ಪ್ರಧಾನ ಮಂತ್ರಿಯವರ ಕಛೇರಿ
ಸಹಕಾರಿ ಕ್ಷೇತ್ರಕ್ಕಾಗಿ ಪ್ರಧಾನಮಂತ್ರಿಯವರಿಂದ ಅನೇಕ ಪ್ರಮುಖ ಉಪಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ
11 ರಾಜ್ಯಗಳ 11 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 'ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯ ಪ್ರಾಯೋಗಿಕ ಯೋಜನೆಯನ್ನು ಉದ್ಘಾಟಿಸಿದರು
ಗೋದಾಮುಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ದೇಶಾದ್ಯಂತ ಹೆಚ್ಚುವರಿ 500 ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ದೇಶಾದ್ಯಂತ 18,000 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ ಗಣಕೀಕರಣಕ್ಕಾಗಿ ಯೋಜನೆಗಳ ಉದ್ಘಾಟನೆ
"ಸಹಕಾರಿ ಕ್ಷೇತ್ರವು ಚೇತರಿಸಿಕೊಳ್ಳುವ ಆರ್ಥಿಕತೆಯನ್ನು ರೂಪಿಸುವಲ್ಲಿ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ"
"ಸಹಕಾರ ಸಂಸ್ಥೆಗಳು ದೈನಂದಿನ ಜೀವನಕ್ಕೆ ಸಂಬಂಧಿಸಿದ ಸಾಮಾನ್ಯ ವ್ಯವಸ್ಥೆಯನ್ನು ಬೃಹತ್ ಉದ್ಯಮ ವ್ಯವಸ್ಥೆಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಚಹರೆಯನ್ನು ಬದಲಾಯಿಸುವ ರುಜುವಾತಾದ ಮಾರ್ಗವಾಗಿದೆ"
"ಹೆಚ್ಚಿನ ಸಂಖ್ಯೆಯ ಮಹಿಳೆಯರು ಕೃಷಿ ಮತ್ತು ಡೈರಿ ಸಹಕಾರಿ ಸಂಘಗಳಲ್ಲಿ ತೊಡಗಿಸಿಕೊಂಡಿದ್ದಾರೆ"
"ವಿಕಸಿತ ಭಾರತಕ್ಕೆ ಕೃಷಿ ವ್ಯವಸ್ಥೆಗಳ ಆಧುನೀಕರಣ ಅತ್ಯಗತ್ಯ"
"ಆತ್ಮನಿರ್ಭರ ಭಾರತ ರಚಿಸದೆ ವಿಕಸಿತ ಭಾರತ ಸಾಧ್ಯವಿಲ್ಲ"
Posted On:
24 FEB 2024 12:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಸಹಕಾರಿ ಕ್ಷೇತ್ರಕ್ಕೆ ಬಹುಮುಖ್ಯ ಉಪಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. 11 ರಾಜ್ಯಗಳ 11 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ (ಪಿಎಸಿಎಸ್) ಮಾಡಲಾಗುತ್ತಿರುವ 'ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆ'ಯ ಪ್ರಾಯೋಗಿಕ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಉಪಕ್ರಮದ ಅಡಿಯಲ್ಲಿ ಗೋದಾಮುಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ದೇಶಾದ್ಯಂತ ಹೆಚ್ಚುವರಿ 500 ಪಿಎಸಿಎಸ್ ಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು. ಈ ಉಪಕ್ರಮವು ಪಿಎಸಿಎಸ್ ಗೋದಾಮುಗಳನ್ನು ಆಹಾರ ಧಾನ್ಯ ಪೂರೈಕೆ ಸರಪಳಿಯೊಂದಿಗೆ ಅಗತ್ಯಕ್ಕೆ ತಕ್ಕಂತೆ ಸಂಯೋಜಿಸುವ ಗುರಿಯನ್ನು ಹೊಂದಿದೆ, ಆಹಾರ ಭದ್ರತೆಯನ್ನು ಬಲಪಡಿಸುವುದು ಮತ್ತು ನಬಾರ್ಡ್ನಿಂದ ಬೆಂಬಲಿತವಾದ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ ಸಿಡಿಸಿ) ನೇತೃತ್ವದ ಸಹಯೋಗದ ಪ್ರಯತ್ನದೊಂದಿಗೆ ದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು. ಈ ಉಪಕ್ರಮವು ಕೃಷಿ ಮೂಲಸೌಕರ್ಯ ನಿಧಿ (ಎಐಎಫ್), ಕೃಷಿ ಮಾರುಕಟ್ಟೆ ಮೂಲಸೌಕರ್ಯ (ಎಎಂಐ), ಇತ್ಯಾದಿಗಳಂತಹ ವಿವಿಧ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಕ್ರೋಢೀಕರಿಸುವ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಸಹಕಾರಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ "ಸಹಕಾರದಿಂದ ಸಮೃದ್ಧಿ" ಯ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ, ದೇಶಾದ್ಯಂತ 18,000 ಪಿಎಸಿಎಸ್ ಗಳಲ್ಲಿ ಗಣಕೀಕರಣದ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ ಮಂಟಪವು ವಿಕಸಿತ ಭಾರತದ ಪಯಣದಲ್ಲಿನ ಮತ್ತೊಂದು ಮೈಲಿಗಲ್ಲು ಅಂದರೆ 'ಸಹಕಾರದಿಂದ ಸಮೃದ್ಧಿ'ಯ ದಿಕ್ಕಿನೆಡೆ ಒಂದು ಹೆಜ್ಜೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು . ಕೃಷಿ ಮತ್ತು ಬೇಸಾಯದ ಅಡಿಪಾಯವನ್ನು ಬಲಪಡಿಸುವಲ್ಲಿ ಸಹಕಾರದ ಶಕ್ತಿಯು ಬಹುದೊಡ್ಡ ಪಾತ್ರವನ್ನು ಹೊಂದಿದೆ. ಇದು ಸಹಕಾರ ವಲಯಕ್ಕಾಗಿ ಪ್ರತ್ಯೇಕ ಸಚಿವಾಲಯಕ್ಕೆ ಕಾರಣವಾಗಿದೆ. ‘ಸಹಕಾರಿ ವಲಯದಲ್ಲಿ ವಿಶ್ವದ ಅತಿ ದೊಡ್ಡ ಧಾನ್ಯ ಸಂಗ್ರಹ ಯೋಜನೆʼಗೆ ಇಂದು ಚಾಲನೆ ನೀಡಲಾಗಿದ್ದು, ದೇಶದ ಮೂಲೆ ಮೂಲೆಯಲ್ಲಿ ಸಾವಿರಾರು ದಾಸ್ತಾನು ಮಳಿಗೆಗಳು ಮತ್ತು ಗೋದಾಮುಗಳು ಬರಲಿವೆ ಎಂದರು. ಇದು ಮತ್ತು ಪಿಎಸಿಗಳ ಗಣಕೀಕರಣದಂತಹ ಇತರ ಯೋಜನೆಗಳು ಕೃಷಿಗೆ ಹೊಸ ಆಯಾಮಗಳನ್ನು ನೀಡುತ್ತವೆ ಮತ್ತು ದೇಶದಲ್ಲಿ ಕೃಷಿಯನ್ನು ಆಧುನೀಕರಿಸುತ್ತವೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಗಳು ಭಾರತದ ಪುರಾತನ ಪರಿಕಲ್ಪನೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಗ್ರಂಥವೊಂದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಣ್ಣ ಸಂಪನ್ಮೂಲಗಳನ್ನು ಒಟ್ಟುಗೂಡಿಸಿದರೆ ದೊಡ್ಡ ಕಾರ್ಯವನ್ನು ಸಾಧಿಸಬಹುದು ಎಂದು ವಿವರಿಸಿದರು ಮತ್ತು ಭಾರತದ ಪ್ರಾಚೀನ ಹಳ್ಳಿಗಳ ವ್ಯವಸ್ಥೆಯಲ್ಲಿ ಈ ಮಾದರಿಯನ್ನು ಅನುಸರಿಸಲಾಗಿದೆ ಎಂದು ಹೇಳಿದರು. “ಸಹಕಾರ ಸಂಸ್ಥೆಗಳು ಭಾರತದ ಆತ್ಮನಿರ್ಭರ ಸಮಾಜದ ಅಡಿಪಾಯಗಳಾಗಿವೆ. ಇದು ಕೇವಲ ಯಾವುದೇ ವ್ಯವಸ್ಥೆ ಮಾತ್ರವಲ್ಲ, ಆದರೆ ಒಂದು ನಂಬಿಕೆ, ಒಂದು ಚೈತನ್ಯ. ಸಹಕಾರ ವಲಯಗಳ ಈ ಮನೋಭಾವವು ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳ ಗಡಿಯನ್ನು ಮೀರಿದೆ ಮತ್ತು ಅಸಾಧಾರಣ ಫಲಿತಾಂಶಗಳನ್ನು ನೀಡುತ್ತದೆ ಎಂದು ಒತ್ತಿ ಹೇಳಿ ಮುಂದುವರೆದು ದೈನಂದಿನ ಜೀವನಕ್ಕೆ ಸಂಬಂಧಿಸಿದ ಸಾಮಾನ್ಯ ವ್ಯವಸ್ಥೆಯನ್ನು ಬೃಹತ್ ಶ್ರಮದಾಯಕ ವ್ಯವಸ್ಥೆಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಬದಲಾಗುತ್ತಿರುವ ಚಹರೆಯ ರುಜುವಾತಾದ ಫಲಿತಾಂಶವಾಗಿದೆ ಎಂದು ಅವರು ಹೇಳಿದರು. ಈ ಹೊಸ ಸಚಿವಾಲಯದ ಮೂಲಕ, ಭಾರತದ ಕೃಷಿ ಕ್ಷೇತ್ರದ ವಿಘಟಿತ ಅಧಿಕಾರಗಳನ್ನು ಒಟ್ಟುಗೂಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ರೈತರ ಉತ್ಪಾದಕರ ಸಂಘಟನೆಯ (ಎಫ್ ಪಿಒ) ಉದಾಹರಣೆಯನ್ನು ನೀಡುತ್ತಾ, ಹಳ್ಳಿಗಳಲ್ಲಿ ಸಣ್ಣ ರೈತರಲ್ಲಿ ಬೆಳೆಯುತ್ತಿರುವ ಉದ್ಯಮಶೀಲತೆಯನ್ನು ಪ್ರಧಾನಮಂತ್ರಿಯವರು ಗಮನಿಸಿದರು. ಪ್ರತ್ಯೇಕ ಸಚಿವಾಲಯವನ್ನು ಹೊಂದಿರುವ ಕಾರಣ, 10,000 ಎಫ್ ಪಿಒಗಳ ಗುರಿಯಲ್ಲಿ 8000 ಎಫ್ ಪಿಒಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಸಹಕಾರಿ ಸಂಘಗಳ ಪ್ರಯೋಜನಗಳು ಈಗ ಮೀನುಗಾರರು ಮತ್ತು ಪಶುಪಾಲಕರನ್ನೂ ತಲುಪುತ್ತಿವೆ. ಮೀನುಗಾರಿಕೆ ಕ್ಷೇತ್ರದಲ್ಲಿ 25,000 ಕ್ಕೂ ಹೆಚ್ಚು ಸಹಕಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ವರ್ಷಗಳಲ್ಲಿ 200,000 ಸಹಕಾರಿ ಸಂಘಗಳನ್ನು ಸ್ಥಾಪಿಸುವ ಸರ್ಕಾರದ ಗುರಿಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.
