ಪ್ರಧಾನ ಮಂತ್ರಿಯವರ ಕಛೇರಿ

‘ಮನದ ಮಾತು ’  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು  ದಿನಾಂಕ 25.02.2024 ರಂದು ಮಾಡಿದ ‘ಮನ್ ಕಿ ಬಾತ್’ – 110 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 25 FEB 2024 12:08PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ‘ಮನದ ಮಾತು’ ೧೧೦ನೇ ಸಂಚಿಕೆಗೆ ಸುಸ್ವಾಗತ. ಎಂದಿನಂತೆ, ಈ ಬಾರಿಯೂ ನಿಮ್ಮ ಸಾಕಷ್ಟು ಸಲಹೆಗಳು, ಮಾಹಿತಿ ಮತ್ತು ಟೀಕೆ ಟಿಪ್ಪಣಿಗಳನ್ನು ನಾವು ಸ್ವೀಕರಿಸಿದ್ದೇವೆ. ಮತ್ತು ಎಂದಿನಂತೆ, ಈ ಬಾರಿಯೂ ಸಹ ಸಂಚಿಕೆಯಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬುದು ಸವಾಲಾಗಿದೆ. ನನಗೆ ಧನಾತ್ಮಕತೆಯ ಬಹಳಷ್ಟು ಮಾಹಿತಿ ದೊರೆತಿವೆ. ಇವುಗಳಲ್ಲಿ ಇತರರಿಗೆ ಭರವಸೆಯ ಆಶಾ ಕಿರಣವನ್ನು ಮೂಡಿಸುವ ಮೂಲಕ ಅವರ ಜೀವನ ಸುಧಾರಿಸುವಲ್ಲಿ ಶ್ರಮಿಸುತ್ತಿರುವ ಅನೇಕ ದೇಶವಾಸಿಗಳ ಉಲ್ಲೇಖವಿದೆ.

ಸ್ನೇಹಿತರೇ, ಇನ್ನೇನು ಕೆಲ ದಿನಗಳ ನಂತರ ಮಾರ್ಚ್ 8 ರಂದು ನಾವು 'ಮಹಿಳಾ ದಿನ'ವನ್ನು ಆಚರಿಸಲಿದ್ದೇವೆ. ಈ ವಿಶೇಷ ದಿನ ದೇಶದ ಅಭಿವೃದ್ಧಿ ಪಯಣದಲ್ಲಿ ಮಹಿಳಾ ಶಕ್ತಿಯ ಕೊಡುಗೆಗೆ ವಂದನೆ ಸಲ್ಲಿಸಲು ಒಂದು ಅವಕಾಶವಾಗಿದೆ. ಮಹಿಳೆಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಜಗತ್ತು ಅಭ್ಯುದಯವಾಗುತ್ತದೆ ಎಂದು ಮಹಾಕವಿ ಭಾರತಿಯಾರ್ ಅವರು ಹೇಳಿದ್ದಾರೆ. ಇಂದು ಭಾರತದ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯ ಹೊಸ ಎತ್ತರಕ್ಕೆ ಏರುತ್ತಿದೆ. ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರೂ ಡ್ರೋನ್‌ಗಳನ್ನು ಹಾರಿಸುತ್ತಾರೆ ಎಂದು ಕೆಲವು ವರ್ಷಗಳ ಹಿಂದೆ ಯಾರು ಭಾವಿಸಿದ್ದರು? ಆದರೆ ಇಂದು ಇದು ಕಾರ್ಯರೂಪಕ್ಕೆ ಬರುತ್ತಿದೆ. ಇಂದು ಪ್ರತಿ ಹಳ್ಳಿಯಲ್ಲೂ ಡ್ರೋಣ್ ದೀದಿಯ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ, ಇಂದು ಎಲ್ಲರ ಬಾಯಲ್ಲೂ ನಮೋ ಡ್ರೋಣ್ ದೀದಿ, ನಮೋ ಡ್ರೋಣ್ ದೀದಿ ಎಂಬ ಮಾತು ಕೇಳಿಬರುತ್ತಿದೆ. ಎಲ್ಲರೂ ಅವರ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರೀ ಕುತೂಹಲ ಹುಟ್ಟಿಕೊಂಡಿದೆ ಮತ್ತು ಅದಕ್ಕಾಗಿಯೇ, ಈ ಬಾರಿಯ 'ಮನದ ಮಾತಿನಲ್ಲಿ ನಮೋ ಡ್ರೋನ್ ದೀದಿಯೊಂದಿಗೆ ಏಕೆ ಮಾತನಾಡಬಾರದು ಎಂದು ನಾನು ಯೋಚಿಸಿದೆ. ಉತ್ತರ ಪ್ರದೇಶದ ಸೀತಾಪುರದವರಾದ ನಮೋ ಡ್ರೋನ್ ದೀದಿ ಸುನೀತಾ  ಅವರು ಈಗ ನಮ್ಮೊಂದಿಗೆ ಇದ್ದಾರೆ ಬನ್ನಿ, ಅವರ ಜೊತೆ ಮಾತನಾಡೋಣ.

ಮೋದಿಜಿ: ಸುನೀತಾ ದೇವಿಯವರೆ ನಮಸ್ಕಾರ.

ಸುನಿತಾ ದೇವಿ: ನಮಸ್ಕಾರ ಸರ್.

ಮೋದಿಜೀ: ಸರಿ ಸುನೀತಾ ಅವರೆ, ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ, ನಿಮ್ಮ ಕುಟುಂಬದ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ. ನಮ್ಮೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುವಿರಾ?

ಸುನೀತಾದೇವಿ: ಸರ್, ನಮ್ಮ ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದಾರೆ, ನಾನಿದ್ದೇನೆ, ನನ್ನ ಪತಿ ಇದ್ದಾರೆ, ತಾಯಿ ಇದ್ದಾರೆ.

ಮೋದಿಜೀ: ಸುನೀತಾ ಅವರೆ ನಿಮ್ಮ ಶಿಕ್ಷಣ ಎಲ್ಲಿವರೆಗೆ ಆಗಿದೆ?

ಸುನಿತಾ ದೇವಿ: ಸರ್, ನಾನು ಬಿಎ (ಫೈನಲ್) ವರೆಗೆ ಓದಿದ್ದೇನೆ.

ಮೋದಿ ಜೀ: ಮತ್ತು ಮನೆಯಲ್ಲಿ ವ್ಯಾಪಾರ ಇತ್ಯಾದಿ ಯಾವ ತರಹದ್ದಿದೆ?

ಸುನೀತಾ ದೇವಿ: ಕೃಷಿ  ಮತ್ತು ಕೃಷಿ ಸಂಬಂಧಿತ ವ್ಯಾಪಾರ ಇತ್ಯಾದಿ ಮಾಡುತ್ತೇವೆ.

ಮೋದಿ ಜಿ: ಸರಿ ಸುನೀತಾ ಅವರೆ, ಈ ಡ್ರೋನ್ ದೀದಿ ಆಗುವ ನಿಮ್ಮ ಪ್ರಯಾಣ ಹೇಗೆ ಪ್ರಾರಂಭವಾಯಿತು? ನೀವು ಎಲ್ಲಿ ತರಬೇತಿ ಪಡೆದಿದ್ದೀರಿ? ಯಾವ ರೀತಿಯ ಬದಲಾವಣೆಗಳು ಸಂಭವಿಸಿದವು, ಏನಾಯಿತು, ಆರಂಭದಿಂದ ಎಲ್ಲವನ್ನೂ ನಾನು ತಿಳಿಯಬಯಸುತ್ತೇನೆ.

ಸುನಿತಾ ದೇವಿ: ಹೌದು ಸರ್, ನಮ್ಮ ತರಬೇತಿ ಅಲಹಾಬಾದ್‌ನಲ್ಲಿರುವ ಫುಲ್‌ಪುರ್ ಇಫ್ಕೋ ಕಂಪನಿಯಲ್ಲಿ ಆಯಿತು ಮತ್ತು ನಾವು ಅಲ್ಲಿಂದಲೇ ಸಂಪೂರ್ಣ ತರಬೇತಿ ಪಡೆದಿದ್ದೇವೆ.

ಮೋದಿಜಿ: ಹಾಗಾದರೆ ಅಲ್ಲಿಯವರೆಗೆ ನೀವು ಡ್ರೋನ್‌ಗಳ ಬಗ್ಗೆ ಎಂದಾದರೂ ಕೇಳಿದ್ದೀರಾ?

