ಸಂಪುಟ

​​​​​​​2009ರ ಮೇ ತಿಂಗಳಿನಿಂದ 2015ರ ನವೆಂಬರ್‌ವರೆಗೆ ರಸಗೊಬ್ಬರ (ಯೂರಿಯಾ) ಘಟಕಗಳಿಗೆ ಗೃಹಬಳಕೆ ಅನಿಲ ಪೂರೈಕೆ ಪ್ರಮಾಣ ಆಧರಿಸಿ ಮಾರುಕಟ್ಟೆ ಪಾಲು ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ

Posted On: 01 FEB 2024 11:36AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2009ರ ಮೇ 1ರಿಂದ 2015ರ ನವೆಂಬರ್ 17ರವರೆಗಿನ ಅವಧಿಗೆ ರಸಗೊಬ್ಬರ (ಯೂರಿಯಾ) ಘಟಕಗಳಿಗೆ ಗೃಹಬಳಕೆಯ ಅನಿಲ ಪೂರೈಕೆ ಮೇಲೆ ಮಾರುಕಟ್ಟೆ ಪಾಲು ನೀಡಲು  ಅನುಮೋದನೆ ನೀಡಿದೆ.

ಸಂಪುಟ ನೀಡಿರುವ ಅನುಮೋದನೆಯು ರಚನಾತ್ಮಕ ಸುಧಾರಣೆಯಾಗಿದೆ. ಈ ಹಿಂದೆ ಅನಿಲ ಮಾರ್ಕೆಟಿಂಗ್‌ಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳುವ ಹೆಚ್ಚುವರಿ ಅಪಾಯಗಳು ಹಾಗೂ ವೆಚ್ಚವನ್ನು ಭರಿಸುವುದಕ್ಕಾಗಿ ಮಾರ್ಕೆಟಿಂಗ್ ಕಂಪನಿಗಳು ಗೃಹಬಳಕೆ ಅನಿಲದ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಗ್ರಾಹಕರ ಮೇಲೆ ವಿಧಿಸುತ್ತಿತ್ತು.  ಆ ಹಿನ್ನೆಲೆಯಲ್ಲಿ 2015ರಲ್ಲೇ ಯೂರಿಯಾ ಮತ್ತು ಎಲ್‌ಪಿಜಿ ಉತ್ಪಾದಕರಿಗೆ ಗೃಹಬಳಕೆಯ ಅನಿಲ ಪೂರೈಕೆಯಲ್ಲಿ ಮಾರ್ಕೆಟಿಂಗ್ ಪಾಲು ನೀಡಲು ಸರಕಾರ ತೀರ್ಮಾನಿಸಿತ್ತು.

ಸಂಪುಟದ ಈ ಅನುಮೋದನೆಯಿಂದ ನಾನಾ ರಸಗೊಬ್ಬರ (ಯೂರಿಯಾ) ತಯಾರಿಕಾ ಘಟಕಗಳು 01.05.2009 ರಿಂದ 17.11.2015ರ ಅವಧಿಯಲ್ಲಿ ಗೃಹಬಳಕೆ ಅನಿಲ ಖರೀದಿಗೆ ಮಾರುಕಟ್ಟೆ ಪಾಲಿನ ರೂಪದಲ್ಲಿ ಭರಿಸಿದ ವೆಚ್ಚಕ್ಕೆ ಹೆಚ್ಚುವರಿ ಬಂಡವಾಳ ಪಡೆಯಲು ಅನುಕೂಲವಾಗಲಿದೆ. 18.11.2015ರಿಂದ ಈಗಾಗಲೇ ಪಾವತಿಸುತ್ತಿರುವ ದರಗಳ ಆಧಾರದ ಮೇಲೆ ಯೂರಿಯಾ ಘಟಕಗಳಿಗೆ ಮಾರ್ಕೆಟಿಂಗ್ ಪಾಲು ಸಿಗಲಿದೆ.

ಸರ್ಕಾರದ ಆತ್ಮನಿರ್ಭರ ಭಾರತ್‌ನ ದೃಷ್ಟಿಗೆ ಅನುಗುಣವಾಗಿ, ಈ ಅನುಮೋದನೆಯು ಉತ್ಪಾದಕರು ಹೂಡಿಕೆ ಪ್ರಮಾಣ ಹೆಚ್ಚಿಸಲು ಉತ್ತೇಜಿಸುತ್ತದೆ. ಹೂಡಿಕೆ ಪ್ರಮಾಣ ಹೆಚ್ಚಾದಂತೆ ರಸಗೊಬ್ಬರ ಉತ್ಪಾದನೆ ಹೆಚ್ಚಾಗುವ ಜತೆಗೆ ಅನಿಲ ಮೂಲಸೌಕರ್ಯ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಸುಸ್ಥಿರ ಹೂಡಿಕೆಯ ಖಾತರಿಗೂ ನೆರವಾಗಲಿದೆ.

*****



(Release ID: 2001337) Visitor Counter : 59