ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ
azadi ka amrit mahotsav

‘ಅಮೃತ ಮಹೋತ್ಸವದ ವೈವಿಧ್ಯತೆ' ಕಾರ್ಯಕ್ರಮವನ್ನು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು


‘ಅಮೃತ ಮಹೋತ್ಸವದ ವೈವಿಧ್ಯತೆ'ಯ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಿದ ಈಶಾನ್ಯ ಭಾರತದ ಸಾಂಸ್ಕೃತಿಕ ವೈಭವ ಪ್ರೇಕ್ಷಕರನ್ನು ಆಕರ್ಷಿಸಿತು

Posted On: 09 FEB 2024 11:42AM by PIB Bengaluru

2024 ರ ಫೆಬ್ರವರಿ 8 ರಿಂದ 11 ರವರೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ 'ಅಮೃತ ಮಹೋತ್ಸವದ ವೈವಿಧ್ಯತೆ(ವಿವಿದ್ಧತಾ ಕಾ ಅಮೃತ್ ಮಹೋತ್ಸವ)'ದ ಉದ್ಘಾಟನಾ ಸಮಾರಂಭವು ಈಶಾನ್ಯ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಐತಿಹಾಸಿಕ ಆಚರಣೆಯೊಂದಿಗೆ ಪ್ರಾರಂಭವಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಆಯೋಜಿಸಿದ ಮಹೋತ್ಸವವು ಒಂದು ಪಾಲ್ಗೊಂಡವರ ಪಾಲಿಗೆ ಅವಸ್ಮರಣೀಯ ರೋಮಾಂಚಕ ಸಾಂಸ್ಕೃತಿಕ ದರ್ಶನವಾಯಿತು.

'ಅಮೃತ ಮಹೋತ್ಸವದ ವೈವಿಧ್ಯತೆ’ ಕಾರ್ಯಕ್ರಮವನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಅವರು ಉದ್ಘಾಟಿಸಿದರು. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿಯವರು  ನಡೆದ ವಿಶೇಷ ಅಭಿನಂದನಾ ಸಮಾರಂಭದಲ್ಲಿ  ಭಾಗವಹಿಸಿದರು.

ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಈಶಾನ್ಯ ಪ್ರದೇಶಕ್ಕೆ ತಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ರಾಷ್ಟ್ರಪತಿಯರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. “2014 ರಿಂದ, ಪ್ರಧಾನಮಂತ್ರಿಯವರ ಪಾಲಿಗೆ ಈಶಾನ್ಯ ಪ್ರದೇಶವು ರಾಷ್ಟ್ರೀಯ ಆದ್ಯತೆಯಾಗಿದೆ ಮತ್ತು ಅಂದಿನಿಂದ ಅಭೂತಪೂರ್ವ ಅಭಿವೃದ್ಧಿ ನಡೆದಿದೆ.  ರಸ್ತೆ, ರೈಲು, ವಾಯು ಅಥವಾ ಜಲಮಾರ್ಗದ ಮೂಲಕ ಭೌತಿಕ ಸಂಪರ್ಕ, ರಾಜಕೀಯ ಸಂಪರ್ಕ ಅಥವಾ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಸಂಪರ್ಕ ಏರ್ಪಡಿಸಲಾಗಿದೆ ಹಾಗೂ ಈಶಾನ್ಯದೊಂದಿಗೆ ಹೊಂದಿದ್ದ ಎಲ್ಲಾ ಅಂತರವನ್ನು ಅಳಿಸಿಹಾಕಲಾಗುತ್ತಿದೆ” ಎಂದು ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಹೇಳಿದರು. 

“ಈಶಾನ್ಯ ಭಾರತದ ಶ್ರೀಮಂತ ಪರಂಪರೆಯು ಅದರ ಜನರ ಅನಿಯಮಿತ ಸಮೃದ್ಧಿಗೆ ಪ್ರಮುಖ ಕಾರಣವಾಗಿದೆ ಮತ್ತು ಈ ಪೂರ್ಣ ಸಾಮರ್ಥ್ಯವನ್ನು ಸದುಪಯೋಗ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರು ಹೇಳಿದರು.