ಸುನೀತಾ ದೇವಿ: ಸರ್, ನಾವು ಎಂದೂ ಕೇಳಿರಲಿಲ್ಲ, ಆದರೆ ಒಮ್ಮೆ ಅಂತಹದನ್ನು ನೋಡಿದ್ದೆ,  ಸೀತಾಪುರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ನಾವು ಮೊದಲ ಬಾರಿಗೆ ಡ್ರೋನ್ ನೋಡಿದ್ದೆವು.

 ಮೋದಿ ಜಿ: ಸುನೀತಾ ಅವರೆ, ನಿಮ್ಮ ಮೊದಲ ದಿನದ ಅನುಭವ ಹೇಗಿತ್ತು ಎಂದು ನಾನು ತಿಳಿಯಬಯಸುತ್ತೇನೆ.

ಸುನೀತಾದೇವಿ: ಸರಿ ಸರ್.

ಮೋದಿ ಜೀ: ನಿಮಗೆ ಮೊದಲ ದಿನ ಡ್ರೋನ್ ಅನ್ನು ತೋರಿಸಿರಬೇಕು, ನಂತರ ಬೋರ್ಡ್ ಮೇಲೆ ಏನನ್ನಾದರೂ ಬರೆದು ಕಲಿಸಿರಬೇಕು, ಪೇಪರ್‌ ಮೂಲಕ ಕಲಿಸಿರಬೇಕು, ನಂತರ ಮೈದಾನಕ್ಕೆ ಕರೆದೊಯ್ದು ಅಭ್ಯಾಸ ಮಾಡಿಸಿರಬಹುದು, ಏನೇನು ನಡೆಯಿತು. ನೀವು ನನಗೆ ಸಂಪೂರ್ಣವಾಗಿ ವಿವರಿಸುವಿರಾ?

ಸುನೀತಾ ದೇವಿ: ಹೌದು ಸರ್, ಮೊದಲ ದಿನ ನಾವು ಅಲ್ಲಿಗೆ ಹೋದೆವು. ಎರಡನೇ ದಿನದಿಂದ ನಮ್ಮ ತರಬೇತಿ ಆರಂಭವಾಯಿತು. ಮೊದಲು ಥಿಯರಿ ಕಲಿಸಿ ನಂತರ ಎರಡು ದಿನ ತರಗತಿ ಅಭ್ಯಾಸ ನಡೆಯಿತು. ತರಗತಿಯಲ್ಲಿ, ಡ್ರೋನ್‌ನ ಭಾಗಗಳು ಯಾವುವು, ನೀವು ಹೇಗೆ ಮತ್ತು ಏನೇನು ಮಾಡಬೇಕು - ಈ ಎಲ್ಲಾ ವಿಷಯಗಳನ್ನು ಥಿಯರಿಯಲ್ಲಿ ಕಲಿಸಲಾಯಿತು. ಮೂರನೆ ದಿನ ಸರ್ ನಮ್ಮ ಪರೀಕ್ಷೆ ಇತ್ತು ಸರ್. ಆಮೇಲೆ ಕಂಪ್ಯೂಟರಿನಲ್ಲಿ ಕೂಡ ಪರೀಕ್ಷೆ ಬರೆಯುವುದಿತ್ತು. ಅಂದರೆ ಮೊದಲು ಕ್ಲಾಸ್ ನಡೀತು ಆಮೇಲೆ ಪರೀಕ್ಷೆ ತೆಗೆದುಕೊಳ್ಳಲಾಯಿತು. ನಂತರ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು, ನಾವು ಡ್ರೋನ್ ಅನ್ನು ಹೇಗೆ ಹಾರಿಸಬೇಕು, ನಿಯಂತ್ರಣ ಹೇಗೆ ನಿರ್ವಹಿಸಬೇಕು, ಎಲ್ಲವನ್ನೂ ಪ್ರಾಯೋಗಿಕ ರೂಪದಲ್ಲಿ ಕಲಿಸಲಾಯಿತು.

ಮೋದಿಜಿ: ಹಾಗಾದರೆ ಡ್ರೋನ್ ಯಾವ ಕೆಲಸ ಮಾಡುತ್ತದೆ, ಎಂಬುದನ್ನು ಹೇಗೆ ಕಲಿಸಲಾಯಿತು?

ಸುನೀತಾದೇವಿ: ಸರ್, ಡ್ರೋನ್ ಹೇಗೆ ಕೆಲಸ ಮಾಡುತ್ತದೆ ಎಂದರೆ ಉದಾಹರಣೆಗಾಗಿ ಈಗ ಬೆಳೆ ಬೆಳೆದು ದೊಡ್ಡದಾಗುತ್ತಿದೆ. ಮಳೆಗಾಲ ಅಥವಾ ಇನ್ನೇನಾದರೂ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಿ ಬೆಳೆ ಕಟಾವು ಮಾಡಲು ಗದ್ದೆಗೆ ಹೋಗಲು ಆಗುತ್ತಿಲ್ಲ ಎಂದಾದರೆ, ಕೂಲಿಕಾರರು ಹೇಗೆ ಒಳಗೆ ಹೋಗುತ್ತಾರೆ, ಆಗ ಇದರ ಮೂಲಕ ರೈತರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಹೊಲದೊಳಗೂ ಹೋಗುವ  ಅವಶ್ಯಕತೆಯಿರುವುದಿಲ್ಲ. ನಮ್ಮ ಡ್ರೋನ್ ಬಳಸಿ ಗದ್ದೆಯ ಬದುಚಿನ ಮೇಲೆ ನಿಂತು ಕೂಲಿಕಾರರಿಂದ ಕೆಲಸ ಮಾಡಿಸಿಕೊಳ್ಳಬಹುದು, ಹೊಲದೊಳಗೆ ಕ್ರಿಮಿ ಕೀಟಗಳ ಬಾಧೆ ಕಂಡುಬಂದರೆ ಡ್ರೋನ್ ಬಳಸಿ ಜಾಗ್ರತೆ ವಹಿಸಬಹುದು, ಯಾವುದೇ ತೊಂದರೆ ಇಲ್ಲ, ರೈತರಿಗೂ ತುಂಬಾ ಸಹಾಯಕಾರಿಯಾಗಿದೆ. ಸರ್, ಇಲ್ಲಿಯವರೆಗೆ 35 ಎಕರೆಗೆ ಔಷಧಿ ಸಿಂಪಡಿಸಿದ್ದೇವೆ.

ಮೋದಿಜಿ: ಹಾಗಾದರೆ ರೈತರಿಗೆ ಲಾಭವಿದೆ ಎಂದರ್ಥ?

ಸುನೀತಾದೇವಿ: ಹೌದು ಸರ್, ರೈತರು ತುಂಬಾ ಸಂತೃಪ್ತರಾಗಿದ್ದಾರೆ ಮತ್ತು ಇದು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಸಮಯವೂ ಉಳಿತಾಯವಾಗುತ್ತದೆ, ಅವರು ಬಂದು ಜಮೀನು ತೋರಿಸಬೇಕಷ್ಟೆ, ಎಲ್ಲಿಂದ ಎಲ್ಲಿವರೆಗೆ ತಮ್ಮ ತೋಟವಿದೆ ಎಂದು ಹೇಳಿದರೆ ಸಾಕು. ನೀರು, ಔಷಧಿ, ಎಲ್ಲವನ್ನು ಒಟ್ಟಿಗೇ ಇಟ್ಟುಕೊಂಡು ನಾನೇ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇನೆ, ಮತ್ತು ಅರ್ಧ ಗಂಟೆಯೊಳಗೆ ಇಡೀ ಕೆಲಸ ಮುಗಿಸಿಕೊಡುತ್ತೇನೆ.

ಮೋದಿ ಜಿ: ಹಾಗಾದರೆ ಈ ಡ್ರೋನ್ ನೋಡಲು ಬೇರೆಯವರು ಕೂಡ ಬರುತ್ತಿರಬಹುದಲ್ಲವೇ?

ಸುನಿತಾ ದೇವಿ: ಸರ್, ದೊಡ್ಡ ಜನಸಂದಣಿ ಸೇರುತ್ತಿದೆ, ಡ್ರೋನ್ ನೋಡಲು ಅನೇಕ ಜನರು ಬರುತ್ತಾರೆ. ದೊಡ್ಡ ದೊಡ್ಡ ರೈತರು, ನಾವೂ ಸಿಂಪಡಣೆಗೆ ಕರೆಯುತ್ತೇವೆ ಎಂದು ನಂಬರ್ ತೆಗೆದುಕೊಳ್ಳುತ್ತಾರೆ.