ಗುಜರಾತಿನ ಮುಖ್ಯಮಂತ್ರಿಯಾಗಿ ತಮ್ಮ ಅನುಭವವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಮುಲ್ ಮತ್ತು ಲಿಜ್ಜತ್ ಪಾಪಡ್ ನ ಯಶೋಗಾಥೆಗಳನ್ನು ಸಹಕಾರಿ ಸಂಸ್ಥೆಗಳ ಶಕ್ತಿ ಎಂದು ಉಲ್ಲೇಖಿಸಿದರು ಮತ್ತು ಈ ಉದ್ಯಮಗಳಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು. ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಸರಕಾರ ಮಹಿಳೆಯರಿಗೆ ಆದ್ಯತೆ ನೀಡಿದೆ. ಬಹು ರಾಜ್ಯ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೆ ಮಂಡಳಿ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಬಗ್ಗೆ ತಿಳಿಸಿದರು.
ರೈತರ ವೈಯಕ್ತಿಕ ಸಮಸ್ಯೆಗಳನ್ನು ಸಾಮೂಹಿಕ ಶಕ್ತಿಯಿಂದ ನಿಭಾಯಿಸುವ ಸಾಮರ್ಥ್ಯ ಸಹಕಾರಿ ಸಂಸ್ಥೆಗಳಿಗೆ ಇದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು ಮತ್ತು ಶೇಖರಣೆಯ ಉದಾಹರಣೆಯನ್ನು ನೀಡಿದರು. ಶೇಖರಣಾ ಮೂಲಸೌಕರ್ಯಗಳ ಕೊರತೆಯಿಂದ ರೈತರು ಅನುಭವಿಸುತ್ತಿರುವ ನಷ್ಟವನ್ನು ಪ್ರಸ್ತಾಪಿಸಿದ ಪ್ರಧಾನಿಯವರು, ಸರ್ಕಾರವು ಪ್ರಾರಂಭಿಸಿದ 700 ಲಕ್ಷ ಮೆಟ್ರಿಕ್ ಟನ್ಗಳ ವಿಶ್ವದ ಅತಿದೊಡ್ಡ ಶೇಕರಣಾ ಯೋಜನೆ ಮತ್ತು 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳ್ಳುವ ಬಗ್ಗೆ ಗಮನ ಸೆಳೆದರು. ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡು ತಮ್ಮ ಅಗತ್ಯಕ್ಕೆ ತಕ್ಕಂತೆ ಸರಿಯಾದ ಸಮಯಕ್ಕೆ ಮಾರಾಟ ಮಾಡುವುದರ ಜೊತೆಗೆ ಬ್ಯಾಂಕುಗಳಿಂದ ಸಾಲ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
"ವಿಕಸಿತ ಭಾರತ ರಚನೆಗೆ ಕೃಷಿ ವ್ಯವಸ್ಥೆಗಳ ಆಧುನೀಕರಣವು ಸಮಾನವಾಗಿ ಮುಖ್ಯವಾಗಿದೆ", ಪಿಎಸಿಎಸ್ ನಂತಹ ಸರ್ಕಾರಿ ಸಂಸ್ಥೆಗಳಿಗೆ ಹೊಸ ಜವಾಬ್ದಾರಿಯನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನವನ್ನು ಎತ್ತಿ ತೋರಿಸಿದರು. ಈ ಸಮಿತಿಗಳು ಜನೌಷಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸಹ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ಸಿಲಿಂಡರ್ ಗಳ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಮಿತಿಗಳನ್ನು ಉಲ್ಲೇಖಿಸಿದ ಅವರು, ಪಿಎಸಿಎಸ್ ಹಲವಾರು ಗ್ರಾಮಗಳಲ್ಲಿ ನೀರಿನ ಸಮಿತಿಗಳ ಪಾತ್ರವನ್ನು ಕೂಡಾ ವಹಿಸುತ್ತದೆ. ಇದು ಸಾಲ ಸಮಿತಿಗಳ ಉತ್ಪಾದಕತೆಯನ್ನು ಹೆಚ್ಚಿಸಿದೆ ಮತ್ತು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಸಹಕಾರಿ ಸಮಿತಿಗಳು ಈಗ ಹಳ್ಳಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನೂರಾರು ಸೌಲಭ್ಯಗಳನ್ನು ಒದಗಿಸುತ್ತಿವೆ" ಎಂದು ಅವರು ಹೇಳಿದರು, ತಂತ್ರಜ್ಞಾನ ಮತ್ತು ಡಿಜಿಟಲ್ ಇಂಡಿಯಾದ ಬೆಳವಣಿಗೆಯನ್ನು ಉಲ್ಲೇಖಿಸಿ ರೈತರಿಗೆ ಸೇವೆಗಳನ್ನು ದೊಡ್ಡ ಪ್ರಮಾಣದಲ್ಲಿ ತಲುಪಿಸುವ ಅವುಗಳ ಪಾತ್ರವನ್ನು ಗಮನಿಸಿದರು. ಇದು ಹಳ್ಳಿಗಳಲ್ಲಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ವಿಕಸಿತ ಭಾರತದ ಪಯಣದಲ್ಲಿ ಸಹಕಾರಿ ಸಂಸ್ಥೆಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಆತ್ಮನಿರ್ಭರ ಭಾರತದ ಗುರಿಗಳಿಗೆ ಕೊಡುಗೆ ನೀಡುವಂತೆ ಅವರು ಕೇಳಿಕೊಂಡರು. "ಆತ್ಮನಿರ್ಭರ ಭಾರತ ಇಲ್ಲದೆ ವಿಕಸಿತ ಭಾರತ ಸಾಧ್ಯವಿಲ್ಲ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಹಕಾರಿ ಸಂಸ್ಥೆಗಳು ನಾವು ಆಮದನ್ನು ಅವಲಂಬಿಸಿರುವ ವಸ್ತುಗಳ ಪಟ್ಟಿ ಮಾಡಬೇಕು ಮತ್ತು ಅವುಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಸಹಕಾರಿ ಕ್ಷೇತ್ರವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಅನ್ವೇಷಿಸಬೇಕು ಎಂದು ಅವರು ಸಲಹೆ ನೀಡಿದರು. ಖಾದ್ಯ ತೈಲವನ್ನು ಪಟ್ಟಿಗೆ ಸೇರಿಸಬಹುದಾದ ಉತ್ಪನ್ನವಾಗಿ ಉದಾಹರಣೆ ನೀಡಿದರು. ಅಂತೆಯೇ, ಎಥೆನಾಲ್ ಗೆ ಸಹಕಾರದ ಬೆಂಬಲವು ಇಂಧನದ ಅಗತ್ಯಗಳಿಗಾಗಿ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿ ಸಂಘಗಳಿಗೆ ಪ್ರಧಾನಮಂತ್ರಿಯವರು ಸೂಚಿಸಿದ ಮತ್ತೊಂದು ಕ್ಷೇತ್ರವೆಂದರೆ ಬೇಳೆಕಾಳುಗಳ ಆಮದು. ಸಹಕಾರಿ ಸಂಸ್ಥೆಗಳು ಅನೇಕ ಉತ್ಪಾದನಾ ವಸ್ತುಗಳನ್ನು ಸಹ ಪರಿಗಣಿಸಬಹುದು ಎಂದು ಹೇಳಿದರು.