“ಕಳೆದ 10 ವರ್ಷಗಳಲ್ಲಿ ಈಶಾನ್ಯ ಪ್ರದೇಶವು ಹೇಗೆ ಸಂಪೂರ್ಣವಾಗಿ ರೂಪಾಂತರಗೊಂಡಿದೆ ಮತ್ತು ಪ್ರದೇಶದ ಜನರಲ್ಲಿ ಹೆಚ್ಚಿನ ಭರವಸೆ ಮತ್ತು ನಿರೀಕ್ಷೆಗಳಿವೆ” ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಶ್ರೀ ಕಿರಣ್ ರಿಜಿಜು ಅವರು ತಮ್ಮ ಭಾಷಣದಲ್ಲಿ ವಿವರಿಸಿದರು. ಸಮಾರಂಭದಲ್ಲಿ ಈಶಾನ್ಯ ಪ್ರದೇಶದ ಎಲ್ಲಾ ಎಂಟು ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಉಪಸ್ಥಿತಿಯು, ಈ ಸಮಾರಂಭಕ್ಕೆ ವಿಶೇಷ ಕಳೆ ನೀಡಿತು.

'ಅಮೃತ ಮಹೋತ್ಸವದ ವೈವಿಧ್ಯತೆ’ ಮಹೋತ್ಸವವು 320+ ಮಳಿಗೆಗಳನ್ನು ಹೊಂದಿದೆ, ಪ್ರತಿಯೊಂದೂ ಮಳಿಗೆಗಳೂ ಸಾಂಸ್ಕೃತಿಕವಾಗಿ ಶ್ರೀಮಂತ ಎಂಟು ರಾಜ್ಯಗಳ ಅನನ್ಯ ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸುತ್ತಿವೆ. ಅಂದವಾದ ಕರಕುಶಲ ಉತ್ಪನ್ನಗಳು, ಸುಸ್ಥಿರ ಕರಕುಶಲ ವಸ್ತುಗಳು ಮತ್ತು ಸಾವಯವ ಕೃಷಿ ಉತ್ಪನ್ನಗಳನ್ನು ಒಳಗೊಂಡಂತೆ ಈಶಾನ್ಯ ಭಾರತದ ಅತ್ಯುತ್ತಮವಾದ ವಸ್ತುಗಳನ್ನು ಪ್ರದರ್ಶನದಲ್ಲಿ ಪ್ರೇಕ್ಷಕರಿಗಾಗಿ ಹಾಗೂ ಗ್ರಾಹಕರಿಗಾಗಿ ತೆರೆದಿಡಲಾಯಿತು.

ಹೆಚ್ಚುವರಿಯಾಗಿ, ಈಶಾನ್ಯ ಪ್ರದೇಶದಿಂದ ನಮ್ಮ ಅಷ್ಟಲಕ್ಷ್ಮಿ ರಾಜ್ಯಗಳ “ಜಿಐ” ಉತ್ಪನ್ನಗಳೊಂದಿಗೆ ಭವ್ಯವಾದ ಭೌಗೋಳಿಕ ವೈಶಿಷ್ಠತೆಯ ಪೆವಿಲಿಯನ್ ಏರ್ಪಡಿಸಲಾಯಿತು. ಅಸ್ಸಾಂನ ಅಂತರಾಷ್ಟ್ರೀಯ ಖ್ಯಾತಿಯ ಮುಗಾ ಸಿಲ್ಕ್ನಿಂದ ಹಿಡಿದು, ಮಣಿಪುರದ ಸುಂದರವಾಗಿ ನೇಯ್ದ ವಾಂಗ್ಖೈ ಫೀ, ಅರುಣಾಚಲ ಪ್ರದೇಶದ ಕೈಯಿಂದ ಮಾಡಿದ ರತ್ನಗಂಬಳಿಗಳು ಮತ್ತು ತ್ರಿಪುರಾದಿಂದ ರುಚಿಕರವಾದ ರಾಣಿ ಅನಾನಸ್, 25+ ಜವಳಿ, ಕರಕುಶಲ ಮತ್ತು ಕೃಷಿ ಜಿಐ ಉತ್ಪನ್ನಗಳನ್ನು ಇದರಲ್ಲಿ ಪ್ರಸ್ತುತಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ. 

ಮಜುಲಿ ಮಾಸ್ಕ್ ತಯಾರಿಕೆ, ಬಾಸ್ಕೆಟ್ ನೇಯ್ಗೆ, ಕಮಲದ ರೇಷ್ಮೆ ಹೊರತೆಗೆಯುವಿಕೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈಶಾನ್ಯದ ಸಾಂಪ್ರದಾಯಿಕ ಕುಶಲತೆಗಳ 20+ ಕೇಂದ್ರಗಳಲ್ಲಿ ನೇರ ಪ್ರದರ್ಶನಗಳನ್ನು  ಏರ್ಪಡಿಸಲಾಯಿತು. ವೀಕ್ಷಕರ ಪಾಲಿಗೆ, ಈ ಸಾಂಸ್ಕೃತಿಕ ವೈಭದ ವಸ್ತುಗಳ ಕೌಶಲ್ಯ ಮತ್ತು ಪರಿಣತಿಯನ್ನು ಸನಿಹದಿಂದ ನೇರವಾಗಿ ( ಮುಖಾಮುಖಿಯಾಗಿ) ವೀಕ್ಷಿಸಲು ಅಪರೂಪದ ಅವಕಾಶ ದೊರಕಿತು.

ಅಷ್ಟಲಕ್ಷ್ಮಿ ರಂಗೋಲಿ ಮತ್ತು ಸಮ್ಮಿಳನ ಸಾಂಸ್ಕೃತಿಕ ಪ್ರದರ್ಶನಗಳಿಗೆ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಸೇರಿದಂತೆ ಗೌರವಾನ್ವಿತ ಗಣ್ಯರು ಸಾಕ್ಷಿಯಾದರು. ಮೊದಲ ದಿನ, ಎಲ್ಲಾ ಎಂಟು ರಾಜ್ಯಗಳ ಕಲಾವಿದರು ಎಲ್ಲಾ ಎಂಟು ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು ಸೇರಿದಂತೆ ಗಮನಾರ್ಹ ಪ್ರದರ್ಶನಗಳೊಂದಿಗೆ ಮಹೋತ್ಸವದ ಗರಿಮೆ ಹೆಚ್ಚಿಸಿದರು. ಮುಂದಿನ ನಾಲ್ಕು ದಿನಗಳಲ್ಲಿ 350+ ಕಲಾವಿದರು ಇಂತಹ ಇನ್ನಷ್ಟು ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ.

ಇದಲ್ಲದೆ, ಈಶಾನ್ಯ ಭಾರತದಿಂದ ಭಾರತದ ರಾಜಧಾನಿಗೆ ತಂದಿರುವ ವೈವಿಧ್ಯಮಯ ಸುವಾಸನೆ ಮತ್ತು ಸಂಪ್ರದಾಯ-ಪದ್ದತಿಗಳ ವೈವಿಧ್ಯಮಯ ಆಹಾರ ಮಳಿಗೆಗಳಲ್ಲಿ, ಆ ಪ್ರದೇಶದ ಶ್ರೀಮಂತ ಪಾಕ ಭಕ್ಷ್ಯ ಪರಂಪರೆಯ  ಪಾಕಶಾಲೆಗಳಿಗೆ ಸಂದರ್ಶಕರು ಭೇಟಿ ನೀಡುತ್ತಿದ್ದರು.

ಈಶಾನ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ “ಮಕ್ಕಳ ಕೇಂದ್ರ”ದಲ್ಲಿ ನವೀನ ಚಟುವಟಿಕೆಗಳಲ್ಲಿ ಯುವಕರು ಮತ್ತು ಮಕ್ಕಳು ತೊಡಗಿಸಿಕೊಂಡಿದ್ದರು. 

ಸಮಾರಂಭದಲ್ಲಿ, ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾಗವಹಿಸಿದ ಗೌರವಾನ್ವಿತ ಗಣ್ಯರು ಮತ್ತು ಉತ್ಸಾಹಿ ವೀಕ್ಷಕರಿಗೆ  ಕೃತಜ್ಞತೆ ಸಲ್ಲಿಸಿತು. 'ಅಮೃತ ಮಹೋತ್ಸವದ ವೈವಿಧ್ಯತೆ’ ನಿರ್ವಿವಾದವಾಗಿ ವೈವಿಧ್ಯತೆಯಲ್ಲಿ ಏಕತೆಯ ಸಂತೋಷದಾಯಕ ಆಚರಣೆಯಾಗಿ ಹೊರಹೊಮ್ಮಿತು. ಈಶಾನ್ಯ ಪ್ರದೇಶದ ಕೊಡುಗೆಗಳ ಕುರಿತಾದ ಆಳವಾದ ತಿಳುವಳಿಕೆ ಮತ್ತು ಮೆಚ್ಚುಗೆಯನ್ನು ಉತ್ತೇಜಿಸುವ ಸದಾವಕಾಶವಾಗಿ ಹೊರಹೊಮ್ಮಿತು.  ಹಾಗೂ, ಮುಂದಿನ ನಾಲ್ಕು ದಿನಗಳ ಕಾಲ ಸರಿಸಾಟಿಯಿಲ್ಲದ ಸಂಗ್ರಾಹ್ಯ ಸಾಂಸ್ಕೃತಿಕ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ. 

****


(Release ID: 2004490) Visitor Counter : 90