ಮೋದಿಜಿ: ಸರಿ. ನಾನು ಲಖ್ಪತಿ ದೀದಿಯನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ, ಇಂದು ದೇಶಾದ್ಯಂತ ಸಹೋದರಿಯರು ಮನದ ಮಾತು ಕೇಳುತ್ತಿದ್ದರೆ, ಡ್ರೋನ್ ದೀದಿ ನನ್ನೊಂದಿಗೆ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ, ನೀವು ಏನು ಹೇಳಲು ಬಯಸುತ್ತೀರಿ?

ಸುನೀತಾ ದೇವಿ: ಇಂದು ನಾನು ಒಬ್ಬಳೇ ಡ್ರೋನ್ ದೀದಿ ಇದ್ದೀನಿ, ಸಾವಿರಾರು ಸಹೋದರಿಯರು ನನ್ನಂತೆ ಡ್ರೋನ್ ದೀದಿಯಾಗಲು ಮುಂದೆ ಬಂದರೆ ಮತ್ತು ನಾನು ಒಬ್ಬಂಟಿಯಾಗಿರುವಾಗ ಇನ್ನೂ ಸಾವಿರಾರು ಜನರು ನನ್ನೊಂದಿಗೆ ನಿಲ್ಲುತ್ತಾರೆ ಎಂದಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಒಬ್ಬಂಟಿಯಾಗಿಲ್ಲ, ಅನೇಕ ಜನರು ನನ್ನೊಂದಿಗೆ ಡ್ರೋನ್ ದೀದಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ  ಎಂದರೆ ಬಹಳ ಆನಂದವಾಗುತ್ತದೆ.

ಮೋದಿಜೀ: ಸುನೀತಾ ಅವರೆ, ನಿಮಗೆ ಅನಂತ ಅಭಿನಂದನೆಗಳು. ನಮೋ ಡ್ರೋನ್ ದೀದಿ, ಇಂದು ದೇಶದಲ್ಲಿ ಕೃಷಿಯನ್ನು ಆಧುನೀಕರಿಸಲು ಉತ್ತಮ ಮಾಧ್ಯಮವಾಗುತ್ತಿದ್ದಾರೆ. ಅನಂತ  ಶುಭಾಶಯಗಳು.

ಸುನೀತಾ ದೇವಿ: ಧನ್ಯವಾದಗಳು, ಧನ್ಯವಾದಗಳು ಸರ್.

ಮೋದಿಜಿ: ಧನ್ಯವಾದಗಳು! 

ಸ್ನೇಹಿತರೇ, ಇಂದು ದೇಶದ ಮಹಿಳಾ ಶಕ್ತಿ ಹಿಂದೆ ಬಿದ್ದ ಯಾವುದೇ ಕ್ಷೇತ್ರವೇ ಇಲ್ಲ. ನೈಸರ್ಗಿಕ ಕೃಷಿ, ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ ಮತ್ತೊಂದು ಕ್ಷೇತ್ರವಾಗಿದೆ. ರಾಸಾಯನಿಕಗಳಿಂದಾಗಿ ನಮ್ಮ ಭೂಮಿ ತಾಯಿ ಎದುರಿಸುತ್ತಿರುವ ನೋವು ಮತ್ತು ಸಂಕಟಗಳಿಂದ - ನಮ್ಮ ಭೂ ತಾಯಿಯನ್ನು ಉಳಿಸುವಲ್ಲಿ ದೇಶದ ಮಾತೃಶಕ್ತಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಮಹಿಳೆಯರು ಈಗ ದೇಶದ ಮೂಲೆ ಮೂಲೆಗಳಲ್ಲಿ ನೈಸರ್ಗಿಕ ಕೃಷಿಯನ್ನು ಪಸರಿಸುತ್ತಿದ್ದಾರೆ. ಇಂದು ‘ಜಲ ಜೀವನ್ ಮಿಷನ್’ ಅಡಿಯಲ್ಲಿ ದೇಶದಲ್ಲಿ ಇಷ್ಟೊಂದು ಕೆಲಸಗಳು ನಡೆಯುತ್ತಿದ್ದರೆ ಅದರಲ್ಲಿ ಜಲ ಸಮಿತಿಗಳ ಪಾತ್ರ ದೊಡ್ಡದಿದೆ. ಈ ಜಲಸಮಿತಿಯ ನಾಯಕತ್ವ ಮಹಿಳೆಯರದ್ದೇ ಆಗಿದೆ. ಇದರ ಹೊರತಾಗಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಜಲ ಸಂರಕ್ಷಣೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹ ಓರ್ವ ಮಹಿಳೆ ಕಲ್ಯಾಣಿ ಪ್ರಫುಲ್ಲ ಪಾಟೀಲ್ ಅವರು ನನ್ನೊಂದಿಗೆ ಫೋನ್ ಲೈನ್‌ನಲ್ಲಿದ್ದಾರೆ. ಅವರು  ಮಹಾರಾಷ್ಟ್ರದ ನಿವಾಸಿ. ಬನ್ನಿ, ಕಲ್ಯಾಣಿ ಪ್ರಫುಲ್ಲ ಪಾಟೀಲರೊಂದಿಗೆ ಮಾತನಾಡಿ ಅವರ ಅನುಭವವನ್ನು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ - ಹಲೋ ಕಲ್ಯಾಣಿ ಅವರೆ.

ಕಲ್ಯಾಣಿ  - ನಮಸ್ಕಾರ ಸರ್,

ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ಮೊದಲು ನಿಮ್ಮ ಬಗ್ಗೆ, ನಿಮ್ಮ ಕುಟುಂಬದ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ತಿಳಿಸಿ.

ಕಲ್ಯಾಣಿ - ಸರ್, ನಾನು MSc ಮೈಕ್ರೋಬಯಾಲಜಿ ಓದಿದ್ದೇನೆ ಮತ್ತು ನನ್ನ ಮನೆಯಲ್ಲಿ ನನ್ನ ಪತಿ, ನನ್ನ ಅತ್ತೆ ಮತ್ತು ನನ್ನ ಇಬ್ಬರು ಮಕ್ಕಳಿದ್ದಾರೆ ಮತ್ತು ನಾನು ಮೂರು ವರ್ಷಗಳಿಂದ ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನ ಮಂತ್ರಿ - ಮತ್ತು ನಂತರ ನೀವು ಹಳ್ಳಿಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ? ಏಕೆಂದರೆ ನೀವು ಮೂಲ ಜ್ಞಾನವನ್ನೂ ಹೊಂದಿದ್ದೀರಿ, ನೀವೂ ಇದೇ ಕ್ಷೇತ್ರದಲ್ಲಿ  ಅಧ್ಯಯನ ಮಾಡಿದ್ದೀರಿ. ಈಗ ಕೃಷಿ ಕೈಗೊಂಡಿದ್ದೀರಿ ಹಾಗಾದರೆ ಏನು ಹೊಸ ಪ್ರಯೋಗ ಮಾಡಿದ್ದೀರಿ?

ಕಲ್ಯಾಣಿ ಜೀ – ಸರ್, ನಮ್ಮಲ್ಲಿರುವ ಹತ್ತು ವಿಧದ ವನಸ್ಪತಿಗಳನ್ನುಅಂದರೆ ಔಷಧೀಯ ಸಸ್ಯಗಳನ್ನು ಸಂಗ್ರಹಿಸಿ, ಅದರಿಂದ ಸಾವಯವ ಸಿಂಪರಣೆ ತಯಾರು ಮಾಡಿದ್ದೇನೆ, ನಾವು ಕೀಟನಾಶಕಗಳನ್ನು ಸಿಂಪಡಿಸಿದಾಗ, ಇತರ ಕೀಟಗಳ ಜೊತೆಗೆ ನಮ್ಮ ಮಿತ್ರ ಕೀಟಗಳು ಸಹ ನಾಶವಾಗುತ್ತವೆ ಮತ್ತು ನಮ್ಮ ಮಣ್ಣಿನ ಮಾಲಿನ್ಯತೆ ಹೆಚ್ಚುತ್ತದೆ, ನೀರಿನಲ್ಲಿ ರಾಸಾಯನಿಕಗಳು ಮಿಶ್ರಣವಾಗುವುದರಿಂದ ನಮ್ಮ ದೇಹದ ಮೇಲೆ ಕೂಡ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ, ನಾವು ಕನಿಷ್ಟ ಕೀಟನಾಶಕಗಳನ್ನು ಬಳಸಿದ್ದೇವೆ.