ರೈತರನ್ನು ಉರ್ಜದಾತ (ಶಕ್ತಿ ಒದಗಿಸುವವರು) ಮತ್ತು ಉರ್ವರಕದಾತ (ಗೊಬ್ಬರ ಒದಗಿಸುವವರು) ಆಗಿ ಪರಿವರ್ತಿಸ ಬಹುದಾದ ಸಾವಯವ ಕೃಷಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಸೌರಫಲಕಗಳನ್ನು ಹೊಲಗಳ ಗಡಿಯಲ್ಲಿ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದಿಸಲು ಸಹಕಾರಿ ಉಪಕ್ರಮದ ಕ್ಷೇತ್ರಗಳಾಗಿ ಪರಿಗಣಿಸಬಹುದು ಎಂದು ಅವರು ಹೇಳಿದರು. ಇದೇ ರೀತಿಯ ಹಸ್ತಕ್ಷೇಪವು ಗೋಬರ್ ಧನ್ ನಲ್ಲಿ, ಜೈವಿಕ ಸಿಎನ್ ಜಿ ಉತ್ಪಾದನೆ, ಗೊಬ್ಬರ ಮತ್ತು ತ್ಯಾಜ್ಯದಿಂದ ಸಂಪತ್ತಿಗೆಯಲ್ಲಿ ಕಾರ್ಯಸಾಧ್ಯವಾಗಿದೆ. ಇದು ರಸಗೊಬ್ಬರ ಆಮದು ವೆಚ್ಚವು ತಗ್ಗಲಿದೆ ಎಂದು ಅವರು ಹೇಳಿದರು. ಸಣ್ಣ ರೈತರ ಶ್ರಮಕ್ಕೆ ಜಾಗತಿಕ ಬ್ರ್ಯಾಂಡಿಂಗ್ ನಲ್ಲಿ ಸಹಕಾರಿ ಸಂಸ್ಥೆಗಳು ಮುಂದೆ ಬರಬೇಕು ಎಂದು ಹೇಳಿದರು. ಜಾಗತಿಕವಾಗಿ ಡೈನಿಂಗ್ ಟೇಬಲ್ ಗಳಲ್ಲಿ ಶ್ರೀ ಅನ್ನ - ಸಿರಿಧಾನ್ಯ ಲಭ್ಯವಾಗುವಂತೆ ಮಾಡುವಂತೆಯೂ ಅವರು ಕೇಳಿಕೊಂಡರು.
ಗ್ರಾಮೀಣ ಭಾಗದ ಆದಾಯವನ್ನು ಹೆಚ್ಚಿಸುವಲ್ಲಿ ಸಹಕಾರಸಂಸ್ಥೆಗಳ ಪಾತ್ರದ ಮೇಲೆ ಕೇಂದ್ರೀಕರಿಸಿದ ಪ್ರಧಾನಮಂತ್ರಿಯವರು ತಮ್ಮ ಕ್ಷೇತ್ರವಾದ ಕಾಶಿಯಲ್ಲಿ ಡೈರಿ ಸಹಕಾರಸಂಸ್ಥೆಗಳ ಪರಿಣಾಮವನ್ನು ಗಮನಿಸಿದರು. ಕಳೆದ 10 ವರ್ಷಗಳಲ್ಲಿ ಜೇನು ಉತ್ಪಾದನೆಯು 75 ಸಾವಿರ ಮೆಟ್ರಿಕ್ ಟನ್ನಿಂದ 1.5 ಲಕ್ಷ ಮೆಟ್ರಿಕ್ ಟನ್ಗೆ ಮತ್ತು ಜೇನು ರಫ್ತು 28 ಸಾವಿರ ಮೆಟ್ರಿಕ್ ಟನ್ನಿಂದ 80 ಸಾವಿರ ಮೆಟ್ರಿಕ್ ಟನ್ಗೆ ಏರಿಕೆಯಾಗಿದ್ದು, ಜೇನು ವಲಯದಲ್ಲಿ ಸಹಕಾರಿ ಸಂಘಗಳು ಮಾಡಿರುವ ಪ್ರಗತಿಯನ್ನು ಅವರು ಗಮನಿಸಿದರು. ಎನ್ಎಎಫ್ ಇಡಿ, ಟಿಆರ್ ಐಎಫ್ ಇ ಡಿ ಮತ್ತು ರಾಜ್ಯ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಗುರುತಿಸಿದ ಪ್ರಧಾನಮಂತ್ರಿಯವರು ಈ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸಲು ಕೇಳಿಕೊಂಡರು.
