ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳು ಅಸಾಧಾರಣ ನೆರೆಹೊರೆಯ ಸಂಬಂಧಗಳಿಗೆ ಉದಾಹರಣೆಯಾಗಿದೆ.

ಉಭಯ ರಾಷ್ಟ್ರಗಳ ನಡುವಿನ ನಿರಂತರ ಪಾಲುದಾರಿಕೆಯು ನಮ್ಮ ಸಾಮಾನ್ಯ ಮೌಲ್ಯಗಳು ಹಾಗೂ ನಮ್ಮ ಸಾಮಾನ್ಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ನೆಲೆಗೊಂಡಿದೆ. ಭೂತಾನ್‌ಗೆ ಭಾರತ ಮತ್ತು ಭಾರತಕ್ಕೆ ಭೂತಾನ್ ಎಂಬುದು ಭೂಭಾಗದಲ್ಲಿ ಒಂದು ಶಾಶ್ವತ ವಾಸ್ತವವಾಗಿದೆ. ಇದು ಭೂತಾನ್‌ನ ʻಡ್ರುಕ್ ಗ್ಯಾಲ್ಪೋಸ್ʼ ಪರಂಪರೆ ಹಾಗೂ ಭಾರತ ಮತ್ತು ಭೂತಾನ್‌ನ ರಾಜಕೀಯ ನಾಯಕತ್ವದ ಪ್ರಬುದ್ಧ ದೃಷ್ಟಿಕೋನದಿಂದ ಪೋಷಿಸಲ್ಪಟ್ಟಿದೆ.

ಪರಸ್ಪರ ಭದ್ರತೆಗೆ ಸಂಬಂಧಿಸಿದ ನಮ್ಮ ಉಭಯ ದೇಶಗಳ ನಡುವಿನ ಸಹಕಾರದ ಬಗ್ಗೆ ನಾವು ತೃಪ್ತಿಯನ್ನು ವ್ಯಕ್ತಪಡಿಸುತ್ತೇವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪರಸ್ಪರ ನಿಕಟ ಸಮನ್ವಯ ಮತ್ತು ಸಹಕಾರವನ್ನು ಮುಂದುವರಿಸಲು ನಾವು ಸಹಮತಿಸುತ್ತೇವೆ.

ಒಟ್ಟಾಗಿ, ನಾವು ನಮ್ಮ ಅನನ್ಯ ಮತ್ತು ವಿಶೇಷ ಸಂಬಂಧಗಳನ್ನು ಮುನ್ನಡೆಸುವ ಪರಿವರ್ತನಕಾರಿ ಪಾಲುದಾರಿಕೆಯನ್ನು ಮುಂದುವರಿಸುತ್ತೇವೆ. ರೈಲು ಸಂಪರ್ಕಗಳು, ರಸ್ತೆಗಳು, ವಾಯು, ಜಲಮಾರ್ಗಗಳ ಮೂಲಕ ವಿಶಾಲ ಭೌತಿಕ ಸಂಪರ್ಕ ವಿಸ್ತರಣೆ; ಸರಕು ಮತ್ತು ಸೇವೆಗಳ ತಡೆರಹಿತ ಗಡಿಯಾಚೆಗಿನ ಚಲನೆಗಾಗಿ ವ್ಯಾಪಾರ ಮೂಲಸೌಕರ್ಯ ವೃದ್ಧಿ ಹಾಗೂ ಡಿಜಿಟಲ್ ಸಂಪರ್ಕದ ಉತ್ತೇಜನವು ಇದರಲ್ಲಿ ಸೇರಿವೆ.

1961ರಲ್ಲಿ ಭೂತಾನ್‌ನ ಮೊದಲ ಪಂಚವಾರ್ಷಿಕ ಯೋಜನೆಯ ನಂತರ, ಭೂತಾನ್‌ನೊಂದಿಗಿನ ಭಾರತದ ಅಭಿವೃದ್ಧಿ ಪಾಲುದಾರಿಕೆಯು ಜನರನ್ನು ಸಬಲೀಕರಣಗೊಳಿಸುತ್ತಿದೆ ಹಾಗೂ ಎಲ್ಲಾ ವಲಯಗಳು ಮತ್ತು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಭಾರತದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ತತ್ವ ಹಾಗೂ ಭೂತಾನ್‌ನ ʻಒಟ್ಟು ರಾಷ್ಟ್ರೀಯ ಸಂತೋಷʼದ ತತ್ವದ ಸಂಗಮವಾಗಿದೆ. ಭೂತಾನ್ ಜನತೆಯ ಮತ್ತು ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ ಮತ್ತು ಘನತೆವೆತ್ತ ಮಹಾರಾಜರ ದೃಷ್ಟಿಕೋನಕ್ಕೆ ಅನುಗುಣವಾಗಿ ನಾವು ನಮ್ಮ ಅಭಿವೃದ್ಧಿ ಪಾಲುದಾರಿಕೆಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ.

ನಮ್ಮ ಇಂಧನ ಸಹಕಾರವು ಆಳವಾದ ಆರ್ಥಿಕ ಪಾಲುದಾರಿಕೆಗೆ ದೃಗೋಚರ ಉದಾಹರಣೆಯಾಗಿದ್ದು, ಇದು ಪರಸ್ಪರ ಪ್ರಯೋಜನಕಾರಿ ಫಲಿತಾಂಶಗಳಿಗೆ ಕಾರಣವಾಗುತ್ತದೆ. ನಾವು ಜಲವಿದ್ಯುತ್, ಸೌರ ಮತ್ತು ಹಸಿರು ಜಲಜನಕ ಕ್ಷೇತ್ರಗಳಲ್ಲಿ ನಮ್ಮ ಶುದ್ಧ ಇಂಧನ ಪಾಲುದಾರಿಕೆ ವಿಸ್ತರಣೆಯನ್ನು ಮುಂದುವರಿಸುತ್ತೇವೆ. ಜೊತೆಗೆ ಹೊಸ ಯೋಜನೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತೇವೆ. ಇದು ಎರಡೂ ದೇಶಗಳ ನುರಿತ ಪ್ರತಿಭೆಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮ ತಾಂತ್ರಿಕ ಪರಾಕ್ರಮ, ವ್ಯಾಪಾರ ಕ್ಷೇತ್ರದ ಸಾಮರ್ಥ್ಯ ವೃದ್ಧಿ ಹಾಗೂ ಪ್ರದೇಶದಲ್ಲಿ ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ, ಭಾರತ-ಭೂತಾನ್ ಇಂಧನ ಪಾಲುದಾರಿಕೆ ಕುರಿತ ಜಂಟಿ ದೂರದೃಷ್ಟಿಯ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.

ನಮ್ಮ ರಾಷ್ಟ್ರಗಳು ಅಗಾಧ ಡಿಜಿಟಲ್ ಮತ್ತು ತಾಂತ್ರಿಕ ರೂಪಾಂತರಕ್ಕೆ ಒಳಗಾಗುತ್ತಿರುವ   ಸಮಯದಲ್ಲಿ, ತ್ವರಿತ ಆರ್ಥಿಕ ಬೆಳವಣಿಗೆಗೆ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮತ್ತು ಉಭಯ ದೇಶಗಳ ಜನರ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಮ್ಮ ಜಂಟಿ ಪ್ರಯತ್ನಗಳು ನಡೆಯಲಿವೆ. ಬಾಹ್ಯಾಕಾಶ ತಂತ್ರಜ್ಞಾನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನವೋದ್ಯಮಗಳು, ಕೃತಕ ಬುದ್ಧಿಮತ್ತೆ, ಶುದ್ಧ ಇಂಧನ, ʻಸ್ಟೆಮ್ʼ ಸಂಶೋಧನೆ ಹಾಗೂ ಶಿಕ್ಷಣ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಯ ಪ್ರಮುಖ ಕ್ಷೇತ್ರಗಳಲ್ಲಿ ನಾವು ನಮ್ಮ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸುತ್ತೇವೆ.

ನಾವು, ವಿಶೇಷವಾಗಿ ಖಾಸಗಿ ವಲಯದ ಮೂಲಕ ಪರಸ್ಪರ ವ್ಯಾಪಾರ ಮತ್ತು ಹೂಡಿಕೆ ಸಂಪರ್ಕಗಳನ್ನು ಬಲಪಡಿಸುತ್ತೇವೆ. ಸುಸ್ಥಿರ ರೀತಿಯಲ್ಲಿ ಪ್ರದೇಶದಲ್ಲಿ ಹೆಚ್ಚಿನ ಆರ್ಥಿಕ ಸಂಪರ್ಕಕ್ಕೆ ಕಾರಣವಾಗುವ, ಆರ್ಥಿಕ ಪಾಲುದಾರಿಕೆಯನ್ನು ಉತ್ತೇಜಿಸುವ ಹಾಗೂ ಭಾರತ- ಭೂತಾನ್ ಜನರನ್ನು ಹತ್ತಿರ ತರುವ ʻಗೆಲೆಫು ವಿಶೇಷ ಆಡಳಿತ ಪ್ರದೇಶʼವನ್ನು ಅಭಿವೃದ್ಧಿಪಡಿಸುವ ಘನತೆವೆತ್ತ ಮಹಾರಾಜರ ದೃಷ್ಟಿಕೋನದ ಅನುಸಾರವಾಗಿ ನಾವು ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ.