ಪ್ರಧಾನಮಂತ್ರಿ - ಹಾಗಾದರೆ ನೀವು ಒಂದು ರೀತಿಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಕೃಷಿಯತ್ತ ಸಾಗುತ್ತಿದ್ದೀರಿ.

ಕಲ್ಯಾಣಿ - ಹೌದು, ನಾವು ಕಳೆದ ವರ್ಷದಿಂದ ಸಾಂಪ್ರದಾಯಿಕ ಕೃಷಿಯನ್ನೇ, ಕೈಗೊಂಡಿದ್ದೇವೆ.

ಪ್ರಧಾನಮಂತ್ರಿ - ನೈಸರ್ಗಿಕ ಕೃಷಿಯಲ್ಲಿ ನಿಮಗೆ ಯಾವ ಬಗೆಯ ಅನುಭವವಾಯಿತು?

ಕಲ್ಯಾಣಿ – ಸರ್, ನಮ್ಮ ಮಹಿಳೆಯರು ಮಾಡುವ ಖರ್ಚು ಕಡಿಮೆ ಆಯಿತು, ಉತ್ಪನ್ನಗಳೂ ಉತ್ತಮವಾಗಿದ್ದವು ಸರ್, ಆ ಪರಿಹಾರ ಸಿಕ್ಕ ಮೇಲೆ ಕೀಟಬಾಧೆ ಇಲ್ಲದೇ ಕೃಷಿ ಕೈಗೊಂಡೆವು ಯಾಕೆಂದರೆ ಈಗ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್‌ನ ಪುರಾವೆಗಳು ಹೆಚ್ಚಾಗುತ್ತಿವೆ. ಆದರೆ ನಮ್ಮ ಹಳ್ಳಿಗಳಲ್ಲಿಯೂ ಈ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ನಾವು ನಮ್ಮ ಭವಿಷ್ಯದ ಕುಟುಂಬವನ್ನು ರಕ್ಷಿಸಲು ಬಯಸಿದರೆ, ಈ ಮಾರ್ಗವನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ, ಅದರಂತೆ, ಆ ಮಹಿಳೆಯರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಪ್ರಧಾನಮಂತ್ರಿ - ಸರಿ ಕಲ್ಯಾಣಿ ಅವರೆ, ನೀವೂ ಜಲ ಸಂರಕ್ಷಣೆಯಲ್ಲಿ ಏನಾದರೂ ಕೆಲಸ ಮಾಡಿದ್ದೀರಾ? ಅದರಲ್ಲಿ ನೀವು ಯಾವ ರೀತಿ ಕೆಲಸ ಮಾಡಿದ್ದೀರಿ?

ಕಲ್ಯಾಣಿ – ಸರ್, ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ನಮ್ಮ ಗ್ರಾಮ ಪಂಚಾಯ್ತಿ ಕಟ್ಟಡ, ಅಲ್ಲಿದ್ದ ಮಳೆ ನೀರನ್ನೆಲ್ಲ ಒಂದೇ ಕಡೆ ಸಂಗ್ರಹಿಸಿದ್ದೇವೆ, ಬೀಳುವ ಮಳೆ ನೀರು ನೆಲದೊಳಗೆ ಇಂಗಬೇಕು, ಅದರ ಪ್ರಕಾರ ನಾವು ನಮ್ಮ ಗ್ರಾಮದಲ್ಲಿ 20 ರೀಚಾರ್ಜ್ ಶಾಫ್ಟ್ ಗಳನ್ನು ಅಳವಡಿಸಿದ್ದೇವೆ ಮತ್ತು 50 ರೀಚಾರ್ಜ್ ಶಾಫ್ಟ್ ಗಳಿಗೆ ಮಂಜೂರಾತಿ ದೊರೆತಿದೆ. ಈಗ ಆ ಕೆಲಸವೂ ಶೀಘ್ರವೇ ಆರಂಭವಾಗಲಿದೆ.

ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವಾಯಿತು. ನಿಮಗೆ ಅನಂತ ಶುಭಾಶಯಗಳು.

ಕಲ್ಯಾಣಿ - ಧನ್ಯವಾದಗಳು ಸರ್, ಧನ್ಯವಾದಗಳು ಸರ್. ನಿಮ್ಮೊಂದಿಗೆ ಮಾತನಾಡಿ ನನಗೂ ತುಂಬಾ ಸಂತೋಷವಾಯಿತು. ನನ್ನ ಜೀವನವು ಸಂಪೂರ್ಣ ಸಾರ್ಥಕವಾಯಿತು ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ - ಸೇವೆ ಮಾಡುತ್ತಾ ಸಾಗಿ.

ಪ್ರಧಾನಮಂತ್ರಿ - ನಿಮ್ಮ ಹೆಸರು ಕಲ್ಯಾಣಿ, ಆದ್ದರಿಂದ ನೀವು ಕಲ್ಯಾಣ ಮಾಡಲೇಬೇಕು. ಧನ್ಯವಾದಗಳು. ನಮಸ್ಕಾರ

 ಕಲ್ಯಾಣಿ - ಧನ್ಯವಾದಗಳು ಸರ್. ಧನ್ಯವಾದ

 

ಸ್ನೇಹಿತರೇ,  ಅದು ಸುನೀತಾ ಅವರಾಗಿರಲಿ ಅಥವಾ ಕಲ್ಯಾಣಿಯವರಾಗಿರಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿಯ ಯಶಸ್ಸು ತುಂಬಾ ಸ್ಪೂರ್ತಿದಾಯಕವಾಗಿದೆ. ನಮ್ಮ ಮಹಿಳಾ ಶಕ್ತಿಯ ಈ ಸ್ಫೂರ್ತಿಯನ್ನು ನಾನು ಮತ್ತೊಮ್ಮೆ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಮ್ಮೆಲ್ಲರ ಜೀವನದಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ಮೊಬೈಲ್ ಫೋನ್, ಡಿಜಿಟಲ್ ಗ್ಯಾಜೆಟ್ ಗಳು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿವೆ. ಆದರೆ ಡಿಜಿಟಲ್ ಗ್ಯಾಜೆಟ್ ಗಳ ನೆರವಿನಿಂದ ಈಗ ವನ್ಯ ಜೀವಿಗಳೊಂದಿಗೆ ಸಾಮರಸ್ಯ ಸಾಧಿಸಲು ಕೂಡಾ ಸಹಾಯವಾಗುತ್ತಿದೆಯೆಂದು ನೀವು ಊಹಿಸಬಹುದೇ. ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನ ಆಚರಿಸಲಿದ್ದೇವೆ. ವನ್ಯಜೀವಿಗಳ ಸಂರಕ್ಷಣೆ  ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ವನ್ಯ ಜೀವಿ ದಿನದ ಘೋಷವಾಕ್ಯದಲ್ಲಿ ಡಿಜಿಟಲ್ ಆವಿಷ್ಕಾರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಭಾಗಗಳಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ತಂತ್ರಜ್ಞಾನದ ವ್ಯಾಪಕ ಬಳಕೆಯಾಗುತ್ತಿದೆಯೆಂದು ತಿಳಿದು ನಿಮಗೆ ಸಂತೋಷವಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಚಂದ್ರಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಇನ್ನೂರೈವತ್ತಕ್ಕಿಂತಲೂ ಅಧಿಕವಾಗಿದೆ. ಚಂದ್ರಪುರ್ ಜಿಲ್ಲೆಯಲ್ಲಿ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವುದಕ್ಕಾಗಿ ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗುತ್ತಿದೆ. ಇಲ್ಲಿ ಗ್ರಾಮ ಮತ್ತು ಕಾಡಿನ ಗಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗ್ರಾಮದ ಸಮೀಪ ಯಾವುದಾದರೊಂದು ಹುಲಿ ಬಂದಲ್ಲಿ, ಕೃತಕ ಬುದ್ಧಿಮತ್ತೆಯ ನೆರವಿನಿಂದ ಸ್ಥಳೀಯರಿಗೆ ಮೊಬೈಲ್ ನಲ್ಲಿ ಎಚ್ಚರಿಕೆ ಸಂದೇಶ ದೊರೆಯುತ್ತದೆ. ಇಂದು ಈ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತಲಿನ 13 ಗ್ರಾಮಗಳಲ್ಲಿ ಇಂತಹ ವ್ಯವಸ್ಥೆಯಿಂದ ಜನರಿಗೆ ಬಹಳ ಅನುಕೂಲವಾಗಿದೆ ಮತ್ತು ಹುಲಿಗಳ ದಾಳಿಯ ಭಯವಿಲ್ಲದಂತೆ ರಕ್ಷಣೆಯೂ ದೊರೆತಿದೆ.

ಸ್ನೇಹಿತರೇ, ಇಂದು ಯುವ ಉದ್ಯಮಿಗಳು ಕೂಡಾ ವನ್ಯ ಜೀವಿ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುತ್ತಿದ್ದಾರೆ. ಉತ್ತರಾಖಂಡದ ರೂರ್ಕಿಯಲ್ಲಿ,  ರೋಟರ್ ಪ್ರೆಸಿಷನ್ ಗ್ರೂಪ್ಸ್ ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದೊಂದಿಗೆ ಕೆನ್ ನದಿಯಲ್ಲಿ ಮೊಸಳೆಗಳ ಮೇಲೆ ಕಣ್ಗಾವಲು ಇರಿಸಲು ಸಹಾಯ ಮಾಡುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ರೀತಿ ಬೆಂಗಳೂರಿನ ಒಂದು ಕಂಪೆನಿಯು ‘ಬಘೀರಾ’ ಮತ್ತು ‘ಗರುಡ’ ಹೆಸರಿನ ಆಪ್ (App) ತಯಾರಿಸಿದೆ. ಬಘೀರಾ ಆಪ್ (App)ನಿಂದ ಜಂಗಲ್ ಸಫಾರಿಯ ಸಮಯದಲ್ಲಿ ವಾಹನದ ವೇಗ ಮತ್ತು ಇತರ ಚಟುವಟಿಕೆಗಳನ್ನು ಗಮನಿಸಬಹುದು. ದೇಶದ ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದರ ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು Internet of things ಆಧಾರಿತ ಗರುಡ ಆಪ್ (App) ಅನ್ನು ಯಾವುದೇ ಸಿಸಿಟಿವಿಗೆ ಜೋಡಣೆ ಮಾಡುವುದರಿಂದ ರಿಯಲ್ ಟೈಮ್ ಅಲರ್ಟ್ ದೊರೆಯಲಾರಂಭಿಸುತ್ತದೆ. ವನ್ಯ ಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಈ ರೀತಿಯ ಪ್ರತಿಯೊಂದು ಪ್ರಯತ್ನದಿಂದ ನಮ್ಮ ದೇಶದ ಜೀವ ವೈವಿಧ್ಯತೆ ಮತ್ತಷ್ಟು ಸಮೃದ್ಧವಾಗುತ್ತಿದೆ.

 

