ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಸರ್ಕಾರಗಳ ಶೃಂಗಸಭೆ 2024 ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

Posted On: 14 FEB 2024 5:10PM by PIB Bengaluru

ಯು.ಎ.ಇ. ಉಪಾಧ್ಯಕ್ಷ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಮತ್ತು ದುಬೈ ಆಡಳಿತಗಾರರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ಫೆಬ್ರವರಿ 2024 ರಂದು ದುಬೈನಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು. ಶೃಂಗಸಭೆಯಲ್ಲಿ "ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು" ವಿಷಯದ ಕುರಿತು ಅವರು ಪ್ರಧಾನ ಅಧಿವೇಶನದಲ್ಲಿ ವಿಶೇಷ ಭಾಷಣವನ್ನು ಮಾಡಿದರು. 2018 ರಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಮಂತ್ರಿಯವರು ಭಾಗವಹಿಸಿದ್ದರು. ಈ ಬಾರಿಯ ಶೃಂಗಸಭೆಯಲ್ಲಿ 10 ರಾಷ್ಟ್ರಾಧ್ಯಕ್ಷರು ಮತ್ತು 10 ದೇಶಗಳ ಪ್ರಧಾನಮಂತ್ರಿಗಳು ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಿದ್ದಾರೆ. ಈ ಜಾಗತಿಕ ಕೂಟದಲ್ಲಿ 120 ದೇಶಗಳ ಸರ್ಕಾರಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ ಪ್ರತಿನಿಧಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಬದಲಾಗುತ್ತಿರುವ ಆಡಳಿತದ ಸ್ವರೂಪದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. "ಕನಿಷ್ಟ ಸರಕಾರ, ಗರಿಷ್ಠ ಆಡಳಿತ" ಎಂಬ ಮಂತ್ರದ ಆಧಾರದ ಮೇಲೆ ಭಾರತದ ಪರಿವರ್ತನಾಶೀಲ ಸುಧಾರಣೆಗಳನ್ನು ಅವರು ವಿವರಿಸಿದರು. ದೇಶವು ಡಿಜಿಟಲ್ ತಂತ್ರಜ್ಞಾನವನ್ನು ಮತ್ತಷ್ಟು ಜನ ಕಲ್ಯಾಣ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಗೆ ಹೇಗೆ ಸದುಪಯೋಗಪಡಿಸಿಕೊಂಡಿದೆ ಎಂಬುದರ ಕುರಿತು ಭಾರತೀಯ ಅನುಭವವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಆಡಳಿತದಲ್ಲಿ  ಮಾನವ ಕೇಂದ್ರಿತ ವಿಧಾನಕ್ಕೆ ಕರೆ ನೀಡಿದರು. ಅಂತರ್ಗತ ಸಮಾಜವನ್ನು ಸಾಧಿಸಲು ಜನರ ಸಹಭಾಗಿತ್ವದ ಪ್ರಾಧಾನ್ಯತೆ, ಕೊನೆಯ ಮೈಲಿಯ ಜನಸಾಮಾನ್ಯನ ತನಕದ ಸೌಕರ್ಯಗಳ ವಿತರಣೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿ ಕುರಿತಾದ  ಭಾರತದ ಪ್ರಾಮುಖ್ಯ ಲಕ್ಷ್ಯಗಳನ್ನು ಅವರು ಈ ಸಂದರ್ಭದಲ್ಲಿ  ಹೇಳಿದರು.

ಪ್ರಪಂಚದ ಅಂತರ್-ಸಂಪರ್ಕಿತ ಸ್ವರೂಪವನ್ನು ಗಮನಿಸಿದರೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಸರ್ಕಾರಗಳು ಪರಸ್ಪರ ಸಹಕರಿಸಬೇಕು ಮತ್ತು ಕಲಿಯಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಆಡಳಿತವು ಅಂತರ್ಗತ, ತಾಂತ್ರಿಕ-ಸ್ಮಾರ್ಟ್, ಕ್ಲೀನ್ ಮತ್ತು ಪಾರದರ್ಶಕ ಮತ್ತು ಹಸಿರು ಆಗಿರುವುದು ಈ ಸಮಯದ ಅಗತ್ಯವಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಸಾರ್ವಜನಿಕ ಸೇವೆಗೆ ತಮ್ಮ ವಿಧಾನದಲ್ಲಿ ಸರ್ಕಾರಗಳು ಆದ್ಯತೆ ನೀಡಬೇಕು - ಬದುಕಲು ಸುಲಭ ಸಾಧ್ಯ ವ್ಯವಸ್ಥೆಗಳು, ನ್ಯಾಯದ ಸುಲಭ ಲಭ್ಯತೆಗಳು, ಚಲನಶೀಲತೆಯ ಸುಲಭ ಅವಕಾಶಗಳು, ನಾವೀನ್ಯತೆಯ ಸುಲಭ ಮಾರ್ಗಗಳು ಮತ್ತು ವ್ಯವಹಾರವನ್ನು ಕೂಡಾ ಸುಲಭಗೊಳಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಹವಾಮಾನ ಬದಲಾವಣೆಯ ಕ್ರಮಕ್ಕೆ ಭಾರತದ ದೃಢವಾದ ಬದ್ಧತೆಯನ್ನು ವಿವರಿಸುತ್ತಾ, ಸುಸ್ಥಿರ ಜಗತ್ತನ್ನು ರಚಿಸಲು ಜನರು ಪರಿಸರಕ್ಕಾಗಿ ಜೀವನಶೈಲಿ(ಮಿಷನ್ ಲೈಫ್)ಗೆ ಒಗ್ಗಿಕೊಳ್ಳಬೇಕು ಎಂದು ಕರೆ ನೀಡಿದರು.

ಕಳೆದ ವರ್ಷ ಜಿ-20 ಅಧ್ಯಕ್ಷರಾಗಿ ಭಾರತವು ನಿರ್ವಹಿಸಿದ ನಾಯಕತ್ವದ ಪಾತ್ರವನ್ನು ಪ್ರಧಾನಮಂತ್ರಿ ಅವರು ವಿವರಿಸುತ್ತಾ, ವಿಶ್ವವು ಎದುರಿಸುತ್ತಿರುವ ವ್ಯಾಪಕವಾದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ, ಜಾಗತಿಕ ದಕ್ಷಿಣವು (ಭೂಗೋಲದ ದಕ್ಷಿಣ ಭಾಗದ ದೇಶಗಳು) ಎದುರಿಸುತ್ತಿರುವ ಅಭಿವೃದ್ಧಿ ಕಾಳಜಿಗಳನ್ನು ಜಾಗತಿಕ ಭಾಷಣದ ಕೇಂದ್ರ ಹಂತಕ್ಕೆ ತರಲು ಭಾರತವು ಮಾಡಿದ ಪ್ರಯತ್ನಗಳನ್ನು ಅವರು ವಿವರಿಸಿದರು. ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಜಾಗತಿಕ ದಕ್ಷಿಣಕ್ಕೆ ಅದರ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಧ್ವನಿಗೂಡಬೇಕೆಂದು  ಒತ್ತಾಯಿಸಿದರು. ಭಾರತವು "ವಿಶ್ವ ಬಂಧು" ಪಾತ್ರದ ಆಧಾರದ ಮೇಲೆ ಜಾಗತಿಕ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

****



(Release ID: 2006266) Visitor Counter : 83