ಡಿಜಿಟಲ್ ನಗದು ವಿತರಣೆ ಮತ್ತು ಫಲಾನುಭವಿಗಳಿಗೆ ನೇರ ವರ್ಗಾವಣೆಯ ಪ್ರಯೋಜನಗಳ ಬಗ್ಗೆ ಒತ್ತಿ ಹೇಳಿದ ಸೂಚಿಸಿದ ಪ್ರಧಾನಮಂತ್ರಿಯವರು, ಪಿಎಸಿಎಸ್ ಮೂಲಕ ನೇರ ಮತ್ತು ಡಿಜಿಟಲ್ ನಗದು ವಿತರಣೆಯ ಅಗತ್ಯವನ್ನು ಒತ್ತಿ ಹೇಳಿದರು. ಮಣ್ಣು ಪರೀಕ್ಷೆ ನಡೆಸಿ ಮಣ್ಣು ಸಂಪನ್ಮೂಲ ಕಾರ್ಡ್ ಅಭಿಯಾನವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಹಕಾರಿ ಸಂಸ್ಥೆಗಳಲ್ಲಿ ಯುವಕರು ಮತ್ತು ಮಹಿಳೆಯರ ಕೊಡುಗೆಯನ್ನು ಹೆಚ್ಚಿಸುವ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. ಸಹಕಾರಿ ಸಂಘಗಳಿಗೆ ಸಂಬಂಧಿಸಿದ ರೈತರಿಗೆ ಮಣ್ಣಿನ ಆರೋಗ್ಯವನ್ನು ವಿಶ್ಲೇಷಿಸಿ ಅದರಂತೆ ಉತ್ಪನ್ನಗಳನ್ನು ತಯಾರಿಸಲು ಕಲಿಸಬೇಕು ಎಂದು ಸಲಹೆ ನೀಡಿದರು. ಇದು ಹೊಸ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಕ್ಷೇತ್ರವನ್ನು ಪುನಶ್ಚೇತನಗೊಳಿಸುತ್ತದೆ ಎಂದು ಹೇಳಿದರು. ಸಹಕಾರಿ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಮಂತ್ರಿಯವರು ಒತ್ತು ನೀಡಿದರು. "ಪಿಎಸಿಎಸ್ ಮತ್ತು ಸಹಕಾರಿ ಸಂಘಗಳು ಸಹ ಪರಸ್ಪರ ಕಲಿಯಬೇಕಾಗುತ್ತದೆ", ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಪೋರ್ಟಲ್, ಆನ್ ಲೈನ್ ತರಬೇತಿಗಾಗಿ ವ್ಯವಸ್ಥೆ ಮತ್ತು ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಲು ಮಾಡ್ಯೂಲ್ಗಳನ್ನು ರಚಿಸುವಂತೆ ಸಲಹೆ ನೀಡಿದರು. ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾಪಿಸಿದರು ಮತ್ತು ಸಹಕಾರಿ ಕ್ಷೇತ್ರದಲ್ಲಿ ಇದೇ ರೀತಿಯ ಕಾರ್ಯವಿಧಾನವನ್ನು ಸೂಚಿಸಿದರು. ಜನರ ವಿಶ್ವಾಸವನ್ನು ಹೆಚ್ಚಿಸಲು ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಪಾರದರ್ಶಕತೆ ತರುವ ಮಹತ್ವವನ್ನು ಅವರು ತಿಳಿಸಿದರು.