ಸ್ನೇಹಿತರೇ,  ಭಾರತದಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯ ಎನ್ನುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವು ಸಾವಿರಾರು ವರ್ಷಗಳಿಂದ ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಹ-ಅಸ್ತಿತ್ವದ ಭಾವನೆಯೊಂದಿಗೆ ಬಾಳುತ್ತಾ ಬಂದಿದ್ದೇವೆ. ನೀವು ಎಂದಾದರೂ ಮಹಾರಾಷ್ಟ್ರದ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೋದರೆ, ಅದರ ಆನಂದವನ್ನು ಅನುಭವಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಖಟ್ಕಲಿ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳು ಸರ್ಕಾರದ ನೆರವಿನೊಂದಿಗೆ ತಮ್ಮ ಮನೆಗಳನ್ನು ಹೋಮ್ ಸ್ಟೇಗಳಾಗಿ ಪರಿವರ್ತಿಸಿವೆ. ಇದು ಅವರಿಗೆ ಆದಾಯದ ಬಹು ದೊಡ್ಡ ಮೂಲವಾಗಿವೆ. ಇದೇ ಗ್ರಾಮದಲ್ಲಿ ವಾಸವಾಗಿರುವ ಕೊರ್ಕು ಬುಡಕಟ್ಟು ಜನಾಂಗದ ಪ್ರಕಾಶ್ ಜಾಮಕರ್ ಅವರು ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಏಳು ಕೊಠಡಿಗಳ ಹೋಂ ಸ್ಟೇ ಸಿದ್ಧಪಡಿಸಿದ್ದಾರೆ. ಅಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಪ್ರಕಾಶ್ ಅವರ ಕುಟುಂಬವೇ ಆಹಾರ ಮತ್ತು ಪಾನೀಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ತಮ್ಮ ಮನೆಯ ಸುತ್ತ ಮುತ್ತ ಅವರು ಔಷಧೀಯ ಸಸ್ಯಗಳೊಂದಿಗೆ ಮಾವು ಮತ್ತು ಕಾಫಿ ಗಿಡಗಳನ್ನು ಕೂಡಾ ನೆಟ್ಟಿದ್ದಾರೆ. ಇದು ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಇತರರಿಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಪಶುಪಾಲನೆಯ ಬಗ್ಗೆ ಮಾತನಾಡುವಾಗ,  ನಾವು ಹೆಚ್ಚಾಗಿ ಹಸು ಮತ್ತು ಎಮ್ಮೆಗಳನ್ನು ಮಾತ್ರಾ ಪರಿಗಣಿಸುತ್ತೇವೆ. ಆದರೆ ಮೇಕೆ ಕೂಡ ಒಂದು ಪ್ರಮುಖ ಪ್ರಾಣಿಯಾಗಿದ್ದು, ಇದರ ಬಗ್ಗೆ ಅಷ್ಟೊಂದು ಮಾತುಕತೆ ನಡೆಯುವುದಿಲ್ಲ. ದೇಶದ ವಿಭಿನ್ನ ಪ್ರದೇಶಗಳಲ್ಲಿ ಹಲವರು ಮೇಕೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಒಡಿಶಾದ ಕಾಲಾಹಾಂಡಿಯಲ್ಲಿ ಮೇಕೆ ಪಾಲನೆ ಎನ್ನುವುದು ಗ್ರಾಮದ ಜನರ ಜೀವನೋಪಾಯ ಮಾತ್ರವಲ್ಲ, ಅವರ ಜೀವನ ಮಟ್ಟವನ್ನು ಸುಧಾರಣೆ ಮಾಡುವ ಪ್ರಮುಖ ಸಾಧನವೂ ಆಗುತ್ತಿದೆ. ಈ ಪ್ರಯತ್ನದ ಹಿಂದೆ ಜಯಂತಿ ಮಹಾಪಾತ್ರಾ ಮತ್ತು ಅವರ ಪತಿ ಬೀರೇನ್ ಸಾಹೂ ಅವರ ಬಹುದೊಡ್ಡ ನಿರ್ಧಾರವಿದೆ. ಇವರಿಬ್ಬರೂ ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಪರರಾಗಿದ್ದರು. ಆದರೆ ಅವರು ಆ ಕೆಲಸದಿಂದ ವಿರಾಮ ಪಡೆದು, ಕಾಲಾಹಾಂಡಿಯ ಸಾಲೇಭಾಟಾ ಗ್ರಾಮಕ್ಕೆ ಬರಲು ನಿರ್ಧರಿಸಿದರು. ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರನ್ನು ಸಶಕ್ತಗೊಳಿಸುವ ಏನಾದರೂ ಮಾಡಬೇಕೆಂದು ಇವರಿಬ್ಬರೂ ಬಯಸಿದರು. ಸೇವೆ ಮತ್ತು ಸಮರ್ಪಣಾ ಭಾವದ ಈ ಚಿಂತನೆಯೊಂದಿಗೆ, ಅವರು ಮಾಣಿಕಸ್ತು ಆಗ್ರೋವನ್ನು ಸ್ಥಾಪಿಸಿದರು ಮತ್ತು ರೈತರೊಂದಿಗೆ ಕೆಲಸ ಮಾಡಲಾರಂಭಿಸಿದರು. ಜಯಂತಿ ಮತ್ತು ಬೀರೇನ್ ಅವರು ಇಲ್ಲಿ ಒಂದು ಆಕರ್ಷಕ ಮಾಣಿಕಾಸ್ತು ಮೇಕೆ ಬ್ಯಾಂಕ್ ಕೂಡಾ ತೆರೆದರು. ಸಮುದಾಯ ಮಟ್ಟದಲ್ಲಿ ಮೇಕೆ ಸಾಕಾಣಿಕೆಗೆ ಇವರು ಉತ್ತೇಜನ ನೀಡುತ್ತಿದ್ದಾರೆ. ಅವರ ಮೇಕೆ ಫಾರಂನಲ್ಲಿ ಡಜನ್ ಗಟ್ಟಲೆ ಮೇಕೆಗಳಿವೆ. ಮಾಣಿಕಸ್ತು ಮೇಕೆ ಬ್ಯಾಂಕ್,  ರೈತರಿಗೆ ಸಂಪೂರ್ಣ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಈ ಮೂಲಕ ರೈತರಿಗೆ 24 ತಿಂಗಳುಗಳಿಗಾಗಿ ಎರಡು ಮೇಕೆಗಳನ್ನು ನೀಡಲಾಗುತ್ತದೆ. 2 ವರ್ಷಗಳಲ್ಲಿ ಮೇಕೆಗಳು 9 ರಿಂದ 10 ಮರಿಗಳಿಗೆ ಜನ್ಮ ನೀಡುತ್ತವೆ, ಇವುಗಳ ಪೈಕಿ ಆರು ಮರಿಗಳನ್ನು ಬ್ಯಾಂಕ್ ಇರಿಸಿಕೊಳ್ಳುತ್ತದೆ, ಉಳಿದ ಮರಿಗಳನ್ನು ಮೇಕೆಗಳನ್ನು ಸಾಕುವ ಅದೇ ಕುಟುಂಬಕ್ಕೆ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ಮೇಕೆಗಳ ಪಾಲನೆ ಪೋಷಣೆಗಾಗಿ ಅಗತ್ಯ ಸೇವೆಗಳನ್ನು ಕೂಡಾ ಒದಗಿಸಲಾಗುತ್ತದೆ. ಇಂದು 50 ಗ್ರಾಮಗಳ 1000 ಕ್ಕೂ ಅಧಿಕ ರೈತರು ಈ ದಂಪತಿಗಳೊಂದಿಗೆ ಸೇರಿಕೊಂಡಿದ್ದಾರೆ. ಅವರ ಸಹಾಯದಿಂದ ಗ್ರಾಮದ ಜನತೆ ಪಶು ಪಾಲನೆ ಕ್ಷೇತ್ರದಲ್ಲಿ ಸ್ವಾವಲಂಬನೆಯ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿನ ಸಫಲ ವೃತ್ತಿಪರರು ರೈತರನ್ನು ಸಶಕ್ತರನ್ನಾಗಿಸಲು ಮತ್ತು ಸ್ವಾವಲಂಬಿಗಳನ್ನಾಗಿಸಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ಅವರುಗಳ ಇಂತಹ ಪ್ರಯತ್ನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯ ಪಾಠ - ‘ಪರಮಾರ್ಥ ಪರಮೋ ಧರ್ಮಃ ’ ಎಂಬುದಾಗಿದೆ ಅಂದರೆ ಇತರರಿಗೆ ಸಹಾಯ ಮಾಡುವುದೇ ಬಹಳ ದೊಡ್ಡ ಕರ್ತವ್ಯ ಎಂದರ್ಥ. ಇದೇ ಭಾವನೆಯೊಂದಿಗೆ ನಮ್ಮ ದೇಶದಲ್ಲಿ ಅಸಂಖ್ಯಾತ ಮಂದಿ ನಿಸ್ವಾರ್ಥವಾಗಿ ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು - ಬಿಹಾರದ ಭೋಜ್‌ ಪುರದ ಭೀಮ್ ಸಿಂಗ್ ಭವೇಶ್ ಅವರು. ಅವರು ವಾಸವಾಗಿರುವ ಪ್ರದೇಶದ ಮುಸಾಹರ್ ಜಾತಿಯ ಜನರಲ್ಲಿ ಅವರ ಕೆಲಸದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಇಂದು ಇವುಗಳ ಕುರಿತಂತೆ ಕೂಡಾ ನಿಮ್ಮೊಂದಿಗೆ ಮಾತನಾಡಬಾರದೇಕೆ ಎಂದು ನಾನು ಯೋಚಿಸಿದೆ. ಮುಸಾಹರ್ ಎನ್ನುವುದು ಬಿಹಾರದಲ್ಲಿ ಬಹಳ ಹಿಂದುಳಿದ ಮತ್ತು ಅತ್ಯಂತ ಬಡ ಸಮುದಾಯವಾಗಿದೆ. ಭೀಮ್ ಸಿಂಗ್ ಭವೇಶ್ ಅವರು ಈ ಸಮುದಾಯದ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಉದ್ದೇಶದಿಂದ ಈ ಮಕ್ಕಳ  ಶಿಕ್ಷಣದತ್ತ ಗಮನಹರಿಸಿದ್ದಾರೆ.  ಮುಸಾಹರ್ ಜಾತಿಯ ಸುಮಾರು 8 ಸಾವಿರ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಅವರು ದೊಡ್ಡ ಗ್ರಂಥಾಲಯವನ್ನು ಸಹ ನಿರ್ಮಿಸಿದ್ದಾರೆ, ಇದರಿಂದಾಗಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳು ಸಿಗುತ್ತಿವೆ. ಭೀಮ್ ಸಿಂಗ್ ಅವರು ತಮ್ಮ ಸಮುದಾಯದ ಸದಸ್ಯರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದಕ್ಕೆ, ಅವರುಗಳ ಅರ್ಜಿ ತುಂಬುವುದಕ್ಕೆ ಕೂಡಾ ಸಹಾಯ ಮಾಡುತ್ತಾರೆ. ಇದರಿಂದ ಹಳ್ಳಿಯ ಜನರು ಅಗತ್ಯ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಅವಕಾಶ ಕೂಡಾ ಹೆಚ್ಚಾಗಿದೆ. ಜನರ ಆರೋಗ್ಯ ಸುಧಾರಣೆಗಾಗಿ  100ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಕರೋನಾ ಬಿಕ್ಕಟ್ಟು ಗಂಭೀರವಾಗಿದ್ದಾಗ,  ಭೀಮ್ ಸಿಂಗ್ ಅವರು ತಮ್ಮ ಪ್ರದೇಶದ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಬಹಳ ಪ್ರೋತ್ಸಾಹಿಸಿದ್ದರು. ದೇಶದ ವಿಭಿನ್ನ ಪ್ರದೇಶಗಳಲ್ಲಿ ಭೀಮ್ ಸಿಂಗ್ ಭವೇಶ್ ಅವರಂತಹ ಸಮಾಜದಲ್ಲಿ ಅನೇಕ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂತಹ ಅನೇಕರಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿರುವ ನಾವು ಇದೇ ರೀತಿ ನಮ್ಮ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಿದರೆ, ಒಂದು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಬಹಳ ಸಹಾಯವಾಗುತ್ತದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಸೌಂದರ್ಯವು ಅದರ ವೈವಿಧ್ಯತೆ ಮತ್ತು ನಮ್ಮ ಸಂಸ್ಕೃತಿಯ ವಿವಿಧ ಬಣ್ಣಗಳಲ್ಲಿ ಅಡಗಿದೆ. ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸಲು ಎಷ್ಟೊಂದು ಜನರು ನಿಸ್ವಾರ್ಥವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೋಡಲು ನನಗೆ ಸಂತೋಷವಾಗುತ್ತದೆ. ಭಾರತದ ಪ್ರತಿಯೊಂದು ಭಾಗದಲ್ಲೂ ನಿಮಗೆ ಅಂತಹ ಜನರು ಕಾಣಸಿಗುತ್ತಾರೆ. ಈ ಪೈಕಿ ಭಾಷಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಸಂಖ್ಯೆ ಹೆಚ್ಚು. ಜಮ್ಮು ಕಾಶ್ಮೀರದಲ್ಲಿ ಗಾಂದರ್ಬಲ್ ನ ಮೊಹಮ್ಮದ್ ಮಾನ್ ಶಾಹ್ ಅವರು ಕಳೆದ ಮೂರು ದಶಕಗಳಿಂದ ಗೋಜರೀ ಭಾಷೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರು ಗುಜ್ಜರ್ ಬಕರ್ವಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದೊಂದು ಬುಡಕಟ್ಟು ಸಮುದಾಯವಾಗಿದೆ. ಬಾಲ್ಯದಲ್ಲಿ ಓದಲು ಬಹಳ ಕಷ್ಟಪಟ್ಟಿದ್ದ ಅವರು ಪ್ರತಿದಿನ 20 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದರು. ಅಂತಹ ಸವಾಲುಗಳ ನಡುವೆ ಅವರು ಸ್ನಾತಕೋತ್ತರ ಪದವಿ ಗಳಿಸಿದರು ಮತ್ತು ಇವುಗಳ ನಡುವೆಯೇ ಭಾಷೆಯನ್ನು ಉಳಿಸಿಕೊಳ್ಳುವ ಅವರ ಸಂಕಲ್ಪ ಬಲವಾಯಿತು.