ಜನರ ನಡುವಿನ ಅತ್ಯುತ್ತಮ ಸಂಬಂಧಗಳು ನಮ್ಮ ಅಸಾಧಾರಣ ದ್ವಿಪಕ್ಷೀಯ ಸಂಬಂಧಗಳಿಗೆ ಅಡಿಪಾಯವನ್ನು ಒದಗಿಸುತ್ತವೆ. ವಿದ್ವಾಂಸರು, ಶಿಕ್ಷಣ ತಜ್ಞರು, ಪ್ರವಾಸಿಗರು, ವಿದ್ಯಾರ್ಥಿಗಳು, ಯುವಕರು, ಕ್ರೀಡಾಪಟುಗಳ ವಿನಿಮಯವನ್ನು ಉತ್ತೇಜಿಸುವ ಮೂಲಕ ನಾವು ನಮ್ಮ ಜನರ ನಡುವೆ ಸಂಪರ್ಕವನ್ನು ಬೆಳೆಸುತ್ತೇವೆ. ಉಭಯ ದೇಶಗಳಲ್ಲಿನ ಸಾಂಸ್ಕೃತಿಕ ಪರಂಪರೆಯ ತಾಣಗಳಿಗೆ ಪರಸ್ಪರ ಜನರ ಭೇಟಿ ಸೇರಿದಂತೆ ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಪೋಷಣೆಯನ್ನು ನಾವು ಮುಂದುವರಿಸುತ್ತೇವೆ.

ಶಿಕ್ಷಣ, ಕೌಶಲ್ಯ, ಉದ್ಯಮಶೀಲತೆ, ತಂತ್ರಜ್ಞಾನ, ಕ್ರೀಡೆ, ಸೃಜನಶೀಲ ಮತ್ತು ಸಾಂಸ್ಕೃತಿಕ ವಲಯಗಳ ಮೂಲಕ ಯುವಜನರ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯನ್ನು ವೇಗಗೊಳಿಸುವ ಅನಿವಾರ್ಯತೆಯನ್ನು ನಾವು ಗುರುತಿಸಿದ್ದೇವೆ. ಭಾರತ್-ಭೂತಾನ್ ಪಾಲುದಾರಿಕೆಯು ಉತ್ತಮ ಭವಿಷ್ಯಕ್ಕಾಗಿ ನಮ್ಮ ಯುವಕರ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಸ್ಪಂದಿಸುತ್ತದೆ.

ಭಾರತವು ತನ್ನ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಇದು ತ್ವರಿತ ಸಾಮಾಜಿಕ-ಆರ್ಥಿಕ ಪ್ರಗತಿ ಮತ್ತು ತಾಂತ್ರಿಕ ಪ್ರಗತಿಗಳಿಂದ ಕೂಡಿದ್ದು, ʻಅಮೃತ ಕಾಲʼದಲ್ಲಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತ ಪ್ರಯತ್ನಿಸುತ್ತಿದೆ. ಭೂತಾನ್ 2034ರ ವೇಳೆಗೆ ಹೆಚ್ಚಿನ ಆದಾಯದ ರಾಷ್ಟ್ರವಾಗುವ ಆಶಯವನ್ನುಹೊಂದಿದೆ ಮತ್ತು ಅದರ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಹಂತವನ್ನು ಪ್ರಾರಂಭಿಸುತ್ತಿದೆ. ಪ್ರಗತಿ ಮತ್ತು ಸಮೃದ್ಧಿಯ ಸಾಮಾನ್ಯ ಅನ್ವೇಷಣೆಯಲ್ಲಿ, ಭಾರತ ಮತ್ತು ಭೂತಾನ್ ಪರಸ್ಪರ ಸ್ನೇಹಿತರಾಗಿ ಮತ್ತು ಪಾಲುದಾರರಾಗಿ ಮುಂದುವರಿಯಲಿವೆ.

******



(Release ID: 2016341) Visitor Counter : 58