ಸಹಕಾರಿ ಸಂಘಗಳನ್ನು ಸಮೃದ್ಧಿಯ ಆಧಾರವನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು ಮತ್ತು 1 ಕೋಟಿ ಮತ್ತು 10 ಕೋಟಿ ರೂಪಾಯಿಗಳ ನಡುವಿನ ಆದಾಯವಿರುವ ಸಹಕಾರಿ ಸಂಘಗಳ ಮೇಲಿನ ಸೆಸ್ ಅನ್ನು ಶೇಕಡಾ 12 ರಿಂದ ಶೇಕಡಾ 7 ಕ್ಕೆ ಇಳಿಸಿರುವುದರ ಬಗ್ಗೆ ತಿಳಿಸಿ ಇದು ಸಹಕಾರ ಸಮಿತಿಗಳಿಗೆ ಬಂಡವಾಳವನ್ನು ಹೆಚ್ಚಿಸಲು ಕಾರಣವಾಯಿತು ಮತ್ತು ಕಂಪನಿಯಾಗಿ ಮುಂದುವರಿಯಲು ವಿವಿಧ ಮಾರ್ಗಗಳನ್ನು ತೆರೆಯಿತು ಎಂದು ಹೇಳಿದರು. ಸಹಕಾರ ಸಂಘಗಳು ಮತ್ತು ಕಂಪನಿಗಳ ನಡುವಿನ ಪರ್ಯಾಯ ತೆರಿಗೆಗಳಲ್ಲಿನ ತಾರತಮ್ಯವನ್ನು ಅವರು ಎತ್ತಿ ತೋರಿಸಿದರು ಮತ್ತು ಸಂಘಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯನ್ನು 18.5 ಪ್ರತಿಶತದಿಂದ 15 ಪ್ರತಿಶತಕ್ಕೆ ಇಳಿಸಿ, ಆ ಮೂಲಕ ಸಹಕಾರ ಸಂಘಗಳು ಮತ್ತು ಕಂಪನಿಗಳ ನಡುವೆ ಸಮಾನತೆಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದರು. ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ಸಮಸ್ಯೆಯನ್ನು ನಿಭಾಯಿಸಲು ವಾರ್ಷಿಕವಾಗಿ 1 ಕೋಟಿ ರೂಪಾಯಿಯಿಂದ ಹಿಂಪಡೆಯುವ ಮಿತಿಯನ್ನು 3 ಕೋಟಿಗೆ ಹೆಚ್ಚಿಸುವುದಾಗಿ ಪ್ರಧಾನಮಂತ್ರಿ ಹೇಳಿದರು. ಸಹಕಾರದ ದಿಕ್ಕಿನೆಡೆಗಿನ ಜಂಟಿ ಪ್ರಯತ್ನಗಳು ದೇಶದ ಸಾಮೂಹಿಕ ಶಕ್ತಿಯೊಂದಿಗೆ ಅಭಿವೃದ್ಧಿಯ ಎಲ್ಲಾ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ತಮ್ಮ ಭಾಷಣವನ್ನು ಮುಗಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಕೇಂದ್ರ ಕೃಷಿ ಸಚಿವರಾದ ಶ್ರೀ ಅರ್ಜುನ್ ಮುಂಡಾ ಮತ್ತು ಕೇಂದ್ರ ವಾಣಿಜ್ಯ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ :
2,500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಉಪಕ್ರಮವು ಎಲ್ಲಾ ಕ್ರಿಯಾತ್ಮಕ ಪಿಎಎಸ್ ಗಳ ಕಾರ್ಯಗಳನ್ನು ಯುನಿಫೈಡ್ ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ಇಆರ್ ಪಿ) ಆಧಾರಿತ ರಾಷ್ಟ್ರೀಯ ತಂತ್ರಾಂಶಕ್ಕೆ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ. ಇದು ತಡೆರಹಿತ ಕ್ರೋಡೀಕರಣ ಮತ್ತು ಸಂಪರ್ಕವನ್ನು ಖಚಿತಪಡಿಸುತ್ತದೆ. ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ಈ ಪಿಎಸಿಎಸ್ ಅನ್ನು ನಬಾರ್ಡ್ ನೊಂದಿಗೆ ಜೋಡಿಸುವ ಮೂಲಕ, ಯೋಜನೆಯು ಪಿಎಸಿಎಸ್ ಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಆಡಳಿತವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಹೀಗಾಗಿ ಕೋಟಿಗಟ್ಟಲೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ನಬಾರ್ಡ್ ಈ ಯೋಜನೆಗಾಗಿ ರಾಷ್ಟ್ರೀಯ ಮಟ್ಟದ ಸಾಮಾನ್ಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ದೇಶಾದ್ಯಂತ ಪಿಎಸಿಎಸ್ ನ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇಆರ್ ಪಿ ತಂತ್ರಾಂಶದಲ್ಲಿ 18,000 ಪಿಎಸಿಎಸ್ ಗಳನ್ನು ಸೇರಿಸುವ ಕಾರ್ಯವು ಪೂರ್ಣಗೊಂಡಿದೆ, ಇದು ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
***
(Release ID: 2008689)
Visitor Counter : 108
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam