ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಮಂತ್ರಿ ಸಂವಾದ


ಪ್ರಶಸ್ತಿ ಪುರಸ್ಕೃತರೊಂದಿಗೆ ಮುಕ್ತ ಸಂವಾದದಲ್ಲಿ ತೊಡಗಿದ ಪ್ರಧಾನಮಂತ್ರಿ

 ತಮ್ಮ ಸಾಧನೆಗಳ ವಿವರಗಳನ್ನು ಹಂಚಿಕೊಂಡ ಮಕ್ಕಳು; ಪ್ರಧಾನಮಂತ್ರಿಗೂ ಹಲವಾರು ಪ್ರಶ್ನೆಗಳನ್ನು ಕೇಳಿದರು

Posted On: 23 JAN 2024 6:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿ.ಎಂ.ಆರ್‌.ಬಿ.ಪಿ.) ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಅವರು ಪ್ರತಿ ಪ್ರಶಸ್ತಿ ವಿಜೇತರಿಗೆ ಸ್ಮರಣಿಕೆಗಳನ್ನು ಪ್ರದಾನ ಮಾಡಿದರು ಮತ್ತು ನಂತರ ಅವರೊಂದಿಗೆ ಮುಕ್ತ ಸಂವಾದದಲ್ಲಿತೊಡಗಿದರು. ಮಕ್ಕಳು ತಮ್ಮ ಸಾಧನೆಗಳ ವಿವರಗಳನ್ನು ಹಂಚಿಕೊಂಡರು, ಈ ಕಾರಣದಿಂದಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಗೀತ, ಸಂಸ್ಕೃತಿ, ಸೌರಶಕ್ತಿ, ಬ್ಯಾಡ್ಮಿಂಟನ್‌, ಚೆಸ್‌ ಮುಂತಾದ ಕ್ರೀಡೆಗಳ ಬಗ್ಗೆ ಚರ್ಚಿಸಲಾಯಿತು.

ಮಕ್ಕಳು ಪ್ರಧಾನಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು, ಅವುಗಳಲ್ಲಿಒಂದಕ್ಕೆ ಉತ್ತರಿಸುವಾಗ, ಅವರು ಎಲ್ಲಾ ರೀತಿಯ ಸಂಗೀತದಲ್ಲಿತಮ್ಮ ಆಸಕ್ತಿಯ ಬಗ್ಗೆ ಮತ್ತು ಅದು ಧ್ಯಾನದಲ್ಲಿಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಮಾತನಾಡಿದರು. ನಿನ್ನೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡಿದ ಬಗ್ಗೆ ಕೇಳಿದಾಗ, ತಾವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸೌರಶಕ್ತಿಯನ್ನು ಬಳಸಿಕೊಳ್ಳಲು ಕೈಗೊಂಡ ಕ್ರಮಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಈ ಯೋಜನೆಯಿಂದ ಜನರು ಹೇಗೆ ಪ್ರಯೋಜನ ಪಡೆಯುತ್ತಾರೆ ಎಂಬುದರ ಬಗ್ಗೆಯೂ ಮಾತನಾಡಿದರು. ಪ್ರಧಾನಮಂತ್ರಿ ಅವರು ಈ ದಿನದ ಮಹತ್ವದ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು ಮತ್ತು ಪರಾಕ್ರಮ ದಿವಸದ ಬಗ್ಗೆ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪರಂಪರೆಯನ್ನು ಸರ್ಕಾರ ಹೇಗೆ ಗೌರವಿಸುತ್ತಿದೆ ಎಂಬುದರ ಬಗ್ಗೆ ತಿಳಿಸಿದರು.

ಕಲೆ ಮತ್ತು ಸಂಸ್ಕೃತಿ, ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಮತ್ತು ಪರಿಸರ ಎಂಬ ಏಳು ವಿಭಾಗಗಳಲ್ಲಿಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಭಾರತ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿ ಪ್ರಶಸ್ತಿ ವಿಜೇತರಿಗೆ ಪದಕ, ಪ್ರಮಾಣಪತ್ರ ಮತ್ತು ಪ್ರಶಂಸಾ ಕಿರುಪುಸ್ತಕವನ್ನು ನೀಡಲಾಗುತ್ತದೆ. ಈ ವರ್ಷ, ವಿವಿಧ ವಿಭಾಗಗಳ ಅಡಿಯಲ್ಲಿದೇಶಾದ್ಯಂತ 19 ಮಕ್ಕಳನ್ನು ಪಿಎಂಆರ್‌ಬಿಪಿ -2024 ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ18 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 9 ಬಾಲಕರು ಮತ್ತು 10 ಬಾಲಕಿಯರು ಸೇರಿದ್ದಾರೆ.

***



(Release ID: 2000630) Visitor Counter : 52