 

ಸಾಹಿತ್ಯ ಕ್ಷೇತ್ರದಲ್ಲಿ ಮಾನ್ ಶಾಹ್ ಅವರ ಕಾರ್ಯ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಸುಮಾರು 50 ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಇವುಗಳಲ್ಲಿ ಕವಿತೆಗಳು ಮತ್ತು ಜಾನಪದ ಹಾಡುಗಳೂ ಸೇರಿವೆ. ಅವರು ಅನೇಕ ಪುಸ್ತಕಗಳನ್ನು ಗೋಜರಿ ಭಾಷೆಗೆ ಅನುವಾದಿಸಿದ್ದಾರೆ.

 

ಸ್ನೇಹಿತರೇ, ಅರುಣಾಚಲ ಪ್ರದೇಶದ ತಿರಪ್‌ ನಲ್ಲಿ ಬನ್ವಾಂಗ್ ಲೋಸು ಎಂಬ ಓರ್ವ ಶಿಕ್ಷಕರಿದ್ದಾರೆ. ವಾಂಚೋ ಭಾಷೆ ಕುರಿತಂತೆ ಪ್ರಸಾರ ಮಾಡುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಭಾಷೆಯನ್ನು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಒಂದು ಭಾಷಾ ಶಾಲೆ ನಿರ್ಮಿಸುವ ಕೆಲಸವನ್ನೂ ಇವರು ಮಾಡಿದ್ದಾರೆ. ಇವರು ವಾಂಚೋ ಭಾಷೆಯ ಲಿಪಿಯನ್ನೂ ಸಿದ್ಧಪಡಿಸಿದ್ದಾರೆ. ವಾಂಚೋ ಭಾಷೆಯನ್ನು ಅಳಿವಿನಿಂದ ರಕ್ಷಿಸುವ ಸಲುವಾಗಿ ಇವರು ಮುಂದಿನ ಪೀಳಿಗೆಗೆ ಕೂಡಾ ವಾಂಚೋ ಭಾಷೆ ಕಲಿಸುತ್ತಿದ್ದಾರೆ.

ಸ್ನೇಹಿತರೇ, ಹಾಡು, ನೃತ್ಯಗಳ ಮೂಲಕ ತಮ್ಮ ಸಂಸ್ಕೃತಿ, ಭಾಷೆ ಉಳಿಸುವ ಕಾರ್ಯದಲ್ಲಿ ತೊಡಗಿರುವ ಬಹಳಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಕರ್ನಾಟಕದ ವೆಂಕಪ್ಪ ಅಂಬಾಜಿ ಸುಗೇಟಕರ ಅವರ ಜೀವನವೂ ಈ ವಿಚಾರದಲ್ಲಿ ತುಂಬ ಸ್ಪೂರ್ತಿದಾಯಕವಾಗಿದೆ. ಇಲ್ಲಿನ ಬಾಗಲಕೋಟೆಯ ನಿವಾಸಿ ಸುಗೇತಕರ್ ಅವರು ಓರ್ವ ಜಾನಪದ ಗಾಯಕ. ಅವರು 1000 ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ ಮತ್ತು ಈ ಭಾಷೆಯಲ್ಲಿ ಕಥೆಗಳನ್ನು ಸಾಕಷ್ಟು ಪ್ರಚಾರ-ಪ್ರಸಾರ ಮಾಡಿದ್ದಾರೆ. ಅವರು ಯಾವುದೇ ಶುಲ್ಕ ಪಡೆಯದೇ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ಕೂಡಾ ನೀಡಿದ್ದಾರೆ. ನಿರಂತರವಾಗಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿರುವ ಉತ್ಸಾಹ ಮತ್ತು ಭರವಸೆಯಿಂದ ಕೂಡಿದ ಜನರಿಗೆ ಭಾರತದಲ್ಲಿ ಕೊರತೆಯಿಲ್ಲ. ನೀವೂ ಅವರಿಂದ ಸ್ಫೂರ್ತಿ ಪಡೆದು, ನಿಮ್ಮದೇನಾದರೂ ಮಾಡಲು ಪ್ರಯತ್ನಿಸಿ. ಇಧರಿಂದ ನಿಮಗೆ ಬಹಳ ಸಂತೃಪ್ತಿ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಎರಡು ದಿನಗಳ ಹಿಂದೆ ನಾನು ವಾರಣಾಸಿಯಲ್ಲಿದ್ದೆ ಮತ್ತು ಅಲ್ಲಿ ನಾನು ಅದ್ಭುತವಾದ ಫೋಟೋ ಪ್ರದರ್ಶನವನ್ನು ನೋಡಿದೆ. ಕಾಶಿ ಹಾಗೂ ಸುತ್ತಮುತ್ತಲಿನ ಯುವಕರು ಕ್ಯಾಮರಾದಲ್ಲಿ ಸೆರೆ ಹಿಡಿದ ಕ್ಷಣಗಳು ಅದ್ಭುತ. ಅದರಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಹಲವು ಛಾಯಾಚಿತ್ರಗಳಿದ್ದವು. ನಿಜವಾಗಿಯೂ ಈಗ ಮೊಬೈಲ್ ಯಾರ ಬಳಿ ಇದೆಯೋ ಅವರು content creator ಆಗಿಬಿಟ್ಟಿದ್ದಾರೆ. ಜನರಿಗೆ ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ತೋರಿಸಲು ಸಾಮಾಜಿಕ ಮಾಧ್ಯಮ ಸಾಕಷ್ಟು ಸಹಾಯ ಮಾಡಿದೆ. ಭಾರತದ ನಮ್ಮ ಯುವ ಸ್ನೇಹಿತರು ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅದು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರಲಿ, ನಮ್ಮ ಯುವ ಸ್ನೇಹಿತರು ವಿಭಿನ್ನ ವಿಷಯಗಳ ಕುರಿತು ವಿಭಿನ್ನ ವಿಷಯವನ್ನು ಹಂಚಿಕೊಳ್ಳುವುದನ್ನು ನೀವು ಖಂಡಿತವಾಗಿ ಕಾಣಬಹುದು.ಪ್ರವಾಸೋದ್ಯಮ ಇರಬಹುದು, social cause ಇರಬಹುದು,  ಸಾರ್ವಜನಿಕ ಪಾಲುದಾರಿಕೆ ಇರಬಹುದು ಅಥವಾ ಒಂದು ಪ್ರೇರಣಾತ್ಮಕ ಜೀವನ ಪಯಣವಿರಬಹುದು, ಇವುಗಳಿಗೆ ಸಂಬಂಧಿಸಿದ ವಿಧ ವಿಧ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುತ್ತವೆ. Content create ಮಾಡುತ್ತಿರುವ ದೇಶದ ಯುವಪೀಳಿಗೆಯ ಧ್ವನಿ ಇಂದು ಬಹಳ ಪರಿಣಾಮಕಾರಿಯಾಗಿದೆ. ಇವರ ಪ್ರತಿಭೆಯನ್ನು ಗೌರವಿಸಲು, ದೇಶದಲ್ಲಿ National Creators Award ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ, ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಧ್ವನಿಯಾಗಲು ತಂತ್ರಜ್ಞಾನವನ್ನು ಬಳಸುತ್ತಿರುವ ವಿವಿಧ ವರ್ಗಗಳ ಚೇಂಜ್ ಮೇಕರ್ ಗಳನ್ನು  ಗೌರವಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಸ್ಪರ್ಧೆಯು MyGov ನಲ್ಲಿ ಚಾಲನೆಯಲ್ಲಿದೆ ಮತ್ತು ನಾನು ಕಂಟೆಂಟ್ ಕ್ರಿಯೇಟರ್ ಗಳನ್ನು ಇದರಲ್ಲಿ ಸೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮಗೆ ಇಂತಹ ಆಸಕ್ತಿದಾಯ ಕಂಟೆಂಟ್ ಕ್ರಿಯೇಟರ್ ಗಳ ಬಗ್ಗೆ ತಿಳಿದಿದ್ದರೆ, ಅವರನ್ನು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಗಾಗಿ ಅವರನ್ನು ಖಂಡಿತವಾಗಿಯೂ ನಾಮನಿರ್ದೇಶನ ಮಾಡಿ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗವು ‘ನನ್ನ ಮೊದಲ ಮತ - ದೇಶಕ್ಕಾಗಿ ಎಂಬ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿರುವುದು ನನಗೆ ಸಂತೋಷ ತಂದಿದೆ. ಈ ಮೂಲಕ, ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ವಿಶೇಷವಾಗಿ ವಿನಂತಿಸಲಾಗಿದೆ. ಉತ್ಸಾಹ ಮತ್ತು ಸಾಮರ್ಥ್ಯದಿಂದ ತುಂಬಿರುವ ತನ್ನ ಯುವ ಶಕ್ತಿಯ ಬಗ್ಗೆ ಭಾರತಕ್ಕೆ ಬಹಳ ಹೆಮ್ಮೆಯಿದೆ. ನಮ್ಮ ಯುವಕರು ಚುನಾವಣಾ ಪ್ರಕ್ರಿಯೆಯಲ್ಲಿ ಎಷ್ಟು ಹೆಚ್ಚು ಭಾಗವಹಿಸುತ್ತಾರೆಯೋ, ಅದರ ಫಲಿತಾಂಶವು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ನಾನು ಕೂಡಾ First time voters ಗಳಲ್ಲಿ ಮನವಿ ಮಾಡುತ್ತೇನೆ. 18 ವರ್ಷಗಳು ತುಂಬಿದ ನಂತರ ನಿಮಗೆ 18ನೇ ಲೋಕಸಭೆಗಾಗಿ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತಿದೆ. ಅಂದರೆ, 18ನೇ ಲೋಕಸಭೆ ಕೂಡಾ ಯುವ ಆಕಾಂಕ್ಷೆಯ ಪ್ರತೀಕವಾಗಲಿದೆ. ಆದ್ದರಿಂದ ನಿಮ್ಮ ಮತದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಿದೆ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ನೀವು, ಯುವಜನತೆ ಕೇವಲ ರಾಜಕೀಯ ಚಟುವಟಿಕೆಗಳ ಭಾಗವಾಗವಹಿಸುವುದು ಮಾತ್ರವಲ್ಲದೇ ಈ ಸಮಯದಲ್ಲಿ ಚರ್ಚೆ ಮತ್ತು ವಾಗ್ವಾದಗಳ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು. ಮತ್ತು ನೆನಪಿಡಿ – ‘ನನ್ನ ಮೊದಲ ಮತ - ದೇಶಕ್ಕಾಗಿ . influencers ಅವರು ಕ್ರೀಡಾ ಕ್ಷೇತ್ರದವರಿರಲಿ, ಚಲನಚಿತ್ರ ಜಗತ್ತಿನವರಿರಲಿ, ಸಾಹಿತ್ಯ ಕ್ಷೇತ್ರದವರಿರಲಿ, ಅಥವಾ ಬೇರೆ ವೃತ್ತಿಪರರಿರಲಿ, ಅಥವಾ ನಮ್ಮ instagram ಮತ್ತು youtube ನ influencer ಗಳಿರಲಿ, ಎಲ್ಲರೂ ಮುಂದೆ ಬಂದು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದೂ ಮತ್ತು ನಮ್ಮ first time voters  ಗಳನ್ನು ಪ್ರೇರೇಪಿಸಬೇಕೆಂದು ಎಲ್ಲಾ  influencers ಗಳಲ್ಲಿ ನಾನು ಮನವಿ ಮಾಡುತ್ತೇನೆ.   

ಈ ಬಾರಿಯ ಮನ್ ಕಿ ಬಾತ್ ಸಂಚಿಕೆಯನ್ನು ಇವಿಷ್ಟು ಮಾತುಕತೆಯೊಂದಿಗೆ ನಾನು ಮುಗಿಸುತ್ತಿದ್ದೇನೆ. ದೇಶದಲ್ಲಿ ಲೋಕಸಭೆ ಚುನಾವಣೆಯ ವಾತಾವರಣವಿದ್ದ, ಕಳೆದ ಬಾರಿಯಂತೆ ಮಾರ್ಚ್ ತಿಂಗಳಿನಲ್ಲಿಯೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. 110 ಸಂಚಿಕೆಗಳಲ್ಲಿ ನಾವು ಇದನ್ನು ಸರ್ಕಾರದ ನೆರಳಿನಿಂದ ದೂರವಿಟ್ಟಿರುವುದು ‘ಮನ್ ಕಿ ಬಾತ್’ನ ದೊಡ್ಡ ಯಶಸ್ಸಾಗಿದೆ. ‘ಮನ್ ಕಿ ಬಾತ್’ ನಲ್ಲಿ, ದೇಶದ ಸಾಮೂಹಿಕ ಶಕ್ತಿಯ ಮಾತುಕತೆ ನಡೆಯುತ್ತದೆ, ದೇಶದ ಸಾಧನೆಗಳ ಕುರಿತು ಮಾತುಕತೆ ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಜನರ, ಜನರಿಗಾಗಿ, ಜನರಿಂದ ಸಿದ್ಧವಾಗುವ ಕಾರ್ಯಕ್ರಮವಾಗಿದೆ.  ಆದರೂ ರಾಜಕೀಯಕ್ಕೆ ಗೌರವ ತೋರಿಸುತ್ತಾ, ಲೋಕಸಭೆ ಚುನಾವಣೆಯ ಈ ದಿನಗಳಲ್ಲಿ ಮುಂದಿನ ಮೂರು ತಿಂಗಳವರೆಗೆ 'ಮನ್ ಕಿ ಬಾತ್' ಪ್ರಸಾರವಾಗುವುದಿಲ್ಲ. ನಾವು ನಿಮ್ಮೊಂದಿಗೆ ಸಂವಾದ ನಡೆಸುವ ಮುಂದಿನ 'ಮನ್ ಕಿ ಬಾತ್' ಅದು 'ಮನ್ ಕಿ ಬಾತ್' ನ 111 ನೇ ಸಂಚಿಕೆಯಾಗಲಿದೆ. ಮುಂದಿನ ಬಾರಿಯ 'ಮನ್ ಕಿ ಬಾತ್' ಶುಭಸಂಖ್ಯೆ 111ರೊಂದಿಗೆ ಆರಂಭವಾಗುತ್ತದೆ, ಇದಕ್ಕಿಂತ ಉತ್ತಮವಾದುದು ಇನ್ನೇನಿರುತ್ತದೆ. ಆದರೆ ಸ್ನೇಹಿತರೇ, ನೀವು ನನ್ನದೊಂದು ಕೆಲಸ ಮಾಡುತ್ತಿರಬೇಕು.  ‘ಮನ್ ಕಿ ಬಾತ್’ ಮೂರು ತಿಂಗಳುಗಳ ಕಾಲ ನಿಲ್ಲಬಹುದು, ಆದರೆ ದೇಶದಲ್ಲಿ ಸಾಧನೆಗಳು ನಿಲ್ಲಲು ಸಾಧ್ಯವೇ. ಆದ್ದರಿಂದ ‘ಮನ್ ಕಿ ಬಾತ್‘  ಎಂಬ ಹ್ಯಾಷ್ ಟ್ಯಾಗ್ (#) ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸಾಧನೆ, ದೇಶದ ಸಾಧನೆಗಳನ್ನು ಪೋಸ್ಟ್ ಮಾಡಿ. ಕೆಲ ಸಮಯದ ಹಿಂದೆ ಓರ್ವ ಯುವಕ ನನಗೆ ಉತ್ತಮ ಸಲಹೆಯೊಂದನ್ನು ನೀಡಿದ್ದರು. 'ಮನ್ ಕಿ ಬಾತ್' ನ ಇದುವರೆಗಿನ ಸಂಚಿಕೆಗಳ ಸಣ್ಣ ವೀಡಿಯೊಗಳನ್ನು ಯೂಟ್ಯೂಬ್ ಕಿರುಚಿತ್ರಗಳ ರೂಪದಲ್ಲಿ ಹಂಚಿಕೊಳ್ಳಬೇಕು ಎಂಬುದು ಸಲಹೆಯಾಗಿತ್ತು.  ಆದ್ದರಿಂದ, 'ಮನ್ ಕಿ ಬಾತ್' ಕೇಳುಗರು ಇಂತಹ ಕಿರುಚಿತ್ರಗಳನ್ನು ಸಾಕಷ್ಟು ಹಂಚಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ, ಮುಂದಿನ ಸಲ ನಿಮ್ಮೊಂದಿಗೆ ಮಾತನಾಡುವಾಗ, ಹೊಸ ಶಕ್ತಿ ಮತ್ತು ಹೊಸ ಮಾಹಿತಿಯೊಂದಿಗೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ, ಅನೇಕಾನೇಕ ಧನ್ಯವಾದಗಳು. ನಮಸ್ಕಾರ.

*****



(Release ID: 2009078) Visitor Counter : 70